ಕಾಡುವ ಧಾರವಾಡದ ನೆನಪು

13 Feb 2011

ಇವತ್ತೇಕೋ ಧಾರವಾಡ ತುಂಬ ನೆನಪಾಗುತ್ತಿದೆ.

ಹಲವಾರು ಕಾರಣಗಳಿಂದಾಗಿ ನೆನಪಿನ ಶಾಶ್ವತ ಭಾಗವಾಗಿರುವ ಧಾರವಾಡವನ್ನು ನಾನು ಮೊದಲ ಬಾರಿ ನೋಡಿದ್ದು ೧೯೮೬ರಲ್ಲಿ. ಪಿಯುಸಿ ಸೈನ್ಸ್‌ನಲ್ಲಿ ನಾನು ಡಿಬಾರಾದ ವರ್ಷ ಅದು. ಖಿನ್ನತೆ ತಾಳಲಾರದೇ ಊರು ಬಿಟ್ಟು ಹೋಗಲು ನಿರ್ಧರಿಸಿದ್ದ ಹಾಗೂ ಹೊರಟೇ ಹೋಗಿದ್ದ ವರ್ಷವದು.

ಪಿಯುಸಿಯಲ್ಲಿ ಏಕೆ ಮತ್ತು ಹೇಗೆ ಡಿಬಾರಾದೆ ಎಂಬುದನ್ನು ಬರೆದರೆ ಅದೇ ದೊಡ್ಡ ಕತೆಯಾಗುವುದರಿಂದ ಸದ್ಯಕ್ಕೆ ಬೇಡ. ಆ ವರ್ಷದ ಬೇಸಿಗೆ ರಜೆಗಳು ಮುಗಿದು ಎಂದಿನಂತೆ ಕಾಲೇಜುಗಳು ಶುರುವಾಗಿದ್ದವು. ಆಗ ಧಾರವಾಡ ಜಿಲ್ಲೆಗೆ ಸೇರಿದ್ದ, ಈಗ ಗದಗ್ ಜಿಲ್ಲೆಯಲ್ಲಿರುವ ರೋಣ ತಾಲ್ಲೂಕಿನ ನರೇಗಲ್ ಪಟ್ಟಣದ ಸೆರಗಿನಲ್ಲಿರುವ ಪುಟ್ಟ ಹಳ್ಳಿ ಕೋಡಿಕೊಪ್ಪದಲ್ಲಿ ನಾನು ರೂಮು ಮಾಡಿಕೊಂಡಿದ್ದೆ. ಏಳಡಿ ಉದ್ದ ಹಾಗೂ ಐದಡಿ ಅಗಲವಿದ್ದ ಪುಟ್ಟ ರೂಮಿನಲ್ಲಿ, ನನ್ನ ಸಹಪಾಠಿಯೊಬ್ಬನೊಂದಿಗೆ ವಾಸವಾಗಿದ್ದೆ. ಅವನ ಬಿ.ಎಸ್ಸಿ. ತರಗತಿಗಳು ಬೆಳಿಗ್ಗೆ ೭ಕ್ಕೇ ಶುರುವಾಗುತ್ತಿದ್ದರಿಂದ, ನಾನು ಕಣ್ಣು ಬಿಡುವಷ್ಟರಲ್ಲಿ ಅವ ಕಾಲೇಜಿಗೆ ಹೋಗಿಯಾಗಿರುತ್ತಿತ್ತು.

ಡಿಬಾರಾಗಿದ್ದರಿಂದ ಒಂದು ವರ್ಷದವರೆಗೆ ಪರೀಕ್ಷೆ ಬರೆಯುವಂತಿರಲಿಲ್ಲ. ತರಗತಿಗಳಿಗೂ ಹೋಗುವಂತಿರಲಿಲ್ಲ. ಅವು ಬಿರು ಮಳೆಯ ದಿನಗಳು. ಬಾಗಿಲು ತೆರೆದರೆ ಹೊರಗೆ ಜಡಿ ಮಳೆ. ಮಂಕಾದ ಆಗಸ. ಅದಕ್ಕಿಂತ ಮಂಕಾದ ಮನಸ್ಸು.

ಕಾಲೇಜಿಗೆ ಹೋಗುವಂತಿರಲಿಲ್ಲ. ಕಳೆದ ವರ್ಷ ಚೆನ್ನಾಗಿ ಓದಿದ್ದೆನಾದ್ದರಿಂದ ಹಾಗೂ ಪರೀಕ್ಷೆಗಿನ್ನೂ ಒಂದು ವರ್ಷ ಬಾಕಿ ಇದ್ದುದರಿಂದ, ಪುಸ್ತಕದ ಮುಖ ನೋಡಲು ಮನಸ್ಸಾಗುತ್ತಿರಲಿಲ್ಲ. ಮನೆ ಮಾಲೀಕ ಸಂಜೆ ೬ರಿಂದ ಬೆಳಗಿನ ೬ರವರೆಗೆ ಮಾತ್ರ ವಿದ್ಯುತ್ ಸಂಪರ್ಕ ಕೊಡುತ್ತಿದ್ದುದರಿಂದ, ಮಳೆಗಾಲದ ಬೆಳಗಿನ ಸಮಯ ರೂಮಿನಲ್ಲಿ ಕತ್ತಲು ತುಂಬಿರುತ್ತಿತ್ತು. ಆ ಅರೆಗತ್ತಲಿನ ಮಂಕು ವಾತಾವರಣದಲ್ಲಿ ಪಿಳಿಪಿಳಿ ಕಣ್ಬಿಡುತ್ತಾ ಗತಕಾಲವನ್ನು ನೆನಪಿಸಿಕೊಂಡು ಕೂಡುತ್ತಿದ್ದೆ.

ನಿಜಕ್ಕೂ ಕೆಟ್ಟ ದಿನಗಳವು.

ಮನಸ್ಸು ಬಿಚ್ಚಿ ಮಾತಾಡಬಲ್ಲಂಥ ಒಬ್ಬನೇ ಒಬ್ಬ ಗೆಳೆಯನಿಲ್ಲದ, ಜೇಬಿನಲ್ಲಿ ಹಣವಿಲ್ಲದ, ಮಾಡಲು ಕೆಲಸವಿಲ್ಲದ, ಓದಲು ಆಸಕ್ತಿಯಿಲ್ಲದ ದರಿದ್ರ ದಿನಗಳವು. ಹಾಗೆ ನೋಡಿದರೆ ನಾನು ಶ್ರದ್ಧಾವಂತ ವಿದ್ಯಾರ್ಥಿ. ಈಗಲೂ ನನ್ನದು ಅದೇ ಮನಃಸ್ಥಿತಿ. ಕಾಲೇಜು, ಟ್ಯೂಶನ್, ಅರ್ಧ ಗಂಟೆಯ ಸಾಧಾರಣ ಅಡುಗೆ ಬಿಟ್ಟರೆ ನನ್ನ ಬಹುತೇಕ ಸಮಯ ಪುಸ್ತಕಗಳೊಂದಿಗೇ ಇರುತ್ತಿತ್ತು. ಈಗ ಅವೆಲ್ಲ ಚಟುವಟಿಕೆಗಳು ಇಲ್ಲವಾಗಿ, ಚಿಂತೆ ಮಾಡುವುದೊಂದೇ ಪೂರ್ಣಾವಧಿ ಕೆಲಸವಾಗಿತ್ತು.

ಹೊರಗೆ ಬಿರುಮಳೆ. ಒಳಗೆ ನೆನಪಿನ ಹೊಳೆ.

ಎರಡೇ ವಾರಗಳಲ್ಲಿ ಸಾಕುಸಾಕಾಗಿ ಹೋಯಿತು. ಓಡುವ ಕುದುರೆಯ ಕಾಲು ಮುರಿಯುವುದಕ್ಕಿಂತ ಕೆಟ್ಟದ್ದು ಇನ್ನೇನಿರುತ್ತದೆ? ಒಂದೆಡೆ ಪುಸ್ತಕಗಳನ್ನು ಕಂಡರಾಗದ ಮನಃಸ್ಥಿತಿ. ಇನ್ನೊಂದೆಡೆ ಪೈಸೆ ಪೈಸೆಯನ್ನೂ ಲೆಕ್ಕ ಹಾಕಿ ಬಳಸಬೇಕಾದ ದುಃಸ್ಥಿತಿ. ಹೊರಗೆ ಹೋಗಲಾಗದ, ಒಳಗೂ ಇರಲಾಗದ ಪರಿಸ್ಥಿತಿ ನನ್ನನ್ನು ಹಿಂಡಿಹಾಕಿತು. ಇನ್ನು ಹೀಗೆ ಇದ್ದರೆ ಸತ್ತೇ ಹೋಗುತ್ತೇನೆ ಎಂದು ತೀವ್ರವಾಗಿ ಅನ್ನಿಸಿದಾಗ, ಓಡಿ ಹೋಗಲು ನಿರ್ಧರಿಸಿದೆ.

