ಗುರುದತ್ ಎಂಬ ದುರಂತ ನಾಯಕ

10 Oct 2008

ಆತ ದುರಂತ ನಾಯಕ. ಆತನ ಜೀವನದಲ್ಲಷ್ಟೇ ಅಲ್ಲ, ನಟಿಸಿದ ಹಾಗೂ ನಿರ್ಮಿಸಿದ ಚಿತ್ರಗಳುದ್ದಕ್ಕೂ ಈ ದುರಂತ ಪ್ರತಿಫಲಿಸಿದೆ. ಕನ್ನಡಿಗನಾಗಿ ಹುಟ್ಟಿ, ಬಂಗಾಳಿಯಾಗಿ ಬೆಳೆದು, ನಟ-ನಿರ್ದೇಶಕನಾಗಿ ಅಮರನಾದ ಗುರುದತ್ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ. ನಿದ್ದೆ ಗುಳಿಗೆ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ೪೪ ವರ್ಷಗಳು. ಹಿಂದಿ ಚಿತ್ರರಂಗ ಎಂದೂ ಮರೆಯದ ಈ ಮಹಾನ್ ಪ್ರತಿಭೆ ಇವತ್ತಿಗೂ ದಂತಕಥೆ.

ಗುರುದತ್ ಹುಟ್ಟಿದ್ದು ಕನ್ನಡಿಗನಾಗಿ. ಶಿವಶಂಕರರಾವ್ ಪಡುಕೋಣೆ ಹಾಗೂ ವಸಂತಿ ದಂಪತಿಗಳ ಮಗನಾಗಿ ೧೯೨೫ರ ಜುಲೈ ೯ ರಂದು ಬೆಂಗಳೂರಿನಲ್ಲಿ ಜನಿಸಿದಾಗ ಆತನ ತಾಯಿಗೆ ಕೇವಲ ೧೬ ವರ್ಷದ ಪ್ರಾಯ. ಗುರುದತ್‌ನ ಮೊದಲ ಹೆಸರು ವಸಂತ ಕುಮಾರ್. ಅಪ್ಪ ಶಿವಶಂಕರ್ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ನೆಲೆಸಿದ್ದವರು. ಬ್ಯಾಂಕ್ ನೌಕರಿಗೆ ಹೋಗುವ ಮೊದಲು ಇಲ್ಲಿಯೇ ಶಿಕ್ಷಕರಾಗಿದ್ದ ಶಿವಶಂಕರರಾವ್ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತಮ್ಮಂದಿರಾದ ಆತ್ಮಾರಾಮ್, ದೇವಿದಾಸ್ ಹಾಗೂ ತಂಗಿ ಲಲಿತಾ ಅವರೊಂದಿಗೆ ಕಷ್ಟಕರ ಬಾಲ್ಯ ಕಳೆದ ಗುರುದತ್, ಕ್ರಮೇಣ ಆಸಕ್ತಿ ತೋರಿದ್ದು ಸಿನಿಮಾ ಪೋಸ್ಟರ್‌ಗಳ ಚಿತ್ರಗಳನ್ನು ಬಿಡಿಸುವತ್ತ.

ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆಗೆ ಕೋಲ್ಕತಾದ ಭವಾನಿಪುರಕ್ಕೆ ವರ್ಗವಾಯಿತು. ಗುರುದತ್ ಪ್ರಾಥಮಿಕ ವಿದ್ಯಾಭ್ಯಾಸ ಆಗಿದ್ದು ಅಲ್ಲೇ. ಬಂಗಾಳಿ ಭಾಷೆ ಸಹಜವಾಗಿ ರೂಢಿಯಾಗಿದ್ದರಿಂದ ಆತನ ಪ್ರತಿಯೊಂದು ಕೆಲಸದಲ್ಲಿಯೂ ಬಂಗಾಳಿ ಪ್ರಭಾವ ಎದ್ದು ಕಾಣುತ್ತಿತ್ತು. ಮುಂದೆ ಹೊಟ್ಟೆಪಾಡಿಗಾಗಿ ಮುಂಬೈ ಚಿತ್ರೋದ್ಯಮಕ್ಕೆ ಬಂದಾಗ, ತನ್ನ ಹೆಸರಿನೊಂದಿಗೆ ಇದ್ದ ತಂದೆಯ ಹೆಸರು ಹಾಗೂ ಪಡುಕೋಣೆ ಎಂಬ ಅಡ್ಡಹೆಸರನ್ನು ತೆಗೆದುಹಾಕಿ, ಗುರುದತ್ ಎಂದು ಗುರುತಿಸಿಕೊಂಡರು. ಕನ್ನಡ ಹಾಗೂ ಕನ್ನಡಿಗರೊಂದಿಗೆ ಆತನ ಸಂಬಂಧ ಶಾಶ್ವತವಾಗಿ ಕಡಿದುಹೋಯಿತು.

ಆದರೆ, ಸಿನಿಮಾ ನಟ ಹಾಗೂ ನಿರ್ದೇಶಕನಾಗಿ ಗುರುದತ್ ಸಾಧಿಸಿದ್ದು ಅಪಾರ. ಕಲಾಸಕ್ತಿ ಆತನನ್ನು ಆ ಕಾಲದ ಖ್ಯಾತ ನೃತ್ಯಪಟು ಉದಯಶಂಕರ್ ಅವರ ನಾಟಕ ಶಾಲೆಯತ್ತ ಸೆಳೆಯಿತು. ಹದಿನಾರು ವರ್ಷದ ಗುರುದತ್ ಆ ಕಾಲದಲ್ಲಿಯೇ ವರ್ಷಕ್ಕೆ ೭೫ ರೂಪಾಯಿಗಳಂತೆ ಐದು ವರ್ಷದ ಶಿಷ್ಯವೇತನ ಗಳಿಸಿದ್ದ. ಆದರೆ, ಎರಡನೇ ಮಹಾಯುದ್ಧದ ಪರಿಣಾಮವಾಗಿ ನಾಟಕ ಶಾಲೆ ಮುಚ್ಚಿತು. ಕೋಲ್ಕತಾದಲ್ಲಿ ದೂರವಾಣಿ ನಿರ್ವಾಹಕನಾಗಿ, ಪುಣೆಯ ಪ್ರಭಾತ್ ಫಿಲ್ಮ್ ಕಂಪನಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿದ ನಂತರ, ಮುಂಬೈಗೆ ತೆರಳಿದ ಗುರುದತ್ ಕೊನೆಯವರೆಗೂ ಉಳಿದಿದ್ದು, ಬೆಳೆದಿದ್ದು ಅಲ್ಲಿಯೇ. ೧೯೪೫ರಲ್ಲಿ ನಟನಾಗಿ, ಸಹ ನಿರ್ದೇಶಕನಾಗಿ ’ಲಖ್ರಾನಿ’ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಗುರುದತ್, ’ಹಮ್ ಏಕ್ ಹೈ’ ಚಿತ್ರದ ಮೂಲಕ ನೃತ್ಯ ನಿರ್ದೇಶನವನ್ನೂ ಮಾಡಿದ.

ಆದರೆ, ಅದೃಷ್ಟ ಒಲಿಯಲಿಲ್ಲ. ಮುಂದಿನ ಕೆಲ ವರ್ಷಗಳನ್ನು ಅನಾಮಧೇಯನಂತೆ ಕಳೆದ ಗುರುದತ್ ಮತ್ತೆ ಖ್ಯಾತಿಗೆ ಬಂದಿದ್ದು ’ಬಾಝಿ’ ಸಿನಿಮಾ ನಿರ್ದೇಶನದ ಮೂಲಕ. ಆ ಚಿತ್ರದಲ್ಲಿ ಬಳಸಿದ ಸಮೀಪ ದೃಶ್ಯಗಳ ಚಿತ್ರಣ ಕಲೆ ’ಗುರುದತ್ ಶಾಟ್’ ಎಂದೇ ಜನಪ್ರಿಯವಾಯಿತು. ಹಲವಾರು ಪ್ರಥಮಗಳಿಗೆ ಸಾಕ್ಷಿಯಾದ ’ಬಾಝ’ ಚಿತ್ರ ಗುರುದತ್‌ಗೆ ಮುಂದೆ ತಮ್ಮ ಪತ್ನಿಯಾಗಲಿರುವ ಗೀತಾ ಅವರನ್ನು ಪರಿಚಯಿಸಿತು. ನಂತರದ ಎರಡು ಚಿತ್ರಗಳು ವಿಫಲವಾದರೂ ’ಆರ್ ಪಾರ್’ ಚಿತ್ರ ಯಶಸ್ವಿಯಾಯಿತು. ಮುಂದೆ ಬಂದಿದ್ದೆಲ್ಲ ಹಿಟ್ ಚಿತ್ರಗಳೇ. ೧೯೫೭ರಲ್ಲಿ ತೆರೆ ಕಂಡ ’ಪ್ಯಾಸಾ’ ಹಿಂದಿ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಗುರುತಿಸಲ್ಪಟ್ಟಿತು. ನಿರಾಸಕ್ತ ಪ್ರಪಂಚದಿಂದ ತಿರಸ್ಕೃತನಾಗಿ, ಮನ್ನಣೆಯಿಲ್ಲದೇ ಸಾಯುವ ಕವಿಯೊಬ್ಬ, ಮರಣಾನಂತರ ಖ್ಯಾತನಾಗುವ ಕಥೆ ಹೊಂದಿದ್ದ ’ಪ್ಯಾಸಾ’ ಒಂದರ್ಥದಲ್ಲಿ ಗುರುದತ್‌ನ ಆತ್ಮಚರಿತ್ರೆಯಂತೆ.

ದುರಂತಮಯ ವೈಯಕ್ತಿಕ ಜೀವನ ಹೊಂದಿದ್ದ ಗುರುದತ್ ಆ ನೋವನ್ನು ಮರೆಯಲು ಚಿತ್ರ ನಿರ್ಮಾಣ ಹಾಗೂ ನಿರ್ದೇಶನದ ಮೊರೆ ಹೋದ. ತನ್ನ ನೋವು ಹಾಗೂ ಕನಸುಗಳನ್ನು ಚಿತ್ರಗಳ ಮೂಲಕ ಬಿಂಬಿಸಿದ. ಆತ ನಟಿಸಿದ ’ಸಾಹೀಬ್ ಬೀವಿ ಔರ್ ಗುಲಾಮ’,’ಚೌದವೀ ಕಾ ಚಾಂದ’,’ಆರ್ ಪಾರ್’, ’ಸುಹಾಗನ್’ ಇವತ್ತಿಗೂ ಸ್ಮರಣೀಯ. ಆತ ನಟಿಸಿ ನಿರ್ದೇಶಿಸಿದ ’ಕಾಗಜ್ ಕೆ ಫೂಲ್’ ಮತ್ತು ’ಪ್ಯಾಸಾ’ ಚಿತ್ರಗಳು ಇವತ್ತಿಗೂ ಹಿಂದಿ ಚಿತ್ರರಂಗದ ಮೈಲಿಗಲ್ಲುಗಳು.

ಪ್ರೇಮದ ನವಿರು ಭಾವನೆಗಳನ್ನು ಸೊಗಸಾಗಿ ಚಿತ್ರೀಕರಿಸುವ ಮೂಲಕ ಹಿಂದಿ ಸಿನಿಮಾಗಳಿಗೆ ಸೂಕ್ಷ್ಮತೆ ತಂದುಕೊಟ್ಟ ಗುರುದತ್ ತಮ್ಮ ಸಮಕಾಲೀನ ನಟ, ನಿರ್ದೇಶಕರನ್ನು ಪ್ರಭಾವಗೊಳಿಸಿದಾತ. ಅತ್ಯಂತ ಬಡತನದಿಂದ ಬಂದಿದ್ದರೂ ಹಿಂದಿ ಚಿತ್ರರಂಗದ ದಂತಕತೆಯಾದಾತ. ವೈಯಕ್ತಿಕ ಜೀವನದ ನೋವು, ವೃತ್ತಿ ಜೀವನದ ಅನಿವಾರ್ಯತೆಗಳು ತಂದುಕೊಟ್ಟ ಆಘಾತ ಮರೆಯಲಾಗದೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾಗ ಗುರುದತ್‌ಗೆ ಕೇವಲ ೩೯ ವರ್ಷ ವಯಸ್ಸು.

’ಸುಹಾನೀ ರಾತ್ ಢಲ್ ಚುಕೀ ಹೈ
ನ ಜಾನೇ ತುಮ್ ಕಬ್ ಆವೋಗೇ...’

ಎಂಬ ಆತನ ಚಿತ್ರದ ಹಾಡು ಗುರುದತ್‌ನನ್ನು, ಆತನ ಕೊಡುಗೆಯನ್ನು ಮತ್ತೆ ಮತ್ತೆ ನೆನಪಿಸುತ್ತವೆ.

- ಚಾಮರಾಜ ಸವಡಿ

1 comment:

www.kumararaitha.com said...

"ಗುರುದತ್ ಕುರಿತ ಬರಹ ಮನಮುಟ್ಟುತ್ತದೆ.ಪ್ಯಾಸಾ,ಸಾಹಿಬ್ ಬೀವಿ ಔರ್‍ ಗುಲಾಮ್,ಕಾಗಜ್ ಕಿ ಪೂಲ್;ಭಾರತೀಯ ಚಿತ್ರರಂಗ ಇರುವ ತನಕ ಅಮರ.ನನ್ನ ಪ್ರಕಾರ ಕಪ್ಪು-ಬಿಳುಪು
ಪ್ರಕಾರವನ್ನು ಈತನಷ್ಟು ಚೆನ್ನಾಗಿ ದುಡಿಸಿಕೋಂಡವರು ಭಾರತೀಯ ಚಿತ್ರರಂಗದಲ್ಲಿ ಮತ್ತೋಬ್ಬರಿಲ್ಲ.ಅದೇ ರೀತಿ ಕ್ಯಾಮರಾವನ್ನು ದುಡಿಸಿಕೋಂಡ ರೀತಿ ಕೂಡ ಅದ್ವುತ.ಈತ ಇನಷ್ಟು ಕಾಲ ಬದುಕಬೇಕಿತ್ತು.ಇಂಥ ಅಪರೂಪದ ಸಿನಿ ನಿರ್ದೇಶಕನನ್ನು ನೆನಪಿಸಿದ ನಿಮಗೆ ಧನ್ಯವಾದ-ಕುಮಾರ ರೈತ