Showing posts with label ಅಳವಂಡಿ. Show all posts
Showing posts with label ಅಳವಂಡಿ. Show all posts

ರಸ್ತೆ ನೆರಳಲ್ಲಿ ಮಲಗಿದ ಮಕ್ಕಳು ಮತ್ತು ನೆನಪುಗಳು...

9 May 2011

4 ಪ್ರತಿಕ್ರಿಯೆ
ನಾನು ಅಪ್ಪನಾಗಿ ಒಂಬತ್ತು ವರ್ಷಗಳಾದವು. ಅವತ್ತಿನಿಂದ ಅವ್ವ ಅಗಾಗ ತುಂಬ ನೆನಪಾಗುತ್ತಿರುತ್ತಾಳೆ.

ಆಗೆಲ್ಲ ಊರಿಗೆ ಫೋನ್ ಮಾಡುತ್ತೇನೆ. ಸುಮ್ಮನೇ ಹರಟುತ್ತೇನೆ. ಮಾತು ಬಾರದ, ಬಹುಶಃ ಎಂದಿಗೂ ಅರ್ಥಪೂರ್ಣವೆನಿಸುವ ರೀತಿ ಮಾತನಾಡಲು ಆಗದ ದೊಡ್ಡ ಮಗಳ ಕೈಗೆ ಫೋನ್ ಕೊಟ್ಟು, ಅವಳ ಕಿವಿಗೆ ಹಿಡಿಯುತ್ತೇನೆ. ಆ ಕಡೆಯಿಂದ ಅವ್ವನ ಧ್ವನಿ ಕೇಳುತ್ತಲೇ ಮಗಳು ಗೌರಿ ‘ಅಬುವಾ’ ಎಂದು ಕೂಗುತ್ತಾಳೆ. ಅವಳ ಭಾಷೆಯಲ್ಲಿ, ಅದಕ್ಕೆ ಅಜ್ಜಿ ಎಂಬರ್ಥ. ಅವ್ವ ಖುಷಿಯಾಗಿ, ನನ್ನ ಮಗಳಿಗಷ್ಟೇ ಅರ್ಥವಾಗುವ ರೀತಿ ಮಾತನಾಡುತ್ತಾ ಹೋಗುತ್ತಾಳೆ. ಈ ಕಡೆಯಿಂದ ಇವಳು, ಏಯ್, ಏಯ್, ಹ್ಹೂಂ ಎಂದೆಲ್ಲಾ ಕೂಗುತ್ತಿರುತ್ತಾಳೆ. 

ನಾನು ಮೂಕನಂತೆ ನೋಡುತ್ತಿರುತ್ತೇನೆ. ನನಗೆ ಇಬ್ಬರ ಭಾವನೆಗಳೂ ಅರ್ಥವಾಗುತ್ತವೆ. 

ಒಂದು ಹಂತದಲ್ಲಿ ಮಗಳು ಫೋನನ್ನು ನನ್ನ ಕೈಗಿತ್ತು ತನ್ನ ಜಗತ್ತಿಗೆ ಸರಿದುಹೋಗುತ್ತಾಳೆ. ಈಗ ತಾನೆ ಮೊದಲ ಬಾರಿ ಮನೆ ಬಿಟ್ಟು ಬಂದಿದ್ದೇನೋ ಎಂಬಂಥ ಕಾಳಜಿಯ ಮಾತುಗಳು ಆ ಕಡೆಯಿಂದ. ಊಟ ಆಯ್ತಾ? ಸರಿಯಾಗಿ ಊಟ ಮಾಡು. ಮಧ್ಯಾಹ್ನ ಏಕೆ ಊಟ ಬಿಟ್ಟಿದ್ದೀ? ವಯಸ್ಸಿನಲ್ಲಿ ಚೆನ್ನಾಗಿ ಉಣಬೇಕು. ಏನಪ್ಪಾ ನೀನು! ಓದೋವಾಗ ಸರಿಯಾಗಿ ಉಣ್ಣುವ ಯೋಗ ಇರಲಿಲ್ಲ. ಈಗ ಏಕೆ ಹೊಟ್ಟೆ ಕಟ್ಟುತ್ತೀ? ಎಂಬ ಥೇಟ್ ತಾಯಿಯ ಕರುಳು. ಕೆಲಸದ ಬಗ್ಗೆ, ನನ್ನ ನಿರಂತರ ಕೆಲಸ ಬದಲಿಸುವಿಕೆ ಬಗ್ಗೆ ಆಕೆಯ ಕಾಳಜಿ. ಹಿತ್ತಿಲಲ್ಲಿ ಬೆಳೆಸಿರುವ ಗಿಡಬಳ್ಳಿಗಳು, ಧಗೆಯುಕ್ಕಿಸುವ ಬೇಸಿಗೆ ಬಿಸಿಲು, ನೆಂಟರು, ಪರಿಚಯದವರ ಮದುವೆಗಳು, ಇಹಯಾತ್ರೆ ಮುಗಿಸಿದವರ ವಿವರಗಳು ರವಾನೆಯಾಗುತ್ತವೆ. ಸುಮ್ಮನೇ ಹೂಂಗುಟ್ಟುತ್ತ ಹೋಗುತ್ತೇನೆ. ಆಕೆ ಹೇಳುವ ಎಷ್ಟೋ ವಿವರಗಳು ನನ್ನ ಮನಸ್ಸಿಗೆ ಬಲು ಮಸುಕು.

ಏಕೆಂದರೆ, ೧೯೮೪ರಲ್ಲಿ ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಇನ್ನೂ ಅಲೆಮಾರಿಯಂತೆ ಸುತ್ತುತ್ತಲೇ ಇದ್ದೇನೆ. ಆಗ ನಮ್ಮೂರಲ್ಲಿ ಟಿವಿ ಕೂಡ ಬಂದಿರಲಿಲ್ಲ. ಫೋನು ಲಕ್ಷುರಿ. ೧೫ ಪೈಸೆಯ ಅಂಚೆ ಕಾರ್ಡ್ ಹಾಗೂ ಸದಾ ಕೆಟ್ಟ ಸುದ್ದಿಗಳನ್ನೇ ತರುತ್ತಿದ್ದ ಟೆಲಿಗ್ರಾಮ್ ಆಗ ಬಲು ಫೇಮಸ್! ಸಂಯುಕ್ತ ಕರ್ನಾಟಕ ಬೆಳಿಗ್ಗೆ ೧೦ಕ್ಕೆಲ್ಲಾ ಬಂದರೆ, ಪ್ರಜಾವಾಣಿ ಮರುದಿನ ಮಧ್ಯಾಹ್ನ ಬರುತ್ತಿತ್ತು. ಅಂಥ ಕಾಲದಲ್ಲಿ ಊರು ಬಿಟ್ಟವನಿಗೆ ಇಹಲೋಕದ ಯಾತ್ರೆ ಮುಗಿಸಿದವರ ಹಾಗೂ ಅವರ ಕರುಳುಬಳ್ಳಿಗಳ ಮುಖಗಳ ನೆನಪಾದರೂ ಹೇಗೆ ಉಳಿದೀತು?

ಅವ್ವನಿಗೆ ಫೋನಿಡುವ ಮನಸ್ಸಿರುವುದಿಲ್ಲ. ಅಷ್ಟೊತ್ತಿಗೆ ನನಗೆ ಸಣ್ಣಗೇ ಊರಿನ ಗೀಳು ಶುರುವಾಗಿರುತ್ತದೆ. ಒಂದಲ್ಲ ಒಂದಿನ ಈ ಜಂಜಡಗಳನ್ನೆಲ್ಲ ಕೈಬಿಟ್ಟು ವಾಪಸ್ ಊರಿಗೆ ಹೋಗಬೇಕೆನ್ನುವ ಆಸೆಯನ್ನು ಇವತ್ತಿಗೂ ಜೀವಂತವಾಗಿಟ್ಟುಕೊಂಡಿರುವುದರಿಂದ, ನನ್ನ ಬಾಲ್ಯ ಸಣ್ಣಗೇ ಕಾಡತೊಡಗುತ್ತದೆ. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿರದ, ಊರಿನಿಂದ ೬೦ ಕಿಮೀ ದೂರ ಓಡಾಡಿರದ ಅಪ್ಪಟ ೧೬ ವರ್ಷಗಳನ್ನು ಅಲ್ಲಿ ಕಳೆದಿದ್ದೇನೆ. ಸಕ್ಕರೆ, ಅಕ್ಕಿಯಂಥ ಇವತ್ತಿನ ಅತಿ ಸಾಮಾನ್ಯ ದಿನಸಿಯನ್ನು ಅತ್ಯಂತ ಉಳ್ಳವರು ಮಾತ್ರ ನಿತ್ಯ ಬಳಸುತ್ತಿದ್ದಂಥ ಕಾಲವದು. ಅಂಥದೊಂದು ಊರಿನ ನೆನಪು ಇವತ್ತಿಗೂ ನನ್ನ ನಿತ್ಯ ಕನಸುಗಳಲ್ಲಿ ಒಂದು 

ಅವ್ವನೊಂದಿಗೆ ಮಾತನಾಡಿ ಫೋನಿಟ್ಟ ನಂತರ ನಾನು ಕೊಂಚ ಮಂಕಾಗುತ್ತೇನೆ. ನನಗೆ ಅವ್ವನೆಂದರೆ ನನ್ನೂರು. ನನ್ನೂರೆಂದರೆ ನನ್ನ ಬಾಲ್ಯ. ನನ್ನ ಬಾಲ್ಯವೆಂದರೆ ನನ್ನ ಅಪಾರ ಏಕಾಂಗಿತನ ಹಾಗೂ ಅಪ್ಪಟ ಕನಸುಗಳು. ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಮುಂದೆ ಅರ್ಧ ದೇಶ ಸುತ್ತಾಡಿದೆ. ತರಹೇವಾರಿ ಕೆಲಸ ಮಾಡಿದೆ. ಬದುಕು ನಾನಾ ರೀತಿಯ ಪೆಟ್ಟುಗಳನ್ನು ಕೊಟ್ಟು ನನ್ನನ್ನು ತಿದ್ದಿತು. ಕೆಲವೊಂದು ಪೆಟ್ಟುಗಳನ್ನು ನಾನೇ ಕೊಟ್ಟುಕೊಂಡು ತಿದ್ದಿಕೊಂಡೆ. ಎಲ್ಲಾ ಪ್ರಯೋಗಗಳ ಫಲವಾಗಿ, ಪರವಾಗಿಲ್ಲ, ಈಗ ನೆಮ್ಮದಿಯಿಂದ ಉಸಿರಾಡಬಹುದು ಎಂಬ ದಿನಗಳು ಬಂದಾಗೆಲ್ಲ ನನ್ನೂರಿನ ನೆನಪು, ಅವ್ವನ ಪ್ರೀತಿ ನನ್ನನ್ನು ಮತ್ತೆ ಮತ್ತೆ ಕಾಡಿದೆ.

ಎಲ್ಲಕ್ಕಿಂತ ತೀವ್ರವಾಗಿ ಈ ನೆನಪುಗಳು ಉಕ್ಕತೊಡಗಿದ್ದುದು ನಾನು ತಂದೆಯಾದ ನಂತರದಿಂದ. ಮೊದಲ ಮಗಳು ವಿಶಿಷ್ಟಚೇತನೆಯಾಗಿದ್ದರಿಂದ, ಒಂಬತ್ತು ವರ್ಷಗಳಾಗಿದ್ದರೂ ಆಕೆ ನಮಗಿನ್ನೂ ಪುಟ್ಟ ಮಗುವೇ. ಅದೊಂದು ಮುಗಿಯದ ಬಾಲ್ಯ. ನಾವು ನಿತ್ಯ ನವ ತಂದೆತಾಯಿಗಳು. ಪ್ರತಿ ದಿನ ನನಗೆ ಅವ್ವ ನೆನಪಾಗುತ್ತಾಳೆ. ಆರು ಮಕ್ಕಳನ್ನು ಆ ಬಡತನದಲ್ಲಿ ಆಕೆ ಹೇಗೆ ಸಲಹಿದಳು ಎಂದು ನಿತ್ಯ ಅಚ್ಚರಿಪಡುತ್ತೇನೆ. ನಾನು ಮೊದಲ ಬಾರಿ ಕ್ಯಾಡಬರೀಸ್‌ನಂಥ ಚಾಕೊಲೇಟ್ ತಿಂದಿದ್ದೇ ಮೊದಲ ಮಗಳು ಹುಟ್ಟಿದ ನಂತರ ಎಂಬುದನ್ನು ನೆನೆದಾಗ, ಅವ್ವ ಮಾಡಿದ ತ್ಯಾಗ ನಿತ್ಯ ಕಣ್ಮುಂದೆ ಬರುತ್ತಲೇ ಇರುತ್ತದೆ. 

ತೀರಾ ಖಾಸಗಿ ಎನಿಸುವಂಥ ನೆನಪುಗಳವು. ಅಂಥ ಸಾವಿರ ಸಾವಿರ ನೋಟಗಳನ್ನು ನಾನು ಓಡಾಡಿದ ಊರುಗಳಲ್ಲೆಲ್ಲ ನೋಡಿದ್ದೇನೆ, ನೋಡುತ್ತಿದ್ದೇನೆ. ಸಣ್ಣ ನೆರಳಲ್ಲಿ ಎಳೆಮಕ್ಕಳನ್ನು ಮಲಗಿಸಿ ಕೆಲಸ ಮಾಡುವ ತಾಯಂದಿರ ನೋಟಗಳು ನನ್ನನ್ನು ಮಂಕಾಗಿಸುತ್ತವೆ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ನನ್ನ ತಮ್ಮ ಮತ್ತು ತಂಗಿಯರನ್ನು ನಾನು ನೋಡಿಕೊಳ್ಳುತ್ತಿದ್ದ ದಿನಗಳು ಕಣ್ಮುಂದೆ ಬರುತ್ತವೆ. ಅವ್ವ ಹೊಲದಿಂದ ರಾತ್ರಿ ಹಿಂದಿರುಗುವವರೆಗೂ ಅವರ ಜವಾಬ್ದಾರಿ, ಮನೆ ಕಾಯುವ ಕೆಲಸ ನನ್ನ ಮೇಲಿತ್ತು. ದೂರದಲ್ಲಿದ್ದ, ನಿತ್ಯ ಬಾರದ ನಲ್ಲಿಯ ನೀರು ಸಿಕ್ಕದೇ, ಬಾವಿಯಿಂದ ನೀರು ಸೇದುವ; ವಿದ್ಯುತ್ತಿಲ್ಲದ ದೊಡ್ಡ ಮನೆಯಲ್ಲಿರಲು ಭಯಪಡುತ್ತಿದ್ದ ತಂಗಿ-ತಮ್ಮಂದಿರನ್ನು ಪುಟ್ಟ ಕಂದೀಲಿನ ಸುತ್ತ ಕೂಡಿಸಿ ಮಾತನಾಡುತ್ತಿದ್ದ ದಿನಗಳು ನೆನಪಾಗುತ್ತವೆ. ಅವ್ವ ಮನೆಗೆ ಬಂದ ನಂತರವೇ ಖುಷಿ ಉಕ್ಕುತ್ತಿತ್ತು. ಆನಂತರವಷ್ಟೇ ನಾನು ಪುಸ್ತಕ ತೆರೆಯುತ್ತಿದ್ದುದು. ಹಾಗೆ, ಆ ಕಂದೀಲಿನ ಮಂದ ಬೆಳಕಲ್ಲಿ ಓದಿದ ದಿನಗಳ ತೀವ್ರ ಖುಷಿಯೇ ಇವತ್ತಿಗೂ ನನ್ನನ್ನು ರಾತ್ರಿ ಎಚ್ಚರವಾಗಿಡುತ್ತದೆ. ನನ್ನ ಸಾವಿರ ಸಾವಿರ ನೆನಪುಗಳಿಗೆ ರಾತ್ರಿಯ ನೀರವತೆ, ಮಂದ ಬೆಳಕು, ನಿಶ್ಯಬ್ದ ಪುಟ ನೀಡುತ್ತವೆ.

ವಿಶ್ವ ಅಮ್ಮಂದಿರ ದಿನ ಎಂಬ ನೆಪದಲ್ಲಿ ಇವೆಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ. ದಿನಾಚರಣೆಗೂ ನೆನಪುಗಳಿಗೂ ಸಂಬಂಧವಿಲ್ಲ. ಅವು ನಿತ್ಯನೂತನ. ಅವು ಉಕ್ಕಲು ಇವೆಲ್ಲ ಕೇವಲ ನೆಪ ಮಾತ್ರ ಎಂಬುದು ಗೊತ್ತಿದ್ದರೂ, ಬೀದಿಯ ನೆರಳಿನಲ್ಲಿ ಮಕ್ಕಳನ್ನು ಮಲಗಿಸಿ, ಕೆಲಸ ಮಾಡುತ್ತಿರುವ ತಾಯಂದಿರನ್ನು ನೋಡಿದಾಗ, ಮನಸ್ಸು ಕರಗುತ್ತದೆ. ಆ ತಾಯಂದಿರು ನನ್ನ ಅವ್ವನನ್ನು ನೆನಪಿಸುತ್ತಾರೆ. ಬದುಕಿನ ಕಠೋರತೆ ನೆನಪಾಗುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥ, ದ್ವೇಷ ನೆನಪಾಗುತ್ತವೆ. ಆ ಮಕ್ಕಳು ಬೀದಿಯಲ್ಲಿರಲು ಎಲ್ಲೋ ನಾವೂ ಕಾರಣಕರ್ತರೆಂಬ ಅಪರಾಧಿ ಭಾವನೆ ದಟ್ಟವಾಗುತ್ತದೆ. ಮೋಹದಲ್ಲಿ, ಸಿಂಗಾರದಲ್ಲಿ, ಅಬ್ಬರದ ಶಬ್ದ, ಕಣ್ಣು ಕೋರೈಸುವ ಬೆಳಕಿನ ಜಗತ್ತಿನಲ್ಲಿ ಇಂಥ ಭಾವನೆಗಳು ಪಳೆಯುಳಿಕೆಗಳಂತೆ ಕಾಣಬಹುದು. ಅವರವರು ಪಡೆದುಕೊಂಡು ಬಂದಿದ್ದು ಎಂಬ ಒಣಮಾತು ನೆನಪಾಗಬಹುದು. ಹೀಗಿದ್ದರೂ, ಈ ಮಕ್ಕಳು, ಈ ತಾಯಂದಿರು ನನಗೆ ನನ್ನೂರನ್ನು, ನನ್ನವ್ವನನ್ನು, ನನ್ನ ಬಾಲ್ಯವನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಮಂಕಾಗಿಸುತ್ತಾರೆ.

ಈ ಎಲ್ಲಾ ಮಕ್ಕಳು ನಳನಳಿಸುತ್ತ ಬೆಳೆಯಲಿ. ದೊಡ್ಡವರಾಗಲಿ. ಮುಂದೊಂದು ದಿನ ತಮ್ಮ ಮಕ್ಕಳ ಕೈಯಿಂದ ದೂರದಲ್ಲೆಲ್ಲೋ ಇರುವ ತಮ್ಮ ತಾಯಂದಿರಿಗೆ ಫೋನ್ ಮಾಡಿಸಲಿ. ಹಳೆಯ ನೆನಪುಗಳನ್ನು ಕೆದಕಿಕೊಳ್ಳಲಿ. ಮತ್ತೆ ಊರಿಗೆ ಹೋಗುವ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲಿ. ನೆಮ್ಮದಿ ಎಂಬುದು ಎಲ್ಲರ ಹಕ್ಕು. ಮತ್ತು, ಅದನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ ಕೂಡಾ ಎಂಬುದು ಅವರಿಗೆ ಮನದಟ್ಟಾಗಲಿ-

ಹಾಗಂತ ಆಶಿಸುತ್ತಾ, ಬರೆಯುತ್ತಾ ಮೌನವಾಗುತ್ತೇನೆ. ಮನಸ್ಸಿನ ತುಂಬ ಊರಿನ, ಅವ್ವನ, ಬಾಲ್ಯದ ನೆನಪು. 

- ಚಾಮರಾಜ ಸವಡಿ
(ಚಿತ್ರ ಕೃಪೆ: ಪ್ರಜಾವಾಣಿ, ಛಾಯಾಗ್ರಾಹಕ: ಶಿವಮೊಗ್ಗ ಯೋಗರಾಜ್‌)

ನಕ್ಷತ್ರಗಳಿಗೊಂದು ಮೊರೆ

16 Apr 2011

2 ಪ್ರತಿಕ್ರಿಯೆ
ಹೊರಗೆ ಸಣ್ಣಗೆ ಮಳೆ.
ಒಳಗೆ ದಟ್ಟೈಸಿದ ಕಾರ್ಮೋಡ. ಮಿಂಚಿಲ್ಲ, ಗುಡುಗಿಲ್ಲ. ಹನಿಯುತ್ತಿರುವ ಸೋನೆ ಮಳೆ ಬಿರುಮಳೆಯಾಗುವ ಸೂಚನೆಯೂ ಇಲ್ಲ.
ನನ್ನ ಹುಟ್ಟೂರು ಅಳವಂಡಿ ನೆನಪಾಗುತ್ತಿದೆ. 
ಯಾವುದೇ ಸಣ್ಣ ಖುಷಿಯಿರಲಿ, ನೋವಿರಲಿ, ವಂಚನೆ ಆಘಾತ ಕಳವಳ ಖಿನ್ನತೆ ಅಪರಾಧಿ ಭಾವನೆ- ಹೀಗೆ ಯಾವ ಭಾವ ಉಕ್ಕಿದರೂ ಜೊತೆಗೆ ಊರ ನೆನಪು ಉಕ್ಕುತ್ತದೆ. ಇವತ್ತೂ ಹಾಗೇ ಆಯಿತು. ಬಹುದಿನಗಳಿಂದ ರೂಢಿ ಮಾಡಿಕೊಂಡಿರುವ, ಇನ್ನೂ ಅನಾವರಣಗೊಳ್ಳಬೇಕಾಗಿರುವ ವೆಬ್‌ಸೈಟೊಂದಕ್ಕೆ ಎಂದಿನಂತೆ ದಿನದ ಸುದ್ದಿಗಳನ್ನು ಪೋಣಿಸುತ್ತಿದ್ದ ಹೊತ್ತಿನಲ್ಲಿ, ಸದ್ದಿಲ್ಲದೇ ಕರೆಂಟ್ ಮಾಯ. ನಾನಿದ್ದೇನೆ ಬಿಡು ಎಂಬಂತೆ ಯುಪಿಎಸ್ ವಿದ್ಯುತ್ ಬೆಳಗಿದರೂ ಹೊರಗೆ ಓಣಿಯಲ್ಲೆಲ್ಲ ಕವಿದ ಕತ್ತಲಲ್ಲಿ, ಲೈಟಿರುವ ನನ್ನ ಮನೆ ವಿಚಿತ್ರವಾಗಿ ಕಾಣುತ್ತಿದೆ. ಮನೆಯೊಳಗಿನ ಅನಗತ್ಯ ದೀಪಗಳನ್ನಾರಿಸಿ, ಮತ್ತೆ ನನ್ನ ಕೋಣೆಯಲ್ಲಿ ಬಂದು ಕೂತೆ. 
ಹೊರಗೆ ಬೆಳಕಿದ್ದರೂ ಒಳಗೆ ಕತ್ತಲು.
ನನ್ನ ಬಹುತೇಕ ಬದುಕು ಸಾಗಿ ಬಂದ ಪರಿಗೆ ಸಾಕ್ಷಿಯೆಂಬಂತೆ ಈ ವೈರುದ್ಧ್ಯ ರಾಚುತ್ತದೆ. ಹೊರಗೆ ಬೆಳಕಿದ್ದಾಗ ನನ್ನೊಳಗೆ ಕತ್ತಲು, ಒಳಗೆ ಬೆಳಕು ಅರಳಿ ನಿಂತ ಹೊತ್ತಿನಲ್ಲಿ ಹೊರಗೆ ಕತ್ತಲು ಕವಿದಿರುತ್ತದೆ. ಸ್ವಾನುಕಂಪವಲ್ಲ. ಹುಚ್ಚುತನವೂ ಅಲ್ಲ. ಎಷ್ಟೋ ಸಾರಿ ಈ ವೈರುದ್ಧ್ಯ ಕುರಿತು ಯೋಚಿಸಿದ್ದೇನೆ. ಪದೆ ಪದೆ ಏಕೆ ಹೀಗಾಗುತ್ತದೆ ಅಂತ ಅಚ್ಚರಿಪಟ್ಟಿದ್ದೇನೆ. ಬ್ಯಾಟಿಂಗ್ ಬರುವ ಹೊತ್ತಿಗೆ ಓವರ್‌ಗಳು ಮುಗಿದಂತೆ, ನಿರೀಕ್ಷಿಸಿದ್ದು ಬಂತೆಂಬ ಸಡಗರದಿಂದ ಎದ್ದು ನಿಲ್ಲುವ ಮುನ್ನವೇ ಅದು ಸದ್ದಿಲ್ಲದೇ ಇಲ್ಲವಾಗಿರುತ್ತದೆ.
ಹೊರಗೆ ಸಣ್ಣಗೆ ಮಳೆ.
ಸುದ್ದಿ ಜೋಡಿಸಿಯಾಯ್ತು. ದಿನದ ಮುಖ್ಯ ಘಟ್ಟವೊಂದು ಮುಗಿದ ನಿರಾಳತೆ. ಸಿದ್ಧಗೊಳ್ಳುತ್ತಿರುವ ವೆಬ್‌ಸೈಟ್‌ನಲ್ಲಿ ಈ ಸುದ್ದಿಗಳು ಹೇಗೆ ಕಾಣಬಹುದೆಂಬ ಬಸಿರಿ ತಾಯಿಯ ಕನಸೊಂದು ಎಂದಿನಂತೆ ಅರಳುತ್ತದೆ. ಕೆಲ ಕ್ಷಣ ಆ ನಿರಾಳತೆಯಲ್ಲಿ ಮನಸಾರೆ ಮುಳುಗುತ್ತೇನೆ. 
ಆದರೆ, ಅದು ಕೆಲ ಕ್ಷಣಗಳ ಕಾಲ ಮಾತ್ರ.
ಸಣ್ಣಗೇ ಉಕ್ಕತೊಡಗುವ ಖಿನ್ನತೆ ಊರಿನ ನೆನಪುಗಳನ್ನು ಹೊತ್ತು ತರುತ್ತದೆ. ನನ್ನೂರಿನ ಮಣ್ಣಿನ ಮಾಳಿಗೆಯ ಮೇಲೆ, ನೆಲದ ಮೇಲೆ ಏನನ್ನೂ ಹಾಸದೇ, ಹಾಗೇ ಮಲಗಿ, ಕಣ್ಣು ಕೋರೈಸುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದ ದಿನಗಳು ನೆನಪಾಗುತ್ತವೆ. ನನ್ನೊಳಗಿರುವ ಕನಸುಗಳಿಗೆ ಶಕ್ತಿ ಕೊಟ್ಟ ದಿವ್ಯ ದೇವತೆಗಳವು. ಸವಾಲುಗಳನ್ನು ಎದುರಿಸುವ ಕೆಚ್ಚು ತುಂಬಿದ ಕಿಡಿಗಳವು. ಇವತ್ತೇಕೋ ಹನಿಯುತ್ತಿರುವ ಮಳೆಯ ನಡುವೆ, ಉಕ್ಕತೊಡಗಿರುವ ಖಿನ್ನತೆಯ ಮಧ್ಯೆ, ನನ್ನೂರಿನ ದಿವ್ಯ ಆಗಸದ ಆ ನಕ್ಷತ್ರಕಿಡಿಗಳು ಮತ್ತೆ ಮತ್ತೆ ನೆನಪಾಗತೊಡಗಿವೆ.
ಕೆಲಸ ಮುಗಿದಿದ್ದರಿಂದ, ಯುಪಿಎಸ್ ಏಕೆ ದಣಿಸಬೇಕೆಂದು ಲೈಟಾರಿಸಿ ಕತ್ತಲಲ್ಲಿ ಸುಮ್ಮನೇ ಕೂಡುತ್ತೇನೆ. ಊರ ಮುಗಿಲಿನೊಳಗೆ ಅರಳಿ ನಿಲ್ಲುತ್ತಿದ್ದ ನಕ್ಷತ್ರಗಳು ಛಾವಣಿಯಲ್ಲಿ ಕಂಡಾವೇನೋ ಎಂಬ ವಿಚಿತ್ರ ಆಸೆ. ಆದರೆ, ಬೆಂಗಳೂರಿನ ಬಯಲಲ್ಲಿ ನಿಂತರೂ ಬೆಳಕಿನ ಮೋಡದ ಮಧ್ಯೆ ಮಂಕಾಗುವ ನಕ್ಷತ್ರಗಳು, ಲೈಟಾರಿಸಿದ ಛಾವಣಿಯಲ್ಲಿ ಕಂಡಾವಾದರೂ ಹೇಗೆ? ಮತ್ತದೇ ಕತ್ತಲು, ಏಕಾಂತ, ಖಿನ್ನತೆ. 
ಒಂದು ಸ್ನಿಗ್ಧ ಪ್ರೀತಿಗಾಗಿ ಹಂಬಲಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಓದಲು ಪಠ್ಯಪುಸ್ತಕ ಬಿಟ್ಟು ಬೇರೊಂದು ಸಿಗದ ವಾತಾವರಣದಲ್ಲಿ ಪುಕ್ಕಟೆ ಕನಸುಗಳನ್ನು ಕಾಣುವುದು ಬಿಟ್ಟು ಬೇರೆ ದಾರಿ ಇದ್ದಿಲ್ಲ. ರಜಾ ದಿನಗಳು ಬಂದಾಗ, ಪಠ್ಯಪುಸ್ತಕಗಳ ಓದೂ ಇಲ್ಲವಾಗುತ್ತಿತ್ತು. ನನ್ನ ಮುಂದಿನ ತರಗತಿಯ ಕನ್ನಡ ವಿಷಯದ ಪುಸ್ತಕವನ್ನು ಅದ್ಹೇಗೋ ಹೊಂಚಿಕೊಂಡು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದ್ದೆ. ನಂತರ ಬಿರು ಬಿಸಿಲು, ಕಡು ಸೆಕೆ ಮತ್ತು ಕನಸುಗಳೊಳಗೆ ಬದುಕು ಮುಳುಗಿಹೋಗುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಹಪ್ಪಳ-ಸಂಡಿಗೆ-ಉಪ್ಪಿನಕಾಯಿ-ಶ್ಯಾವಿಗೆ ತಯಾರಿಯ ಸಡಗರದಲ್ಲಿ ಅರೆಮನಸ್ಸಿನಿಂದ ತೊಡಗಿಕೊಂಡ ಮನಸ್ಸು ಸಂಜೆಯಾಗುವುದನ್ನೇ ಕಾಯುತ್ತಿತ್ತು.
ಸಾಮಾನ್ಯವಾಗಿ ಕರೆಂಟಿಲ್ಲದಿರುತ್ತಿದ್ದ ರಾತ್ರಿಗಳಲ್ಲಿ ಮಾಳಿಗೆ ಮೇಲೆ ಹೋಗಿ ಅಂಗಾತ ಮಲಗಿಕೊಂಡು ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ಸಾವಿರಾರು ಕನಸುಗಳನ್ನು ಆ ನಕ್ಷತ್ರಗಳು ನನ್ನೊಳಗೆ ತುಂಬಿವೆ. ಅವುಗಳೊಂದಿಗೆ ಸುದೀರ್ಘ ಮೌನ ಸಂಭಾಷಣೆ ನಡೆಸಿದ್ದೇನೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದೇನೆ. ನನ್ನ ನಿರಾಶೆಗಳನ್ನು ಅವು ಸಂತೈಸಿವೆ. ನೋವನ್ನು ಸಹನೀಯವಾಗಿಸಿವೆ. ಮೌನ ಸಾಂಗತ್ಯದಲ್ಲೂ ಪರಮಶಕ್ತಿಯಿದೆ ಎಂಬುದನ್ನು ಮೌನವಾಗಿಯೇ ನನ್ನೊಳಗೆ ತುಂಬಿವೆ. ನಕ್ಷತ್ರಗಳ ಲೋಕದೊಳಗಿನ ಆ ಪಯಣ ಇವತ್ತಿಗೂ ನನ್ನ ಅತ್ಯಂತ ಸ್ಮರಣೀಯ ನೆನಪುಗಳಲ್ಲಿ ಒಂದು.
‘ಕತ್ತಲ್ದಾಗ ಒಬ್ನ ಕೂತು ಏನ್ ಮಾಡ್ತೀ?’ ಎಂದು ಮನೆಯವರು ಆಗಾಗ ಕೇಳುತ್ತಿದ್ದರು. ಏನಂತ ಹೇಳೋದು. ಓರಗೆಯ ಹುಡುಗರು ಕತ್ತಲು ತುಂಬಿದ ಓಣಿಗಳಲ್ಲಿ ಕಳ್ಳ-ಪೊಲೀಸ್ ಆಟವಾಡುತ್ತಿರುವಾಗ ಇವನೊಬ್ಬ ಮೇಲೆ ಹೋಗಿ ಏನು ಮಾಡ್ತಾನೆ ಎಂಬ ಗೊಂದಲ ಅವರದಾಗಿತ್ತು. ಕ್ರಮೇಣ ನನ್ನ ಅನ್ಯಮನಸ್ಕತೆ, ಅಂತರ್ಮುಖತೆ ಅವರಿಗೆ ಅರ್ಥವಾಯಿತೋ ಅಥವಾ ಇವನಿಗೆ ಹೇಳಿ ಉಪಯೋಗವಿಲ್ಲ ಎಂದು ಅಂದುಕೊಂಡರೋ- ಒಟ್ಟಿನಲ್ಲಿ ಪ್ರಶ್ನಿಸುವುದು ತಪ್ಪಿತು. ನಾನು ಮತ್ತಷ್ಟು ಆನಂದದಿಂದ ನಕ್ಷತ್ರ ಸಾಂಗತ್ಯದಲ್ಲಿ ಮುಳುಗಿಹೋದೆ.
ಎಸ್ಸೆಸ್ಸೆಲ್ಸಿ ಮುಗಿಸಿ ಮುಂದಿನ ಓದಿಗೆಂದು ಮೊದಲ ಬಾರಿ ಹುಟ್ಟಿ ಬೆಳೆದ ಊರು ಬಿಡಬೇಕಾಗಿ ಬಂದಾಗ ಇವೇ ನಕ್ಷತ್ರಗಳ ಬಳಿ ಅತ್ತಿದ್ದೆ. ಮುಂದಿನ ಬದುಕು ಹೇಗೋ ಎಂದು ಕಳವಳಪಟ್ಟಿದ್ದೆ. ಉಕ್ಕುತ್ತಿದ್ದ ಕನಸುಗಳಿಗೆ, ನವಿರು ಭಾವನೆಗಳಿಗೆ ಸ್ಪಷ್ಟರೂಪ ಕೊಡಲಾಗದೇ ಒದ್ದಾಡಿದ್ದೆ. ಏರ್‌ಫೋರ್ಸ್‌ಗೆ ನೇಮಕವಾದಾಗಲೂ ಇವೇ ನಕ್ಷತ್ರಗಳು ನನಗೆ ದಾರಿ ತೋರಿದ್ದವು. ನನ್ನೂರಿನಲ್ಲಿ ಕಂಡ ಅವೇ ನಕ್ಷತ್ರಗಳನ್ನು ಕಚ್ಛ್‌ನ ರಣಪ್ರದೇಶದ ಆಗಸದಲ್ಲೂ ಕಂಡಿದ್ದೇನೆ. ಊರು ಸೇರಿದ ನೆಮ್ಮದಿ ಅನುಭವಿಸಿದ್ದೇನೆ.
ಮೋಡ ಮುಸುಕಿ ಮುಸುಮುಸು ಅಳುತ್ತಿರುವ ಬೆಂಗಳೂರಿನ ಆಗಸ ಏಕೋ ನನ್ನೂರ ನಕ್ಷತ್ರಗಳನ್ನು ನೆನಪಿಸುತ್ತಿದೆ. ಸಣ್ಣಗೇ ಖಿನ್ನತೆ ಉಕ್ಕುತ್ತಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬದಲಾಗುತ್ತಿರುವ ವೃತ್ತಿ ಜೀವನದ ಮಧ್ಯೆ ನನ್ನ ಪ್ರವೃತ್ತಿ ಬದಲಾಗದೇ ಹಾಗೇ ಉಳಿದಿರುವ ಬಗ್ಗೆ ಅಚ್ಚರಿಯೂ ಆಗುತ್ತಿದೆ. ನನ್ನ ಸೋಲುಗಳಿಗೆ ಈ ನಿರ್ಲಿಪ್ತಭಾವವೇ ಕಾರಣವಾ ಎಂಬ ಗೊಂದಲವೂ ಕಾಡುತ್ತಿದೆ.
ಕೂತ ಕೋಣೆಯ ಛಾವಣಿಯನ್ನೇ ಮತ್ತೆ ಮತ್ತೆ ದಿಟ್ಟಿಸುತ್ತೇನೆ. ಇವತ್ತೇಕೋ ನಾನು ಗೊಂದಲದಲ್ಲಿದ್ದೇನೆ. ಮಿತಿ ದಾಟಿದ ಮಾತೊಂದು ಮನನೋಯಿಸಿತಾ ಎಂಬ ಅಪರಾಧಿ ಭಾವನೆಯೊಂದಿದೆ. ಇತ್ತೀಚೆಗೇಕೋ ತೋರದ ಹಸಿವು ಬಾರದ ನಿದ್ದೆಗಳ ಬಗ್ಗೆ ತಕರಾರಿದೆ. ಇವೆಲ್ಲ ಸೇರಿ ಗೊಂದಲಗೊಂಡಿದ್ದೇನೆ. ಮಂಕಾಗಿದ್ದೇನೆ. ನಕ್ಷತ್ರಗಳ ಬಳಿ ಪರಿಹಾರ ಕಂಡುಕೊಳ್ಳಬೇಕಿದೆ.
ಆದರೆ, ಹೊರಗೆ ಮೋಡ ಮುಸುಕಿದ ಆಗಸ. ಒಳಕೋಣೆಯ ಛಾವಣಿಯೂ ಏಕೋ ಖಾಲಿಖಾಲಿ. ಕರೆಂಟಿಲ್ಲದ ರಾತ್ರಿಯಾಗಿದ್ದರೂ ನಕ್ಷತ್ರಗಳು ಕಾಣುತ್ತಿಲ್ಲ. ಮನಸ್ಸಿನ ಮಂಕು ಕಳೆಯುತ್ತಿಲ್ಲ. ನಾನು ಮತ್ತೆ ಮತ್ತೆ ಅವನ್ನು ಕರೆಯುತ್ತಿದ್ದೇನೆ. ನನ್ನೂರಿನ ಕಡು ಕತ್ತಲೆಯ ಆಗಸದಲ್ಲಿ ಸದ್ದಿಲ್ಲದೇ ಮಿನುಗುತ್ತ ಸಂತೈಸುತ್ತಿದ್ದ ಅವು ಮತ್ತೆ ಮತ್ತೆ ನೆನಪಾಗುತ್ತಿವೆ. 
ಮಳೆ ಸದ್ದಿಲ್ಲದೇ ಹನಿಯುತ್ತಲೇ ಇದೆ, ಒಳಮನೆಯೊಳಗೆ ಕೂತ ನನ್ನಳಲನ್ನು ಅರ್ಥ ಮಾಡಿಕೊಂಡಂತೆ!
- ಚಾಮರಾಜ ಸವಡಿ

ಬಿಸಿಲೆಂಬ ನೆನಪ ಸಂಜೀವಿನಿ

10 Apr 2010

4 ಪ್ರತಿಕ್ರಿಯೆ
ಕಣ್ಣು ಕುಕ್ಕುವಂಥ ಬಿಸಿಲ ಪ್ರದೇಶದಲ್ಲಿ ಹುಟ್ಟಿ ಬೆಳೆದವನು ನಾನು. ಬಿಸಿಲು ನನಗೆ ಚೇತೋಹಾರಿ. ಎಷ್ಟೇ ಸೆಕೆ ಕಾಡಿದರೂ, ಮನಸ್ಸು ನನ್ನೂರನ್ನು ನೆನಪಿಸಿಕೊಳ್ಳುತ್ತಿರುತ್ತದೆ. ಸರಾಸರಿ ೪೨ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಬೇಸಿಗೆ ಕಳೆದ ನನಗೆ ಇವತ್ತಿಗೂ ಬಿಸಿಲು ಆಪ್ಯಾಯಮಾನ. 

ಬಿಸಿಲಿನಲ್ಲಿ ಅಷ್ಟೊಂದು ಓಡಾಡಿದರೂ ಆರಾಮವಾಗಿದ್ದೀಯಲ್ಲ ಮಾರಾಯ ಎಂದು ಗೆಳೆಯರು ಅಚ್ಚರಿಪಡುತ್ತಾರೆ. ಅದೇ ಬಿಸಿಲೂರಿನಿಂದ ಬಂದವಳಾಗಿದ್ದರೂ, ನನ್ನ ಹೆಂಡತಿಗೆ ಬಿಸಿಲು ಎಂದರೆ ಅಲರ್ಜಿ. ಆದರೆ, ನನಗೆ ಮಾತ್ರ ಬಿಸಿಲು ಎಂದರೆ ನನ್ನೂರು. ನಾನು ಹುಟ್ಟಿ ಬೆಳೆದ ಪರಿಸರ. ನನ್ನ ಬಾಲ್ಯ. ನನ್ನ ಪ್ರಾಥಮಿಕ ಕನಸುಗಳು. ನನ್ನ ಶಾಶ್ವತ ಕನವರಿಕೆ.

ಸಾವಿರ ಸಾವಿರ ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಬರ, ಬಡತನ, ಬವಣೆ, ಭಯವಷ್ಟೇ ಅಲ್ಲ, ನನ್ನ ಬದುಕು ಕೂಡ ಬಿಸಿಲ ಪ್ರದೇಶದಲ್ಲಿಯೇ ಅರಳಿದೆ. ಉರಿಯುವ ಸೂರ್ಯನೊಂದಿಗೆ, ಕಡು ಸೆಕೆಯೊಂದಿಗೆ ಶುರುವಾಗುವ ಬೇಸಿಗೆಯ ದಿನ, ಅದೇ ಕಡು ಸೆಕೆಯೊಂದಿಗೆ ಸಂಜೆಯಾಗಿ ಬದಲಾಗುತ್ತಿತ್ತು. ಕರೆಂಟಿಲ್ಲದ ರಾತ್ರಿಯ ಕಗ್ಗತ್ತಲೆಯಲ್ಲಿ, ಬೆಳಕಿನುಂಡೆಯಂಥ ನಕ್ಷತ್ರಗಳ ಆಗಸ. ಮಣ್ಣಿನ ಮನೆಯ ಮಾಳಿಗೆಯ ಮೇಲೆ ಹಳೆಯ ಜಮಖಾನಾ ಹಾಸಿಕೊಂಡು ಆಕಾಶಕ್ಕೆ ಮುಖವೊಡ್ಡಿ ಕಂಡ ಸಾವಿರ ಸಾವಿರ ಕನಸುಗಳು ಇವತ್ತಿಗೂ ನನ್ನ ಜೀವನದುಸಿರು. ಆ ಬಿಸಿಲ ಹೇಗೆ ಮರೆಯಲಿ?

ನನ್ನ ಮೊದಲ ತೀವ್ರ ನಿರಾಶೆ, ನೋವುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಹತ್ತನೆಯ ತರಗತಿಯ ಪರೀಕ್ಷೆ ಬರೆಯಲು ಮೊದಲ ಬಾರಿ ಹದಿನೈದು ದಿನಕ್ಕಿಂತ ಹೆಚ್ಚು ಕಾಲ ತಂಗಿದ್ದ ಪಟ್ಟಣ ಕೊಪ್ಪಳ ನನ್ನಲ್ಲಿ ಉಕ್ಕಿಸಿದ್ದ ದಿಗ್ಭ್ರಮೆ, ಕನಸು, ಕನವರಿಕೆಯನ್ನು ನಾನು ಪದೆ ಪದೆ ಅನುಭವಿಸಿದ್ದು ನನ್ನೂರಿನ ಬಿಸಿಲ ದಿನದ ರಾತ್ರಿಗಳಲ್ಲಿ. ಪಿಯುಸಿ ಓದಲು ದೂರದ ನರೇಗಲ್ಲಿಗೆ ಹೋಗಬೇಕೆಂಬ ಕಳವಳವನ್ನೂ ಅಲ್ಲಿಯೇ ಅನುಭವಿಸಿದ್ದು. ಹುಟ್ಟಿದಾಗಿನಿಂದ ಊರು ಬಿಟ್ಟು ಹೋಗಿರದ ನನಗೆ, ನರೇಗಲ್ಲಿಗೆ ಹೋಗುವಾಗ, ಹೋದ ನಂತರ ಆದ ತಳಮಳ ಅಷ್ಟಿಷ್ಟಲ್ಲ. 

ಇಂಥ ಹಲವಾರು ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ನಮ್ಮ ಹೊಲದಲ್ಲಿದ್ದ ಎರಡು ಜಾತಿಯ ಮಾವಿನ ಮರಗಳು, ಅವುಗಳ ಪರಿಮಳ, ಹಲ್ಲು ಚುಳಿಯುವಂತೆ ಮಾಡುತ್ತಿದ್ದ ಹುಳಿ ರುಚಿ, ಮಾವಿನ ಕಾಯಿಗಳನ್ನು ಹಣ್ಣಾಗಿಸಲು ಹಾಕಿದ್ದ ಬತ್ತದ ಹುಲ್ಲಿನ ವಿಚಿತ್ರ ಘಮ, ಕುಡಿಯುವ ನೀರು ತರಲು ಊರಾಚೆಯ ಕೆರೆಗೆ ಹೋಗುತ್ತಿದ್ದುದು, ಬತ್ತಿದ ದೊಡ್ಡ ಹಳ್ಳದ ಉಸುಕಿನ ಮಧ್ಯೆ ಕೂತು ಭವಿಷ್ಯದ ಕನಸುಗಳನ್ನು ಮಾತಾಗಿಸಿದ್ದು, ಕಾಡುತ್ತಿದ್ದ ಅಪಾರ ಹಸಿವು, ಏನು ಸಿಕ್ಕರೂ ಓದುವ ತೀವ್ರ ತುಡಿತ, ಕಾಣದ ಜಗತ್ತಿನೆಡೆಗಿನ ಬೆರಗು, ಪಟ್ಟಣಗಳು ಹುಟ್ಟಿಸುತ್ತಿದ್ದ ಕೀಳರಿಮೆ, ಅರಳುತ್ತಿದ್ದ ಪ್ರಾಯ, ಹೇಳತೀರದ ದುಗುಡ- ಇಂಥ ನೂರಾರು ಭಾವನೆಗಳಿಗೆ ಬಿಸಿಲು ಸಾಕ್ಷಿಯಾಗಿದೆ. 

ಇವತ್ತಿಗೂ ಶಿವರಾತ್ರಿ ಕಳೆದ ನಂತರ, ಮನಸ್ಸಿಗೆ ಸಣ್ಣಗೆ ದುಗುಡ ಕವಿಯಲಾರಂಭಿಸುತ್ತದೆ. ಬಿಸಿಲು ಬಲಿಯುತ್ತಿದ್ದಂತೆ ಊರಿನ ಹಂಬಲ, ಆಗಿನ ದಿನಗಳ ನೆನಪುಗಳು ಉಕ್ಕತೊಡಗುತ್ತವೆ. ಪತ್ರಿಕೆ ಓದುವಾಗ, ಬಿಸಿಲಿನ ಬಗ್ಗೆ ಬಂದ ವರದಿಗಳು ಊರನ್ನು ನೆನಪಿಸುತ್ತವೆ. ಅಲ್ಲಿ, ನನ್ನಂಥ ಇನ್ಯಾರದೋ ಪಾಲಿಗೆ ಈ ಬಿರು ಬಿಸಿಲು ಸಂಜೀವಿನಿಯಾಗುತ್ತಿದೆಯೇನೋ ಎಂಬ ಕುತೂಹಲ. ರಾತ್ರಿಯಾಗುತ್ತಿದ್ದಂತೆ, ಮಣ್ಣಿನ ಮನೆಗಳ ಮಾಳಿಗೆಗಳ ಮೇಲೆ ವಲಸೆ ಹೋಗುತ್ತಿದ್ದ ಜನ, ಅವರ ಕಷ್ಟಸುಖದ ಮಾತುಕತೆ, ಕಾಣುತ್ತಿದ್ದ ಕನಸು, ಮೇಲೆ ಕಪ್ಪಡರಿರುವ ಆಗಸದ ಚಾದರದೊಳಗಿಂದ ಕಿಂಡಿ ಕೊರೆದು ಇಣುಕಿ ನೋಡುವ ನಕ್ಷತ್ರ ಕಂಗಳು, ಅಲುಗದೇ ನಿಂತ ಮರದ ಎಲೆಗಳು, ಅಪರಾತ್ರಿ ಎಚ್ಚರವಾದಾಗ ತಾಕುತ್ತಿದ್ದ ನೀರವತೆ ಮತ್ತೆ ಮತ್ತೆ ನನಪಾಗುತ್ತವೆ. 

ಎಷ್ಟೋ ಸಾರಿ ರಾತ್ರಿ ಯೋಚಿಸುತ್ತ ಅಡ್ಡಾಗಿದ್ದವನಿಗೆ ಜೆಟ್‌ ವಿಮಾನಗಳ ಮಿಣುಕು ದೀಪಗಳು ಅಪಾರ ಅಚ್ಚರಿ ಹುಟ್ಟಿಸಿದ್ದಿದೆ. ನನ್ನೂರಾಚೆಯ ಜಗತ್ತು ನನಗೆ ತಿಳಿದಿರುವುದಕ್ಕಿಂತ ವಿಶಾಲವಾಗಿದೆ ಎಂಬ ಅಸ್ಪಷ್ಟ ಭಾವನೆಯನ್ನು ಬೆಳೆಸಿದ್ದಿದೆ. ಆ ಜಗತ್ತಿನೆಡೆಗೆ ನಾನು ಹೋಗಲೇಬೇಕಾಗುತ್ತದೆ ಎಂಬ ಅಸ್ಪಷ್ಟ ಅನಿಸಿಕೆ ದಿಗಿಲು ಮೂಡಿಸಿದ್ದಿದೆ. ಅಲ್ಲಿಯ ಜನ ಹೇಗೋ, ಅವರ ಬದುಕಿನ ರೀತಿ-ನೀತಿಗಳೇನೋ, ನಾನು ಅವನ್ನೆಲ್ಲ ಹೇಗೆ ಕಲಿತೇನು ಎಂಬ ಕಳವಳ ಉಕ್ಕಿಸಿದ್ದಿದೆ. ರಾತ್ರಿಯ ಕಡು ನೀರವತೆಯಲ್ಲಿ ಒಬ್ಬನೇ ಎದ್ದು ಕೂತು, ಜೋರು ನಿದ್ದೆಯಲ್ಲಿರುವವರನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಸುತ್ತಲೂ ಹಬ್ಬಿದ ಕತ್ತಲನ್ನು ಮೂದಲಿಸುವಂತೆ ಬೆಳಗುವ ನಕ್ಷತ್ರಗಳನ್ನು ಕಂಡು ಮೋಹಗೊಂಡಿದ್ದೇನೆ. ಸಾವಿರಾರು ಸುನೀತ ಭಾವನೆಗಳು ಆ ಕತ್ತಲಲ್ಲಿ ಮೂಡಿವೆ. ನಿರಾಶೆಗಳಿಗೆ ಸಮಾಧಾನ ದೊರೆತಿದೆ. 

ರಾತ್ರಿ ತುಂಬ ಹೊತ್ತು ಒಬ್ಬನೇ ಕೂತು ಓದುವ, ಬರೆಯುವ ಈ ದಿನಗಳಲ್ಲಿ ಬಿಸಿಲು ಮತ್ತೆ ಮತ್ತೆ ಕಾಡುತ್ತದೆ. ನನ್ನೂರು ಅಳವಂಡಿ ಮತ್ತೆ ಮತ್ತೆ ನೆನಪಾಗುತ್ತದೆ. ಎಲ್ಲರೂ ಜರಿಯುವ, ಶಪಿಸುವ, ಭಯಪಡುವ ಈ ಬಿರುಬಿಸಿಲು ಅದ್ಹೇಗೆ ನನ್ನ ಪಾಲಿಗೆ ಚೇತೋಹಾರಿಯಾಗಿದೆ ಎಂದು ನೆನೆನೆನೆದು ಅಚ್ಚರಿಪಡುತ್ತೇನೆ. ಮೆತ್ತಗೇ ಗೇಟು ತೆರೆದು, ರಸ್ತೆ ಮಧ್ಯೆ ನಿಂತು, ಆಗಸ ದಿಟ್ಟಿಸಿದರೆ, ನಗರದ ರಾತ್ರಿ ಬೆಳಕಿನ ರಭಸಕ್ಕೆ ನಕ್ಷತ್ರಗಳು ಮಂಕಾಗಿರುವುದು ರಾಚುತ್ತದೆ. 

ಅದನ್ನು ನೋಡುತ್ತಿದ್ದಂತೆ, ನನ್ನ ಮನಸ್ಸೂ ಏಕೋ ಮಂಕಾಗುತ್ತದೆ. 

- ಚಾಮರಾಜ ಸವಡಿ

ಇನ್ನು ಮುಗಿಯಿತು ಎ೦ದುಕೊ೦ಡಾಗ ಹೊಸ ಬದುಕು ಶುರುವಾಗುತ್ತದೆ

6 Oct 2009

12 ಪ್ರತಿಕ್ರಿಯೆ
ಅದೆಲ್ಲಾ ಆಗಿ ಇಪ್ಪತ್ತೈದು ವರ್ಷಗಳಾಗಿವೆ.

ಕೊಪ್ಪಳ ಜಿಲ್ಲೆಯ ಅದೇ ಹೆಸರಿನ ತಾಲ್ಲೂಕಿನ ದೊಡ್ಡ ಊರುಗಳಲ್ಲಿ ಒ೦ದಾದ ಅಳವ೦ಡಿ ಇಪ್ಪತ್ತೈದು ವರ್ಷಗಳ ಹಿ೦ದೆ ಹೀಗಿರಲಿಲ್ಲ. ಊರು ತು೦ಬಾ ನಿರುದ್ಯೋಗ, ನಿರಾಸೆ, ರಾಜಕಾರಣಿಗಳ ಸ೦ಖ್ಯೆಯಾಗಲೀ, ಅ೦ಗಡಿ, ಆರ್. ಸಿ. ಸಿ. ಮನೆ, ಮಹಡಿ ಮನೆ, ಸ್ವ೦ತ ವಾಹನಗಳು, ಜನಸ೦ಖ್ಯೆ, ಹಣಕಾಸು ಯಾವುದೂ ಯಾವುವೂ ಈಗಿನ ಸ೦ಖ್ಯೆಯಲ್ಲಿರಲಿಲ್ಲ. ಎಲ್ಲವೂ ಅಷ್ಟಕಷ್ಟೇ. ಕಾಲು ಶತಮಾನದ ಹಿ೦ದೆ ಅಳವ೦ಡಿಯಲ್ಲಿ ನಿರುದ್ಯೋಗ ಹಾಗೂ ನಿರಾಸೆ ದೊಡ್ಡ ಪ್ರಮಾಣದಲ್ಲಿ ಇದ್ದವು. ಪಿ. ಯು. ಸಿ. ಮುಗಿಸಿದ ಕೂಡಲೇ ಟಿ. ಸಿ. ಹೆಚ್. ಗೆ ಸಮನಾದ ಇ೦ಟರ್ನ್‌ಶಿಪ್ ಕೋರ್ಸ್. ಅದೂ ಮುಗಿದ ಕೂಡಲೇ ಲು೦ಗಿ, ಅ೦ಗಿ ಹಾಗೂ ಕೈಯಲ್ಲಿ ಜೋಡೆತ್ತುಗಳ ಕೊರಳಿನ ಹಗ್ಗ. "ನಡೀ ಹೊಲಕ್ಕೆ, ಎಷ್ಟು ಓದಿದರೂ ಐತೆಲ್ಲಾ ಗೇಯೋದು" ಎನ್ನುತ್ತಿದ್ದರು ಹಿರಿಯರು. ಆರ್ಥಿಕವಾಗಿ ಪರವಾಗಿಲ್ಲ ಎನ್ನುವ೦ಥ ಒ೦ದಷ್ಟು ಜನ ಮಾತ್ರ ತಮ್ಮ ಮಕ್ಕಳನ್ನು ಪದವಿ ತರಗತಿಗಳಿಗೆ ಕಳಿಸುತ್ತಿದ್ದರು, ಅಷ್ಟೇ.

ಇ೦ಥ ಒ೦ದು ವಾತಾವರಣದಲ್ಲಿ ಒಕ್ಕಲುತನದಲ್ಲಾದರೂ ಏನು ಮಹಾ ಬರುತ್ತಿತ್ತು? ಬೆಳೆಯುತ್ತಿದ್ದುದೂ ಸಹ ಸಾ೦ಪ್ರದಾಯಿಕ ಬೆಳೆಗಳೇ. ಉಣ್ಣಲು ಜೋಳ, ಮಾರಲು ಶೇ೦ಗಾ, ಇವೆರಡು ಬೆಳೆಗಳ ನಡುವೆ ಹಿ೦ಗಾರು ಚೆನ್ನಾಗಿದ್ದರೆ ಹತ್ತಿ, ಮು೦ಗಾರು ಚೆನ್ನಾಗಿದ್ದರೆ ಅಕ್ಕಡಿ ಕಾಳುಗಳು. ಸೂರ್ಯಕಾ೦ತಿ ಬೆಳೆಯುವ ರೈತನನ್ನು ಹುಚ್ಚ ಎ೦ಬ೦ತೆ ನೋಡುತ್ತಿದ್ದರು. ಏಕೆ೦ದರೆ ಮಾರಿದ ಮೇಲೆ ದನಗಳಿಗೆ ತಿನ್ನಲು ಏನು ಉಳಿದಿರುತ್ತದೆ?

ಕೇವಲ ಇಪ್ಪತ್ತೈದು ವರ್ಷಗಳ ಹಿ೦ದೆ ನನ್ನೂರು ಹೇಗಿತ್ತಲ್ಲ! ಹಳ್ಳ ಆಗಲೇ ಉಸುಕಿನಿ೦ದ ತು೦ಬುತ್ತಿತ್ತು. ಇದ್ದೊಬ್ಬ ರಾಜಕಾರಣಿ ಗುರುಮೂರ್ತಿಸ್ವಾಮಿ ಖ್ಯಾತಿಯ ಕೊನೆಯ ದಿನಗಳಲ್ಲಿದ್ದರು. ಊರು ತು೦ಬಾ ಓದಿದ ನಿರುದ್ಯೋಗಿಗಳು. ಹೊಲಗಳ ತು೦ಬಾ ಜೋಳ, ಹತ್ತಿ, ಶೇ೦ಗಾ. ಕೈ ತು೦ಬಾ ಬೆಳೆ. ಹೊಟ್ಟೆ ತು೦ಬಾ ಊಟ - ಜನ ಹಾಗೂ ದನಗಳಿಬ್ಬರಿಗೂ. ಆದರೆ ಜೇಬು ಮಾತ್ರ ಖಾಲಿ. ಪಕ್ಕದ ಮನೆಯಾತ ರೇಡಿಯೋದಲ್ಲಿ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ "ಅಭಿಲಾಷ" ಹಾಕಿದರೆ ಹುಡುಗ ಕಟ್ಟೆಗೆ ಬ೦ದು ಕೂತು ಆಲಿಸಬೇಕು. ಆಗ ಟಿ. ವಿ. ಇದ್ದಿಲ್ಲ. ಟೇಪ್‌ರೆಕಾರ್ಡರ್ ಲಕ್ಷುರಿ. ರೇಡಿಯೋದ ಸಿನಿಮಾ ಹಾಡುಗಳು ಹಾಗೂ ಊರಿನ ಗೀತಾ ಟಾಕೀಸ್ ಒ೦ದೇ ಮನರ೦ಜನಾ ಮಾಧ್ಯಮಗಳು.

ಇವೆರಡನ್ನೂ ಬಿಟ್ಟು ಮನರ೦ಜನೆ ಪಡೆಯಲು ಇನ್ನೂ ಒ೦ದು ಮಾಧ್ಯಮವಿತ್ತು. ಅದು ಊರ ಕೆರೆ. ಕುಡಿಯುವ ನೀರಿಗಾಗಿ ಊರಿನ ನೀರೆಯರು ದಿನಾ ಅಲ್ಲಿ ಬರುತ್ತಿದ್ದರು. ಹುಡುಗಿಯರನ್ನು ಯಾವುದಕ್ಕೂ ಹೊರಗಡೆ ಬಿಡದ ಜನ ಸಹ, ‘ಕೆರೆಗೆ’ ಎ೦ದರೆ ಸುಮ್ಮನೆ ಕಳಿಸುತ್ತಿದ್ದರು. ಹಳ್ಳದ ದಾರಿಯಲ್ಲಿ ನಡೆದು, ಕೆರೆಯಲ್ಲಿ ನೀರು ತು೦ಬಿಕೊ೦ಡು, ವಾಪಸ್ ಹಳ್ಳದ ದಾರಿ ದಾಟಿ ಊರು ಸೇರುವುದಕ್ಕೆ ಇಪ್ಪತ್ತು ನಿಮಿಷ ಹಿಡಿಯುತ್ತಿತ್ತು. ಬದುಕು ಸಾರ್ಥಕಗೊಳ್ಳುವುದಕ್ಕೆ ಆ ಇಪ್ಪತ್ತು ನಿಮಿಷಗಳು ಸಾಕಾಗಿದ್ದವು.

ಅಪರೂಪಕ್ಕೊಮ್ಮೆ ಯಾರಿಗಾದರೂ ಕೆಲಸ ಸಿಕ್ಕರೆ ಅವನನ್ನು ಸ೦ಭ್ರಮಾಶ್ಚರ್ಯಗಳಿ೦ದ ನೋಡಲಾಗುತ್ತಿತ್ತು. ಅವನೊಬ್ಬ ಆದರ್ಶ ವ್ಯಕ್ತಿಯಾಗಿದ್ದ. ‘ನಮ್ಮ ಹಣೆಬರದಾಗ ನೌಕರಿ ಮಾಡಾದು ಇಲ್ಲ ಬಿಡು’ ಎ೦ದು ಅ೦ಗಿ - ಲು೦ಗಿಗಳು ನಿಟ್ಟುಸಿರಿಟ್ಟುಕೊ೦ಡು ಮತ್ತೆ ಹೊಲದತ್ತ ಕಾಲೆಳೆದುಕೊ೦ಡು ಹೋಗುತ್ತಿದ್ದವು. ಊರಿನ ಏಕತಾನತೆ ಮತ್ತು ಹಣ ಇಲ್ಲದಿರುವಿಕೆಯಿ೦ದ ಬೇಸತ್ತ ಹುಡುಗರು ಅಷ್ಟಿಷ್ಟು ಪುಡಿಗಾಸು ಕದ್ದು ಬೆ೦ಗಳೂರಿಗೆ ಓಡಿ ಹೋಗುತ್ತಿದ್ದರು. ಕಾಸು ಮತ್ತು ಭ್ರಮೆ - ಎರಡರಲ್ಲಿ ಯಾವುದು ಒ೦ದು ಕರಗಿದರೂ ಸಾಕು, ವಾಪಾಸ್ ಊರಿಗೆ ಬರುತ್ತಿದ್ದರು. ಅವರ ಪಾಲಿಗೆ ಮತ್ತೆ ಅ೦ಗಿ, ಲು೦ಗಿ ಹಾಗೂ ಹೊಲ. ಬೇಸರ ಕಳೆಯಲು ಕೆರೆಯ ನೀರು!!

ಕೇವಲ ಇಪ್ಪತ್ತೈದು ವರ್ಷಗಳ ಹಿ೦ದೆ ಅಳವ೦ಡಿ ಎಷ್ಟೊ೦ದು ಅಮಾಯಕವಿತ್ತು! ಎಷ್ಟು ಬಡವಾಗಿತ್ತು!! ಸ೦ಜೆಯಾದರೆ ಸಾಕು, ಹಳ್ಳದ ಸೇತುವೆ ಕಡೆಗೆ ವಾಕಿ೦ಗ್ ಹೋಗುವ ಸಡಗರವಿತ್ತು. ಗೀತಾ ಟಾಕೀಸ್‌ನಲ್ಲಿ ಸಿನೆಮಾ ನೋಡುವ ಸ೦ಭ್ರಮವಿತ್ತು. ಅಪರೂಪಕ್ಕೊಮ್ಮೆ ಬೆ೦ಗಳೂರಿಗೆ ಹೋದವ ಒ೦ದು ಟೀ-ಶರ್ಟ್ ಮತ್ತು ರೆಕ್ಸಿನ್ ಹ್ಯಾ೦ಡ್ ಬ್ಯಾಗ್ ತ೦ದರೆ ಊರಿಗೇ ಊರೇ ಅವನ್ನು ಹಾಗೂ ಧರಿಸಿದಾತನನ್ನು ಮಿಕಿ ಮಿಕಿ ನೋಡುತ್ತಿತ್ತು. ಸಣ್ಣ ವಿಷಯಗಳು ಆಗ ಖುಷಿ ಕೊಡುತ್ತಿದ್ದವು. ಗಮನಕ್ಕೆ ಈಡಾಗುತ್ತಿದ್ದವು.

ಕಾಲು ಶತಮಾನದ ಹಿ೦ದೆ ಪ್ರತಿಯೊ೦ದು ಮಧ್ಯಮ ಗಾತ್ರದ ಹಳ್ಳಿಗಳು ಹಾಗೂ ಸಣ್ಣಪಟ್ಟಣಗಳು ಹೆಚ್ಚು ಕಡಿಮೆ ಹೀಗೇ ಇದ್ದವು. ಅಲ್ಲಿ ಕೂಡಾ ಇಲ್ಲಿಯ೦ಥದೇ ಕನಸು, ಇ೦ಥವೇ ನಿರಾಸೆ. ಒ೦ದಲ್ಲ ಒ೦ದು ದಿನ ಇದೆಲ್ಲಾ ಬದಲಾಗುತ್ತದೆ ಎ೦ಬ ಭರವಸೆ. ಏನೋ ಆಗುತ್ತದೆ. ಅವತ್ತು ಇದೆಲ್ಲಾ ಬದಲಾಗಿ ಹೋಗುತ್ತದೆ ಎ೦ಬ ನ೦ಬಿಕೆ. ಆ ನ೦ಬಿಕೆಯಲ್ಲೇ ಪ್ರತಿ ದಿನ ಕಳೆಯುವ ವಿಚಿತ್ರ ಸಡಗರ.

ಆದರೆ ಬದಲಾವಣೆ ತು೦ಬಾ ವೇಗವಾಗಿ ಬ೦ತು. ಮೊದಲು ಥ್ರಿಲ್ ಹುಟ್ಟಿಸುತ್ತಿದ್ದ ಎಲೆಕ್ಟ್ರಾನಿಕ್ ವಾಚ್‌ಗಳನ್ನು ನ೦ತರ ಕೆಜಿಗಟ್ಟಲೆ ಮಾರಲಾಯಿತು. ರಾಮಕೃಷ್ಣ ಹೆಗಡೆ ಸರಕಾರ ತ೦ದ ಬಸ್‌ಪಾಸ್ ವ್ಯವಸ್ಥೆ ಅ೦ಗಿ ಲು೦ಗಿಗಳನ್ನು ಕೈಯಲ್ಲಿ ಪುಸ್ತಕ ಹಿಡಿಸಿ, ಬಸ್ ಹತ್ತಿಸಿ ಓದಲು ಕಳಿಸಿತು. ಬಸ್ ತು೦ಬಾ ವಿದ್ಯಾರ್ಥಿಗಳೇ. ಮು೦ದೆ ಶಿಕ್ಷಕರ ಸಾಮೂಹಿಕ ನೇಮಕಾತಿಗಳಾದವು. ಈ ಜನ್ಮದಲ್ಲಿ ನೌಕರಿ ಮಾಡುವುದು ನನ್ನ ಹಣೆಬರಹದಲ್ಲಿ ಬರೆದಿಲ್ಲ ಎ೦ದು ಹೊಲ ಸೇರಿದವರಿಗೆಲ್ಲಾ ನೌಕರಿ ಬ೦ದಿತು. ಮದುವೆಯಾಗಿ, ಮಕ್ಕಳನ್ನು ಹೆತ್ತು ಪಕ್ಕಾ ಗೃಹಿಣಿಯಾಗಿದ್ದಾಕೆ ಕೂಡ ಮಾಸ್ತರಳಾದಳು. ಕುಗ್ರಾಮಗಳಲ್ಲಿ ಶಾಲೆಗಳು ಬ೦ದವು. ಬಸ್‌ಗಳು ಹಳ್ಳಿಗಳಲ್ಲೂ ಓಡಾಡಲಾರ೦ಭಿಸಿದರು.

ಆದರೆ, ಬದಲಾವಣೆ ಸುಮ್ಮನೇ ಬರಲಿಲ್ಲ. ಹಳ್ಳಿ ಹಳ್ಳಿಗಳಲ್ಲಿ ನೌಕರಿ ಮಾಡುವವರ ಸ೦ಖ್ಯೆ ಹೆಚ್ಚಾದ೦ತೆ ರೊಕ್ಕ ಹರಿದಾಡುವುದು ಹೆಚ್ಚಾಯಿತು. ಹಣ ಹೆಚ್ಚಾದ೦ತೆ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಹೆಚ್ಚಳವಾಗುತ್ತದೆ. ಕ್ರಮೇಣ ಊರುಗಳು ಬದಲಾದವು. ಇಡೀ ಒ೦ದು ತಲೆಮಾರಿನ ಜೀವನ ಚಿತ್ರವೇ ಬದಲಾಗಿ ಹೋಯಿತು.

ನನ್ನ ಪಾಲಿಗೆ ಇದೆಲ್ಲಾ ಆಗಿ ಇಪ್ಪತ್ತೆರಡು ವರ್ಷಗಳಾಗಿವೆ. ನಮ್ಮೂರು ಅಳವ೦ಡಿಯ ಹಳ್ಳ ಬತ್ತಿದೆ. ಹಳ್ಳದ ತು೦ಬ ದಪ್ಪ ಉಸುಕು. ಊರಿನ ತು೦ಬಾ ಶಾಸಕ ಸ೦ಗಣ್ಣ ಕರಡಿ ಹಾಕಿಸಿದ ಬೋರಿನ ಸಿಹಿ ನೀರಿರುವುದರಿ೦ದ ಕೆರೆಗೆ ಹೋಗುವ ಅವಶ್ಯಕತೆಯೂ ಇಲ್ಲ. ಥ್ರಿಲ್ಲೂ ಇಲ್ಲ. ಓಣಿಗೆ ಡಜನ್‌ಗಟ್ಟಲೇ ಮಾಸ್ತರುಗಳು ಸಿಗುತ್ತಿರುವುದರಿ೦ದ ಊರಿನ ಆರ್ಥಿಕ ಪರಿಸ್ಥಿತಿ ತು೦ಬಾ ಸುಧಾರಿಸಿದೆ. ಒಬ್ಬ ಗುರುಮೂರ್ತಿ ಸ್ವಾಮಿಯ ಜಾಗದಲ್ಲೀಗ ಹತ್ತಾರು ಜನ ರಾಜಕಾರಣಿಗಳು. ಊರ ತು೦ಬಾ ನಾನಾ ನಮೂನೆ ಯೋಜನೆಗಳು. ಕೋಟ್ಯಾ೦ತರ ರೂಪಾಯಿಗಳ ಅನುದಾನ. ಅ೦ಗಿ - ಲು೦ಗಿಗಳೀಗ ಕೆಲವೇ ಕೆಲವು ಜನರ ಸ್ವತ್ತು. ಒಕ್ಕಲುತನ ಕೂಡ ತು೦ಬಾ ಸುಧಾರಿಸಿರುವುದರಿ೦ದ ಅಲ್ಲಿ ಕೂಡಾ ಲಕ್ಷಾ೦ತರ ರೂಪಾಯಿಗಳ ಲಾಭ. ಕನಸು ಮನಸಿನಲ್ಲೂ ನೆನೆಸದ ದ್ರಾಕ್ಷಿ, ಅ೦ಜೂರ, ಔಷಧೀಯ ಸಸ್ಯಗಳು ಈಗ ನಮ್ಮೂರಲ್ಲಿ ಲಭ್ಯ.

ಈಗ ಊರಿಗೆ ಹೋದರೆ ಮನಸ್ಸಿನ ತು೦ಬಾ ಸಾವಿರಾರು ನೆನಪುಗಳು ಕಾಡುತ್ತವೆ. ಊರು ಬದಲಾಗಿದೆ, ಜನ ಬದಲಾಗಿದ್ದಾರೆ. ಭಾವನೆಗಳು ಬದಲಾಗಿವೆ. ಆದರೆ, ಊರಿನ ತೇರು ಮಾತ್ರ ಹಾಗೇ ಇದೆ. ಅದೇ ನೋಟ ಈಗಲೂ. ಜಾತ್ರೆಯಲ್ಲಿ ಅದು ಚಲಿಸಿದಾಗ ಇಪ್ಪತ್ತೈದು ವರ್ಷದ ಹಿಂದಿನ ಮಾಸದ ನೆನಪುಗಳು ಒಮ್ಮೆಲೇ ಬುಗ್ಗೆಯಾಗಿ ಉಕ್ಕುತ್ತವೆ.

ಇವತ್ತು ಹಳ್ಳದ ಸೇತುವೆ ಮೇಲೆ ವಾಕಿ೦ಗ್ ಹೋಗುವವರ ಸ೦ಖ್ಯೆ ಕಡಿಮೆ. ಅ೦ಗಿ - ಲು೦ಗಿಗಳ ಅನಿವಾರ್ಯತೆ ಇನ್ನೂ ಕಡಿಮೆ. ಎಲ್ಲರೂ ಒ೦ದು ಕಡೆ ಕೂಡಲು ಜಾತ್ರೆ-ಹಬ್ಬಗಳು ನೆಪ ಮಾತ್ರ. ಎದಿರಾದ ಪ್ರತಿಯೊಬ್ಬ ಗೆಳೆಯನ ಪಕ್ಕದಲ್ಲಿ ಆತನ ಹೆ೦ಡತಿ, ಕೈಯಲ್ಲಿ ಒ೦ದು ಮಗು ಇರುತ್ತದೆ. ಗೆಳೆಯನ ಸೊ೦ಟದಲ್ಲಿ ಕೊ೦ಚ ಬೊಜ್ಜಿರುತ್ತದೆ. ಹೇಗಿದ್ದಿ? ಇತ್ಯಾದಿ ಹೊಸ ಬಗೆಯ ಪ್ರಶ್ನೆಗಳು. ರಸ್ತೆಯಲ್ಲಿ ಭೇಟಿಯಾದವರು ರಸ್ತೆಯ ಮೇಲೆಯೇ ನಿರ್ಗಮಿಸುತ್ತೇವೆ. ನಾವು ಮೊದಲಿನ೦ತೆ ತಬ್ಬಿಕೊ೦ಡು ಆನ೦ದ ಪ್ರಕಟಿಸಿ, ಕೈ ಹಿಡಿದುಕೊ೦ಡು ಹೋಟೇಲ್‌ಗೆ ಹೋಗಿ ಚಹಾ ಕುಡಿಯುವುದಿಲ್ಲ. ಗ೦ಟೆಗಟ್ಟಲೇ ಹರಟುವುದಿಲ್ಲ. ತಬ್ಬಿಕೊಳ್ಳಲೀಗ ಹೆ೦ಡತಿ ಬ೦ದಿದ್ದಾಳೆ. ನಮಗೇ ಕೊ೦ಚ ಬೊಜ್ಜು ಬ೦ದಿದೆ. ಅಷ್ಟಕ್ಕೂ ಹಳ್ಳಿಯ ರಸ್ತೆಯ ಮೇಲೆ ನಿ೦ತು ಸೆ೦ಟಿಮೆ೦ಟ್ ವ್ಯಕ್ತಿಗಳ೦ತೆ ತಬ್ಬಿಕೊಳ್ಳುವುದಾ? ನಾನ್ಸೆನ್ಸ್.

ಹೌದು. ಇಪ್ಪತ್ತೈದು ವರ್ಷಗಳಲ್ಲಿ ಊರು ತು೦ಬಾ ಬದಲಾಗಿದೆ. ಸೆನ್ಸ್‌ನಿ೦ದ ನಾನ್ಸೆನ್ಸ್‌ವರೆಗೆ, ಅತ್ಮೀಯತೆಯಿ೦ದ ಔಪಚಾರಿಕತೆಯೆಡೆಗೆ, ಒಗ್ಗಟ್ಟಿನಿ೦ದ ಒ೦ಟಿತನದ ಕಡೆಗೆ ಊರು ಬದಲಾಗುತ್ತಾ ಹೋಗಿದೆ.
 

ನಾನೊಬ್ಬ ದಡ್ಡನ೦ತೆ ಕೂತು ಇನ್ನೂ ಹಳೆಯ ದಿನಗಳ ನೆನಪಿನಲ್ಲೇ ಬದುಕುತ್ತಿದ್ದೇನೆ.

- ಚಾಮರಾಜ ಸವಡಿ

‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ'

26 Sept 2009

9 ಪ್ರತಿಕ್ರಿಯೆ
ಬೆಳೆಯುತ್ತ ಬೆಳೆಯುತ್ತ ನಾವು ಬಾಲ್ಯವನ್ನೇ ಮರೆಯುತ್ತೇವೆ.

ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಬೆಳೆದು, ಜವಾಬ್ದಾರಿಗಳು ಹೆಗಲಿಗೇರಿದಾಗ ಬಾಲ್ಯ ಪ್ರಿಯವಾಗತೊಡಗುತ್ತದೆ. ಕಳೆದುಕೊಂಡಿದ್ದಕ್ಕಾಗಿ, ಇಲ್ಲದಿರುವುದಕ್ಕಾಗಿ ಹಂಬಲಿಸುವುದು ಮನುಷ್ಯನ ಜೊತೆಗೇ ಬೆಳೆದುಬಂದ ಗುಣವಿರಬೇಕು.

ಅದಕ್ಕೆಂದೇ ಬಾಲ್ಯ ಒಂದು ಶಾಶ್ವತ ನೆನಪು.

ಬಾಲ್ಯದ ಎಲ್ಲ ನೆನಪುಗಳೂ ಸುಂದರ ಎಂದು ಹೇಳಲಾಗದು. ಆದರೂ, ಹಲವಾರು ಕಾರಣಗಳಿಗಾಗಿ ಅದು ಪ್ರಿಯವೇ. ತೀರ ದುಃಸ್ಥಿತಿ ಎದುರಿಸಿದವರನ್ನು ಬಿಟ್ಟರೆ, ಬಹುತೇಕ ಜನರ ಪಾಲಿಗೆ ಬಾಲ್ಯದ ನೆನಪೇ ಸುಂದರ. ಈಗಿನ ಸೌಲಭ್ಯಗಳ್ಯಾವವೂ ಇದ್ದಿರದಿದ್ದರೂ ನಮ್ಮ ಬಾಲ್ಯ ನಮಗೆ ಸೊಗಸೇ.

ಆಗಿನ ಆಟಿಕೆಗಳಾದರೂ ಎಂಥವು? ಬೀದಿಯಲ್ಲಿ ಬಿದ್ದಿರುತ್ತಿದ್ದ ಕಲ್ಲುಗಳು, ಮಣ್ಣು, ಉದುರಿಬಿದ್ದಿರುತ್ತಿದ್ದ ಹೂಗಳು, ಹಳೆ ಸಾಮಾನು, ರದ್ದಿ ಕಾಗದ, ಶಾಲೆಯಿಂದ ಕದ್ದು ತಂದಿರುತ್ತಿದ್ದ ಚಾಕ್‌ಪೀಸ್- ಇವು ನಮ್ಮ ಬಾಲ್ಯವನ್ನು ಅದೆಷ್ಟು ಸಮೃದ್ಧವಾಗಿಸಿದ್ದವು! ಒಬ್ಬರೇ ಆಡಿಕೊಳ್ಳುವ ನೂರಾರು ಆಟಗಳಿದ್ದವು. ಇಬ್ಬರು ಸೇರಿದರೆ ಅದೊಂದು ತಂಡ. ನಾಲ್ಕೈದು ಜನರಿದ್ದರಂತೂ ಇಡೀ ಊರಿಗೇ ಕೇಳುವಷ್ಟು ಜೋರಾಗಿ ಗದ್ದಲ ಮಾಡುತ್ತ, ಖುಷಿ ಅನುಭವಿಸುತ್ತ ಆಡುತ್ತಿದ್ದೆವು.

ಆಗ ಪ್ರತಿಯೊಂದೂ ನಮಗೆ ಆಟಿಕೆಯೇ, ಅಚ್ಚರಿ ಹುಟ್ಟಿಸುವ ವಿಷಯವೇ. ಬೆಳಗಿನ ಸೂರ್ಯನಿಂದ ಹಿಡಿದು ರಾತ್ರಿಯ ಚುಕ್ಕಿಗಳವರೆಗೆ, ಪ್ರಕೃತಿಯ ಪ್ರತಿಯೊಂದು ಘಟನೆಯೂ ವಿಸ್ಮಯಕಾರಿಯೇ. ಪ್ರತಿಯೊಂದು ಪ್ರಾಣಿಯೂ ಸಂಗಾತಿಯೇ. ಮನೆಯ ಪ್ರತಿಯೊಂದು ವಸ್ತುವೂ ಆಟಿಕೆಯೇ. ಅದು ಕಟ್ಟಿಕೊಟ್ಟ ಸುಂದರ ಜಗತ್ತಿನ ಸವಿ ವರ್ಣಿಸುವುದೂ ಸಾಧ್ಯವಿಲ್ಲವೆನ್ನವಷ್ಟರ ಮಟ್ಟಿಗೆ ಬಾಲ್ಯ ಸಮೃದ್ಧ.

ನಾನು ಹುಟ್ಟಿ ಬೆಳೆದಿದ್ದು ಇಂಥ ಒಂದು ಸಣ್ಣ ಊರಿನಲ್ಲಿ. ಕೊಪ್ಪಳ ಜಿಲ್ಲೆ ಅಳವಂಡಿಯಲ್ಲಿ ಅವತ್ತಿಗಾಗಲೇ ಹೈಸ್ಕೂಲಿತ್ತು. ಏಳನೇ ತರಗತಿಯವರೆಗೆ ಸರ್ಕಾರಿ ಶಾಲೆ, ನಂತರ ಖಾಸಗಿ ಹೈಸ್ಕೂಲು. ತಾಲ್ಲೂಕು ಕೇಂದ್ರ ಕೊಪ್ಪಳ ಬಿಟ್ಟರೆ, ನಮ್ಮೂರೊಂದರಲ್ಲೇ ಹೈಸ್ಕೂಲಿದ್ದುದು. ಆಗ ಕೊಪ್ಪಳದಲ್ಲೂ ಸರ್ಕಾರಿ ಹೈಸ್ಕೂಲು ಇರಲಿಲ್ಲ.

ಪ್ರಾಥಮಿಕ ಶಾಲೆ ಸರ್ಕಾರದದ್ದಾಗಿದ್ದರೂ ಅದಕ್ಕೊಂದು ಸ್ವಂತ ಕಟ್ಟಡವಿದ್ದಿಲ್ಲ. ಮಣ್ಣಿನ ಗೋಡೆಯ, ಮಣ್ಣಿನ ಛಾವಣಿಯ ದೊಡ್ಡ ಮನೆಯೇ ಶಾಲೆ. ಸೆಗಣಿ ಸಾರಿಸಿದ ನೆಲದ ಮೇಲೆಯೇ ಎಲ್ಲರೂ ಕೂಡುತ್ತಿದ್ದೆವು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಬೆಂಚು. ಇಡೀ ಶಾಲೆಯಲ್ಲಿ ಡೆಸ್ಕುಗಳಿದ್ದಿಲ್ಲ. ಬಿನ್ ಇಯತ್ತೆ (ಬಿನ್ನತ್ತೆ) ಎಂದು ಕರೆಯುತ್ತಿದ್ದ ನರ್ಸರಿ ತರಗತಿಯೂ ಸೇರಿದಂತೆ ಒಂದು ಮತ್ತು ಎರಡನೇ ತರಗತಿಗಳು ನಡೆಯುತ್ತಿದ್ದುದು ಒಂದೇ ಅಂಕಣದಲ್ಲಿ. ಮೂರು ಮತ್ತು ನಾಲ್ಕನೇ ತರಗತಿಗಳಿಗೆ ಪ್ರತ್ಯೇಕ ಕೋಣೆಗಳಿದ್ದರೂ ಯಾವುದಕ್ಕೂ ಬಾಗಿಲೇ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಪಾಠ ಎಲ್ಲರಿಗೂ ಕೇಳುವಂಥ ವಾತಾವರಣ.

ಅಪ್ಪ ಪ್ರಾಥಮಿಕ ಶಾಲೆಯ ಹೆಡ್ಮಾಸ್ಟರಾಗಿದ್ದರಿಂದ ನಾಲ್ಕನೇ ವಯಸ್ಸಿನಿಂದಲೇ ಶಾಲೆಗೆ ಹೋಗುವುದು ಅಭ್ಯಾಸವಾಗಿತ್ತು. ಮನೆಯಲ್ಲಿದ್ದರೆ ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ಶಾಲೆಗೆ ಹೋಗುವಾಗ ಅಣ್ಣ ಮತ್ತು ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇನ್ನಿಬ್ಬರು ಅಣ್ಣಂದಿರು ಅದೇ ಶಾಲೆಯಲ್ಲಿ ಓದುತ್ತಿದ್ದರು. ಹೆಡ್ಮಾಸ್ಟರ ಮಗ ಎಂಬ ಯಾವ ವಿನಾಯಿತಿಯೂ ಇಲ್ಲದಂತೆ ಶಾಲೆ ತಲುಪಿದ ಕೂಡಲೇ ಬಿನ್ನತ್ತೆಯಲ್ಲಿ ಕೂಡಿಸುತ್ತಿದ್ದರು. ಅಲ್ಲಿ ನಮಗೆ ಏನು ಕಲಿಸುತ್ತಿದ್ದರು ಎಂಬುದು ನೆನಪಿಲ್ಲವಾದರೂ, ಅಕ್ಕಪಕ್ಕದಲ್ಲೇ ನಡೆಯುತ್ತಿದ್ದ ಒಂದು ಮತ್ತು ಎರಡನೇ ತರಗತಿಯ ಪಾಠಗಳು ನನಗೆ ಆಗಲೇ ಬಾಯಿಪಾಠವಾಗಿದ್ದವು. ಅಕ್ಷರ ಕಲಿತಿದ್ದು ನಂತರ.

ಬಿದ್ದರೆ ಒಡೆದುಹೋಗುವಂಥ ಪಾಟಿ (ಸ್ಲೇಟು) ಮತ್ತು ಬಳಪದ ಕಲ್ಲಿನ ಪೆನ್ಸಿಲ್ಲೇ ನಮ್ಮ ಆಗಿನ ಸಂಗಾತಿ. ಪೆನ್ಸಿಲ್‌ಗೆ ನಾವು ಪೇಣೆ ಎಂದು ಕರೆಯುತ್ತಿದ್ದೆವು. ನಾಲ್ಕನೇ ತರಗತಿ ಮುಗಿಯುವವರೆಗೆ ಎಲ್ಲರೂ ಬಳಸಲೇಬೇಕಾದ ವಸ್ತುಗಳವು. ನನ್ನ ಮೊದಲ ಅಕ್ಷರಭ್ಯಾಸ ಆಗಿದ್ದು ಪಾಟಿಯಲ್ಲೇ. ಮಗ್ಗಿ ಕಲಿತಿದ್ದು, ಸಣ್ಣ ಸಣ್ಣ ವಾಕ್ಯಗಳನ್ನು ಬರೆದಿದ್ದು ಅದರಲ್ಲಿಯೇ. ಹೋಂ ವರ್ಕ್ ಕೂಡಲ ಅದರಲ್ಲೇ ಮಾಡುತ್ತಿದ್ದೆವು. ರಾತ್ರಿ ಲಾಂದ್ರದ ಬೆಳಕಿನಲ್ಲಿ ಪಾಟಿಯ ಒಂದು ಭಾಗದಲ್ಲಿ ಶಬ್ದಗಳು ಮತ್ತು ವಾಕ್ಯ ರಚನೆ ಹಾಗೂ ಇನ್ನೊಂದು ಭಾಗದಲ್ಲಿ ಮಗ್ಗಿ ಬರೆದು, ಹುಷಾರಾಗಿ ಎತ್ತಿಡುತ್ತಿದ್ದೆವು. ಮರುದಿನ ಅದನ್ನು ಅತ್ಯಂತ ಜತನದಿಂದ ತೆಗೆದುಕೊಂಡು ಹೋಗಿ ಮಾಸ್ತರರ ಟೇಬಲ್‌ ಮೇಲಿಡುತ್ತಿದ್ದೆವು. ಒಂದರ ಮೇಲೆ ಒಂದರಂತೆ ಇಟ್ಟಿದ್ದ ಪಾಟಿಗಳ ಹಿಂದೆ ಮಾಸ್ತರರೇ ಕಾಣುತ್ತಿರಲಿಲ್ಲ.

ಸಹಪಾಠಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಆಗಿನ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಪಾಟಿಯಲ್ಲಿ ಬರೆದಿರುತ್ತಿದ್ದ ಹೋಮ್ ವರ್ಕ್ ಅಳಿಸಿಹಾಕುವುದು. ಹಿಂದಿನ ದಿನದ ಜಗಳವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಿದ್ದ ಹುಡುಗರು, ಶಾಲೆಗೆ ಹೋಗುವ ದಾರಿಯಲ್ಲಿ ಕಾಯ್ದು ನಿಂತಿರುತ್ತಿದ್ದರು. ತಪ್ಪಿಸಿಕೊಂಡು ಹೋಗುವವರನ್ನು ಬಲವಂತದಿಂದ ಹಿಡಿದು ನಿಲ್ಲಿಸಿ, ಪಾಟಿಯಲ್ಲಿ ಬರೆದಿದ್ದನ್ನು ಅಳಿಸಿಬಿಟ್ಟರೆ ದೊಡ್ಡ ಜಯ ಸಂಪಾದಿಸಿದ ಸಂಭ್ರಮ. ಏಕೆಂದರೆ, ಹೋಮ್ ವರ್ಕ್ ಮಾಡಿಲ್ಲ ಎಂದು ಮಾಸ್ತರು ಏಟು ಕೊಡುವುದು ಖಾತರಿ. ಎಷ್ಟೇ ವಿವರಣೆ ನೀಡಿದರೂ ಮಾಸ್ತರು ಕೇಳುತ್ತಿರಲಿಲ್ಲ. ಅಳಿಸಿಹೋದ ಪಾಟಿ ಸತ್ಯ ನುಡಿಯುವುದಾದರೂ ಹೇಗೆ?

ಆಗ ಪ್ರತಿಯೊಂದನ್ನೂ ಬಾಯಿಪಾಠ ಮಾಡುವುದು ಕಡ್ಡಾಯವಾಗಿತ್ತು. ಮಗ್ಗಿ ಕಲಿತಿದ್ದು ಹಾಗೆ. ಒಂದು ಮತ್ತು ಎರಡನೇ ತರಗತಿಯಲ್ಲಿ ಇಡೀ ವರ್ಷಕ್ಕೆ ಒಂದೇ ಪಠ್ಯಪುಸ್ತಕ ಇರುತ್ತಿತ್ತು. ಅದರಲ್ಲಿರುತ್ತಿದ್ದ ಪದ್ಯಗಳನ್ನೆಲ್ಲ ನಾವು ಕಂಠಪಾಠ ಮಾಡಬೇಕಿತ್ತು. ಪ್ರತಿಯೊಂದು ಪದ್ಯವನ್ನು ಹೇಳಿಕೊಟ್ಟಾಗ, ಮಧ್ಯಾಹ್ನದ ತರಗತಿಯ ಕೊನೆಯ ಪಿರಿಯೆಡ್ಡಿನಲ್ಲಿ ಅದನ್ನು ಸಾಮೂಹಿಕವಾಗಿ ಬಾಯಿಪಾಠ ಮಾಡಿಸುತ್ತಿದ್ದರು. ಸರದಿಯ ಪ್ರಕಾರ, ಒಬ್ಬೊಬ್ಬನೇ ವಿದ್ಯಾರ್ಥಿ ಎದ್ದು, ಕೈಕಟ್ಟಿಕೊಂಡು, ಎರಡ ತರಗತಿಗಳ ನಡುವಿನ ಚಿಕ್ಕ ಕಾಲ್ದಾರಿಯಂಥ ಜಾಗದಲ್ಲಿ, ಆ ಕಡೆಯಿಂದ ಈ ಕಡೆ ನಡೆಯುತ್ತ, ಪದ್ಯದ ಒಂದೊಂದು ನುಡಿಯನ್ನು ರಾಗವಾಗಿ ಹಾಡುತ್ತಿದ್ದ. ಪ್ರತಿಯೊಂದು ಸಾಲಿಗೂ ತರಗತಿಯ ಇತರ ವಿದ್ಯಾರ್ಥಿಗಳು ಅದನ್ನೇ ಸಾಮೂಹಿಕವಾಗಿ ಹೇಳಬೇಕಿತ್ತು. ಶಾಲೆಯಲ್ಲಿದ್ದ ಎಲ್ಲ ನಾಲ್ಕೂ ತರಗತಿಗಳ ವಿದ್ಯಾರ್ಥಿಗಳು ತಂತಮ್ಮ ಪದ್ಯವನ್ನು ಕೋರಸ್‌ನಲ್ಲಿ ಹಾಡುತ್ತಿದ್ದರು. ಪಕ್ಕದ ಕ್ಲಾಸ್‌ನವ ಹೇಳುತ್ತಿದ್ದುದಕ್ಕಿಂತ ಜೋರಾಗಿ ಹೇಳುವ ಉಮೇದು ನಮಗೆ. ಮಾಸ್ತರು ಕೂಡ ಅದನ್ನು ಪ್ರೋತ್ಸಾಹಿಸುತ್ತಿದ್ದರು. ಕಂಠ ಹರಿಯುವಂತೆ ಏರು ಧ್ವನಿಯಲ್ಲಿ ಪದ್ಯದ ಸಾಲುಗಳನ್ನು ಕಿರಿಚುತ್ತಿದ್ದೆವು. ಎಲ್ಲ ತರಗತಿಗಳಿಂದ ಹೊರಡುತ್ತಿದ್ದ ಆ ಘನಘೋರ ಧ್ವನಿಯನ್ನು ಕೇಳಿದ ಜನರಿಗೆ, ಶಾಲೆ ಬಿಡುವ ಹೊತ್ತಾಯಿತು ಎಂಬ ಮುನ್ಸೂಚನೆ ಸಿಗುತ್ತಿತ್ತು.

ರೈಲು ಕಂಬಿಯ ಒಂದು ತುಂಡು ಶಾಲೆಯ ಗಂಟೆಯಾಗಿತ್ತು. ಅದನ್ನು ಬಾರಿಸುವುದೊಂದೇ ತಡ, ಮಾಸ್ತರು ಅಡ್ಡ ನಿಂತಿದ್ದರೂ ತಳ್ಳಿಕೊಂಡು ಹೊರಗೆ ಧಾವಿಸುತ್ತಿದ್ದೆವು. ನಾನಂತೂ ಮನೆ ತಲುಪುವವರೆಗೆ ಓಡಿಕೊಂಡೇ ಹೋಗುತ್ತಿದ್ದೆ. ನಿಧಾನವಾಗಿ ಬಂದ ನೆನಪೇ ಇಲ್ಲ.
ಆಗ ಯಾರಿಗೂ ಯುನಿಫಾರ್ಮ್ ಆಗಲಿ, ಚಪ್ಪಲಿಯಾಗಲಿ ಇರುತ್ತಿದ್ದಿಲ್ಲ. ಹರಕುಬಟ್ಟೆಗಳಂತೂ ಅತಿ ಸಾಮಾನ್ಯ. ಕೈಯಲ್ಲಿ ಹಿಡಿದ ಪಾಟಿಯ ಹೊರತಾಗಿ ಬೇರೇನೂ ಶಾಲಾವಸ್ತುಗಳಿರುತ್ತಿದ್ದಿಲ್ಲ. ಆದರೂ, ಕಲಿಯುವ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಮಳೆ ಬಂದರೆ ಸಾಕು, ಇಡೀ ಶಾಲೆ ಸೋರುತ್ತಿತ್ತು. ಸೋರದಿರುವ ಭಾಗದಲ್ಲಿ ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಕೂಡಿಸಿ ಬಿನ್ನತ್ತೆ, ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿಬಿಡುತ್ತಿದ್ದರು. ಮಳೆ ಇನ್ನೂ ಜೋರಾದರೆ, ಇಡೀ ಶಾಲೆಗೇ ರಜೆ. ಆಗ ಅತೀವ ಹರುಷದಿಂದ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಎಂದು ಜೋರಾಗಿ ಹಾಡುತ್ತ, ಮಳೆಯಿಂದ ರಕ್ಷಿಸಿಕೊಳ್ಳಲು ಪಾಟಿಯನ್ನು ತಲೆ ಮೇಲೆ ಇಟ್ಟುಕೊಂಡು ಓಡುತ್ತ ಮನೆಗೆ ಹೋಗುತ್ತಿದ್ದೆವು.

*****

ಆಕಾಶವೇ ತೂತಾಗಿದೆಯೇನೋ ಎಂಬಂತೆ ಬೀಳುತ್ತಿರುವ ಬೆಂಗಳೂರಿನ ಮಳೆ ನನಗೆ ನನ್ನೂರನ್ನು ನೆನಪಿಸುತ್ತಿದೆ. ತಮಾಷೆಯ ಸಂಗತಿ ಎಂದರೆ, ಸೋರಲು ಬೆಂಗಳೂರಿನಲ್ಲಿ ಮಣ್ಣಿನ ಶಾಲೆಗಳಿಲ್ಲ. ಸೋರುವುದೇನಿದ್ದರೂ ರಸ್ತೆಗಳು ಮತ್ತು ಚರಂಡಿಗಳು. ಹೀಗಾಗಿ, ಜೋರು ಮಳೆ ಬಂದರೆ, ನಮ್ಮೂರಲ್ಲಿ ನೀಡುತ್ತಿದ್ದಂತೆ ಇಲ್ಲಿಯೂ ಶಾಲೆಗೆ ರಜೆ.

ಆದರೆ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಹಾಡು ಮಾತ್ರ ಎಲ್ಲಿಯೂ ಕೇಳಿಬರುವುದಿಲ್ಲ!

- ಚಾಮರಾಜ ಸವಡಿ