ಮರೆತೇನೆಂದರೆ ಮರೆಯಲಿ ಹ್ಯಾಂಗ...?

22 Feb 2009

4 ಪ್ರತಿಕ್ರಿಯೆ
’ಬಿಸಿಲು ಬಲಿಯುತ್ತಿದೆ’

ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ ಅಂತ ಅಂದುಕೊಳ್ಳುತ್ತ ಸ್ಕೂಟಿ ಚಲಿಸುವಾಗ, ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.

ಹೌದು, ಬಿಸಿಲು ಬಲಿಯುತ್ತಿದೆ.

ಚಂದ್ರಾ ಲೇಔಟ್‌ನ ಎಲ್ಲೆಡೆ ಸಿಮೆಂಟ್‌, ಡಾಂಬರಿನದೇ ಕಾರುಬಾರು. ಬಿದ್ದ ಬಿಸಿಲನ್ನು ಹೀರಿಕೊಳ್ಳುವ ಮಣ್ಣಾಗಲಿ, ಹಸಿರಾಗಲಿ ಕಡಿಮೆ. ಬೆಳಿಗ್ಗೆ ಎಂಟು ಗಂಟೆಗೆಲ್ಲಾ ತಾರಸಿ ಏರಿ ನೋಡಿದರೆ, ಬಿಸಿಲಲ್ಲಿ ಫಡಫಡಿಸುವ ಕಟ್ಟಡಗಳೇ ಎಲ್ಲೆಡೆ ಕಣ್ಣಿಗೆ ಬೀಳುತ್ತವೆ. ಮಧ್ಯಾಹ್ನದ ಹೊತ್ತು ಹದವಾದ ಬಿಸಿ ಗಾಳಿ ತುಂಬಿಕೊಂಡು ರಸ್ತೆಗಳು ಮಂಕು ಮಂಕು. ಜೋರು ಊಟವಾದರೆ, ಸೀದಾ ಮಂಪರು ಪರೀಕ್ಷೆಗೆ ಸಿದ್ಧವಾದ ಆರೋಪಿಯಂತಾಗಿಬಿಡುವ ಭಯ. ಹೀಗಾಗಿ, ಲಘು ಭೋಜನ. ಆದರೂ, ಬಿಸಿ ಗಾಳಿಗೆ ಮನಸ್ಸು ಅಂಗಾತ ಮಲಗಿ ನಿದ್ರಿಸಲು ಚಡಪಡಿಸುತ್ತಿರುತ್ತದೆ.

ಮುಖ್ಯ ರಸ್ತೆ ಬರುವವರೆಗೆ ಸ್ಕೂಟಿಗೂ ಒಂಥರಾ ಮಂಕು. ಆದರೆ, ಜೋರು ಟ್ರಾಫಿಕ್‌ ನೋಡುತ್ತಲೇ ನಿದ್ದೆ ಹಾರಿಹೋಗಿ ಮನಸ್ಸು ಸ್ವಸ್ಥವಾಗುತ್ತದೆ. ರಸ್ತೆಯ ಏರಿಳಿತಗಳೊಂದಿಗೆ ಏರಿಳಿಯುತ್ತ, ಟ್ರಾಫಿಕ್ಕನ್ನು ಹುಷಾರಾಗಿ ನಿಭಾಯಿಸುತ್ತ ರೈಲ್ವೇ ಸಮಾನಾಂತರ ರಸ್ತೆಗೆ ಬರುವ ಹೊತ್ತಿಗೆ, ಅವತ್ತು ಮಾಡಬೇಕಾದ ಕೆಲಸಗಳ ಪಟ್ಟಿ ಮನಸ್ಸಿನ ತುಂಬ. ದಾರಿಯಲ್ಲಿ ಸಿಗುವ ಒಂದೆರಡು ಶಾಲೆಗಳ ಚಿಣ್ಣರನ್ನು ನೋಡುತ್ತ, ಮುದಗೊಳ್ಳುತ್ತ, ದಾರಿ ಸಾಗುವಾಗ, ಅರೆರೆ, ಆ ಮುದುಕ ನಮ್ಮೂರಿನವಂತೆ ಕಾಣುತ್ತಾನಲ್ಲ ಎಂದು ಫಕ್ಕನೇ ಅನಿಸಿಬಿಡುತ್ತದೆ.

ಆತ ನಮ್ಮೂರಿನವನಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ, ಊರ ನೆನಪಾಗಲು ಆ ಮುದುಕ ಒಂದು ನೆವ.

ಏಕೆ ಹೀಗನಿಸುತ್ತದೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಹೈಸ್ಕೂಲಿನ ತರಗತಿ ನೆನಪಾಗುತ್ತದೆ. ಶಾಲೆ ಮುಗಿಸಿ ಮನೆಗೆ ಬರುವಾಗಿನ ಓಣಿಯ ವಿವರಗಳು ಕಣ್ಮುಂದೆ ನಿಲ್ಲುತ್ತವೆ. ಯಾವುದೋ ದುಃಖಿ ನೆನಪುಗಳು, ಒಂಟಿತನ ಕಾಡಿದ ಕ್ಷಣಗಳು ಕಾಡತೊಡಗುತ್ತವೆ. ತಲೆ ಕೊಡವಿ ಮತ್ತೆ ರಸ್ತೆಯ ಕಡೆ ಗಮನ ಹರಿಸಿದರೂ, ಕಾಲಡಿ ಸುತ್ತುವ ಸಾಕಿದ ಬೆಕ್ಕಿನಂತೆ ನೆನಪುಗಳು ಅಲ್ಲೇ ಓಡಾಡುತ್ತಿರುತ್ತವೆ. ಅಂದಿನ ದಿನಗಳ ನಾನು, ಇಂದಿನ ಬದುಕಿನೊಂದಿಗೆ ಅವನ್ನು ಅನುಭವಿಸಬೇಕಾದ ರೀತಿಯೇ ವಿಚಿತ್ರ.

ದಾರಿಯುದ್ದಕ್ಕೂ ಇಂಥವೇ ನೆನಪುಗಳು. ರಸ್ತೆಯ ಕಡೆ ಎಷ್ಟೇ ಗಮನ ಕೊಟ್ಟರೂ, ಮನಸ್ಸಿನಲ್ಲಿ ನೆನಪುಗಳ ಕಲರವ ನಿಲ್ಲುವುದಿಲ್ಲ.

ಹಳೆ ಗುಡ್ಡದಹಳ್ಳಿಯ ಅಡ್ಡಮಾರ್ಗ ದಾಟಿಕೊಂಡು ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನ ಮೇಲ್ಸೇತುವೆ ಏರುವಾಗಲೂ ನಾನು ಹಳೆಯ ದಿನಗಳ ಗುಂಗಿನಲ್ಲೇ ಇರುತ್ತೇನೆ. ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಪದೆ ಪದೆ ನೆನಪಿಸಿಕೊಂಡರೂ, ಅದರ ಸಂದಿಯಲ್ಲಿ ತೂರಿ ನೆನಪುಗಳು ನುಗ್ಗುತ್ತವೆ. ಗಾಡಿ ಓಡಿಸುವಾಗ, ತೀರ ಗಂಭೀರವಾದ ಏನನ್ನೂ ಯೋಚಿಸುವುದಿಲ್ಲ. ಹಾಗಿದ್ದರೂ, ಆ ನಿಯಮ ದಾಟಿಕೊಂಡು ನೆನಪುಗಳು ನುಗ್ಗುತ್ತವೆ. ಹಿಂದಿನ ದಿನಗಳಿಗೆ ಕರೆದೊಯ್ಯುತ್ತವೆ.

ಮೇಲ್ಸೇತುವೆ ಇಳಿದು, ಮಾರುಕಟ್ಟೆಯ ಪಕ್ಕದ ಎಸ್‌ಪಿ ರಸ್ತೆಯ ಜಂಗುಳಿಯಲ್ಲಿ ತೂರಿಕೊಂಡು, ಹುಷಾರಾಗಿ ಹೊರಟು ಕಬ್ಬನ್‌ ಪಾರ್ಕ್‌ ಒಳಗಿನ ರಸ್ತೆ ಸೇರುವ ಹೊತ್ತಿಗೆ ಮನಸ್ಸು ಒಂಥರಾ ದಣಿದಿರುತ್ತದೆ. ಪಾರ್ಕ್‌‌ನ ತಾಜಾ ಗಾಳಿಗೆ ಮುಖವೊಡ್ಡಿ, ಎದೆಯ ತುಂಬ ಅದನ್ನು ಹೀರಿಕೊಳ್ಳುವ ಹೊತ್ತಿಗೆ ವಿಧಾನಸೌಧದ ಮುಂದಿನ ರಸ್ತೆಯಲ್ಲಿರುತ್ತೇನೆ. ಮತ್ತೆ ವಾಹನಗಳ ಭರಾಟೆ. ಇನ್‌ಫ್ಯಾಂಟ್ರಿ ರಸ್ತೆಯ ಜಂಗುಳಿ ದಾಟಿ ಕಚೇರಿಯ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸುವ ಹೊತ್ತಿಗೆ ಹೈಸ್ಕೂಲ್‌ನಿಂದ ವೃತ್ತಿಯ ಈ ಹಂತದವರೆಗಿನ ಪಯಣವನ್ನು ಅರ್ಧ ಗಂಟೆಯೊಳಗೆ ಮುಗಿಸಿದ ದಣಿವು.

