ಹೋಳಿ ರಂಗಿನ ಸಂತೆಯಲ್ಲೊಂದು ಒಂಟಿತನ

21 Mar 2011

ಯಾವತ್ತೂ ಹಿಂದೆ ನೋಡಬೇಡ. ಏಕೆಂದರೆ, ಅದು ಸದಾ ನಿನ್ನ ಜೊತೆಗೇ ಇರುತ್ತದೆ. ಹಿಂದಿನದನ್ನು ಬೇಗ ಮರೆ, ಬೇಗ ಜೀರ್ಣಿಸಿಕೋ. ಬೇಗ ವಿಸರ್ಜಿಸಿಬಿಡು. ಏನಿದ್ದರೂ ಮುಂದೆ ನೋಡುತ್ತಾ ಹೋಗು. ಉದ್ಧಾರವಾಗುತ್ತೀ’-
ಹಾಗಂತ ತುಂಬ ವರ್ಷಗಳ ಹಿಂದೆ ಒಬ್ಬ ಸಾಧು ಮಹಾಶಯ ನನಗೆ ಹೇಳಿದ್ದ.
ನಾನಾಗ ರೈಲಿನಲ್ಲಿ ಕೂತು ಗುಜರಾತ್‌ನ ಭುಜ್‌ನಿಂದ ಕೊಪ್ಪಳದ ನನ್ನೂರು ಅಳವಂಡಿಯ ಕಡೆ ಬರುತ್ತಿದ್ದೆ. ಮುಂಬೈನಿಂದ ಮಧ್ಯಾಹ್ನ ಹೊರಡುವ ದಾದರ್ ಎಕ್ಸ್‌ಪ್ರೆಸ್‌ ಪುಣೆ ದಾಟಿದ ನಂತರ ಆತ ಸಿಕ್ಕಿದ್ದ. ಮುಂದೆ ರಾತ್ರಿ ತಡವಾಗಿ ನನ್ನೊಂದಿಗೆ ಸೊಲ್ಲಾಪುರದಲ್ಲಿ ಇಳಿದಿದ್ದ. ಅಲ್ಲಿಂದ ನಾನು ನಸುಕಿನ ಜಾವ ಗದಗ್‌ ಕಡೆ ಹೊರಡುವ ರೈಲನ್ನು ಹಿಡಿಯಬೇಕಿತ್ತು. ಅದು ನಸುಕಿನ ನಾಲ್ಕು ಗಂಟೆಗೆ ಹೊರಡುತ್ತಿತ್ತು. ಬ್ರಾಡ್‌ಗೇಜ್‌ ವಿಭಾಗ ದಾಟಿ, ಮೀಟರ್‌ ಗೇಜ್‌ ಸ್ಟೇಶನ್‌ ಕಡೆ ಬಂದು, ರೈಲು ಬಂದು ನಿಲ್ಲುವ ಪ್ಲಾಟ್‌ಫಾರಂ ತಲುಪಿದರೆ ಮುಕ್ಕಾಲು ಕೆಲಸವಾದ ಹಾಗೆ.
ಅದೇಕೋ ಗೊತ್ತಿಲ್ಲ, ಆತನೂ ನಂಜೊತೆ ಮೀಟರ್‌ಗೇಜ್‌ ನಿಲ್ದಾಣದ ಕಡೆ ಹೆಜ್ಜೆ ಹಾಕಿದ. ಹಿಂದಿಯಲ್ಲೇ ಮಾತಾಡುತ್ತ, ಒಮ್ಮೊಮ್ಮೆ ತಾನೊಬ್ಬನೇ ಮಾತಾಡಿಕೊಳ್ಳುತ್ತಿದ್ದಾನೋ ಎಂಬಂತೆ ಗೊಣಗಿಕೊಳ್ಳುತ್ತ, ಪಕ್ಕದಲ್ಲಿ ಬರುತ್ತಿದ್ದ ನನ್ನತ್ತ ತಿರುಗಿ ಕೂಡ ನೋಡದೇ ನೆಟ್ಟಗೇ ಎದುರಿಗೇ ದೃಷ್ಟಿ ನೆಟ್ಟುಕೊಂಡು, ನಿದ್ದೆಯಲ್ಲೆದ್ದು ಹೊರಟವನಂತೆ ಬರುತ್ತಿದ್ದ.
