Showing posts with label ನಿದ್ದೆ. Show all posts
Showing posts with label ನಿದ್ದೆ. Show all posts

ನಾಳೆ ಏಳಲಿಕ್ಕಾದರೂ ರಾತ್ರಿ ಮಲಗಬೇಕು

21 Mar 2012

0 ಪ್ರತಿಕ್ರಿಯೆ

ಅಲ್ಲಿಂದ ಹೊರಟಾಗಲೇ ಮಧ್ಯರಾತ್ರಿ. 
ಗುಡ್‌ ಮಾರ್ನಿಂಗ್‌ ಹೇಳಬೇಕೋ, ಗುಡ್‌ನೈಟ್‌ ಇನ್ನೂ ಉಳಿದಿದೆಯೋ ಎಂಬ ಗೊಂದಲ. ರಸ್ತೆಗಳು ಅಗಲಕ್ಕೆ ಮೈಚಾಚಿ ಮಲಗಿದ್ದವು. ಆಗೊಂದು, ಈಗೊಂದು ವಾಹನ, ಬೆಳಕಿನಲ್ಲಿ ರಸ್ತೆಯ ತಗ್ಗು, ಉಬ್ಬುಗಳನ್ನು ಹುಡುಕಿಕೊಂಡು ತಂತಮ್ಮ ಗುರಿಯೆಡೆಗೆ ಹೊರಟಿದ್ದವು. ಎಲ್ಲಿಗೆ ಹೋಗಬೇಕು ನಾನು?
ಗಾಡಿಯ ಮೇಲೆ ಕೂತು ಕತ್ತೆತ್ತಿ ನೋಡಿದೆ. ನಕ್ಷತ್ರಗಳು ತಬ್ಬಲಿಯಂತೆ ಮಂಕಾಗಿ ದಿಟ್ಟಿಸಿದವು. ಅವಕ್ಕೂ ಬೇಸರವಾಗಿದೆಯಾ? ತಲೆ ಕೊಡವಿದೆ. ಬೇಸರಪಡಲು, ಮನಸ್ಸು ಮುದುಡಲು, ಖಿನ್ನವಾಗಲು ಅವೇನು ಪ್ರೀತಿಸಿವೆಯಾ ಎಂದು ಸುಮ್ಮನೇ ಹೊರಟೆ. ಅಗಲ ರಸ್ತೆಯಲ್ಲಿ, ಅಪರಾತ್ರಿಯಲ್ಲಿ, ಒಂಟಿ ಪಯಣ. ಮನೆ ದೂರ. 
ಹಳೆಯ ಹಾಡುಗಳು ಜೊತೆಯಾದವು. ಗಾಡಿ ತನ್ನ ಪಾಡಿಗೆ ಓಡುತ್ತಿತ್ತು. ನಾನು ಸುಮ್ಮನೇ ಹ್ಯಾಂಡಲ್‌ ಹಿಡಿದುಕೊಂಡಿದ್ದೆ. ಸಿಗ್ನಲ್‌ಗಳೆಲ್ಲ ಹಳದಿ ಮಿಣುಕುಗಳಾಗಿ, ನೀನು ಆರಾಮವಾಗಿ ಹೋಗಬಹುದು ಎನ್ನುತ್ತಿದ್ದವು. ಸರ್ಕಲ್‌ ಹತ್ತಿರವಾದಾಗೆಲ್ಲ, ವೇಗ ತಗ್ಗಿಸಿ, ಆಕಡೆ, ಈಕಡೆ ನೋಡಿ, ಮತ್ತೆ ವೇಗ ಹೆಚ್ಚಿಸಿಕೊಂಡು, ಅಷ್ಟರಲ್ಲಿ ಮತ್ತೊಂದು ಸಿಗ್ನಲ್‌ ಹತ್ತಿರವಾಗಿ, ಮನಸ್ಸಿನಲ್ಲಿ ಮೊರೆಯುತ್ತಿದ್ದ ಹಾಡಿನ ಜಾಗದಲ್ಲಿ ಬೇರೆ ಹಾಡು. 
ಮೇಲೆ ಮಾತ್ರ ಅವೇ ದೀನ ನಕ್ಷತ್ರಗಳು. ಒಳಗೆ ಮಂಕು ಭಾವ.
*****
ಮೊದಲೆಲ್ಲ ಇಷ್ಟು ತಡವಾಗಿ ಹೋಗುತ್ತಿರಲಿಲ್ಲ. ನನ್ನಷ್ಟೇ ಖಿನ್ನರಾದ ಕೆಲವರು ಬೇರೆ ಬೇರೆ ಕಾರಣಗಳಿಗಾಗಿ ಜೊತೆಯಾಗಿ, ಅವರ ನೋವುಗಳಿಗೆ ನಾನು ಕಿವಿಯಾಗತೊಡಗಿದಾಗಿನಿಂದ ಹೀಗೆ ತಡವಾಗುತ್ತಿದೆ. ಇಲ್ಲದಿದ್ದರೆ ಕಚೇರಿ ಬಿಟ್ಟರೆ ಮನೆ, ಮನೆ ಬಿಟ್ಟರೆ ಕಚೇರಿ ಎಂಬ ಟೈಂ ಟೇಬಲ್‌ನವ ನಾನು. ಅವರ ಜೊತೆ ಹರಟುತ್ತಿದ್ದರೂ, ಮನಸ್ಸು ಎಲ್ಲೋ ಯಾತ್ರೆ ಹೊರಟಿರುತ್ತದೆ. ಕಾರಣವಿಲ್ಲದೇ ನಕ್ಷತ್ರಗಳನ್ನು ದಿಟ್ಟಿಸುತ್ತದೆ. ಅವಕ್ಕೂ ಖಿನ್ನತೆಯಾ ಎಂದು ಪ್ರಶ್ನಿಸಿಕೊಳ್ಳುತ್ತದೆ. ಛೇ, ಇರಲಿಕ್ಕಿಲ್ಲ ಎಂದು ಸುಮ್ಮನಾಗುತ್ತದೆ. ಮತ್ತೆ ಹರಟೆ, ಮತ್ತೆ ಯಾತ್ರೆ, ಮತ್ತೆ ಗೊಂದಲ.
ಕೊನೆಗೂ ಜೊತೆಗಿರುವ ಗೆಳೆಯನನ್ನು ಮನೆ ಮುಟ್ಟಿಸಿ, ಅಲ್ಲೊಂಚೂರು ಹರಟೆ ಹೊಡೆದು, ಕಟ್ಟೆಯ ಮೇಲೆ, ಅಂಗಡಿಯ ಮುಂದಿನ ಅಗಲ ಫುಟ್‌ಪಾತ್‌ ಮೇಲೆ ಮಲಗಿದವರು ಮುಸುಕು ಸರಿಸಿ, ನಮ್ಮನ್ನೊಮ್ಮೆ ನಿದ್ದೆ ಕೆಟ್ಟ ಕಣ್ಣಲ್ಲಿ ಕೆಕ್ಕರಿಸಿ ನೋಡಿದಾಗ, ಸರಿ ನಾಳೆ ಸಿಕ್ತೀನಿ ಎನ್ನುತ್ತಾ ಮತ್ತೆ ಗಾಡಿ ಏರುತ್ತೇನೆ. ಮುಂದಿನ ಎಂಟೊಂಬತ್ತು ಕಿಮೀ ನನಗೆ ನಾನೇ. 
ಆಗ ಎಲ್ಲಾ ಸಿಗ್ನಲ್ಲುಗಳೂ ಮುಕ್ತ. ಪ್ರತಿಯೊಂದು ಸರ್ಕಲ್‌ನ ಮೂಲೆಯಲ್ಲೂ ಕೆಲವು ಆಟೊಗಳ ಸಾಲು, ಅವುಗಳ ಮುಂದೆ ಹರಟೆ ಹೊಡೆಯುವ ಆಟೊ ಚಾಲಕರು. ಅಪರೂಪಕ್ಕೊಮ್ಮೆ ಪೊಲೀಸರ ಗಸ್ತು ವಾಹನ. ಹಗಲುಹೊತ್ತು ಗಿಜಿಗುಡುವ ರಸ್ತೆಗಳೆಲ್ಲ ದಿನದ ದುಡಿಮೆಯ ನಂತರ ನಿಟ್ಟುಸಿರಿಡುತ್ತ ವಿಶ್ರಾಂತಿಯಲ್ಲಿರುತ್ತವೆ. ಬೀದಿ ದೀಪಗಳಿಗೆ ಬುದ್ಧನ ಪ್ರಶಾಂತತೆ. ಅಲ್ಲಲ್ಲಿ ತೆರೆದುಕೊಂಡ ದೊಡ್ಡ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಮ್‌ಗಳ ಬಾಗಿಲ ಮುಂದೆ ನಿಂತ ಆಂಬುಲೆನ್ಸ್‌ಗಳು, ಅವಸರದಿಂದ ಆಚೀಚೆ ಓಡಾಡುವ ರೋಗಿಗಳ ಸಂಬಂಧಿಗಳನ್ನು ಬಿಟ್ಟರೆ, ಇಡೀ ಊರಿಗೆ ದೊಡ್ಡ ನಿದ್ದೆ. 
ಹೊಟ್ಟೆ ಸಣ್ಣಗೆ ಚುರುಗುಡುತ್ತದೆ. ಪರವಾಗಿಲ್ಲ, ಹಸಿವೆಯಾಗುತ್ತಿದೆ ಎಂದು ಖುಷಿ. ಬೇರೆ ಸಮಯದಲ್ಲಾದರೆ ಮುಕ್ಕಾಲು ಗಂಟೆ ಹಿಡಿಯುವ ಪಯಣ, ಅಪರಾತ್ರಿಯಲ್ಲಿ ಕೇವಲ ಇಪ್ಪತ್ತು ನಿಮಿಷಕ್ಕೆಲ್ಲ ಮುಗಿಯುತ್ತದೆ. ಆದರೆ, ಇಪ್ಪತ್ತು ನಿಮಿಷ ಅಗಾಧ ಕಾಲವೇನೋ ಎಂಬಂತೆ ಮನಸ್ಸು ಮಂಕುಮಂಕು. 
ಅದು ದಿನದ ಸುಸ್ತಲ್ಲ. ಸಣ್ಣಗೇ ಚುರುಗುಡುವ ಹಸಿವೆಯಿಂದಲೂ ಅಲ್ಲ. ಎಷ್ಟೇ ದಣಿದಿದ್ದರೂ, ರಾತ್ರಿ ಓದಿನ ಕೋಣೆ ಹೊಕ್ಕು, ಅರ್ಧ ಗಂಟೆಯಾದರೂ ಒಂಟಿಯಾಗಿ ಕೂಡದಿದ್ದರೆ, ಅವತ್ತಿನ ದಿನ ಮುಗಿಯುವುದಿಲ್ಲ. ಸಿಗ್ನಲ್‌ಗಳ ಮೇಲೆ ಸಿಗ್ನಲ್‌ ದಾಟಿ, ಅಗಲ ಒಂಟಿ ರಸ್ತೆಗಳನ್ನು ನುಂಗಿಕೊಂಡು ಮನೆಗೆ ಹತ್ತಿರವಾಗುವ ಹೊತ್ತಿಗೆ ಎಂಥದೋ ಸುಸ್ತು. 
*****
ಓದುವ ಕೋಣೆ ಕಾಯುತ್ತಿರುತ್ತದೆ. ಇಡೀ ದಿನ ಹೊರಗೆ ಹೋಗಿದ್ದೆಯಲ್ಲ ಮಿತ್ರಾ, ಹೇಗಿತ್ತು ನಿನ್ನ ದಿನ ಎಂದು ಪ್ರಶ್ನಿಸುತ್ತದೆ. ಅದಕ್ಕೇ ಉತ್ತರ ಗೊತ್ತಿರುವುದರಿಂದ ನಾನು ಏನೂ ಹೇಳುವುದಿಲ್ಲ. ಬಾಗಿಲು ಮುಚ್ಚಿ, ಕಂಪ್ಯೂಟರ್‌ ತೆರೆದು, ಅದರ ಪಾಡಿಗೆ ಅದನ್ನು ಬಿಟ್ಟು ಸುಮ್ಮನೇ ಕೂಡುತ್ತೇನೆ. ಒಂದೇ ಗತಿಯಲ್ಲಿ ತಿರುಗುವ ಫ್ಯಾನ್‌, ಅಲ್ಲೆಲ್ಲೋ ಕೋಲಿನಿಂದ ಫುಟ್‌ಪಾತ್‌ನ ಕಲ್ಲುಗಳನ್ನು ಕುಟ್ಟುತ್ತ ಗೂರ್ಖಾ ಸಿಳ್ಳೆ ಹೊಡೆಯುವ ಸದ್ದು, ಫ್ಯಾನಿನ ಗಾಳಿಗೆ ಸಣ್ಣಗೇ ಅಲುಗುವ ಹಾಳೆಗಳನ್ನು ದಿಟ್ಟಿಸುತ್ತೇನೆ. ದೊಡ್ಡದೊಂದು ಖಾಲಿತನ ಒಳಗೆ. ಅದನ್ನು ತುಂಬುವುದು ಹೇಗೆ?
ಮರೆಯಬೇಕೆಂದಾಗಲೇ ಎಲ್ಲ ನೆನಪಾಗತೊಡಗುತ್ತವೆ. 
ಎಲ್ಲಾ ಎಂದರೆ, ಎಲ್ಲವೂ. ಸ್ಪಷ್ಟ ಚಿತ್ರಗಳಂತೆ, ಸಜೀವವಾಗಿ ನೆನಪಾಗುತ್ತವೆ. ಭಾಷೆ ಗೊತ್ತಿಲ್ಲದ ಸಿನಿಮಾ ನೋಡುವಂತೆ, ಸುಮ್ಮನೇ ಆ ಚಿತ್ರಗಳನ್ನು ನೋಡುತ್ತ ಹೋಗುತ್ತೇನೆ. 
ಹಿಂದಕ್ಕೆ, ಹಿಂದಕ್ಕೆ ಹೋಗುತ್ತದೆ ನೆನಪು. ಗುಜರಾತ್‌ನ ಕಚ್ಛ್‌ ರಣಭೂಮಿಯಲ್ಲಿ ಕಳೆದ ವರ್ಷಗಳು ನೆನಪಾಗುತ್ತವೆ. ಅಲ್ಲೂ ಹೀಗೇ. ವರ್ಷಗಟ್ಟಲೇ ರಾತ್ರಿಗಳನ್ನು ಒಂಟಿಯಾಗಿ ಒಂಟಿ ರಸ್ತೆಗಳಲ್ಲಿ ತಿರುಗುತ್ತ ಕಳೆದಿದ್ದೆ. ಎದೆ ತುಂಬ ಪುಟಿಯುವ ಕನಸುಗಳು. ಸಾವಿರಾರು ನವಿರು ಭಾವನೆಗಳು. 
ಆದರೆ, ಅಲ್ಲಿ ನಕ್ಷತ್ರಗಳು ಉಜ್ವಲವಾಗಿರುತ್ತಿದ್ದವು. ಮರುಭೂಮಿಯಲ್ಲೆಲ್ಲೋ ಒಂಟಿಯಾಗಿದ್ದ ಸೇನಾ ಠಾಣ್ಯದಲ್ಲಿ, ಬೆರಳೆಣಿಕೆಯಷ್ಟಿದ್ದ ಬೀದಿದೀಪಗಳನ್ನು ನಾಚಿಸುವಂತೆ ಪಳಪಳ ಹೊಳೆಯುತ್ತಿದ್ದವು. ಅವುಗಳನ್ನು ಮತ್ತೆ ಮತ್ತೆ ನೋಡುತ್ತ ನಾನು ಗೆಲುವಾಗಲು ಯತ್ನಿಸುತ್ತಿದ್ದೆ. ಅಲ್ಲೂ ಹೀಗೇ ಅಪರಾತ್ರಿಯ ತಿರುಗಾಟ. ಸೇನಾ ಠಾಣ್ಯದ ತಂತಿ ಸುತ್ತಿದ್ದ ಆವರಣದಲ್ಲಿ ಒಂಟಿ ಹುಡುಕಾಟ. 
ಅವತ್ತಿಗೂ ಇವತ್ತಿಗೂ ನಡುವೆ ಇಪ್ಪತ್ತೈದು ವರ್ಷಗಳೇ ಕಳೆದುಹೋಗಿವೆ. ಆದರೆ, ಅದೇ ಒಂಟಿತನ, ಅದೇ ಅಪರಾತ್ರಿ, ಅದೇ ಒಂಟಿ ಅಲೆದಾಟ. ವ್ಯತ್ಯಾಸ ಇಷ್ಟೇ: ಅವತ್ತು ಉಜ್ವಲವಾಗಿದ್ದ ನಕ್ಷತ್ರಗಳು ಈ ನಗರದ ಬೀದಿದೀಪದ ಪ್ರಖರತೆಯಲ್ಲಿ ಮಂಕಾಗಿವೆ.
ಎಷ್ಟು ವಿಚಿತ್ರ! 
ಆ ಉಜ್ವಲ ನಕ್ಷತ್ರಗಳು ಕೊಂಚವಾದರೂ ಭರವಸೆ ಹುಟ್ಟಿಸುತ್ತಿದ್ದವು. ಆದರೆ, ಈ ಬೀದಿ ದೀಪಗಳ ಪ್ರಖರತೆ ಮನಸ್ಸನ್ನು ಇನ್ನಷ್ಟು ಮಂಕಾಗಿಸುತ್ತಿದೆ. 
ಅಗಲ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುತ್ತ, ಓದುವ ಕೋಣೆಯಲ್ಲಿ ಒಂಟಿಯಾಗಿ ಕೂತುಕೊಂಡೇ ನಿನ್ನೆ ಕಳೆದು ಇಂದು ಬಂದಿರುತ್ತದೆ. ನಾನು ನಿನ್ನೆಗೂ ಸೇರಿಲ್ಲ, ಇಂದಿಗೂ ಹೊಂದಿಕೊಂಡಿಲ್ಲ. ನಡುವೆ ಎಲ್ಲೋ ಕಳೆದುಹೋಗಿದ್ದೇನೆಂದು ಅನಿಸತೊಡಗುತ್ತದೆ.
ಮರೆತಂತಿರುವ ಹಾಡುಗಳು ನೆನಪಾಗುತ್ತವೆ. ಭಾವನೆಗಳು ನೆನಪಾಗುತ್ತವೆ. ಕನಸುಗಳು ಕರೆಯುತ್ತವೆ. ಅಪರಾತ್ರಿಯ ನೀರವತೆಯಲ್ಲಿ, ನನಗೆ ಮಾತ್ರ ಕೇಳಿಸುವಂತೆ ಹಾಡುತ್ತವೆ, ಕಾಡುತ್ತವೆ. 
ನಿನ್ನೆಯೂ ಹೀಗೇ ಕೂತಿದ್ದೆ. ಮೊನ್ನೆಯೂ. ಅದರ ಹಿಂದಿನ ದಿನವೂ... ವರ್ಷಗಟ್ಟಲೇ ಹೀಗೆ ಕೂತಿದ್ದೇನೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿವೆ. ಆದರೆ, ಅವನ್ನು ನಾನು ಒಪ್ಪಿಕೊಂಡಿಲ್ಲ. ಕೆಲ ಪ್ರಶ್ನೆಗಳು ಹೊಸದಾಗಿ ಮೂಡಿವೆ. ಅವಕ್ಕೆ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೋತ್ತರಗಳ ಭರಾಟೆಯಲ್ಲಿ ಮೂಡಿರಬಹುದಾದ ಕೊಂಚ ವಿವೇಕವನ್ನು ಅನುಭವ ಎಂದುಕೊಂಡಿದ್ದೇನೆ. ಆದರೆ, ಅದಕ್ಕೂ ನನಗೆ ನಿದ್ದೆಯನ್ನು, ಅಪ್ಪಟ ಹಸಿವನ್ನು, ಕೊಂಚ ನೆಮ್ಮದಿಯನ್ನು ಮೂಡಿಸಲು ಆಗಿಲ್ಲ.
*****
ರಾತ್ರಿ ತನ್ನ ಪಾಡಿಗೆ ತಾನು ಸರಿಯುತ್ತ ಹೋಗುತ್ತದೆ. ಗಡಿಯಾರಕ್ಕೆ ಅವಸರವಿಲ್ಲದ ಒಂದೇ ಗತಿ. ನಾಳೆ ಏಳಲಿಕ್ಕಾದರೂ ಈಗ ಮಲಗಬೇಕು. ನನ್ನ ಕನಸುಗಳು ನನಗಿರಲಿ. ಮಲಗಿಕೊಂಡ ಯಾರ ಕನಸನ್ನೂ ಅವು ಕಾಡದಿರಲಿ. ಸುಖನಿದ್ದೆ ನಂತರದ ಅವರ ಬೆಳಗಿನಲ್ಲೊಂದು ಹೊಂಬೆಳಕು ಮೂಡಲೆಂದು ಅಂದುಕೊಳ್ಳುತ್ತೇನೆ.
ಕಂಪ್ಯೂಟರ್‌ ಆರಿಸಿ, ದೀಪದ ಕತ್ತು ಹಿಸುಕಿ, ಮಂಕು ಬೆಳಕಲ್ಲಿ ಹಾಸಿಗೆಯ ನನ್ನ ಜಾಗ ಹುಡುಕಿಕೊಳ್ಳುತ್ತೇನೆ. ಕಣ್ಣು ಮುಚ್ಚಿಕೊಂಡು ನಿದ್ದೆಗಾಗಿ ಒಂದು ಸದ್ದಿಲ್ಲದ ಪ್ರಾರ್ಥನೆ ಸಲ್ಲಿಸುತ್ತೇನೆ.
ಎಲ್ಲರಿಗೂ ಶುಭರಾತ್ರಿ. 
- ಚಾಮರಾಜ ಸವಡಿ

ಒಂದು ಕನಸು ಹುಡುಕುತ್ತಾ...

21 Sept 2011

4 ಪ್ರತಿಕ್ರಿಯೆ
ಮಗುವೊಂದು ಮಲಗುತ್ತಿತ್ತು.

ಪಕ್ಕದಲ್ಲಿ ಮಲಗಿಕೊಂಡು ಮಗುವಿನ ಮಾತುಗಳನ್ನು ಕೇಳುತ್ತಿದ್ದ ಆತ. ಶಾಲೆಯಲ್ಲಿ ಆಕೆಯ ಮಿಸ್‌ ಹೇಳಿದ್ದು, ಸಹಪಾಠಿಗಳ ಬಟ್ಟೆ, ಊಟದ ಡಬ್ಬ, ತರಹೇವಾರಿ ಚಿತ್ರಗಳಿರುವ ಆಕೆಯ ಶಾಲೆಯ ಕೊಠಡಿ, ಮಿಸ್‌ ಹೇಳಿಕೊಟ್ಟಿದ್ದ ಡ್ರಿಲ್‌ ಎಲ್ಲವನ್ನೂ ಗಿಣಿಪಾಠ ಒಪ್ಪಿಸುತ್ತಿದ್ದ ಮಗು, ನಿನಗೆ ಡ್ರಿಲ್‌ ಬರುತ್ತಾ ಅಪ್ಪ? ಎಂದಳು.

ಈತ ಇಲ್ಲವೆಂದ.

ಆಕೆ ತಕ್ಷಣ ಎದ್ದು ನಿಂತು, ಸಾವಧಾನ್‌, ವಿಶ್ರಾಮ್‌ ತೋರಿಸಿದಳು. ಒಂದೆರಡು ಎಕ್ಸರ್‌ಸೈಜ್‌ಗಳ ಪ್ರದರ್ಶನವೂ ನಡೆಯಿತು. ನೀನು ಮಾಡು ನೋಡೋಣ ಎಂದು ಸವಾಲೆಸೆದಳು. ಇವನಿಗೆ ಆಗಲೇ ಅರ್ಧ ನಿದ್ದೆ. ನಾಳೆ ಬೆಳಿಗ್ಗೆ ನೀನೇ ಹೇಳಿಕೊಡುವೆಯಂತೆ ಎಂದ. ಮಗಳು ಮತ್ತೆ ಮಲಗಿದಳು. ಮತ್ತೆ ಮಾತು.

ಹೊರಗೆ ಸಣ್ಣಗೇ ಶುರುವಾಗಿದ್ದ ಮಳೆ ಜೋರಾಯಿತು. ಅರೆತೆರೆದಿದ್ದ ಕಿಟಕಿಯ ಮೂಲಕ ತಣ್ಣನೆಯ ಗಾಳಿ ಒಳ ನುಗ್ಗಿದಾಗ ಫ್ಯಾನ್‌ ಆಫ್‌ ಮಾಡಿದ್ದಾಯ್ತು. ಅಪ್ಪಾ ನನಗೆ ಚಳಿ ಎಂದಳು ಮಗಳು. ಈತ ಬೆಚ್ಚಗೆ ಹೊದಿಕೆ ಹೊದಿಸಿದ. ಸರಿ, ಈಗ ರಗ್ ಹೊತ್ಕೊಂಡಿದ್ದೀನಿ. ನಾಳೆ ಸ್ಕೂಲಿಗೆ ಹೋಗುವಾಗ ಚಳಿ ಆದರೆ ಏನು ಮಾಡಲಿ? ಎಂದಿತು ಮಗು.

ನಾಳೆ ನಿಂಗೆ ಸ್ವೆಟರ್‌ ಕೊಡಿಸ್ತೀನಿ ಎಂದು ಈತ ಭರವಸೆ ಕೊಟ್ಟ. 

ಈಗ ಮಾತು ಸ್ವೆಟರ್‌ ಕಡೆ ತಿರುಗಿತು. ಎಂಥ ಬಣ್ಣದ ಸ್ವೆಟರ್‌ ತನಗಿಷ್ಟ? ತನ್ನ ಗೆಳತಿಯರು ಎಂತೆಂಥ ಬಣ್ಣದ ಸ್ವೆಟರ್‌ ಇಟ್ಟುಕೊಂಡಿದ್ದಾರೆ ಎಂದೆಲ್ಲ ಮಾತಾಡಿದ ಮಗು, ಸ್ವೆಟರ್‌ ತರೋವಾಗ ನನ್ನನ್ನೂ ಕರ‍್ಕೊಂಡು ಹೋಗ್ತೀಯಾ? ಎಂದಿತು. ಏಕೆ ಎಂದ ಈತ. ನನಗಿಷ್ಟವಾದ ಬಣ್ಣದ ಸ್ವೆಟರ್‌ ನಾನೇ ಆರಿಸಬೇಕಲ್ವಾ? ಎಂದು ಕೇಳಿತು ಮಗು. ಈತ ಹೂಂ ಅಂದ.

ನಂಗೆ ಚಳಿಯಾದ್ರೆ ಸ್ವೆಟರ್‌ ಹಾಕ್ಕೊಂಡು ಮಲ್ಕೋಬಹುದು ಎಂದು ಅದಕ್ಕೆ ರೋಮಾಂಚನ. ನಿಜ್ವಾಗ್ಲೂ ನಂಗೆ ಸ್ವೆಟರ್‌ ಕೊಡಿಸ್ತೀಯಾ ಅಪ್ಪ? ಎಂದು ಮತ್ತೆ ಕೇಳಿ ಖಚಿತಪಡಿಸಿಕೊಂಡಿತು. ಮರುದಿನ ಸ್ವೆಟರ್‌ ಖರೀದಿ ಮಾಡುವ ಬಗ್ಗೆಯೇ ಮಾತಾಡುತ್ತ ಹಾಗೇ ನಿದ್ದೆಗೆ ಜಾರಿತು. 

ಈತನಿಗೆ ನಿದ್ದೆ ಬರಲಿಲ್ಲ. ಹಾಗಂತ ಪೂರ್ತಿ ಎಚ್ಚರದಲ್ಲೂ ಇರಲಿಲ್ಲ. 

ಹೊರಗೆ ಜೋರು ಮಳೆ. ಇತ್ತ ಮಗುವಿಗೆ ಜೋರು ನಿದ್ರೆ. 

ಬೀಸಿದ ತಣ್ಣನೆಯ ಗಾಳಿಗೆ ಮಂಪರು ಹಾರಿಹೋಗಿ ಎಚ್ಚರವಾಯಿತು. ಎದ್ದು ಕಿಟಕಿಯ ಹತ್ತಿರ ಬಂದು ಮಳೆ ನೋಡುತ್ತ ನಿಂತ. ಮುಂಗಾರಿನ ಕೊನೆಯ ಮಳೆ ಇದು ಎಂಬಂತೆ ಆಗಸ ಸೋರುತ್ತಿತ್ತು. 

ಬೀದಿ ದೀಪದ ಮೇಲೆ ನೀರಿನ ಹನಿಗಳು ಬಿದ್ದು  ಸಿಡಿಯುತ್ತಿದ್ದ ದೃಶ್ಯ ಗಮನ ಸೆಳೆಯಿತು. ಡಾಂಬರು ರಸ್ತೆಯುದ್ದಕ್ಕೂ ತರಹೇವಾರಿ ವಿನ್ಯಾಸದ ಹರಿಯುವ ನೀರು. ಅವಸರಕ್ಕೆ ಬಿದ್ದಂತೆ ಸರಿದು ಹೋಗುತ್ತಿದ್ದ ನೀರಿಗೆ ಹಳದಿ ಬೀದಿ ದೀಪದ ಚಿತ್ತಾರ. ನಿಲ್ಲುವುದಿಲ್ಲವೇನೋ ಎಂಬಂತೆ ಒಂದೇ ರೀತಿ ಬೀಳುತ್ತಿದ್ದ ಮಳೆ ಸಂಮೋಹನ ಮಾಡುವಂತಿತ್ತು. ಗುಡುಗಿಲ್ಲ, ಮಿಂಚಿಲ್ಲ, ಸಿಡಿಲುಗಳಿಲ್ಲ. ಕೇವಲ ಶುದ್ಧ ಜೋರು ಮಳೆ. ಸೈನಿಕರಂತೆ ಒಂದೇ ರೀತಿ ಕಾಣುವ ಮಳೆಯ ಹಳದಿ ಎಳೆಗಳು. ಹರಿಯುವ ನೀರಿನ ಮೇಲ್ಮೈಗೆ ಅಪ್ಪಳಿಸಿದಾಗ ಆಗುತ್ತಿದ್ದ ಸೊಗಸಾದ ಕುಳಿಗಳು. ಅವುಗಳ ಒಡಲಿಂದ ಪಕ್ಕಕ್ಕೆ ಛಲ್ಲನೇ ಸಿಡಿಯುವ ಮರಿ ಹನಿಗಳು. ರಸ್ತೆಯುದ್ದಗಲಕ್ಕೂ ಮಳೆ ಹನಿಗಳು ಹರಿಯುವ ನೀರಿನ ಮೇಲೆ ಮೂಡಿಸುತ್ತಿದ್ದ ಸಾವಿರಾರು ನೀರ ಕುಳಿಗಳು. 

ಈತ ಮಂತ್ರಮುಗ್ಧನಂತೆ ಅವನ್ನೇ ನೋಡುತ್ತ ನಿಂತ. 

ರಾತ್ರಿಯ ನೀರವತೆಯ ಜಾಗದಲ್ಲೀಗ ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಶಬ್ದ. ಕಿವಿಗೆ ಹಿತವಾಗಿಸುವ, ಕಣ್ಣಿಗೆ ತಂಪೆನಿಸುವ ಚೇತೋಹಾರಿ ದೃಶ್ಯ. ಎದುರಿಗೆ ಕಾಣುತ್ತಿದ್ದ ಮನೆಗಳ ಕಿಟಕಿಗಳಿಂದ ಬೆಳಕು ಬರುತ್ತಿಲ್ಲ. ಎಲ್ಲಾ ಮಲಗಿರಬೇಕು. ಅಥವಾ ಮಲಗಿದ್ದುಕೊಂಡೇ ಮಳೆಯ ಗಾನ ಕೇಳುತ್ತಿರಬೇಕು. ಅಥವಾ ಮಳೆ ಗಾನ ಕೇಳುತ್ತ ಮಲಗುತ್ತಿರಬೇಕು.

ನಾನೂ ಮಲಗಬೇಕು ಎಂದುಕೊಂಡ. ಮಳೆ ನಿಲ್ಲುವ ಮುನ್ನವೇ, ಅದರ ವಿಶಿಷ್ಟ ಗಾನ ಕೇಳುತ್ತ ನಿದ್ದೆಗೆ ಜಾರಬೇಕು. ಸ್ವೆಟರ್‌ ಕನಸು ಕಾಣುತ್ತ ಮಲಗಿದ ಮಗಳಂತೆ, ನಾನೂ ಚೆಂದನೆಯ ಕನಸು ಕಾಣುತ್ತ ಮಲಗಬೇಕೆಂದುಕೊಳ್ಳುತ್ತ ವಾಪಸ್ ಬಂದ. 


ತಕ್ಷಣ ನಿದ್ರೆ ಬರಲಿಲ್ಲ. ಮಳೆಯ ಸದ್ದು ಹಾಗೇ ಇತ್ತು. ಮುಚ್ಚಿದ ಕಣ್ರೆಪ್ಪೆಯ ಒಳಗೆಲ್ಲ ಮಳೆಯ ಹನಿಗಳು ಉಂಟು ಮಾಡುತ್ತಿದ್ದ ಸಾವಿರ ಸಾವಿರ ನೀರಕುಳಿಗಳು. ಏನು ಕನಸು ಕಾಣಲಿ ಎಂದು ಯೋಚಿಸಿದ. 

ಆಕೆ ನೆನಪಾದಳು. ಆಕೆಯ ಸ್ನಿಗ್ಧ ಮುಖ ಕಣ್ಮುಂದೆ ಬಂದಿತು. ಮಿನುಗುವ ನಕ್ಷತ್ರದಂಥವಳು ಎಂದು ಮತ್ತೆ ಮತ್ತೆ ಅಂದುಕೊಂಡ. ಆಕೆಯ ಮುಂದೆ ಹಾಗೆ ಕರೆದರೆ ‘ಹುಚ್ಚ’ ಎಂಬಂತೆ ನೋಡಿಯಾಳು ಎಂಬುದು ಅರಿವಾಗಿ, ಮುಚ್ಚಿದ ಕಣ್ಣೊಳಗೇ ಸುಮ್ಮನಾದ. ಆಕೆಯೂ ಮಳೆ ನೋಡುತ್ತಿರಬಹುದೇ ಎಂಬ ಪ್ರಶ್ನೆ ಹುಟ್ಟಿತು. ಮಳೆಯ ಕುಳಿಗಳನ್ನು, ಹಳದಿ ಎಳೆಗಳನ್ನು, ಒಂದೇ ರೀತಿ ಬೀಳುತ್ತಿರುವ ಹಿತಕರ ಶಬ್ದವನ್ನು ಅನುಭವಿಸುತ್ತಿರಬಹುದೇ? 

ಇದ್ದಕ್ಕಿದ್ದಂತೆ ಮಗಳು ಕನವರಿಸಿದಳು. ಅಸ್ಪಷ್ಟ ಶಬ್ದಗಳು. ಬಹುಶಃ ಸ್ವೆಟರ್‌ ಕನಸು ಕಾಣುತ್ತಿರಬಹುದು ಅಂತ ಅಂದುಕೊಂಡ. ಪಕ್ಕಕ್ಕೆ ತಿರುಗಿ, ತಲೆ ನೇವರಿಸಿ, ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ. ಆತುಕೊಂಡು ಮಲಗಿದ ಮಗು ಕನವರಿಕೆ ನಿಲ್ಲಿಸಿ ಮತ್ತೆ ಆಳ ನಿದ್ದೆಗೆ ಜಾರಿತು.

ಇವನಿಗೂ ಮಂಪರು. ಕನಸು ಕಾಣಬೇಕೆಂಬುದೂ ಮರೆತು ಹೋಗಿ ನಿಧಾನವಾಗಿ ನಿದ್ದೆಗೆ ಜಾರತೊಡಗಿದ. ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಸದ್ದು, ಸಣ್ಣಗೇ ನುಗ್ಗುತ್ತಿದ್ದ ತಂಗಾಳಿ, ದಿನದ ಆಯಾಸ ಎಲ್ಲ ಸೇರಿ ನಿದ್ದೆ ಕವಿಯತೊಡಗಿತು. 

*****

ಬಹುಶಃ ದೆಹಲಿಯಿಂದ ಹಿಂತಿರುವಾಗ ಇರಬೇಕು. 

ಆಗಲೂ ಇಂಥದೇ ಒಂದು ರಾತ್ರಿ. ಮಳೆ ಬೀಳುತ್ತಿದ್ದಿಲ್ಲ ಎಂಬುದನ್ನು ಬಿಟ್ಟರೆ, ಮಳೆಯ ಸದ್ದಿನ ಜಾಗದಲ್ಲಿ ರೈಲು ಚಲಿಸುವ ವಿಶಿಷ್ಟ ಶಬ್ದ. ಏಕೋ ನಿದ್ದೆ ಬರಲಿಲ್ಲ ಎಂದು ರಾತ್ರಿ ಯಾವುದೋ ಜಾವ ಬರ್ಥ್‌‌ನಿಂದ ಕೆಳಗಿಳಿದಿದ್ದ. ಡಬ್ಬಿಯೊಳಗೆ ಎಲ್ಲೆಡೆ ಹರಡಿಕೊಂಡಿದ್ದ ಮಂಕು ನೀಲಿ ಬೆಳಕಲ್ಲಿ, ಮಲಗಿದ್ದ ಜನರೆಲ್ಲ ಶವಗಳಂತೆ, ಇಡೀ ರೈಲು ಚಲಿಸುವ ಶವಾಗಾರದಂತೆ ಭಾಸವಾಗಿ ಇದ್ದಕ್ಕಿದ್ದಂತೆ ಗಾಬರಿಯಾಗಿದ್ದ. ಹೇಗ್ಹೇಗೋ ಮಲಗಿದ್ದ ಜನರು ಥೇಟ್‌ ಶವಗಳಂತೆ ಕಾಣುತ್ತಿದ್ದರು. ಕೆಲವರ ಕಾಲುಗಳು ಸೀಟ್‌ನಿಂದ ಹೊರಗೆ ಬಂದಿದ್ದು, ಚಲಿಸುವ ರೈಲಿನ ಲಯಕ್ಕನುಗುಣವಾಗಿ ಅಲುಗುತ್ತಿದ್ದವು. 

ಇಳಿದವ ಹಾಗೇ ಕಕ್ಕಾವಿಕ್ಕಿಯಾಗಿ ನಿಂತುಬಿಟ್ಟಿದ್ದ. ಕಾಣುತ್ತಿರುವುದು ಕನಸೋ ಅಥವಾ ವಾಸ್ತವವೋ ಅರಿಯದೇ ದಿಗ್ಭ್ರಮೆಗೊಂಡಿದ್ದ. ಮಂಪರು ತಿಳಿಯಾದಂತೆ ತಾನಿರುವುದು ರೈಲಿನಲ್ಲಿ ಎಂಬುದು ಅರಿವಾಗಿತ್ತು. ಸಧ್ಯ... ಎಂದುಕೊಳ್ಳುತ್ತ ಟಾಯ್ಲೆಟ್‌ಗೆ ಹೋಗಿ ವಾಪಸ್‌ ಬಂದು ಮತ್ತೆ ಬರ್ಥ್‌ ಏರಿದ. 

ನಿದ್ದೆ ಬರಲಿಲ್ಲ. 

ಚಲಿಸುವ ಶವಾಗಾರ ಎಂಬ ಕಲ್ಪನೆ ಕೂತುಬಿಟ್ಟಿತ್ತು. ಬಹುಶಃ ಇಡೀ ಡಬ್ಬಿಯಲ್ಲಿ ನಾನೊಬ್ಬನೇ ಎಚ್ಚರಿರಬಹುದು. ಈ ರೈಲು ಈಗ ಎತ್ತ ಹೋಗುತ್ತಿದೆಯೋ. ಒಂದು ವೇಳೆ ರೈಲು ಎಲ್ಲಿಯೋ ಒಂದೆಡೆ ನಿಂತು, ಮಲಗಿದ ಈ ಜನರೆಲ್ಲ ಶವವಾಗಿದ್ದರೆ, ಆಗ ಯಾರೂ ಇಳಿಯುವುದೇ ಇಲ್ಲವಲ್ಲ ಎಂದು ಕಲ್ಪಿಸಿಕೊಂಡ. ಖುಷ್ವಂತ್‌ ಸಿಂಗ್‌ ಬರೆದ ಟ್ರೇನ್‌ ಟು ಪಾಕಿಸ್ತಾನ ಕಾದಂಬರಿ ನೆನಪಾಯ್ತು. ಅದರಲ್ಲಿಯೂ ಹೀಗೇ ಆಗುತ್ತದೆ. ಇದ್ದದ್ದನ್ನೆಲ್ಲ ಹಿಂದೆ ಬಿಟ್ಟು ಹೊಸ ದೇಶಕ್ಕೆ ಗುಳೆ ಹೊರಟವರಿದ್ದ ರೈಲನ್ನು ಮಧ್ಯೆಯೇ ತಡೆದ ದುಷ್ಕರ್ಮಿಗಳು ಎಲ್ಲರನ್ನೂ ಸಾಯಿಸಿ ಶವಗಳಿದ್ದ ರೈಲನ್ನಷ್ಟೇ ಮುಂದೆ ಹೋಗಲು ಬಿಡುತ್ತಾರೆ. ನಿಲ್ದಾಣ ಬಂದರೂ ಯಾರೂ ಇಳಿಯುವುದಿಲ್ಲ.

ಏಕೋ ಈ ಕಲ್ಪನೆ ಕೆಟ್ಟದ್ದಾಯ್ತು ಎಂದು ಅನ್ನಿಸಿತು. 

ನಿದ್ದೆ ಬರುವುದಿಲ್ಲ ಎಂಬುದು ಖಾತರಿಯಾದಾಗ, ಸುಮ್ಮನೇ ಕಣ್ತೆರೆದುಕೊಂಡೇ ಮಲಗಿದ. ಯಾವ್ಯಾವ ಊರಿನ ಜನರೋ, ಎಲ್ಲೆಲ್ಲಿ ಹೊರಟಿದ್ದಾರೋ, ಏನೇನು ಕನಸು ಕಾಣುತ್ತಿದ್ದಾರೋ. ಇಂಥ ಸಾವಿರಾರು ಜನರನ್ನು ಪ್ರತಿ ದಿನ ಹೊತ್ತೊಯ್ಯುವ ರೈಲು ನಿಜಕ್ಕೂ ವಿಚಿತ್ರ ಅನಿಸಿತು. ನಿಲ್ದಾಣ ಬಂದಂತೆ, ಕೆಲವರು ಇಳಿಯುತ್ತಾರೆ; ಕೆಲವರು ಹತ್ತುತ್ತಾರೆ. ರೈಲು ಹೋಗುತ್ತಲೇ ಇರುತ್ತದೆ. ಇದೆಂದಿಗೂ ನಿಲ್ಲದ ಕ್ರಿಯೆ. ನಾನೂ ಒಂದು ಸ್ಟೇಶನ್‌ನಲ್ಲಿ ಇಳಿಯುತ್ತೇನೆ. ಅಲ್ಲಿಂದ ಮನೆಯತ್ತ ಹೊರಡುತ್ತೇನೆ. ಬಹುಶಃ ಎಲ್ಲರೂ ಹೀಗೇ ಮಾಡುತ್ತಾರೆ. ಎಲ್ಲರೂ ಮನೆ ಸೇರುವ ಕನಸಿನಲ್ಲೇ ನಿದ್ದೆ ಹೋಗಿದ್ದಾರೇನೋ ಅಂತ ಅಂದುಕೊಂಡ. 

ರೈಲು ಹಳಿ ಬದಲಿಸಿದ ಶಬ್ದವಾಯಿತು. 

ಯಾವುದೋ ಸ್ಟೇಶನ್‌ ಬರುತ್ತಿದೆ ಎಂದು ಮಲಗಿದ್ದವ ಎದ್ದು ಕೂತ. ಚಹ ಮಾರುವವನು ಬಂದರೆ ಒಂದು ಕಪ್‌ ತೆಗೆದುಕೊಳ್ಳಬೇಕು. ಹೇಗಿದ್ದರೂ ನಿದ್ದೆ ಬರುವುದಿಲ್ಲ. ಚಹ ಕುಡಿದು ಇನ್ನಷ್ಟು ಫ್ರೆಶ್‌ ಆಗಿ ಯೋಚಿಸಬಹುದು ಎಂದು ಉತ್ಸಾಹಗೊಂಡ. 

