ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ

18 Feb 2011

ಇಷ್ಟೇ ಸಾಕೆಂದಿದ್ದೆಯಲ್ಲೋ...

ಹಾಗಂತ ಎಷ್ಟೋ ಸಾರಿ ಅಂದುಕೊಳ್ಳುತ್ತೇನೆ: ಇಷ್ಟಾದರೆ ಸಾಕು. ಹನಿ ಪ್ರೀತಿ, ಒಂದು ಸಾಂತ್ವನದ ಮಾತು, ಜೊತೆಗಿದ್ದೇನೆ ಎಂಬ ಭಾವ, ಖರ್ಚಿಗೊಂದಿಷ್ಟು ಹಣ, ಮಾಡಲೊಂದು ಆಸಕ್ತಿದಾಯಕ ಕೆಲಸ, ಒಂದು ಸಾಂಗತ್ಯ, ಒಂದು ನೆನಪು, ಒಂದು ಕನಸು- ಇಷ್ಟಾದರೆ ಸಾಕು, ಮತ್ತೇನೂ ಬೇಡ ಅಂತ ಎಷ್ಟೋ ಸಲ ಅಂದುಕೊಳ್ಳುತ್ತೇನೆ.

ಹಾಗೆ ಅಂದುಕೊಂಡಿದ್ದು ದಕ್ಕಿದ ಕೂಡಲೇ ಹೊಸ ಕನಸುಗಳು ಮೊಳೆಯುತ್ತವೆ. ಅವಿಷ್ಟಾದರೆ ಸಾಕೆಂಬ ಹೊಸ ಆಸೆ.

ಸನ್ಯಾಸಿಯ ಲಂಗೋಟಿ ಕತೆಯಂಥ ಸರಪಳಿ ಇದು. ಬಿಟ್ಟೆನೆಂದರೂ ಬಿಡದ ಮಾಯೆ. ಬದುಕೆಂಬ ಮಾಯೆಯ ಚಕ್ರ ಬಿಟ್ಟೂಬಿಡದೇ ಸುತ್ತುತ್ತಲೇ ಇರುತ್ತದೆ. ಅದರ ಜೊತಗೆ ನಾವೂ ಸುತ್ತುತ್ತಾ ಹೋಗುತ್ತೇವೆ.

ಹೀಗಾಗಿ, ಪದೆ ಪದೆ ಶುರು ಮಾಡಿದ ಸ್ಥಳಕ್ಕೇ ಬಂದು ತಲುಪಬೇಕಾಗುತ್ತದೆ. ಮತ್ತೆ ಕತೆ ಹೊಸದಾಗಿ ಶುರು.

ಈಗ ಅಂಥ ಮತ್ತೊಂದು ಸುತ್ತಿನ ಹತ್ತಿರ ಬಂದು ನಿಂತಿದ್ದೇನೆ.

ಬದುಕಿನ ಚಕ್ರ ಈಗ ಮತ್ತೊಂದು ಸುತ್ತಿಗೆ ಸಿದ್ಧವಾಗಬೇಕು. ಅನುಭವದ ಬಲ ಜೊತೆಗಿದ್ದರೂ ಕೂಡ, ಎಂದಿನಂತೆ ಹೊಸತನ ತರುವ ತಾಜಾ ಅಳುಕು ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ವಿಚಿತ್ರ ಗೊಂದಲ. ಈ ಸುತ್ತು ನನಗೆ ಬೇಕಿತ್ತಾ ಎಂಬ ಹಳೇ ಪ್ರಶ್ನೆ. ಅಪರಿಚಿತ ಊರಲ್ಲಿ ರಾತ್ರಿಯ ಕೊನೇ ಬಸ್‌ ತಪ್ಪಿಸಿಕೊಂಡ ಪ್ರಯಾಣಿಕನಿಗಿರುವಂಥ ವಿಚಿತ್ರ ಗೊಂದಲ, ತಳಮಳ. ರಾತ್ರಿ ಕಳೆದರೆ ಸಾಕು, ನಸುಕಿನಲ್ಲಿ ಮೊದಲ ಬಸ್‌ ಹೊರಡುತ್ತದೆ ಎಂದು ಗೊತ್ತಿದ್ದರೂ ಸುಮ್ಮಸುಮ್ಮನೇ ಬಸ್‌ಸ್ಟ್ಯಾಂಡ್‌ ಇಡೀ ಓಡಾಡುವಂತಹ ಭಾವ. ಇನ್ನೊಂದು ಬಸ್‌ ಬರಬಹುದು ಎಂಬ ವಿಚಿತ್ರ ಭರವಸೆ. ರಾತ್ರಿಯೇ ಊರು ತಲುಪಬಿಡಬಹುದು ಎಂಬ ಕನಸು.

ಆದರೆ, ತಪ್ಪಿಸಿಕೊಂಡ ಬಸ್‌ ಮತ್ತೆ ಬರುವುದಿಲ್ಲ. ಅದರ ಬದಲಾಗಿ ಇನ್ಯಾವುದೋ ವಾಹನವೂ ಬರುವುದಿಲ್ಲ. ಬದುಕಿನಲ್ಲಿ ಆಕಸ್ಮಿಕಗಳು ಅದೃಷ್ಟವಾಗುವುದು ತುಂಬಾ ಅಪರೂಪ. ಅಂತಹ ಕನಸು ಕಾಣದಿರು ಮರುಳೇ ಅಂದುಕೊಳ್ಳುತ್ತ ಬದಲಾಗಲೇಬೇಕಾದ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

ಆ ದಿನ ಮತ್ತೆ ಮತ್ತೆ ನೆನಪಾಗುತ್ತಿದೆ. ರಾತ್ರಿಯಿಡೀ ಅರಳಿದ ಹೂವೊಂದಕ್ಕೆ ಬೆಳಿಗ್ಗೆ ಗಂಧ ಸೇರಿಕೊಂಡಂತೆ, ಮತ್ತದೇ ರಸ್ತೆಯಲ್ಲಿ ಜೊತೆಯಾಗಿ ನಡೆದಂತೆ, ಮಾತಾಡಿಕೊಂಡಂತೆ, ಮೊಗೆದಷ್ಟೂ ಉಕ್ಕುವ ನೆನಪುಗಳನ್ನು ಮತ್ತೆ ಮತ್ತೆ ಆಸ್ವಾದಿಸಿದಂತೆ- ವಿಚಿತ್ರ ಹಳವಂಡಗಳು. ತೀರಾ ಆಕಸ್ಮಿಕವಾಗಿ ಶುರುವಾದ ಸುನೀತ ಭಾವವೊಂದು ಮೆಲು ಹಾಡಾದ ಆ ಪರಿಯನ್ನು ಹೇಳುವುದು ಹೇಗೆ? ಹೇಳದಿರುವುದು ಹೇಗೆ? ಇಷ್ಟೇ ಸಾಕು ಅಂತ ಅದೆಷ್ಟೋ ಸಲ ಅಂದುಕೊಂಡರೂ, ಊಹೂಂ, ಇಷ್ಟೇ ಸಾಕಾಗುವುದಿಲ್ಲ ಎಂಬುದು ಬಲು ಬೇಗ ಗೊತ್ತಾದಾಗ, ಆವರಿಸಿದ್ದು ಮತ್ತದೇ ಖಿನ್ನತೆ. ಮತ್ತದೇ ಗೊಂದಲ.

ಪ್ರತಿಯೊಂದು ಗೊಂದಲವೂ, ಪ್ರತಿಯೊಂದು ಖಿನ್ನತಾ ಘಳಿಗೆಯೂ ಕೆಲಸದ ಮೇಲೆ ಪರಿಣಾಮ ಬೀರುತ್ತದೆಂಬುದು ಗೊತ್ತಿದ್ದರೂ, ಆಸೆಬುರುಕ ಕುಡುಕನಂತೆ, ಖಿನ್ನತೆಯನ್ನು ಮೊಗೆಮೊಗೆದು ಕುಡಿಯುತ್ತಿದ್ದೇನೆ. ಮತ್ತಷ್ಟು ತೀವ್ರ ಖಿನ್ನತೆಗೆ ಈಡಾಗುತ್ತಿದ್ದೇನೆ. ಪ್ರತಿಯೊಂದು ಅತಿರೇಕದಾಚೆಗೆ ಅದರ ಅಂತ್ಯ ಇರುವಂತೆ, ಉಕ್ಕಿಬರುವ ಈ ಖಿನ್ನತೆಯ ಪರಮೋಚ್ಚ ಸ್ಥಿತಿ ತಲುಪಿಬಿಡಬೇಕೆಂಬ ಹಠಕ್ಕೆ ಬಿದ್ದಿದ್ದೇನೆ. ಕಂಪ್ಯೂಟರ್‌ ಮುಂದೆ ಗಂಟೆಗಟ್ಟಲೇ ಮೌನವಾಗಿ ಕೂಡುತ್ತೇನೆ. ಷೆಲ್ಫಿನಲ್ಲಿರುವ ಇಷ್ಟಪಟ್ಟ ಹಲವಾರು ಪುಸ್ತಕಗಳನ್ನು ಸುಮ್‌ಸುಮ್ಮನೇ ತಿರುವಿ ಹಾಕುತ್ತೇನೆ. ಅಲ್ಲಲ್ಲಿ ಸಾಲುಗಳು ಮಿಂಚುತ್ತವೆ. ಗಾಢಾಂಧಕಾರ ತುಂಬಿದ ಅರಣ್ಯದೊಳಗಿನ ಮಿಂಚುಹುಳುಗಳಂತೆ, ಅವು ಮಿಣುಕಿ ಮರೆಯಾಗುತ್ತವೆ. ಊಹೂಂ, ಇವ್ಯಾವೂ ಮನದ ಕತ್ತಲನ್ನು ಹೊಡೆದೋಡಿಸುವಷ್ಟು, ನೆಮ್ಮದಿಯ ಬೆಳಕನ್ನು ತರಬಲ್ಲಷ್ಟು ಶಕ್ತಿಶಾಲಿಯಲ್ಲ ಎಂದು ನಿಡುಸುಯ್ಯುತ್ತೇನೆ. ಈ ಅಂಧಕಾರವನ್ನು ಆ ನಗೆಮಿಂಚು ಮಾತ್ರ ದೂರ ಮಾಡಬಲ್ಲದು ಎಂದು ಮತ್ತೆ ಮನಸ್ಸು ಆಸೆಪಡುತ್ತದೆ.

