ನಿನ್ನೆ, ಇಂದು ಮತ್ತು ನಾಳೆ

28 Feb 2011

ನಾನಿಲ್ಲಿ ಸುಮ್ಮನೇ ನಿಂತಿದ್ದೇನೆ.

ನಿನ್ನೆದುರು ನಿನ್ನ ಬದುಕಿದೆ. ನನ್ನ ಬದುಕು ನನ್ನೆದುರು. ನಮ್ಮಿಬ್ಬರೆದುರು ನಮ್ಮ ಬದುಕಿದೆ.

ನನ್ನ ನಿನ್ನೆಗಳು ನಿನಗೆ ಮತ್ತು ನಿನ್ನ ನಿನ್ನೆಗಳು ನನಗೆ ಗೊತ್ತಿಲ್ಲ. ಇನ್ನು ನಮ್ಮಿಬ್ಬರ ನಿನ್ನೆ-ನಾಳೆಗಳ ಬಗ್ಗೆ ಇಬ್ಬರಿಗೂ ತಿಳಿದಿಲ್ಲ.

ನಾಳೆಗಳ ಬಗ್ಗೆಯೂ ನಮಗೆ ಏನೂ ಗೊತ್ತಿಲ್ಲ. ಆದರೆ, ನಾವು ಇಂದಿನ ಬಗ್ಗೆ ಖಂಡಿತವಾಗಿ ಯೋಚಿಸಬಹುದು. ಇಂದಿನ ನಮ್ಮ ಬದುಕು, ನಾಳೆಯ ನಮ್ಮ ಬದುಕಾಗುತ್ತದೆ. ಅಲ್ಲವೆ?

ನಿನ್ನ ನಿನ್ನೆಗಳನ್ನು ಬಿಟ್ಹಾಕು. ನಾನೂ ಬಿಟ್ಹಾಕಿದ್ದೇನೆ. ಅದು ಆಗಿ ಹೋದ ಬದುಕು. ಓದಿಟ್ಟ ಪುಸ್ತಕ. ನೋಡಿಯಾಗಿರುವ ಚಿತ್ರ. ಅದನ್ನು ನಾವಿಬ್ಬರೂ ಬದಲಿಸಲಾರೆವು. ಬದಲಿಸುವ ಯತ್ನವೂ ಬೇಡ.

ನಿನ್ನೆಯನ್ನು ನೆನೆದು ಇಂದು ಕಣ್ಣೀರಿಡುವುದೇಕೆ? ಅದು ನಾಳೆಗೆ ಏನನ್ನೂ ಕೊಡಲಾರದು. ಇವತ್ತಿನ ಬಗ್ಗೆ ಯೋಚಿಸು. ಇಂದಿನ ಬದುಕನ್ನು ನೀನು ಬದಲಿಸಬಲ್ಲೆ. ನಾಳೆಯನ್ನು ರೂಪಿಸಬಲ್ಲೆ. ನಾಳೆಯ ಭವಿಷ್ಯದ ಮರದ ಬೀಜವನ್ನು ಇಂದೇ ಬಿತ್ತು. ನಿನ್ನ ವಿಫಲ ಕನಸಿನ ಕಣ್ಣೀರ ಹನಿಸು. ಕನಸನ್ನು ಬೆರೆಸು. ನಿನ್ನಾಸೆಯ ನಾಳೆ ನಿನ್ನದಾದೀತು.

ಎಷ್ಟಂತ ಅಳುತ್ತೀಯಾ? ಕಣ್ಣೀರ ಹನಿಗಳು ಕುಸಿದ ಕನಸನ್ನು ಹೇಳುತ್ತವೆ. ವಿಫಲ ಯತ್ನಗಳನ್ನು ಬಣ್ಣಿಸುತ್ತವೆ, ನಿಜ. ಆದರೆ, ಅವು ನಾಳೆಗೇನೂ ಕೊಡಲಾರವು. ಅಳುವ ಕಣ್ಣುಗಳಿಗಿಂತ, ಅರಳುವ ಕಣ್ಣುಗಳು ನಾಳೆಯನ್ನು ರೂಪಿಸಬಲ್ಲವು ಎಂಬುದನ್ನು ಮರೆಯದಿರು.

ನೀನು ಎಲ್ಲವನ್ನೂ ಬಲ್ಲೆ ಎಂಬುದನ್ನು ನಾನು ಬಲ್ಲೆ. ನಿನಗೆ ಎಲ್ಲವೂ ಅರ್ಥವಾಗುತ್ತದೆ ಎಂಬುದೂ ನನಗರ್ಥವಾಗಿದೆ. ಬದುಕಿನ ತಿರುವು ದಾರಿಯುದ್ದಕೂ ಪೊರೆಯಬೇಕಿರುವುದು ನಿನ್ನ ಕಂಗಳ ದೀಪದ ಬೆಳಕು ಎಂಬುದನ್ನೂ ನೀನು ತಿಳಿದುಕೊಳ್ಳಬೇಕು. ಆ ಕಂಗಳು ಅಳದಿರಲಿ. ಆ ಬೆಳಕು ಮಸುಕಾಗದಿರಲಿ. ಒರೆಸಿಕೋ ಕಣ್ಣೀರ. ತಂದುಕೋ ಮುಗುಳ್ನಗೆಯ. ಎದೆಯಾಳದಲಿ ಮಿಣುಕುತ್ತಿರುವ ಆ ಮಿಣುಕುಬೆಳಕು ನಿನ್ನ ಕಂಗಳಿಂದಿಳಿದು ತಿರುವು ದಾರಿಯುದ್ದಗಲಕೂ ಹರಡಲಿ. ನಿನ್ನ ನಡೆ ನಿನಗೆ ನಿಚ್ಚಳವಾಗಲಿ.

ಈಚೆ ತೀರದಿ ನಿಂತು ದಾರಿ ಕಾಯುವ ಹುಚ್ಚು ಪಥಿಕ ನಾನು. ಅರ್ಧ ದಾರಿಯನ್ನು ಈಜಿ ಬರಬಲ್ಲೆ. ಇನ್ನರ್ಧ ನೀನೇ ಈಜಬೇಕು. ಈ ಎರಡು ಅರ್ಧಗಳ ನಡುವೆ ಅಲ್ಲೆಲ್ಲೋ ಸಂಗಮವಿದೆ. ಅದನ್ನು ನಾವು ಜೊತೆಯಾಗಿ ತಲುಪಬೇಕಿದೆ. ಅಲ್ಲಿಂದ ಬದುಕು ಜೊತೆಯಾಗಿ ಬೆರೆತು ಹರಿಯಬೇಕಿದೆ. ತೀರದಲ್ಲೇ ಬದುಕು ತೀರಿ ಹೋಗದಿರಲಿ. ಇಡು ಹೆಜ್ಜೆ. ಈಜು ನಿನ್ನರ್ಧ ಪಾಲಿನ ನೀರ. ಸಂಗಮದೆಡೆಗೆ ತಲುಪು. ನಾನೂ ಇಳಿದೇನು. ಈಜಿಯೇನು. ಸಂಗಮದಲಿ ಜೊತೆಯಾದೇನು. ಬಾಳ ಪೂರ್ತಿ ಜೊತೆಯಾಗಿ ಹರಿದೇನು. ಮುಂದೆಲ್ಲೋ ಕಡಲಲ್ಲಿ ಲೀನವಾಗುವವರೆಗೆ ಎದೆ ದೀಪಕ್ಕೆ ಬತ್ತಿಯಾದೇನು. ಎಣ್ಣೆಯಾದೇನು. ನಿನ್ನ ಕಂಗಳ ಬೆಳಕಾದೇನು. ಎದೆಯಾಳದಲಿ ಇಳಿದು ಹೊಸ ಕನಸಾದೇನು. ನನಸಾದೇನು.

