ರಸ್ತೆ ನೆರಳಲ್ಲಿ ಮಲಗಿದ ಮಕ್ಕಳು ಮತ್ತು ನೆನಪುಗಳು...

9 May 2011

ನಾನು ಅಪ್ಪನಾಗಿ ಒಂಬತ್ತು ವರ್ಷಗಳಾದವು. ಅವತ್ತಿನಿಂದ ಅವ್ವ ಅಗಾಗ ತುಂಬ ನೆನಪಾಗುತ್ತಿರುತ್ತಾಳೆ.

ಆಗೆಲ್ಲ ಊರಿಗೆ ಫೋನ್ ಮಾಡುತ್ತೇನೆ. ಸುಮ್ಮನೇ ಹರಟುತ್ತೇನೆ. ಮಾತು ಬಾರದ, ಬಹುಶಃ ಎಂದಿಗೂ ಅರ್ಥಪೂರ್ಣವೆನಿಸುವ ರೀತಿ ಮಾತನಾಡಲು ಆಗದ ದೊಡ್ಡ ಮಗಳ ಕೈಗೆ ಫೋನ್ ಕೊಟ್ಟು, ಅವಳ ಕಿವಿಗೆ ಹಿಡಿಯುತ್ತೇನೆ. ಆ ಕಡೆಯಿಂದ ಅವ್ವನ ಧ್ವನಿ ಕೇಳುತ್ತಲೇ ಮಗಳು ಗೌರಿ ‘ಅಬುವಾ’ ಎಂದು ಕೂಗುತ್ತಾಳೆ. ಅವಳ ಭಾಷೆಯಲ್ಲಿ, ಅದಕ್ಕೆ ಅಜ್ಜಿ ಎಂಬರ್ಥ. ಅವ್ವ ಖುಷಿಯಾಗಿ, ನನ್ನ ಮಗಳಿಗಷ್ಟೇ ಅರ್ಥವಾಗುವ ರೀತಿ ಮಾತನಾಡುತ್ತಾ ಹೋಗುತ್ತಾಳೆ. ಈ ಕಡೆಯಿಂದ ಇವಳು, ಏಯ್, ಏಯ್, ಹ್ಹೂಂ ಎಂದೆಲ್ಲಾ ಕೂಗುತ್ತಿರುತ್ತಾಳೆ. 

ನಾನು ಮೂಕನಂತೆ ನೋಡುತ್ತಿರುತ್ತೇನೆ. ನನಗೆ ಇಬ್ಬರ ಭಾವನೆಗಳೂ ಅರ್ಥವಾಗುತ್ತವೆ. 

ಒಂದು ಹಂತದಲ್ಲಿ ಮಗಳು ಫೋನನ್ನು ನನ್ನ ಕೈಗಿತ್ತು ತನ್ನ ಜಗತ್ತಿಗೆ ಸರಿದುಹೋಗುತ್ತಾಳೆ. ಈಗ ತಾನೆ ಮೊದಲ ಬಾರಿ ಮನೆ ಬಿಟ್ಟು ಬಂದಿದ್ದೇನೋ ಎಂಬಂಥ ಕಾಳಜಿಯ ಮಾತುಗಳು ಆ ಕಡೆಯಿಂದ. ಊಟ ಆಯ್ತಾ? ಸರಿಯಾಗಿ ಊಟ ಮಾಡು. ಮಧ್ಯಾಹ್ನ ಏಕೆ ಊಟ ಬಿಟ್ಟಿದ್ದೀ? ವಯಸ್ಸಿನಲ್ಲಿ ಚೆನ್ನಾಗಿ ಉಣಬೇಕು. ಏನಪ್ಪಾ ನೀನು! ಓದೋವಾಗ ಸರಿಯಾಗಿ ಉಣ್ಣುವ ಯೋಗ ಇರಲಿಲ್ಲ. ಈಗ ಏಕೆ ಹೊಟ್ಟೆ ಕಟ್ಟುತ್ತೀ? ಎಂಬ ಥೇಟ್ ತಾಯಿಯ ಕರುಳು. ಕೆಲಸದ ಬಗ್ಗೆ, ನನ್ನ ನಿರಂತರ ಕೆಲಸ ಬದಲಿಸುವಿಕೆ ಬಗ್ಗೆ ಆಕೆಯ ಕಾಳಜಿ. ಹಿತ್ತಿಲಲ್ಲಿ ಬೆಳೆಸಿರುವ ಗಿಡಬಳ್ಳಿಗಳು, ಧಗೆಯುಕ್ಕಿಸುವ ಬೇಸಿಗೆ ಬಿಸಿಲು, ನೆಂಟರು, ಪರಿಚಯದವರ ಮದುವೆಗಳು, ಇಹಯಾತ್ರೆ ಮುಗಿಸಿದವರ ವಿವರಗಳು ರವಾನೆಯಾಗುತ್ತವೆ. ಸುಮ್ಮನೇ ಹೂಂಗುಟ್ಟುತ್ತ ಹೋಗುತ್ತೇನೆ. ಆಕೆ ಹೇಳುವ ಎಷ್ಟೋ ವಿವರಗಳು ನನ್ನ ಮನಸ್ಸಿಗೆ ಬಲು ಮಸುಕು.

ಏಕೆಂದರೆ, ೧೯೮೪ರಲ್ಲಿ ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಇನ್ನೂ ಅಲೆಮಾರಿಯಂತೆ ಸುತ್ತುತ್ತಲೇ ಇದ್ದೇನೆ. ಆಗ ನಮ್ಮೂರಲ್ಲಿ ಟಿವಿ ಕೂಡ ಬಂದಿರಲಿಲ್ಲ. ಫೋನು ಲಕ್ಷುರಿ. ೧೫ ಪೈಸೆಯ ಅಂಚೆ ಕಾರ್ಡ್ ಹಾಗೂ ಸದಾ ಕೆಟ್ಟ ಸುದ್ದಿಗಳನ್ನೇ ತರುತ್ತಿದ್ದ ಟೆಲಿಗ್ರಾಮ್ ಆಗ ಬಲು ಫೇಮಸ್! ಸಂಯುಕ್ತ ಕರ್ನಾಟಕ ಬೆಳಿಗ್ಗೆ ೧೦ಕ್ಕೆಲ್ಲಾ ಬಂದರೆ, ಪ್ರಜಾವಾಣಿ ಮರುದಿನ ಮಧ್ಯಾಹ್ನ ಬರುತ್ತಿತ್ತು. ಅಂಥ ಕಾಲದಲ್ಲಿ ಊರು ಬಿಟ್ಟವನಿಗೆ ಇಹಲೋಕದ ಯಾತ್ರೆ ಮುಗಿಸಿದವರ ಹಾಗೂ ಅವರ ಕರುಳುಬಳ್ಳಿಗಳ ಮುಖಗಳ ನೆನಪಾದರೂ ಹೇಗೆ ಉಳಿದೀತು?

ಅವ್ವನಿಗೆ ಫೋನಿಡುವ ಮನಸ್ಸಿರುವುದಿಲ್ಲ. ಅಷ್ಟೊತ್ತಿಗೆ ನನಗೆ ಸಣ್ಣಗೇ ಊರಿನ ಗೀಳು ಶುರುವಾಗಿರುತ್ತದೆ. ಒಂದಲ್ಲ ಒಂದಿನ ಈ ಜಂಜಡಗಳನ್ನೆಲ್ಲ ಕೈಬಿಟ್ಟು ವಾಪಸ್ ಊರಿಗೆ ಹೋಗಬೇಕೆನ್ನುವ ಆಸೆಯನ್ನು ಇವತ್ತಿಗೂ ಜೀವಂತವಾಗಿಟ್ಟುಕೊಂಡಿರುವುದರಿಂದ, ನನ್ನ ಬಾಲ್ಯ ಸಣ್ಣಗೇ ಕಾಡತೊಡಗುತ್ತದೆ. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿರದ, ಊರಿನಿಂದ ೬೦ ಕಿಮೀ ದೂರ ಓಡಾಡಿರದ ಅಪ್ಪಟ ೧೬ ವರ್ಷಗಳನ್ನು ಅಲ್ಲಿ ಕಳೆದಿದ್ದೇನೆ. ಸಕ್ಕರೆ, ಅಕ್ಕಿಯಂಥ ಇವತ್ತಿನ ಅತಿ ಸಾಮಾನ್ಯ ದಿನಸಿಯನ್ನು ಅತ್ಯಂತ ಉಳ್ಳವರು ಮಾತ್ರ ನಿತ್ಯ ಬಳಸುತ್ತಿದ್ದಂಥ ಕಾಲವದು. ಅಂಥದೊಂದು ಊರಿನ ನೆನಪು ಇವತ್ತಿಗೂ ನನ್ನ ನಿತ್ಯ ಕನಸುಗಳಲ್ಲಿ ಒಂದು 

ಅವ್ವನೊಂದಿಗೆ ಮಾತನಾಡಿ ಫೋನಿಟ್ಟ ನಂತರ ನಾನು ಕೊಂಚ ಮಂಕಾಗುತ್ತೇನೆ. ನನಗೆ ಅವ್ವನೆಂದರೆ ನನ್ನೂರು. ನನ್ನೂರೆಂದರೆ ನನ್ನ ಬಾಲ್ಯ. ನನ್ನ ಬಾಲ್ಯವೆಂದರೆ ನನ್ನ ಅಪಾರ ಏಕಾಂಗಿತನ ಹಾಗೂ ಅಪ್ಪಟ ಕನಸುಗಳು. ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಮುಂದೆ ಅರ್ಧ ದೇಶ ಸುತ್ತಾಡಿದೆ. ತರಹೇವಾರಿ ಕೆಲಸ ಮಾಡಿದೆ. ಬದುಕು ನಾನಾ ರೀತಿಯ ಪೆಟ್ಟುಗಳನ್ನು ಕೊಟ್ಟು ನನ್ನನ್ನು ತಿದ್ದಿತು. ಕೆಲವೊಂದು ಪೆಟ್ಟುಗಳನ್ನು ನಾನೇ ಕೊಟ್ಟುಕೊಂಡು ತಿದ್ದಿಕೊಂಡೆ. ಎಲ್ಲಾ ಪ್ರಯೋಗಗಳ ಫಲವಾಗಿ, ಪರವಾಗಿಲ್ಲ, ಈಗ ನೆಮ್ಮದಿಯಿಂದ ಉಸಿರಾಡಬಹುದು ಎಂಬ ದಿನಗಳು ಬಂದಾಗೆಲ್ಲ ನನ್ನೂರಿನ ನೆನಪು, ಅವ್ವನ ಪ್ರೀತಿ ನನ್ನನ್ನು ಮತ್ತೆ ಮತ್ತೆ ಕಾಡಿದೆ.

ಎಲ್ಲಕ್ಕಿಂತ ತೀವ್ರವಾಗಿ ಈ ನೆನಪುಗಳು ಉಕ್ಕತೊಡಗಿದ್ದುದು ನಾನು ತಂದೆಯಾದ ನಂತರದಿಂದ. ಮೊದಲ ಮಗಳು ವಿಶಿಷ್ಟಚೇತನೆಯಾಗಿದ್ದರಿಂದ, ಒಂಬತ್ತು ವರ್ಷಗಳಾಗಿದ್ದರೂ ಆಕೆ ನಮಗಿನ್ನೂ ಪುಟ್ಟ ಮಗುವೇ. ಅದೊಂದು ಮುಗಿಯದ ಬಾಲ್ಯ. ನಾವು ನಿತ್ಯ ನವ ತಂದೆತಾಯಿಗಳು. ಪ್ರತಿ ದಿನ ನನಗೆ ಅವ್ವ ನೆನಪಾಗುತ್ತಾಳೆ. ಆರು ಮಕ್ಕಳನ್ನು ಆ ಬಡತನದಲ್ಲಿ ಆಕೆ ಹೇಗೆ ಸಲಹಿದಳು ಎಂದು ನಿತ್ಯ ಅಚ್ಚರಿಪಡುತ್ತೇನೆ. ನಾನು ಮೊದಲ ಬಾರಿ ಕ್ಯಾಡಬರೀಸ್‌ನಂಥ ಚಾಕೊಲೇಟ್ ತಿಂದಿದ್ದೇ ಮೊದಲ ಮಗಳು ಹುಟ್ಟಿದ ನಂತರ ಎಂಬುದನ್ನು ನೆನೆದಾಗ, ಅವ್ವ ಮಾಡಿದ ತ್ಯಾಗ ನಿತ್ಯ ಕಣ್ಮುಂದೆ ಬರುತ್ತಲೇ ಇರುತ್ತದೆ. 

ತೀರಾ ಖಾಸಗಿ ಎನಿಸುವಂಥ ನೆನಪುಗಳವು. ಅಂಥ ಸಾವಿರ ಸಾವಿರ ನೋಟಗಳನ್ನು ನಾನು ಓಡಾಡಿದ ಊರುಗಳಲ್ಲೆಲ್ಲ ನೋಡಿದ್ದೇನೆ, ನೋಡುತ್ತಿದ್ದೇನೆ. ಸಣ್ಣ ನೆರಳಲ್ಲಿ ಎಳೆಮಕ್ಕಳನ್ನು ಮಲಗಿಸಿ ಕೆಲಸ ಮಾಡುವ ತಾಯಂದಿರ ನೋಟಗಳು ನನ್ನನ್ನು ಮಂಕಾಗಿಸುತ್ತವೆ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ನನ್ನ ತಮ್ಮ ಮತ್ತು ತಂಗಿಯರನ್ನು ನಾನು ನೋಡಿಕೊಳ್ಳುತ್ತಿದ್ದ ದಿನಗಳು ಕಣ್ಮುಂದೆ ಬರುತ್ತವೆ. ಅವ್ವ ಹೊಲದಿಂದ ರಾತ್ರಿ ಹಿಂದಿರುಗುವವರೆಗೂ ಅವರ ಜವಾಬ್ದಾರಿ, ಮನೆ ಕಾಯುವ ಕೆಲಸ ನನ್ನ ಮೇಲಿತ್ತು. ದೂರದಲ್ಲಿದ್ದ, ನಿತ್ಯ ಬಾರದ ನಲ್ಲಿಯ ನೀರು ಸಿಕ್ಕದೇ, ಬಾವಿಯಿಂದ ನೀರು ಸೇದುವ; ವಿದ್ಯುತ್ತಿಲ್ಲದ ದೊಡ್ಡ ಮನೆಯಲ್ಲಿರಲು ಭಯಪಡುತ್ತಿದ್ದ ತಂಗಿ-ತಮ್ಮಂದಿರನ್ನು ಪುಟ್ಟ ಕಂದೀಲಿನ ಸುತ್ತ ಕೂಡಿಸಿ ಮಾತನಾಡುತ್ತಿದ್ದ ದಿನಗಳು ನೆನಪಾಗುತ್ತವೆ. ಅವ್ವ ಮನೆಗೆ ಬಂದ ನಂತರವೇ ಖುಷಿ ಉಕ್ಕುತ್ತಿತ್ತು. ಆನಂತರವಷ್ಟೇ ನಾನು ಪುಸ್ತಕ ತೆರೆಯುತ್ತಿದ್ದುದು. ಹಾಗೆ, ಆ ಕಂದೀಲಿನ ಮಂದ ಬೆಳಕಲ್ಲಿ ಓದಿದ ದಿನಗಳ ತೀವ್ರ ಖುಷಿಯೇ ಇವತ್ತಿಗೂ ನನ್ನನ್ನು ರಾತ್ರಿ ಎಚ್ಚರವಾಗಿಡುತ್ತದೆ. ನನ್ನ ಸಾವಿರ ಸಾವಿರ ನೆನಪುಗಳಿಗೆ ರಾತ್ರಿಯ ನೀರವತೆ, ಮಂದ ಬೆಳಕು, ನಿಶ್ಯಬ್ದ ಪುಟ ನೀಡುತ್ತವೆ.

ವಿಶ್ವ ಅಮ್ಮಂದಿರ ದಿನ ಎಂಬ ನೆಪದಲ್ಲಿ ಇವೆಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ. ದಿನಾಚರಣೆಗೂ ನೆನಪುಗಳಿಗೂ ಸಂಬಂಧವಿಲ್ಲ. ಅವು ನಿತ್ಯನೂತನ. ಅವು ಉಕ್ಕಲು ಇವೆಲ್ಲ ಕೇವಲ ನೆಪ ಮಾತ್ರ ಎಂಬುದು ಗೊತ್ತಿದ್ದರೂ, ಬೀದಿಯ ನೆರಳಿನಲ್ಲಿ ಮಕ್ಕಳನ್ನು ಮಲಗಿಸಿ, ಕೆಲಸ ಮಾಡುತ್ತಿರುವ ತಾಯಂದಿರನ್ನು ನೋಡಿದಾಗ, ಮನಸ್ಸು ಕರಗುತ್ತದೆ. ಆ ತಾಯಂದಿರು ನನ್ನ ಅವ್ವನನ್ನು ನೆನಪಿಸುತ್ತಾರೆ. ಬದುಕಿನ ಕಠೋರತೆ ನೆನಪಾಗುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥ, ದ್ವೇಷ ನೆನಪಾಗುತ್ತವೆ. ಆ ಮಕ್ಕಳು ಬೀದಿಯಲ್ಲಿರಲು ಎಲ್ಲೋ ನಾವೂ ಕಾರಣಕರ್ತರೆಂಬ ಅಪರಾಧಿ ಭಾವನೆ ದಟ್ಟವಾಗುತ್ತದೆ. ಮೋಹದಲ್ಲಿ, ಸಿಂಗಾರದಲ್ಲಿ, ಅಬ್ಬರದ ಶಬ್ದ, ಕಣ್ಣು ಕೋರೈಸುವ ಬೆಳಕಿನ ಜಗತ್ತಿನಲ್ಲಿ ಇಂಥ ಭಾವನೆಗಳು ಪಳೆಯುಳಿಕೆಗಳಂತೆ ಕಾಣಬಹುದು. ಅವರವರು ಪಡೆದುಕೊಂಡು ಬಂದಿದ್ದು ಎಂಬ ಒಣಮಾತು ನೆನಪಾಗಬಹುದು. ಹೀಗಿದ್ದರೂ, ಈ ಮಕ್ಕಳು, ಈ ತಾಯಂದಿರು ನನಗೆ ನನ್ನೂರನ್ನು, ನನ್ನವ್ವನನ್ನು, ನನ್ನ ಬಾಲ್ಯವನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಮಂಕಾಗಿಸುತ್ತಾರೆ.

ಈ ಎಲ್ಲಾ ಮಕ್ಕಳು ನಳನಳಿಸುತ್ತ ಬೆಳೆಯಲಿ. ದೊಡ್ಡವರಾಗಲಿ. ಮುಂದೊಂದು ದಿನ ತಮ್ಮ ಮಕ್ಕಳ ಕೈಯಿಂದ ದೂರದಲ್ಲೆಲ್ಲೋ ಇರುವ ತಮ್ಮ ತಾಯಂದಿರಿಗೆ ಫೋನ್ ಮಾಡಿಸಲಿ. ಹಳೆಯ ನೆನಪುಗಳನ್ನು ಕೆದಕಿಕೊಳ್ಳಲಿ. ಮತ್ತೆ ಊರಿಗೆ ಹೋಗುವ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲಿ. ನೆಮ್ಮದಿ ಎಂಬುದು ಎಲ್ಲರ ಹಕ್ಕು. ಮತ್ತು, ಅದನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ ಕೂಡಾ ಎಂಬುದು ಅವರಿಗೆ ಮನದಟ್ಟಾಗಲಿ-

ಹಾಗಂತ ಆಶಿಸುತ್ತಾ, ಬರೆಯುತ್ತಾ ಮೌನವಾಗುತ್ತೇನೆ. ಮನಸ್ಸಿನ ತುಂಬ ಊರಿನ, ಅವ್ವನ, ಬಾಲ್ಯದ ನೆನಪು. 

- ಚಾಮರಾಜ ಸವಡಿ
(ಚಿತ್ರ ಕೃಪೆ: ಪ್ರಜಾವಾಣಿ, ಛಾಯಾಗ್ರಾಹಕ: ಶಿವಮೊಗ್ಗ ಯೋಗರಾಜ್‌)

4 comments:

shivakumar said...

tumba bhaavukaraagi bareetiri! ofcourse adu nimma baravanige shakti irabahudu, aadare, yaake bhaavukate hedarike huttisutto gottilla, odida mele nanage manassu tumbi bantu, gouri chennagirali, omme maatra nodida nenapu, nanna hi tilisi.. Shivakumar Menasinakai

ರಾಘವೇಂದ್ರ ಜೋಶಿ said...

ದಿನಾಚರಣೆಗೂ ನೆನಪುಗಳಿಗೂ ಸಂಬಂಧವಿಲ್ಲ. ಅವು ನಿತ್ಯನೂತನ-
ನಿಜ,ಚಾಮರಾಜರೇ..ಬಿಟ್ಟೆನೆಂದರೂ ಬಿಡದೀ ಮಾಯೆ ಬಿಟ್ಟುಕೊಟ್ಟರೂ ಅಟ್ಟಿಸಿಕೊಂಡು ಬರುತ್ತದೆ.
ಮಗಳಿಗೆ ನನ್ನ ಪ್ರೀತಿ-ಶುಭ ಹಾರೈಕೆಗಳು.

Chamaraj Savadi said...

@ ಶಿವಕುಮಾರ‍್: ನಿಮ್ಮ ಹಾರೈಕೆ ಫಲಿಸಲಿ ಅಂತ ನಾನೂ ಹಾರೈಸುತ್ತೇನೆ. ಭಾವುಕತೆ, ವಾಸ್ತವ ಎರಡೂ ಒಂದಕ್ಕೊಂದು ಪೂರಕ. ಯಾವುದೋ ಒಂದು ಮಾತ್ರ ಇದ್ದರೆ ಅದು ವ್ಯಕ್ತಿತ್ವದ ಊನ ಅಂತ ನಾನಂದುಕೊಂಡಿದ್ದೇನೆ. ಹೀಗಾಗಿ, ಎರಡನ್ನೂ ಅವಶ್ಯಕತೆಗೆ ತಕ್ಕಂತೆ ಬಳಸುವುದೇ ಉತ್ತಮ, ಅಲ್ವೆ?

Chamaraj Savadi said...

@ ರಾಘವೇಂದ್ರ ಜೋಶಿ: ಧನ್ಯವಾದ ರಾಘವೇಂದ್ರ ಅವರೇ. ನಿಮ್ಮಂಥ ಎಲ್ಲರ ಹಾರೈಕೆ ಗೌರಿಗೆ ದಕ್ಕಲಿ, ಆಕೆ ಸಾಮಾನ್ಯ ವ್ಯಕ್ತಿಯಂತಾಗಲಿ ಎಂದು ಆಶಿಸುತ್ತೇನೆ.