ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

13 Jan 2009


’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.

ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.

ಅವನ ಉತ್ತರ ಕೇಳಿ ನನಗೆ ದಿಗ್ಭ್ರಮೆಯಾಯಿತು. ನಂತರ ಮರುಕ ಹುಟ್ಟಿತು. ಆತನ ಪ್ರಕಾರ, ಪತ್ರಿಕೆಗಳಲ್ಲಿ ಬರೆಯುವವರು ಮಾತ್ರ ಬರಹಗಾರರು. ಉಳಿದವರೆಲ್ಲ ತಮ್ಮ ತೆವಲಿಗೆ ಬರೆಯುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವಕ್ಕೆ ಮೌಲ್ಯವಿಲ್ಲ.

ಆತನ ಜೊತೆ ವಾದಿಸುವುದು ವ್ಯರ್ಥ ಅನಿಸಿ ಸುಮ್ಮನಾದೆ. ಆದರೆ, ಈ ವಿಷಯ ಪ್ರಸ್ತಾಪಿಸುವುದು ಉತ್ತಮ ಅನಿಸಿ ಇಲ್ಲಿ ಬರೆಯುತ್ತಿದ್ದೇನೆ.

ಹಿಂದೊಮ್ಮೆ ಇಂಥದೇ ವಿಷಯದ ಬಗ್ಗೆ ಓದಿದ್ದು ನೆನಪಾಯಿತು. ಟಿವಿ ದಾಂಗುಡಿಯಿಡುತ್ತಿದ್ದ ದಿನಗಳವು. ಟಿವಿ ತಾರೆಯರು ಸಿನಿಮಾ ತಾರೆಯರಂತೆ ಜನಪ್ರಿಯತೆ ಗಳಿಸುತ್ತಿದ್ದರು. ಆಗ ಕೆಲ ನಟ, ನಟಿಯರು ಮೇಲಿನ ಅಭಿಪ್ರಾಯವನ್ನೇ ಬಿಂಬಿಸುವಂಥ ಮಾತು ಹೇಳಿದ್ದರು: ಸಿನಿಮಾ ನಟನೆಯೇ ನಿಜವಾದ ನಟನೆ. ಟಿವಿ ನಟನೆಗೆ ಮೌಲ್ಯವಿಲ್ಲ.

ಗಡಿಯಾರವನ್ನು ಇನ್ನೊಂಚೂರು ಹಿಂದಕ್ಕೆ ತಿರುಗಿಸೋಣ. ಸಿನಿಮಾ ಜನಪ್ರಿಯವಾಗುವುದಕ್ಕೂ ಮುನ್ನ ನಾಟಕ ರಂಗ ಕ್ರಿಯಾಶೀಲವಾಗಿತ್ತು. ಆಗ, ಸಿನಿಮಾ ನಟ-ನಟಿಯರ ಕುರಿತು ರಂಗಕರ್ಮಿಗಳು ಇಂಥದೇ ಮಾತು ಹೇಳಿದ್ದರು.

ಇದು ಏನನ್ನು ಸೂಚಿಸುತ್ತದೆ?

ಮಾಧ್ಯಮ ಬದಲಾದರೂ, ಅಭಿವ್ಯಕ್ತಿ ಎಂಬುದು ಹಾಗೇ ಉಳಿದಿದೆ ಅಂತ ಅಲ್ಲವೆ? ಬರಹಗಾರ ಪತ್ರಿಕೆಗಳಿಗೆ ಬರೆದಂತೆ ಅಂತರ್ಜಾಲ ವಾಹಿನಿಯಲ್ಲೂ ಬರೆಯಬಲ್ಲ. ನಟನೆ ಬಲ್ಲವ ಸಿನಿಮಾ, ಟಿವಿ, ರಂಗಭೂಮಿ ಎಂಬ ಭೇದವಿಲ್ಲದೇ ನಟಿಸಬಲ್ಲ. ಆ ಮಾಧ್ಯಮ ಅವನಿಗೆ ಒಗ್ಗದಿದ್ದರೆ ಬೇರೆ ಮಾತು. ಆದರೆ, ನಟಿಸಲು ಯಾವ ವೇದಿಕೆಯಾದರೇನು?