ರಾತ್ರಿಗೂ ಹಗಲಿಗೂ ನಡುವಿನ ವ್ಯತ್ಯಾಸವೇ ಅಳಿದುಹೋದಂತಾಗಿರುವ ಈ ಘಳಿಗೆಗಳ ಆಚೆಗೆ ಭರವಸೆಯ ಬದುಕಿದೆ. ಅದನ್ನು ತಲುಪಬೇಕೆಂಬ ಉತ್ಕಟ ಆಸೆಯ ಜೊತೆಗೆ, ಹೇಗೆ ತಲುಪುವುದೆಂಬುದು ಗೊತ್ತಿಲ್ಲದ ಗೊಂದಲ. ವೃತ್ತಿ-ಪ್ರವೃತ್ತಿಗಳ ನಡುವಿನ ಘರ್ಷಣೆಯ ನಡುವೆ, ಹಾಗೇ ಉಳಿದಹೋದ ನೂರಾರು ಕನಸುಗಳು, ಸಾವಿರಾರು ಸುನೀತ ಭಾವನೆಗಳು. ಅರೆತೆರೆದ ಪುಸ್ತಕದೊಳಗಿನ ಸಾವಿರಾರು ಭಾವನೆಗಳಂತೆ, ಘಟನೆಗಳಂತೆ, ಅಕ್ಷರಗಳಂತೆ, ಆಹ್ವಾನದಂತೆ ಇಷ್ಟೇ ಸಾಕೆಂದಿದ್ದ ಕನಸು ಕ್ಷಣಕ್ಷಣಕ್ಕೂ ಸೆಳೆಯುತ್ತದೆ. ಮನಸ್ಸು ಮತ್ತದೇ ದಾರಿಗುಂಟ ಯಾತ್ರೆ ಹೊರಡುತ್ತದೆ.

ಕೆಲವೊಂದು ಭಾವನೆಗಳೇ ಹಾಗೆ. ಅವು ಮನಸ್ಸೊಳಗೆ ಮಾಗುತ್ತಲೇ ಹೋಗುತ್ತವೆ. ಅರಳುತ್ತಲೇ ಇರುತ್ತವೆ. ಯಾವೊಂದು ಶಕ್ತಿಗೂ ಈ ವಿಕಸನವನ್ನು ತಡೆಯಲಾಗದು. ಈ ಕನಸನ್ನು ಕಮರಿಸಲಾಗದು. ಚೆಲ್ಲವರಿದು ಹಬ್ಬುತ್ತ, ಹರಡುತ್ತ, ಹೊಸ ಕನಸುಗಳಿಗೆ ಜೀವ ಕೊಡುತ್ತ, ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತ ಇವು ನಿರಂತರವಾಗಿ ಪ್ರೇರಣೆ ನೀಡುತ್ತ ಹೋಗುತ್ತವೆ. ಮೂಕನ ಮನದಾಳದಂತೆ, ಹೇಳಲಾಗದು, ಹೇಳದಿರಲಾಗದು. ತನ್ನದೇ ರೀತಿಯಲ್ಲಿ ವ್ಯಕ್ತವಾಗುತ್ತ, ಅವ್ಯಕ್ತವಾಗುತ್ತಲೇ ಅರ್ಥಪೂರ್ಣವಾಗುತ್ತ, ಗೊತ್ತಾಯ್ತಾ ಎಂದು ಪ್ರಶ್ನಿಸುತ್ತ, ಗೊತ್ತಿಲ್ಲದೇ ಇದ್ದೀತೆ ಎಂಬ ಭಾವ ಹೊತ್ತು ನಿಲ್ಲುವ ಈ ಭಾವನೆಗಳ ತೀವ್ರತೆ ಅನುಭವಿಸುವುದು ಕಷ್ಟ. ಅನುಭವಿಸದಿರೆ ಬದುಕು ವ್ಯರ್ಥ.