ಬಹುಶಃ ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಇಂಥದೊಂದು ಮನಃಸ್ಥಿತಿಗೆ ಬರುತ್ತಾನೆ ಅನಿಸುತ್ತದೆ. ಈಗಿರುವ ಬದುಕು ಹಿಂಡತೊಡಗಿದಂತೆ, ಕಾಣದ ಜಗತ್ತು ಕರೆಯತೊಡಗುತ್ತದೆ. ದುರಸ್ತಿಯಾಗದ ಈಗಿನ ಬದುಕಿಗಿಂತ, ಏನೂ ಗೊತ್ತಿರದ ಬದುಕಿನೆಡೆಗೆ ಮನಸ್ಸು ತುಡಿಯತೊಡಗುತ್ತದೆ. ಕಾಣದ ಜಗತ್ತಿನ ವಿಚಿತ್ರ ಆಕರ್ಷಣೆ ಸೆಳೆಯತೊಡಗುತ್ತದೆ. ಅಲ್ಲಿ ಪರಿಸ್ಥಿತಿ ಈಗಿನದಕ್ಕಿಂತ ನಿಕೃಷ್ಟವಾಗಿರಲಾರದು ಎಂಬ ಅನಿಸಿಕೆ ಬಲಗೊಳ್ಳುತ್ತ ಹೋದಂತೆ, ಎದ್ದು ಹೋಗಬೇಕೆನ್ನುವ ಉತ್ಕಟತೆ ಉಕ್ಕತೊಡಗುತ್ತದೆ.

ಬಿರು ಮಳೆಯ ೧೯೮೬ರ ದಿನಗಳು ಅಂಥದೊಂದು ಬಯಕೆಯನ್ನು ನನ್ನೊಳಗೆ ಬಲಗೊಳಿಸುತ್ತ ಹೋದವು.

ಅವತ್ತೊಂದಿನ ಮನಸ್ಸು ತುಂಬಾ ಬಳಲಿತ್ತು. ಊಟ ಮಾಡಲೂ ಮನಸ್ಸಾಗಲಿಲ್ಲ. ಬೆಳಿಗ್ಗೆಯಿಂದ ಸುಮ್ಮನೇ ಕೂತವನಲ್ಲಿ ಸಾವಿರಾರು ವಿಚಾರಗಳು ಉಕ್ಕುತ್ತಿದ್ದವು. ಪರಿಸ್ಥಿತಿ ಬದಲಾಗದೇ ಇದ್ದಾಗ, ನಾನಾದರೂ ಬದಲಾಗಬೇಕು ಎಂದು ನಿರ್ಧರಿಸಿದೆ. ಮಧ್ಯಾಹ್ನದ ಹೊತ್ತಿಗೆ ಮನಸ್ಸು ದೃಢವಾಯಿತು. ಒಂದು ಚೀಲದಲ್ಲಿ ಒಂದು ಜೊತೆ ಉಡುಪು, ಟವೆಲ್, ಒಂದು ತಂಬಿಗೆ, ಒಂದು ನೋಟ್‌ಬುಕ್ ಇಟ್ಟುಕೊಂಡು, ಟ್ರಂಕಿನಲ್ಲಿದ್ದ ಚಿಲ್ಲರೆ ಕಾಸನ್ನೆಲ್ಲ ಜೇಬೊಳಗೆ ತುಂಬಿಕೊಂಡು ರೂಮಿಗೆ ಬಾಗಿಲು ಜಡಿದು ೧ ಕಿಮೀ ದೂರವಿದ್ದ ನರೇಗಲ್‌ನ ಬಸ್‌ಸ್ಟ್ಯಾಂಡ್‌ನತ್ತ ಹೊರಟುಬಿಟ್ಟೆ.

ಗದಗ್‌ನತ್ತ ಹೊರಟ ಬಸ್ಸೇರಿದಾಗ ಆಗಸ ಮತ್ತೆ ಮಂಕಾಗಿತ್ತು.

