ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ

6 Feb 2011

ನಾವೇಕೆ ಬರೆಯುತ್ತೇವೆ ಎಂಬುದು ಹಳೇ ಪ್ರಶ್ನೆ. ಉತ್ತರಿಸಲು ತಡವರಿಸುವಂಥ ಪ್ರಶ್ನೆ. ಹೀಗಾಗಿ ಎಷ್ಟೋ ಸಲ ಕೇಳಿಕೊಂಡಿದ್ದೇನೆ: ಈ ಬ್ಲಾಗ್ ಬರೆಯುವುದು ಏತಕ್ಕಾಗಿ?

ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ವಲಸೆ ಬಂದಾಗೆಲ್ಲ ಇಂಥದೊಂದು ಅನಿವಾರ್ಯತೆ ಕಾಡಿದೆ. ನನ್ನ ಬರವಣಿಗೆಗೆ ವೇದಿಕೆ ಸೃಷ್ಟಿಸಿಕೊಳ್ಳುವ ಅನಿವಾರ್ಯತೆಯಿಂದಾಗಿ ಈ ಬ್ಲಾಗ್ ಶುರು ಮಾಡಿದೆ.

ಆದರೆ, ಕೆಲವೇ ವರ್ಷಗಳ ಹಿಂದೆ ಇಂಥ ಸೌಲಭ್ಯವಿದ್ದಿಲ್ಲ. ಬಿಟ್ಟು ಬಂದ ಪತ್ರಿಕೆಗಳವರು ನನ್ನ ಬರಹಗಳನ್ನು ಹಾಕುತ್ತಿದ್ದಿಲ್ಲ. ಅದಕ್ಕೆ ಕಾರಣಗಳು ಹಲವಾರು. ಹಾಕುವುದಿಲ್ಲ ಎಂದು ಗೊತ್ತಾದಾಗ, ಅನಿವಾರ್ಯವಾಗಿ ನೋಟ್‌ಬುಕ್‌ನಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆ. ಅವನ್ನು ಒಬ್ಬನೇ ಓದಿ ಖುಷಿಪಡುತ್ತಿದ್ದೆ. ನನ್ನ ಎಷ್ಟೋ ಬರವಣಿಗೆಗಳು ಈಗಲೂ ಹಾಗೇ ಉಳಿದಿವೆ. ಒಂಥರಾ ಖಾಸಗಿ ಗುಟ್ಟುಗಳಂತೆ.

ಇನ್ನು ಬರಹಕ್ಕೆ ಸಂಬಂಧಿಸಿದಂತೆ ನಾನು ಕೆಲವೊಂದು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಅವು ಕೇವಲ ನನಗಾಗಿ ಮಾಡಿಕೊಂಡಂಥವು.

ಬಿಟ್ಟು ಬಂದ ಸಂಸ್ಥೆಯ ವಿರುದ್ಧ ನಾನು ಬರೆಯುವುದಿಲ್ಲ. ಅಲ್ಲಿಯ ಒಳಜಗಳಗಳು, ಜನಗಳು, ಘಟನೆಗಳ ಬಗ್ಗೆ ಋಣಾತ್ಮಕವಾಗಿ ಬರೆಯಬಾರದು ಎಂಬುದು ಅಂಥದೊಂದು ನಿಯಮ. ಇಲ್ಲಿನ್ನು ಇರಲು ಸಾಧ್ಯವೇ ಇಲ್ಲ ಎಂದು ಅನಿಸಿದಾಗ ಸಂಸ್ಥೆಯೊಂದನ್ನು ಬಿಟ್ಟು ಹೊರಡುವುದು ಅನಿವಾರ್ಯ. ಹೀಗಿದ್ದರೂ, ಬಿಟ್ಟು ಬಂದ ಸಂಸ್ಥೆಯ ವಿರುದ್ಧ, ಅಲ್ಲಿದ್ದ ವ್ಯಕ್ತಿಗಳ ವಿರುದ್ಧ ಬರೆಯಬಾರದು ಎಂಬ ನಿಯಮವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ.