’ಯಾವತ್ತೂ ಹಿಂದೆ ನೋಡಬೇಡ’ ಎಂದು ಆತ ಹೇಳುತ್ತಿದ್ದಾಗ, ಪಕ್ಕಕ್ಕೆ ತಿರುಗಿ ಆತನ ಮುಖ ನೋಡಿದೆ. ಅದು ನಿರ್ವಿಕಾರವಾಗಿತ್ತು. ಶಾಂತವಾಗಿತ್ತು.
ನನ್ನ ಸೂಟ್‌ಕೇಸ್‌ ವಿಪರೀತ ಭಾರ. ಆಗ ನಾನು ಬಿ.ಎ. ಪರೀಕ್ಷೆಗೆ ಬಾಹ್ಯ ವಿದ್ಯಾರ್ಥಿಯಾಗಿದ್ದೆ. ಹೀಗಾಗಿ, ಸೂಟ್‌ಕೇಸ್‌ ತುಂಬ ಪುಸ್ತಕಗಳು, ಬಟ್ಟೆಬರೆಗಳು, ಅಪರೂಪಕ್ಕೊಮ್ಮೆ ಊರಿಗೆ ಹೋಗುತ್ತಿದ್ದೆನಾದ್ದರಿಂದ ಆಸೆಪಟ್ಟು ಕೊಂಡ ವಸ್ತುಗಳೆಲ್ಲ ಸೇರಿಕೊಂಡಿದ್ದವು. ಇನ್ನೊಂದು ಶೋಲ್ಡರ್‌ ಬ್ಯಾಗ್‌ನಲ್ಲಿ ನನ್ನ ನಿತ್ಯಬಳಕೆಯ ವಸ್ತುಗಳ ಜೊತೆಗೆ, ಕುರುಕಲು ತಿಂಡಿಗಳು, ನೀರಿನ ಬಾಟಲ್‌ ಹಾಗೂ ಒಂದು ಕಾದಂಬರಿ ಇರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಸೂಟ್‌ಕೇಸನ್ನೊಮ್ಮೆ ಕೈ ಬದಲಾಯಿಸುತ್ತ, ಏದುಸಿರು ಬಿಡುತ್ತ ಆತನೊಂದಿಗೆ ಸಮಕ್ಕೆ ಹೆಜ್ಜೆ ಹಾಕಲು ಯತ್ನಿಸುತ್ತಿದ್ದಾಗ, ಆತನ ಮಾತು ಏಕೋ ಗಮನ ಸೆಳೆದಿದ್ದರಿಂದ, ಛಕ್ಕನೇ ಹೊರಳಿ ನೋಡಿದ್ದೆ.
ಸಾಧುವಿನ ಮುಖ ಶಾಂತವಾಗಿತ್ತು. ಅರಿತು ಮಾತನಾಡುತ್ತಿದ್ದ ಮುಖಭಾವ.
ನನ್ನ ಹಿಂದಿ ಅಷ್ಟಕ್ಕಷ್ಟೇ. ಏರ್‌ಫೋರ್ಸ್‌‌ನಲ್ಲಿದ್ದರೂ ಹಿಂದಿ ಕಲಿಯಲು ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಮೊದಲೇ ಅಂತರ್ಮುಖಿ. ನನ್ನ ಪಾಡಿಗೆ ನಾನು ಕೆಲಸದಲ್ಲಿ, ಪುಸ್ತಕಗಳಲ್ಲಿ, ಖಿನ್ನತೆಯಲ್ಲಿ, ಒಂಟಿತನದಲ್ಲಿ ಮುಳುಗಿಹೋಗಿರುತ್ತಿದ್ದೆ. ಗುಂಪಿನಲ್ಲಿದ್ದರೆ, ಪದೆ ಪದೆ ಬಳಸುತ್ತಿದ್ದರೆ ಭಾಷೆ ಕಲಿಕೆ ಸುಲಭವಾದೀತು. ಆಗಿನ ನನ್ನ ಮನಃಸ್ಥಿತಿಯಲ್ಲಿ ಅದು ಸಾಧ್ಯವಿಲ್ಲದ್ದರಿಂದ, ಹಿಂದಿ ಚೆನ್ನಾಗಿ ಅರ್ಥವಾಗುತ್ತಿದ್ದರೂ, ಸಂಭಾಷಣೆ ಕಷ್ಟವಾಗುತ್ತಿತ್ತು.
ಹೀಗಾಗಿ, ಸಾಧುವಿನ ಮಾತನ್ನು ಗಮನ ಕೊಟ್ಟು ಕೇಳುತ್ತಾ ಹೋದೆ.
’ಎಂದಿಗೂ ಹಿಂದೆ ನೋಡಬೇಡ. ಅದು ನಿನ್ನನ್ನು ಹಿಂದೆಯೇ ಉಳಿಸುತ್ತದೆ. ಹಾಗೆ ಪದೆ ಪದೆ ಹಿಂದೆ ನೋಡುವ ಅವಶ್ಯಕತೆಯಾದರೂ ಏನಿರುತ್ತದೆ? ಹಿಂದೆ ಏನೇನಾಗಿತ್ತು ಎಂಬುದು ನಿನಗಾಗಲೇ ಗೊತ್ತಿರುತ್ತದಲ್ಲ? ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅವಶ್ಯಕತೆಯೇ ಇರದು. ನಿನ್ನ ಇವತ್ತಿನ ಪ್ರತಿ ಹೆಜ್ಜೆಯಲ್ಲಿಯೂ ಅದರ ನೆರಳು ಇದ್ದೇ ಇರುತ್ತದೆ. ಬೇಕಾಗಿದ್ದನ್ನು ಮಾತ್ರ ಬಳಸಿಕೋ, ಮುಂದೆ ನೋಡು. ಮುಂದಡಿಯಿಡು, ಉದ್ಧಾರವಾಗುತ್ತೀ...’-
ಆತ ಹೇಳುತ್ತಲೇ ಇದ್ದ.
ನನ್ನ ಸೂಟ್‌ಕೇಸ್‌ ತೀರಾ ಭಾರವೆನಿಸತೊಡಗಿತ್ತು. ಎರಡೂ ಕೈಗಳೂ ಸೋತುಹೋಗಿದ್ದವು. ರಿಸರ್ವೇಶನ್‌ ಇಲ್ಲದೇ ಜನರಲ್‌ ಕಂಪಾರ್ಟ್‌‌ಮೆಂಟ್‌ನಲ್ಲಿ ಸೂಟ್‌ಕೇಸ್‌ ಮೇಲೆಯೇ ಕೂತು ರಾತ್ರಿಯಿಡೀ ಪ್ರಯಾಣ ಮಾಡಿ ಮುಂಬೈ ತಲುಪಿದ್ದೆ. ನಿದ್ದೆ ಮಾಡುವ ಪ್ರಶ್ನೆಯೇ ಇಲ್ಲ. ಮುಂಬೈಯನ್ನು ಬೆಳಿಗ್ಗೆ ೯ಕ್ಕೆ ತಲುಪಿದ್ದರೂ, ಮಧ್ಯಾಹ್ನದವರೆಗೆ ನಿದ್ದೆ ಮಾಡಲು ಅವಕಾಶವಾಗುತ್ತಿದ್ದಿಲ್ಲ. ಅಲ್ಲಿಂದ ಸೊಲ್ಲಾಪುರಕ್ಕೆ ರಾತ್ರಿ ೧೨ರಿಂದ ೧ ಗಂಟೆ ಸುಮಾರು ತಲುಪುತ್ತಿದ್ದರಿಂದ, ನಿದ್ದೆ ಹೋದರೆ ಊರು ಬಂದಿದ್ದು ಗೊತ್ತಾಗಲಿಕ್ಕಿಲ್ಲ ಎಂಬ ಅಳುಕಿನಿಂದ ಬರೀ ತೂಕಡಿಕೆಯಲ್ಲೇ ಕಳೆದಿರುತ್ತಿದ್ದೆ. ಎರಡು ದಿನಗಳ ನಿದ್ದೆಗೇಡಿತನದಿಂದಾಗಿ, ಮೈಮನಸ್ಸುಗಳು ಸೋತುಹೋಗಿದ್ದವು.
ಹೀಗಾಗಿ, ಯಮಭಾರದ ಸೂಟ್‌ಕೇಸ್‌ ಹೊತ್ತು ಸಾಗಲಾಗದೇ ಏದುಸಿರು ಬಿಡುತ್ತ ನಡುವೇ ನಿಂತುಬಿಟ್ಟೆ.
ಜೊತೆಗೇ ಹೆಜ್ಜೆ ಹಾಕುತ್ತಿದ್ದ ಸಾಧು, ಒಂದೆರಡು ಹೆಜ್ಜೆ ಮುಂದೆ ಹೋದವ ತಿರುಗಿ ನೋಡಿದ.
ಅದೇ ಮೊದಲ ಬಾರಿ ಆತನ ಕಣ್ಣುಗಳು ನನ್ನನ್ನು ಸಂಧಿಸಿದ್ದು.
ಅಂಥ ತೇಜಸ್ವಿ ಕಣ್ಣುಗಳನ್ನು ಮತ್ತೆ ನಾನು ನೋಡಿಲ್ಲ. ನನ್ನ ಆಯಾಸವನ್ನು ಮರೆಮಾಚುವಂಥ ಆಯಸ್ಕಾಂತೀಯ ಶಕ್ತಿ ಅವುಗಳಲ್ಲಿತ್ತು. ನಾನು ಎವೆಯಿಕ್ಕದೇ ಆತನ ಕಣ್ಣುಗಳನ್ನೇ ನೋಡುತ್ತ ನಿಂತುಬಿಟ್ಟೆ.
’ನಾ ತಗೊಂಬರ್ತೀನಿ ಕೊಡು’ ಎಂದು ಸಾಧು ನನ್ನ ಸೂಟ್‌ಕೇಸ್‌ ಹಿಡಿದುಕೊಂಡ. ನನಗೆ ಅಳುಕು. ಮೊದಲೇ ಸುಸ್ತಾಗಿದ್ದೇನೆ. ಈತ ಸೂಟ್‌ಕೇಸ್‌ ಹೊತ್ತುಕೊಂಡು ಓಡಿ ಹೋಗುವುದಿರಲಿ, ದಾಪುಗಾಲಿಕ್ಕುತ್ತಾ ನಡೆದರೂ ಆತನನ್ನು ಹಿಂಬಾಲಿಸಲು ಸಾಧ್ಯವಿಲ್ಲ. ಅಪರಾತ್ರಿ. ನಿರ್ಜನ ಫ್ಲಾಟ್‌ಫಾರಂ ಬೇರೆ. ನಸುಕಿನ ನಾಲ್ಕು ಗಂಟೆಗೆ ಮೊದಲು ಮೀಟರ್‌ಗೇಜ್‌ ವಿಭಾಗದಲ್ಲಿ ಯಾವ ರೈಲೂ ಬರುವುದಿಲ್ಲ. ಪ್ರಯಾಣಿಕರೂ ಅತಿ ವಿರಳ.
ಹೀಗಾಗಿ, ಬೇಡ ಎಂದು ಮತ್ತೆ ಸೂಟ್‌ಕೇಸ್‌ ಎತ್ತಿಕೊಳ್ಳಲು ಮುಂದಾದೆ.
ಈ ಸಲ ಸಾಧು ಮತ್ತೆ ನನ್ನ ಮುಖ ನೋಡಿದ. ಅಪರೂಪವೆನಿಸುವ ಮುಗುಳ್ನಗು ಆತನ ಮುಖದಲ್ಲಿ ಅರಳಿತು. ನನಗಿಂತ ಹತ್ತು ವರ್ಷ ದೊಡ್ಡವನಿರಬಹುದಷ್ಟೇ. ಆದರೆ, ನನ್ನ ವಯಸ್ಸಿನವನಂತೆ ಕಾಣುತ್ತಿದ್ದ. ಈಗ ಕಣ್ಣುಗಳ ಜೊತೆಗೆ, ಆತನ ಮುಗುಳ್ನಗು ಕೂಡ ನನ್ನನ್ನು ಗಾಢವಾಗಿ ಸೆಳೆಯಿತು.  ’ಚಿಂತೆ ಬೇಡ, ನಾನೇನೂ ನಿನ್ನ ಸೂಟ್‌ಕೇಸ್‌ ಕದ್ದೊಯ್ಯುವುದಿಲ್ಲ’ ಎನ್ನುತ್ತ ಸೂಟ್‌ಕೇಸ್‌ ಎತ್ತಿಕೊಂಡು ಹೊರಟ.
ನಾನು ಹಗುರನಾಗಿ ಆತನ ಸಮಕ್ಕೆ ಹೆಜ್ಜೆ ಹಾಕುತ್ತ ಹೊರಟೆ. ಆತ ಮತ್ತೆ ಮಾತು ಶುರು ಮಾಡಿದ. ಬದುಕಿನ ವಿಚಿತ್ರಗಳ ಬಗ್ಗೆ ಮಾತನಾಡಿದ. ಭೂತ, ವರ್ತಮಾನ ಹಾಗೂ ಭವಿಷ್ಯತ್‌ಕಾಲಗಳ ವೈಚಿತ್ರಗಳ ಬಗ್ಗೆ ಹೇಳಿದ. ಬದುಕನ್ನು ಎದುರಿಸುವ ರೀತಿಯ ಬಗ್ಗೆ ಹೇಳಿದ. ಅಪ್ಪಿತಪ್ಪಿಯೂ ದೇವರ ಬಗ್ಗೆ, ಆಚರಣೆಗಳ ಬಗ್ಗೆ, ಪವಾಡಗಳ ಬಗ್ಗೆ ಮಾತನಾಡಲಿಲ್ಲ.