ಅದೇ ಮೊದಲ ಬಾರಿ ಎಂಬಂತೆ ಕಚೇರಿ ಪ್ರವೇಶಿಸುತ್ತೇನೆ. ಸಹೋದ್ಯೋಗಿಗಳಿಗೆ ವಿಶ್‌ ಮಾಡುತ್ತ ನನ್ನ ಸ್ಥಾನಕ್ಕೆ ಬಂದು ಕೂಡುತ್ತೇನೆ. ಎದುರಿಗೆ ಕೂತಿರುವ ಕಂಪ್ಯೂಟರ್‌ ಪರದೆ ಬಾಲ್ಯದ ಚಿತ್ರ ಸಂಪುಟದಂತೆ ಕಾಣುತ್ತದೆ. ಸುದ್ದಿ ವಿಭಾಗದ ತಾಣಗಳನ್ನು ಒಂದೊಂದಾಗಿ ತೆರೆಯುತ್ತ, ನೆನಪುಗಳನ್ನು ಒಂದೊಂದಾಗಿ ಕಳಚುತ್ತ ನನ್ನ ಕೆಲಸದಲ್ಲಿ ಮುಳುಗುತ್ತೇನೆ. ಬ್ರೆಕಿಂಗ್‌ ನ್ಯೂಸ್‌ಗಳು, ಅಪ್‌ಡೇಟ್‌ಗಳು, ಪ್ಯಾಕೇಜ್‌ಗಳು ಒಂದಾದ ನಂತರ ಒಂದರಂತೆ ರಾಚತೊಡಗಿದಾಗ, ನಿರ್ಲಕ್ಷ್ಯಿಸಲ್ಪಟ್ಟ ಮಗುವಿನಂತೆ ನೆನಪುಗಳು ಮುರುಟಿಕೊಳ್ಳುತ್ತ ಹೋಗುತ್ತವೆ.

ಭೂತಕಾಲದಲ್ಲಿ ಬದುಕಬಾರದು ಎಂದು ಎಲ್ಲಿಯೋ ಓದಿದ್ದು ನೆನಪಾಗಿ ನಗು ಬರುತ್ತದೆ. ಬೇರುಗಳಿಲ್ಲದೇ ಮರವುಂಟೆ? ಭೂತಕಾಲವಿಲ್ಲದೇ ವರ್ತಮಾನವೂ ಇಲ್ಲ, ಭವಿಷತ್ತೂ ಇಲ್ಲ. ಬೇರುಗಳಂತೆ ಹಳೆಯ ದಿನಗಳ ನೆನಪುಗಳು, ಕನಸುಗಳು, ಕನವರಿಕೆಗಳು, ನೋವು-ನಲಿವುಗಳು ವರ್ತಮಾನಕ್ಕೆ ತಲುಪುತ್ತಲೇ ಇರುತ್ತವೆ. ಅವುಗಳನ್ನು ಜೀರ್ಣಿಸಿಕೊಂಡೇ ಬದುಕಬೇಕು. ಅವುಗಳನ್ನು ಹಳೆ ಫೊಟೊಗಳಿರುವ ಆಲ್ಬಮ್ಮಿನಂತೆ ಇಟ್ಟುಕೊಂಡು ಹೊಸ ಫೊಟೊಕ್ಕೆ ಮುಗುಳ್ನಗಬೇಕು.

ಹಾಗಂದುಕೊಂಡು, ಕೆಲಸದಲ್ಲಿ ಮಗ್ನನಾಗುತ್ತೇನೆ.

- ಚಾಮರಾಜ ಸವಡಿ

ಮೌನ ಎಂಬ ಸಮೃದ್ಧ ಭಾಷೆ

0 ಪ್ರತಿಕ್ರಿಯೆ
ಚಿಕ್ಕವನಿದ್ದಾಗ ತುಂಬ ಮಾತನಾಡುತ್ತಿದ್ದೆ. ಎಷ್ಟು ಮಾತನಾಡುತ್ತಿದ್ದೆನೆಂದರೆ, ಒಮ್ಮೊಮ್ಮೆ ಏದುಸಿರು ಬರುತ್ತಿತ್ತು. ತುಂಬ ಮಾತನಾಡುತ್ತೀ ಎಂದು ಏಟು ಕೂಡ ತಿಂದಿದ್ದೇನೆ. ಆದರೂ ಮಾತು ನಿಲ್ಲುತ್ತಿರಲಿಲ್ಲ.