ಹಾಗೆಯೇ ನನ್ನ ಏರ್‌ಫೋರ್ಸ್ ದಿನಗಳ ಬಗ್ಗೆ. ಈ ಕುರಿತು ಇದುವರೆಗೆ ನಾನು ಏನನ್ನೂ ಬರೆಯಲು ಹೋಗಿಲ್ಲ. ಬಹುಶಃ ಬರೆಯಲಾರೆ. ಹಾಗೆ ನೋಡಿದರೆ ಅದು ನಾನು ಸೇರಿದ್ದ ಮೊದಲ ಕೆಲಸ. ಮೊದಲ ತಲ್ಲಣ. ಮೊದಲ ವೃತ್ತಿ ರೋಮಾಂಚನವೂ ಹೌದು. ಹೀಗಿದ್ದರೂ,  ಆ ವೃತ್ತಿಯ ಬಗ್ಗೆ ನಾನು ಬರೆಯಲಾರೆ. ನನ್ನ ಪಾಲಿಗೆ ಅದೊಂದು ಮುಚ್ಚಿದ ಪುಸ್ತಕ.

ನಾನು ಕೆಲಸ ಮಾಡಿದ ಬಹುತೇಕ ಸಂಸ್ಥೆಗಳು, ಮಾಡಿದ ತರಹೇವಾರಿ ಕೆಲಸಗಳ ಬಗ್ಗೆ ನಾನು ಬರೆದಿಲ್ಲ. ಸದ್ಯಕ್ಕಂತೂ ಬರೆಯುವುದಿಲ್ಲ. ಇನ್ನು ಜೊತೆಗೆ ಕೆಲಸ ಮಾಡಿದ ವ್ಯಕ್ತಿಗಳ ಬಗ್ಗೆ ಕೂಡ ಇಂಥದೇ ಅಲಿಖಿತ ನಿಯಮವೊಂದನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ತೀರಾ ಬರೆಯಬೇಕಾದಾಗ, ಒಂದೆರಡು ಒಳ್ಳೆಯ ಮಾತು ಬರೆಯುವುದನ್ನು ಬಿಟ್ಟರೆ, ಕೆಟ್ಟದ್ದನ್ನು ಬರೆದಿದ್ದು ಬಲು ಅಪರೂಪ.

ಖಿನ್ನತೆ ತೀವ್ರವಾಗಿ ಕಾಡಿದಾಗ, ನನ್ನ ಬದುಕಿನ ಹಲವಾರು ವಿವಿಧ ಘಟ್ಟಗಳು ಕಣ್ಮುಂದೆ ಬರುತ್ತವೆ. ಕೆಲಸ ಮಾಡಿದ ಸಂಸ್ಥೆಗಳು, ಅಲ್ಲಿನ ವ್ಯಕ್ತಿಗಳು, ಘಟನೆಗಳು ಕಣ್ಮುಂದೆ ತೇಲುತ್ತವೆ. ಮನಸ್ಸು ಅರಳಿಸಿದ, ಮುದುಡಿಸಿದ ಘಟನೆಗಳು ನೆನಪಾಗುತ್ತವೆ. ಆದರೆ, ಅವು ಕೇವಲ ನೆನಪಿಗೆ ಮತ್ತು ಖಾಸಗಿ ಮನನಕ್ಕೆ ಮಾತ್ರ ಸೀಮಿತ. ಅವನ್ನು ನಾನು ಬರೆಯಲಾರೆ. ಕನಿಷ್ಟ, ಈಗಿನ ಪರಿಸ್ಥಿತಿಯಲ್ಲಿ ಬರೆಯಲಾರೆ. ಮುಂದ್ಯಾವತ್ತೋ ಅಧಿಕೃತವಾಗಿ ವೃತ್ತಿ ಬದುಕಿನಿಂದ ಹೊರಬಂದು, ನನ್ನಿಷ್ಟದಂತೆ ಬದುಕುವಾಗ ಬರೆದೇನು. ಅಲ್ಲಿಯವರೆಗೆ, ಆ ನೆನಪುಗಳು ಖಾಸಗಿ ಸಂಚಾರಕ್ಕೆ ಮಾತ್ರ ಸೀಮಿತ.

ಏಕೆ ಬರೆಯಬಾರದು? ಅಂತ ಅದೆಷ್ಟೋ ಸಲ ಕೇಳಿಕೊಂಡಿದ್ದೇನೆ. ಖಚಿತ ಉತ್ತರ ಸಿಕ್ಕಿಲ್ಲ. ಬಹುಶಃ ಸಿಗಲಿಕ್ಕಿಲ್ಲ. ಸಂಸ್ಥೆಯೊಂದನ್ನು ಬಿಟ್ಟು ಬಂದ ವ್ಯಕ್ತಿಗೆ ಹೇಳಲು ಸಾಕಷ್ಟು ವಿಷಯಗಳಿರುತ್ತವೆ. ಹೇಳಿಕೊಳ್ಳಬೇಕಾದ ಒತ್ತಡವಿರುತ್ತದೆ. ಹೇಳಿ ದಕ್ಕಿಸಿಕೊಳ್ಳುವ ಸ್ವಾತಂತ್ರ್ಯವೂ ಇರುತ್ತದೆ. ಅದು ನನಗೂ ಗೊತ್ತು. ಆದರೂ, ಹೇಳಬಾರದು ಎಂಬ ನಿಯಮವನ್ನು ನಾನು ಪಾಲಿಸಿಕೊಂಡು ಬರುತ್ತಿರುವುದೇತಕ್ಕೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇದುವರೆಗೆ ಸಿಕ್ಕಿಲ್ಲ.
 
*****

ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ ಎಂಬ ಸಾಲು ಏಕೋ ಇವತ್ತು ಪದೆ ಪದೆ ಕಾಡತೊಡಗಿದೆ. ಜೀವನದಲ್ಲಿ ನಾವೆಲ್ಲ ಏತಕ್ಕೋ ಹಂಬಲಿಸುತ್ತೇವೆ. ಕೈಗೆಟಕುವಷ್ಟು ಹತ್ತಿರದಲ್ಲಿದೆ ಎಂದಾಗಲಂತೂ ಅದು ವಿಚಿತ್ರ ಆಶಾಭಾವ ಹುಟ್ಟಿಸುತ್ತದೆ. ಬದುಕಿಗೆ ಹೊಸ ಭರವಸೆ ತುಂಬುತ್ತದೆ. ಜೀವನದ ಅತಿ ದೊಡ್ಡ ಖಾಲಿತನ ಇನ್ನು ತುಂಬಿತು ಎಂಬ ನೆಮ್ಮದಿಗೆ ಕಾರಣವಾಗುತ್ತದೆ.

ಆದರೆ, ನೋಡನೋಡುತ್ತಿದ್ದಂತೆ, ಒಂದು ಘಟ್ಟದಲ್ಲಿ ಆ ಭರವಸೆ ಕರಗತೊಡಗುತ್ತದೆ. ನೆಚ್ಚಿಕೊಂಡ, ಪ್ರೀತಿಸಿದ್ದ ಆ ವ್ಯಕ್ತಿ, ವೃತ್ತಿ, ಸಂಸ್ಥೆಯ ಮಿತಿ ತಳಮಳ ತರತೊಡಗುತ್ತದೆ. ಅಷ್ಟೊಂದು ಹಚ್ಚಿಕೊಂಡಿದ್ದ, ಅಷ್ಟೊಂದು ನೆಚ್ಚಿಕೊಂಡಿದ್ದ ಅದು ಇನ್ನು ನನ್ನ ಪಾಲಿಗಿಲ್ಲ ಎಂಬ ಭಾವ ತೀವ್ರ ನೋವುಂಟು ಮಾಡುತ್ತದೆ.

ಹಾಗಂತ ಆ ವ್ಯಕ್ತಿ, ಸಂಸ್ಥೆ ಅಥವಾ ಭಾವನೆ ನಮ್ಮಿಂದ ದೂರವಾಗಿರುವುದಿಲ್ಲ. ಆದರೆ, ಮಾನಸಿಕವಾಗಿ ಅಂತರವೊಂದು ಸೃಷ್ಟಿಯಾಗಿರುತ್ತದೆ. ಆ ಅಂತರ ಕ್ರಮೇಣ ಬೆಳೆಯುತ್ತ ಹೋಗುತ್ತದೆ. ಒಳಹರಿವಿಲ್ಲದೇ ಕ್ರಮೇಣ ಭಾವನೆ ಸೊರಗುತ್ತದೆ. ಕನಸು ಕರಗುತ್ತದೆ.

ಅಂಥದೊಂದು ವಿಚಿತ್ರ ಸಂಘರ್ಷದಲ್ಲಿ ನಾನೀಗ ಸಿಲುಕಿದ್ದೇನೆ.

ಇದರಿಂದ ಹೊರಬರಬೇಕು. ಆದರೆ, ಹೇಗಂತ ಗೊತ್ತಾಗುತ್ತಿಲ್ಲ. ಇಷ್ಟು ದಿನಗಳವರೆಗೆ, ಅಡಿಗಡಿಗೂ ಕೈಹಿಡಿದು ಜೊತೆಗೆ ಬರುತ್ತಿದ್ದ ಮಗುವೊಂದು, ಇದ್ದಕ್ಕಿದ್ದಂತೆ ಕೈ ಕೊಸರಿ ಮುಂದೆ ಓಡಿದಂಥ ಭಾವನೆಯದು. ಅರೆರೆ, ನನ್ನ ಮಗು ನನ್ನಾಸರೆಯ ಹಂಗಿಲ್ಲದೇ ನಡೆಯುವುಷ್ಟು ದೊಡ್ಡದಾಯಿತು ಎಂಬ ಸಂತಸದ ಜೊತೆಗೆ, ಮುಗ್ಧತೆ ಉಕ್ಕಿಸುತ್ತಿದ್ದ ಆ ಕಂದನ ಮುದ್ದು ಪ್ರೀತಿ ಇನ್ನಿಲ್ಲ ಎಂಬ ವಾಸ್ತವ ನೋವುಕ್ಕಿಸುತ್ತದೆ. ಮನಸ್ಸು ಒಳಗಣ್ಣಾಗುತ್ತದೆ.

ಬದುಕಿನ ರೀತಿಯೇ ಹೀಗೆ. ಯಾವುದೋ ತಿರುವಿನಲ್ಲಿ ಬದುಕು ದಿಢೀರನೇ ಬದಲಾಗುತ್ತದೆ. ಆ ಕ್ಷಣದ ಅಯೋಮಯ, ಕಕ್ಕಾವಿಕ್ಕಿತನ ಅರಗಿಸಿಕೊಂಡು ಮುಂದಡಿ ಇಡುವವರೆಗೆ ಬರೀ ಗೊಂದಲ. ಬಹುಶಃ ಮುಂದೆಯೂ ಈ ಗೊಂದಲ ಆಗಾಗ ಕಾಡುತ್ತಲೇ ಇರುತ್ತದೆ. ಊರಾಚೆ ಬಿಟ್ಟುಬಂದ ಬೆಕ್ಕು, ಅದ್ಯಾವ ಜಾವದಲ್ಲೋ ಹಾಸಿಗೆ ಹತ್ತಿರ ಬಂದು ಒರಲುವಂತೆ, ನೆನಪುಗಳು ಮತ್ತೆ ಮತ್ತೆ ಉಕ್ಕುತ್ತಲೇ ಇರುತ್ತವೆ. ಮತ್ತೆಂದಿಗೂ ಆ ದಿನಗಳನ್ನು ನಾವು ಬದುಕಲಾರೆವು. ಆ ವ್ಯಕ್ತಿಗಳೊಂದಿಗೆ ಇರಲಾರೆವು. ಮತ್ತೆಂದಿಗೂ ಹಿಂದಿರುಗದ ಸೊಗಸದು.