ನಮ್ಮ ರೈಲು ನಿಲ್ಲುವ ಸ್ಥಳಕ್ಕೆ ಹತ್ತಿರವಾಗಿ, ಸಿಮೆಂಟ್‌ ಸೀಟೊಂದರಲ್ಲಿ ಕೂತ ನಂತರವಷ್ಟೇ ಆತ ಸೂಟ್‌ಕೇಸ್‌ ಇಳಿಸಿದ್ದು. ನಡುವೆ ಎಲ್ಲಿಯೂ ಕೈ ಬದಲಿಸಲಿಲ್ಲ. ಏದುಸಿರು ಬಿಡಲಿಲ್ಲ. ಸಿಮೆಂಟ್‌ ಸೀಟ್‌ನ ಮೇಲೆ ಕಾಲು ಮಡಚಿಕೊಂಡು ಚಕ್ಕಳಮಕ್ಕಳ ಹಾಕಿ ಕೂತ ಆತ ಕತ್ತಲಲ್ಲಿಯೂ ಪಳಪಳ ಹೊಳೆಯುತ್ತಿದ್ದ ಹಳಿಗಳನ್ನೇ ದಿಟ್ಟಿಸುತ್ತ ಮೌನಿಯಾದ.
ಒಂದೈದು ನಿಮಿಷ ನಾನೂ ಮಾತಾಡಲಿಲ್ಲ.
ಆತ ಹೇಳಿದ ವಿಷಯಗಳ ಬಗ್ಗೆ ಯೋಚಿಸುತ್ತಿದ್ದೆ. ಮರುದಿನ ಸಂಜೆ ಊರು ತಲುಪುವ ಸಂಭ್ರಮವಾಗಲಿ, ಒಂದು ವಾರದ ನಂತರ ಬರೆಯಬೇಕಾಗಿದ್ದ ಡಿಗ್ರಿ ಪರೀಕ್ಷೆಯ ಬಗ್ಗೆಯಾಗಲಿ ನಾನು ಯೋಚಿಸುತ್ತಿದ್ದಿಲ್ಲ. ಸಾಧು ಹೇಳಿದ ವಿಷಯಗಳು ಮನದಲ್ಲಿ ಸುತ್ತುಹಾಕುತ್ತಿದ್ದವು. ಗತಕಾಲದ ಬಗ್ಗೆ ಯೋಚಿಸದೇ ಇರಲು ನನಗೆ ಸಾಧ್ಯವೇ ಇರಲಿಲ್ಲ.
ಮೌನ ಮುರಿದ ಸಾಧು, ಇದ್ದಕ್ಕಿದ್ದಂತೆ ನನ್ನತ್ತ ತಿರುಗಿ ಮತ್ತೆ ಮುಗುಳ್ನಕ್ಕವ, ನಿನ್ನನ್ನು ನೋಡಿದರೆ, ನನ್ನ ಗತಕಾಲ ನೆನಪಾಗುತ್ತದೆ ಎಂದುಬಿಟ್ಟ.
ನನಗೆ ಅಚ್ಚರಿಯಾಯಿತು.
ಆತ ಮತ್ತೆ ರೈಲು ಹಳಿಗಳನ್ನೇ ದಿಟ್ಟಿಸುತ್ತ ಮಾತು ಮುಂದುವರಿಸಿದ. ’ನಿನ್ನ ವಯಸ್ಸಿನಲ್ಲಿದ್ದಾಗ ನನ್ನಲ್ಲೂ ಗೊಂದಲಗಳಿದ್ದವು. ಯಾರಿಗೂ ಹೇಳಿಕೊಳ್ಳಲಾಗದಂಥ ಭಾವನೆಗಳಿದ್ದವು. ಅವು ನನ್ನನ್ನು ಹಣ್ಣಾಗಿಸುತ್ತಿದ್ದವು. ಓರಗೆಯವರ ಜೊತೆಗೆ ಬೆರೆಯದಂತೆ ಮಾಡಿದ್ದವು. ನನ್ನ ಸುತ್ತಲೂ ಓಡುತ್ತಿದ್ದ ಸಮಾಜಕ್ಕೆ ನಾನು ಹೊಂದಿಕೊಳ್ಳುತ್ತಿದ್ದಿಲ್ಲ. ಅವು ನನ್ನನ್ನು ಹೆದರಿಸುತ್ತಿದ್ದವು. ನಾನು ಮತ್ತೆ ಮತ್ತೆ ನನ್ನ ಒಂಟಿತನದಲ್ಲಿ ಮುಳುಗಿಹೋಗುತ್ತಿದ್ದೆ. ಅಸಹಾಯಕನಾಗುತ್ತಿದ್ದೆ. ಎಲ್ಲಿಯವರೆಗೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವಷ್ಟು’-
ಒಂದರೆಕ್ಷಣ ಮಾತು ನಿಲ್ಲಿಸಿದ ಆತ ಮತ್ತೆ ಮುಂದುವರಿಸಿದ.
’ಯಾವುದೇ ಆತ್ಮಹತ್ಯೆಯೂ ಮೂಲ ಸಮಸ್ಯೆಯನ್ನು ನಿವಾರಿಸುವುದಿಲ್ಲ. ಒಂದು ಹಂತದಲ್ಲಿ ನನ್ನ ಬಗ್ಗೆ ನನಗೇ ಅಸಹ್ಯ ಶುರುವಾಯ್ತು. ಹಳೆಯದನ್ನು ಕಳಚಿಹಾಕುವ ತುಡಿತ ಅದು. ಗತಕಾಲ ಸ್ಮರಿಸುತ್ತ ಕೂತಿದ್ದು ಸಾಕು, ಇದೆಲ್ಲ ವ್ಯರ್ಥ. ಬೇರೆ ದಾರಿ ಹಿಡಿಯಬೇಕು. ಹಳೆಯ ಬುನಾದಿಯ ಮೇಲೆ ಹೊಸದನ್ನು ಕಟ್ಟಬೇಕು ಎಂಬ ಹುಮ್ಮಸ್ಸು ಉಕ್ಕಿತು. ಮೊದಲಿನಿಂದಲೂ ಒಂಟಿತನದ ವಿಚಿತ್ರ ಆಕರ್ಷಣೆ. ಈ ಬದುಕಿನ ಜಂಜಡ ಬಿಟ್ಟು ಎಲ್ಲಿಯಾದರೂ ದೂರ ಹೋಗಿ ಇರಬೇಕೆಂಬ ತುಡಿತ ಇತ್ತಲ್ಲ. ಹಾಗೇ ಮಾಡಿದರಾಯ್ತು ಅಂತ ಮನೆ ಬಿಟ್ಟು ಹೋಗಿಬಿಟ್ಟೆ. ಹತ್ತು ವರ್ಷಗಳ ಕಾಲ ಊರೂರು ಅಲೆದೆ. ಹಿಮಾಲಯದವರೆಗೂ ಹೋದೆ. ಬದುಕಿನ ಹಲವಾರು ಮಗ್ಗುಲಗಳನ್ನು ನೋಡಿದೆ. ಕಂಡಿದ್ದನ್ನೆಲ್ಲ ಒರೆಗೆ ಹಚ್ಚುತ್ತ ಹೊಸದನ್ನು ಕಂಡುಕೊಳ್ಳುತ್ತ ಅಲೆದಾಡಿದೆ. ಇಷ್ಟೆಲ್ಲ ಅಲೆದಾಟದ ನಂತರ ಹುಡುಕುತ್ತಿದ್ದ ದಾರಿ ಸಿಕ್ಕಿದೆ ಅಂತ ಅನಿಸಿತು. ನನ್ನ ಗೊಂದಲಗಳು ನಿವಾರಣೆಯಾದವು ಅಂತ ಅನಿಸಿತು. ಸತ್ಯ ಒಬ್ಬೊಬ್ಬರಿಗೆ ಒಂದೊಂದು ಥರ ಕಾಣುತ್ತದೆ. ಅದನ್ನು ಅವರವರೇ ಕಂಡುಕೊಳ್ಳಬೇಕು. ಈಗ ಊರಿಗೆ ವಾಪಸ್‌ ಹೊರಟಿದ್ದೇನೆ. ನಿನ್ನನ್ನು ನೋಡಿದಾಗ ನನಗೆ ನೆನಪಾಗಿದ್ದು, ಹಿಂದಿನ ನಾನು. ಅದಕ್ಕೇ ಇದನ್ನೆಲ್ಲ ಹೇಳಿದೆ. ಹಿಂದೆ ನೋಡುತ್ತ ಕೂಡಬೇಡ. ಮುಂದೆ ನೋಡುವುದನ್ನು ಬೆಳೆಸಿಕೋ. ದಾರಿ ಅಪರಿಚಿತ ಅನಿಸಬಹುದು. ಗೊಂದಲ ಕಾಡಬಹುದು. ಆದರೆ, ಗೊಂದಲದ ಮಧ್ಯೆಯೇ ಹೋಗುತ್ತಿದ್ದರೆ ದಾರಿ ತಿಳಿಯಾಗುತ್ತದೆ. ಅಷ್ಟೇ’-
ಆತ ಮಾತು ನಿಲ್ಲಿಸಿದ.
ನಾನು ಸುಮ್ಮನೇ ಕೂತಿದ್ದೆ.
ಸೊಲ್ಲಾಪುರದ ಮೀಟರ್‌ಗೇಜ್‌ ವಿಭಾಗ ನಿರ್ಜನವಾಗಿತ್ತು. ನನ್ನ ನಿದ್ದೆ ಹಾರಿಹೋಗಿತ್ತು. ಏನು ಹೇಳಬೇಕೆಂಬುದೂ ತೋಚಲಿಲ್ಲ. ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನೇ ಕೂತಿದ್ದೆವು.
ಆತ ನಿಧಾನವಾಗಿ ತೂಕಡಿಸತೊಡಗಿದ. ನನಗೆ ಮಾತ್ರ ನಿದ್ದೆ ಬರಲಿಲ್ಲ.
ರಾತ್ರಿ ಎರಡು ಗಂಟೆಯ ನಂತರ ಜನ ಒಬ್ಬೊಬ್ಬರಾಗಿ ಬರತೊಡಗಿದರು. ಕನ್ನಡ ಭಾಷೆ ಕಿವಿಗೆ ಬೀಳತೊಡಗಿತು. ಸಾಧು ಮಹಾಶಯ ಇನ್ನೂ ನಿದ್ದೆಯಲ್ಲಿದ್ದ. ನಮ್ಮ ಸುತ್ತಮುತ್ತಲೂ ಜನ ತುಂಬಿಕೊಂಡರು. ಪ್ರಯಾಣದ ಕೊನೇ ಹಂತದ ಗಡಿಬಿಡಿಯ ಸದ್ದು ತುಂಬಿಕೊಂಡಿತು.
ಮೂರೂ ಮುಕ್ಕಾಲಿನ ಹೊತ್ತು ರೈಲು ಬಂತು. ಆ ಸದ್ದಿಗೆ ಕಣ್ಬಿಟ್ಟ ಸಾಧು, ಮುಖ ಉಜ್ಜಿಕೊಂಡು ಏನೇನೋ ಮಣಮಣ ಮಂತ್ರ ಹೇಳಿಕೊಂಡು ಮುಖ ಒರೆಸಿಕೊಂಡ. ರೈಲು ನಿಲ್ಲುತ್ತಲೇ ಪ್ರಯಾಣಿಕರು ನುಗ್ಗಿದರು. ಮತ್ತೆ ಸಿಗೋಣ ಎನ್ನುತ್ತ ಆ ಸಾಧು ಯಾವುದೋ ಒಂದು ಡಬ್ಬ ಏರಿ ಮರೆಯಾದ.
ನಾನೂ ರೈಲೇರಿದೆ. ಕರ್ನಾಟಕದ ಗಡಿ ಹತ್ತಿರ ಬರುವವರೆಗೆ ಸಣ್ಣಸಣ್ಣ ನಿಲ್ದಾಣಗಳಲ್ಲಿ ರೈಲು ನಿಲ್ಲುವುದರಿಂದ, ಸೂಟ್‌ಕೇಸ್‌ಗೆ ಸರಪಳಿ ಸೇರಿಸಿ ಭದ್ರವಾಗಿ ಕೀಲಿ ಹಾಕಿದೆ. ಕಿಟಕಿ ಹತ್ತಿರ ಕೂತು ಕಣ್ಮುಚ್ಚಿದೆ. ಮನಸ್ಸಿನಲ್ಲಿ ಸಾಧು ಹೇಳಿದ್ದ ಮಾತುಗಳದೇ ರಿಂಗಣ. ಆ ಸಾಧು ಮತ್ತೆ ಕಾಣಿಸಿಯಾನೇ ಎಂಬ ಮೌನ ಹುಡುಕಾಟ.