ಬಹುಶಃ ಹತ್ತನೇ ತರಗತಿಯ ಪರೀಕ್ಷೆಗಳ ನಂತರ ಇರಬೇಕು, ನನ್ನ ಮಾತು ಇದ್ದಕ್ಕಿದ್ದಂತೆ ಕಡಿಮೆಯಾಗತೊಡಗಿತು. ಪಿಯುಸಿ ಮುಗಿಯುವ ಹೊತ್ತಿಗೆ ಅದು ಎಷ್ಟು ಕಡಿಮೆಯಾಯಿತೆಂದರೆ, ಮಾತನಾಡಿದರೆ ನನ್ನ ಧ್ವನಿ ನನಗೇ ಅಪರಿಚಿತ ಅನಿಸುವಷ್ಟು.

ಈ ಸಮಯದಲ್ಲಿಯೇ ನನಗೆ ಓದುವ ಹುಚ್ಚು ಅಂಟಿಕೊಂಡಿದ್ದು. ಮೊದಲಿನಿಂದಲೂ ಸಿಕ್ಕಿದ್ದನ್ನು ಓದುವ ಹವ್ಯಾಸವಿತ್ತಾದರೂ, ಓದಲು ಪುಸ್ತಕಗಳೇ ಸಿಗುತ್ತಿರಲಿಲ್ಲ. ಹಳ್ಳಿಯಲ್ಲಿ ಪುಸ್ತಕಗಳನ್ನು ತರುವವರೂ ಕಡಿಮೆ. ಅಪ್ಪ ಮೊದಲಿನಿಂದಲೂ ಹಿಂದಿ ಕಾದಂಬರಿಪ್ರಿಯ. ನಮಗೋ ಹಿಂದಿ ತೀರಾ ದುಬಾರಿ. ಆದರೆ, ಡಿಗ್ರಿಗೆಂದು ಗದಗ್‌ ಸೇರಿದಾಗ ಕಾಲೇಜ್‌ ಹಾಗೂ ಸಾರ್ವಜನಿಕ ಗ್ರಂಥಾಲಯಗಳು ಮನಸ್ಸು ಸೆಳೆದವು. ಕ್ಲಾಸ್‌ ತಪ್ಪಿಸಿ ಕತೆ-ಕಾದಂಬರಿ ಓದುತ್ತ ಕೂತುಬಿಡುತ್ತಿದ್ದೆ.

ಹೀಗಾಗಿ ಮಾತು ಇನ್ನಷ್ಟು ಕಡಿಮೆಯಾಯಿತು. ಮಾತಿನ ಜಾಗವನ್ನು ಓದು ತುಂಬಿತು.

ಆದರೆ, ಓದಿನ ಜಾಗವನ್ನು ಇದುವರೆಗೆ ಬೇರೆ ಯಾವುದೂ ತುಂಬಲು ಆಗಿಲ್ಲ. ಅದು ಕೊಟ್ಟ ವಿಶಿಷ್ಟ ಖುಷಿ ಬೇರೆ ಯಾವುದರಿಂದಲೂ ಸಿಕ್ಕಿಲ್ಲ. ಇವತ್ತಿಗೂ ಅದು ಹಾಗೇ ಇದೆ.

ಮೌನದಿಂದ ನನ್ನ ವಿಚಾರಗಳನ್ನು ಗಮನಿಸುವುದು ಸುಲಭವಾಯಿತು. ನನ್ನ ವಿಚಾರಗಳನ್ನು ಹಿಂಬಾಲಿಸುತ್ತ ಹಗಲುಕನಸು ಕಾಣುವುದೂ ಜೋರಾಯಿತು. ಇವೆರಡೂ ಇನ್ನೇನು ನನ್ನ ವ್ಯಕ್ತಿತ್ವವನ್ನೇ ಹಾಳು ಮಾಡುತ್ತವೆ ಎಂಬಷ್ಟು ಅತಿಯಾದಾಗ ನಾನು ಬರೆಯಲು ಶುರು ಮಾಡಿದೆ. ನನ್ನ ದಿನಚರಿ ಬರವಣಿಗೆ ಶುರುವಾಗಿದ್ದು ಹೀಗೆ.

ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆಂದರೆ, ಯಾವುದನ್ನು ಅತಿ ಅಂತ ಅಂದುಕೊಂಡಿರುತ್ತೇವೆಯೋ, ಅದಕ್ಕೆ ಪರಿಹಾರವೂ ಅದರ ಅಕ್ಕಪಕ್ಕದಲ್ಲೆಲ್ಲೋ ಇರುತ್ತದೆ. ಒಂದಿಷ್ಟು ವ್ಯವಧಾನ, ಆಸಕ್ತಿ ಇದ್ದರೆ ಕಾಣುತ್ತದೆ. ತಾಕುತ್ತದೆ. ಗಮನ ಸೆಳೆಯುತ್ತದೆ. ಹೊಸದರ ಹುಡುಕಾಟ, ಅದನ್ನು ತಿಳಿಯುವ ಖುಷಿ ನಮ್ಮ ದೋಷವನ್ನು ತಿದ್ದುತ್ತ ಹೋಗುತ್ತವೆ. ಮನಸ್ಸಿನೊಂದಿಗೆ ಮಾತನಾಡಿಕೊಳ್ಳುತ್ತ ಹಲವಾರು ವಿಷಯಗಳು ನನಗೆ ಸ್ಪಷ್ಟವಾಗಿವೆ. ಇನ್ನೊಬ್ಬರ ವಿಷಯಗಳನ್ನು ತಿಳಿದುಕೊಳ್ಳುವ ಗುಣವನ್ನು ಬೆಳೆಸಿವೆ. ನೋವು ಕಾಡಿದಾಗ, ಸಮಸ್ಯೆಗಳು ಎದುರು ನಿಂತು ಕಂಗೆಡಿಸಿದಾಗ ನಾನು ಮೌನವಾಗಿ ಓದುತ್ತ, ಬರೆಯುತ್ತ, ಹಾಡು ಕೇಳುತ್ತ ಗುಣವಾಗುತ್ತ ಹೋಗುತ್ತೇನೆ.

ಮೌನ ಜಗತ್ತಿನ ಸಮೃದ್ಧ ಭಾಷೆಯಂತೆ. ಅಷ್ಟೇ ಅಲ್ಲ, ಎಷ್ಟು ಬಳಸಿದರೂ ಖರ್ಚಾಗದ ಶಕ್ತಿಯೂ ಹೌದು. ಮನುಷ್ಯನನ್ನು ಬಿಟ್ಟು ಇತರ ಜೀವಜಗತ್ತು ಪರಸ್ಪರ ಸಂಭಾಷಿಸುವುದು ಬಹುತೇಕ ಹೀಗೇ ಅಲ್ಲವೆ? ತನ್ನ ಪಾಡಿಗೆ ತಾನು ನಿಂತಿರುವ ಮರ, ಅರಳುವ ಹೂ, ಮೇಯುವ ಹಸು, ಹಾರುವ ಹಕ್ಕಿ, ತಮ್ಮ ನೆಮ್ಮದಿಯಲ್ಲಿ ತಾವಿರುವುದನ್ನು ನೋಡಿದಾಗ, ಮೌನ ವರ ಎಂದು ಹಲವಾರು ಬಾರಿ ಅನ್ನಿಸಿದೆ.

ಈ ವಿವೇಕ ನನ್ನ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಅಹಂ ಕುಗ್ಗಿಸುತ್ತದೆ. ಮಾತಿನಾಚೆಯ ಜಗತ್ತಿನ ಸೊಗಸಿನತ್ತ ಸೆಳೆಯುತ್ತದೆ. ಅದನ್ನು ನೆನದಾಗೆಲ್ಲ, ಬೆರಗಿನಿಂದ ಮನಸ್ಸು ಮೂಕವಾಗುತ್ತದೆ. ಮೌನ ಮಾತಾಗುತ್ತದೆ. ನಾನು ಅದನ್ನು ಕೇಳಿಸಿಕೊಳ್ಳುತ್ತ ಸುಮ್ಮನೇ ಕೂತುಬಿಡುತ್ತೇನೆ-

ಈ ಅಪರಾತ್ರಿ ಕೂತಂತೆ!

- ಚಾಮರಾಜ ಸವಡಿ
(ಚಿತ್ರ: ಓಂಶಿವಪ್ರಕಾಶ)

ತಿರುಚುವಿಕೆಯೇ ವರದಿಗಾರಿಕೆ

16 Feb 2009

6 ಪ್ರತಿಕ್ರಿಯೆ
ರೋಚಕವಾಗಿ ವರದಿ ಮಾಡಲು ಹೋಗಿ ಬೇಸ್ತು ಬೀಳುವುದಕ್ಕೆ ಉತ್ತಮ ಉದಾಹರಣೆ ಇವತ್ತಿನ ಕನ್ನಡಪ್ರಭ ದಿನಪತ್ರಿಕೆಯ ಮುಖಪುಟದ ಮುಖ್ಯ ಸುದ್ದಿ. ’ಅಮೆರಿಕದಲ್ಲಿ ಕೆಲಸ ಗಿಟ್ಟಿಸಲು ಕನ್ನಡವೂ ಗೊತ್ತಿರಬೇಕು!’ ಎಂಬ ಸುದ್ದಿಯನ್ನು ( http://www.kannadaprabha.com/NewsItems.asp?ID=KPH20090215125117&Title=Headlines&lTitle=%C1%DBd%C0+%C8%DB%7D%E6%25&Topic=0&ndate=2/16/2009&Dist=0 )ಯಾವ ಪುಣ್ಯಾತ್ಮ ಹೆಕ್ಕಿದನೋ, ಅದನ್ನು ಮುಖಪುಟಕ್ಕೆ ತರುವಂತೆ ಇನ್ಯಾವ ಪ್ರತಿಭಾವಂತ ಶಿಫಾರಸು ಮಾಡಿದನೋ, ಒಟ್ಟಿನಲ್ಲಿ ಅತಿ ಸಾಮಾನ್ಯ ಅನಿಸುವ ವಿಷಯವೊಂದಕ್ಕೆ ರೋಚಕತೆಯ ಪಟ್ಟಿ ಕಟ್ಟಿ ಮುಖಪುಟದಲ್ಲಿ ಹಾಕಲಾಗಿದೆ.

ವಿಷಯ ಸರಳ. ಕನ್ನಡಕ್ಕೆ ಮನ್ನಣೆ ನೀಡಲು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಮುಂದಾಗಿದ್ದಾರೆ ಎನ್ನುತ್ತದೆ ಕನ್ನಡಪ್ರಭ ವರದಿ. ಅದಕ್ಕೆ ಬೆಂಬಲವಾಗಿ ಪತ್ರಿಕೆ ಉಲ್ಲೇಖಿಸುವ ದಾಖಲೆ ಎಂದರೆ, ’ಒಬಾಮಾ ಅಡಿ ಕೆಲಸ ಮಾಡಲು ೯,೦೦೦ ರಾಜಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅರ್ಜಿ ಫಾರ್ಮಿನಲ್ಲಿ ’ನಿಮಗೆ ಕನ್ನಡವೂ ಗೊತ್ತೆ?’ ಎಂಬ ಪ್ರಶ್ನೆಯೂ ಇದೆ. ಅಂತರ್‌ರಾಷ್ಟ್ರೀಯ ಅನುಭವ ಕಾಲಂನಲ್ಲಿ ಹಲವಾರು ರಾಷ್ಟ್ರಗಳ ೧೦೧ ಭಾಷೆಗಳನ್ನು ನಮೂದಿಸಲಾಗಿದ್ದು, ಅದರಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ೨೦ ಭಾಷೆಗಳು ಇವೆ...’- ಹೀಗೇ ವಿವರ ಸಾಗುತ್ತದೆ.

ಇಂಟರ್‌ನೆಟ್‌ನಲ್ಲಿ ಅಥವಾ ಕಂಪ್ಯೂಟರ್‌ನ ಬಹುತೇಕ ಕಡತಗಳಲ್ಲಿ ಅಂತರ್‌ರಾಷ್ಟ್ರೀಯ ಮಾಹಿತಿ ನೀಡುವಾಗ, ಆಯಾ ದೇಶದ ಪ್ರಮುಖ ಭಾಷೆಗಳು ತಂತಾನೆ ಕಾಣಿಸುತ್ತವೆ. ದೇಶದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದಾಗಿರುವಾಗ ಅದು ಅರ್ಜಿ ಫಾರ್ಮ‌ನ ನಿಗದಿತ ಕಾಲಂನಲ್ಲಿ ಕಾಣಿಸಿಕೊಂಡರೆ ಅದನ್ನು ವಿಶೇಷ ಎಂದು ಪರಿಗಣಿಸಬೇಕಿಲ್ಲ. ಒಂದು ವೇಳೆ ಅಧ್ಯಕ್ಷ ಒಬಾಮಾ ಅಥವಾ ಅವರ ಸರ್ಕಾರಕ್ಕೆ ಸಂಬಂಧಿಸಿದ ಯಾರಾದರೂ ವಿಶೇಷ ಕಾಳಜಿಯಿಂದ ಕನ್ನಡವನ್ನು ಅಲ್ಲಿ ಕೂಡಿಸಿದ್ದರೆ ಖಂಡಿತವಾಗಿ ಕನ್ನಡಪ್ರಭ ಅಪರೂಪದ ಸುದ್ದಿ ಹೆಕ್ಕಿದೆ ಎಂದು ಹೆಮ್ಮೆಪಡಬಹುದಿತ್ತು. ತಾಂತ್ರಿಕವಾಗಿ ಸೇರಲ್ಪಟ್ಟ ಮಾಹಿತಿಯೊಂದನ್ನು, ಅಧ್ಯಕ್ಷ ಒಬಾಮಾ ಅವರೇ ಸೇರಿಸಿದರೋ ಎಂಬಂತೆ ಬಿಂಬಿಸುವುದು ಸುದ್ದಿಯ ಮೂಲ ಆಶಯವನ್ನೇ ತಿರುಚಿದಂತೆ.

ಸಾಧಾರಣ ಅಥವಾ ಸಹಜ ವಿಷಯಗಳು ವಿಪರೀತಾರ್ಥ ಪಡೆಯುವುದು ಇಂಥ ಧೋರಣೆಯಿಂದಾಗಿ. ಹೀಗಾಗಿ, ಇಲಿ ಹೋಯಿತು ಎಂಬುದು ತಿರುಚುವಿಕೆಯ ಭರದಲ್ಲಿ ಹುಲಿ ಹೋಯಿತು ಎಂಬಂತಾಗುತ್ತದೆ.

- ಚಾಮರಾಜ ಸವಡಿ

ಮಂಗ್ಯಾ ಆಗುವುದೆಂದರೆ ಹೀಗೆ...

2 Feb 2009

0 ಪ್ರತಿಕ್ರಿಯೆ

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಿತ್ತು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ, ಒಂದು ಮಂಗ ಹಿಡಿದುಕೊಟ್ಟರೆ ಹತ್ತು ರೂಪಾಯಿ ಕೊಡುವುದಾಗಿ ಘೋಷಿಸಿದ.

ತಗೊಳ್ಳಿ, ಜನ ನಾ ಮುಂದು ತಾ ಮುಂದು ಎಂದು ಮಂಗಗಳನ್ನು ಹಿಡಿಯಲು ಹೊರಟರು. ಹಳ್ಳಿಯಲ್ಲಲ್ಲದೇ ಸುತ್ತಮುತ್ತಲ ಪ್ರದೇಶದಲ್ಲಿ ಹೇರಳವಾಗಿದ್ದ ಮಂಗಗಳನ್ನು ಹಿಡಿದೊಪ್ಪಿಸಿ ದುಡ್ಡೆಣಿಸಿಕೊಂಡರು.

ಕ್ರಮೇಣ ಮಂಗಗಳ ಸಂಖ್ಯೆ ಕಡಿಮೆಯಾಗುತ್ತಲೇ, ಅವನ್ನು ಸೆರೆ ಹಿಡಿಯುವ ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳತೊಡಗಿತು. ಹೀಗಾಗಿ, ಉತ್ಸಾಹ ಕಳೆದುಕೊಂಡ ಜನ ತಮ್ಮ ಕೆಲಸಗಳತ್ತ ಗಮನ ಹರಿಸಿದರು.

ಈಗ ಒಂದು ಮಂಗದ ಬೆಲೆಯನ್ನು ಇಪ್ಪತ್ತು ರೂಪಾಯಿಗಳಿಗೆ ಏರಿಸಿದ ಆ ವ್ಯಕ್ತಿ.

ಮತ್ತೆ ಮಂಗಗಳನ್ನು ಸೆರೆ ಹಿಡಿಯುವ ಉತ್ಸಾಹ ಹಳ್ಳಿಗರಲ್ಲಿ ಉಕ್ಕಿತು. ದುಪ್ಪಟ್ಟು ಬೆಲೆ ಎಂದರೆ ಯಾರಿಗೆ ತಾನೆ ಆಸೆಯಾಗದು?

ಸ್ವಲ್ಪ ದಿನಗಳಲ್ಲಿ ಮಂಗಗಳ ಸಂಖ್ಯೆ ತುಂಬ ಕ್ಷೀಣಿಸಿತು. ಜೊತೆಗೆ ಹಳ್ಳಿಗರ ಆಸಕ್ತಿಯೂ.

