ಇಷ್ಟೇ ಸಾಕೆಂದಿದ್ದೆಯಲ್ಲೋ...

29 Oct 2009

‘ಇಷ್ಟಾದರೆ ಸಾಕು’ ಅಂತ ಎಷ್ಟೋ ಸಲ ಅಂದುಕೊಂಡಿರುತ್ತೇವೆ. ಒಂದು ಕೆಲಸ; ಬಾಡಿಗೆಯದಾದರೂ ಸರಿ, ಒಂದು ಚೆನ್ನಾಗಿರುವ ಮನೆ; ಖರ್ಚಿಗೆ ಒಂದಿಷ್ಟು ಹಣ; ಹರಟೆ ಹೊಡೆಯಲು ಒಂದಿಷ್ಟು ಸಮಾನ ಮನಸ್ಕರು- ಹೀಗೆ ಸಣ್ಣಪುಟ್ಟ ಅಗತ್ಯಗಳು ಇದ್ದರೆ ಸಾಕು ಅಂತ ನಾವೆಲ್ಲ ಎಷ್ಟು ಸಾರಿ ಅಂದುಕೊಂಡಿರಲ್ಲ?

ಎಷ್ಟೋ ಸಾರಿ ನಾವಂದುಕೊಂಡ ಆ ‘ಇಷ್ಟೇ ಸಾಕು’ ಎಂಬ ಅಗತ್ಯಗಳು ಈಡೇರಿಬಿಡುತ್ತವೆ. ಮಾಡಲೊಂದು ಕೆಲಸ, ಪರವಾಗಿಲ್ಲ ಎಂಬ ಸಂಬಳ, ಇರಲೊಂದು ಗೂಡು, ಹಾಡಲೊಂದು ಹಾಡೂ ದಕ್ಕಿಬಿಡುತ್ತವೆ. ಒಂದಿಷ್ಟು ದಿನಗಳ ಕಾಲ ಆ ನೆಮ್ಮದಿ ನಮ್ಮನ್ನು ಸಂಭ್ರಮದಲ್ಲಿಟ್ಟಿರುತ್ತದೆ.

ಆದರೆ, ಅದು ಕೇವಲ ಒಂದಿಷ್ಟು ದಿನಗಳ ಕಾಲ ಮಾತ್ರ.

ಸಣ್ಣಗೇ ಗೊಣಗೊಂದು ಶುರುವಾಗುತ್ತದೆ. ಇನ್ನಷ್ಟು ಇದ್ದರೆ ಚೆನ್ನಿತ್ತು ಎಂಬ ಹಳಹಳಿ. ಅದೊಂದು ಆಗಿಬಿಟ್ಟಿದ್ದರೆ ಸಾಕಿತ್ತೇನೋ ಎಂಬ ಕನವರಿಕೆ. ಓರಗೆಯವರ ಸಾಧನೆ ತರುವ ಹೊಟ್ಟೆಕಿಚ್ಚು. ಅಂದುಕೊಂಡದ್ದನ್ನು ಮಾಡಲಾಗದ ನಮ್ಮದೇ ದೌರ್ಬಲ್ಯ. ಇವೆಲ್ಲ ಸೇರಿಕೊಂಡು ಆ ನೆಮ್ಮದಿಯನ್ನು ಬಲುಬೇಗ ಹಾಳು ಮಾಡುತ್ತವೆ. ಇಷ್ಟು ಸಾಕಿತ್ತು ಎಂಬ ಜಾಗದಲ್ಲೀಗ ಇನ್ನಷ್ಟು ಬೇಕು ಎಂಬ ಹಂಬಲ ಸೇರಿಕೊಂಡು ಮನಸ್ಸು ಮತ್ತೆ ನರಳತೊಡಗುತ್ತದೆ. ಇದೊಂದು ಚಕ್ರ. ಶುರುವಾದ ಜಾಗಕ್ಕೇ ಪದೆ ಪದೆ ತಲುಪಿಸುವ ಜೀವನಚಕ್ರ. 

ಎಲ್ಲರೂ ಈ ಚಕ್ರದಲ್ಲಿ ಸುತ್ತು ಹೊಡೆಯುವವರೇ. ನಾವ್ಯಾರೂ ಚಕ್ರದಿಂದ ಇಳಿದವರಲ್ಲ. ಮೇಲೇರುವ ಸಂಭ್ರಮದಲ್ಲಿ ಮತ್ತೆ ಇಳಿಯುವುದನ್ನು ಮರೆತವರೇ. ‘ಅರೇ, ಚಕ್ರ ಹೊರಟ ಜಾಗಕ್ಕೇ ಬಂತಲ್ಲ’ ಎಂದು ಕಳವಳಪಟ್ಟವರೇ. ಈ ಚಕ್ರದ ಹಂಗಿನಿಂದ ಬಿಡಿಸಿಕೊಳ್ಳುವುದು ಹೇಗೆಂಬ ಗೊಂದಲಕ್ಕೆ ಈಡಾದವರೇ. ಪ್ರತಿ ಬಾರಿ ಚಕ್ರ ಒಂದು ಸುತ್ತು ತಿರುಗಿದಾಗೊಮ್ಮೆ ನಮ್ಮ ಆದ್ಯತೆಗಳು ಬದಲಾಗುತ್ತವೆ. ಹಳೆಯದರ ಜಾಗದಲ್ಲಿ ಹೊಸತು ಬಂದಿರುತ್ತದೆ. ಹಳೆಯ ನೆಮ್ಮದಿಯ ಜಾಗದಲ್ಲಿ ಹೊಸ ಕನವರಿಕೆ, ಕಳವಳ.

ಏಕೆ ಹೀಗಾಗುತ್ತದೆ?

ಮನುಷ್ಯ ಇರುವುದೇ ಹೀಗೆ. ಕವಿ ಗೋಪಾಲಕೃಷ್ಣ ಅಡಿಗರು ಹಾಡಿದಂತೆ ನಾವು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವವರೇ. ಹೀಗಾಗಿ, ಕನವರಿಕೆ, ಕಳವಳ, ಕನಸು, ಕಸಿವಿಸಿ- ಎಲ್ಲವೂ ಹಾಗೇ ಇರುತ್ತವೆ. ಆದ್ಯತೆಗಳು ಬದಲಾಗಬಹುದು, ಆದರೆ, ಅದಕ್ಕೆ ಕಾರಣವಾಗುವ ನಮ್ಮ ದೌರ್ಬಲ್ಯಗಳನ್ನು ನಾವು ಗೆಲ್ಲುವುದಿಲ್ಲ. ಇನ್ನೊಂದಿಷ್ಟಿದ್ದರೆ ಚೆನ್ನಿತ್ತು ಎಂಬ ಗೊಣಗನ್ನು ಬಿಡುವುದಿಲ್ಲ. 

ಎಷ್ಟು ವಿಚಿತ್ರವಲ್ಲವಾ? ಇಷ್ಟೇ ಸಾಕಿತ್ತು ಎಂಬ ನಮ್ಮ ಕನಸು ಈಡೇರಿದಾಗಿನ ಸಂಭ್ರಮವನ್ನು, ಅದು ತಂದ ನೆಮ್ಮದಿಯನ್ನು ಎಷ್ಟು ಬೇಗ ಮರೆತುಬಿಡುತ್ತೇವೆ! ಯಾವುದಕ್ಕಾಗಿ ಆ ಪರಿ ಹಂಬಲಿಸಿದ್ದೆವೋ, ಅದು ಈಡೇರಿದಾಗ ಅದನ್ನು ಆಸ್ವಾದಿಸುವುದನ್ನು ಬಿಟ್ಟು ಇನ್ಯಾವುದಕ್ಕೋ ಕೈ ಚಾಚುತ್ತೇವೆ. ಅದನ್ನು ಈಡೇರಿಸಿಕೊಳ್ಳಲು ಹೊರಡುತ್ತೇವೆ. ಈಡೇರಿದ ಒಂದು ಕನಸನ್ನು ಮನಸಾರೆ ಅನುಭವಿಸುವುದನ್ನು ಬಿಟ್ಟು ಹೊಸ ಕನಸನ್ನು ಕಾಣತೊಡಗುತ್ತೇವೆ. ರಾಜಾ ತ್ರಿವಿಕ್ರಮನಿಗೆ ಗಂಟುಬಿದ್ದ ಬೇತಾಳದಂತೆ, ಏರಲು ಹೊಸ ಹೆಗಲು ಹುಡುಕತೊಡಗುತ್ತೇವೆ. ನೆಮ್ಮದಿ ದೂರವಾಗುವುದೇ ಇಂಥ ಮನಃಸ್ಥಿತಿಯಿಂದ. 

ಏನು ಮಾಡಬೇಕು ಹಾಗಾದರೆ?

‘ನಿಮ್ಮಲ್ಲಿರುವ ಉತ್ತಮವಾದುದನ್ನು ನೆನಪಿಸಿಕೊಳ್ಳಿ’ ಎನ್ನುತ್ತಾರೆ ತಿಳಿದವರು. ನಿಮ್ಮ ಆರೋಗ್ಯ, ನಿಮ್ಮ ಕೆಲಸ, ನಿಮ್ಮ ಕನಸು, ನಿಮಗೆ ಈಗಾಗಲೇ ದಕ್ಕಿರುವ ನೆಮ್ಮದಿಯನ್ನು ನೆನಪಿಸಿಕೊಳ್ಳಿ. ಇದಕ್ಕಾಗಿ ತಾನೇ ನೀವು ಅಷ್ಟೊಂದು ಹಂಬಲಿಸಿದ್ದು? ಪೂರ್ತಿಯಾಗಿ ಅಲ್ಲದಿದ್ದರೂ ತಕ್ಕಮಟ್ಟಿಗಾದರೂ ನಿಮ್ಮ ಒಂದಿಷ್ಟು ಕನಸುಗಳು ಈಡೇರಿವೆ. ಅದಕ್ಕಾಗಿ ಕೃತಜ್ಞರಾಗಿರಿ. ಹಳೆಯ ಕನಸುಗಳು ಈಡೇರಿದ ನೆಮ್ಮದಿಯನ್ನು ಅನುಭವಿಸಿ. ಅವುಗಳನ್ನು ಪಡೆಯಲು ಪಟ್ಟ ಕಷ್ಟವನ್ನು, ಕಲಿತ ಪಾಠಗಳನ್ನು ಮನನ ಮಾಡಿಕೊಳ್ಳಿ. ಇಷ್ಟಾದ ನಂತರವಷ್ಟೇ ಹೊಸ ಕನಸುಗಳನ್ನು ಕಾಣಲು ಶುರು ಮಾಡಿ ಅಂತಾರೆ ಬಲ್ಲವರು. 

ನಮ್ಮೊಳಗೇ ಇಲ್ಲದ ನೆಮ್ಮದಿ ಹೊರಗೂ ಇರದು.

ಹೌದು. ನೆಮ್ಮದಿ ಎಂಬುದು ನಮ್ಮೊಳಗೇ ಇರುವಂಥದು. ಬದುಕು ಇರುವುದು ಕೇವಲ ಕನಸು ಕಾಣುವುದರಲ್ಲಿ ಮತ್ತು ಕಂಡ ಕನಸನ್ನು ನನಸಾಗಿಸುವುದರಲ್ಲಿ ಮಾತ್ರವಲ್ಲ; ಈಡೇರಿದ ಕನಸನ್ನು ಮನಸಾರೆ ಅನುಭವಿಸುವುದರಲ್ಲಿಯೂ ಇದೆ. ಅಡುಗೆ ಮಾಡುವುದರಲ್ಲಿ ತೋರುವ ಆಸಕ್ತಿಯನ್ನು ಊಟ ಮಾಡುವುದರಲ್ಲಿಯೂ ತೋರಬೇಕು. ಉಂಡಿದ್ದನ್ನು ಜೀರ್ಣಿಸಿಕೊಂಡ ನಂತರವಷ್ಟೇ ಹೊಸ ಹಸಿವು, ಹೊಸ ಅಡುಗೆ. ಮಾಡಿದ ಅಡುಗೆ ಉಣ್ಣದೇ ಹೊಸ ಅಡುಗೆ ಶುರು ಮಾಡಲು ಹೊರಟಾಗಲೇ ಗೊಂದಲಗಳು ಶುರುವಾಗುವುದು. 

ನಾವೆಲ್ಲ ಚಕ್ರತೊಟ್ಟಿಲಲ್ಲಿ ಕೂತವರೇ. ಚಕ್ರ ಕೆಳಗಿದ್ದಾಗ ಮೇಲೇರಲಿ ಎಂದು, ಅದು ಮೇಲೇರಿದಾಗ ಕೆಳಗೆ ಬರಲಿ ಎಂದು ಹಂಬಲಿಸುತ್ತ, ಚಕ್ರತೊಟ್ಟಿಲಿನ ಸೊಗಸು ಆಸ್ವಾದಿಸುವುದನ್ನೇ ಮರೆತುಬಿಡುತ್ತೇವೆ. ಚಕ್ರ ಕೆಳಗಿದ್ದಾಗ, ಆ ನೋಟವನ್ನು ಆನಂದಿಸಿ. ಮೇಲೆ ಹೋದಾಗ, ಅಲ್ಲಿನ ರಮ್ಯತೆಯನ್ನು ಅನುಭವಿಸಿ. ಆಗ ಕಳವಳ, ಕನವರಿಕೆ, ಕಸಿವಿಸಿ ಯಾವವೂ ನಮ್ಮನ್ನು ಕಾಡವು.  

ಬದುಕಿನ ಏರಿಳಿತ ಆಗ ಖುಷಿ ಕೊಡುವ ಆಟವಾಗುತ್ತದೆ.  

- ಚಾಮರಾಜ ಸವಡಿ

6 comments:

ಲೋದ್ಯಾಶಿ said...

ಆತ್ಮೀಯ

ಬರಹ ತುಂಬಾ ಮೆಚ್ಚುಗೆಯಾಯ್ತು. ಮತ್ತೆ ಮತ್ತೆ ಓದ್ಬೇಕು ಅನ್ನೋ ತರ ಇದೆ. ತುಂಬಾ ಒಳ್ಳೆ ಸಂದೇಶದೊಂದಿಗೆ ಬರಹವನ್ನ ನಿಲ್ಲಿಸಿದ್ದೀರಾ. ಪ್ರಕಟಿಸಿದ್ದಕ್ಕೆ ