ವೃತ್ತದೊಳಗಿನ ಬದುಕು ಮತ್ತು ಲೊಳಲೊಟ್ಟೆ

24 Jul 2010

ತುಂಬ ದಿನಗಳಿಂದ ಏನನ್ನೂ ಬರೆದಿಲ್ಲ. ಪ್ರೋಗ್ರಾಂಗಳಿಗೆ ಸ್ಕ್ರಿಪ್ಟ್‌ಗಳನ್ನು ಬರೆಯುವ ವೃತ್ತಿ ಕೆಲಸ ಹೊರತುಪಡಿಸಿ, ಗೂಗಲ್‌ ಬಝ್‌ನಲ್ಲಿ ಒಂದಿಷ್ಟು ಹರಟೆ ಹೊಡೆದಿದ್ದು ಬಿಟ್ಟರೆ ಮತ್ತೇನನ್ನೂ ಬರೆದಿರಲಿಲ್ಲ. ಬರೆಯುವ ಮನಸ್ಸಿದ್ದರೂ, ಒತ್ತಡ ಸಾಕಷ್ಟಿರಲಿಲ್ಲ.

ಆದರೂ ಒಂಥರಾ ಅಸಮಾಧಾನ ಮಾತ್ರ ಕಾಡುತ್ತಿತ್ತು. ಹಾಗೆ ನೋಡಿದರೆ, ಬರೆಯುವುದು ಸಾಕಷ್ಟಿದೆ. ಅದೊಂಥರಾ ಒರತೆಯಂತೆ. ಮೊಗೆದಷ್ಟೂ ಉಕ್ಕುತ್ತದೆ. ಮೊಗೆಯುವುದನ್ನು ಬಿಟ್ಟರೆ, ಒರತೆಯಲ್ಲಿ ಎಷ್ಟಿರಬೇಕೋ, ಅಷ್ಟು ಮಾತ್ರ ನಿಲ್ಲುತ್ತದೆ.

ಹೀಗಾಗಿ, ಅಸಮಾಧಾನ ಹಾಗೇ ಉಳಿದಿತ್ತು. ಒಂದೆರಡು ಬಾರಿ ಕವಿತೆ ಬರೆಯಲು ಯತ್ನಿಸಿದೆನಾದರೂ, ಅದು ಮುಂದುವರೆಯಲಿಲ್ಲ. ಕಚೇರಿಯಲ್ಲಿ ಕೂತಾಗ ಉಕ್ಕುವ ಭಾವನೆಗಳನ್ನು ಅಕ್ಷರಗಳನ್ನಾಗಿಸಲು ಯತ್ನಿಸಿದರೂ ಅದಕ್ಕೆ ಏನೇನೋ ಸಣ್ಣಪುಟ್ಟ ಅಡ್ಡಿಗಳು.

ಒಂದು ವಿಷಯ ತುಂಬ ದಿನದಿಂದ ಕಾಡುತ್ತಿದೆ.

ಪ್ರತಿಯೊಬ್ಬರೂ ತಮ್ಮದೇ ಆದ ಒಂದು ವೃತ್ತವನ್ನು, ಬಳಗವನ್ನು, ತಂಡವನ್ನು ಕಟ್ಟಿಕೊಳ್ಳುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಅದು ಮನುಷ್ಯಸಹಜ ಗುಣವಾದರೂ, ಅದರ ಮಿತಿ ಅರಿಯದೇ ನಾವು ವೃತ್ತವೊಂದಕ್ಕೆ ಕಟ್ಟುಬೀಳುವುದೇ ಅಚ್ಚರಿಯ ಸಂಗತಿ. ಒಂದೇ ರೀತಿಯ ವಿಚಾರ ಹೊಂದಿರುವವರು, ವೃತ್ತಿಯಲ್ಲಿರುವವರು, ಪ್ರದೇಶದಲ್ಲಿರುವವರು, ಜಾತಿಯವರು, ಭಾಷೆಯವರು- ಹೀಗೆ ನಾನಾ ಕಾರಣಗಳಿಗಾಗಿ ಜನ ಗುಂಪು ಕಟ್ಟಿಕೊಳ್ಳುತ್ತಾರೆ. ಅಲಿಖಿತ ನಿಯಮಗಳನ್ನು ಹಾಕಿಕೊಂಡು, ಅದರ ಮಿತಿಯೊಳಗೆ ಬದುಕುತ್ತ ಹೋಗುತ್ತಾರೆ. 
 
ಆ ವೃತ್ತದೊಳಗೆ ಪ್ರವೇಶಿಸುವುದು ಸುಲಭವಲ್ಲ. ‘ಹೊರಗಿನವರು’ ಎಂದು ಭಾವಿಸಿದ ಯಾರನ್ನೂ ಅವರು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಅಂಥವರನ್ನು ಅನುಮಾನದಿಂದ ನೋಡುತ್ತಾರೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಮ್ಮ ವೃತ್ತದೊಳಗೆ ಪ್ರವೇಶಿಸಲು ಮುಂದಾದವನನ್ನು ಶತ್ರುವಿನಂತೆ ಕಾಣುತ್ತಾರೆ. ಪ್ರಾಣಿ-ಪಕ್ಷಿಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದ್ದರೂ, ಸೂಕ್ಷ್ಮವಾಗಿ ನೋಡಿದರೆ, ನಮ್ಮ ಸುತ್ತಮುತ್ತಲೇ ಅಂಥ ಹಲವಾರು ವೃತ್ತಗಳು ಕಾಣಿಸುತ್ತವೆ.

ನೀವು ಎಷ್ಟೇ ಆತ್ಮೀಯರಾಗಿರಿ, ಎಷ್ಟೇ ಬುದ್ಧಿವಂತರಾಗಿರಿ, ಅವರು ಯಾವ ಕಾರಣಕ್ಕೂ ನಿಮ್ಮನ್ನು ‘ತಮ್ಮವ’ ಎಂದು ಕಾಣುವುದಿಲ್ಲ. ನಿಮ್ಮ ಜೊತೆಗೇ ಇದ್ದರೂ, ನೀರಿನಲ್ಲಿನ ಎಣ್ಣೆಯಂತೆ ಬೇರೆಯಾಗೇ ಇರುತ್ತಾರೆ. ಎಂದೆಂದೂ ನಿಮ್ಮೊಂದಿಗೆ ಆತ್ಮೀಯರಾಗುವುದಿಲ್ಲ. ವರ್ಷಗಟ್ಟಲೇ ಜೊತೆಗಿದ್ದರೂ ನಿಮ್ಮನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿಲ್ಲ. ನೀವು ಪ್ರಯತ್ನಪಟ್ಟಷ್ಟೂ ನಿಮ್ಮನ್ನು ದೂರವಾಗೇ ಇಡುತ್ತ ಹೋಗುತ್ತಾರೆ.

ಮೊದಮೊದಲು ನನಗಿದು ಬೇಸರ, ಅಸಮಾಧಾನ, ನೋವು ಉಂಟು ಮಾಡುತ್ತಿತ್ತು. ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದರೂ, ಕೆಲವರು ಇನ್ಯಾವುದೋ ಕಾರಣಗಳಿಗಾಗಿ ಹೊರಗಿಡುತ್ತಾರೆ. ಒಂದೇ ಜಾತಿಯವರಾಗಿದ್ದರೂ, ಇಂಥವೇ ಮತ್ಯಾವುದೋ ಕಾರಣಗಳಿಗಾಗಿ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಅವರ ವೃತ್ತದ ಅಲಿಖಿತ ಸಂವಿಧಾನ ನನ್ನಂಥವರಿಗೆ ಯಾವತ್ತೂ ಅರ್ಥವಾಗುವುದಿಲ್ಲ ಅನಿಸುತ್ತದೆ. ಏಕೆಂದರೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅದು ಕಗ್ಗಂಟಾಗುತ್ತಲೇ ಹೋಗಿದೆ.

ಪ್ರತಿಯೊಂದು ಪತ್ರಿಕೆ, ಟಿವಿಗಳಲ್ಲೂ ಕೆಲ ವ್ಯಕ್ತಿಗಳಿರುತ್ತಾರೆ. ಅವರು ಪ್ರತಿಭಾಶೂನ್ಯರು. ತೀರಾ ತೆಳು ವಿಷಯಗಳ ಬಗ್ಗೆ ಮಾತ್ರ ಅವರ ಗಮನ. ಯಾರೂ ಅವರ ಬರಹ, ಪ್ರಸ್ತುತಿಯನ್ನು ಗಮನಿಸದೇ ಇದ್ದರೂ, ವೃತ್ತದೊಳಗಿನವರಿಗೆ ಮಾತ್ರ ಅವರು ಅದ್ಭುತ ವರದಿಗಾರಿಕೆ ಮಾಡಿದ್ದಾರೆ ಎನ್ನುವ ಹೆಮ್ಮೆ. ‘ಏನ್‌ ಚೆನ್ನಾಗಿ ಬರೆದಿದ್ದೀ ಕಣೆ, ಸೂಪರ್ ಆಗಿ ಬಂದಿದೆ’ ಎಂದು ಬೆನ್ನು ತಟ್ಟುತ್ತಿರುತ್ತಾರೆ ಅಥವಾ ತಟ್ಟಿಸಿಕೊಳ್ಳುತ್ತಿರುತ್ತಾರೆ. ಕಸದಂಥ ವರದಿ ತಂದವನನ್ನು ಅರುಣ್ ಶೌರಿಯಂತೆ ನೋಡುವವರಿದ್ದಾರೆ. ಆಭರಣ, ಸೀರೆ, ಫ್ಯಾಶನ್, ಮೇಕಪ್, ಋತುಚಕ್ರ ಸಮಸ್ಯೆಗಳ ಬಗ್ಗೆ ಏರಳಿತಗಳಿಲ್ಲದ, ಯಾವುದೇ ಹೊಸದೃಷ್ಟಿ ನೀಡದ ವರದಿ ಮಾಡಿದರೂ ಅಭಿನಂದನೆ ಅವರಿಗೆ ಕಾಯಂ. ಅದ್ಭುತ ವರದಿ ತಂದ, ರಿಸ್ಕ್ ಎದುರಿಸಿ ಗಮನ ಸೆಳೆಯುವ ವರದಿ ಮಾಡಿದವರು ಆಕಸ್ಮಿಕವಾಗಿ ಕೂಡ ಅವರ ಚರ್ಚೆಯ ವಿಷಯವಾಗುವುದಿಲ್ಲ. ತಮಗಿಂತ ಭಿನ್ನವಾಗಿ, ಉತ್ತಮವಾಗಿ ಇನ್ಯಾರೋ ಕೆಲಸ ಮಾಡಿದ್ದಾರೆ ಎಂಬುದನ್ನು ಅವರು ಯಾವತ್ತೂ ಗಮನಿಸುವುದಿಲ್ಲ.

ಬಹುಶಃ ಪ್ರತಿಯೊಂದು ವೃತ್ತಿಯಲ್ಲಿಯೂ ಇಂಥ ವೃತ್ತಗಳು, ‘ವೃತ್ತಪರರು’ ಇರುತ್ತಾರೆ ಅನಿಸುತ್ತದೆ. ಅಂಥ ಬಳಗದ ಒಬ್ಬರ ಕೆಲಸ ಇನ್ನೊಬ್ಬರಿಗೆ ಅತಿ ಮೆಚ್ಚಿನ ವಿಷಯ.  ವೃತ್ತದ ಹೊರಗಿನವರ ಸಾಧನೆ ಅದ್ಭುತವಾಗಿದ್ದರೂ, ಅದು ಅವರಿಗೆ ಕಾಲಕಸ!

ಇಂಥ ವಾತಾವರಣದಲ್ಲಿ ಕ್ರಿಯಾಶೀಲತೆ ಉಳಿಸಿಕೊಳ್ಳುವುದು ಹೇಗಪ್ಪಾ ಎಂದು ಮೊದಮೊದಲು ಚಿಂತೆ ಮಾಡುತ್ತಿದ್ದೆ. ಇವತ್ತು ಬ್ಲಾಗ್‌ಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ಪತ್ರಕರ್ತರ ಈ ಪರಿಯ ‘ಕ್ರಿಯಾಶೀಲತೆ’ಯನ್ನು ಉಗಿಯುತ್ತಿರುವಾಗ, ನನಗೆ ಹಳೆಯ ಅಳುಕು ಮತ್ತೆ ಮತ್ತೆ ನೆನಪಾಗುತ್ತಿದೆ. ಯಾರೇ ಗುರುತಿಸಲಿ, ಬಿಡಲಿ, ನನಗೆ ಸರಿ ಅನಿಸಿದ್ದನ್ನು ಮಾಡುತ್ತ ಹೋಗುವುದೇ ಉತ್ತಮ ಮಾರ್ಗ ಎಂಬುದನ್ನು ಅನುಭವ ನನಗೆ ಕಲಿಸಿದೆ. ಚೆನ್ನಾಗಿ ಬರೆಯುವುದು, ವರದಿ ಮಾಡುವುದು ವೈಯಕ್ತಿಕ ಆನಂದದ ಕೆಲಸ. ಅದಕ್ಕೂ, ಮನ್ನಣೆಗೂ ಸಂಬಂಧ ಕಲ್ಪಿಸಬಾರದು ಎಂದು ವೃತ್ತಿಯ ಮೊದಲ ದಿನಗಳಲ್ಲಿ ನಾನು ತೆಗೆದುಕೊಂಡ ನಿರ್ಧಾರ ಇವತ್ತಿಗೂ ನನ್ನನ್ನು ಪೊರೆಯುತ್ತಿದೆ.

ಆದರೂ, ಹಳೆಯ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಒಂದು ಸೀಮಿತ ವಲಯಕ್ಕೆ, ವೃತ್ತಕ್ಕೆ ಸೀಮಿತವಾಗುವ ಜನರನ್ನು ಕಂಡಾಗೆಲ್ಲ ‘ಏಕೆ ಹೀಗೆ?’ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಮಾಧ್ಯಮಗಳಲ್ಲಿ ಚಿಲ್ಲರೆ ಸಂಗತಿಗಳಿಗೆ ಈಗ ದೊರೆಯುತ್ತಿರುವ ಪ್ರಾಶಸ್ತ್ಯ, ವಾಸ್ತವ ಗ್ರಹಿಸದೇ ತಮಗೆ ಸರಿ ಅನಿಸಿದಂತೆ ವರದಿ ಮಾಡುವುದನ್ನು ಕಂಡಾಗ, ರೇಗುವಂತಾಗುತ್ತದೆ. ಟಿವಿಗಳ ಬಹುತೇಕ ಕಾರ್ಯಕ್ರಮಗಳಲ್ಲಿ ಹಾಗೂ ವರದಿಯಲ್ಲಿ ಸಿನಿಮಾ ಹಾಡುಗಳನ್ನು, ಶೀರ್ಷಿಕೆಗಳನ್ನು, ಹಾಡುಗಳ ಸಾಲುಗಳನ್ನು ಭಾರಿ ಹೆಡ್ಡಿಂಗ್‌ಗಳಂತೆ ಬಳಸುವುದನ್ನು ಕಂಡಾಗ ನನಗೆ ಮತ್ತೆ ಮತ್ತೆ ‘ವೃತ್ತಪರರು’ ನೆನಪಾಗುತ್ತಾರೆ. ಇದರ ಜೊತೆಗೆ ಬೌದ್ಧಿಕ ದಿವಾಳಿತನ ಸೇರಿಕೊಂಡಾಗ ಮಾತ್ರ ಇಂಥ ಕಳಪೆ ಉತ್ಪನ್ನ ಬರಲು ಸಾಧ್ಯ.

ಹೀಗಾಗಿ, ಚಿಗುರೊಡೆಯದವರೂ ಪ್ರತಿಭಾವಂತರೆನಿಸಿಕೊಳ್ಳುತ್ತಿದ್ದಾರೆ. ಬಂಡವಾಳವೇ ಇಲ್ಲದವರು ಬುದ್ಧಿವಂತರೆನಿಸಿಕೊಂಡಿದ್ದಾರೆ. ಯಾವ ವ್ಯಕ್ತಿ ವೃತ್ತಿಯಲ್ಲಿ ತನಗಿಂತ ಕಿರಿಯರಾದವರಿಗೆ ಏನನ್ನೂ ಕಲಿಸಲಾರನೋ, ಅಂಥ ವ್ಯಕ್ತಿ ವೃತ್ತಿಯನ್ನು ಹಾಳುಮಾಡುತ್ತ ಹೋಗುತ್ತಾನೆ. ತನ್ನ ವೃತ್ತದೊಳಗೇ ಬದುಕುತ್ತ, ಅದರೊಳಗೆ ಯಾವ ಕ್ರಿಯಾಶೀಲತೆಯೂ ಪ್ರವೇಶಿಸದಂತೆ ತಡೆಯುತ್ತ ಬಾವಿಯೊಳಗಿನ ಕಪ್ಪೆಯಂತಾಗುತ್ತಾನೆ. ಒಂದ್ಹತ್ತು ವರ್ಷ ಹೀಗೆ ಮಾಡಿದ ನಂತರ, ಅವನಿಗೆ ಸೀನಿಯರ್ ಪಟ್ಟ ಸಿಗುತ್ತದೆ. ಅಲ್ಲಿಗೆ ಮುಗಿಯಿತು. ಅವನನ್ನು ತಡೆಯುವುದು ಸಾಧ್ಯವಿಲ್ಲ.

‘ಉದಯ ವಾರ್ತೆಗಳು’ ಚಾನೆಲ್ ಹಾಳಾಗಿದ್ದು ಹೀಗೆ. ಕನ್ನಡದ ಬಹುತೇಕ ಪ್ರಮುಖ ದಿನಪತ್ರಿಕೆಗಳು ಮೆನೋಪಾಸ್ ತಲುಪಿದ್ದು ಈ ಕಾರಣಕ್ಕಾಗಿ. ಒಂದು ಅರ್ಥಪೂರ್ಣ ವರದಿಗಾರಿಕೆ, ಬರಹ, ಪ್ರಸ್ತುತಿ ಅಪರೂಪವಾಗುತ್ತ ಹೋಗುತ್ತಿರುವುದು ಈ ಕಾರಣಗಳಿಂದಾಗಿ.

ಹಾಗಂತ ನಾನು ಅಂದುಕೊಂಡಿದ್ದೇನೆ. ಪದೆ ಪದೆ ಈ ಅನಿಸಿಕೆ ದೃಢವಾಗುತ್ತ ಹೋಗಿದೆ. ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ಸಂಸ್ಥೆ ಈ ವಿಷಯವನ್ನು ಮತ್ತೆ ಮತ್ತೆ ಮನದಟ್ಟು ಮಾಡುತ್ತ ಹೋಗಿವೆ. ಹೇಳೋದಕ್ಕೆ ‘ಮಾಧ್ಯಮ’ ಎಂಬ ಹೆಸರು. ಆದರೆ, ಜನರಿಗೂ ಸುದ್ದಿಸಂಸ್ಥೆಗೂ ಮಧ್ಯೆ ಇರಬೇಕಾದ ತಂತೇ ಕ್ಷೀಣವಾಗಿದೆ. ಎಲ್ಲವೂ ಸೆನ್ಸೇಶನಲ್, ಉದ್ರೇಕಕಾರಿ, ತಕ್ಷಣ ಗಮನ ಸೆಳೆಯುವಂಥದಾಗಿರಬೇಕು ಎಂಬ ಹಪಾಹಪಿಯಲ್ಲಿ ಸುದ್ದಿ/ಕಾರ್ಯಕ್ರಮ/ವರದಿ ಪ್ರಸ್ತುತಿಯ ಸೊಗಸು ಕಳೆದುಹೋಗುತ್ತಿದೆ. ಹೀಗಾಗಿ ಬಹುತೇಕ ಕಡೆ, ಬಹುತೇಕ ಸಮಯ, ನಮಗೆ ಕಂಡು ಬರುತ್ತಿರುವುದು ಸುದ್ದಿಯ ಇಂಥ ಶೀಘ್ರಸ್ಖಲನ.

ಈ ಭಾವನೆ ತೀವ್ರವಾಗಿ ಕಾಡಿದಾಗೆಲ್ಲ, ಏನಾದರೂ ಬರೆಯಬೇಕೆನ್ನುವ ಹಂಬಲ ದಟ್ಟವಾಗಿ ಉಕ್ಕತೊಡಗುತ್ತದೆ. ಇದುವರೆಗೆ ಬದುಕಿದ್ದೇ ಈ ಭಾವತೀವ್ರತೆಯಿಂದಾಗಿ. ಬಹುಶಃ ಮುಂದೆಯೂ ಹೀಗೇ.

ಪತ್ರಕರ್ತ ‘ವೃತ್ತಕರ್ತ’ನಾದರೆ ಅದು ನಿಜಕ್ಕೂ ದುರಂತ. ಕ್ಷೀಣಧ್ವನಿಯಾದರೇನಾಯ್ತು? ಮೌನವಾಗಿರುವುದಕ್ಕಿಂತ ಇದೇ ವಾಸಿ ಅಂತ ಅನಿಸುತ್ತದೆ. ಒಂದಿಷ್ಟು ಸಾರ್ಥಕ ಪ್ರಯೋಗಗಳಾಗಿದ್ದರೆ, ವೃತ್ತಿನೆಮ್ಮದಿ ದಕ್ಕಿದ್ದರೆ, ಅದು ಈ ಕ್ಷೀಣಧ್ವನಿಯಿಂದಾಗಿ.

ಆ ಧ್ವನಿ ಕಳೆದುಹೋಗದಿರಲಿ ಎಂಬುದೊಂದೇ ನನ್ನ ಆಸೆ. ಯಾವ ಕ್ರಿಯಾಶೀಲನೂ ಆ ಧ್ವನಿಯನ್ನು ಕಳೆದುಕೊಳ್ಳದಿರಲಿ ಎಂಬುದು ನನ್ನ ಶಾಶ್ವತ ಹಾರೈಕೆ.  

- ಚಾಮರಾಜ ಸವಡಿ

13 comments:

ಚುಕ್ಕಿಚಿತ್ತಾರ said...

ಸರ್.. ನಿಮ್ಮ ಬರಹ ನನಗೆ ತು೦ಬಾ ಇಷ್ಟವಾಯ್ತು..ಇದು ದಿನನಿತ್ಯದ ಜೀವನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಣ ಸಿಗುತ್ತದೆ..ಅದರ ಮು೦ದುವರಿದ ಭಾಗ
ಮಾಧ್ಯಮಗಳು .. ಅಲ್ಲವೇ..?
ನಮ್ಮ ಕೆಲಸದಿ೦ದ ನಮಗೆ ಸಿಗುವ ’ತ್ರುಪ್ತಿಯೆ’ ಅಲ್ಟಿಮೇಟ್.
ವ್ರುತ್ತ ಕಟ್ಟಿಕೊಳ್ಳುವವರಿಗೆ ಬಹುಶ: ಭಯ ಇರಬಹುದೆ ವೃತ್ತದ ಹೊರಗಡೆ ಕಾಲಿಡಲು...? ಇರಲಿ ಹಾಗೇ ಅವರು..ಸೇಫ್ ಜೋನಲ್ಲೆ..
ವ೦ದನೆಗಳು.

ಆಲಾಪಿನಿ said...

ಸರ್‌,ನೀವು ಹೇಳುತ್ತಿರುವುದು ನಿಜ. ಕಿರಿಯರ ಉತ್ಸಾಹವನ್ನು ಹೇಗೆ ಕುಗ್ಗಿಸುವುದು ಎನ್ನುವುದರತ್ತಲೇ ವೃತ್ತಪರರು ಸದಾ ಚಿಂತನೆ ನಡೆಸುತ್ತಿರುತ್ತಾರೆ..

AntharangadaMaathugalu said...

ಸಾರ್....
ನೀವು ಹೇಳಿರುವುದು ಸತ್ಯ. ಆಳವಿಲ್ಲದ, ಸರಿಯಾಗಿ ತಯ್ಯಾರಿಯಿಲ್ಲದ ವಿಷಯ ಪ್ರಸ್ತುತಿಗಳು, ಕೇಳುವವರಿಗೆ, ನೋಡುವವರಿಗೆ ಕಿರಿಕಿತಿ ಉಂಟುಮಾಡುವುದು ನಿಜ. ಎಲ್ಲರೂ breaking newsನ ಹಿಂದೆ ಬಿದ್ದು trp ಹೆಚಿಸಿಕೊಳ್ಳುವ ಭರಾಟೆಯಲ್ಲಿ, ಉತ್ತಮವಾಗಿ, ವ್ಯವಸ್ಥಿತವಾಗಿ ರೂಪಿಸಿ, ಜ್ಞಾನ ಹೆಚ್ಚಿಸುವ ಕಾರ್ಯಕ್ರಮಗಳು ಸ್ವಲ್ಪ ಹಿಂದೆ ಬಿದ್ದಿವೆ... ತಾರಕ ಸ್ವರದಲ್ಲಿ ಪ್ರಸ್ತುತಿ ಪಡಿಸುವ ರೀತಿ, ವಿಷಯದ ಪ್ರಾಮುಖ್ಯತೆ, ಆಳವನ್ನೇ ಸಡಿಲಿಸಿದಂತಾಗಿದೆ. ಯಾರು ಬೇಕಾದರೂ ಬರೆಯಬಹುದು, ವರದಿ ಮಾಡಬಹುದು ಎಂಬ ಒಂದು ಅಭಿಪ್ರಾಯ ಮೂಡಿದೆ. ಕ್ಷೇತ್ರದಲ್ಲಿ ಅನುಭವ ಮತ್ತು ಪೂರಕವಾದ ಓದಿನ ಅಗತ್ಯವೇ ಕ್ಷೀಣವಾಗಿಹೋಗಿದೆ ಅನ್ನಿಸುತ್ತೆ... ಉತ್ತಮವಾದ ಅವಲೋಕನ ಸಾರ್.... ಧನ್ಯವಾದಗಳು.

ಶ್ಯಾಮಲ

samayakannada said...

@ ಚುಕ್ಕಿ ಚಿತ್ತಾರ, ಶ್ರೀದೇವಿ ಮತ್ತು ಶಾಮಲಾ: ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಇದು ತುಂಬ ದಿನಗಳಿಂದ ಕೊರೆಯುತ್ತಿದ್ದ ವಿಷಯ. ವೃತ್ತಿ ಅನಿವಾರ್ಯತೆಗಳಿಂದಾಗಿ ಎಷ್ಟೋ ವಿಷಯಗಳನ್ನು ಮುಕ್ತವಾಗಿ ಬರೆಯಲು ಆಗುವುದಿಲ್ಲ. ಕೊನೇ ಪಕ್ಷ ಇಂಥ ಒಂದಿಷ್ಟು ವಿಷಯಗಳನ್ನಾದರೂ ಬರೆಯೋಣ ಅಂತ ನಿರ್ಧರಿಸಿದಾಗ ಮೂಡಿದ ಬರಹ ಇದು.

ಅಸಮರ್ಥರ ಕೈಕೆಳಗೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎಲ್ಲ ಕ್ಷೇತ್ರಗಳಲ್ಲೂ ಇದೆ. ನಾವು ಅಂಥ ಅಸಮರ್ಥರಾಗೋದು ಬೇಡ ಎಂಬ ಎಚ್ಚರಿಕೆ ಕೂಡ ಇಲ್ಲಿದೆ ಅಂದುಕೊಂಡಿದ್ದೇನೆ.

ಅಜ್ಜಿಮನೆ said...

¤ÃªÀÅ ºÉýzÀÄÝ ¤d E°è §gÉAiÉÆ ¥É¤ßUÉ ¸ÁévÀAvÀæ«®è ,J£ÀÄ ªÀiÁqÉÆzÀÄ ºÉý ¸ÁgÀ . §zÀÄPÀÄ ZÁgÀtÂAiÀÄAxÀzÀÄÝ J®èªÀ£Àß ¸À»¹PÉƼÀÄîªÀ ¥ÁlªÀ£Àß PÀ°¸ÀÄvÉÛ .PÀ°vÀgɵÉÖ E°è G½ªÀÅ .E®è¢zÀÝgÉ £ÁªÀÅ PÀÆqÀ vÀgÀUɯÉAiÀÄAvÉ AiÀiÁgÀzÉÆÝ §ÄqÀPÉÌ UÉƧâgÀªÁUÀÄvÉÛêÉ

samayakannada said...

ನಿಜ ಅಜ್ಜಿಮನೆ ಅವರೇ,

ನೀವು ಬರಹದಲ್ಲಿ (ಯುನಿಕೋಡ್‌) ಬರೆದಿದ್ದರೆ ಬಹುಶಃ ಎಲ್ಲರಿಗೂ ಓದಲು ಸುಲಭವಾಗ್ತಿತ್ತು. :)

kavinagaraj said...

ಶ್ರೀ ಚಾಮರಾಜ ಸವಡಿರವರೇ, ನಿಮ್ಮ ಅನಿಸಿಕೆ ಅರ್ಥಪೂರ್ಣವಾಗಿದೆ. ನೀವಂದಂತೆ ತುಂಬಿದ ಭಾವನೆಗಳನ್ನು ಹೊರಹಾಕಿದಾಗ ಮೂಡುವ ನಿರಾಳತೆಯ ಅರಿವು ನನಗೂ ಆಗಿದೆ. ನಮಸ್ಕಾರ.

samayakannada said...

ಧನ್ಯವಾದ ಕವಿ ನಾಗರಾಜ್‌ ಅವರೇ. ಇದೊಂಥರಾ ಅಕ್ಷರ ಪ್ರಸವ :)

adadds_arvind said...

sir,
neevu ittichege kavithe bareyade irabahudu. Adare bredavarige protsaha neediddiri.

Navellaru saha vruttakarada BHUMI yalli hutti, badukuttiruvudarinda idu sahaja. hagantha Nanu samarthisuthilla.

yavude 'vishayavu' charchege vaLapattalli adara paridiyu "vrutta"vadalliyu, 'vishayavu' uttara kandukondaga mukti ("shunya") honduttade.

ನಾಗರಾಜ್ .ಕೆ (NRK) said...

ಸರ್ ನಮಸ್ಕಾರ,
ನಿಮ್ಮ ಬರಹ ಓದಿ ನಾನು ನೋಡಿದ ಕೆಲವು ವೃತ್ತಗಳು ನೆನಪಾದವು, ಇವರ್ಯಾಕೆ ಹೀಗೆ ಅಂತ ತುಂಬಾ ಸಲ ಅನ್ನಿಸಿದೆ. ಖಂಡಿತವಾಗಲು ನಮಗೆ ಹಿರಿಯರ ಪ್ರೋತ್ಸಾಹ ಬೇಕು. ಕೊನೆಯಲ್ಲಿ ನಿಮ್ಮ ಬರಹ ಆಶಾದಾಯಕವಾಗಿದೆ . . . ಅಷ್ಟರಮಟ್ಟಿಗೆ ನಿರಾಳ.

ಶರಣು ಹಂಪಿ said...

ನಿಜ ಹೇಳಿ ಬರೆಹ ಅಂದ್ರೆ ಏನೂಂತ...
ಎಷ್ಟು ಜನ ವೃತ್ತಿಪರರಿಗೆ ಅದು ಗೊತ್ತಿದೆ? ಎದೆ ಸೀಳಿದ್ರೂ ನಾಲ್ಕು ಅಕ್ಷರ ಇರಲ್ಲ ಅಂತಾರಲ್ಲ. ಹಾಗಾಗಿದೆ. ನಾವು ಜನರ ಹತ್ರ ಹೋಗಬೇಕು ಅಂತ ಸಿನಿಮಾ ಹಾಡಿನಿಂದ ಹಿಡಿದು ಕ್ಯಾಚಿ ಪದಗಳನ್ನು ಬಳಸೋದು ಸರಿ. ಆದ್ರೆ ಈ ಕಾರಣಕ್ಕಾಗಿ ತನ್ನ ಭಾಷಾಪ್ರೌಢಿಮೆಯನ್ನು ಬಳಸೋದು ಕೂಡ ಅಷ್ಟೇ ಡೇಂಜರ್. ಬರೆಹಕ್ಕೆ ತನ್ನದೇ ಆದ ಸ್ಥಾನವಿದೆ. ಅದು ತನಗೆ ಬೇಕಾದ ಜಾಗದಲ್ಲಿ ಕುಷನ್ ಚೇರಲ್ಲೂ ಕೂರುತ್ತೆ. ಹಾಗೇನೇ ಮಂಡಿಯೂರಿ ಕೂಡ ಕೂರುತ್ತೆ. ಅದು ಬರೆಯುವ ಬರೆಹಗಾರನ ಮೇಲೆ ನಿಂತಿರುತ್ತೆ. ಇದೆಲ್ಲವನ್ನು ಯಾಕೆ ಹೇಳ್ತಿದಿನಿ ಅಂದ್ರೆ ಈಗ ತಾನೆ ಬರೆವಣಿಗೆ ಶುರು ಮಾಡುತ್ತಿರುವವರು ನಾವೆಲ್ಲ ಗೆದ್ದಿದೀವಿ ಅನ್ನೋ ಹಮ್ಮಿದೆ. ಅದೇ ರೀತಿ ಬರೆದ ಬರೆಹವನ್ನು (ಸುದ್ದಿಮನೆ)ಯಲ್ಲಿ ಅದೆಷ್ಟೇ ಚೆಂದ ಬರೆದಿರಲಿ ಅದರಲ್ಲಿ ಕಡ್ಡಿ ಹುಡುಕೋ ಕೆಲಸ ಮಾಡೋ ಪದ್ಧತಿ ಇದೆ. ಇವೆಲ್ಲದರ ಕೋ ಆರ್ಡಿನೇಷನ್ ಇಲ್ಲದೇ ಹೋದ್ರೆ ಮಹತ್ವ ಸಿಗಬೇಕಾದ ಸ್ಟೋರಿಗೆ ಹೀಗೆ ಬಂದು ಹಾಗೆ ಹೋದ ಹಾಗೆ ಇಲ್ಲವೇ ಯಾವುದೋ ಪೇಜಿನ ಮೂಲೆಗೆ ಸೇರುತ್ತೆ. ಕಸದಂತ ಸುದ್ದಿಗೂ ಅಕ್ಷರಗಳ ತೋರಣದಿಂದ ರಸ ಮಾಡಬಹುದಂತೆ...! ಹೀಗಾಗಿ ಬರೆವಣಿಗೆ ಎಂಬ ಮಾಯೆ ಎಲ್ಲರಿಗೂ ಲಭಿಸಲ್ಲ. ಲಭಿಸಿದವರನ್ನು ಪ್ರೋತ್ಸಾಹಿಸಬೇಕು. ಹಾಗೆಯೇ ತಮ್ಮ ಸಣ್ಣಪುಟ್ಟ ತಪ್ಪುಗಳನ್ನು 'ಇಗೋ' ಇಲ್ಲದಂತೆಯೇ ತಿದ್ದಿಕೊಳ್ಳಬೇಕು. ಆಗಲೇ ಚಿಕ್ಕವರ ದೊಡ್ಡವರು 'ದೊಡ್ಡ'ವರಾಗೇ ಕಾಣುತ್ತಾರೆ...

ನಿಮ್ಮ ಬರೆಹ ಓದಿದಾಗಿ ಅನಿಸಿದ್ದಿಷ್ಟು. ತಪ್ಪಿದ್ದರೆ ಕ್ಷಮಿಸಿ

Chamaraj Savadi said...

@ AdAdds_Aravind: ಅರವಿಂದ್‌ ಅವರೇ, ನಿಮ್ಮ ಅಪರೂಪದ ಪ್ರತಿಕ್ರಿಯೆಗೆ ಮೊದಲು ಧನ್ಯವಾದ. :)

ನಾನು ಬರವಣಿಗೆ ಶುರು ಮಾಡಿದ್ದೇ ಕವಿತೆಗಳನ್ನು ಬರೆಯುವುದರ ಮೂಲಕ. ಇದು ಬಹುತೇಕ ಲೇಖಕರ ಕತೆಯೂ ಹೌದು. ಕ್ರಮೇಣ ವಾಲಿದ್ದು ಪತ್ರಗಳನ್ನು ಬರೆಯುತ್ತ ಪತ್ರಕರ್ತನಾಗಿದ್ದು.

ಬೇರೆಯವರ ಬರವಣಿಗೆಗೆ ಪ್ರೋತ್ಸಾಹಿಸುವುದು ಸಹಜ ಅಭಿವ್ಯಕ್ತಿ ಕೂಡ. ಆಗ ಮಾತ್ರ, ನಮ್ಮ ಬರವಣಿಗೆಯ ಸೀಮಿತತೆ ಗೊತ್ತಾಗುತ್ತದೆ ಅಂತ ಅಂದುಕೊಂಡಿದ್ದೇನೆ.

ವೃತ್ತದೊಳಗಿನ ಬದುಕು ಎಲ್ಲ ವೃತ್ತಿಗಳಲ್ಲಿಯೂ ಇದೆ. ಹಾಗೆ ನೋಡಿದರೆ, ಅದು ನಮ್ಮೆಲ್ಲರ ವೈಯಕ್ತಿಕ ಬದುಕಿನಲ್ಲೂ ಕಂಡು ಬರುತ್ತದೆ.

ವೃತ್ತವನ್ನು ಉಲ್ಲಂಘಿಸುವುದೇ ನಿಜವಾದ ಕ್ರಿಯಾಶೀಲತೆ ಎಂಬುದು ನನ್ನ ನಂಬಿಕೆ. ಅಷ್ಟೇ ಅಲ್ಲ, ನಿತ್ಯದ ಆಚರಣೆ ಕೂಡ.

ಹೀಗೇ ಪ್ರತಿಕ್ರಿಯಿಸುತ್ತಿರಿ.

Chamaraj Savadi said...

@ Nagaraj K.: ಧನ್ಯವಾದ ನಾಗರಾಜ್‌ ಅವರೇ. ಭರವಸೆಯೇ ಬದುಕು ಹಾಗೂ ಬದುಕು ಭರವಸೆ ಮೂಡಿಸುವಂತಿರಬೇಕು, ಅಲ್ವೆ?

@ Sharanu Hampi: ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ಬರವಣಿಗೆಗೆ ಮಿತಿ ಒಡ್ಡುತ್ತಿರುವವರನ್ನು ವಿರೋಧಿಸುತ್ತ ಕಷ್ಟಸರಣಿಗೆ ಈಡಾದವನು ನಾನು. ಈಗಲೂ ನಾನು ಪ್ರತಿಭಟನೆಯನ್ನು ಬಿಟ್ಟಿಲ್ಲ. ಅದು ಕೊಂಚ ಮಾಗಿರಬಹುದು ಆದರೆ, ಮುಕ್ಕಾಗಿಲ್ಲ.

ನಮ್ಮ ನಮ್ಮ ಮಿತಿಗಳಲ್ಲಿ ಹೊಸ ಪ್ರಯೋಗಗಳನ್ನು ಪ್ರೋತ್ಸಾಹಿಸಲೇಬೇಕು. ಇಲ್ಲದಿದ್ದರೆ ವೃತ್ತಿ ಬೆಳೆಯುವುದಿಲ್ಲ. ಹೊಸ ನೀರು ಬರಲೇಬೇಕು. ಇಲ್ಲದಿದ್ದರೆ ನಾವೆಲ್ಲ ಸಂಕುಚಿತರಾಗುತ್ತೇವೆ. ಹಳತಾಗಿ ಕಾಲಕಸವಾಗುತ್ತೇವೆ.

ಪ್ರಯೋಗಗಳಿಂದ ಜಗತ್ತು ಮುನ್ನಡೆಯುತ್ತಿರುವುದು. ಪ್ರತಿಭೆಗಳನ್ನು ತುಳಿಯುವುದು ಎಲ್ಲಾ ಕಾಲದಲ್ಲಿಯೂ ಇದೆ. ಅದನ್ನು ವಿರೋಧಿಸುತ್ತ, ಉಲ್ಲಂಘಿಸುತ್ತ ಮುನ್ನಡೆಯುವುದೇ ನಿಜವಾದ ಪ್ರತಿಭೆ ಅಂತ ಅಂದುಕೊಂಡಿದ್ದೇನೆ.

ನನ್ನ ಬರಹವನ್ನು ಇನ್ನೊಮ್ಮೆ ಓದಿದರೆ, ನಾನು ಹೇಳ ಹೊರಟ ವಿಷಯ ನಿಮಗೆ ಇನ್ನಷ್ಟು ಸ್ಪಷ್ಟವಾಗಬಹುದು ಅನಿಸುತ್ತದೆ.