ಎಲ್ಲಿಂದಲೋ ಬಂದವರು

17 Jan 2009


ಬೆಂಗಳೂರಿನ ಚಂದ್ರಾ ಲೇಔಟ್‌ ಬಡಾವಣೆಗೆ ಮನೆ ಬದಲಿಸಿದ ಪ್ರಾರಂಭದ ದಿನಗಳವು.

ಇಡೀ ದಿನ ಮನೆ ಸಾಮಾನುಗಳನ್ನು ಪ್ಯಾಕ್‌ ಮಾಡಿ, ಲಾರಿಗೆ ಹೇರಿಸಿ, ಇಳಿಸಿ, ಮತ್ತೆ ಜೋಡಿಸುವ ಕೆಲಸದಲ್ಲಿ ಹೈರಾಣಾಗಿದ್ದೆ. ಅದು ಕೇವಲ ದೈಹಿಕ ದಣಿವಲ್ಲ. ಪ್ರತಿಯೊಂದು ಸಲ ಮನೆ ಬದಲಿಸಿದಾಗಲೂ ಆಗುವ ಭಾವನಾತ್ಮಕ ತಾಕಲಾಟಗಳ ಸುಸ್ತದು.

ಮಕ್ಕಳು ಮಲಗಲು ಬೇಕಾದ ಕನಿಷ್ಠ ವ್ಯವಸ್ಥೆ ಮಾಡಿ, ಹೋಟೆಲ್‌ನಿಂದ ತಂದಿದ್ದ ಊಟವನ್ನು ಒಂದಿಷ್ಟು ತಿನ್ನಿಸಿ ಅವನ್ನು ಮಲಗಿಸಿದ್ದಾಯ್ತು. ಮನೆ ತುಂಬ ಎಲ್ಲೆಂದರಲ್ಲಿ ಬಿದ್ದಿದ್ದ ಗಂಟು, ಮೂಟೆ, ಡಬ್ಬಗಳ ಮಧ್ಯೆ ಎರಡು ಕುರ್ಚಿ ಹಾಕಿಕೊಂಡು ನಾನು ಮತ್ತು ರೇಖಾ ಸ್ವಲ್ಪ ಹೊತ್ತು ಸುಮ್ಮನೇ ಕೂತೆವು.

ಏನಂತ ಮಾತಾಡುವುದು? ನಾವು ಹೀಗೆ ಕೂತಿದ್ದು ಇದೇ ಮೊದಲ ಸಲವೇನಲ್ಲ. ಮದುವೆಗೆ ಮುಂಚೆಯೇ ಏಳೆಂಟು ಸಲ ರೂಮ್‌ ಬದಲಿಸಿದ ಭೂಪ ನಾನು. ಮದುವೆಯಾದ ಏಳು ವರ್ಷಗಳಲ್ಲಿ ಸರಾಸರಿ ವರ್ಷಕ್ಕೊಮ್ಮೆಯಂತೆ ಮನೆ ಬದಲಿಸಿದ್ದೇನೆ. ನೌಕರಿ ಬದಲಾದಾಗ ಮನೆ ಬದಲಾಗಿವೆ. ಟ್ರಾನ್ಸಫರ್‌ ಆದಾಗ ಅನಿವಾರ್ಯವಾಗಿ ಮನೆ ಬದಲಿಸಲೇಬೇಕಲ್ಲ. ಹೆಚ್ಚಿನ ಅನುಕೂಲತೆಗಳಿಗಾಗಿ ಎರಡು ಸಲ ನಾವೇ ಹೊಸ ಮನೆ ಹುಡುಕಿದ್ದೆವು. ಹೀಗಾಗಿ, ಪ್ರತಿ ಸಲ ಎತ್ತಂಗಡಿಯಾದಾಗಲೂ ಅದೇ ಭಾವ, ಅದೇ ನೋವು.

ಮನೆ ತುಂಬ ಹರಡಿರುವ ಸಾಮಾನುಗಳನ್ನು ನೋಡುತ್ತಿದ್ದರೆ, ನಾವು ಯಾರದೋ ಮನೆಯಲ್ಲಿ ಕೂತಿದ್ದೇವೆ ಅನಿಸುತ್ತಿತ್ತು. ಒಂದು ಬೆಂಕಿಪೆಟ್ಟಿಗೆಯೂ ಕೈಗೆ ಸಿಗುವುದಿಲ್ಲ. ನಾಳೆಯವರೆಗೆ ಕುಡಿಯುವ ನೀರಿನ ತೊಂದರೆಯಿಲ್ಲ. ಪೇಸ್ಟ್‌ ಬ್ರಷ್‌ ಗೊತ್ತಿರುವ ಕಡೆ ಇಟ್ಟಿದ್ದು ಸಮಾಧಾನ. ಇನ್ನೆರಡು ಲೈಟ್‌ ಹಾಕಬೇಕು. ನಾಳೆಯ ನಾಷ್ಟಾ ಹೋಟೆಲ್‌ನಿಂದ ತಂದುಬಿಡಿ. ಬಾತ್‌ರೂಮಿನಲ್ಲಿ ಗ್ಯಾಸ್‌ ಗೀಜರ್‌ ಜೋಡಿಸಬೇಕು. ಒಂದು ನಲ್ಲಿ ಸೋರುತ್ತಿದೆ, ಪ್ಲಂಬರ್‌ ಕರೆಸಿ. ಈ ಮನೆಯಲ್ಲಿ ಫ್ಯಾನ್‌ಗಳೇ ಇಲ್ಲ. ಎಲೆಕ್ಟ್ರಿಸಿಯನ್‌ ಕೂಡಾ ಬರಬೇಕು. ಇಲ್ಲಿ ಕೆಲಸದವರು ಸಿಗುತ್ತಾರಾ? ಗೌರಿ ಸ್ಕೂಲಿನ ದಾರಿ ಸರಿಯಾಗಿ ನೋಡಿದ್ದೀರಲ್ವಾ? ರೇಶನ್‌ ಎಲ್ಲಿ ಸಿಗುತ್ತದೆ? ತರಕಾರಿ ಎಲ್ಲಿ? ಅಂದ್ಹಾಗೆ ನಾಳೆ ಬೆಳಿಗ್ಗೆ ಬೇಗ ಎದ್ದು ಹಾಲು ತಗೊಂಬನ್ನಿ. ಕಾಫಿ ಪುಡಿ, ಸಕ್ಕರೆ ಎಲ್ಲಿಟ್ಟಿದ್ದೀನೋ ನೆನಪಿಲ್ಲ. ಬರ್ತಾ ಅವನ್ನೂ ತಂದ್ಬಿಡಿ. ಇಲ್ಲೆಲ್ಲೋ ಬೇಕರಿ ಇರಬೇಕು. ಒಂದಿಷ್ಟು ಬ್ರೆಡ್‌...

ಬರೀ ಇವೇ ಮಾತಾಯ್ತಲ್ಲ ಮಾರಾಯ್ತಿ ಎಂದು ಸಿಡುಕಿದೆ. ಆಕೆ ಸುಮ್ಮನಾದಳು.

ಮನೆ ಗವ್ವನೇ ದಿಟ್ಟಿಸಿತು. ಆ ಮೂಲೆಯಲ್ಲಿರುವ ರಟ್ಟಿನ ಡಬ್ಬದಲ್ಲಿ ನನ್ನ ಕಂಪ್ಯೂಟರ್‌ ಇದೆ. ಈ ಮನೆಗೆ ಇಂಟರ್‌ನೆಟ್‌ ಯಾವಾಗ ಬರುತ್ತದೋ. ಬಿಎಸ್ಸೆನ್ನೆಲ್‌ ಕಚೇರಿ ಎಲ್ಲಿದೆಯೋ, ಅವರು ಯಾವಾಗ ನೆಟ್‌ ಕನೆಕ್ಷನ್‌ ಕೊಡ್ತಾರೋ. ಪೆಟ್ರೋಲ್‌ ಬಂಕ್‌ ಹತ್ತಿರದಲ್ಲಿದೆಯಾ? ದಾರಿಯಲ್ಲೆಲ್ಲೋ ನೋಡಿದ ನೆನಪು. ನನ್ನ ಡ್ರೆಸ್‌ಗಳು ಯಾವ ಮೂಟೆಯಲ್ಲಿ ಮಾಯವಾಗಿವೆಯೋ, ಇಸ್ತ್ರಿ ಮಾಡುವವರನ್ನು ಎಲ್ಲಿ ಹುಡುಕುವುದು?...

ನನ್ನ ಪ್ರಶ್ನೆಗಳನ್ನು ನನ್ನಲ್ಲೇ ನುಂಗಿದೆ. ಮತ್ತೆ ಮೌನ.

ಆಕೆಗೆ ಕಣ್ಣೆಳೆಯುತ್ತಿದ್ದವು. ಮಲ್ಕೋ ಹೋಗು ಎಂದೆ. ಆಕೆ ಎದ್ದು ಹೋಗುತ್ತಲೇ ತುಂಬಿದ ಮನೆಯಲ್ಲಿ ಖಾಲಿ ಮನಃಸ್ಥಿತಿಯಲ್ಲಿ ಸುಮ್ಮನೇ ಕೂತೆ.

ವಿದಾಯ ಎಷ್ಟೊಂದು ವಿಚಿತ್ರವಲ್ಲವಾ? ಎಲ್ಲಿಂದಲೋ ಬರುತ್ತೇವೆ. ನಮ್ಮ ಹಾಗೆ ಎಲ್ಲಿಂದಲೋ ಬಂದವರ ಜೊತೆ ಸ್ನೇಹ ಬೆಳೆಯುತ್ತದೆ. ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುತ್ತೇವೆ. ನಮ್ಮ ಮಕ್ಕಳು ಅವರ ಮನೆಯಲ್ಲಿ ಆಡುತ್ತವೆ. ಅವರ ಮನೆಯ ಕಷ್ಟಗಳಿಗೆ ನಮ್ಮ ಸಾಂತ್ವನ. ರಾತ್ರಿ ಮನೆಗೆ ಬರುವುದು ತಡವಾದರೂ ಪಕ್ಕದ ಮನೆಯವರು ಇದ್ದಾರೆ ಎಂಬ ಭರವಸೆ. ಮಕ್ಕಳಿಗೆ ಹುಷಾರಿಲ್ಲ ಎಂದರೆ, ಓನರ್‌ ಆಂಟಿ ಜತೆಗಿರುತ್ತಾರೆ ಎಂಬ ನೆಮ್ಮದಿ. ನಂಟು ಬೆಳೆಯಲು ಇಂಥ ಒಂದಿಷ್ಟು ಎಳೆಗಳು ಸಾಕು.

ಕ್ರಮೇಣ ಪರಿಚಯ ಆತ್ಮೀಯತೆಗೆ ತಿರುಗುತ್ತದೆ. ಓನರ್‌ ಆಂಟಿಗೆ ಪರಿಚಯ ಇರುವ ಜನ ನಮಗೂ ಪರಿಚಯವಾಗುತ್ತಾರೆ. ಫ್ಯಾಮಿಲಿ ಡಾಕ್ಟರ್‌, ಕಿರಾಣಿ ಅಂಗಡಿಯವರು, ಪೇಪರ್‌ ಹಾಕುವ ಹುಡುಗ, ತರಕಾರಿ ಮಾರುವವರು, ಇಸ್ತ್ರೀ ಅಂಗಡಿಯವ, ಹತ್ತಿರದ ದೇವಸ್ಥಾನ, ಅಷ್ಟೇ ಹತ್ತಿರ ಇರುವ ಡಿಪಾರ್ಟ್‌‌ಮೆಂಟಲ್‌ ಸ್ಟೋರ್‌, ಮೆಜೆಸ್ಟಿಕ್‌ ಬಸ್‌ ನಂಬರ್‌, ಬಳೆ ಅಂಗಡಿ, ಔಷಧಿ ಅಂಗಡಿ, ಇದ್ದುದರಲ್ಲೇ ಪರವಾಗಿಲ್ಲ ಎನ್ನುವ ಹೋಟೆಲ್‌ಗಳು- ಒಂದಕ್ಕೊಂದು ಮಾಹಿತಿ ದಕ್ಕಿ ಕ್ರಮೇಣ ಪಕ್ಕದ ಮನೆಯವರೊಂದಿಗೆ ನಂಟು ಬಲವಾಗುತ್ತದೆ. ಅವರಿಗೆ ಉಪ್ಪಿಟ್ಟು ಇಷ್ಟ ಎಂದು ನಮಗೂ, ಮೈಸೂರು ಮಂಡಕ್ಕಿಯನ್ನು ಈಕೆ ಚೆನ್ನಾಗಿ ಮಾಡುತ್ತಾಳೆ ಎಂದು ಅವರಿಗೂ ಗೊತ್ತಾಗುತ್ತದೆ. ಇಬ್ಬರೂ ಸೇರಿಕೊಂಡು ಉಪ್ಪಿನಕಾಯಿಗೆ ಮಸಾಲೆ ಅರೆಯುತ್ತಾರೆ. ಅವರ ಮನೆಯ ಹೋಳಿಗೆಗೆ ನಮ್ಮನೆಯ ಕರಿದ ಸಂಡಿಗೆ, ಹಪ್ಪಳ ರುಚಿ ಕೊಡುತ್ತವೆ. ಬದುಕು ಘಮ್ಮೆಂದು ಅರಳತೊಡಗುತ್ತದೆ.

ಕೊಂಚ ಬೇಜವಾಬ್ದಾರಿತನ ಇರುವ ನನಗೆ ಇದು ಸ್ವಾಗತಾರ್ಹ ಬೆಳವಣಿಗೆ. ಈ ಸಲದ ರೇಶನ್‌ ಪಟ್ಟಿ ಮಾಡಬೇಕು ಎಂಬ ನನ್ನ ಹೆಂಡತಿಯ ಮೊದಲ ವಾರ್ನಿಂಗ್‌ ಯಾವತ್ತೂ ನನ್ನ ತಲೆಗೆ ನಾಟಿಲ್ಲ. ಇನ್ನೊಂದು ವಾರದಲ್ಲಿ ರೇಶನ್‌ ಖಾಲಿಯಾಗುತ್ತದೆ ಎಂಬ ಎರಡನೇ ವಾರ್ನಿಂಗನ್ನೂ ಕೇರ್‌ ಮಾಡಿದವನಲ್ಲ. ಅಡುಗೆ ಎಣ್ಣೆ ನಾಳೆವರೆಗೆ ಮಾತ್ರ ಬರುತ್ತದೆ ಎಂಬ ವಾರ್ನಿಂಗ್‌ ಕಚೇರಿಗೆ ಹೋಗುವ ಹೊತ್ತಿಗೆ ಮರೆತುಹೋಗಿರುತ್ತದೆ. ನಾಳೆ ಎಂದರೆ ಇಪ್ಪತ್ನಾಲ್ಕು ಗಂಟೆ ತಾನೆ? ಬೆಳಿಗ್ಗೆ ತರ್ತೀನಿ ಬಿಡು ಅನ್ನುತ್ತೇನೆ. ಮರುದಿನ ಬೆಳಿಗ್ಗೆ ಅರ್ಜೆಂಟ್‌ ಕೆಲಸವೊಂದು ಗಂಟು ಬಿದ್ದಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಗಂಭೀರನಾಗೇ ಕಂಪ್ಯೂಟರ್‌ ಮುಂದೆ ಕೂತ ನನ್ನ ಮುಂದೆ ರೇಶನ್‌ ಎಂಬ ಚಿಲ್ಲರೆ ವಿಷಯವನ್ನು ರೇಖಾ ಪ್ರಸ್ತಾಪಿಸುವುದಾದರೂ ಹೇಗೆ?

ಸಂಜೆ ಹೊತ್ತಿಗೆ ಎಣ್ಣೆ ಖಾಲಿ. ತುಪ್ಪ ತಳ ಕಂಡಿರುತ್ತದೆ. ಮಸಾಲೆ ಹಪ್ಪಳದ ಮುರುಕುಗಳಷ್ಟೇ ಉಳಿದಿವೆ. ಈಕೆಯೇ ಕೂತು ಉದ್ದುದ್ದ ಪಟ್ಟಿ ತಯಾರಿಸುತ್ತಾಳೆ. ಕಚೇರಿಯಿಂದ ಮನೆಗೆ ಬರುತ್ತಲೇ ವಾತಾವರಣದ ಗಂಭೀರತೆ ಗೇಟಿನವರೆಗೆ ತಲುಪಿರುತ್ತದೆ. ಓಹೋ, ರೇಶನ್‌ ವಿಷ್ಯ ಅಂತ ಅಂದುಕೊಳ್ಳುತ್ತಲೇ ಅಗತ್ಯಕ್ಕಿಂತ ಹೆಚ್ಚು ನಗುತ್ತ ಒಳಗೆ ಬರುತ್ತೇನೆ. ಆಕೆ ನಗುವುದಿಲ್ಲ. ಊಟಕ್ಕೆ ಕೂತಾಗ, ಅಡುಗೆ ಮಾಮೂಲಿನಂತೆ ಚೆನ್ನಾಗೇ ಇರುತ್ತದೆ. ಇದೇನು ಎಣ್ಣೆ ಇಲ್ಲ ಅಂತಿದ್ದೆ, ಹಪ್ಪಳ ಕರಿದಿದ್ದೀ? ಎಂದು ಅಚ್ಚರಿಪಡುತ್ತೇನೆ. ಓನರ್‌ ಆಂಟಿ ಮನ್ಯಾಗಿಂದ ತಂದೆ ಎಂದು ಈಕೆ ಮುಖ ಬಿಗಿ ಹಿಡಿದುಕೊಂಡೇ ಉತ್ತರಿಸುತ್ತಾಳೆ.

ಹೊಸ ಮನೆಯ ಮಸಕು ಬೆಳಕಿನಲ್ಲಿ ಒಬ್ಬನೇ ಕೂತ ನನಗೆ ಇಂಥ ನೂರಾರು ಘಟನೆಗಳು ನೆನಪಾಗುತ್ತವೆ.

ಇಲ್ಲಿ ಯಾರೂ ಗೊತ್ತಿಲ್ಲ. ಅಷ್ಟು ಸುಲಭವಾಗಿ ಪರಿಚಯವಾಗುವ ಸಂಭವವೂ ಇಲ್ಲ. ಸದ್ಯಕ್ಕಂತೂ ಇಲ್ಲ. ಪ್ರತಿಯೊಂದನ್ನೂ ನಾವೇ ಹುಡುಕಿಕೊಂಡು ಹೋಗಬೇಕು. ಮಕ್ಕಳ ಡಾಕ್ಟರ್‌, ಹಾಲಿನವರು, ತರಕಾರಿ, ರೇಶನ್‌, ಔಷಧ ಅಂಗಡಿ, ಕಸ ಸಂಗ್ರಹಿಸುವವರು, ಪೇಪರ್‌ ಹಾಕುವವರು, ಕೇಬಲ್‌, ಫೋನ್‌- ಪಟ್ಟಿ ಬೆಳೆಯುತ್ತಲೇ ಇತ್ತು.

ಎಷ್ಟೊತ್ತು ಕೂತಿದ್ದೆನೋ, ನಿದ್ದೆ ಒತ್ತರಿಸಿಕೊಂಡು ಬರುತ್ತಿತ್ತು. ಅಡ್ಡಡ್ಡ ಬಿದ್ದಿದ್ದ ಮೂಟೆಗಳನ್ನು ಹುಷಾರಾಗಿ ದಾಟಿ ರೂಮೊಳಗೆ ಹೋಗಿ, ಮಕ್ಕಳಿಗೆ ಸರಿಯಾಗಿ ಹೊದಿಸಿ ಬಿದ್ದುಕೊಂಡೆ.

ಎಂದಿನಂತೆ ಮರುದಿನ ನಸುಕಿನಲ್ಲಿ ಎಚ್ಚರವಾಯಿತು. ಎದ್ದವ ಕಕ್ಕಾವಿಕ್ಕಿ. ಎಲ್ಲಿದ್ದೇನೆ ಎಂಬುದೇ ತಿಳಿಯುತ್ತಿಲ್ಲ. ನೈಟ್‌ ಬಲ್ಬ್‌ನ ಮಂದ ಬೆಳಕಲ್ಲಿ ಎಲ್ಲವೂ ವಿಚಿತ್ರವಾಗಿ ಕಾಣುತ್ತಿದೆ. ಬಾಗಿಲೆಲ್ಲಿದೆ? ಬಾತ್‌ ರೂಮ್‌? ಇದೇನಿದು ಇಷ್ಟೊಂದು ಸಾಮಾನುಗಳು ಬಿದ್ದಿವೆ?

ಕ್ರಮೇಣ ಮನಸ್ಸು ತಿಳಿಯಾಯಿತು. ಓ, ಇದು ಹೊಸ ಮನೆ!

ಮೌನವಾಗಿ ಎದ್ದೆ. ಮಕ್ಕಳಿಗೆ ಹೊದಿಸಿದೆ. ಮೂಟೆಗಳನ್ನು ಹುಷಾರಾಗಿ ದಾಟುತ್ತ ಕದ ತೆರೆದು ವರಾಂಡಕ್ಕೆ ಬಂದು ನಿಂತೆ. ಡಿಸೆಂಬರ್‌ನ ಚಳಿ ಮುಖಕ್ಕೆ ರಾಚಿತು. ಮನೆ ಎದುರಿನ ಬೀದಿ ದೀಪದ ಬೆಳಕಿನಲ್ಲಿ ನಾನಿದ್ದ ಬೀದಿ ಶಾಂತವಾಗಿ ಮಲಗಿತ್ತು. ಅರೆ ಕ್ಷಣ ಮೌನವಾಗಿ ನಿಂತೆ.

ಹೊಸ ಮನೆಯಲ್ಲಿ ಹಳೆಯ ಕನಸುಗಳಿಗೆ ಜೀವ ತುಂಬಬೇಕು. ಹೊಸ ಕನಸುಗಳು ಅರಳಬೇಕು. ಮೂಟೆ ಬಿಚ್ಚಿ, ಎಲ್ಲವನ್ನೂ ಮತ್ತೆ ಜೋಡಿಸಿ, ಖಾಲಿ ಕಟ್ಟಡದಲ್ಲಿ ಮನೆ ರೂಪಿಸಬೇಕು ಎಂದು ಯೋಚಿಸುತ್ತಿದ್ದಾಗ ಬೀಸಿದ ಚಳಿ ಗಾಳಿ ಮೈ ನಡುಗಿಸಿತು. ತಲೆ ಕೊಡವಿ ಒಳ ಹೊಕ್ಕವ ಮುಖ ತೊಳೆದು, ಚಪ್ಪಲಿ ಮೆಟ್ಟಿ ಬೀದಿಗಿಳಿದೆ.

ಹಾಲಿನ ಬೂತ್‌ ಹುಡುಕಿ ಹೊರಟವನನ್ನು ಮುಂಜಾವಿನ ಮೊದಲ ಸೂರ್ಯಕಿರಣಗಳು ಆದರದಿಂದ ಸ್ವಾಗತಿಸಿದವು.

- ಚಾಮರಾಜ ಸವಡಿ

10 comments:

ಬೆಂಕಿಕಡ್ಡಿ said...

ಸಂಪದದಲ್ಲಿ ಈಗಷ್ಟೇ ನಿಮ್ಮ ಇದೇ ಲೇಖನ ಓದಿ ಕುತೂಹಲಕ್ಕೆ ಈ ಬ್ಲಾಗಿಗೆ ನುಗ್ಗಿದೆ. ಅನುಭವಗಳನ್ನು ದಾಖಲಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಿವೆ. ಉತ್ತಮ ಪುರುಷದಲ್ಲಿ ಬರೆಯುವುದನ್ನು ಸ್ವಲ್ಪ ನಿಯಂತ್ರಿಸಿದರೆ ಅದ್ಬುತ ಪ್ರಬಂಧಗಳು ಇವು. ಅಭಿನಂದನೆ.

Chamaraj Savadi said...

ಥ್ಯಾಂಕ್ಸ್‌ ರಾಮಸ್ವಾಮಿಯವರೇ. ’ಉತ್ತಮ ಪುರುಷ’ ಏನು ಎಂಬುದು ಅರ್ಥವಾಗಲಿಲ್ಲ.

ಬಿಸಿಲ ಹನಿ said...

ಚಾಮರಾಜ ಸರ್,
ನಿಮಗೆ ಅದೆಲ್ಲಿಂದ ಹೊಳೆಯುತ್ತವೆ ಇಂಥ ಸಣ್ಣ ಸಣ್ಣ ವಿಚಾರಗಳು? ಇಂಥ ಸಣ್ಣ ಸಣ್ಣ ವಿಚಾರಗಳನ್ನೇ ಬಹಳ ಒಪ್ಪವಾಗಿ,ಚಂದವಾಗಿ ಬರೆಯುವ ನಿಮ್ಮ ಕಲೆಗೆ hats off.
ಎಲ್ಲಿಂದಲೋ ಬರುತ್ತೇವೆ,ಯಾರ್ಯಾರನ್ನೋ ಭೇಟಿಯಾಗುತ್ತೇವೆ,ಎಲ್ಲೆಲ್ಲೋ ಬದುಕುತ್ತೇವೆ ಕೊನೆಗೆ ಇದೆಲ್ಲವನ್ನು ಬಿಟ್ಟು ಒಂದಿಷ್ಟು ಹಸಿ ಹಸಿ ನೆನಪುಗಳನ್ನು ಉಳಿಸಿ ಹೋಗುವದೇ ಬದುಕಲ್ಲವೆ?
ಉದಯ ಇಟಗಿ

ಹಂಸಾನಂದಿ Hamsanandi said...

ಉತ್ತಮ ಪುರುಷ -> in first person

Chamaraj Savadi said...

ರಾಮಸ್ವಾಮಿಯವರೇ, ಪ್ರಥಮ ಪುರುಷದಲ್ಲಿ ಬರೆಯುವ ಶೈಲಿ ಸುಲಭ ಮತ್ತು ನೇರ. ಅದು ಆತ್ಮೀಯವೂ ಕೂಡಾ.

Chamaraj Savadi said...

ಉದಯ ಅವರೇ, ಪ್ರತಿಕ್ರಿಯೆಗೆ ಥ್ಯಾಂಕ್ಸ್‌. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇಂಥ ವಿಚಾರಗಳು ಇದ್ದೇ ಇರುತ್ತವೆ. ಅವನ್ನೇ ಬರೆಯುವ ಪ್ರಯತ್ನ ನನ್ನದು.

Chamaraj Savadi said...

ರಾಮಪ್ರಸಾದ್‌ (ಹಂಸಾನಂದಿ) ಅವರೇ, ಥ್ಯಾಂಕ್ಸ್‌. ಪ್ರಥಮ ಪುರುಷದ ಬಳಕೆ ಬರವಣಿಗೆ ಒಂದು ಪ್ರಕಾರ. ಅದು ನನಗೆ ಇಷ್ಟವಾಗಿದ್ದು ಕೂಡ.

ಆಲಾಪಿನಿ said...

ಹೂಂ.... ಹೊಸಮನೆಯಲ್ಲಿ ಹೊಸ ರಗಳೆಯೊಂದಿಗೆ ಹಳೆ ಕನಸುಗಳ ನನಸು ಮಾಡುವ ಹಂಬಲ, ಉತ್ಸಾಹ, ಆಶಾಭಾವ ಏನೆಲ್ಲ.

kaligananath gudadur said...

Dear chamaraja, nimma barehada krushi anubhavisodu endare nanage ellillada kushi. kaligananath gudadur

Chamaraj Savadi said...

ಬ್ಲಾಗ್‌ ಲೋಕಕ್ಕೆ ಸ್ವಾಗತ ಕಲಿಗಣನಾಥ. ಕತೆಗಳಿಂದ ಪರಿಚಯವಾದವರು ನೀವು. ಅದನ್ನು ಮತ್ತೆ ಎದುರುನೋಡುತ್ತೇನೆ.

- ಚಾಮರಾಜ ಸವಡಿ