ಇಳಿವ ಮುನ್ನ ಸಾವಿರ ಬಾರಿ ಯೋಚಿಸು. ಮಾಡುವುದಾದರೆ ಹೊಸ ತಪ್ಪ ಮಾಡು. ಇಡುವುದಾದರೆ ಮುಂದಡಿಯಿಡು. ಈಜುವುದಾದರೆ, ಕಡಲೆಡೆಗೆ ಹರಿಯುವ ನದಿಯನ್ನೀಜು. ಕಾಣುವುದಾದರೆ ಹೊಸ ಕನಸ ಕಾಣು. ಆಗ ನಿನ್ನ ಕಣ್ಣೀರು ನದಿಯಲ್ಲಿ ಒಂದಾಗಿ ಬೆರೆಯುತ್ತದೆ. ಕಡಲೆಡೆಗೆ ಕರೆದೊಯ್ಯುತ್ತದೆ.

ಇದು ಹುಸಿ ಭರವಸೆಯಲ್ಲ. ಮರುಳು ಮಾತೂ ಅಲ್ಲ. ನಿನ್ನನ್ನಳಿಸುವ ನಿನ್ನೆಗಳನ್ನ ಅಳಿಸಿಹಾಕುವ ದಾರಿಯಿದು. ತೆರೆದುಕೋ ಮನಸ. ಕರೆದುಕೋ ಕನಸ. ಎಲ್ಲಾ ನಿರಾಶೆಗಳ ನಿರಿಗೆಕಟ್ಟಿ, ಸವಾಲುಗಳ ಕಚ್ಚೆ ಕಟ್ಟಿ, ಮುಂದಡಿಯಿಡು. ಗತ ಬದುಕಿಗೆ ಕುರುಡಾಗು. ಟೀಕೆಗಳಿಗೆ ಕಿವುಡಾಗು. ಹತಾಶತೆಗೆ ಮೂಕಳಾಗು. ಹಿಂದೆ ನೋಡದೇ ಎದ್ದು ಬಂದ ಬುದ್ಧನಂತೆ, ಎದ್ದು ಬಾ. ಖಂಡಿತ ಗೆದ್ದು ಬರುವೆ.

ಇನ್ಯಾವ ಅಳುಕು? ಇನ್ಯಾವ ಯಾತನೆ? ಹೊಸ ಕನಸಿನ ನಾಳೆಗಾಗಿ ಇಂದೇ ಹೊರಡು. ಭವವ ತೊರೆವವರನ್ನು ಭಯವೂ ತೊರೆವುದು. ಹನಿಸಿದ ಕಣ್ಣೀರ ಲೆಕ್ಕ ಮರೆತು, ಕುಸಿದ ಕನಸುಗಳ ನೋವು ಮರೆತು, ಸುರಿಸಲೊಂದಿಷ್ಟು ಆನಂದಬಾಷ್ಪಗಳನ್ನು ಹುಷಾರಾಗಿ ಎತ್ತಿಕೊಂಡು ಬಾ. ಈಚೆ ತೀರದಲಿ ನಾನು ಕಾಯುತ್ತಲೇ ಇದ್ದೇನೆ. ಕಾಯುತ್ತಲೇ ಇರುತ್ತೇನೆ. ಅಲುಗುವುದಿಲ್ಲ. ಅಗಲುವುದಿಲ್ಲ. ಕನಲುವುದಿಲ್ಲ. ಕರಗುವುದಿಲ್ಲ. ಶಿಲೆಯಾದ ಶಾಪಗ್ರಸ್ತನಂತೆ ನಿಂತೇ ಇರುತ್ತೇನೆ. ಅದು ಖಂಡಿತ.

ಬರುತ್ತೀಯಲ್ಲ?

- ಚಾಮರಾಜ ಸವಡಿ

2 comments:

vedasudhe said...

ಎಂದಿನಂತೆ ಜೀವತುಂಬಿದ ಬರಹದಿಂದ ಖುಶಿಯಾಯ್ತು

ಮೌನಿ said...

ಅಕ್ಕರೆ ತುಂಬಿದ ಅಕ್ಷರಗಳು
ಜೀವ ಹಿಡಿದ ಭಾವಗಳು
ಖುಷಿಯಾಗುತ್ತೆ
ಭರವಸೆ ಮೂಡುತ್ತೆ
ಸರ್