ಬೊಗಸೆಗಣ್ಣಿನ ಬಯಕೆಯ ಹೆಣ್ಣು... (ಬೇಂದ್ರೆ-೧)

29 Jan 2009

ಬೆಳ್ಳಂಬೆಳಿಗ್ಗೆ ಬೇಂದ್ರೆ ಗಂಟು ಬಿದ್ದಿದ್ದಾರೆ.

ನಸುಕಿನ ಬೆಂಗಳೂರಲ್ಲಿ ಈಗ ಚಳಿ ಕಡಿಮೆ. ನಕ್ಷತ್ರಗಳು ಸ್ವಚ್ಛವಾಗಿ ಮುಗುಳ್ನಗುತ್ತಿವೆ. ನಸುಕಿನಲ್ಲಿ ಚಳಿಯಾದೀತು ಎಂದು ಕಾಲಡಿ ಹಾಕಿಕೊಂಡಿದ್ದ ರಗ್‌ಗಳು ಹಾಗೇ ಇವೆ. ಸಣ್ಣಗೇ ತಿರುಗುವ ಫ್ಯಾನ್‌ ಕೂಡಾ ಚಳಿ ಹುಟ್ಟಿಸುತ್ತಿಲ್ಲ.

ಸದ್ದಿಲ್ಲದೇ ಬೆಳಗಾಗುತ್ತದೆ. ಮೂಡಣದಲ್ಲಿ ಚೆಂಬೆಳಕು. ಅರೆ ಕ್ಷಣ ಧಾರವಾಡದ ಚೆಂಬೆಳಕು ಹೆಸರಿನ ಮನೆ ಮತ್ತು ಕವಿ ಚೆನ್ನವೀರ ಕಣವಿ ನೆನಪಾಗುತ್ತಾರೆ. ಅವರು ಕವಿತೆ ಓದುತ್ತಿದ್ದ ಪರಿ ನೆನಪಾಗುತ್ತದೆ. ಕಿರಿಯರನ್ನು ಪ್ರೋತ್ಸಾಹಿಸುವ ಪರಿ, ಬರೆದ ಸಣ್ಣ ತುಂಡುಗಳನ್ನು ಆಸ್ವಾದಿಸುವ ದೊಡ್ಡತನ ನೆನಪಾಗುತ್ತದೆ. ಅದೇ ಧಾರವಾಡದಲ್ಲಿ ಇದ್ದವರಲ್ಲವೆ ಬೇಂದ್ರೆ. ಮೂಡಣ ರಂಗೊಡೆಯುವ ಹೊತ್ತಿನಲ್ಲಿ, ಸಂಜೆ ಕುರಿತು ಬರೆದಿದ್ದರೂ ಅವರ ಮುಗಿಲ ಮಾರಿಗೆ ರಾಗರತಿ ನೆನಪಾಗುತ್ತದೆ. ಸಾಧನಕೇರಿಯ ಪುಟ್ಟ ಕೆರೆಯ ಎದುರಿನ ಬೇಂದ್ರೆ ಅಜ್ಜನ ಮನೆ, ಅಲ್ಲಿನ ವಿಚಿತ್ರ ನೀರವ, ಕೆರೆಯ ನೀರನ್ನು ಕಲಕುವ ಮೀನುಗಳು, ಸದ್ದಿಲ್ಲದೇ ಹರಿದಾಡುವ ಹಾವುಗಳು ಕಣ್ಮುಂದೆ ಬರುತ್ತವೆ.

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
-ಆಗ -ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ


ಬೆಳಗಿನ ಬೆಂಗಳೂರಿನ ನೀರವತೆಯಲ್ಲಿ ಚಂದ್ರಾಲೇಔಟ್‌ ತುಂಬ ಹೊಸದೊಂದು ರಾಗರತಿ. ಬೆಳಕಿನ ರತಿ ಏರುತ್ತಿದ್ದಂತೆ ನಕ್ಷತ್ರಗಳ ಕಣ್ಣುಗಳ ಅರ್ಧನಿಮೀಲಿತವಾಗುತ್ತವೆ. ಕತ್ತಲೆಯಲ್ಲಿ ಮರೆಯಾದಂತಿದ್ದ ಕಟ್ಟಡಗಳು ಮಸುಕುಮಸುಕಾಗಿ ಮೇಲಕ್ಕೇಳುತ್ತವೆ. ಷೆಲ್ಫ್‌ನಲ್ಲಿ ಪುಸ್ತಕವಾಗಿ ಕೂತಿರುವ ಬೇಂದ್ರೆ ಅಜ್ಜನನ್ನು ಹೊರಕ್ಕೆಳೆಯುತ್ತೇನೆ. ಎಲ್ಲಿದೆ ಕವನ?

ಹಾಂ, ಸಿಕ್ಕಿತು. ಒಲವೆ ನಮ್ಮ ಬದುಕು ಪುಸ್ತಕದ ಪುಟ ೨ರಲ್ಲಿ ಬೆಚ್ಚಗೇ ಕೂತಿದೆ ’ರಾಗರತಿ’ ಕವಿತೆ. (ಮೂಲ ಸಂಕಲನ: ಗರಿ, ಕವನ ಸಂಖ್ಯೆ ೩೧)

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
ಸೂಸ್ಯಾದ ಚಿಕ್ಕಿ ಅತ್ತಿತ್ತ.


ವ್ಹಾ ಬೇಂದ್ರೆ ಅಜ್ಜಾ! ’ಇರುಳ ಹೆರಳಿನ ಅರಳಮಲ್ಲಿಗಿ ಜಾಳಿಗಿ’ ಎಂಥಾ ಉಪಮೆ. ಸಂಜೆ ಹೊತ್ತಿನ ನಕ್ಷತ್ರಗಳು ಕತ್ತಲೆಯ ಜಡೆಯಲ್ಲಡಗಿದ್ದ ಅರಳುಮಲ್ಲಿಗೆಯಂತೆ ಕಂಡವಲ್ಲ ನಿನಗೆ. ರಸಿಕ ನೀನು!

ಮನಸ್ಸು ರಾಗರತಿಯಲ್ಲಿ ಲೀನವಾಗುತ್ತದೆ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಮಿ ಬೆಕ್ಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ


ರಾತ್ರಿ ನೀರು ತರುವ ಹೆಣ್ಣು ತಡರಾತ್ರಿಯ ಸಮಾಗಮದ ಬಯಕೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಳೆ. ಸಂಜೆಯ ಕೆಂಪು ಆಕೆಯಲ್ಲಿ ನವಿರು ಭಾವನೆಗಳನ್ನು ಉಕ್ಕಿಸಿದೆ. ಮನಸ್ಸಿನ ಆಸೆ ಸಾಕಿದ ಬೆಕ್ಕಿನಂತೆ ಸುತ್ತಮುತ್ತ ಸುಳಿದಾಡುತ್ತಿದೆ.

ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿತಿತ್ತ
ಮತಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತ
ತನ್ನ ಮೈಮರ ಮರೆತಿತ್ತ


ಕವಿತೆ ಓದುತ್ತ ಓದುತ್ತ ಬೆಳಗಿನ ಚೆಂಬೆಳಕು ಸಂಜೆಯ ರಾಗರತಿಯಾಗಿ ಬದಲಾಯಿತು. ಬೇಂದ್ರೆ ಕಟ್ಟಿಕೊಟ್ಟ ಚಿತ್ರಣ ಮಸಕುಮಸಕಾಗಿ ಮೂಡಿತು. ಧಾರವಾಡದ ನೀರವ ಓಣಿಯಲ್ಲಿ ಸಂಜೆಯಾಗಿದೆ. ಹೆಣ್ಣೊಬ್ಬಳು ನೀರು ತರಲು ಹೋದವಳು ಮುದಗೊಂಡು, ಹುರುಪಿನಿಂದ ಮನೆಯತ್ತ ಹೊರಟಿದ್ದಾಳೆ. ಆಕೆಯ ಮನದಲ್ಲಿ ರಾತ್ರಿಯ ಸುಖದ ನಿರೀಕ್ಷೆ. ಹೆಜ್ಜೆಗಳು ಅದನ್ನೇ ಹೇಳಿವೆ. ಸಂಜೆಯ ತಂಪು ಗಾಳಿಗೆ ಆಕೆಯ ಸೆರಗು ಅಲೆಯಾಗುತ್ತಿದೆ. ಅವಳ ಮನಸ್ಸಿನ ನಿರೀಕ್ಷೆಯನ್ನು ಪ್ರತಿಫಲಿಸಿದೆ. ಹಾರುವ ಸೆರಗನ್ನು ಸುಳ್ಳುಸುಳ್ಳೇ ಬಿಗಿಯಾಗಿ ಹಿಡಿಯುತ್ತ ಮನೆ ಕಡೆ ಹೊರಟಿದ್ದಾಳೆ. ಹಗಲಿಡೀ ಉರಿದು ಮಂಕಾದ ಸೂರ್ಯ ಸುಖದ ನಿರೀಕ್ಷೆಯಲ್ಲಿ ಮುಳುಗುತ್ತಿರುವ ಚಿತ್ರಣವನ್ನು ಬೊಗಸಿಗಣ್ಣಿನ ಹೆಣ್ಣಿನ ಮೂಲಕ ಬಿಂಬಿಸುತ್ತ ಹೋಗಿದ್ದಾನೆ ಬೇಂದ್ರೆ ಅಜ್ಜ.

ಅರೆಕ್ಷಣ ಬೆಂಗಳೂರಿನ ಮುಂಜಾನೆಯ ಚೆಂಬೆಳಕಿನಲ್ಲಿ ರಾಗರತಿಯ ರಂಗು ಕಂಡಂತಾಯಿತು. ಟೆರೇಸ್‌ ಮೇಲೆ ನಿಂತು ನೋಡಿದರೆ, ಕೆಳಗೆ ವಾಕಿಂಗ್‌ ಹೊರಟ ಜನ ಅಲ್ಲೊಬ್ಬರು ಇಲ್ಲೊಬ್ಬರು. ಯಾವ ನೀರೆಯ ಸೊಂಟದಲ್ಲೂ ನೀರಿನ ಬಿಂದಿಗೆಯಿಲ್ಲ. ಬಾವಿಗಳಂತೂ ಮೊದಲೇ ಇಲ್ಲ. ಸೀರೆಯುಟ್ಟ ಆಂಟಿಯರ ಸೊಂಟದಲ್ಲಿ ಕೈಯಿಡಲಿಕ್ಕೇ ಜಾಗವಿಲ್ಲ, ಇನ್ನು ಬಿಂದಿಗೆ ಎಲ್ಲಿ ಕೂತೀತು? ಬಳುಕುವ ನೀರೆಯರ ಸೊಂಟ ಅದ್ಯಾವ ಪರಿ ತುಳುಕುತ್ತಿದೆ ಎಂದರೆ, ಬಿಂದಿಗೆ ಅಲ್ಲಿ ನಿಂತೀತೆ?

ಆದರೆ, ಕವಿತೆ ಕಟ್ಟಿಕೊಡುವ ಸುಖದ ಚಿತ್ರಕ್ಕೆ ಕಾಲ-ದೇಶದ ಹಂಗೇಕೆ? ಕವಿತೆ ಓದುತ್ತ ಓದುತ್ತ ಬೆಳಗಿನ ಆಗಸ ಬೇಂದ್ರೆ ಕಂಡ ಸಂಜೆಯ ರಾಗರತಿಯಾಗುತ್ತದೆ. ವಾಕಿಂಗ್‌ ಹೊರಟ ನೀರೆಯರು ಬಿಂದಿಗೆ ಹೊತ್ತ ಬೊಗಸೆಕಣ್ಣಿನ ಹೆಣ್ಣುಗಳಾಗುತ್ತಾರೆ. ರಸ್ತೆಯಾಚೆ ಎಲ್ಲೋ ಬಾವಿ ಇದ್ದೀತು. ಇವರು ಅತ್ತ ಕಡೆಯೇ ಹೊರಟಿದ್ದಾರು. ಇನ್ನೇನು, ಬಿಂದಿಗೆ ತುಂಬಿಕೊಂಡು ವಾಪಸ್‌ ಬರುತ್ತಾರೆ. ತಿಳಿಗಾಳಿಗೆ ಸೀರೆಯ ಸೆರಗು ಹಾರದಿದ್ದರೂ ಮುಂಗುರುಳಾದರೂ ಹಾರಿಯಾವು. ಕಾಮಿ ಬೆಕ್ಕಿನ್ಹಾಂಗ ಮುಖದ ತುಂಬ ಸುಳಿದಾಡಿಯಾವು. ಏನೋ ನೆನಪಲ್ಲಿ, ಬಿದಿಗಿ ಚಂದ್ರನ ಚೊಗಚಿ ನಗಿ ಹೂ ಅವರ ಮುಖದಲ್ಲಿ ಮೆಲ್ಲಗೆ ಮೂಡಿದರೂ ಮೂಡಬಹುದು.

ಟೆರೇಸ್‌ನಲ್ಲಿ ನಿಂತು ಕಾಯುತ್ತಿದ್ದೇನೆ: ರಾಗರತಿಯ ಸೊಗಸಿಗೆ, ಮಳ್ಳ ಗಾಳಿಗೆ, ಬೊಗಸೆ ಕಣ್ಣಿನ ಹೆಣ್ಣಿಗೆ, ಆ ಬಿದಿಗಿ ಚಂದ್ರನ ಚೊಗಚಿ ನಗೆಗೆ.

- ಚಾಮರಾಜ ಸವಡಿ

No comments: