Art just makes verses; only the heart is a poet.
- Andre Chenier
ತುಂಬಾ ದಿನಗಳ ಹಿಂದೆ ಬರೆದಿಟ್ಟುಕೊಂಡಿರುವ ಈ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಾ ರಾತ್ರಿಯಿಡೀ ಕೂತಿದ್ದೇನೆ. ಕವಿತೆ ಬರೆಯುವುದು ಇತ್ತೀಚೆಗೆ ಕಷ್ಟವಾಗತೊಡಗಿರುವುದರ ಕಾರಣವೇನಾದರೂ ಈ ಸಾಲುಗಳಲ್ಲಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ.
ಅದೇಕೋ ಗೊತ್ತಿಲ್ಲ, ಮುಂಚಿನಂತೆ ಕವಿತೆ ಬರೆಯುವುದು ಆಗುತ್ತಿಲ್ಲ. ಕವಿತೆ ನನ್ನ ಅತ್ಯಂತ ಇಷ್ಟದ ವಿಷಯ. ಅಷ್ಟೇ ಕಷ್ಟದ ಅಭಿವ್ಯಕ್ತಿಯೂ ಹೌದು. ಎಂಥ ನಿರಾಸೆಯ ನಡುವೆಯೂ ಗದ್ಯವನ್ನು ಒಂದಷ್ಟು ಚೆನ್ನಾಗಿ ಕಾಣುವಂತೆ ಬರೆದುಬಿಡಬಹುದು. ಆದರೆ, ಪದ್ಯದ ವಿಷಯದಲ್ಲಿ ಹಾಗಾಗದು. ಅದು ಒಲಿಯಬೇಕು. ಒಲಿಯುವವರೆಗೆ ಪ್ರಯತ್ನಿಸಬೇಕು. ಎಲ್ಲಿಯೂ ಹದ ತಪ್ಪಬಾರದು. ಒಂದೇ ಒಂದು ಅನಗತ್ಯ ಶಬ್ದ ಇಡೀ ಭಾವವನ್ನೇ ಹಾಳು ಮಾಡಿಬಿಡಬಹುದು. ಅಲ್ಲಿ ಅನುಭವ ಕೆಲಸಕ್ಕೆ ಬಾರದು.
ಹೀಗಾಗಿ, ಪ್ರತಿಯೊಂದು ಕವಿತೆಯೂ ಹೊಸ ಪ್ರಯತ್ನವೇ. ಥೇಟ್ ಪ್ರೀತಿಯನ್ನು ಒಲಿಸಿಕೊಂಡಂತೆ.
ಸಾಮಾನ್ಯವಾಗಿ ಗದ್ಯಕ್ಕೆ ನಿಲುಕದ ಭಾವನೆಗಳನ್ನು ಕವಿತೆ ಎತ್ತಿಕೊಡುತ್ತದೆ. ಇದನ್ನು ಗದ್ಯದಲ್ಲಿ ಇಷ್ಟು ಚೆನ್ನಾಗಿ, ಇಷ್ಟು ಕಡಿಮೆ ಶಬ್ದಗಳಲ್ಲಿ, ಇಷ್ಟು ಅರ್ಥಗರ್ಭಿತವಾಗಿ, ಮನಸ್ಸಿಗೆ ತಟ್ಟುವಂತೆ ಬರೆಯಲಾಗದು. ಎಷ್ಟೇ ಸಲ ಓದಿದರೂ ಮತ್ತೆ ಮತ್ತೆ ಓದುವ ಭಾವ ಮೂಡುವಂತೆ, ಓದಿದ ಪ್ರತಿ ಸಲವೂ ಹೊಸ ಅರ್ಥಗಳನ್ನು ಹುಟ್ಟುಹಾಕುವಂತೆ ಮಾಡಲಾಗದು. ಪದ್ಯದ ಸೊಗಸದು. ಅದು ಹಾಗಿದ್ದರೇ ಚೆನ್ನ.
