ನೆನಪೆಂಬ ಶಕ್ತಿ, ಸೋಲೆಂಬ ಮಿತ್ರ...

10 Mar 2011

I am only one, but still I am one. I cannot do everything, but still I can do something; and because I cannot do everything, I will not refuse to do something that I can do. 

ಹೆಲೆನ್‌ ಕೆಲರ್‌ಳ ಈ ಮಾತುಗಳನ್ನು ಓದುತ್ತ ಒಬ್ಬನೇ ಕೂತಿದ್ದೇನೆ.
ಮನೆಯ ಪಕ್ಕದ ಸಾಕಿದ ನಾಯಿಗಳು ಏಕೋ ಬೊಗಳುತ್ತವೆ. ಹಗಲು ಹೊತ್ತು ಸುಮ್ಮನಿರುವ ಈ ನಾಯಿಗಳಿಗೆ ರಾತ್ರಿ ಮಾತ್ರ ಪೂರ್ತಿ ಡ್ಯೂಟಿ.

ನಾನು ಮತ್ತೆ ಹೆಲನ್‌ ಕೆಲರ್‌ಳ ಮಾತುಗಳನ್ನು ದಿಟ್ಟಿಸುತ್ತೇನೆ. ಹೊರಗೆ ನಾಯಿಗಳ ಆರ್ಭಟ. ನನ್ನ ಮನಸ್ಸಿನಲ್ಲೂ ನೂರಾರು ನಾಯಿಗಳ ಬೊಗಳುವಿಕೆ.
ಮನಸ್ಸಿನಲ್ಲಿ ಬೊಗಳುತ್ತಿರುವ ನಾಯಿಗಳನ್ನು ಒಂದೊಂದಾಗಿ ದಿಟ್ಟಿಸಿ ನೋಡುತ್ತೇನೆ. ಅವು ಕಚ್ಚುತ್ತಾವೆಂಬ ಭಯವಿಲ್ಲ. ಕಚ್ಚಬಲ್ಲ ಶಕ್ತಿ ಅವಕ್ಕಿಲ್ಲ. ಬೊಗಳುವುದೊಂದೇ ಅವು ಮಾಡಬಹುದಾದ ಕೆಲಸ. ಬೊಗಳಿ ಬೊಗಳಿ ಸುಸ್ತಾದಾಗ, ಮಾಲೀಕ ಹಾಕುವ ತಿಂಡಿಯೆಡೆಗೆ ಆಸೆಗಣ್ಣಿಂದ ದಿಟ್ಟಿಸುತ್ತ ನಿಲ್ಲುತ್ತವೆಂಬುದು ನನಗೆ ಗೊತ್ತು.
ಮನಸ್ಸಿನೊಳಗಿನ ನಾಯಿಗಳನ್ನೊಮ್ಮೆ ಮೌನವಾಗಿ ದಿಟ್ಟಿಸಿ ನೋಡುತ್ತೇನೆ. ಅವು ಸುಮ್ಮನಾಗುತ್ತವೆ.
ನನಗೆ ಮತ್ತೆ ಏಕಾಂತ.
ಆಕೆ ಅಲ್ಲೆಲ್ಲೋ ಮಗುವಿನಂತೆ ಮಗ್ಗುಲಾಗಿ ಮಲಗಿರಬೇಕು. ಆಕೆಯ ಮನಸ್ಸಿನಲ್ಲೂ ಬೊಗಳುತ್ತಿರುವ ನಾಯಿಗಳು ಸುಮ್ಮನಾಗಿರಬೇಕು. ಸುಂದರಿಯ ಕೊರಳ ವಜ್ರಾಹಾರದಂತೆ ಹೊರಗೆ ಬಾನೊಡಲಲ್ಲಿ ಕಂಗೊಳಿಸುವ ಬಿದಿಗೆ ಚಂದಿರ ಆಕೆಯ ಮನಸ್ಸಿನಲ್ಲೂ ನಗುತ್ತಿರಬಹುದು. ಅವನ ಬೆಳ್‌ನಗೆಯನ್ನು ನಾಚಿಸುವಂತೆ ಈಕೆಯೂ ನಿದ್ದೆಯಲ್ಲೇ ಮುಗುಳ್ನಕ್ಕಿರಬೇಕು. ಇಲ್ಲಿ ನನ್ನ ಜೀವ ’ಹಾ’ ಎಂದಿತು.
ಅಬ್ಬಾ ಮನಸ್ಸೇ!
ಮೆಚ್ಚಿದ ಜೀವ ಬರೀ ಮುಗುಳ್ನಗುತ್ತಿರುವಂತೇ ಭಾಸವಾಗುತ್ತದೆ. ಈ ಅಪರಾತ್ರಿಯಲ್ಲಿ ನಾನಿಲ್ಲಿ ಎದ್ದು ಕೂತಿದ್ದರೂ, ನಿದ್ದೆ ಇಲ್ಲದೇ ಮಂಕಾಗಿದ್ದರೂ, ಆಕೆ ಮಗ್ಗುಲಾಗಿ ಮಲಗಿ ಹೊಂಗನಸ ಕಾಣುತ್ತಿದ್ದಾಳೆಂದು ಊಹಿಸುತ್ತದೆ. ಜೀವ ತುಂಬಿದ, ಭಾವ ತುಂಬಿದ, ಬೆಚ್ಚನೆಯ ಜೀವದಂತಲ್ಲದೇ ಆಕೆಯನ್ನು ಬೇರೆ ಯಾವ ರೀತಿಯೂ ಊಹಿಸಿಕೊಳ್ಳದು. ಆಕೆ ಗಾಡಿ ಏರಿದರೆ, ಹುಷಾರಾಗಿ ಬಾರೇ ಹುಡುಗೀ ಅನ್ನುತ್ತದೆ. ರಭಸದಿಂದ ಗಾಡಿ ಓಡಿಸಬೇಡ. ಸುಂದರಿ ಕೂಡ ಒರಟಾಗಿ ನಡೆದುಕೊಂಡಾಳೆಂದು ರಸ್ತೆ ಬೇಸರಪಡುತ್ತದೆ ಎಂದು ಎಚ್ಚರಿಸುತ್ತದೆ. ಅವಳು ಕಳಿಸುವ ಕಿರು ಸಂದೇಶಗಳಲ್ಲಿಯೂ ನಗೆಯ ಚಿಹ್ನೆಯನ್ನೇ ಹುಡುಕುತ್ತದೆ. ಆಕೆಯ ನೋಟಕ್ಕೆ ಮಾಂತ್ರಿಕ ಶಕ್ತಿ ಕಲ್ಪಿಸುತ್ತದೆ. ಮಾತಿಗೆ ನೆಮ್ಮದಿ ಹೊಂದುತ್ತದೆ. ಜಗಳವನ್ನೂ ಆಸ್ವಾದಿಸುತ್ತದೆ. ಮುನಿಸನ್ನೂ ಇಷ್ಟಪಡುತ್ತದೆ. ನಡೆದರೂ ಚೆನ್ನ, ನುಡಿದರೂ ಚೆನ್ನ. ಏಕೆಂದರೆ, ಆಕೆ ಚಿನ್ನ.
ನನ್ನ ಮನಸ್ಸು, ಅಲ್ಲೆಲ್ಲೋ ಸದ್ದಿಲ್ಲದ ನಿದ್ದೆಯಲ್ಲಿರಬಹುದಾದ ಆಕೆಯೆಡೆಗೆ ಹೊರಳುತ್ತದೆ.
ನಾನಿಲ್ಲಿ ಒಂಟಿ.
ಷೆಲ್ಫಿನೊಳಗಿನ ಪುಸ್ತಕಗಳು, ಅವುಗಳೊಳಗೆ ಅಡಗಿರಬಹುದಾದ ಸಾವಿರ ಸಾವಿರ ಭಾವನೆಗಳು, ಸಂಗತಿಗಳು ನನ್ನನ್ನು ಸಂತೈಸುತ್ತವೆ. ಬೊಗಳುವ ನಾಯಿಗಳು ಸಂತೈಸುತ್ತವೆ. ಫುಟ್‌ಪಾತ್‌ನ ಕಲ್ಲುಗಳ ಮೇಲೆ ಕುಟ್ಟುವ ಗೂರ್ಖಾನ ಕೋಲಿನ ಶಬ್ದ ಸಂತೈಸುತ್ತದೆ. ರಾತ್ರಿ ಸಂಚಾರದಲ್ಲಿರುವ ಹೆಗ್ಗಣಗಳು ನೆಲ ಕೆದರುವ ಸದ್ದು ಸಂತೈಸುತ್ತದೆ.
ನಾನು ಕೊಂಚ ಸಮಾಧಾನ ತಂದುಕೊಳ್ಳುತ್ತೇನೆ.
ನಾನು ಒಂಟಿಯಲ್ಲ. ಏಕೆಂದರೆ, ನೆನಪುಗಳು ಜೊತೆಗಿವೆ.
ಹೆಲೆನ್‌ ಕೆಲರ್‌ಳ ಸಾಲುಗಳನ್ನು ದಿಟ್ಟಿಸುತ್ತೇನೆ: I am only one, but still I am one.
ಹೌದಲ್ಲ! ಎಂದು ಅಚ್ಚರಿಪಡುತ್ತೇನೆ. ಅವಳು ಜೊತೆಗಿರಬೇಕಿತ್ತು ಎಂದು ಮನ ಹಂಬಲಿಸುತ್ತಿದ್ದರೂ, ನಾನು ಅರ್ಧ ಅಲ್ಲ, ಒಂದು ಎಂದು ಸಂತೈಸಿಕೊಳ್ಳುತ್ತೇನೆ. ನಿಜ, I cannot do everything, but still I can do something.
ಬದುಕಿನಲ್ಲಿ ಮುರಿದುಬಿದ್ದ ಕನಸುಗಳು ನೆನಪಾಗುತ್ತವೆ. ಸೋತ ಆಸೆಗಳು ನೆನಪಾಗುತ್ತವೆ. ವಂಚಿಸಲ್ಪಟ್ಟ ಅವಕಾಶಗಳು, ನಿರಾಕರಿಸಲ್ಪಟ್ಟ ಮನ್ನಣೆಗಳು, ತಿರಸ್ಕರಿಸಲ್ಪಟ್ಟ ಘಟನೆಗಳು ಕಣ್ಮುಂದೆ ಸುಳಿಯುತ್ತವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ನಾನು ಏನೋ ಆಗಬಿಡುತ್ತಿದ್ದೆ ಎಂಬ, ಒಂದು ದಶಕದ ಹಿಂದೆಯೇ ಮರೆತುಬಿಟ್ಟಿದ್ದ, ಸ್ವಾನುಕಂಪದ ಭಾವ ನೆನಪಾಗುತ್ತದೆ. ಪೂರ್ಣಗೊಳ್ಳದ ಕವಿತೆಗಳಂತೆ ಬಿಡಿ ಬಿಡಿ ಸಾಲುಗಳಾಗಿ ನಿಲ್ಲುತ್ತವೆ.
ನಿಜ. ಕನಸುಗಳು ಮುರಿದುಬಿದ್ದಿವೆ. ಆದರೆ, ಹೊಸ ಕನಸುಗಳು ಮೊಳೆತಿವೆ. ಆಸೆಗಳು ಸೋತಿವೆ ನಿಜ, ಹೊಸ ಆಸೆಗಳೂ ಚಿಗುರಿವೆ. ವಂಚಿತನಾಗಿದ್ದೇನೆ ನಿಜ. ಆದರೆ, ಎಲ್ಲವನ್ನೂ ಕಳೆದುಕೊಂಡಿಲ್ಲ. ಮನ್ನಣೆ ಎಂಬುದು ಪ್ರಶಸ್ತಿ ಫಲಕಗಳಲ್ಲಿಲ್ಲ, ನೇಮಕಾತಿ ಪತ್ರಗಳಲ್ಲಿಲ್ಲ. ಅಲ್ಲೆಲ್ಲೋ ಸವಿನಿದ್ದೆಯಲ್ಲಿರಬಹುದಾದ ಜೀವ, ಮುಖ ನೋಡಿರದಿದ್ದರೂ ಮೆಚ್ಚಿದ ಜನಗಳ ಮಧ್ಯೆ ಜೀವಂತವಾಗಿದೆ. ತಿರಸ್ಕರಿಸಲ್ಪಟ್ಟಿದ್ದೇನೆ ನಿಜ. ಆದರೆ, ಹೊಸ ಜೀವ, ಭಾವಗಳು ತಬ್ಬಿಕೊಂಡಿವೆ. ಜೀವಸೆಲೆ ತುಂಬಿ ಪೊರೆಯುತ್ತಿವೆ.
ಅಂದುಕೊಂಡ ಎಲ್ಲವನ್ನೂ ಮಾಡಲಾಗಲಿಕ್ಕಿಲ್ಲ. ಹಾಗಂತ ಏನನ್ನೂ ಅಂದುಕೊಳ್ಳದೇ ಹೇಗಿರಲಿ? ಸೋಲುವುದಕ್ಕೇ ಅಳುಕಿದರೆ ಗೆಲ್ಲುವುದಾದರೂ ಯಾವತ್ತು? ಸೋಲಿನ ಮಧ್ಯೆಯೇ ಗೆಲುವು ಬರುವುದು. ನೋವಿನೊಳಗಿಂದಲೇ ನಲಿವು ಉಕ್ಕುವುದು. ಕಣ್ಣೀರಿಟ್ಟ ಕಂಗಳಿಂದಲೇ ನಗು ಅರಳಬೇಕು. ಅಲೆಯೆದ್ದ ಜಾಗದಲ್ಲೇ ಅಲೆ ನಿಲ್ಲಬೇಕು. ಚೂರಿ ಹಾಕುವ ಕೈಗಳಿರುವಂತೆ, ನೇವರಿಸುವ ಕೈಗಳೂ ಇವೆ.
ನೆಲಕ್ಕುರುಳಿದ ಮರದೊಡಲಿಂದ ಹೊಸ ಚಿಗುರು ಮೊಳೆತಂತೆ, ಮುರಿದುಬಿದ್ದ ಹಳೆ ಕನಸುಗಳ ಜಾಗದಲ್ಲಿ ಹೊಸ ಕನಸುಗಳು ಚಿಗುರಬೇಕು. ಸೋತ ಸವಾಲೆದುರಿಸಲು ಹೊಸ ಪ್ರಯತ್ನ ಮಾಡಬೇಕು. Because I cannot do everything, I will not refuse to do something that I can do.
ಹೆಲೆನ್‌ ಕೆಲರ್‌ಳ ಅಮೋಘ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡೆ.
ಆಕೆ ಅಲ್ಲೆಲ್ಲೋ ನಿದ್ದೆಯಲ್ಲಿ ಮುಗುಳ್ನಕ್ಕಿರಬೇಕು. ಇಲ್ಲಿ, ನನ್ನೊಳಗೂ ಮುಗುಳ್ನಗುವೊಂದು ಅರಳಿತು. ಆಕೆ ಏಳುವ ಸಮಯಕ್ಕೆ ನಾನಿಲ್ಲಿ ಮಲಗಲು ಹೊರಟಿದ್ದೇನೆ. ನನ್ನ ಕಣ್ರೆಪ್ಪೆಯೊಳಗೂ ಆಕೆಯನ್ನು ಮುದಗೊಳಿಸಿದ ಸವಿಗನಸುಗಳು ಅರಳಲಿ. ಬೆಳಗು ಸೂರ್ಯನ ಹೊಂಗಿರಣಗಳೊಂದಿಗೆ ಅವಳನ್ನು ತಲುಪಿ ಪುಳಕಗೊಳಿಸಲಿ.
- ಚಾಮರಾಜ ಸವಡಿ
(ಚಿತ್ರ ಕೃಪೆ: ಗಣಪತಿ ಹೆಗ್ಡೆ)