ಇದೇ ಮಾತನ್ನು ಬರವಣಿಗೆಗೂ ಹೇಳಬಹುದು. ವೈಯಕ್ತಿಕವಾಗಿ ನನಗೆ ಎಲ್ಲ ರೀತಿಯ ಬರವಣಿಗೆ ಒಗ್ಗಿದೆ. ಅಭ್ಯಾಸವಾಗಿದೆ. ಇಷ್ಟಪಟ್ಟಿದ್ದೇನೆ ಕೂಡಾ. ಟ್ಯಾಬ್ಲಾಯ್ಡ್‌, ದಿನಪತ್ರಿಕೆ, ವಾರಪತ್ರಿಕೆ, ಸಾಹಿತ್ಯಿಕ, ಟಿವಿ, ಈಗ ಅಂತರ್ಜಾಲ- ಹೀಗೆ ಎಲ್ಲ ಪ್ರಕಾರಗಳಲ್ಲೂ ಬರೆದಿದ್ದೇನೆ. ಯಾವೊಂದು ಮಾಧ್ಯಮವೂ ನನಗೆ ಕಡಿಮೆ ಎಂದು ಅನಿಸಿಲ್ಲ. ಪ್ರತಿಯೊಂದಕ್ಕೂ ಅದರದೇ ಮಹತ್ವವಿದೆ. ವ್ಯಾಪ್ತಿಯಿದೆ. ಓದುಗರಿದ್ದಾರೆ. ವಿಷಯಗಳಿವೆ. ಬರೆಯುವ ಆಸಕ್ತಿ ಮತ್ತು ವ್ಯಕ್ತಪಡಿಸುವ ರೀತಿ ಗೊತ್ತಿದ್ದವ ಸುಲಭವಾಗಿ ವ್ಯಕ್ತವಾಗುತ್ತ ಹೋಗುತ್ತಾನೆ.

ದುರಂತವೆಂದರೆ, ಬಹಳಷ್ಟು ಜನರಿಗೆ ಈ ಸೂಕ್ಷ್ಮ ಅರ್ಥವಾದಂತಿಲ್ಲ. ಅಥವಾ ಅರ್ಥವಾಗಿದ್ದರೂ ಅಸೂಯೆಗೆ ಹಾಗೆ ಹೇಳುತ್ತಾರೇನೋ. ನನಗೆ ಗೊತ್ತಿರುವಂತೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿರುವ ಬಹಳಷ್ಟು ಜನ ಅಕ್ಷರಶತ್ರುಗಳು. ಅವರಿಗೆ ಅದೊಂದು ವೃತ್ತಿ. ಅವರ ಬರವಣಿಗೆ ದೇವರಿಗೇ ಪ್ರೀತಿ. ಏಜೆನ್ಸಿಗಳಿಂದ ಬರುವ ಸುದ್ದಿಗಳನ್ನು ರೆಡಿಮೇಡ್‌ ಚೌಕಟ್ಟಿಗೆ ಬದಲಾಯಿಸದ ಮಾತ್ರಕ್ಕೆ ಪತ್ರಕರ್ತರಾದಂತೆ ಎಂಬುದು ಅವರ ಅಭಿಪ್ರಾಯ. ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಮಾತ್ರದ ಕೆಲಸ ಮಾಡಿದರೆ ಸಾಕು ಎನ್ನುವ ವಾತಾವರಣವೂ ಇದೆ. ಸುದ್ದಿ ಬರೆಯುವ ಬಹಳಷ್ಟು ಜನರಿಗೆ ಲೇಖನ ಬರೆಯಲು ಬರುವುದಿಲ್ಲ. ಸಾಹಿತ್ಯವಂತೂ ದೂರವೇ ಉಳಿಯಿತು. ಅದೆಲ್ಲ ಗೊತ್ತಿದ್ದರೆ ಮಾತ್ರ ಪತ್ರಕರ್ತನಾಗಬಹುದು ಎಂದಲ್ಲ. ಗೊತ್ತಿದ್ದರೆ ಉತ್ತಮ. ಅಷ್ಟೇ.

ಹೋಗಲಿ, ಸುದ್ದಿಯನ್ನಾದರೂ ಸರಿಯಾಗಿ ಬರೆಯುತ್ತಾರಾ? ವಿಷಯವನ್ನು ತುರುಕಿದ ಮಾತ್ರಕ್ಕೆ ಅದು ವರದಿಯಾದೀತೆ? ಅಂಕಿಅಂಶಗಳನ್ನು ಸೇರಿಸಿ, ಒಂದೆರಡು ಮಹನೀಯರ ಅಭಿಪ್ರಾಯ ದಾಖಲಿಸಿದ ಮಾತ್ರಕ್ಕೆ ಅದು ವರದಿಯಾ? ಉಪ್ಪು, ಹುಳಿ, ಖಾರ, ಒಗ್ಗರಣೆ, ಬೆಂದ ಬೇಳೆಯನ್ನು ಸುರಿದು ನೀರು ಹಾಕಿ ಕುದಿಸಿದರೆ ಹೇಗೆ ಅದು ಸಾರೋ ಸಾಂಬಾರೋ ಆಗುವುದಿಲ್ಲವೋ, ಹಾಗೆ ಮಾಹಿತಿ ತುರುಕಿದ ಮಾತ್ರಕ್ಕೆ ಅದು ವರದಿಯಾಗುವುದಿಲ್ಲ. ಈ ಸೂಕ್ಷ್ಮ ತುಂಬ ಜನರಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಃಸ್ಥಿತಿಯೂ ಇರುವುದಿಲ್ಲ.

ಇಂಥ ಸಂದರ್ಭದಲ್ಲಿ ಮೇಲೆ ಹೇಳಿದಂಥ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ನಾನು ಬರೆದಿದ್ದೇ ಸತ್ಯ ಎಂಬ ಧಾರ್ಷ್ಟ್ಯ ಹುಟ್ಟಿಕೊಳ್ಳುತ್ತದೆ. ಪತ್ರಕರ್ತರಿಗೆ ಕೋಡುಗಳು ಮೂಡುವುದೇ ಆವಾಗ. ಇಷ್ಟಾದರೆ ಮುಗೀತು, ಸಿಕ್ಕಸಿಕ್ಕವರನ್ನು ಇರಿಯಲು ಹೋಗುವುದೇ ವೃತ್ತಿಯಾಗುತ್ತದೆ. ಕ್ರಮೇಣ ಅದೇ ಪ್ರವೃತ್ತಿಯಾಗುತ್ತದೆ. ಇಂಥ ಕಡೆ ಅಧ್ಯಯನ, ಅಭಿವ್ಯಕ್ತಿ, ಕುಶಲತೆ, ವೃತ್ತಿಪರತೆ ಎಂಬ ಸೂಕ್ಷ್ಮಗಳು ಅರ್ಥ ಕಳೆದುಕೊಳ್ಳುತ್ತ ಹೋಗುತ್ತವೆ.

ಈ ಸಮಸ್ಯೆ ಕೇವಲ ಪತ್ರಿಕೋದ್ಯಮದಲ್ಲಷ್ಟೇ ಅಲ್ಲ, ಬಹುತೇಕ ರಂಗಗಳಲ್ಲೂ ಇದೆ. ಸೂಕ್ಷ್ಮತೆ, ಸಂವೇದನೆ ಇಲ್ಲದ ಬಹಳಷ್ಟು ಜನ ತಮ್ಮವೇ ಆದ ರೀತಿ ವಿಶ್ಲೇಷಣೆ ನಡೆಸುತ್ತ, ತಮ್ಮ ಬೌದ್ಧಿಕಮಟ್ಟ ತೋರಿಸುತ್ತ ಹೋಗುತ್ತಾರೆ.

ಮೂಲ ವಿಷಯಕ್ಕೆ ಬರೋಣ. ಅಂತರ್ಜಾಲದಲ್ಲಿ ಬರುತ್ತಿರುವುದು ಬರವಣಿಗೆ ಅಲ್ಲವೆ? ಇಲ್ಲಿಯೂ ಸೊಗಸಾದ ಅಭಿವ್ಯಕ್ತಿ ಇಲ್ಲವೆ? ಸಾಹಿತ್ಯದ ಬಹುತೇಕ ಪ್ರಕಾರಗಳು ಇಲ್ಲಿ ತುಂಬ ಚೆನ್ನಾಗಿ ವ್ಯಕ್ತವಾಗುತ್ತಿಲ್ಲವೆ? ಇದ್ದಕ್ಕಿದ್ದಂತೆ ತಮ್ಮ ಸ್ಥಾನಕ್ಕೇ ಕೈ ಹಾಕಿದ ಅಂತರ್ಜಾಲ ಬರಹಗಾರರು ಅರಮರ್ಧ ಪತ್ರಕರ್ತರಲ್ಲಿ ಹುಟ್ಟಿಸಿದ ದಿಗಿಲಿನಿಂದಾಗಿ ಇಂಥ ಅಭಿಪ್ರಾಯಗಳು ಹೊಮ್ಮುತ್ತಿವೆ ಎಂದು ನಾನು ಭಾವಿಸಿದ್ದೇನೆ.

ಯಾವುದೇ ರಂಗವಿರಲಿ, ಅಲ್ಲಿ ಎಲ್ಲ ಬಲ್ಲವರಿಲ್ಲ. ಬಲ್ಲವರ ಸಂಖ್ಯೆ ಬಹಳಿಲ್ಲ. ಹಾಗಂದುಕೊಂಡು, ನಕ್ಕು ಸುಮ್ಮನಾಗುತ್ತೇನೆ.

- ಚಾಮರಾಜ ಸವಡಿ

8 comments:

ಸಂದೀಪ್ ಕಾಮತ್ said...

ಸರಿಯಾಗಿ ಹೇಳಿದ್ರಿ ! ’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಆದ್ರೆ ಬರಹಗಾರರು ಮಾತ್ರ ಬ್ಲಾಗ್ ಶುರು ಮಾಡಿದ್ರೆ ಅದಕ್ಕೆ ಅಭೂತಪೂರ್ವ ಸ್ವಾಗತ ಸಿಗುತ್ತೆ !
ಎಲ್ಲದಕ್ಕೂ ಕಾಲವೇ ಉತ್ತರಿಸುತ್ತೆ!

hamsanandi said...

ಚಾಮರಾಜ್, ಚೆನ್ನಾಗಿ ಬರ್ದಿದೀರ.

ಸಂದೀಪ್,
"ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಆದ್ರೆ ಬರಹಗಾರರು ಮಾತ್ರ ಬ್ಲಾಗ್ ಶುರು ಮಾಡಿದ್ರೆ ಅದಕ್ಕೆ ಅಭೂತಪೂರ್ವ ಸ್ವಾಗತ ಸಿಗುತ್ತೆ !"

ಇದು ವಿಚಿತ್ರ ಆದರೂ ನಿಜ ಅನ್ನೋ ಕೆಟೆಗರಿಗೆ ಸೇರೋ ಅಂಥ ವಿಷಯ ;)

ನಿಜವಾಗಿ ಹೇಳ್ತೀನಿ - ನನಗೆ ಮೊದಮೊದಲು ಆಶ್ಚರ್ಯ ಆಗ್ತಿತ್ತು - ಅದೇನಪ್ಪ ಕೆಲವು ಕಡೆಗಳಲ್ಲಿ ಆ ಪಾಟಿ ಪ್ರತಿಕ್ರಿಯೆ ಬರತ್ತಲ್ಲ ಅಂತ, ನಾನು ಬರೆದದ್ದು ನೂರು ಜನ ಓದಿದ್ರೂ ಒಂದು ಸಾಲು ಬರ್ಯೋರ ಸಂಖ್ಯೆ ಒಂದೋ ಎರಡೋ ಇರತ್ತಲ್ಲ ಅಂತ! ಆಮೇಲೆ ಕೆಲವು ’so-called established' ಬರಹಗಾರರ ಬರಹಗಳನ್ನು ಓದಿದ ಮೇಲೆ, ಇದಕ್ಕೆಲ್ಲ ತಲೆಕೆಡಿಸ್ಕೊಳೋ ಅಗತ್ಯ ನನಗಿಲ್ಲ ಅನ್ನೋದು ಮನವರಿಕೆಯಾಯ್ತು.

ನಾನೇನು ಬಲ್ಲವನಲ್ಲ. ಆದರೆ ಬಲ್ಲವನು ನಾನಲ್ಲ ಅನ್ನೋದು ಗೊತ್ತಿದೆಯಲ್ಲ, ಅದೇ ನನಗೆ ಸಮಾಧಾನ!

ಬಿಸಿಲ ಹನಿ said...

ಚಾಮರಾಜ ಸರ್,
ನಿಮ್ಮ ಲೇಖನ ಓದಿದ ಮೇಲೆ ಒಂದು ವಿಷಯ ಜ್ಞಾಪಕಕ್ಕೆ ಬಂತು. ಇವತ್ತು ಪತ್ರಕರ್ತನಾಗಲು ಅಥವಾ ವರದಿಗಾರನಾಗಲು journalism ಓದಿರಲೇಬೇಕು ಎಂಬ ನಿಯಮವನ್ನು ಎಷ್ಟೋ ಪತ್ರಿಕೆಗಳು ಹಾಗೂ T.V.ಚಾನಲ್ ಗಳು ಖಡ್ಡಾಯಗೊಳಿಸುತ್ತಿರುವದು ಎಷ್ಟೊಂದು ವಿಪರ್ಯಾಸ!ಅವರ ಪ್ರಕಾರ journalism ಓದಿದವರು ಮಾತ್ರ ಪತ್ರಕರ್ತನಾಗಲು ಹಾಗೂ ವರದಿಗಾರನಾಗಲು ಸಾಧ್ಯ.ಮಿಕ್ಕವರು ಲಾಯಕ್ಕಿಲ್ಲ ಎನ್ನುವ ಅಭಿಪ್ರಾಯ ಇದೆ.ಆದರೆ ಲಂಕೇಶ್, ಶಾಮರಾವ್, ವೈನ್ಕೆ ಇವರೆಲ್ಲ journalism ಬಗ್ಗೆ ಯಾವುದೇ ಗಂಧಗಾಳಿ ಗೊತ್ತಿಲ್ಲದೆ ಪತ್ರಿಕೆ ನಡೆಸಿ ಅಭೂತಪೂರ್ವ ಯಶಸ್ಸನ್ನು ಕಂಡಿದ್ದನ್ನು ಮರೆತು ಬಿಟ್ಟಿರುವದು ನಮ್ಮ ದೌರ್ಭಾಗ್ಯ.ಹಾಗೆಯೇ ಈ ಪತ್ರಕರ್ತರು ಬ್ಲಾಗ್ ಬರಹಗಾರರು ಬರಹಗಾರರೇ ಅಲ್ಲ ಎಂದು ಬಿಂಬಿಸುತ್ತಿರುವದು ಮತ್ತೊಂದು ವಿಪರ್ಯಾಸ!ಇಂಥವರಿಗೆ ಏನೂ ಮಾಡಲಿಕ್ಕೆ ಆಗುವದಿಲ್ಲ.

ಇರಲಿ. ಕಳೆದ ತಿಂಗಳಷ್ಟೆ ನನ್ನ ಒಂದು ಬ್ಲಾಗ್ www.bisilahani.blogspot.com ಓಪನ್ ಮಾಡಿದ್ದೇನೆ.ಓದಿ ಅಭಿಪ್ರಾಯ ಹೇಳಿ.
ಪ್ರೀತಿಯಿಂದ
ಉದಯ ಇಟಗಿ

Chamaraj Savadi said...

ನಿಜ ಸಂದೀಪ್‌. ಸದ್ಯಕ್ಕಂತೂ ಬ್ಲಾಗ್‌ ಬರವಣಿಗೆ ಬಗ್ಗೆ ಮುದ್ರಣ ಮಾಧ್ಯಮದಲ್ಲಿ ಉತ್ತಮ ಅಭಿಪ್ರಾಯವಂತೂ ಇಲ್ಲ. ಆದರೆ ಸಿಟಿಜನ್‌ ಜರ್ನಲಿಸಂ ಜನಪ್ರಿಯವಾಗುತ್ತಿರುವ ಈ ದಿನಗಳಲ್ಲಿ ಬ್ಲಾಗ್‌ ಬರವಣಿಗೆಯನ್ನು ತುಂಬ ದಿನ ನಿರ್ಲಕ್ಷ್ಯಿಸಲೂ ಆಗದು.

ಆ ಕಾಲವೂ ಬೇಗ ಬರಲಿದೆ.

- ಚಾಮರಾಜ ಸವಡಿ

Chamaraj Savadi said...

ಥ್ಯಾಂಕ್ಸ್‌ ರಾಮಪ್ರಸಾದ್‌.

- ಚಾಮರಾಜ ಸವಡಿ

Chamaraj Savadi said...

ಉದಯ ಅವರೇ, ಪತ್ರಕರ್ತನಾಗಲು ಬೇಕಾಗಿರುವುದು ವಿಷಯದ ಬಗ್ಗೆ ಆಸಕ್ತಿ, ಕನಿಷ್ಠಮಟ್ಟದ ತಿಳಿವಳಿಕೆ ಹಾಗೂ ಗೊತ್ತಿರುವ ವಿಷಯವನ್ನು ಚೆನ್ನಾಗಿ ಪ್ರಸ್ತುತಪಡಿಸುವುದು ಮಾತ್ರ. ಅದಕ್ಕೆ ಜರ್ನಲಿಸಂ ಓದಿಕೊಂಡಿರಬೇಕು ಅಂತ ಏನೂ ಇಲ್ಲ. ಹಾಗೆ ಓದಿಕೊಂಡು ಬಂದಿರುವ ತುಂಬ ಜನರಿಗೆ ಬರೆಯಲೂ ಬರುವುದಿಲ್ಲ.

