ತಿರುಚುವಿಕೆಯೇ ವರದಿಗಾರಿಕೆ

16 Feb 2009

ರೋಚಕವಾಗಿ ವರದಿ ಮಾಡಲು ಹೋಗಿ ಬೇಸ್ತು ಬೀಳುವುದಕ್ಕೆ ಉತ್ತಮ ಉದಾಹರಣೆ ಇವತ್ತಿನ ಕನ್ನಡಪ್ರಭ ದಿನಪತ್ರಿಕೆಯ ಮುಖಪುಟದ ಮುಖ್ಯ ಸುದ್ದಿ. ’ಅಮೆರಿಕದಲ್ಲಿ ಕೆಲಸ ಗಿಟ್ಟಿಸಲು ಕನ್ನಡವೂ ಗೊತ್ತಿರಬೇಕು!’ ಎಂಬ ಸುದ್ದಿಯನ್ನು ( http://www.kannadaprabha.com/NewsItems.asp?ID=KPH20090215125117&Title=Headlines&lTitle=%C1%DBd%C0+%C8%DB%7D%E6%25&Topic=0&ndate=2/16/2009&Dist=0 )ಯಾವ ಪುಣ್ಯಾತ್ಮ ಹೆಕ್ಕಿದನೋ, ಅದನ್ನು ಮುಖಪುಟಕ್ಕೆ ತರುವಂತೆ ಇನ್ಯಾವ ಪ್ರತಿಭಾವಂತ ಶಿಫಾರಸು ಮಾಡಿದನೋ, ಒಟ್ಟಿನಲ್ಲಿ ಅತಿ ಸಾಮಾನ್ಯ ಅನಿಸುವ ವಿಷಯವೊಂದಕ್ಕೆ ರೋಚಕತೆಯ ಪಟ್ಟಿ ಕಟ್ಟಿ ಮುಖಪುಟದಲ್ಲಿ ಹಾಕಲಾಗಿದೆ.

ವಿಷಯ ಸರಳ. ಕನ್ನಡಕ್ಕೆ ಮನ್ನಣೆ ನೀಡಲು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಮುಂದಾಗಿದ್ದಾರೆ ಎನ್ನುತ್ತದೆ ಕನ್ನಡಪ್ರಭ ವರದಿ. ಅದಕ್ಕೆ ಬೆಂಬಲವಾಗಿ ಪತ್ರಿಕೆ ಉಲ್ಲೇಖಿಸುವ ದಾಖಲೆ ಎಂದರೆ, ’ಒಬಾಮಾ ಅಡಿ ಕೆಲಸ ಮಾಡಲು ೯,೦೦೦ ರಾಜಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅರ್ಜಿ ಫಾರ್ಮಿನಲ್ಲಿ ’ನಿಮಗೆ ಕನ್ನಡವೂ ಗೊತ್ತೆ?’ ಎಂಬ ಪ್ರಶ್ನೆಯೂ ಇದೆ. ಅಂತರ್‌ರಾಷ್ಟ್ರೀಯ ಅನುಭವ ಕಾಲಂನಲ್ಲಿ ಹಲವಾರು ರಾಷ್ಟ್ರಗಳ ೧೦೧ ಭಾಷೆಗಳನ್ನು ನಮೂದಿಸಲಾಗಿದ್ದು, ಅದರಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ೨೦ ಭಾಷೆಗಳು ಇವೆ...’- ಹೀಗೇ ವಿವರ ಸಾಗುತ್ತದೆ.

ಇಂಟರ್‌ನೆಟ್‌ನಲ್ಲಿ ಅಥವಾ ಕಂಪ್ಯೂಟರ್‌ನ ಬಹುತೇಕ ಕಡತಗಳಲ್ಲಿ ಅಂತರ್‌ರಾಷ್ಟ್ರೀಯ ಮಾಹಿತಿ ನೀಡುವಾಗ, ಆಯಾ ದೇಶದ ಪ್ರಮುಖ ಭಾಷೆಗಳು ತಂತಾನೆ ಕಾಣಿಸುತ್ತವೆ. ದೇಶದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದಾಗಿರುವಾಗ ಅದು ಅರ್ಜಿ ಫಾರ್ಮ‌ನ ನಿಗದಿತ ಕಾಲಂನಲ್ಲಿ ಕಾಣಿಸಿಕೊಂಡರೆ ಅದನ್ನು ವಿಶೇಷ ಎಂದು ಪರಿಗಣಿಸಬೇಕಿಲ್ಲ. ಒಂದು ವೇಳೆ ಅಧ್ಯಕ್ಷ ಒಬಾಮಾ ಅಥವಾ ಅವರ ಸರ್ಕಾರಕ್ಕೆ ಸಂಬಂಧಿಸಿದ ಯಾರಾದರೂ ವಿಶೇಷ ಕಾಳಜಿಯಿಂದ ಕನ್ನಡವನ್ನು ಅಲ್ಲಿ ಕೂಡಿಸಿದ್ದರೆ ಖಂಡಿತವಾಗಿ ಕನ್ನಡಪ್ರಭ ಅಪರೂಪದ ಸುದ್ದಿ ಹೆಕ್ಕಿದೆ ಎಂದು ಹೆಮ್ಮೆಪಡಬಹುದಿತ್ತು. ತಾಂತ್ರಿಕವಾಗಿ ಸೇರಲ್ಪಟ್ಟ ಮಾಹಿತಿಯೊಂದನ್ನು, ಅಧ್ಯಕ್ಷ ಒಬಾಮಾ ಅವರೇ ಸೇರಿಸಿದರೋ ಎಂಬಂತೆ ಬಿಂಬಿಸುವುದು ಸುದ್ದಿಯ ಮೂಲ ಆಶಯವನ್ನೇ ತಿರುಚಿದಂತೆ.

ಸಾಧಾರಣ ಅಥವಾ ಸಹಜ ವಿಷಯಗಳು ವಿಪರೀತಾರ್ಥ ಪಡೆಯುವುದು ಇಂಥ ಧೋರಣೆಯಿಂದಾಗಿ. ಹೀಗಾಗಿ, ಇಲಿ ಹೋಯಿತು ಎಂಬುದು ತಿರುಚುವಿಕೆಯ ಭರದಲ್ಲಿ ಹುಲಿ ಹೋಯಿತು ಎಂಬಂತಾಗುತ್ತದೆ.

- ಚಾಮರಾಜ ಸವಡಿ

6 comments:

ವಿ.ರಾ.ಹೆ. said...

ನಿಜ ಸರ್, ಇಷ್ಟು ಮಾತ್ರದ ಬುದ್ದಿ ಇಲ್ಲದ ಜನ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವುದೇ ಅಥವಾ ಅಥವಾ ಬುದ್ದಿ ಇದ್ದರೂ ಸುದ್ದಿ ಹಾದರ ಮಾಡುತ್ತಿರುವುದೇ ದುರಂತ.

Chamaraj Savadi said...

ಥ್ಯಾಂಕ್ಸ್‌ ವಿಕಾಸ್‌. ಎಲ್ಲ ರಂಗದಲ್ಲೂ ಇರುವಂತೆ ನಮ್ಮ ಕ್ಷೇತ್ರದಲ್ಲೂ ಪ್ರಭೃತಿಗಳಿದ್ದಾರೆ. ಅವರು ಬರೆದಿದ್ದೇ ವರದಿ. ಉಲಿದಿದ್ದೇ ಸುದ್ದಿ. ಉಳಿದಿದ್ದೆಲ್ಲ ರದ್ದಿ.

Raveesh Kumar said...

ನಾನು ಕೂಡಾ ಕನ್ನಡ ಪ್ರಭದ ಮೊದಲನೇ ಪುಟದಲ್ಲಿ ಬ೦ದ ಈ ವರದಿ ನೋಡಿ ಆಶ್ಚರ್ಯ ಪಟ್ಟಿದ್ದೆ. ಆಮೇಲೆ ತಿಳಿಯಿತು ಒಬಾಮಾರಿಗೆ ಕನ್ನಡದ ಬಗ್ಗೆ ವಿಶೇಷ ಒಲವೇನು ಇಲ್ಲ ಎ೦ಬುದು. ಈ ಲೇಖನದ ಟೈಟಲ್ ಮಾತ್ರ ಓದಿದವನಿಗೆ ಕನ್ನಡ ಗೊತ್ತಿರುವುದು ಅಮೆರಿಕದಲ್ಲಿ ಕೆಲಸ ದೊರಕಲು ಒ೦ದು ಆಯ್ಕೆ ನಿಯಮವೆ೦ದೆನಿಸುತ್ತೆ!

ಆಲಾಪಿನಿ said...

:) enu maayavo....

Chamaraj Savadi said...

ಹೌದು ಶ್ರೀದೇವಿ, ಸುದ್ದಿ ಸುದ್ದಿಯಾಗದೇ ಅಬ್ಬರವಾಗಲು ಹೊರಟರೆ ಹೀಗಾಗುತ್ತದೆ.

Chamaraj Savadi said...

ನಿಮ್ಮ ಗ್ರಹಿಕೆ ಸರಿ ರವೀಶ್‌. ಕನ್ನಡಪ್ರಭ ಒಂದೇ ಅಲ್ಲ, ತುಂಬ ಪತ್ರಿಕೆ ಹಾಗೂ ಸುದ್ದಿ ಚಾನೆಲ್‌ಗಳು ಮಾಡುವ ಹಾಗೂ ಮಾಡಬಯಸುವ ಸಾಮಾನ್ಯ ತಪ್ಪಿದು.