4 comments:

HegdeG said...

Sundaravaada baraha sir.

Chamaraj Savadi said...

ಧನ್ಯವಾದ ಹೆಗ್ಡೆಯವರೇ, ನಿಮ್ಮ ಪೂರ್ವಾನುಮತಿಯಿಲ್ಲದೇ ನೀವು ತೆಗೆದ ಚಿತ್ರಕಾವ್ಯದಂಥ ಅದ್ಭುತ ಫೊಟೊವೊಂದನ್ನು ಬರಹಕ್ಕೆ ಪೂರಕವಾಗಿ ಬಳಸಿಕೊಂಡಿದ್ದೇನೆ. :)

manju said...

ಮನ ಮುಟ್ಟುವ ಬರಹ ಚಾಮರಾಜರೆ, ಬಹುಶಃ ಈ ಉದ್ಯಾನ ನಗರಿಯ ಗಲಾಟೆಯಲ್ಲಿ ಕನಸುಗಳನ್ನು ಕಳೆದುಕೊ೦ಡ ಪ್ರತಿಯೊಬ್ಬನ ಮನದ ಮಾತುಗಳೂ ಹೀಗೆಯೇ ಇರಬಹುದೇನೋ ಅನ್ನಿಸಿತು.

Chamaraj Savadi said...

ನಿಜ ಮಂಜುನಾಥ್ ಸರ್‌. ನಗರ ನಮ್ಮ ಹಳೆಯ ಕನಸುಗಳನ್ನು ಹೊಸಗುತ್ತದೆ. ಆದರೆ, ಹೊಸ ಕನಸುಗಳನ್ನೂ ಬಿತ್ತುತ್ತದೆ. ಈ ಹಳತು-ಹೊಸದರ ನಡುವಿನ ಗೊಂದಲ ಇದು. ಇದನ್ನು ಗೆಲ್ಲುವವರೆಗೂ ಹೀಗೇ.