ಹೀಗಾಗಿ, ಕವಿತೆ ಇತ್ತೀಚೆಗೆ ಕಷ್ಟವಾಗುತ್ತಿದೆ.
ಮನಸ್ಸಿನ ಏರಿಳಿತಗಳ ನಡುವೆ ಯಾವುದೋ ಭಾವವೊಂದು ಕಾರ್ಮುಗಿಲ ನಡುವೆ ಮಿಂಚಿ ಮರೆಯಾಗುವ ಬೆಳಕಿನಂತೆ ಥಟ್ಟನೇ ಹೊಳೆಯುತ್ತದೆ. ಮನಸ್ಸು ಅದನ್ನು ಮತ್ತೆ ಮತ್ತೆ ಕಾಣಲು ಹಂಬಲಿಸುವುದೇ ಕವಿತೆ ಕಟ್ಟುವ ಸಮಯ. ಬಂದರೆ ಅದು ಇಡಿಯಾಗಿ ಬಂದುಬಿಡುತ್ತದೆ. ಇಲ್ಲದಿದ್ದರೆ, ಏನೇ ಪ್ರಯತ್ನಿಸಿದರೂ ಚಿತ್ರವಾಗದು.
ನಿಜವಾದ ಫಜೀತಿ ಶುರುವಾಗುವುದೇ ಆಗ. ಶಬ್ದಗಳನ್ನು ಹೇಗೋ ಮಾಡಿ, ಆಕರ್ಷಕವಾಗಿ ಜೋಡಿಸಿಬಿಡಬಹುದು. ಆದರೆ, ಅದು ಕವಿತೆಯಾಗದು. ತಾನಾಗಿ ಉಕ್ಕದೇ ಒಲವಾಗದಲ್ಲ, ಹಾಗೆ.
ಹಾಗಂತ, ಅದನ್ನು ಅಷ್ಟಕ್ಕೇ ಕೈಬಿಡಲೂ ಆಗುವುದಿಲ್ಲ. ಮನಸ್ಸಿನಲ್ಲಿ ಅದೊಂಥರಾ ಗೀಳಾಗಿ ಕಾಡಲು ಶುರುವಾಗುತ್ತದೆ. ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತದೆ. ನಿತ್ಯದ ಕೆಲಸಗಳಿಗೆ ವಿಮುಖನನ್ನಾಗಿಸುತ್ತದೆ. ಪದೆ ಪದೆ ಕರೆಯುತ್ತದೆ. ಮತ್ತೆ ಮತ್ತೆ ಸೋಲಿಸುತ್ತದೆ. ಬೇರೆ ಏನನ್ನೂ ಬರೆಯದ ಮನಃಸ್ಥಿತಿಗೆ ತಂದೊಡ್ಡಿ ಮಂಕಾಗಿಸುತ್ತದೆ.
ನನ್ನ ಬಹುತೇಕ ನಿದ್ದೆಗೇಡಿ ರಾತ್ರಿಗಳಿಗೆ ಕಾರಣ ಇಂಥ ಎಟುಕದ ಕವಿತಾಭಾವ. ಎಷ್ಟೋ ಸಲ ರಾತ್ರಿಯಿಡೀ ಕೂತರೂ ಒಂದು ಭಾವವನ್ನು ತೀರಕ್ಕೆ ತಲುಪಿಸುವುಲ್ಲಿ ಸೋತಿದ್ದೇನೆ. ಮತ್ತೆ ಮತ್ತೆ ಪ್ರಯತ್ನಿಸಿ, ಸಾಧ್ಯವಾಗದೇ ಹತಾಶನಾಗಿದ್ದೇನೆ. ಸಮಾಧಾನವಾಗದೇ, ಅದೇ ಭಾವವನ್ನು ಗದ್ಯಕ್ಕೆ ಬದಲಿಸಿ ಸುಮ್ಮನಾಗಿದ್ದೇನೆ. ಓದಿದವರು ಏನೇ ಹೇಳಲಿ, ಎಷ್ಟೇ ಮೆಚ್ಚಲಿ, ಪದ್ಯವಾಗಬೇಕಿದ್ದ ಭಾವವೊಂದು ಗದ್ಯವಾಗಿದ್ದರ ಕೊರತೆ ಬರೆದ ನನಗೆ ಮಾತ್ರ ಗೊತ್ತು. ಅಂಥ ಗದ್ಯ ಬರಹವನ್ನು ಓದಿದಾಗೊಮ್ಮೆ, ಕೈಗೆ ಸಿಗದ ಪದ್ಯ ತುಂಟತನದಿಂದ ಕೆಣಕುತ್ತದೆ. ಮತ್ತೆ ಮತ್ತೆ ಕವಿತೆ ಬರೆಯಲು ಪ್ರೇರೇಪಿಸುತ್ತದೆ.
ಇವತ್ತೂ ಅಂಥದೇ ದುಃಸ್ಥಿತಿ.
ಮನಸ್ಸಿನ ಸುನೀತ ಭಾವವೊಂದು ಹಾಡಾಗುತ್ತಿಲ್ಲ ಎಂಬ ನೋವು. ರಾತ್ರಿಯಿಡೀ ಪ್ರಯತ್ನಿಸಿದರೂ ಅದು ದಕ್ಕುತ್ತಿಲ್ಲ. ಪದೆ ಪದೆ ಪ್ರಯತ್ನ ಕೈಬಿಟ್ಟು ಏನೇನೋ ಓದುತ್ತ ಕೂತರೂ, ಕಾಡುವ ಭಾವ ಹಾಡಾಗುತ್ತಿಲ್ಲ. ಏನೋ ಕೊರತೆ. ಯಾವುದೋ ವಿಷಾದ. ತಿಳಿಯಾಗದ ಹಳೆಯ ನೋವು. ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಂಡಂತೆ, ಎಷ್ಟೇ ಯತ್ನಿಸಿದರೂ ದಕ್ಕದೇ ಹೋದಂತೆ, ಏನೇನೋ ಭಾವಾತಿರೇಕಗಳು. ಆದರೆ, ಯಾವೊಂದು ಭಾವವೂ ಅರ್ಥಪೂರ್ಣ ಸಾಲುಗಳಾಗುತ್ತಿಲ್ಲ. ಇಡಿಯಾಗಿ ಒಡಮೂಡುತ್ತಿಲ್ಲ.
ಅಂದುಕೊಂಡಂತೆ ಮೂಡದ ಕವಿತೆ ಕಳೆದುಕೊಂಡ ಪ್ರೀತಿಯಂತೆ. ಎಷ್ಟೇ ಪ್ರಯತ್ನಿಸಿದರೂ ಸಿಗದೇ ನುಣುಚಿಕೊಳ್ಳುತ್ತದೆ. ಮತ್ತೆ ಮತ್ತೆ ಸುಳಿಯುತ್ತದೆ. ಮತ್ತೆ ಮತ್ತೆ ಕಾಡುತ್ತದೆ. ಕಣ್ಣೆದುರೇ ಇರುತ್ತದೆ, ಹಿಡಿಯಲಾಗದು. ಮತ್ತೆ ಮತ್ತೆ ಪ್ರಯತ್ನಿಸಿ ಸೋತಾಗ, ತಣ್ಣಗೇ ಕೆಣಕುತ್ತದೆ. ಹತಾಶನನ್ನಾಗಿಸುತ್ತದೆ.
ಹೀಗೆ ಸೋತು ಕೂತವನನ್ನು ಸೆಳೆದಿದ್ದು ಈ ಸಾಲು: Art just makes verses; only the heart is a poet.
ನಿಜ. ಎದೆಯೊಳಗೆ ಉಕ್ಕದಿದ್ದುದು ಕವಿತೆಯಾಗದು. ಮನಸ್ಸಿನೊಳಗೆ ಹೊಳೆದ ಮಿಂಚೊಂದು ಎದೆಯೊಳಗೆ ಅರಳಬೇಕು. ಬೆಳೆಯಬೇಕು. ಮೊಗ್ಗೊಂದು ಅರಳಿ ಹೂವಾದಂತೆ, ಕವಿತೆಯಾಗಬೇಕು. ಥೇಟ್ ಪ್ರೀತಿಯಂತೆ. ತಾನಾಗೇ ಉಕ್ಕದೇ ಕವಿತೆಯಾಗದು. ಅದಾಗೇ ಒಲಿಯದೇ ಪ್ರೀತಿಯಾಗದು.
ಇವತ್ತು ಅದು ನನಗೆ ಮತ್ತೆ ಸಾಧ್ಯವಾಗಲಿಲ್ಲ. ಇತ್ತೀಚೆಗೆ ಅದು ಏಕೋ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಗದ್ಯದ ಮೊರೆ ಹೋಗುತ್ತಿದ್ದೇನೆ.
ಕ್ಷಮಿಸು ಕವಿತಾ ದೇವತೆಯೇ!
- ಚಾಮರಾಜ ಸವಡಿ
4 comments:
ಕವನ ಹುಟ್ಟುವ ನೋವನ್ನೂ ಅದೆಷ್ಟು ಸೊಗಸಾಗಿ ವಿವರಿಸಿದ್ದೀರಿ ಸವಡಿಯವರೇ. ನನ್ನದೇ ಅನುಭವಕ್ಕೆ ನುಡಿ ಕೊಟ್ಟಿದ್ದೀರಿ
ಎಲ್ಲರ ಅನುಭವವೂ ಒಂದೇ ಅಲ್ಲವೆ ಮಂಜುನಾಥ್ ಅವರೇ :)
ನನಿಗೂ ಹಾಗೇ ಅನಿಸುತ್ತಿದೆ ಇತ್ತೀಚೆಗೆ.. ಎಲ್ಲಿ ಹೋಯಿತು ಆ ಬರವಣಿಗೆ! ಬರೆಯಬೇಕೆಂದು ಕೂತರೆ ಅಕ್ಷರಗಳೇ ಮರೆತುಹೋದಂತೆ.
ಎಲ್ಲಾ ಬರೆಯೋಣ ಅಂದ್ರೆ ಅವೆಲ್ಲ ಪರ್ಸನಲ್ ಡೈರಿಗಷ್ಟೇ ಮಿಸಲಾಗಿರೋ ಬರಹಗಳು!
" ಪದೆ ಪದೆ ಪ್ರಯತ್ನ ಕೈಬಿಟ್ಟು ಏನೇನೋ ಓದುತ್ತ ಕೂತರೂ, ಕಾಡುವ ಭಾವ ಹಾಡಾಗುತ್ತಿಲ್ಲ. ಏನೋ ಕೊರತೆ. ಯಾವುದೋ ವಿಷಾದ. "
ಕವನ ಬರೆಯಲು ಕೂತು ಗೀಚಿ ಗೀಚಿ ಪುಸ್ತಕವೇ ಮುಗಿದಂತೆ!
ಬರೆಯೋರ ಬವಣೆ ಇದು ಅನಿಸುತ್ತದೆ ದಿವ್ಯಾ. ಹಾಗೆ ಹುಡುಕುತ್ತಲೇ ಹೊಸ ಹೊಸ ಸಾಧ್ಯತೆಗಳು ಕಾಣಿಸುತ್ತ ಹೋಗುತ್ತವೆ. ಪದ್ಯ ಬರೆಯಲು ಆಗದೇ ಗದ್ಯ ಬರೆದಂತೆ, ಏನೋ ಹುಡುಕಲು ಹೋಗಿ ಇನ್ನೇನೋ ದೊರೆತಂತೆ.
ಹಾಗಂತ ಪದೆ ಪದೆ ಪ್ರಯತ್ನಿಸುವುದನ್ನು ಮಾತ್ರ ಬಿಡಬಾರದು. ಒಲಿಯುವುದೇನುಂಟೊಮ್ಮೆ, ಒಲಿವ ಕಾಲಕೆ ಒಲಿವುದು...
Post a Comment