ಗದಗ್ ಬಸ್‌ನಿಲ್ದಾಣದಲ್ಲಿ ಇಳಿದಾಗಲೂ ಎತ್ತ ಹೋಗಬೇಕೆಂಬುದು ಸ್ಪಷ್ಟವಾಗಿರಲಿಲ್ಲ. ಚಿತ್ರದುರ್ಗದ ಹತ್ತಿರ ಅಲ್ಲೆಲ್ಲೋ ಮಲ್ಲಾಡಿಹಳ್ಳಿಯಲ್ಲಿ ಸ್ವಾಮಿಗಳೊಬ್ಬರು ಯೋಗಾಸನ ಕಲಿಸುತ್ತಾರೆ ಎಂಬುದನ್ನು ಎಲ್ಲಿಯೋ ಓದಿದ್ದು ನೆನಪಾಯ್ತು. ಅಲ್ಲಿಗೆ ಹೋಗಬೇಕೆಂದು ಆ ಕ್ಷಣಕ್ಕೆ ನಿರ್ಧರಿಸಿಬಿಟ್ಟೆ. ಯಾರನ್ನೋ ವಿಚಾರಿಸಿದಾಗ, ಹುಬ್ಬಳ್ಳಿಗೆ ಹೋದರೆ, ಚಿತ್ರದುರ್ಗಕ್ಕೆ ಸಾಕಷ್ಟು ಬಸ್‌ಗಳು ಸಿಗುತ್ತವೆ ಎಂಬ ಉತ್ತರ ಸಿಕ್ಕಿತು. ಸರಿ ಹುಬ್ಬಳ್ಳಿ ಬಸ್ಸೇರಿದೆ.

ಅದೇ ಮೊದಲ ಬಾರಿಗೆ ನಾನು ಹುಬ್ಬಳ್ಳಿಯತ್ತ ಹೊರಟಿದ್ದೆ. ಹುಟ್ಟಿದಾಗಿನಿಂದ ಗದಗ್ ಬಿಟ್ಟು ಬೇರೆ ದೊಡ್ಡ ಊರನ್ನೇ ನೋಡಿರಲಿಲ್ಲ ನಾನು!

ಕೌತುಕದಿಂದ ಬಸ್ ಹೊರಗೆ ದಿಟ್ಟಿಸುತ್ತ, ಹುಬ್ಬಳ್ಳಿಯೆಂಬ ನಗರವನ್ನು ತಲುಪಿದಾಗ ಸಂಜೆ ಕತ್ತಲು. ಆದರೆ, ಬಸ್ಸು ನಿಲ್ದಾಣದತ್ತ ಹೋಗಲಿಲ್ಲ. ಅವತ್ತು ಯಾವುದೋ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಬಂದ್ ಆಚರಿಸಲಾಗುತ್ತಿತ್ತು. ಹೀಗಾಗಿ, ನಾನಿದ್ದ ಬಸ್ ಮುಖ್ಯರಸ್ತೆಯಲ್ಲೇ ನಿಂತುಬಿಟ್ಟಿತು.

ನಾನು ಫಜೀತಿಯಲ್ಲಿ ಸಿಲುಕಿದ್ದೆ.

ನಾನು ನೋಡುತ್ತಿದ್ದ ಮೊದಲನೇ ದೊಡ್ಡ ಊರದು. ಅಪರಿಚಿತ ಊರು. ಮಳೆಗಾಲದ ಸಂಜೆ ಬೇರೆ. ಕೈಯಲ್ಲಿ ಸಾಕಷ್ಟು ದುಡ್ಡು ಬೇರೆ ಇಲ್ಲ. ಇಂಥದ್ದರಲ್ಲಿ ಬಸ್ಸಿಲ್ಲದ ಪರಿಸ್ಥಿತಿ. ಏನು ಮಾಡಬೇಕೆಂಬುದೇ ತೋಚದಂತಾಗಿ ಮಂಕನಂತೆ ರಸ್ತೆಯಲ್ಲಿ ನಿಂತುಬಿಟ್ಟೆ.