ಬಹುಶಃ ಬದುಕು ಮತ್ತೊಂದು ಪ್ರಮುಖ ತಿರುವಿನಲ್ಲಿ ಬಂದು ನಿಂತಂತಿದೆ. ಇದು ನನ್ನನ್ನು ಮತ್ತೆ ಒಕ್ಕಲೆಬ್ಬಿಸುತ್ತದೋ, ದಿಕ್ಕುಗೆಡಿಸುತ್ತದೋ, ದಿಕ್ಕುಗಾಣಿಸುತ್ತದೋ ಗೊತ್ತಿಲ್ಲ. ಅಲೆಮಾರಿ ಜಂಗಮನಂತೆ, ಮತ್ತೊಂದು ಊರಿನತ್ತ ನನ್ನ ಬದುಕು ಮುಖ ಮಾಡುತ್ತಿದೆ. ಇಲ್ಲಿಯದೆಲ್ಲವನ್ನೂ ಇಲ್ಲಿಯೇ ಬಿಟ್ಟು, ಇನ್ನೆಲ್ಲೋ ಹೊರಟ ನನಗೆ, ನನ್ನೊಳಗೆ ಮಾಗುತ್ತಿರುವ, ಅರಳುತ್ತಿರುವ, ಬೆಳೆಯುತ್ತಿರುವ ಕನಸೊಂದನ್ನು, ಪ್ರೇರಣೆಯೊಂದನ್ನು ಮಾತ್ರ ಬಿಡಲಾಗುತ್ತಿಲ್ಲ. ಬಿಟ್ಟರೆ ಬದುಕಲಾಗುವುದಿಲ್ಲ.

ದೂರ ಹೊರಟವನದೊಂದೇ ಬೇಡಿಕೆ: ನಾ ಹೋಗಬಹುದಾದ ದೂರಕ್ಕೂ ಆ ಪರಿಮಳ ಬರುವಂತಾಗಲಿ. ಆ ಕನಸು ಬೆನ್ಹತ್ತಲಿ. ಅದು ನೆಟ್ಟ ಕನಸಿನ ಬೀಜ ಮನದೊಳಗೆ ಮರವಾಗಿ, ಮರದೊಳಗೆ ಫಲವಾಗಿ, ಫಲದೊಳಗೆ ನನಸಾಗಲಿ. ಆ ನನಸನ್ನು, ಆ ದೂರದಿಂದಲೇ ಆಸ್ವಾದಿಸುವಂತಾಗಲಿ. ಮೊದಲು ಇಷ್ಟೇ ಸಾಕೆಂದಿದ್ದೆನಾದರೂ, ಊಹೂಂ, ಇಷ್ಟು ಸಾಕಾಗುವುದಿಲ್ಲ ಎಂಬ ಇವತ್ತಿನ ನಿರಾಶೆ, ಮುಂದೊಂದಿನ ಸಂತಸವಾಗಲಿ. ನೆಮ್ಮದಿಯಾಗಲಿ. ಅಸಾಧ್ಯ ಕನಸುಗಳನ್ನು ಮತ್ತೆ ಮತ್ತೆ ಕಾಣುವ ಹುಚ್ಚಿಗೆ ಕಿಚ್ಚಾಗಲಿ. ಮತ್ಯಾವತ್ತೋ ನಾನು ಹೊರಟಲ್ಲಿಗೇ ತಲುಪಿದಾಗ, ಆ ಕನಸು ಮಾಗಿರಲಿ, ನನ್ನ ಕಂಡು ಮುಗುಳ್ನಗಲಿ. ಮಂಜುಕವಿದ ಮುಂಜಾವಿನ ಸೂರ್ಯನಂತೆ ಬೆಚ್ಚಗೇ ಬೆಳಗಲಿ, ನನ್ನೊಳಗಿನ ಶಾಶ್ವತ ಮಂಕನ್ನು ಕಳೆಯಲಿ.

ನಿನಗಿದೆಲ್ಲ ಅರ್ಥವಾಯಿತಾ? ಅರ್ಥವಾಗದೇ ಇದ್ದೀತಾ!

- ಚಾಮರಾಜ ಸವಡಿ

No comments: