ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ

21 Oct 2008

ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.

ಎಸ್.ಎಲ್. ಭೈರಪ್ಪ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಲೇಖನ, ಅಲ್ಲಿ ಎತ್ತಿರುವ ಪ್ರಶ್ನೆಗಳಿಗೆ ನಮ್ಮ ಪತ್ರಕರ್ತ ಬುದ್ಧಿಜೀವಿಗಳು ಉತ್ತರ ಕೊಡುವುದಾಗಿದ್ದರೆ ಈ ಲೇಖನದ ಪ್ರತಿಕ್ರಿಯೆ ಅಗತ್ಯವಿದ್ದಿಲ್ಲ. ಅಂಥದೊಂದು ಪ್ರಯತ್ನ ಕೈಬಿಟ್ಟು ಭೈರಪ್ಪನವರನ್ನೇ ಗುರಿಯಾಗಿರಿಸಿ ಬರೆಯುತ್ತ ಹೊರಡುವ ಮೂಲಕ ಇವರೆಲ್ಲ ಸಹಜವಾಗಿ ಅನಾವರಣಗೊಂಡಿದ್ದಾರೆ.

ಜೋಗಿಯವರು ಕೆಂಡಸಂಪಿಗೆ ತಾಣದಲ್ಲಿ ಬರೆದ ಅಂಕಣ ಅಂಥದೊಂದು ಬರವಣಿಗೆ. ಸುದ್ದಿಮಾತು ಬ್ಲಾಗ್‌ನಲ್ಲಿ ಬಂದಿರುವ ಲೇಖನವೂ ಇದೇ ವರ್ಗಕ್ಕೆ ಸೇರಿದಂಥದು. ಇಂತಹ ಅಭಿಪ್ರಾಯಗಳು ಹೊರಬಂದಿದ್ದು ಓದುಗರಿಗೆ ಒಳ್ಳೆಯದೇ ಆಗಿದೆ. ಒಂದೆಡೆ ಭೈರಪ್ಪನವರ ಧೋರಣೆ ಸ್ಪಷ್ಟವಾದಂತೆ, ಇನ್ನೊಂದೆಡೆ ಅವರ ಒಂದು ಕಾಲದ ಅಭಿಮಾನಿಗಳು ಹಾಗೂ ಇದ್ದಕ್ಕಿದ್ದಂತೆ ಜಾತ್ಯತೀತರಾಗಲು ಹೊರಟವರ ಧೋರಣೆಗಳೂ ಸ್ಪಷ್ಟವಾಗಿವೆ.

ಭೈರಪ್ಪ ತಮ್ಮ ಅನಿಸಿಕೆ ಹೇಳಿದ್ದಾರೆ. ಅವರ ನಿಲುವಿನ ಬಗ್ಗೆ ಪ್ರಶ್ನೆಗಳಿದ್ದರೆ ಅದನ್ನು ತಾತ್ವಿಕವಾಗಿಯೇ ಖಂಡಿಸಬೇಕಾಗುತ್ತದೆ. ಅಲ್ಲಿ ಕಾದಂಬರಿಕಾರ ಭೈರಪ್ಪನವರನ್ನು ಎಳೆದುಕೊಂಡು ಬರುವ ಅವಶ್ಯಕತೆ ಖಂಡಿತ ಇರಲಿಲ್ಲ. ಅವರ ಕಾದಂಬರಿಗಳಲ್ಲಿ ಗು(ಸು)ಪ್ತ ಉದ್ದೇಶಗಳಿದ್ದವು ಎಂಬುದನ್ನು ಕಾಲು ಶತಮಾನದ ನಂತರ ಪತ್ತೆ ಹಚ್ಚಿದ ಹೆಮ್ಮೆ ಕಾಣಬೇಕಿರಲಿಲ್ಲ. ಭೈರಪ್ಪ ತಮ್ಮ ನಿಲುವನ್ನು ಯಾವಾಗಲೂ ಅತ್ಯಂತ ಸ್ಪಷ್ಟವಾಗಿಯೇ ಹೇಳುತ್ತ ಬಂದಿದ್ದಾರೆ. ಗುಪ್ತ ಉದ್ದೇಶಗಳನ್ನಿಟ್ಟುಕೊಂಡು ದಶಕಗಳ ಕಾಲ ಯಾರಿಗೂ ಅನುಮಾನ ಬರದಂತೆ ಬರೆಯುವುದು ಸಾಧ್ಯವಿಲ್ಲ ಎಂಬುದನ್ನು ಅವರ ಇತ್ತೀಚಿನ ಟೀಕಾಕಾರರು ಗಮನಿಸಬೇಕಿತ್ತು.

ಒಬ್ಬ ಕಾದಂಬರಿಕಾರರಾಗಿ ಅಪಾರ ಸಾಧ್ಯತೆಗಳಿರುವ ವ್ಯಕ್ತಿ ಭೈರಪ್ಪ. ಅವರ ಪ್ರತಿಯೊಂದು ಕೃತಿಯೂ ಅದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತದೆ. ಒಬ್ಬ ಸಾಮಾನ್ಯ ಓದುಗನಿಗೆ, ಅಥವಾ ಬಹುತೇಕ ಓದುಗರಿಗೆ ಅವರ ಬರವಣಿಗೆ ಇಷ್ಟವಾಗುವುದು ಅವರು ಕತೆ ಹೇಳುವ ರೀತಿಯಿಂದಾಗಿ. ಭಾವನೆಗಳನ್ನು ಕಟ್ಟಿಕೊಡುವ ಹದದಿಂದಾಗಿ. ಕಾದಂಬರಿಯ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಓದುಗ ಮುಳುಗಿಹೋಗುತ್ತಾನೆಯೇ ಹೊರತು, ಅದರಲ್ಲಿ ಗುಪ್ತ ಸಂದೇಶ ಇದೆಯಾ? ಎಂಬುದನ್ನು ನೋಡಲು ಆತ ಹೋಗುವುದಿಲ್ಲ. ಇದು ಬಹುತೇಕ ಜನರ ಅಭಿಪ್ರಾಯ. ಅವರ ಇತ್ತೀಚಿನ ಟೀಕಾಕಾರರೂ ತೀರಾ ಇತ್ತೀಚಿನವರೆಗೆ ಭೈರಪ್ಪನವರ ಬರವಣಿಗೆಯ ಅಭಿಮಾನಿಗಳೇ ಆಗಿದ್ದರು ಎಂಬುದೇ ಬರವಣಿಗೆಯ ಸತ್ವವನ್ನು ತೋರಿಸುತ್ತದೆ.

ಆದರೆ, ಇಂತಹ ಎಲ್ಲಾ ಕೃತಿಗಳ ಹಿಂದೆ ಹಿಂದು ಧರ್ಮವನ್ನು ವೈಭವೀಕರಿಸುವ ಉದ್ದೇಶವಿತ್ತು ಎಂಬುದನ್ನು ಇವರೆಲ್ಲ ಇತ್ತೀಚೆಗೆ ಪತ್ತೆ ಹಚ್ಚಿದರೆ? ಒಂದು ವೇಳೆ ಭೈರಪ್ಪನವರ ಮೂಲ ಉದ್ದೇಶವೇ ಇದಾಗಿದ್ದರೆ, ಅವರು ಅದನ್ನು ಸಾಧಿಸಲು ಸೋತಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ, ನನ್ನಂಥ ಹಲವಾರು ಜನರು ಭೈರಪ್ಪನವರ ಕಾದಂಬರಿಗಳನ್ನು ಓದುವ ಖುಷಿಯಿಂದ ಆಸ್ವಾದಿಸಿದ್ದೇವೆ. ಅವು ನಮ್ಮಲ್ಲಿ ಯಾವತ್ತೂ ಹಿಂದು ಪರ ನಿಲುವನ್ನು ಬೆಳೆಸಲಿಲ್ಲ. ಇಡೀ ಕಾದಂಬರಿಯ ಸಾರಾಂಶ ಇದು ಎಂಬಂಥ ಸಂದೇಶ ನೀಡಲಿಲ್ಲ. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎಂಬ ಮೆಚ್ಚುಗೆ ಬಿಟ್ಟರೆ ಯಾವುದೇ ಕೋಮು, ಧರ್ಮ ಅಥವಾ ಸಿದ್ಧಾಂತದ ಪರ ನಮ್ಮನ್ನು ಒಯ್ಯಲಿಲ್ಲ. ಬಹುಶಃ ಅವರ ಇತ್ತೀಚಿನ ಟೀಕಾಕಾರರಿಗೂ ಇಂಥದೇ ಅನುಭವ ಆಗಿದೆ. ಹಲವಾರು ಸಂದರ್ಭಗಳಲ್ಲಿ ಆ ಬಗ್ಗೆ ಅವರೇ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಹೀಗಿರುವಾಗ, ಭೈರಪ್ಪನವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಲೇಖನ ಆಧಾರವಾಗಿಟ್ಟುಕೊಂಡು, ಅವರ ಒಟ್ಟಾರೆ ಕೃತಿಗಳ ಉದ್ದೇಶದ ಬಗ್ಗೆ ಚರ್ಚಿಸಲು ಹೊರಡುವುದು ಹಾಸ್ಯಾಸ್ಪದ. ಇಂತಹ ಪ್ರತಿಕ್ರಿಯಾ ಬರವಣಿಗೆಗಳ ಮೂಲ ಉದ್ದೇಶವನ್ನೇ ಅದು ಪ್ರಶ್ನಿಸುವಂತೆ ಮಾಡುತ್ತದೆ. ಭೈರಪ್ಪ ತಮ್ಮ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನು ಒಪ್ಪದಿದ್ದರೆ, ಅದನ್ನು ಅಷ್ಟೇ ಸ್ಪಷ್ಟವಾಗಿ, ತಾತ್ವಿಕವಾಗಿಯೇ ಖಂಡಿಸಬೇಕು. ಅದು ಬಿಟ್ಟು, ಅವರ ಕಾದಂಬರಿಗಳಲ್ಲೂ ಇಂಥದೇ ಉದ್ದೇಶವಿತ್ತು, ಈ ವ್ಯಕ್ತಿ ಮೊದಲಿನಿಂದಲೂ ಹೀಗೇ ಕಣ್ರೀ ಎಂದು ಹೇಳಲು ಹೊರಡುವುದು ಮೂರ್ಖತನವಾಗುತ್ತದೆ. ಇವರೆಲ್ಲ ಯಾರನ್ನೋ ಮೆಚ್ಚಿಸಲು ಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟಿಸುತ್ತದೆ.

ಭೈರಪ್ಪನವರ ಲೇಖನದ ಬಹಳಷ್ಟು ವಿಷಯಗಳು ಮೇಲ್ನೋಟಕ್ಕೆ ಮುಸ್ಲಿಂ-ಕ್ರಿಶ್ಚಿಯನ್ ವಿರೋಧಿಯಾಗಿಯೇ ಕಾಣುತ್ತವೆ. ಆದರೆ, ಅವರು ಎತ್ತಿರುವ ಪ್ರಶ್ನೆಗಳು ಯಾವವೂ ಹೊಸವಲ್ಲ. ಕಾಲಕಾಲಕ್ಕೆ ಇಂತಹ ಪ್ರಶ್ನೆಗಳು ಏಳುತ್ತಲೇ ಇವೆ. ಬಹಳಷ್ಟು ಜನ ಇವನ್ನು ಪ್ರಸ್ತಾಪಿಸಿದ್ದೂ ಆಗಿದೆ. ಈಗಲೂ ಅವುಗಳ ಬಗ್ಗೆ ಚರ್ಚೆಗಳು ನಡೆದೇ ಇವೆ. ಭೈರಪ್ಪನವರು ಅವನ್ನು ಕ್ರೋಡೀಕರಿಸಿದಂತೆ ಬರೆದಿದ್ದಾರೆ, ಅಷ್ಟೇ. ಈಗ ಚರ್ಚೆ ನಡೆಯಬೇಕಿರುವುದು ಭೈರಪ್ಪನವರ ನಿಲುವಿನ ಬಗ್ಗೆ ಅಲ್ಲ. ಅವರು ಎತ್ತಿರುವ ಪ್ರಶ್ನೆಗಳ ಬಗ್ಗೆ.

ಆದರೆ, ಅದೇ ನಡೆಯುತ್ತಿಲ್ಲ.

ಒಂದು ಉದಾಹರಣೆ ಮೂಲಕ ಈ ಬರಹ ಮುಗಿಸುತ್ತೇನೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು. ಆಗ ನಮ್ಮ ಬಹುತೇಕ ಬುದ್ಧಿಜೀವಿಗಳು, ಇತ್ತೀಚೆಗಷ್ಟೇ ಜಾತ್ಯತೀತರಾದ ಬಹುತೇಕ ಜನ ಅದನ್ನು ಖಂಡಿಸಲಿಲ್ಲ. ಖಂಡಿಸಿದ ಕೆಲವರಲ್ಲಿ ತೀವ್ರತೆ ಕಾಣಲಿಲ್ಲ. ಇಂಥ ಬೆಳವಣಿಗೆಗಳು ಅಪಾಯಕಾರಿ ಎಂಬುದರ ಬಗ್ಗೆ ಮಾತನಾಡಲಿಲ್ಲ. ಯಾರೋ ಅವಿವೇಕಿಗಳು, ತಪ್ಪು ಸಿದ್ಧಾಂತ ನಂಬಿಕೊಂಡು ಬಾಂಬಿಡುವುದು ಆ ಧರ್ಮದ ಇತರರನ್ನು ಅನುಮಾನಕ್ಕೆ ಈಡು ಮಾಡುತ್ತವೆ ಎಂಬುದರ ಬಗ್ಗೆ ಕಳವಳ ಪಡಲಿಲ್ಲ.

ಆದರೆ, ದತ್ತ ಜಯಂತಿ ಬಂದ ಕೂಡಲೇ ಇವರೆಲ್ಲ ಮೈಕೊಡವಿ ಎದ್ದು ಕೂತರು. ವರ್ಷ ಪೂರ್ತಿ ಸುಪ್ತವಾಗುವ ಕೋಮು ಸೌಹಾರ್ದ ವೇದಿಕೆ ಹಾಗೂ ಅಂತಹ ಸಂಘಟನೆಗಳು ಎದ್ದು ಕೂತವು. ದತ್ತ ಜಯಂತಿ ಮುಗಿಯುವವರೆಗೆ ಅವರೆಲ್ಲ ಫುಲ್ ಬಿಜಿ. ಹಿಂದು ಪರ ಸಂಘಟನೆಗಳನ್ನು ಸಾರಾಸಗಟಾಗಿ ಟೀಕಿಸುತ್ತ, ಧರಣಿ-ಮುಷ್ಕರದ ಎಚ್ಚರಿಕೆ ಕೊಡುತ್ತ ಕಾಲಹರಣ ಮಾಡುವುದು ಬಿಟ್ಟರೆ ಈ ಸಂಘಟನೆಗಳು ಹಾಗೂ ಇವರ ಹಿಂದಿರುವ ಜನರಿಂದ ಸಮಾಜಕ್ಕೆ ಆದ ಒಳಿತು ಅಷ್ಟಕ್ಕಷ್ಟೇ. ದೇಶಕ್ಕೆ ಬಾಂಬಿಡುವ ಜನರನ್ನು ಟೀಕಿಸದ ಇಂಥವರ ಸಾಲಿಗೆ ಈಗ ಭೈರಪ್ಪನವರ ಇತ್ತೀಚಿನ ಟೀಕಾಕಾರರೂ ಸೇರಿಕೊಂಡಿದ್ದಾರೆ.

ತಪ್ಪು ಯಾರೇ ಮಾಡಿರಲಿ, ಅದನ್ನು ತಪ್ಪೆಂದು ಹೇಳುವ ಎದೆಗಾರಿಕೆ ಬೇಕು. ಭೈರಪ್ಪನವರ ನಿಲುವನ್ನು ಖಂಡಿಸಲು ತೋರಿದಂಥ ಉತ್ಸಾಹವನ್ನೇ ಬಾಂಬಿಡುವ ಜನರ ಬಗ್ಗೆಯೂ ತೋರಬೇಕಾಗುತ್ತದೆ. ಇಲ್ಲದಿದ್ದರೆ ಬೌದ್ಧಿಕ ಬರವಣಿಗೆಗಳೆಲ್ಲ ವ್ಯರ್ಥ ಪ್ರಲಾಪವಾಗುತ್ತವೆ.
- ಚಾಮರಾಜ ಸವಡಿ

11 comments:

NilGiri said...

ನಮ್ಮಲ್ಲಿ " ಬುದ್ಧಿಜೀವಿ"ಗಳೆನಿಸಿಕೊಂಡವರೇ ಅದ್ಯಾಕೆ ಹೀಗೆ ಆಡುತ್ತಾರೋ ಗೊತ್ತಿಲ್ಲ. ಬಹುಷಃ ಬುದ್ಧಿಜೀವಿಗಳೆಂದರೆ ಹೀಗೆಯೇ ಇರಬೇಕೇ? ಹಾಗಿದ್ದರೆ ಬಾಂಬಿಡುವವರ ಪೈಕಿ ಯಾರೂ "ಬುದ್ಧಿಜೀವಿ"ಗಳಿಲ್ಲದಿರುವುದು ನಮ್ಮ ದುರ್ದೈವ. ಇನ್ನು ಬಾಂಬಿಡುವವರ ಬಗ್ಗೆ....... ? huh ಅವರ ಬಗ್ಗೆ ಉಸಿರೂ ಎತ್ತುವುದಿಲ್ಲ ಮಹಾಶಯರು.

ಸಂದೀಪ್ ಕಾಮತ್ said...

ಮತಾಂತರದ ಪರ ವಿರೋಧಿ ಚರ್ಚೆ ಬಿಟ್ಟು ಭೈರಪ್ಪ ಪರ ವಿರೋಧಿ ಆಗಿ ಬೆಳೀತಾ ಇದೆ ವಿಕ ಸಂವಾದ.
ನಿಜಕ್ಕೂ ನನ್ಗೆ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಇಷ್ಟೊಂದು ಸಣ್ಣತನಗಳಿರುತ್ತವೆ ಅಂತ ಗೊತ್ತಿರಲಿಲ್ಲ.

ತಾವು ಬರೆದ ಸಾಹಿತ್ಯವನ್ನು ಸಾವಿರಾರು ಜನ ಓದ್ತಾರೆ ಅನ್ನೋ ಅಹಂಕಾರದಿಂದ ಸಾಹಿತಿಗಳು ಈ ಪರಿ ಕಿತ್ತಾಡ್ತಾ ಇದ್ದಾರೇನೋ ??
ಈ ಸಾಹಿತಿಗಳಿಗಿಂತ ಇವತ್ತು ಚಂದ್ರಯಾನ ಕಳಿಸ್ತಾ ಇದ್ದಾರಲ್ಲ ವಿಜ್ಞಾನಿಗಳು ಅವ್ರು ಗ್ರೇಟ್ ಅಂತ ಅವರಿಗೆ ಬಹುಶಃ ಗೊತ್ತಿಲ್ಲ!

ಆಲಾಪಿನಿ said...

ಒಬ್ಬ ಸಾಮಾನ್ಯ ಓದುಗನಿಗೆ, ಅಥವಾ ಬಹುತೇಕ ಓದುಗರಿಗೆ ಅವರ ಬರವಣಿಗೆ ಇಷ್ಟವಾಗುವುದು ಅವರು ಕತೆ ಹೇಳುವ ರೀತಿಯಿಂದಾಗಿ. ಭಾವನೆಗಳನ್ನು ಕಟ್ಟಿಕೊಡುವ ಹದದಿಂದಾಗಿ. ಕಾದಂಬರಿಯ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಓದುಗ ಮುಳುಗಿಹೋಗುತ್ತಾನೆಯೇ ಹೊರತು, ಅದರಲ್ಲಿ ಗುಪ್ತ ಸಂದೇಶ ಇದೆಯಾ? ಎಂಬುದನ್ನು ನೋಡಲು ಆತ ಹೋಗುವುದಿಲ್ಲ. ಹೌದು ಸರ್‍ ಸಾಮಾನ್ಯರಿಗೆ ಬೇಕಿರುವುದು ಇಷ್ಟೇ...

Chamaraj Savadi said...

ನಿಜ ನೀಲಗಿರಿ ಅವರೇ,

ಬುದ್ಧಿಜೀವಿಗಳೆಂದು ಗುರುತಿಸಿಕೊಳ್ಳಲು ಕೆಲವರಿಗೆ ತುಂಬ ಹೆಮ್ಮೆ. ಆದರೆ, ಅದು ವಾಸ್ತವದಿಂದ ದೂರವಾಗಿರಲೇಬೇಕೆ?

- ಚಾಮರಾಜ ಸವಡಿ

Chamaraj Savadi said...

ಸಂದೀಪ್‌ ಅವರೇ, ಕನ್ನಡ ಒಂದೇ ಅಲ್ಲ, ಎಲ್ಲ ಭಾಷೆಯ ಸಾಹಿತ್ಯದಲ್ಲೂ ಇಂತಹ ಸಣ್ಣತನದ ಸಂಗತಿಗಳು ಸಾವಿರಾರಿವೆ. ಬಹುತೇಕ ಸೃಜನಾತ್ಮಕ ಕ್ಷೇತ್ರಗಳಲ್ಲಿ ಕಾಣುವ ಸಂಗತಿಯೇ ಇದು. ಆದರೆ, ಅದು ಈಗಾಗಲೇ ಇದೆ ಎಂಬ ಕಾರಣಕ್ಕೆ ಒಪ್ಪಿಕೊಳ್ಳಬೇಕೆಂದೇನೂ ಇಲ್ಲವಲ್ಲ? ನಮಗೆ ಅನಿಸಿದ್ದನ್ನು ಪ್ರತಿಕ್ರಿಯೆ ಮೂಲಕ ತಿಳಿಸುವುದು ಕರ್ತವ್ಯ ಕೂಡ.

- ಚಾಮರಾಜ ಸವಡಿ

Chamaraj Savadi said...

ನಿಜ ಶ್ರೀದೇವಿ. ಆದರೆ, ಇಂತಹ ಜಗಳಗಳಿಂದ ಜನರಿಗೆ ಸಾಹಿತಿಗಳೆನಿಸಿಕೊಂಡ, ಬುದ್ಧಿಜೀವಿಗಳೆಂದು ಗುರುತಿಸಿಕೊಳ್ಳಲು ಹೆಣಗುತ್ತಿರುವವರ ಸಣ್ಣತನ ಸರಳವಾಗಿ ಗೊತ್ತಾಗುತ್ತದೆ. ಸದ್ಯಕ್ಕೆ ಆಗುತ್ತಿರುವುದೇ ಅದು.

- ಚಾಮರಾಜ ಸವಡಿ

Shree said...
This comment has been removed by the author.
Shree said...

ಭೈರಪ್ಪ ಮತ್ತು ಸಂಬಂಧಿತ ಚರ್ಚೆಯಲ್ಲಿ ನನಗೆ ಅಷ್ಟೊಂದು ಆಸಕ್ತಿ ಇಲ್ಲದಿದ್ದ ಕಾರಣ ಸುಮ್ಮನೆ ಕಣ್ಣಾಡಿಸಿ ವಿಂಡೋ ಕ್ಲೋಸ್ ಮಾಡೋಣ ಅಂದ್ಕೊಂಡೆ ಸರ್, ಅಷ್ಟರಲ್ಲಿ ನಿಮ್ಮ ಕೊನೆಯ ಸಾಲುಗಳು ಗಮನ ಸೆಳೆದವು...

"ಇತ್ತೀಚೆಗೆ ಬೆಂಗಳೂರು ಸೇರಿದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು. ಆಗ ನಮ್ಮ ಬಹುತೇಕ ಬುದ್ಧಿಜೀವಿಗಳು, ಇತ್ತೀಚೆಗಷ್ಟೇ ಜಾತ್ಯತೀತರಾದ ಬಹುತೇಕ ಜನ ಅದನ್ನು ಖಂಡಿಸಲಿಲ್ಲ. ಖಂಡಿಸಿದ ಕೆಲವರಲ್ಲಿ ತೀವ್ರತೆ ಕಾಣಲಿಲ್ಲ. ಇಂಥ ಬೆಳವಣಿಗೆಗಳು ಅಪಾಯಕಾರಿ ಎಂಬುದರ ಬಗ್ಗೆ ಮಾತನಾಡಲಿಲ್ಲ. ಯಾರೋ ಅವಿವೇಕಿಗಳು, ತಪ್ಪು ಸಿದ್ಧಾಂತ ನಂಬಿಕೊಂಡು ಬಾಂಬಿಡುವುದು ಆ ಧರ್ಮದ ಇತರರನ್ನು ಅನುಮಾನಕ್ಕೆ ಈಡು ಮಾಡುತ್ತವೆ ಎಂಬುದರ ಬಗ್ಗೆ ಕಳವಳ ಪಡಲಿಲ್ಲ.

ಆದರೆ, ದತ್ತ ಜಯಂತಿ ಬಂದ ಕೂಡಲೇ ಇವರೆಲ್ಲ ಮೈಕೊಡವಿ ಎದ್ದು ಕೂತರು. ವರ್ಷ ಪೂರ್ತಿ ಸುಪ್ತವಾಗುವ ಕೋಮು ಸೌಹಾರ್ದ ವೇದಿಕೆ ಹಾಗೂ ಅಂತಹ ಸಂಘಟನೆಗಳು ಎದ್ದು ಕೂತವು. ದತ್ತ ಜಯಂತಿ ಮುಗಿಯುವವರೆಗೆ ಅವರೆಲ್ಲ ಫುಲ್ ಬಿಜಿ. ಹಿಂದು ಪರ ಸಂಘಟನೆಗಳನ್ನು ಸಾರಾಸಗಟಾಗಿ ಟೀಕಿಸುತ್ತ, ಧರಣಿ-ಮುಷ್ಕರದ ಎಚ್ಚರಿಕೆ ಕೊಡುತ್ತ ಕಾಲಹರಣ ಮಾಡುವುದು ಬಿಟ್ಟರೆ ಈ ಸಂಘಟನೆಗಳು ಹಾಗೂ ಇವರ ಹಿಂದಿರುವ ಜನರಿಂದ ಸಮಾಜಕ್ಕೆ ಆದ ಒಳಿತು ಅಷ್ಟಕ್ಕಷ್ಟೇ."

ಓದಿ ನಗು ಬಂತು, ಸಿದ್ಧ ಸೂತ್ರಗಳಿಗೆ, ಗೊತ್ತಿರುವುದಕ್ಕೆ, ಪರಿಚಿತವಾದ್ದಕ್ಕೆ ನಾವು ಹೇಗೆ ಅಂಟಿಕೊಳ್ತೀವಲ್ಲ ಅಂತ. ದತ್ತ ಜಯಂತಿ ಆಚರಿಸಿದವರು ಮತ್ತು ಬಾಂಬ್ ಇಟ್ಟವರು ಬೇರೆ ಬೇರೆ ಅಂತ ಗ್ಯಾರಂಟಿಯಾಗಿ ಹೇಳಬಲ್ಲಿರಾ? :)

Chamaraj Savadi said...

”ದತ್ತ ಜಯಂತಿ ಆಚರಿಸಿದವರು ಮತ್ತು ಬಾಂಬ್ ಇಟ್ಟವರು ಬೇರೆ ಬೇರೆ ಅಂತ ಗ್ಯಾರಂಟಿಯಾಗಿ ಹೇಳಬಲ್ಲಿರಾ?”

ಖಂಡಿತ ಶ್ರೀ, ಮಾಲೆಗಾಂವ್‌ನ ಪ್ರಕರಣ ಹೊರತುಪಡಿಸಿ, ಬಾಂಬ್‌ ಇಟ್ಟವರು ಮತ್ತು ದತ್ತ ಜಯಂತಿ ಆಚರಿಸಿದವರು ಬೇರೆ ಬೇರೆ ಅಂತ ಖಂಡಿತವಾಗಿ ಹೇಳುತ್ತೇನೆ.

ಹೌದು, ಈ ಅನುಮಾನ ನಿಮ್ಮಲ್ಯಾಕೆ ಬಂತು?

- ಚಾಮರಾಜ ಸವಡಿ

Shree said...

ಈ ಅನುಮಾನ ನನ್ನಲ್ಯಾಕೆ ಬಂತು ಅನ್ನುವುದಕ್ಕೆ ಈಗ ನಿಮಗೆ ಉತ್ತರ ಸಿಕ್ಕಿರಬೇಕಲ್ಲ ಸರ್? ಕಾಲವೇ ಎಲ್ಲವನ್ನೂ ಹೊರಹಾಕ್ಬಹುದು ಅಂತ ಈವರೆಗೆ ಈ ಕಮೆಂಟ್-ಗೆ ಉತ್ತರಿಸಿರ್ಲಿಲ್ಲ... ಸ್ವಾಮೀಜಿಗಳು, ಭಯೋತ್ಪಾದನೆಯ ಕ್ಯಾಂಪ್-ಗಳು, ಅದಕ್ಕೆ ಸೇನೆಯ ಲಿಂಕ್... ಮಾಲೆಗಾಂವ್ ಮಾತ್ರವಲ್ಲ, ನಾಂದೆಡ್, ಸಂಝೋತಾ ಎಕ್ಸ್-ಪ್ರೆಸ್ ಸಂಬಂಧ... ಬೇರೆಬೇರೆ ಕಡೆ ಕ್ರೂಡ್ ಬಾಂಬ್ ತಯಾರು ಮಾಡ್ತಾ ಸಿಕ್ಕಿಬಿದ್ದ ಆರ್ ಎಸ್ ಎಸ್-ನವರು... ಇಷ್ಟು ಸಾಕು ಅನಿಸುತ್ತದೆ ನಾವೆಲ್ಲಿ ಹೋಗ್ತಾ ಇದೇವೆ ಅಂತ ತಿಳ್ಕೊಳೋದಕ್ಕೆ. ಕರ್ನಾಟಕದಲ್ಲೂ ಒಂದು ATS ಇದೆ, ಅದು ಹೇಗಿದೆ ಅಂದ್ರೆ ಅದು ಇದೆ ಅಂತಲೇ ಗೊತ್ತಾಗದಷ್ಟು ತಣ್ಣಗಿದೆ. ಬೆಂಗಳೂರಿನಲ್ಲಿ ಸಿಡಿದ ಬಾಂಬುಗಳು, ಧಾರವಾಡದಲ್ಲಿ ಸಿಕ್ಕಿದ ಬಾಂಬುಗಳು, ಯಾವುದಕ್ಕೂ ಇಲ್ಲಿವರೆಗೆ ವಾರಸುದಾರರು ಸಿಕ್ಕಿಲ್ಲ. ಯಾಕೆ ಅಂತ ಯಾರೂ ಪ್ರಶ್ನೆ ಕೂಡ ಮಾಡ್ತಿಲ್ಲ, ಮಾಡಿದವರಿಗೆ ಉತ್ತರವೂ ಸಿಕ್ತಿಲ್ಲ. TERRORISM DOESN'T HAVE RELIGION. AND WE ARE MOVING TOWARDS A FUTURE WHICH WILL BE PAINTED IN RED.

Kamat's Potpourri said...

neevu hakiruva chitravannu tegedaddu nanna tandeyavaru. dayavittu kanike soochisi athava namma chitragalannu balasabedi.