ಈಗ ಮಂಗವೊಂದರ ಬೆಲೆಯನ್ನು ಐವತ್ತು ರೂಪಾಯಿಗಳಿಗೆ ಏರಿಸಿದ ಆ ವ್ಯಕ್ತಿ, ಅಷ್ಟೊತ್ತಿಗೆ ಅರ್ಜೆಂಟ್‌ ಕೆಲಸವಿದೆ ಎಂದು ನಗರಕ್ಕೆ ಹೊರಟುಹೋದ. ಹೋಗುವ ಮುನ್ನ ಮಂಗಗಳನ್ನು ಖರೀದಿಸುವ ಜವಾಬ್ದಾರಿಯನ್ನು ತನ್ನ ಸಹಾಯಕನಿಗೆ ವಹಿಸಿದ.

ಈಗ ಹಳ್ಳಿಯ ಸುತ್ತಮುತ್ತ ಮಂಗಗಳು ಬಹುತೇಕ ಇಲ್ಲವಾಗಿದ್ದವು. ಆದರೆ ಬೆಲೆ ಐವತ್ತು ರೂಪಾಯಿಗೇರಿತ್ತು. ಹಳ್ಳಿಗರು ಎಷ್ಟೇ ಪ್ರಯತ್ನಿಸಿದರೂ ಮಂಗಗಳು ಕಾಣಿಸಲಿಲ್ಲ.

ಆಗ, ವ್ಯಕ್ತಿಯ ಸಹಾಯಕ ಹಳ್ಳಿಗರನ್ನು ಗುಟ್ಟಾಗಿ ಕರೆದ. ’ಹೇಗಿದ್ದರೂ ಮಾಲೀಕ ನಗರಕ್ಕೆ ಹೋಗಿದ್ದಾನೆ. ನೀವು ಹಿಡಿದುಕೊಟ್ಟ ಮಂಗಗಳೆಲ್ಲ ನಮ್ಮ ಬೋನುಗಳಲ್ಲಿವೆ. ನಾನು ಮೂವತ್ತೈದು ರೂಪಾಯಿಗಳಿಗೆ ಒಂದು ಮಂಗ ಮಾರುತ್ತೇನೆ. ಮಾಲೀಕ ಬಂದ ನಂತರ, ಅವನ್ನೇ ನೀವು ಐವತ್ತು ರೂಪಾಯಿಗೆ ಕೊಡಿ. ಹೇಗಿದ್ದರೂ ಹದಿನೈದು ರೂಪಾಯಿ ಗ್ಯಾರಂಟಿ ಲಾಭ’ ಎಂದು ಆಮಿಷ ಒಡ್ಡಿದ.

ಜನ ಮರುಳಾದರು. ತಮ್ಮಲ್ಲಿದ್ದ ಹಣವಲ್ಲದೇ ಆಭರಣ, ಚಿಕ್ಕಪುಟ್ಟ ಆಸ್ತಿಪಾಸ್ತಿ ಒತ್ತೆ ಇಟ್ಟು ಮಂಗಗಳನ್ನು ಖರೀದಿಸಿದರು.

ಬೋನುಗಳಲ್ಲಿದ್ದ ಮಂಗಗಳು ಖಾಲಿಯಾಗುತ್ತಲೇ, ಅದೊಂದು ದಿನ ವ್ಯಕ್ತಿಯ ಸಹಾಯಕ ಕಾಣೆಯಾದ. ಹಳ್ಳಿಗರು ಕಾಯುತ್ತಲೇ ಇದ್ದರು. ಆದರೆ, ಮಾಲೀಕನಾಗಲಿ, ಸಹಾಯಕನಾಗಲಿ ಹಳ್ಳಿಗೆ ಮತ್ತೆ ಹಿಂತಿರುಗಲಿಲ್ಲ. ಹಳ್ಳಿಗರ ಹತ್ತಿರ ಈಗ ಮಂಗಗಳು ಮಾತ್ರ ಉಳಿದಿದ್ದವು. ಅವರ ದುಡ್ಡು ಮಾತ್ರ ಆ ಅನಾಮಿಕ ವ್ಯಕ್ತಿಗಳ ಪಾಲಾಗಿತ್ತು.

ಷೇರು ಮಾರುಕಟ್ಟೆ ಕೂಡ ಹೀಗೇ.

(ಮಿಂಚಂಚೆ ಅನುವಾದ)

- ಚಾಮರಾಜ ಸವಡಿ