ಈ ರಾತ್ರಿಗೆ ಬೆಳಗಾಗುವುದಿಲ್ಲ

26 Mar 2012

ಇದ್ದ ಒಂದೇ ಕನ್ನಡಕ
ಬಿದ್ದು ಒಡೆದುಹೋಯಿತು

ಬೆಳಕಿಲ್ಲದ ರಾತ್ರಿ ಗಡಿಯಾರ ಹೆಳವ
ಅವಳ ದೀಪದಂಥ ಕಂಗಳಿಗೆ
ಅಕ್ಷರಗಳ ಹುಡುಕಲಿ ಹೇಗೆ?

ಗಾಜೆಂದುಕೊಂಡಿದ್ದು ಕಣ್ಣೇ ಆಗಿತ್ತೇನೋ
ಖಾಲಿ ಫ್ರೇಮಿನ ಕನ್ನಡಕದಲ್ಲಿ
ಅತಿ ನಿಚ್ಚಳ ಅವಳ ಬಿಂಬ

ಏನು ಮಾಡುವುದು ಅಪರಾತ್ರಿಯಲಿ
ದಿನದ ನಿಟ್ಟುಸಿರಿಗೆ ಹೊಸ ಕನಸ ಪೋಣಿಸಿ
ಹೃದಯದ ತೂತ ಮುಚ್ಚಲಾಗದು
ಸುಮ್‌ಸುಮ್ನೇ ಬೀರಿದ ಮುಗುಳ್ನಗೆಗಳ
ಖಾಲಿತನ ತುಂಬಲಾಗದು

ನಾಳೆ ಬೆಳಗಾಗುವವರೆಗೂ ಕತ್ತಲೆಯೇ
ಈ ರಾತ್ರಿ ದೂಡಬೇಕು, ಹೇಗೋ
ಅಕ್ಷರಗಳ ಕ್ಷಮೆ ಕೇಳಿ,
ಕನಸುಗಳಿಗೆ ಕಾಡದಿರಲು ಹೇಳಿ
ಖಿನ್ನ ಮನಸಿಗೆ ನಿದ್ರಿಸಲೊಂದು ಮನವಿ

ಹೂಂ. ಹಾಗೇ ಮಾಡಬೇಕು
ಮುರಿದ ಗಾಜುಗಳ ಗುಡಿಸಿ,
ಕನ್ನಡಕದ ಫ್ರೇಮು ಎತ್ತಿಟ್ಟು
ಬಾರದ ನಿದ್ದೆಗೆ ಬೇಡಿಕೆ ಇಟ್ಟು
ಮುಚ್ಚಬೇಕು ಕಣ್ಣ

ನಿನ್ನೆಯದೆಲ್ಲ ಇಂದಿಗಾದಂತೆ
ನಾಳೆಗಿರಲಿ ಇಂದು, ಎಂದು
ದೀಪವಾರಿಸಿ, ಎವೆ ಮುಚ್ಚಿದರೆ
ಕಣ್ಣರಳಿಸುತ್ತಾಳೆ ಕಣ್ಣೊಳಗೆ
ಕನ್ನಡಕದ ಹಂಗಿಲ್ಲದೇ ಸ್ಪಷ್ಟವಾಗುತ್ತಾಳೆ
ಮರೆಯಬೇಕೆಂದರೂ ಇಷ್ಟವಾಗುತ್ತಾಳೆ

ಅಷ್ಟೇ,
ಇನ್ನು ಈ ರಾತ್ರಿಗೆ ಬೆಳಗಾಗುವುದಿಲ್ಲ

- ಚಾಮರಾಜ ಸವಡಿ

1 comment:

ಜೊಸೆಫ್ ಡಿ' ಸೋಜ said...

ಹೂಗೆಜ್ಜೆಯ ಸಪ್ಪಳದಲ್ಲಿ.....,
ನನ್ನದೇ ಒತ್ತಡದಲ್ಲಿ......,
ಮರೆತು ಹೋದ ನನಗೆ.....,
ನೆನಪು ಮಾಡಿತು
ಗೆಜ್ಜೆನಾದ....
ಪಪ್ಪಾ ಪಪ್ಪಾ ಬೇಡ ಅಂದ್ರೂ....,
ಒತ್ತಿ ಹಾಕಿದೆ....,
ಈ ಗೆಜ್ಜೆ ಅನ್ನೋ ವಾದ