ಆದರೆ, ನಾನೊಬ್ಬನೇ ಇದ್ದಿಲ್ಲ. ನೂರಾರು ಜನ ನನ್ನ ಹಾಗೆ ರಸ್ತೆಯ ಬದಿ ನಿಂತಿದ್ದರು. ಎಲ್ಲೆಲ್ಲೋ ಹೋಗಬೇಕಾದವರೆಲ್ಲ, ಅಲ್ಲಲ್ಲೇ ಚದುರಿಹೋಗಿದ್ದರು. ಬಂದ್‌ಗೆ ಕಾರಣರಾದವರನ್ನು ಶಪಿಸುತ್ತ, ರಸ್ತೆಯಲ್ಲಿ ಹೊರಟ ಪ್ರತಿಯೊಂದು ವಾಹನಕ್ಕೂ ಕೈ ಮಾಡುತ್ತ, ಅದು ನಿಂತಾಗ ಓಡಿ ಹೋಗಿ, ಅದೆಲ್ಲಿಗೆ ಹೋಗುತ್ತದೆ ಎಂದು ವಿಚಾರಿಸುತ್ತ, ಹಾಗೆ ನಿಂತ ಪ್ರತಿಯೊಂದು ವಾಹನದಲ್ಲೂ ಒಂದಿಷ್ಟು ಜನ ಹತ್ತುತ್ತ- ಒಟ್ಟಿನಲ್ಲಿ ಅಲ್ಲೊಂದು ಗೊಂದಲಪುರವೇ ನಿರ್ಮಾಣವಾಗಿತ್ತು.

ಗೊಂದಲ ಈಗ ನನ್ನೊಳಗೆ ಮಾತ್ರವಲ್ಲ, ನನ್ನ ಹೊರಗೂ ದೊಡ್ಡ ಪ್ರಮಾಣದಲ್ಲಿತ್ತು.

ಅಷ್ಟೊತ್ತಿಗೆ ಒಂದು ಆಟೊ ಬಂತು. ನನ್ನ ಸುತ್ತಮುತ್ತ ಇದ್ದವರು ಎಂದಿನಂತೆ ಅದರತ್ತ ಓಡಿ ಹೋಗಿ, ಎಲ್ಲಿಗೆ ಹೊರಟಿದೆ ಎಂದು ವಿಚಾರಿಸಿದರು. ನೋಡನೋಡುತ್ತಲೇ ಮೂವರು ಆಟೊ ಏರಿ ಕೂತೇಬಿಟ್ಟರು. ಆಟೊ ಚಾಲಕ ಧಾರವಾಡ, ಧಾರವಾಡ ಎಂದು ಕೂಗಿದ.

ಅದನ್ನು ಕೇಳುತ್ತಲೇ, ನಾನು ಧಾರವಾಡಕ್ಕೆ ಹೋಗಬೇಕು ಅಂತ ದಿಢೀರನೇ ನಿರ್ಧರಿಸಿಬಿಟ್ಟೆ.

ಅದಕ್ಕೆ ಕಾರಣ, ನನ್ನ ದೊಡ್ಡಣ್ಣ ಧಾರವಾಡ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದುದು. ಇವತ್ತು ಆತನ ರೂಮಿನಲ್ಲಿದ್ದು, ಬೆಳಿಗ್ಗೆ ಚಿತ್ರದುರ್ಗಕ್ಕೆ ಬಸ್ ಹಿಡಿದರಾಯ್ತು ಎಂದು ಯೋಚಿಸಿ, ಆಟೋ ಚಾಲಕನ ಹತ್ತಿರ ಚಾರ್ಜೆಷ್ಟು ಎಂದು ಕೇಳಿದೆ. ತೆಳ್ಳಗೇ ಕುಳ್ಳಗೇ ಇದ್ದ ನನ್ನನ್ನು ಹೈಸ್ಕೂಲ್ ಹುಡುಗ ಎಂದು ಯೋಚಿಸಿದನೋ, ನನ್ನ ಕಂದಿದ ಮುಖ ಕಂಡು ಮರುಕಗೊಂಡನೋ ಅಥವಾ ನನ್ನ ಅದೃಷ್ಟವೋ ಗೊತ್ತಿಲ್ಲ, ಐದು ರೂಪಾಯಿ ಕೊಡು ಸಾಕು ಎಂದ.

ನೆನಪಿಸಿಕೊಂಡರೆ ಇವತ್ತೂ ನಂಬಲು ಕಷ್ಟವಾಗುತ್ತದೆ. ಬಂದ್, ಮಳೆಗಾಲ, ಮೂರೂ ಸಂಜೆ ಒಟ್ಟೊಟ್ಟಿಗೇ ಒಕ್ಕರಿಸಿದ ಆ ದಿನದಲ್ಲಿ, ಅದೆಲ್ಲೋ ಹುಬ್ಬಳ್ಳಿಯ ಹೆದ್ದಾರಿಯ ಮಧ್ಯದಿಂದ ಧಾರವಾಡದ ಬಸ್ ನಿಲ್ದಾಣದವರೆಗೆ ನನ್ನನ್ನು ಕರೆದೊಯ್ಯಲು ಆಟೊ ಚಾಲಕ ತೆಗೆದುಕೊಂಡಿದ್ದು ಕೇವಲ ಐದು ರೂಪಾಯಿ ಮಾತ್ರ.

ಆಗ ಧಾರವಾಡ ಮತ್ತು ಹುಬ್ಬಳ್ಳಿ ನಡುವೆ ಎಷ್ಟು ದೂರ ಎಂಬುದು ಕೂಡ ನನಗೆ ಗೊತ್ತಿರಲಿಲ್ಲ. ಐದಾರು ಕಿಮೀ ಇರಬಹುದೇನೋ ಅಂತ ಅಂದುಕೊಂಡವನಿಗೆ ಮೈಲಿಗಲ್ಲು ನೋಡಿದಾಗ, ಎದೆ ಧಸಕ್ಕೆಂದಿತು.

ಧಾರವಾಡ ಇಪ್ಪತ್ಮೂರು ಕಿಮೀ ದೂರವಿತ್ತು. ಹೆಚ್ಚು ಕಡಿಮೆ ಕೊಪ್ಪಳದಿಂದ ನನ್ನೂರು ಅಳವಂಡಿಯವರೆಗಿನ ಅಂತರ!

ಡ್ರೈವರ್ ಹೇಳಿದ್ದು ಐದೇ ರೂಪಾಯಿಯಾ? ಎಂದು ನನಗೇ ಗೊಂದಲವಾಯಿತು. ಮತ್ತೊಮ್ಮೆ ಕೇಳಿ ಖಚಿತಪಡಿಸಿಕೊಂಡೆ. ಆತ ಕೇಳಿದ್ದು ಐದೇ ರೂಪಾಯಿ.

ಅತಿ ವಿರಳವಾಗಿ ಸಂಚರಿಸುತ್ತಿದ್ದ ಹೆದ್ದಾರಿಯಲ್ಲಿ ಹೊರಟ ಆಟೊ ಒಂದೊಂದೇ ಮೈಲುಗಲ್ಲನ್ನು ದಾಟಿದಾಗಲೂ ನನ್ನ ಮನಸ್ಸು, ನಿಜಕ್ಕೂ ಐದೇ ರೂಪಾಯಿಯಾ ಎಂದು ಪ್ರಶ್ನಿಸಿಕೊಳ್ಳುತ್ತಿತ್ತು. ಕೊನೆಗೆ ಕತ್ತಲಾಗಿ, ದೀಪಗಳೂ ಇಲ್ಲದ ಕಾರ್ಗತ್ತಲು ಕವಿದಾಗ, ಅಲ್ಲಲ್ಲಿ ದೀಪಗಳಿದ್ದ ಊರಿನ ಛಾಯೆ ಗೋಚರಿಸಿತು. ದಟ್ಟ ಮರಗಳಿದ್ದ, ಸಣ್ಣಗೇ ಹನಿಯುತ್ತಿದ್ದ ಆ ಊರೇ ಧಾರವಾಡ ಎಂದು ಗೊತ್ತಾದಾಗ ನನ್ನ ಮನಸ್ಸಿನಲ್ಲಿ ಎಂಥದೋ ರೋಮಾಂಚನ.

ಧಾರವಾಡದ ರಸ್ತೆಗಳೂ ಬಹುತೇಕ ನಿರ್ಜನವಾಗಿದ್ದವು. ಅಲ್ಲಿಯೂ ಬಂದ್ ಇತ್ತಂತೆ.

ಕೊನೆಗೂ ಜಿಗಿ ಜಿಗಿ ಮಳೆಯಲ್ಲಿ ಬಸ್ ನಿಲ್ದಾಣದ ಹತ್ತಿರ ಬಂದಾಗ, ಕಂಡಿದ್ದು ಪೊಲೀಸ್ ವಾಹನಗಳು ಮಾತ್ರ. ಬಂದ್‌ನಿಂದಾಗಿ ಸಿಟಿ ಬಸ್‌ನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಆಟೊ ಇಳಿದು, ಐದು ರೂಪಾಯಿ ಕೊಟ್ಟು ಚಾಲಕನ ಮುಖ ನೋಡಿದೆ. ಆತ ತರಾತುರಿಯಿಂದ ಹಣವನ್ನು ಜೇಬಿಗಿಳಿಸುತ್ತ ಆಟೊ ಏರಿ ಹೊರಟುಹೋದ. ನಾನು ಅನಾಥನಂತೆ ಧಾರವಾಡದ ಬಸ್ ನಿಲ್ದಾಣದ ಎದುರು ನಿಂತಿದ್ದೆ.

ಧಾರವಾಡ ಎಂದಾಗ ಈಗಲೂ ನನಗೆ ನೆನಪಾಗುವುದು ನನ್ನ ಮೊದಲ ಭೇಟಿಯ ದಿನ. ಮುಂದೆ ಪ್ರಜಾವಾಣಿ ವರದಿಗಾರನಾಗಿ ಧಾರವಾಡಕ್ಕೆ ಹೋದೆ. ಎರಡೂವರೆ ವರ್ಷ ಕೆಲಸ ಮಾಡಿದೆ. ನನ್ನ ವೃತ್ತಿ ಜೀವನದ ಅತ್ಯುತ್ತಮ ದಿನಗಳವು. ನೂರಾರು ವಿಶೇಷ ವರದಿಗಳನ್ನು, ಲೇಖನಗಳನ್ನು ಅಲ್ಲಿಂದ ಬರೆದಿದ್ದೇನೆ. ನನ್ನ ಬದುಕಿಗೆ ಹೊಸತನ ತಂದುಕೊಟ್ಟ ಊರದು. ಆ ಊರಿನೊಂದಿಗೆ ಸಾವಿರಾರು ನೆನಪುಗಳು ಬೆರೆತುಕೊಂಡಿವೆ.

ಇವತ್ತೇಕೋ ಈ ಊರು ಇನ್ನಿಲ್ಲದಂತೆ ನೆನಪಾಗತೊಡಗಿದೆ. ಅದರ ಬಗ್ಗೆ ಬರೆಯಹೊರಟವನು ಮತ್ತೇನನ್ನೋ ಬರೆದುಬಿಟ್ಟೆ. ಅಷ್ಟಕ್ಕೂ, ಧಾರವಾಡ ಎಂದ ಕೂಡಲೇ ನನ್ನ ನೆನಪಿಗೆ ಬರುವುದು ಮೊದಲ ಭೇಟಿಯೇ. ಹೀಗಾಗಿ ಅದರ ಬಗ್ಗೆ ಬರೆಯದೇ ಇರಲಾಗಲಿಲ್ಲ.

ಕಾಡುವ ನೆನಪುಗಳ ಬಗ್ಗೆ ಮತ್ತೆಂದಾದರೂ ಬರೆದುಕೊಳ್ಳುತ್ತೇನೆ. ಅಲ್ಲಿಯವರೆಗೆ ಅವು ಮಾಗುತ್ತಿರಲಿ. ಧಾರವಾಡದ ಜಿಟಿಜಿಟಿ ಮಳೆಗೆ, ಕುಳಿರ್ಗಾಳಿಗೆ, ಸಣ್ಣ ಚಳಿಗೆ ತಾಗದಂತೆ ಎದೆಯೊಳಗೆ ಬೆಚ್ಚಗಿರಲಿ.

- ಚಾಮರಾಜ ಸವಡಿ

2 comments:

Anonymous said...

beutiful......dahrwaddne haage....thankyou

umesh desai said...

ಸವಡಿ ಸರ್ ಖುಷಿಕೊಡ್ತು ನಿಮ್ಮ ಲೇಖನ.ಸಿಹಿಕಹಿ ಎರಡೂ ಥರದ ನೆನಪು ಇರ್ತಾವಲ್ಲ.
ಬಿಡುವಿದ್ದಾಗ www.vartamaana.blogspot.com ಗೆ ಬರ್ರಿ.ನಿಮ್ಮಂಥವರ ಸಲಹಾ ಅಗತ್ಯ ಅದ.