ಅಂಥದೊಂದು ಗೊಂದಲದಲ್ಲಿ ಮುಳುಗಿಕೊಂಡು ಇದನ್ನು ಬರೆದಿದ್ದೇನೆ. ಕರಗಿಹೋದ ಪೆಪ್ಪರ್‌ಮಿಂಟ್‌ನ ಸವಿ ಬಾಯಲ್ಲಿ ಉಳಿದಿರುವಂತೆ, ಆ ನೆನಪುಗಳು ಹಾಗೇ ಉಳಿದುಬಿಟ್ಟಿವೆ. ಇದುವರೆಗೆ ಸವಿದಿದ್ದು ಭಾಗ್ಯವೆನಲೇ, ಇನ್ನಷ್ಟು ಸವಿಯಬೇಕಿತ್ತೆಂದು ಕೊರಗಲೇ?-

ಬರೀ ಗೊಂದಲ!

- ಚಾಮರಾಜ ಸವಡಿ

3 comments:

ವಿನಾಯಕ ಕೆ.ಎಸ್ said...

mattondu olleya baraha. chennagide nimma nirbandanegalu. but adarinda naavu enu saadisidevu annuvudannu innondu 3 varshada nantara aalochisi!
-kodasra

ಹರಿಹರಪುರ ಶ್ರೀಧರ್ said...

ಪ್ರಿಯ ಚಾಮರಾಜ್,
ಮನದಾಳದ ಭಾವನೆಗಳಿಗೆ ಅಕ್ಷರಕೊಡುವ ನಿಮ್ಮ ಪ್ರಯತ್ನವು ನನಗೆ ಇಷ್ಟವಾಗುತ್ತದೆ. ಅದೇ ವೇಳೆ ಅದೆಷ್ಟು ಕಷ್ಟನಿಶ್ಟುರಗಳ ಮಧ್ಯೆ ಬದುಕುತ್ತೀರಿ! ಎಂಬ ನೋವೂ ಆಗುತ್ತದೆ. ಏನ್ಮಾಡೋದು ಬದುಕೇ ಹೀಗೆ! ಸು:ಖ ದು:ಖಗಳ ಮಿಶ್ರಣ. ನನ್ನ ಬ್ಲಾಗ್ ವಾರ್ಷಿಕೋತ್ಸವಕ್ಕೆ ನಿಮ್ಮನ್ನು ಆಹ್ವಾನಿಸುತ್ತೀನೆಂದು ಹೇಳಿದ್ದೆ. ಡೇಟ್ ಕೂಡ ಕೇಳಿದ್ದೆ. ಆದರೆ ಡೇಟ್ ಜೊತೆಗೆ ಕಾರ್ಯಕ್ರಮಗಳ ಸ್ವರೂಪವೂ ವೆತ್ಯಾಸವಾಯ್ತು. ನಿಮಗೆ ಈ ಮೇಲಲ್ಲಿ ಆಮಂತ್ರಣ ತಲುಪಿತೇ? ಒಮ್ಮೆ ನನ್ನ ಬ್ಲಾಗ್ ಗೆ ಭೇಟಿನೀಡಿ. ನಿಮ್ಮ ಅನಿಸಿಕೆ ತಿಳಿಸಿ.ಅಂದಹಾಗೆ ಮತ್ತೊಮ್ಮೆ ನಿಮ್ಮ ಮೇಲ್ ವಿಳಾಸ ಕೊಡಿ
-ಹರಿಹರಪುರಶ್ರೀಧರ್
vedasudhe@gmail.com

vishwa said...

Houdu Sir Baduku baree gondalada goodenisuttide, ishtu kaala santoshdinda kaleda ee jeevakke Eega Baduku sukha dukha gala mishrana vendenisuttide. ondhashtu kinnate, mattondashtu Bhaya, ello Ondu kade Saadhaneya maargadalliddene, maarga maatra baree kallu mulluglinda tumbiiddu anta anisuttade, ottareyaage ommomme nanna daari sari ide endenisidre, mattondu baari tappu hejje ittiddineno annuva bhaya. Totally Life is Gondala