ನಾಗರಾಜ ವಸ್ತಾರೆ ಭಾನುವಾರದ ವಿಜಯ ಕರ್ನಾಟಕ ದಿನಪತ್ರಿಕೆಯ ಲವ್‌ಲವಿಕೆ ಪುರವಣಿಯಲ್ಲಿ ಬರೆದಿರುವ ಲೇಖನ ‘ಒಂದು ಮಿಡಿತ, ಒಂದು ಹೃದಯ...’ಕ್ಕೆ ನನ್ನ ವೈಯಕ್ತಿಕ ಪ್ರತಿಕ್ರಿಯೆ ಇದು.
ಇದನ್ನು ಲೇಖನ ಎನ್ನಲು ನನ್ನದೇ ಆದ ಆಕ್ಷೇಪಗಳಿವೆ. ಇದು ಲೇಖನವೋ, ವೈಯಕ್ತಿಕ ಅನಿಸಿಕೆಯೋ, ಪ್ರಬಂಧವೋ, ಅಥವಾ ಕತೆಯಾಗಲು ಹೊರಟ ವ್ಯಥೆಯೋ ಎನಿಸುತ್ತದೆ. ಅಂತ್ಯದಲ್ಲಿ ಲೇಖಕರು ಹೇಳಿರುವ ಎರಡು ಪ್ಯಾರಾದ ಸೂಕ್ಷ್ಮತೆಯನ್ನು ಇಡೀ ಲೇಖನದುದ್ದಕ್ಕೂ ಬಳಸಿದ್ದರೆ ಅದಕ್ಕೊಂದು ಮರ್ಯಾದೆಯ ಆಯಾಮವಾದರೂ ದಕ್ಕುತ್ತಿತ್ತು. ಆದರೆ ಹಾಗಾಗಿಲ್ಲ ಎಂಬುದೇ ಬೇಸರದ ಸಂಗತಿ. ಲವ್‌ಲವಿಕೆ ಎಂಬ ಮುದ್ದಾದ ಹೆಸರಿನ ಪುರವಣಿಗೆ ಈ ಬರಹ ತಕ್ಕುದಲ್ಲ ಎನಿಸುತ್ತದೆ.
ವಸ್ತಾರೆಯವರು ಹೇಳಹೊರಟಿದ್ದಾದರೂ ಏನು? ಅದೇ ಪುರವಣಿಯ ಮುಖ್ಯ ಲೇಖನವಾಗಿ ಪ್ರಕಟವಾದ ‘ಪತಿ, ಪತ್ನಿ ಮತ್ತು ಆಕೆ’ ಎಂಬ ಲೇಖನದ ಅಡಿ ಪ್ಯಾರಾದಂತೆ ಬಂದಿರುವ ಈ ಬರಹ, ಆ ಸ್ಥಾನಕ್ಕೂ ಯೋಗ್ಯವಲ್ಲ. ಮುಖ್ಯ ಲೇಖನಕ್ಕೆ ವ್ಯತಿರಿಕ್ತ ಎನಿಸುವಂತೆ ಭಾವನೆ ಹುಟ್ಟಿಸುವ ಬರಹ ಇದು. ಗಂಡು ಹೆಣ್ಣಿನ ಸಂಬಂಧ ಆಯಾ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತ ಹೋಗುವಂಥದ್ದಾದರೂ, ಕೆಲ ಅಂಶಗಳು ಎಂದಿಗೂ ಬದಲಾಗದಂಥವು. ಆ ಅಂಶಗಳ ಬಗ್ಗೆ ವಸ್ತಾರೆ ಇನ್ನಷ್ಟು ನವಿರಾಗಿ, ಗೇಲಿ ಧ್ವನಿ ಇಲ್ಲದೇ ಹೇಳಬಹುದಿತ್ತು. ಮುಖ್ಯ ಲೇಖನದ ಧ್ವನಿ ನೋಡಿದರೆ, ಅದು ಅವಶ್ಯವೂ ಆಗಿತ್ತು.
ಆದರೆ, ಅಂಥ ಸೂಕ್ಷ್ಮತೆಯೇನೂ ಇಲ್ಲದ ವಸ್ತಾರೆ ಬರಹ ಪೇಲವವಾಗಿ, ಗೇಲಿ ಮಾತಿನಲ್ಲೇ ಉಳಿದುಕೊಂಡಿದೆ. ವಸ್ತಾರೆಯವರಿಂದ ಇಂಥ ಬರಹವನ್ನು ಖಂಡಿತ ನಿರೀಕ್ಷಿಸಿರಲಿಲ್ಲ.
ಸಂಬಂಧಗಳು ಅಷ್ಟು ಸುಲಭವಾಗಿ ವ್ಯಾಖ್ಯೆಯ ಚೌಕಟ್ಟಿಗೆ ಸಿಲುಕುವಂಥವಲ್ಲ. ಒಂದು ವೇಳೆ ಅವನ್ನು ಚೌಕಟ್ಟಿನೊಳಗೆ ಕಟ್ಟಿಹಾಕಲು ಹೊರಟರೆ, ಅವು ಸಂಬಂಧವಾಗಿ ಉಳಿಯುವುದಿಲ್ಲ. ಸಂಬಂಧ ಎಂಬುದು ವ್ಯಾಕರಣ ಅಲ್ಲ. ಅದು, ಬದುಕಿನಂಥದು. ಸದಾ ವಿಸ್ತರಿಸುವಂಥದು. ವಿಸ್ತರಿಸುತ್ತಿದ್ದರೂ, ಕೆಲ ಮೂಲ ಅಂಶಗಳನ್ನು ಕಾಪಾಡಿಕೊಂಡು ಬರುವಂಥದು. ದಟ್ಟ ಅರಣ್ಯದಂಥ ಸಂಕೀರ್ಣತೆ ಅದರದು. ಕೇವಲ ಗೇಲಿಯಂಥ ಭಾವನೆ ಇಟ್ಟುಕೊಂಡು ಸಂಬಂಧವನ್ನು ವಿಶ್ಲೇಷಿಸಲು ಹೊರಟರೆ ವಸ್ತಾರೆಯಂಥವರ ಬರಹಗಳೇ ಬರುತ್ತವೆ.
ಹೀಗಾಗಿ, ‘ಪತಿ, ಪತ್ನಿ ಮತ್ತು ಆಕೆ’ ಎಂಬುದು, ‘ಪತಿ, ಪತ್ನಿ ಮತ್ತು ಅವನು’ ಎಂದೂ ಆಗಬಹುದು. ಆದರೆ, ಇಂಥ ವಿಷಯಗಳಲ್ಲಿ ‘ಆಕೆ’ ಎಂಬ ಪದ ಕೊಡುವ ರೋಚಕತೆಯನ್ನು ‘ಅವನು’ ಎಂಬುದು ಕೊಡಲಾರದು ಎಂದು ತುಂಬ ಜನ ಭಾವಿಸಿರುವಂತಿದೆ. ಹೀಗಾಗಿ, ಇಂಥ ಬರಹಗಳು ಪದೆ ಪದೆ ‘ಆಕೆ’ಯ ಸುತ್ತಲೇ ಗಿರಕಿ ಹೊಡೆಯುತ್ತವೆಯೇ ಹೊರತು, ಅದರಾಚೆಗೆ ಇಣುಕಿ ನೋಡುವ ಕುತೂಹಲವನ್ನೂ ವಸ್ತಾರೆಯಂಥವರಲ್ಲಿ ಹುಟ್ಟಿಸುವುದಿಲ್ಲ.
ಪ್ರತಿಯೊಂದು ಭಾವನೆಗೂ, ಸಂಬಂಧಕ್ಕೂ, ಚೌಕಟ್ಟು ಹಾಕುವ ದೃಷ್ಟಿಕೋನ ಇರುವವರೆಗೆ ಇಂಥ ವಿಷಯಗಳ ಬರವಣಿಗೆಗೆ ಜೀವ ಬರುವುದಿಲ್ಲ. ಸಾಮಾನ್ಯ ಜನರ ಅಭಿಪ್ರಾಯಗಳನ್ನೇ ಹಸಿಹಸಿಯಾಗಿ ಹೇಳುವುದು ವರದಿಗಾರಿಕೆಯಾಗಬಹುದೇ ಹೊರತು ಖಂಡಿತ ಪುರವಣಿ ಬರಹವಾಗದು. ಸಂಬಂಧಗಳ ವಿಶ್ಲೇಷಣೆಗೆ ಮನಃಶಾಸ್ತ್ರಜ್ಞರೇ ಆಗಬೇಕಿಲ್ಲ. ನಾವು ಕಂಡುಂಡ ಬದುಕೇ ಅದಕ್ಕೆ ಸಾಕಷ್ಟು ಸಾಮಾಗ್ರಿಗಳನ್ನು ಒದಗಿಸಬಲ್ಲುದು. ದೊರಕಿದ ಅನುಭವ, ಮಾಹಿತಿಯನ್ನೇ ಅಚ್ಚುಕಟ್ಟಾಗಿ ಕಟ್ಟಿಕೊಟ್ಟರೆ ಉತ್ತಮ ಬರಹ ಖಂಡಿತ ದಕ್ಕುತ್ತದೆ. ಅಂಥದೊಂದು ಪ್ರಯತ್ನ ಮಾಡುವ ಮನಃಸ್ಥಿತಿ ವಸ್ತಾರೆಯವರ ಬರಹದಲ್ಲಿ ಕಾಣಲಿಲ್ಲ.
ಅದು ಕಾಣಬೇಕಿತ್ತು ಎಂಬುದು ನನ್ನಂಥವರ ಅನಿಸಿಕೆ.
- ಚಾಮರಾಜ ಸವಡಿ
No comments:
Post a Comment