Showing posts with label ಕವಿತೆ. Show all posts
Showing posts with label ಕವಿತೆ. Show all posts

ಮತ್ತದೇ ಕನಸು. ಮತ್ತದೇ ಕನವರಿಕೆ

1 Nov 2015

0 ಪ್ರತಿಕ್ರಿಯೆ
ಸುದೀರ್ಘ ಮೌನದ ನಂತರದ ಮಾತು ನಿಜಕ್ಕೂ ಕಷ್ಟ.

ಹಾಗಂತ ಮಾತಿರುವುದಿಲ್ಲ ಅಂತ ಏನಿಲ್ಲ. ಹೇಳಲಿಕ್ಕೆ, ಹಂಚಿಕೊಳ್ಳಲಿಕ್ಕೆ ಸಾವಿರಾರು ಸಂಗತಿಗಳಿರುತ್ತವೆ. ಈ ಸಂದರ್ಭಕ್ಕೆಂದೇ ಅಂದುಕೊಂಡಿದ್ದ ಸೊಗಸಾದ ಸಾಲುಗಳಿರುತ್ತವೆ. ಮೆಚ್ಚಿದ ಪದ್ಯ, ನಗಿಸಿದ ಹಾಸ್ಯ, ಆರ್ದ್ರವಾಗಿಸಿದ ಭಾವನೆಗಳಿರುತ್ತವೆ. ಹೇಳಬೇಕೆಂಬ ತುಡಿತವೂ ಬಲವಾಗಿರುತ್ತದೆ.

ಆದರೆ, ಹೇಳಲಾಗುವುದಿಲ್ಲ. ಹಾಗಂತ, ಹೇಳದಿರಲೂ ಆಗುವುದಿಲ್ಲ.

ನಿಜವಾದ ಕಷ್ಟ ಅದು. ಮನಸಿನ ಮಾತುಗಳು ನಿಜದ ಮಾತಾಗದಿರುವ ಕಷ್ಟ ಬಲು ಹಿಂಸೆ ಕೊಡುತ್ತದೆ.

ಬರಹವೂ ಹಾಗೇ.

ಏನೋ ಹೇಳಬೇಕೆಂದು ಅಕ್ಷರ ಜೋಡಿಸಲು ಹೊರಡುತ್ತೇವೆ. ಭಾವನೆಗಳು ಸಾಲುಗಳಾಗುವುದಿಲ್ಲ. ಬರೆದ ಸಾಲುಗಳು ಭಾವವನ್ನು ಬಿಂಬಿಸುವುದಿಲ್ಲ. ಬರೆದಿದ್ದನ್ನು ಅಳಿಸಿ, ಹೊಸದಾಗಿ ಬರೆಯಲು ಹೋಗಿ, ಅದು ಕಲಸುಮೇಲೋಗರವಾಗಿ, ಇದಾ ನನ್ನ ಭಾವತೀವ್ರತೆಯ ಪ್ರತಿಬಿಂಬ ಎಂದು ಬೇಸರವಾಗುತ್ತದೆ.

ಬರೆಯುವುದನ್ನು ನಿಲ್ಲಿಸಿ, ಸುಮ್ಮನೇ ಕೂತರೆ, ಎದೆಯೊಳಗಿನ ಭಾವಗಳು ಮಾತಿಗಿಳಿಯುತ್ತವೆ, ಸ್ವಗತವಾಗುತ್ತದೆ. ಒಬ್ಬನೇ ಇಬ್ಬಿಬ್ಬರಾಗಿ ಮಾತಾಡಿಕೊಂಡಂತೆ, ಅಂದುಕೊಂಡ ಭಾವಗಳೆಲ್ಲ ಸಲೀಸಾಗಿ ಹೊರಬಂದಂತೆ, ಅವಕ್ಕೊಂದು ಖಚಿತ ಅರ್ಥವೂ ದಕ್ಕಿದಂತೆ, ಆಹಾ. ಆ ಸ್ವಗತದ ಸೊಗಸೇ ಸೊಗಸು.

*****

ಇತ್ತೀಚೆಗೆ ಇಂಥ ಭಾವತೀವ್ರತೆ, ಹೇಳಲಾಗದ ತೊಳಲಾಡುವಿಕೆ ತುಂಬ ಕಾಡಿದೆ. ಕಾಡುತ್ತಲೇ ಇದೆ. ಏನೋ ಬರೆಯಬೇಕೆಂದುಕೊಳ್ಳುತ್ತಲೇ, ಅದು ಮತ್ತೇನೋ ಆಗಿ, ಛೇ ಇದು ಸರಿ ಹೋಗಲಿಲ್ಲ ಎಂದು ಅಳಿಸಿ, ಊಹೂಂ, ಅಳಿಸಬಾರದಿತ್ತೆಂದು ಹಳಹಳಿಸಿ, ಮತ್ತೆ ಮತ್ತೆ ಸುಮ್ಮನೇ ಕೂತು, ಭಾವಗಳೊಂದಿಗೆ ಸ್ವಗತಕ್ಕಿಳಿಯುವುದೇ ಹೆಚ್ಚಾಗುತ್ತಿದೆ. ತುಂಬ ದಿನ ಬರೆಯುವುದನ್ನು ಬಿಟ್ಟಿದ್ದರ ಪರಿಣಾಮ ಇದು ಎಂದು ಅನಿಸಿದರೂ, ಎಲ್ಲೋ ಕೊಂಡಿ ಜೋಡಣೆಯಾಗುತ್ತಿಲ್ಲ ಎಂದು ಮತ್ತೆ ಮತ್ತೆ ಅನಿಸುತ್ತದೆ. ಈ ಮಾತಿಗೆ, ಭಾವಕ್ಕೆ, ಮಾತು-ಭಾವ ಬೆಸೆಯುತ್ತಿದ್ದ ಮನಸ್ಸೊಂದು ದೂರವಾಗಿದೆ ಎಂಬ ಹಳಹಳಿ.

*****

ಕಳೆದುಕೊಳ್ಳುವುದೆಂದರೆ, ಭಾವತಿವ್ರತೆಯನ್ನು ಹೊರಹಾಕಲು ಸೋಲುವುದು. ಪದೆ ಪದೆ ಮನಸ್ಸಿನಲ್ಲಿ ಮೆಲುಕುಹಾಕುತ್ತಿದ್ದರೂ ಅದು ಮಾತಾಗದಿರುವುದು, ಅಕ್ಷರಗಳಾಗದಿರುವುದು, ಯಾವುದೇ ಕ್ರಿಯಾತ್ಮಕ ಕೆಲಸದಲ್ಲಿ ಹೊಮ್ಮದಿರುವುದು. ಅದು ಕೊಡುವ ಕಾಟ ಸಹಿಸಲಾಗದೇ, ಮತ್ತೆ ಮತ್ತೆ ಬರೆಯಲೆತ್ನಿಸುವುದು. ಸೋಲುವುದು. ಸೋತು ಸೋತು ಸ್ವಗತಕ್ಕಿಳಿಯುವುದು. ಸುದೀರ್ಘ ಕಾಲದವರೆಗೆ ಮತ್ತೆ ಮೌನವಾಗುವುದು.
*****
ಬಹುಶಃ ತುಂಬ ದಿನ ಇಂಥ ಸ್ಥಿತಿ ಉಳಿಯಲಿಕ್ಕಿಲ್ಲ. ಕೈಗಳು ಮತ್ತೆ ಮತ್ತೆ ಕೀಬೋರ್ಡ್ ಸವರುತ್ತವೆ. ಮಾತುಗಳಿಗೆ ಅಕ್ಷರರೂಪ ಕೊಡಲು ಯತ್ನಿಸುತ್ತವೆ. ಹಾಗೆ ಪ್ರಯತ್ನಿಸುತ್ತಲೇ ಸೋಲುತ್ತವೆ. ಬರೆದಿದ್ದನ್ನು ಅಳಿಸುತ್ತ, ಮತ್ತೆ ಮತ್ತೆ ಬರೆಯಲು ಯತ್ನಿಸುತ್ತ, ಬಿಡಿಬಿಡಿ ಭಾವಗಳನ್ನು ಇಡಿಯಾಗಿಸಲು ಪ್ರಯತ್ನಿಸುತ್ತಲೇ ಮನಸ್ಸನ್ನು ಜರಡಿಯಾಗಿಸುತ್ತ ಹೋಗುತ್ತೇನೆ. ಒಂದಾದರೂ ಮುತ್ತು ಉದುರೀತಾ ಎಂದು ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.

ಇದೊಂದು ಮುಗಿಯದ ಕನಸು. ತೀರದ ದಾಹ. ಮತ್ತೆ ಮತ್ತೆ ಕನಸು. ಮತ್ತೆ ಮತ್ತೆ ದಾಹ.

ಹನಿಯೊಡೆಯದ ಕಾರ್ಮುಗಿಲನ್ನು ಕುದಿವ ಭೂಮಿ ದಿಟ್ಟಿಸುವಂತೆ, ಬೀಸುವ ಗಾಳಿಯ ನೆಪಕ್ಕೆ ಕಾಯ್ದಂತೆ, ಮನಸ್ಸು ಮತ್ತದೇ ಸ್ಪೂರ್ತಿಯನ್ನು ಹುಡುಕುತ್ತದೆ. ಹುಡುಕ್ಹುಡುಕಿ ನಿರಾಶೆಗೊಳ್ಳುತ್ತದೆ.

ಬಂದೀತು ಮತ್ತೆ ಮಳೆ ಸುಗ್ಗಿ, ಎಲ್ಲೆಗಳ ಮೀರೀತು ಹಿಗ್ಗಿ.

ಮತ್ತದೇ ಕನಸು. ಮತ್ತದೇ ಕನವರಿಕೆ.

- ಚಾಮರಾಜ ಸವಡಿ

ಒಳಗೊಳಗೇ ಉಳಿದು, ಬೆಳೆದು...

3 Jun 2012

0 ಪ್ರತಿಕ್ರಿಯೆ

ಇವತ್ತು ನನಗೀ ಮಾತಿನ ಯಂತ್ರದ ಹಂಗಿಲ್ಲ
ಹೃದಯಕ್ಕೆ ಮಾತಾಡುವದ ಕಲಿಸಿದ್ದೇನೆ
*****
ಪದೆ ಪದೆ ನೋಡುವಾಸೆ ಮೂಡದಿರಲೆಂದು
ನಿನ್ನ ಜೀವಂತವಾಗಿ ಎದೆಯಲ್ಲಿಟ್ಟುಕೊಂಡಿದ್ದೇನೆ
*****
ಕೈಗೆಟುಕದ ದೂರದಲ್ಲಿದ್ದರೇನು ನೀನು
ಇಲ್ಲೇ ಮಿಡಿಯುತ್ತೀ ಒಳಗೊಳಗೇ
*****
ಜಗವೆಲ್ಲ ಹುಡುಕ್ಹುಡುಕಿ ನಿರಾಶವಾಯಿತು
ಒಳಗೊಳಗೇ ನಕ್ಕ ನಿನ್ನ ನಗೆ ಕೇಳದಾಯಿತು
*****
ಕೊರಳ ದಾಟಿ ಹೊರಗ್ಹರಿಯದ ನಿನ್ನುಲಿಯ
ಅಪಾರ ದೂರದಿಂದ ತನ್ಮಯನಾಗಿ ಆಲಿಸಿದೆ
*****
ಬಿಡು ಮರುಳೆ, ಇರು ಅಲ್ಲೇ, ದೂರ ದೂರ
ಮಾಯೆಯಂಥ ಪ್ರೀತಿ ಅಂತರ ಮಾಯವಾಗಿಸಿದೆ
*****
ಇನ್ನು ನಿನ್ನ ಕರೆಯುವುದಿಲ್ಲ, ಮೊರೆಯಿಡುವುದಿಲ್ಲ
ಇನ್ನೇನಿದ್ದರೂ ಒಳಗೊಳಗೇ ನಿವೇದನೆ, ವೇದನೆ

- ಚಾಮರಾಜ ಸವಡಿ

ಆ ರಾತ್ರಿ ಹಾಗೆ...

13 May 2012

1 ಪ್ರತಿಕ್ರಿಯೆ
ಮೌನವಾಗಬೇಕು
ಕಿವಿಗೊಡಬೇಕು, ಮಾತಾಗಬಾರದು
ಸುಮ್ಮನೇ ನೋಡಬೇಕು
ಹೀರಿಕೊಂಡು ಸುಮ್ಮನಿರಬೇಕು
ಬೆಳೆಯಬೇಕು ಒಳಗೊಳಗೇ

ಉಕ್ಕುವ ಕಡಲಿಂದ ಸದ್ದು ಬರಬಾರದು
ಹೃದಯ ನಿಟ್ಟುಸಿರಿಡಬಾರದು
ಮುರಿದು ಬೀಳುವ ಸದ್ದಿರಲಿ
ಕಣ್ಣೀರೂ ಶಬ್ದವಾಗಬಾರದು

ಮೌನಕ್ಕೆ ಮಾತುಂಟು
ಥೇಟ್ ಹೃದಯದಂತೆ
ಕೊರಳುಬ್ಬಿ ಸುಮ್ಮನಾದಾಗ
ಎದೆಯಾಳದ್ದೇ ಮಾತು

ಹಾಗಂತ ಸುಮ್ಮನೇ ಕೂತಿದ್ದೇನೆ

ಮಾತು ಮೌನವಾಗಿದೆ
ಮೌನ ಮಾತಾಡುತ್ತಿದೆ
ಕೇಳಿಸಿಕೊಳ್ಳುವ ಕಿವಿಗಳ ಜಾಗದಲ್ಲಿ
ಹೃದಯ ಬಂದು ಕೂತಿದೆ

ಮೌನವಾಗಿ ಉಕ್ಕುವ ಕಡಲು
ಸದ್ದಿಲ್ಲದೇ ಮುರಿದುಬೀಳುವ ಕನಸು
ಆ ಕಾರ್ಗತ್ತಲ ರಾತ್ರಿಯಲಿ
ಗಡಿಯಾರಕ್ಕೂ ಮುನಿಸು

ಇದಿರೋದೇ ಹೀಗೆ
ಇದಿರಬೇಕಾಗಿದ್ದೂ ಹೀಗೇ
ಮಾತಿನಂಥ ಮೌನ
ಮೌನದಂಥ ಮಾತು
ಕನಸುನನಸುಗಳ ಕಲಸುಮೇಲೋಗರದಲ್ಲಿ
ನೆನಪೇ ಮರೆವು
ಮರೆವೇ ನೆನಪು

ಅದೇ ಬದುಕು
ಮತ್ತದೇ ಮರಣ

- ಚಾಮರಾಜ ಸವಡಿ

ಈ ರಾತ್ರಿಗೆ ಬೆಳಗಾಗುವುದಿಲ್ಲ

26 Mar 2012

1 ಪ್ರತಿಕ್ರಿಯೆ
ಇದ್ದ ಒಂದೇ ಕನ್ನಡಕ
ಬಿದ್ದು ಒಡೆದುಹೋಯಿತು

ಬೆಳಕಿಲ್ಲದ ರಾತ್ರಿ ಗಡಿಯಾರ ಹೆಳವ
ಅವಳ ದೀಪದಂಥ ಕಂಗಳಿಗೆ
ಅಕ್ಷರಗಳ ಹುಡುಕಲಿ ಹೇಗೆ?

ಗಾಜೆಂದುಕೊಂಡಿದ್ದು ಕಣ್ಣೇ ಆಗಿತ್ತೇನೋ
ಖಾಲಿ ಫ್ರೇಮಿನ ಕನ್ನಡಕದಲ್ಲಿ
ಅತಿ ನಿಚ್ಚಳ ಅವಳ ಬಿಂಬ

ಏನು ಮಾಡುವುದು ಅಪರಾತ್ರಿಯಲಿ
ದಿನದ ನಿಟ್ಟುಸಿರಿಗೆ ಹೊಸ ಕನಸ ಪೋಣಿಸಿ
ಹೃದಯದ ತೂತ ಮುಚ್ಚಲಾಗದು
ಸುಮ್‌ಸುಮ್ನೇ ಬೀರಿದ ಮುಗುಳ್ನಗೆಗಳ
ಖಾಲಿತನ ತುಂಬಲಾಗದು

ನಾಳೆ ಬೆಳಗಾಗುವವರೆಗೂ ಕತ್ತಲೆಯೇ
ಈ ರಾತ್ರಿ ದೂಡಬೇಕು, ಹೇಗೋ
ಅಕ್ಷರಗಳ ಕ್ಷಮೆ ಕೇಳಿ,
ಕನಸುಗಳಿಗೆ ಕಾಡದಿರಲು ಹೇಳಿ
ಖಿನ್ನ ಮನಸಿಗೆ ನಿದ್ರಿಸಲೊಂದು ಮನವಿ

ಹೂಂ. ಹಾಗೇ ಮಾಡಬೇಕು
ಮುರಿದ ಗಾಜುಗಳ ಗುಡಿಸಿ,
ಕನ್ನಡಕದ ಫ್ರೇಮು ಎತ್ತಿಟ್ಟು
ಬಾರದ ನಿದ್ದೆಗೆ ಬೇಡಿಕೆ ಇಟ್ಟು
ಮುಚ್ಚಬೇಕು ಕಣ್ಣ

ನಿನ್ನೆಯದೆಲ್ಲ ಇಂದಿಗಾದಂತೆ
ನಾಳೆಗಿರಲಿ ಇಂದು, ಎಂದು
ದೀಪವಾರಿಸಿ, ಎವೆ ಮುಚ್ಚಿದರೆ
ಕಣ್ಣರಳಿಸುತ್ತಾಳೆ ಕಣ್ಣೊಳಗೆ
ಕನ್ನಡಕದ ಹಂಗಿಲ್ಲದೇ ಸ್ಪಷ್ಟವಾಗುತ್ತಾಳೆ
ಮರೆಯಬೇಕೆಂದರೂ ಇಷ್ಟವಾಗುತ್ತಾಳೆ

ಅಷ್ಟೇ,
ಇನ್ನು ಈ ರಾತ್ರಿಗೆ ಬೆಳಗಾಗುವುದಿಲ್ಲ

- ಚಾಮರಾಜ ಸವಡಿ

ಹೀಗೆಂದರೆ ಹೀಗೇ, ಹೇಗಿದೆಯೋ ಹಾಗೆ

4 Mar 2012

0 ಪ್ರತಿಕ್ರಿಯೆ
ಅಂದುಕೊಂಡಂತೆ ಆಗದಿದ್ದರೆ
ಎಂದು ಯೋಚಿಸಿದೆ

ಭಯವಾಯಿತು:
ನಾನು ನಾನಾಗಿರಲ್ಲ

ಅಂದುಕೊಂಡಂತೆ ಆಗಿಬಿಟ್ಟರೆ

ಇನ್ನೂ ಭಯ
ಆಗಲೂ ನಾನು ನಾನಾಗಿರಲ್ಲ

ಹೀಗೇ ಇರಲಿ ಬಿಡು
ಹೀಗೆಂದರೆ ಹೀಗೇ

ಹೇಗಿದೆಯೋ ಹಾಗೆ

***

ಒಮ್ಮೊಮ್ಮೆ ಹೀಗೇ

ನೆನಪಾದಾಗೆಲ್ಲ ವಿಷಾದ
ಕೂತಲ್ಲೇ ಕಳೆದುಹೋಗೋದು
ಎದ್ದಾಗ ಕನಸು
ನಿದ್ದೆಯಲ್ಲಿ ಎಚ್ಚರ

ತುತ್ತು ನೆತ್ತಿಗೇರಿದಾಗ
ನೀರು ಹುಡುಕುವಂತೆ
ಬಿಕ್ಕಳಿಕೆ ನಿಂತಾಗ
ಏನೋ ಕಳಕೊಂಡಂತೆ

ಷೆಲ್ಫು ತುಂಬಿದ ಪುಸ್ತಕಗಳು
ಬರೀ ಲೊಳಲೊಟ್ಟೆ
ಹಸಿದ ಹೊಟ್ಟೆಯ ಮುಂದೆ
ಖಾಲಿ ತಟ್ಟೆ

ಮನಸೆಂಬುದು
ನೆಲೆ ಕಳೆದುಕೊಂಡ ನಾಯಿಮರಿ
ಅಪರಿಚಿತ ಊರಿನ ಬಸ್‌ಸ್ಟ್ಯಾಂಡು
ಒಳಗೇ ಬಚ್ಚಿಟ್ಟುಕೊಂಡು
ಊರೆಲ್ಲ ಹುಡುಕಾಟ

ಬರೀ ಬಿಡಿ ಚಿತ್ರಗಳು
ಜೋಡಿಸಿದಷ್ಟೂ ಗೊಂದಲ

ನಿನ್ನೆ ಎಂಬುದು ಇಂದಾಗಿ
ಇಂದೆಂಬುದೇ ನಾಳೆಯಾಗಿ
ಗಡಿಯಾರ ಮಂಕಾಗಿ
ಕಾಲವೆಂಬುದು ನಾಯಿಬಾಲದಂತೆ

ಸರಿಯಾಗದು
ಬಿಡಲಾಗದು

- ಚಾಮರಾಜ ಸವಡಿ

ಏಕೆ ಇಷ್ಟವಾಗುತ್ತಾರೋ...

10 Dec 2011

1 ಪ್ರತಿಕ್ರಿಯೆ
ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದಾಗ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು

***
 
ಚೆಂದದ ಕವಿತೆ
ಬರೆಯಲು ಕೂತರೆ
ಪೆನ್ನು ಮಂಕಾಗುತ್ತದೆ
ಕವಿತೆ ನಗುತ್ತದೆ
 
***
 
ಒಂದೇ ಒಂದು ಕನಸಿತ್ತು
ಅದು ನನಸಾಗಲೇ ಇಲ್ಲ

ಈಗಲೂ ನನ್ನ ಬಳಿ ಉಳಿದಿದ್ದು
ಆ ಕನಸೊಂದೇ
 
***
ಇಬ್ಬರು ಮಕ್ಕಳು
ಒಂದು ಕವಿತೆ

ಅದೂ ಮಗುವೇ!
 
***
 
ಕನಸಿಗೂ ಒಂದು ಮನಸಿದೆ
ಅದು ಕೈಗೆ ಸಿಗದಂತಿದೆ
 
***
 
ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ?
ನೀನು ಕವಿಯೂ ಅಲ್ಲ, ಪ್ರೇಮಿಯೂ ಅಲ್ಲ
 
***
 
ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ!
 
***

- ಚಾಮರಾಜ ಸವಡಿ

ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ...

8 Apr 2011

4 ಪ್ರತಿಕ್ರಿಯೆ
Art just makes verses; only the heart is a poet.
- Andre Chenier 
ತುಂಬಾ ದಿನಗಳ ಹಿಂದೆ ಬರೆದಿಟ್ಟುಕೊಂಡಿರುವ ಈ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಾ ರಾತ್ರಿಯಿಡೀ ಕೂತಿದ್ದೇನೆ. ಕವಿತೆ ಬರೆಯುವುದು ಇತ್ತೀಚೆಗೆ ಕಷ್ಟವಾಗತೊಡಗಿರುವುದರ ಕಾರಣವೇನಾದರೂ ಈ ಸಾಲುಗಳಲ್ಲಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. 
ಅದೇಕೋ ಗೊತ್ತಿಲ್ಲ, ಮುಂಚಿನಂತೆ ಕವಿತೆ ಬರೆಯುವುದು ಆಗುತ್ತಿಲ್ಲ. ಕವಿತೆ ನನ್ನ ಅತ್ಯಂತ ಇಷ್ಟದ ವಿಷಯ. ಅಷ್ಟೇ ಕಷ್ಟದ ಅಭಿವ್ಯಕ್ತಿಯೂ ಹೌದು. ಎಂಥ ನಿರಾಸೆಯ ನಡುವೆಯೂ ಗದ್ಯವನ್ನು ಒಂದಷ್ಟು ಚೆನ್ನಾಗಿ ಕಾಣುವಂತೆ ಬರೆದುಬಿಡಬಹುದು. ಆದರೆ, ಪದ್ಯದ ವಿಷಯದಲ್ಲಿ ಹಾಗಾಗದು. ಅದು ಒಲಿಯಬೇಕು. ಒಲಿಯುವವರೆಗೆ ಪ್ರಯತ್ನಿಸಬೇಕು. ಎಲ್ಲಿಯೂ ಹದ ತಪ್ಪಬಾರದು. ಒಂದೇ ಒಂದು ಅನಗತ್ಯ ಶಬ್ದ ಇಡೀ ಭಾವವನ್ನೇ ಹಾಳು ಮಾಡಿಬಿಡಬಹುದು. ಅಲ್ಲಿ ಅನುಭವ ಕೆಲಸಕ್ಕೆ ಬಾರದು. 
ಹೀಗಾಗಿ, ಪ್ರತಿಯೊಂದು ಕವಿತೆಯೂ ಹೊಸ ಪ್ರಯತ್ನವೇ. ಥೇಟ್ ಪ್ರೀತಿಯನ್ನು ಒಲಿಸಿಕೊಂಡಂತೆ.
ಸಾಮಾನ್ಯವಾಗಿ ಗದ್ಯಕ್ಕೆ ನಿಲುಕದ ಭಾವನೆಗಳನ್ನು ಕವಿತೆ ಎತ್ತಿಕೊಡುತ್ತದೆ. ಇದನ್ನು ಗದ್ಯದಲ್ಲಿ ಇಷ್ಟು ಚೆನ್ನಾಗಿ, ಇಷ್ಟು ಕಡಿಮೆ ಶಬ್ದಗಳಲ್ಲಿ, ಇಷ್ಟು ಅರ್ಥಗರ್ಭಿತವಾಗಿ, ಮನಸ್ಸಿಗೆ ತಟ್ಟುವಂತೆ ಬರೆಯಲಾಗದು. ಎಷ್ಟೇ ಸಲ ಓದಿದರೂ ಮತ್ತೆ ಮತ್ತೆ ಓದುವ ಭಾವ ಮೂಡುವಂತೆ, ಓದಿದ ಪ್ರತಿ ಸಲವೂ ಹೊಸ ಅರ್ಥಗಳನ್ನು ಹುಟ್ಟುಹಾಕುವಂತೆ ಮಾಡಲಾಗದು. ಪದ್ಯದ ಸೊಗಸದು. ಅದು ಹಾಗಿದ್ದರೇ ಚೆನ್ನ. 
ಹೀಗಾಗಿ, ಕವಿತೆ ಇತ್ತೀಚೆಗೆ ಕಷ್ಟವಾಗುತ್ತಿದೆ. 
ಮನಸ್ಸಿನ ಏರಿಳಿತಗಳ ನಡುವೆ ಯಾವುದೋ ಭಾವವೊಂದು ಕಾರ್ಮುಗಿಲ ನಡುವೆ ಮಿಂಚಿ ಮರೆಯಾಗುವ ಬೆಳಕಿನಂತೆ ಥಟ್ಟನೇ ಹೊಳೆಯುತ್ತದೆ. ಮನಸ್ಸು ಅದನ್ನು ಮತ್ತೆ ಮತ್ತೆ ಕಾಣಲು ಹಂಬಲಿಸುವುದೇ ಕವಿತೆ ಕಟ್ಟುವ ಸಮಯ. ಬಂದರೆ ಅದು ಇಡಿಯಾಗಿ ಬಂದುಬಿಡುತ್ತದೆ. ಇಲ್ಲದಿದ್ದರೆ, ಏನೇ ಪ್ರಯತ್ನಿಸಿದರೂ ಚಿತ್ರವಾಗದು. 
ನಿಜವಾದ ಫಜೀತಿ ಶುರುವಾಗುವುದೇ ಆಗ. ಶಬ್ದಗಳನ್ನು ಹೇಗೋ ಮಾಡಿ, ಆಕರ್ಷಕವಾಗಿ ಜೋಡಿಸಿಬಿಡಬಹುದು. ಆದರೆ, ಅದು ಕವಿತೆಯಾಗದು. ತಾನಾಗಿ ಉಕ್ಕದೇ ಒಲವಾಗದಲ್ಲ, ಹಾಗೆ. 
ಹಾಗಂತ, ಅದನ್ನು ಅಷ್ಟಕ್ಕೇ ಕೈಬಿಡಲೂ ಆಗುವುದಿಲ್ಲ. ಮನಸ್ಸಿನಲ್ಲಿ ಅದೊಂಥರಾ ಗೀಳಾಗಿ ಕಾಡಲು ಶುರುವಾಗುತ್ತದೆ. ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತದೆ. ನಿತ್ಯದ ಕೆಲಸಗಳಿಗೆ ವಿಮುಖನನ್ನಾಗಿಸುತ್ತದೆ. ಪದೆ ಪದೆ ಕರೆಯುತ್ತದೆ. ಮತ್ತೆ ಮತ್ತೆ ಸೋಲಿಸುತ್ತದೆ. ಬೇರೆ ಏನನ್ನೂ ಬರೆಯದ ಮನಃಸ್ಥಿತಿಗೆ ತಂದೊಡ್ಡಿ ಮಂಕಾಗಿಸುತ್ತದೆ.
ನನ್ನ ಬಹುತೇಕ ನಿದ್ದೆಗೇಡಿ ರಾತ್ರಿಗಳಿಗೆ ಕಾರಣ ಇಂಥ ಎಟುಕದ ಕವಿತಾಭಾವ. ಎಷ್ಟೋ ಸಲ ರಾತ್ರಿಯಿಡೀ ಕೂತರೂ ಒಂದು ಭಾವವನ್ನು ತೀರಕ್ಕೆ ತಲುಪಿಸುವುಲ್ಲಿ ಸೋತಿದ್ದೇನೆ. ಮತ್ತೆ ಮತ್ತೆ ಪ್ರಯತ್ನಿಸಿ, ಸಾಧ್ಯವಾಗದೇ ಹತಾಶನಾಗಿದ್ದೇನೆ. ಸಮಾಧಾನವಾಗದೇ, ಅದೇ ಭಾವವನ್ನು ಗದ್ಯಕ್ಕೆ ಬದಲಿಸಿ ಸುಮ್ಮನಾಗಿದ್ದೇನೆ. ಓದಿದವರು ಏನೇ ಹೇಳಲಿ, ಎಷ್ಟೇ ಮೆಚ್ಚಲಿ, ಪದ್ಯವಾಗಬೇಕಿದ್ದ ಭಾವವೊಂದು ಗದ್ಯವಾಗಿದ್ದರ ಕೊರತೆ ಬರೆದ ನನಗೆ ಮಾತ್ರ ಗೊತ್ತು. ಅಂಥ ಗದ್ಯ ಬರಹವನ್ನು ಓದಿದಾಗೊಮ್ಮೆ, ಕೈಗೆ ಸಿಗದ ಪದ್ಯ ತುಂಟತನದಿಂದ ಕೆಣಕುತ್ತದೆ. ಮತ್ತೆ ಮತ್ತೆ ಕವಿತೆ ಬರೆಯಲು ಪ್ರೇರೇಪಿಸುತ್ತದೆ.
ಇವತ್ತೂ ಅಂಥದೇ ದುಃಸ್ಥಿತಿ. 
ಮನಸ್ಸಿನ ಸುನೀತ ಭಾವವೊಂದು ಹಾಡಾಗುತ್ತಿಲ್ಲ ಎಂಬ ನೋವು. ರಾತ್ರಿಯಿಡೀ ಪ್ರಯತ್ನಿಸಿದರೂ ಅದು ದಕ್ಕುತ್ತಿಲ್ಲ. ಪದೆ ಪದೆ ಪ್ರಯತ್ನ ಕೈಬಿಟ್ಟು ಏನೇನೋ ಓದುತ್ತ ಕೂತರೂ, ಕಾಡುವ ಭಾವ ಹಾಡಾಗುತ್ತಿಲ್ಲ. ಏನೋ ಕೊರತೆ. ಯಾವುದೋ ವಿಷಾದ. ತಿಳಿಯಾಗದ ಹಳೆಯ ನೋವು. ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಂಡಂತೆ, ಎಷ್ಟೇ ಯತ್ನಿಸಿದರೂ ದಕ್ಕದೇ ಹೋದಂತೆ, ಏನೇನೋ ಭಾವಾತಿರೇಕಗಳು. ಆದರೆ, ಯಾವೊಂದು ಭಾವವೂ ಅರ್ಥಪೂರ್ಣ ಸಾಲುಗಳಾಗುತ್ತಿಲ್ಲ. ಇಡಿಯಾಗಿ ಒಡಮೂಡುತ್ತಿಲ್ಲ. 
ಅಂದುಕೊಂಡಂತೆ ಮೂಡದ ಕವಿತೆ ಕಳೆದುಕೊಂಡ ಪ್ರೀತಿಯಂತೆ. ಎಷ್ಟೇ ಪ್ರಯತ್ನಿಸಿದರೂ ಸಿಗದೇ ನುಣುಚಿಕೊಳ್ಳುತ್ತದೆ. ಮತ್ತೆ ಮತ್ತೆ ಸುಳಿಯುತ್ತದೆ. ಮತ್ತೆ ಮತ್ತೆ ಕಾಡುತ್ತದೆ. ಕಣ್ಣೆದುರೇ ಇರುತ್ತದೆ, ಹಿಡಿಯಲಾಗದು. ಮತ್ತೆ ಮತ್ತೆ ಪ್ರಯತ್ನಿಸಿ ಸೋತಾಗ, ತಣ್ಣಗೇ ಕೆಣಕುತ್ತದೆ. ಹತಾಶನನ್ನಾಗಿಸುತ್ತದೆ.
ಹೀಗೆ ಸೋತು ಕೂತವನನ್ನು ಸೆಳೆದಿದ್ದು ಈ ಸಾಲು: Art just makes verses; only the heart is a poet.
ನಿಜ. ಎದೆಯೊಳಗೆ ಉಕ್ಕದಿದ್ದುದು ಕವಿತೆಯಾಗದು. ಮನಸ್ಸಿನೊಳಗೆ ಹೊಳೆದ ಮಿಂಚೊಂದು ಎದೆಯೊಳಗೆ ಅರಳಬೇಕು. ಬೆಳೆಯಬೇಕು. ಮೊಗ್ಗೊಂದು ಅರಳಿ ಹೂವಾದಂತೆ, ಕವಿತೆಯಾಗಬೇಕು. ಥೇಟ್ ಪ್ರೀತಿಯಂತೆ. ತಾನಾಗೇ ಉಕ್ಕದೇ ಕವಿತೆಯಾಗದು. ಅದಾಗೇ ಒಲಿಯದೇ ಪ್ರೀತಿಯಾಗದು. 
ಇವತ್ತು ಅದು ನನಗೆ ಮತ್ತೆ ಸಾಧ್ಯವಾಗಲಿಲ್ಲ. ಇತ್ತೀಚೆಗೆ ಅದು ಏಕೋ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಗದ್ಯದ ಮೊರೆ ಹೋಗುತ್ತಿದ್ದೇನೆ. 
ಕ್ಷಮಿಸು ಕವಿತಾ ದೇವತೆಯೇ!
- ಚಾಮರಾಜ ಸವಡಿ

ಅರ್ಥವಾಯಿತೆ?... ಅರ್ಥವಾಗದಿದ್ದೀತೆ?

21 Nov 2010

6 ಪ್ರತಿಕ್ರಿಯೆ
ಮಾತು ಮರೆತ ಕ್ಷಣ
ನಿನ್ನದೇ ನೆನಪು
ಅಲ್ಲೆಲ್ಲೋ ನೀನು
ಮೂಕವಾಗಿದ್ದೀ ಅಂತ

ದುಃಖ ಉಕ್ಕಿರಬೇಕು ಅಲ್ಲಿ
ನನ್ನ ಕಣ್ಣುಗಳು ಉಕ್ಕಿದವಿಲ್ಲಿ
ಹಿತ ನನಗೆ
ನಿನ್ನ ದುಃಖ ನನ್ನದಾಯಿತು ಅಂತ

ಕನಸಲ್ಲಿ ನಕ್ಕೆಯೇನೋ
ಇಲ್ಲಿ ಹೃದಯ ಹೂವಾಯಿತು
ನಿದ್ದೆಯಾಳದಲ್ಲೆಲ್ಲೋ
ನೆಮ್ಮದಿಯ ಹೊರಳು

ನಾನು ನಾನಾಗಿಲ್ಲ
ನೀನಾಗಿದ್ದೇನೆ
ನೀನು ನೀನಾಗಿಲ್ಲ
ನಾನಾಗಿದ್ದೀ

ಹೆಚ್ಚೇನ ಹೇಳಲಿ?
ಅಲ್ಲಿಯ ಕಿಚ್ಚು
ಇಲ್ಲಿ ಧಗಿಸುತ್ತದೆ
ಅಲ್ಲಿಯ ಕಣ್ಣೀರು
ಇಲ್ಲಿ ಹನಿಯುತ್ತದೆ
ಅಲ್ಲಿಯ ಖುಷಿಗೆ
ಇಲ್ಲಿ ಉಕ್ಕುತ್ತದೆ

ಅಲ್ಲಿಗೂ ಇಲ್ಲಿಗೂ
ಏನದು ನಂಟು
ಮಾಯೆಯೋ ಮಮತೆಯೋ
ಎಲ್ಲ ಮೀರಿದ
ಪ್ರೀತಿಯ ಒರತೆಯೋ

ಇದು
ಅಕ್ಷರ ಮೀರಿದ ಭಾವ

ಅರ್ಥವಾಯಿತೆ?
ಅರ್ಥವಾಗದಿದ್ದೀತೆ?

- ಚಾಮರಾಜ ಸವಡಿ

ಮೌನ ಸಾಂಗತ್ಯ

3 Nov 2010

6 ಪ್ರತಿಕ್ರಿಯೆ
ತಾನು ಬೀಸಿಯೇ ಇಲ್ಲ ಎಂಬಂತೆ
ಗಾಳಿ ಸುಮ್ಮನಾಯಿತು

ತಾನು ಉಕ್ಕಿಯೇ ಇಲ್ಲ ಎಂಬಂತೆ
ಕಡಲು ಸುಮ್ಮನಾಯಿತು

ಆದರೆ,
ಬೋರಲು ಬಿದ್ದ ತೆಂಗಿನ ಮರಕ್ಕೆ
ಹಾಗೆ ಅಂದುಕೊಳ್ಳಲು ಆಗಲಿಲ್ಲ

ನನ್ನ ಸ್ಥಿತಿಯೂ ಅದೇ

ಪ್ರೀತಿಸಿಯೇ ಇಲ್ಲ ಎಂದು ಹೇಗೆ ಹೇಳಲಿ?

- ಚಾಮರಾಜ ಸವಡಿ

ಅಲ್ಲಮನ ನೆನಪಲಿ

25 Oct 2010

3 ಪ್ರತಿಕ್ರಿಯೆ
ಒಂದು ಕನಸಿತ್ತು
ಅವಳಂತೆ
ಒಂದು ವಾಸ್ತವ ನಿಂತಿತ್ತು
ಬದುಕಿನಂತೆ

ನಾನು ಎರಡನ್ನೂ ನೋಡಿದೆ
ಎರಡನ್ನೂ ಬೇಡಿದೆ
ಕನಸುಳಿಸು ಎಂದು ವಾಸ್ತವವ
ವಾಸ್ತವವಳಿಯಲಿ ಎಂದು ಕನಸ

ನೋಡಿದರೆ
ಕನಸೊಳು ವಾಸ್ತವ
ವಾಸ್ತವದೊಳು ಕನಸು

ಕಕ್ಕಾವಿಕ್ಕಿಯಾಗಿ
ಮನಸು ಚೀರಿತು

ಎಲಾ ಅಲ್ಲಮಾ! 


- ಚಾಮರಾಜ ಸವಡಿ

ಕ್ರಿಯೆಗೊಂದು ಪ್ರತಿಕ್ರಿಯೆ

18 Oct 2010

5 ಪ್ರತಿಕ್ರಿಯೆ
ಮಳೆಯಲ್ಲ,
ಕಣ್ಣೀರೂ ತೋಯಿಸುತ್ತದೆ
ನೆಲವನ್ನಷ್ಟೇ ಅಲ್ಲ,
ಮನವನ್ನೂ

ಉತ್ತರ ಕೊಡುವವರಾದರೂ ಯಾರು?
ಅವರೆಲ್ಲ ಜೋಪಾನವಾಗಿದ್ದಾರೆ
ಮನೆಯಲ್ಲಿ, ಕನಸುಗಳಲ್ಲಿ, ಹುಮ್ಮಸ್ಸಿನಲ್ಲಿ
ಬ್ಯಾಂಕ್‌ ಖಾತೆಯಲ್ಲಿ, ಲಾಕರ್‌ಗಳಲ್ಲಿ,
ಭೋರ್ಗರೆದು ಮೊರೆಯುವ ಸ್ಪೀಕರ್‌ಗಳಲ್ಲಿ

ಕನಸುಗಳಿಗೆ ದನಿ ಇರುವುದಿಲ್ಲ ಗೆಳತಿ
ಅಲ್ಲಿ ಒಮ್ಮೊಮ್ಮೆ ಬೆಳಕೂ ಇರುವುದಿಲ್ಲ
ಜಗತ್ತು ಗುರುತಿಸುವುದಾದರೂ ಹೇಗೆ?
ಗಡಚಿಕ್ಕುವ ಶಬ್ದ, ಕೋರೈಸುವ ಬೆಳಕಿನ ಅಬ್ಬರದಲ್ಲಿ
ಕನಸು ಕರಗುತ್ತದೆ,
ಕರೆ ಕೂಡ ಉಳಿಯದಂತೆ ಕಳೆದುಹೋಗುತ್ತದೆ

ಎಲ್ಲೋ ಮೌನದ ನೀರವತೆಯಲ್ಲಿ
ಕನಸು ಬಿಕ್ಕುತ್ತದೆ
ಅತ್ತವನ ಮನದಲ್ಲಿ
ಮತ್ತೆ ನೋವು ಉಕ್ಕುತ್ತದೆ

ಗಾಜಿನ ಚೌಕಟ್ಟು ಮಬ್ಬಾಗುತ್ತದೆ ನಿಜ
ಮಳೆಗಷ್ಟೇ ಅಲ್ಲ
ಕಣ್ಣೀರಿಗೂ
ಗಾಜಲ್ಲ
ಮಬ್ಬಾಗುವುದು ಕಣ್ಣು
ಅದರಾಚೆ ನಿಂತಿರುವ ಹೆಣ್ಣು

ಅದು ಕನಸೇ?
ಅಲ್ಲ
ವಾಸ್ತವ
ಅವ
ಎಂದಿಗೂ ಮುಗಿಯದ ನಿರೀಕ್ಷೆಗಳ
ಹೊತ್ತವ


- ಚಾಮರಾಜ ಸವಡಿ

ನನಸಾದ ಹಾಗೆ ಒಂದಿಷ್ಟು ಕನಸು

9 Sept 2010

2 ಪ್ರತಿಕ್ರಿಯೆ
ಇದು ಇಲ್ಲಿಗೇ ಮುಗಿಯಲಿ ಅಂತ ಬಯಸುತ್ತದೆ ಮನಸ್ಸು

ಅದು ಮುಗಿಯುವುದಿಲ್ಲ
ಹೊಸ ಮೊಳಕೆಯೊಂದಿಗೆ ಚಿಗಿಯುತ್ತದೆ

ಇದು ಶುರುವಾಗಲಿ ಅಂತ ಆಶಿಸುತ್ತೇನೆ

ಅದು ಶುರುವಾಗುವುದಿಲ್ಲ
ಹಳೆಯ ತಪ್ಪುಗಳಂತೆ ಮತ್ತೆ ನೆಲಕ್ಕೆ ಬೀಳುತ್ತದೆ

ರಾತ್ರಿಯ ಕಾವಳ ಮೌನದಲ್ಲಿ ಮತ್ತೆ ಮತ್ತೆ ಯೋಚಿಸುತ್ತೇನೆ

ಕನಸು ಕಂಡಿದ್ದು ತಪ್ಪಲ್ಲ
ನನಸು ಮಾಡಲು ಹವಣಿಸಿದ್ದು ತಪ್ಪಲ್ಲ

ಆದರೂ, ಕನಸು ನನಸಾಗಲಿಲ್ಲ

ರಾತ್ರಿ ಮುಗಿದು ಬೆಳಗಾಗುತ್ತದೆ
ಮಲಗೆದ್ದ ಹಕ್ಕಿಗಳು ಹಾಡುತ್ತವೆ
ರಾತ್ರಿಯಿಡೀ ಎದ್ದಿದ್ದ ಗೂರ್ಖಾ, ಗೂಬೆ ಮಲಗುತ್ತವೆ

ನನಗೆ ಪೂರ್ತಿ ಎಚ್ಚರವೂ ಇಲ್ಲದ ಮಂಪರು
ಕಂಡಿದ್ದು ಕನಸೋ, ಕಾಣುತ್ತಿರುವುದು ನನಸೋ

ಗೊಂದಲದ ಮೇಲೆ ಗೊಂದಲ

ಎಲ್ಲ ನೆನಪುಗಳನ್ನು ಹೂತು ಹಾಕುವಂತೆ
ಒಂದು ಬಿಸಿ ಬಿಸಿ ಕಾಫಿ, ಇವತ್ತಿನ ತಾಜಾ ಪೇಪರ್‌

ಎಲ್ಲಾ ಪುಟಗಳಲ್ಲಿ ಆದರ್ಶದ ಮೊಳಗು
ವಾಸ್ತವದ ಅಳುಕು, ಹಿತಾಸಕ್ತಿಯ ಸುದ್ದಿಗಳು

ನಂಬುವುದಿಲ್ಲ ಅಂತ ಗೊತ್ತಿದ್ದರೂ
ಮೊಳದುದ್ದಕ್ಕೆ ಅಚ್ಚಾದ ಅಂಕಣಗಳು

ನನಗೆ ಮತ್ತೆ ಗೊಂದಲವಾಗುತ್ತದೆ:
ಇದೆಲ್ಲ ಕನಸೋ, ನನಸೋ?

- ಚಾಮರಾಜ ಸವಡಿ



ಎಲೆ ಕವಿತೆ, ಎಲ್ಲಿ ಅವಿತೆ?

24 Aug 2009

4 ಪ್ರತಿಕ್ರಿಯೆ
ಒಂದು ಕವಿತೆ ಬರೆಯಲು ಕೂತೆ

ಗಡಿಯಾರ ಸುಮ್ಮನಾಯಿತು
ಅರಳಬೇಕಿದ್ದ ಹೂಗಳು, ರಾತ್ರಿಯ
ಸದ್ದುಗಳು ಸುಮ್ಮನಾದವು
ಹುಳು ಹಿಡಿಯಲು ಹೊಂಚು ಹಾಕಿದ್ದ
ಗೋಡೆಯ ಮೇಲಿನ ಹಲ್ಲಿಯೂ ಸುಮ್ಮನಾಯಿತು

ಅಲೆಯಾಗುತ್ತಿದ್ದ ಸಂಗೀತ ಮೌನವಾಯಿತು
ಷೆಲ್ಫ್‌ನಲ್ಲಿ ಕೂತ ಕವಿಗಳು ಕಿವಿಯಾದರು
ಎದೆಯಲ್ಲಿದ್ದ ಸಾವಿರಾರು ಭಾವನೆಗಳು
ಭೋರ್ಗರೆಯಲು ಪಾಳಿ ಹಚ್ಚಿದವು

ಕಂಬನಿಯಾದ ಕನಸುಗಳು
ಮಾತೇ ಆಗದ ಪಿಸುಮಾತುಗಳು
ನಾಳೆ ಖಂಡಿತ ಅಂದುಕೊಂಡ
ನಿನ್ನೆಯ ಹಳವಂಡಗಳು
ನಾ ಮುಂದು, ತಾ ಮುಂದು
ಎಂದು ಒಂದೇ ಸಮ ನುಗ್ಗಿದವು

ಕಕ್ಕಾವಿಕ್ಕಿಯಾಯಿತು ಕೀಲಿಮಣೆ
ತಡವರಿಸಿದವು ಬೆರಳುಗಳು
ಮಾನಿಟರೂ ಬೆಚ್ಚಿಬಿದ್ದಂತಿತ್ತು
ಸಮಸ್ತ ಕವಿಗಳಾಣೆ, ದಾರ್ಶನಿಕರಾಣೆ
ಅನುಭಾವಿಗಳಾಣೆ, ಚೇತನಗಳಾಣೆ
ಇವು ಸತ್ಯ, ಇವು ನಿತ್ಯ
ಹೊರಬರಲು ಹಂಬಲಿಸಿದ್ದವು
ಕುದಿಯಾಗಿದ್ದವು, ತಿದಿಯೊತ್ತಿದ್ದವು
ಬೆರಳುಗಳ ಭವ ಹರಿದು
ಹಾಳೆ, ಪರದೆಗಳ ಬಂಧನ ತೊರೆದು
ಹಾಡಾಗಲು ಹಾತೊರೆದಿದ್ದವು-

ಏನೇ ಅಂದುಕೊಂಡರೂ,
ಎಷ್ಟೇ ಅಂಗಲಾಚಿದರೂ
ಕವಿತೆ ಏಕೋ ಕನಸ ಕನ್ನಡಿಯಾಗಲಿಲ್ಲ
ಮೂಡಲಿಲ್ಲ, ಅರಳಲಿಲ್ಲ, ಭೋರ್ಗರೆಯಲಿಲ್ಲ
ಮೊದಲ ಸಂಗಮದ ಕನ್ಯೆಯಂತೆ
ಮುದುಡಿತ್ತು, ನಲುಗಿತ್ತು, ಹಸಿದಿತ್ತು
ಚಿಮ್ಮಿ ಬರುವ ಮೊದಲೇ ಕುಸಿದಿತ್ತು

***

‘ಆಯ್ತಾ ಕವಿತೆ ಬರೆದಿದ್ದು?’
ಎಂದು ಕೇಳುತ್ತ ನನ್ನವಳು ಒಳಬರುತ್ತಲೇ
ನಾಚಿ ಕಿಟಕಿಯಿಂದಾಚೆ ಹಾರಿಹೋಯಿತ್ತು.

- ಚಾಮರಾಜ ಸವಡಿ

ಬೊಗಸೆಗಣ್ಣಿನ ಬಯಕೆಯ ಹೆಣ್ಣು... (ಬೇಂದ್ರೆ-೧)

29 Jan 2009

0 ಪ್ರತಿಕ್ರಿಯೆ
ಬೆಳ್ಳಂಬೆಳಿಗ್ಗೆ ಬೇಂದ್ರೆ ಗಂಟು ಬಿದ್ದಿದ್ದಾರೆ.

ನಸುಕಿನ ಬೆಂಗಳೂರಲ್ಲಿ ಈಗ ಚಳಿ ಕಡಿಮೆ. ನಕ್ಷತ್ರಗಳು ಸ್ವಚ್ಛವಾಗಿ ಮುಗುಳ್ನಗುತ್ತಿವೆ. ನಸುಕಿನಲ್ಲಿ ಚಳಿಯಾದೀತು ಎಂದು ಕಾಲಡಿ ಹಾಕಿಕೊಂಡಿದ್ದ ರಗ್‌ಗಳು ಹಾಗೇ ಇವೆ. ಸಣ್ಣಗೇ ತಿರುಗುವ ಫ್ಯಾನ್‌ ಕೂಡಾ ಚಳಿ ಹುಟ್ಟಿಸುತ್ತಿಲ್ಲ.

ಸದ್ದಿಲ್ಲದೇ ಬೆಳಗಾಗುತ್ತದೆ. ಮೂಡಣದಲ್ಲಿ ಚೆಂಬೆಳಕು. ಅರೆ ಕ್ಷಣ ಧಾರವಾಡದ ಚೆಂಬೆಳಕು ಹೆಸರಿನ ಮನೆ ಮತ್ತು ಕವಿ ಚೆನ್ನವೀರ ಕಣವಿ ನೆನಪಾಗುತ್ತಾರೆ. ಅವರು ಕವಿತೆ ಓದುತ್ತಿದ್ದ ಪರಿ ನೆನಪಾಗುತ್ತದೆ. ಕಿರಿಯರನ್ನು ಪ್ರೋತ್ಸಾಹಿಸುವ ಪರಿ, ಬರೆದ ಸಣ್ಣ ತುಂಡುಗಳನ್ನು ಆಸ್ವಾದಿಸುವ ದೊಡ್ಡತನ ನೆನಪಾಗುತ್ತದೆ. ಅದೇ ಧಾರವಾಡದಲ್ಲಿ ಇದ್ದವರಲ್ಲವೆ ಬೇಂದ್ರೆ. ಮೂಡಣ ರಂಗೊಡೆಯುವ ಹೊತ್ತಿನಲ್ಲಿ, ಸಂಜೆ ಕುರಿತು ಬರೆದಿದ್ದರೂ ಅವರ ಮುಗಿಲ ಮಾರಿಗೆ ರಾಗರತಿ ನೆನಪಾಗುತ್ತದೆ. ಸಾಧನಕೇರಿಯ ಪುಟ್ಟ ಕೆರೆಯ ಎದುರಿನ ಬೇಂದ್ರೆ ಅಜ್ಜನ ಮನೆ, ಅಲ್ಲಿನ ವಿಚಿತ್ರ ನೀರವ, ಕೆರೆಯ ನೀರನ್ನು ಕಲಕುವ ಮೀನುಗಳು, ಸದ್ದಿಲ್ಲದೇ ಹರಿದಾಡುವ ಹಾವುಗಳು ಕಣ್ಮುಂದೆ ಬರುತ್ತವೆ.

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
-ಆಗ -ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ


ಬೆಳಗಿನ ಬೆಂಗಳೂರಿನ ನೀರವತೆಯಲ್ಲಿ ಚಂದ್ರಾಲೇಔಟ್‌ ತುಂಬ ಹೊಸದೊಂದು ರಾಗರತಿ. ಬೆಳಕಿನ ರತಿ ಏರುತ್ತಿದ್ದಂತೆ ನಕ್ಷತ್ರಗಳ ಕಣ್ಣುಗಳ ಅರ್ಧನಿಮೀಲಿತವಾಗುತ್ತವೆ. ಕತ್ತಲೆಯಲ್ಲಿ ಮರೆಯಾದಂತಿದ್ದ ಕಟ್ಟಡಗಳು ಮಸುಕುಮಸುಕಾಗಿ ಮೇಲಕ್ಕೇಳುತ್ತವೆ. ಷೆಲ್ಫ್‌ನಲ್ಲಿ ಪುಸ್ತಕವಾಗಿ ಕೂತಿರುವ ಬೇಂದ್ರೆ ಅಜ್ಜನನ್ನು ಹೊರಕ್ಕೆಳೆಯುತ್ತೇನೆ. ಎಲ್ಲಿದೆ ಕವನ?

ಹಾಂ, ಸಿಕ್ಕಿತು. ಒಲವೆ ನಮ್ಮ ಬದುಕು ಪುಸ್ತಕದ ಪುಟ ೨ರಲ್ಲಿ ಬೆಚ್ಚಗೇ ಕೂತಿದೆ ’ರಾಗರತಿ’ ಕವಿತೆ. (ಮೂಲ ಸಂಕಲನ: ಗರಿ, ಕವನ ಸಂಖ್ಯೆ ೩೧)

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
ಸೂಸ್ಯಾದ ಚಿಕ್ಕಿ ಅತ್ತಿತ್ತ.


ವ್ಹಾ ಬೇಂದ್ರೆ ಅಜ್ಜಾ! ’ಇರುಳ ಹೆರಳಿನ ಅರಳಮಲ್ಲಿಗಿ ಜಾಳಿಗಿ’ ಎಂಥಾ ಉಪಮೆ. ಸಂಜೆ ಹೊತ್ತಿನ ನಕ್ಷತ್ರಗಳು ಕತ್ತಲೆಯ ಜಡೆಯಲ್ಲಡಗಿದ್ದ ಅರಳುಮಲ್ಲಿಗೆಯಂತೆ ಕಂಡವಲ್ಲ ನಿನಗೆ. ರಸಿಕ ನೀನು!

ಮನಸ್ಸು ರಾಗರತಿಯಲ್ಲಿ ಲೀನವಾಗುತ್ತದೆ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಮಿ ಬೆಕ್ಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ


ರಾತ್ರಿ ನೀರು ತರುವ ಹೆಣ್ಣು ತಡರಾತ್ರಿಯ ಸಮಾಗಮದ ಬಯಕೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಳೆ. ಸಂಜೆಯ ಕೆಂಪು ಆಕೆಯಲ್ಲಿ ನವಿರು ಭಾವನೆಗಳನ್ನು ಉಕ್ಕಿಸಿದೆ. ಮನಸ್ಸಿನ ಆಸೆ ಸಾಕಿದ ಬೆಕ್ಕಿನಂತೆ ಸುತ್ತಮುತ್ತ ಸುಳಿದಾಡುತ್ತಿದೆ.

ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿತಿತ್ತ
ಮತಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತ
ತನ್ನ ಮೈಮರ ಮರೆತಿತ್ತ


ಕವಿತೆ ಓದುತ್ತ ಓದುತ್ತ ಬೆಳಗಿನ ಚೆಂಬೆಳಕು ಸಂಜೆಯ ರಾಗರತಿಯಾಗಿ ಬದಲಾಯಿತು. ಬೇಂದ್ರೆ ಕಟ್ಟಿಕೊಟ್ಟ ಚಿತ್ರಣ ಮಸಕುಮಸಕಾಗಿ ಮೂಡಿತು. ಧಾರವಾಡದ ನೀರವ ಓಣಿಯಲ್ಲಿ ಸಂಜೆಯಾಗಿದೆ. ಹೆಣ್ಣೊಬ್ಬಳು ನೀರು ತರಲು ಹೋದವಳು ಮುದಗೊಂಡು, ಹುರುಪಿನಿಂದ ಮನೆಯತ್ತ ಹೊರಟಿದ್ದಾಳೆ. ಆಕೆಯ ಮನದಲ್ಲಿ ರಾತ್ರಿಯ ಸುಖದ ನಿರೀಕ್ಷೆ. ಹೆಜ್ಜೆಗಳು ಅದನ್ನೇ ಹೇಳಿವೆ. ಸಂಜೆಯ ತಂಪು ಗಾಳಿಗೆ ಆಕೆಯ ಸೆರಗು ಅಲೆಯಾಗುತ್ತಿದೆ. ಅವಳ ಮನಸ್ಸಿನ ನಿರೀಕ್ಷೆಯನ್ನು ಪ್ರತಿಫಲಿಸಿದೆ. ಹಾರುವ ಸೆರಗನ್ನು ಸುಳ್ಳುಸುಳ್ಳೇ ಬಿಗಿಯಾಗಿ ಹಿಡಿಯುತ್ತ ಮನೆ ಕಡೆ ಹೊರಟಿದ್ದಾಳೆ. ಹಗಲಿಡೀ ಉರಿದು ಮಂಕಾದ ಸೂರ್ಯ ಸುಖದ ನಿರೀಕ್ಷೆಯಲ್ಲಿ ಮುಳುಗುತ್ತಿರುವ ಚಿತ್ರಣವನ್ನು ಬೊಗಸಿಗಣ್ಣಿನ ಹೆಣ್ಣಿನ ಮೂಲಕ ಬಿಂಬಿಸುತ್ತ ಹೋಗಿದ್ದಾನೆ ಬೇಂದ್ರೆ ಅಜ್ಜ.

ಅರೆಕ್ಷಣ ಬೆಂಗಳೂರಿನ ಮುಂಜಾನೆಯ ಚೆಂಬೆಳಕಿನಲ್ಲಿ ರಾಗರತಿಯ ರಂಗು ಕಂಡಂತಾಯಿತು. ಟೆರೇಸ್‌ ಮೇಲೆ ನಿಂತು ನೋಡಿದರೆ, ಕೆಳಗೆ ವಾಕಿಂಗ್‌ ಹೊರಟ ಜನ ಅಲ್ಲೊಬ್ಬರು ಇಲ್ಲೊಬ್ಬರು. ಯಾವ ನೀರೆಯ ಸೊಂಟದಲ್ಲೂ ನೀರಿನ ಬಿಂದಿಗೆಯಿಲ್ಲ. ಬಾವಿಗಳಂತೂ ಮೊದಲೇ ಇಲ್ಲ. ಸೀರೆಯುಟ್ಟ ಆಂಟಿಯರ ಸೊಂಟದಲ್ಲಿ ಕೈಯಿಡಲಿಕ್ಕೇ ಜಾಗವಿಲ್ಲ, ಇನ್ನು ಬಿಂದಿಗೆ ಎಲ್ಲಿ ಕೂತೀತು? ಬಳುಕುವ ನೀರೆಯರ ಸೊಂಟ ಅದ್ಯಾವ ಪರಿ ತುಳುಕುತ್ತಿದೆ ಎಂದರೆ, ಬಿಂದಿಗೆ ಅಲ್ಲಿ ನಿಂತೀತೆ?

ಆದರೆ, ಕವಿತೆ ಕಟ್ಟಿಕೊಡುವ ಸುಖದ ಚಿತ್ರಕ್ಕೆ ಕಾಲ-ದೇಶದ ಹಂಗೇಕೆ? ಕವಿತೆ ಓದುತ್ತ ಓದುತ್ತ ಬೆಳಗಿನ ಆಗಸ ಬೇಂದ್ರೆ ಕಂಡ ಸಂಜೆಯ ರಾಗರತಿಯಾಗುತ್ತದೆ. ವಾಕಿಂಗ್‌ ಹೊರಟ ನೀರೆಯರು ಬಿಂದಿಗೆ ಹೊತ್ತ ಬೊಗಸೆಕಣ್ಣಿನ ಹೆಣ್ಣುಗಳಾಗುತ್ತಾರೆ. ರಸ್ತೆಯಾಚೆ ಎಲ್ಲೋ ಬಾವಿ ಇದ್ದೀತು. ಇವರು ಅತ್ತ ಕಡೆಯೇ ಹೊರಟಿದ್ದಾರು. ಇನ್ನೇನು, ಬಿಂದಿಗೆ ತುಂಬಿಕೊಂಡು ವಾಪಸ್‌ ಬರುತ್ತಾರೆ. ತಿಳಿಗಾಳಿಗೆ ಸೀರೆಯ ಸೆರಗು ಹಾರದಿದ್ದರೂ ಮುಂಗುರುಳಾದರೂ ಹಾರಿಯಾವು. ಕಾಮಿ ಬೆಕ್ಕಿನ್ಹಾಂಗ ಮುಖದ ತುಂಬ ಸುಳಿದಾಡಿಯಾವು. ಏನೋ ನೆನಪಲ್ಲಿ, ಬಿದಿಗಿ ಚಂದ್ರನ ಚೊಗಚಿ ನಗಿ ಹೂ ಅವರ ಮುಖದಲ್ಲಿ ಮೆಲ್ಲಗೆ ಮೂಡಿದರೂ ಮೂಡಬಹುದು.

ಟೆರೇಸ್‌ನಲ್ಲಿ ನಿಂತು ಕಾಯುತ್ತಿದ್ದೇನೆ: ರಾಗರತಿಯ ಸೊಗಸಿಗೆ, ಮಳ್ಳ ಗಾಳಿಗೆ, ಬೊಗಸೆ ಕಣ್ಣಿನ ಹೆಣ್ಣಿಗೆ, ಆ ಬಿದಿಗಿ ಚಂದ್ರನ ಚೊಗಚಿ ನಗೆಗೆ.

- ಚಾಮರಾಜ ಸವಡಿ