ರೈಲೇನೋ ನಿಂತಿತು. ಆದರೆ, ಅಪರಾತ್ರಿಯಲ್ಲಿ ಚಹ ಮಾರುವ ಒಬ್ಬನೂ ಕಾಣಲಿಲ್ಲ. ಅವನಂತೆ ನಿದ್ದೆಗೇಡಿಗಳಾಗಿದ್ದ ಅಲ್ಲೊಬ್ಬರು ಇಲ್ಲೊಬ್ಬರು ಇಳಿದು ದಿಕ್ಕೆಟ್ಟವರಂತೆ ಡಬ್ಬಿಯ ಹತ್ತಿರವೇ ನಿಂತಿದ್ದರು. ಯಾವುದೋ ಒಂದು ಸ್ಟೇಶನ್‌ ಅದು. ನೋಡಲು ದೊಡ್ಡದಾಗೇ ಇದ್ದರೂ ಜನ ಕಾಣಲಿಲ್ಲ. 

ಸಿಳ್ಳೆ ಹೊಡೆದು ಸೂಚನೆ ಕೂಡ ನೀಡದೇ ರೈಲು ನಿಧಾನವಾಗಿ ಚಲಿಸತೊಡಗಿದ್ದನ್ನು ಕಂಡು ಲಗುಬಗೆಯಿಂದ ಏರಿ ನಿಂತ. ಸ್ಟೇಶನ್‌ ದಾಟುವವರೆಗೂ ಬಾಗಿಲ ಹತ್ತಿರ ನಿಂತವ, ಮತ್ತೆ ಬೋಲ್ಟ್‌ ಬಿಗಿದು ತನ್ನ ಬರ್ಥ್‌ ಏರಿ ಮಲಗಿದ. ಮತ್ತೆ ರೈಲಿನ ಗಾನ ಶುರುವಾಯ್ತು. ಅದುವರೆಗೆ ಸ್ತಬ್ದವಾಗಿದ್ದ ಹೊರಚಾಚಿದ ಕಾಲುಗಳು ಮತ್ತೆ ಲಯಬದ್ಧವಾಗಿ ಅಲುಗತೊಡಗಿದವು.

*****

ಧಕ್ಕನೇ ಎಚ್ಚರವಾಯಿತು.

ಎಲ್ಲಿದ್ದೇನೆ ಎಂಬುದು ತಿಳಿಯಾಗಲು ಕೊಂಚ ಸಮಯವೇ ಬೇಕಾಯಿತು. ಮೈ ಬೆವೆತುಹೋಗಿತ್ತು. ಹೊರಗೆ ಮಳೆ ನಿಂತಿದ್ದರಿಂದ, ಕೋಣೆಯೊಳಗೆ ಒಂಥರಾ ಧಗೆ. ಹೊದ್ದುಕೊಂಡಿದ್ದ ರಗ್‌ ಒದ್ದಿದ್ದ ಮಗಳು, ಒಂದು ಕೈಯಿಂದ ಕತ್ತು ಬಳಸಿಕೊಂಡು ಮಲಗಿದ್ದಳು. 

ಓಹ್‌... ಎಂದುಕೊಂಡ. ತಿಳಿಯಾಗುತ್ತಿದ್ದ ಮನಸು ಆಗ ತಾನೆ ಕಂಡಿದ್ದ ಕನಸಿನ ವಿವರಗಳನ್ನು ಹೆಕ್ಕುತ್ತಿತ್ತು. ನಾನೀಗ ಮನೆಯಲ್ಲಿದ್ದೇನೆ. ಶವದ ರೈಲು ಕೇವಲ ಕನಸು ಎಂಬುದು ಮನವರಿಕೆಯಾದಾಗ ನೆಮ್ಮದಿ ಮೂಡಿತು. ಎದ್ದು ಫ್ಯಾನ್ ಹಾಕಿದ. ತಂಗಾಳಿ ಕೋಣೆ ಸುತ್ತತೊಡಗಿದಾಗ ನಿದ್ದೆ ಪೂರ್ತಿ ಹರಿದುಹೋಗಿ ಸುಮ್ಮನೇ ಕೂತ.

ಬದುಕು ಎಷ್ಟು ವಿಚಿತ್ರ. ನಿತ್ಯ ಒಂದಿಷ್ಟು ಕನಸುಗಳು ಬೀಳುತ್ತವೆ. ಕೆಲವೊಂದು ನನಸಾಗದೇ ಕಾಡುತ್ತವೆ. ಕೆಲವೊಂದು ಕನಸಾಗಿದ್ದರೂ ಕಾಡುತ್ತವೆ. 

ಮಗಳು ಮತ್ತೆ ಕನವರಿಸಿದಳು. ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಟ್ಟ ಆತ, ಮಗಳ ಕನಸು ಏನಿರಬಹುದು ಎಂದು ಯೋಚಿಸಿದ. 

ಸ್ವೆಟರ್‌ ನೆನಪಾಯ್ತು. 

‘ಆಯ್ತು ಪುಟ್ಟಾ, ನಾಳೆ ನಿನಗೆ ಖಂಡಿತ ಸ್ವೆಟರ್‌ ಕೊಡಿಸ್ತೀನಿ’ ಎಂದು ಗಟ್ಟಿಯಾಗಿ ಹೇಳಿದ. ಆತನ ಮಾತು ಕೇಳಿತೇನೋ ಎಂಬಂತೆ, ಮಲಗಿದ್ದ ಮಗು, ನಿದ್ದೆಯಲ್ಲೇ ಆತನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.

ಮನಸ್ಸು ತಿಳಿಯಾದಂತಾಗಿ ಮೆಲ್ಲಗೇ ಆತ ಒರಗಿಕೊಂಡ. ಏನೊಂದು ಪ್ರಯತ್ನವೂ ಇಲ್ಲದೇ ಕೆಲ ಹೊತ್ತಿನಲ್ಲೇ ಗಾಢ ನಿದ್ದೆ ಆವರಿಸಿತು. 

ಕನಸುಗಳೇ ಇಲ್ಲದ ಮಾಯಾ ನಿದ್ದೆ!

- ಚಾಮರಾಜ ಸವಡಿ