ಇದೆಲ್ಲ ನಡೆದುಹೋಗಿ ತುಂಬ ವರ್ಷಗಳಾಗಿವೆ. ಭೂತಕಾಲ ಮರೆಯುವುದು ನನಗೆ ಈಗಲೂ ಕಷ್ಟಕರ. ಆದರೆ, ಗತಕಾಲ ತೀವ್ರವಾಗಿ ಕಾಡಿದಾಗೆಲ್ಲ, ಸೊಲ್ಲಾಪುರದಲ್ಲಿ ಭೇಟಿಯಾದ ಆ ಸಾಧುವಿನ ಮಾತುಗಳು ನೆನಪಾಗುತ್ತವೆ. ಎಷ್ಟೇ ಕಷ್ಟದ್ದಿರಲಿ, ಚೆಂದದ್ದಿರಲಿ, ಗತಕಾಲದ ಸ್ಮರಣೆಯನ್ನು ಹಿಂದಕ್ಕಿಟ್ಟೇ ಮುಂದೆ ಹೋಗಬೇಕು. ಅದೇ ಜೀವನ.
ಇವತ್ತು ಹೋಳಿ ಹಬ್ಬ. ಭಾನುವಾರ ಬೇರೆ ಬಂದಿದ್ದರಿಂದ, ಮಿತ್ರರು ಹಾಗೂ ಅವರ ಕುಟುಂಬದವರ ಜೊತೆ ಹೋಳಿ ಆಚರಿಸಿದೆವು. ಅದೇಕೋ ಗೊತ್ತಿಲ್ಲ, ನನಗೆ ಆ ಸಡಗರದಲ್ಲಿ ಮನಃಪೂರ್ವಕ ಪಾಲ್ಗೊಳ್ಳಲು ಆಗಲಿಲ್ಲ. ಗತಕಾಲದ ಕೆಲವು ಘಟನೆಗಳು ಕೊರೆಯುತ್ತಿದ್ದವು. ಅವನ್ನು ಮರೆಯಲು ದಿನಾ ಯತ್ನಿಸುತ್ತ, ಸೋಲುತ್ತ, ಹತಾಶನಾಗುತ್ತ ಗೊಂದಲಗೊಂಡಿದ್ದೆ. ಹೀಗಾಗಿ ಸಂತೆಯಲ್ಲಿ ಒಂಟಿಯಾದಂತೆ, ಒಬ್ಬನೇ ಆಗಿಬಿಟ್ಟಿದ್ದೆ. ಸೊಲ್ಲಾಪುರದಲ್ಲಿ ಭೇಟಿಯಾದ ಸಾಧು ಮತ್ತೆ ಮತ್ತೆ ನೆನಪಾಗುತ್ತಿದ್ದ.
ನಿಜ. ಸಂತೆಯಲ್ಲಿ ಒಂಟಿಯಾಗಬಾರದು. ಆದರೂ, ಮನಸ್ಸಿನ ವಿಚಿತ್ರ ಗೀಳು ಅಷ್ಟು ಸುಲಭವಾಗಿ ಮರೆಯಾಗುವುದಿಲ್ಲ. ಆಳಕ್ಕಿಳಿದ ನೆನಪುಗಳನ್ನು ಬದಿಗೊತ್ತಿ ಮುಂದಕ್ಕೆ ಹೆಜ್ಜೆ ಇಡುವುದು ಯಾವಾಗಲೂ ಕಷ್ಟಕರ. ಆದರೆ, ಬೇರೆ ದಾರಿಯೇ ಇಲ್ಲ. ಮುಂದೆ ಹೋಗಬೇಕೆಂದರೆ, ನೆನಪುಗಳನ್ನು ಹಿಂದೆ ಬಿಡಲೇಬೇಕು. ಅವಡುಗಚ್ಚಿ ಮುಂದಡಿ ಇಡಬೇಕು.
ಹೋಳಿಯ ಆ ಬಣ್ಣಗಳು, ಕಲರವ ಮನದ ಕಾರ್ಮೋಡ ಸರಿಸಲಿ, ರಂಗು ತುಂಬಲಿ ಅಂತ ಆಶಿಸುತ್ತ, ತಡರಾತ್ರಿ ಕೂತು ಇದನ್ನು ಬರೆಯುತ್ತಿದ್ದೇನೆ.
ಕೈಯಲ್ಲಿನ್ನೂ ಹೋಳಿಯ ಬಣ್ಣ ಹಾಗೇ ಇದೆ.
- ಚಾಮರಾಜ ಸವಡಿ

1 comment:

umesh desai said...

wow! sir a unique expereience. and a very good writeup too.