
ಸಂಜೆಯಾಯಿತು.
ಬೆಂಗಳೂರಿನಲ್ಲಿ ಸಂಜೆ ಎನ್ನುವುದು ಸುಮ್ಮನೇ ಬರುವುದಿಲ್ಲ. ಸೂರ್ಯ ಇದ್ದಕ್ಕಿದ್ದಂತೆ ತನ್ನ ಉರಿ ಕಳೆದುಕೊಂಡು, ಅನಗತ್ಯವಾಗಿ ಕೆಂಪೇರಿ, ಏನೋ ಅರ್ಜೆಂಟ್ ಕೆಲಸವಿದ್ದವನಂತೆ ದುಂಡಗಾಗಿ ಪಶ್ಚಿಮದೆಡೆಗೆ ಹೊರಡುವಾಗ, ಸಂಜೆಯಾಗುತ್ತದೆ.
ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಮರಗಳಲ್ಲಿ ಸಾವಿರಾರು ಹಕ್ಕಿಗಳ ಸಂಜೆ ಸಂಭ್ರಮದ ಗೀತೆ ವಾಹನಗಳ ಕರ್ಕಶ ಸದ್ದಿನಲ್ಲಿ ಅಡಗಿ ಹೋಗುತ್ತಿರುವಾಗ, ಸಂಜೆಯಾಗುತ್ತದೆ.
ಅದೇ ಮೆಜೆಸ್ಟಿಕ್‌ನ ಸಿಟಿ ಬಸ್ ನಿಲ್ದಾಣದಲ್ಲಿ, ತಮ್ಮ ಕಾಂಕ್ರೀಟ್ ಗೂಡು ಸೇರುವ ಕಾತರದಲ್ಲಿ ನಿಂತ ಲಕ್ಷಾಂತರ ಜನ, ‘ಈ ಹಾಳಾದ ಬಸ್ ಇನ್ನೂ ಬರಲಿಲ್ಲವಲ್ಲ’ ಎಂದು ಮನಸ್ಸಿನೊಳಗೇ ಶಪಿಸುತ್ತಿರುವಾಗ, ಸಂಜೆಯಾಗುತ್ತದೆ. ಮುಖ್ಯ ರಸ್ತೆಗಳಲ್ಲಿ, ಜನರಿಗೆ ನಡೆದಾಡಲೂ ಜಾಗವಿಲ್ಲದಂತೆ ತುಂಬಿಕೊಂಡ ವಾಹನಗಳು, ಮುಂದಕ್ಕೆ ಹೋಗಲಾಗದೇ ಹೊಗೆಯುಗುಳುತ್ತ ಅಸಹನೆಯಿಂದ ಕಿರಿಚಿಕೊಳ್ಳುವಾಗ, ಸಂಜೆಯಾಗುತ್ತದೆ. ಒಳ ಭಾಗದಲ್ಲಿರುವ ಸಣ್ಣ ರಸ್ತೆಗಳನ್ನೇ ತಾತ್ಕಾಲಿಕ ಆಟದ ಮೈದಾನವನ್ನಾಗಿ ಮಾಡಿಕೊಂಡ ಮಕ್ಕಳು ಆಟ ಆಡುತ್ತ ಕೇಕೆ ಹಾಕುತ್ತಿರುವಾಗ, ಸಂಜೆಯಾಗುತ್ತದೆ.
ದಿನವಿಡೀ ಅಡಗಿ ಕುಳಿತಂತಿದ್ದ ಭೇಲ್ ಪೂರಿ, ಪಾನಿ ಪೂರಿ ಅಂಗಡಿಯವರು ಕೂಡು ರಸ್ತೆಗಳ ಪಕ್ಕದಲ್ಲಿ ತಳ್ಳುಗಾಡಿ ನಿಲ್ಲಿಸಿ ಸ್ಟೌವ್‌ಗೆ ಗಾಳಿ ಹೊಡೆಯುವಾಗ, ಸಂಜೆಯಾಗುತ್ತದೆ. ಅದೇ ರಸ್ತೆಯ ಪಕ್ಕ, ಅಂಥದೇ ಗಾಡಿಯಲ್ಲಿ ಕಬಾಬ್, ಬೋಂಡ, ಮೀನುಗಳು ಸುಡುವ ಎಣ್ಣೆಯಲ್ಲಿ ಈಜಿಗಿಳಿದಾಗ, ಸಂಜೆಯಾಗುತ್ತದೆ.
ಬೆಂಗಳೂರಿನ ಸಂಜೆಗೆ ತನ್ನದೇ ಆದ ಮಾದಕತೆಯಿದೆ.
ತಾವು ಮಲಗಿದ್ದಾಗ ಏನೇನಾಯಿತು? ಎಂದು ಕೇಳುತ್ತ ಬೀದಿ ದೀಪಗಳು ಕಣ್ಣರಳಿಸುತ್ತವೆ. ದೇವರಿಗೆ ಬಿಟ್ಟ ಬಸವನಂತೆ ಚಲಿಸುವ ವಾಹನಗಳು ಛಕ್ಕಂತ ದೀಪ ಹಾಕಿಕೊಳ್ಳುತ್ತವೆ. ಮರಗಿಡಗಳು ನಿಧಾನಕ್ಕೆ ಕಪ್ಪಗಾದರೆ, ಎತ್ತರದ ಕಟ್ಟಡಗಳು ಲಕ್ಷ ದೀಪೋತ್ಸವದ ಗೋಪುರಗಳಂತೆ ಮಿಂಚತೊಡಗುತ್ತವೆ. ಗಲ್ಲಿಗೆರಡರಂತಿರುವ ದೇವಸ್ಥಾನಗಳಲ್ಲಿ ದೇವರು ಕೂಡ ಫ್ರೆಶ್ ಆಗಿ ಭಕ್ತರ ದರ್ಶನಕ್ಕೆ ಸಿದ್ಧನಾಗುತ್ತಾನೆ.
ಒಲಿದವಳು ಜೊತೆಗಿರುವಾಗ ಬ್ರಿಗೇಡ್, ಎಂ.ಜಿ. ರಸ್ತೆಗಳ ತಂಪು ಗಾಳಿಯ ಮಧ್ಯೆ, ಐಸ್‌ಕ್ರೀಮೂ ಬಿಸಿ ಹುಟ್ಟಿಸುತ್ತದೆ. ಮೊಬೈಲ್‌ಗಳ ಮೂಲಕ ಸಾವಿರಾರು ಸಾಂಕೇತಿಕ ಸಂದೇಶಗಳು, ಲಕ್ಷಾಂತರ ಪಿಸು ಧ್ವನಿಗಳು ಹರಿದಾಡುತ್ತವೆ. ಬಾನ ಹಕ್ಕಿಗಳು ಗೂಡು ಸೇರುವ ಹೊತ್ತಿನಲ್ಲಿ ಮಾನವ ಹಕ್ಕಿಗಳು ರಸ್ತೆಗಿಳಿಯುತ್ತವೆ. ಒಂದರೆಕ್ಷಣ ಸಂಚಾರಿ ಪೊಲೀಸನೂ ಮೈಮರೆಯುತ್ತಾನೆ.
ಪಬ್‌ಗಳಲ್ಲಿ ಬೀರು ನೊರೆಯುಕ್ಕಿಸುತ್ತದೆ. ಗ್ಲಾಸ್‌ಗಳು ಕಿಣಿಕಿಣಿಗುಟ್ಟುತ್ತವೆ. ಮುಚ್ಚಿದ ಬಾಗಿಲನ್ನು ಇಷ್ಟೇ ತೆರೆದು, ಸಮವಸ್ತ್ರಧಾರಿ ಗಾರ್ಡ್ ‘ಗುಡ್ ಇವನಿಂಗ್ ಸರ್’ ಎಂದು ಸ್ವಾಗತಿಸುತ್ತಾನೆ. ಹೋಟೆಲಿನ ರೂಮಿನಲ್ಲಿ ಆಫೀಸ್ ಬಾಯ್, ‘ಸಂಜೆಗೆ ಏನು ಆರ್ಡರ್ ಸರ್?’ ಎಂದು ವಿನೀತನಾಗಿ ವಿಚಾರಿಸುತ್ತಾನೆ. ದರ್ಶಿನಿಗಳಲ್ಲಿ ಅನ್ನ ಉಗಿಯಾಡುತ್ತದೆ. ಚಪಾತಿ ಮೈ ಕಾಯಿಸಿಕೊಳ್ಳುತ್ತದೆ. ಪಲ್ಯ, ಸಾಂಬಾರ್, ರಸಮ್‌ಗಳು ಪರಿಮಳ ಸೂಸುತ್ತ ಕುದಿಯುತ್ತವೆ. ಹೆಂಡತಿ ಗಂಡನ ದಾರಿ ಕಾಯುವಂತೆ ಬಾಳೆ ಎಲೆಗಳು ಭೋಜನಾರ್ಥಿಗಳ ದಾರಿ ನೋಡುತ್ತವೆ.
ಕಾರ್ಖಾನೆಗಳಲ್ಲಿ ಪಾಳಿ ಬದಲಾಗುತ್ತದೆ. ವಾತಾವರಣದಲ್ಲಿ ಗಾಳಿ ತಂಪಾಗುತ್ತದೆ. ಆದರೆ, ಸಿಗ್ನಲ್ ದೀಪಗಳು ಮಾತ್ರ ಬೇಗ ಬದಲಾಗುವುದೇ ಇಲ್ಲ. ತುಂಬು ಬಸುರಿಯಂತಾಗಿರುವ ಸಿಟಿ ಬಸ್‌ಗಳೊಳಗೆ ಸಿಕ್ಕಿಕೊಂಡ ದೂರ ಪ್ರದೇಶದ ಪ್ರಯಾಣಿಕ ಕಿಟಕಿಯತ್ತ ಬಗ್ಗಿ ರಸ್ತೆಯಂಚಿನ ಸಂಭ್ರಮ ನೋಡುತ್ತ ಬೆವರೊರೆಸಿಕೊಳ್ಳುತ್ತಾನೆ. ಕಬ್ಬನ್ ಪಾರ್ಕ್‌ನ ಅಸಂಖ್ಯಾತ ಗಿಡಮರಗಳ ಕೆಳಗೆ ನಿತ್ಯ ಸುಮಂಗಲಿಯರ ಕಣ್ಸನ್ನೆ ಬಾಯ್ಸನ್ನೆಗಳು, ಆ ಕತ್ತಲ್ಲಲೂ, ಕಾಣಬೇಕಾದವರ ಕಣ್ಣು ತಲುಪುತ್ತವೆ.
ಸಂಜೆಯಾದರೆ ಇಲ್ಲಿ ಕೆಲವರು ಸಿಗುವುದೇ ಇಲ್ಲ. ಇನ್ನು ಕೆಲವರು ಸಿಗುವುದು ಸಂಜೆ ಮಾತ್ರ. ಇಡೀ ಊರಿನ ಮುಕ್ಕಾಲು ಪಟ್ಟು ಜನ ಆ ಹೊತ್ತು ರಸ್ತೆಯಲ್ಲಿರುತ್ತಾರೆ. ಪಾರ್ಕ್‌ಗಳು ಭರ್ತಿ. ಸಿನಿಮಾ ಮಂದಿರಗಳು ಫುಲ್. ಹೋಟೆಲ್‌ಗಳು ರಷ್. ಬಸ್‌ಗಳು... ಉಶ್...!
ಮಕ್ಕಳಿಗೆ ಹೋಂ ವರ್ಕ್ ಮಾಡಿಸಿ ಟಿವಿ ಧಾರಾವಾಹಿ ನೋಡಲು ಮನೆಯಲ್ಲಿರುವ ತಾಯಂದಿರಿಗೆ ಆತುರ. ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ‘ಬೇಕಾದ’ ಫೈಲ್‌ಗಳನ್ನು ವಿಲೇವಾರಿ ಮಾಡಿ ಜೇಬು ತುಂಬಿಸಿಕೊಳ್ಳುವ ಕಾತರ. ಸಿಟಿ ಮಾರ್ಕೆಟ್‌ನ ಸಣ್ಣ ವ್ಯಾಪಾರಿಗಳಿಗೆ ಇದ್ದಬಿದ್ದ ಮಾಲನ್ನೆಲ್ಲ ಖಾಲಿ ಮಾಡುವ ಅವಸರ. ಜೇಬುಗಳ್ಳರಿಗೆ ವೃತ್ತಿ ಚಳಕ ಮೆರೆಯುವ ಸಡಗರ.
ಸಂಜೆ ಹೊತ್ತಿಗೆ ಇಡೀ ಬೆಂಗಳೂರು ಬೀದಿಯಲ್ಲಿರುತ್ತದೆ. ಕೂಗುತ್ತ, ರೇಗುತ್ತ, ಪುಳಕಗೊಳ್ಳುತ್ತ, ಅಲ್ಲಿಂದಿಲ್ಲಿಗೆ ಸರಭರ ಹರಿದಾಡುತ್ತ ತನ್ನೆಲ್ಲ ಕನಸು, ಸೊಗಸು ಮತ್ತು ಕಲ್ಮಶಗಳನ್ನು ಹರಿಬಿಡುತ್ತ ಅರಳುತ್ತದೆ, ಕೆರಳುತ್ತದೆ-
ಮತ್ತು ಎಂಥದೋ ಸುಖದ ನಿರೀಕ್ಷೆಯಲ್ಲಿ ಹೊರಳುತ್ತದೆ.
- ಚಾಮರಾಜ ಸವಡಿ
2 comments:
ಪ್ರಿಯ ಚಾಮರಾಜರೇ
ನಿಮ್ಮ ಬ್ಲೋಗ್ ಆಗಾಗ ಓದುತ್ತಿರುತ್ತೇನೆ.
ನಾನು ಸಂಪದದಲ್ಲಿ ನಿಮ್ಮ ಸಂಪದ ಬರಹಕ್ಕೆ ಪ್ರತಿಕ್ರಿಯೆಗೆ ನನ್ನ ಮಾಹಿತಿ ಮೂಲ ಡೌನ್ ಟು ಅರ್ಥ್ ನಲ್ಲಿ ಹಿಂದೆ ಬಂದ ಲೇಖನ. . ಅವರ ಹಳೆಯ ಪ್ರತಿಗಳು ಚಂದಾದಾರಲ್ಲದವರಿಗೆ ತೆರೆಯುದೋ ನಾನರಿಯೆ. ಅದು ಪ್ರಕಟವಾದುದು ೨೦೦೩ರ ಜನವರಿಯ ಎರಡನೇಯ ಸಂಚಿಕೆಯಲ್ಲಿ. ನಿಮ್ಮ ವಿಳಾಸ ತಿಳಿಸಿದರೆ ಅದನ್ನು ಕಳುಹಿಸುತ್ತೇನೆ.
ವಿಶ್ವಾಸದಿಂದ
ಗೋವಿಂದ
bhat59@gmail.com
ಥ್ಯಾಂಕ್ಸ್ ಗೋವಿಂದ್ ಅವರೇ,
ಡೌನ್ ಟು ಅರ್ಥ್ ನನ್ನ ಇಷ್ಟದ ಪತ್ರಿಕೆಗಳಲ್ಲಿ ಒಂದು. ಆದರೆ, ಅದರ ಆನ್‌ಲೈನ್ ಆವೃತ್ತಿಯಲ್ಲಿ ತೀರಾ ಇತ್ತೀಚಿನ ಪ್ರಕಟಣೆಗಳು ಸಿಗುವುದಿಲ್ಲ. ಅದಕ್ಕೆ ದುಡ್ಡುಕಟ್ಟಿ ಚಂದಾದಾರರಾಗಬೇಕು. ಆದರೆ, ನೀವು ಪ್ರಸ್ತಾಪಿಸಿದ ಸಂಚಿಕೆ ಹಳೆಯದಾಗಿರುವುದರಿಂದ, ಈಗ ಆನ್‌ಲೈನ್‌ನಲ್ಲಿ ಸಿಕ್ಕರೂ ಸಿಗಬಹುದು. ಹುಡುಕಿ ನೋಡುತ್ತೇನೆ. ಸಿಗದಿದ್ದರೆ, ಖಂಡಿತ ನಿಮ್ಮನ್ನು ಸಂಪರ್ಕಿಸುತ್ತೇನೆ.
ನಿಮ್ಮ ಕಾಳಜಿ ಕಂಡು ಸಂತೋಷವಾಗಿದೆ.
- ಚಾಮರಾಜ ಸವಡಿ
Post a Comment