ಕ್ರಿಯಾಶೀಲ ಅಭಿವ್ಯಕ್ತಿಗೆ ಮಾನದಂಡ ಕ್ರಿಯಾಶೀಲತೆಯೇ ಹೊರತು ಸರ್ಟಿಫಿಕೇಟ್‌ಗಳಲ್ಲ. ಅದು ನನ್ನ ಅನುಭವ ಹಾಗೂ ನಂಬಿಕೆ ಕೂಡಾ.

ನಿಮ್ಮ ಬ್ಲಾಗ್‌ ನೋಡಿ, ಅದರಲ್ಲೇ ಪ್ರತಿಕ್ರಿಯೆ ನೀಡುವೆ.

- ಚಾಮರಾಜ ಸವಡಿ

ranjith said...

ಚಾಮರಾಜ್,

ಮೊದಲೇ ತಿಳಿಸಿದಂತೆ ನಿಮ್ಮ ಬರವಣಿಗೆಯ ಶೈಲಿ ಬಹಳ ಚೆನ್ನಾಗಿದೆ.ಅದಕ್ಕೆ ಅಭಿನಂದನೆಗಳು.

ಬ್ಲಾಗ್ ನಲ್ಲಿ ಬರೆಯುವವರು ಬರಹಗಾರರಲ್ಲ ಎಂಬವರಿದ್ದಾರೆಂದು ತಿಳಿದು ಬೇಸರಾಯಿತು.ಹಾಗೆಯೇ ಎಲ್ಲಾ ಬ್ಲಾಗುಗಳ (?)ಬರಹಗಳನ್ನು ವಿಮರ್ಶಿಸಿ(?!) ಅದರ ಆಳ ಅಳವುಗಳನ್ನು ಒಂದೇ ಮಾತಿನಲ್ಲಿ ಹೇಳಬಲ್ಲ ಅವರ ಚಾಣಾಕ್ಷತೆ, ಧೈರ್ಯದ ಕುರಿತು ಆಶ್ಚರ್ಯವೂ ಆಯಿತು.

ನನ್ನ ಪ್ರಕಾರ ಕೆಲವು ಬ್ಲಾಗುಗಳಲಿ ಸಾಹಿತಿಗಳನ್ನು ಮೀರಿಸುವ ಪ್ರತಿಭೆಗಳಿವೆ.ತುಂಬಾ ಬಾರಿ ಪುಸ್ತಕಗಳು ನೀಡದ ತೃಪ್ತಿಯನ್ನು ಕೆಲವು ಬ್ಲಾಗ್ ಗಳು ನೀಡುತ್ತದೆ.

ಹಾಗೆ ಹೇಳುವವರು ಹೇಳುತ್ತಿರಲಿ, ಒಳ್ಳೆಯ ಸಾಹಿತ್ಯ ಮಿಸ್ ಮಾಡಿಕೊಳ್ಳುತ್ತಿರುವ ಅವರೆಲ್ಲರ ಮೇಲೆ ಅನುಕಂಪವಿದೆ.

Chamaraj Savadi said...

ಥ್ಯಾಂಕ್ಸ್‌ ರಂಜಿತ್‌.

ಬ್ಲಾಗ್‌ ಬರಹಗಾರರ ಬಗ್ಗೆ ಹಗುರ ಅಭಿಪ್ರಾಯ ಹೊಂದಿರುವವರ ಸಂಖ್ಯೆ ಸಾಕಷ್ಟಿದೆ. ಎಲ್ಲರ ತಾಕತ್ತನ್ನು ಒಂದೇ ಕ್ಷಣಕ್ಕೆ ಅಳೆದುಬಿಡಬಲ್ಲ ಭಂಡತನ ಅವರದು.

ಬ್ಲಾಗ್‌ ಬಗ್ಗೆ ನಿಮಗಿರುವ ಅಭಿಪ್ರಾಯಗಳೇ ನನ್ನವೂ ಹೌದು. ಉತ್ತಮ ಸಾಹಿತ್ಯವನ್ನು ಅವರು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಅನುಕಂಪಪಡಬಹುದೇ ವಿನಾ ಬದಲಾಯಿಸುವುದು ಸುಲಭವಲ್ಲ.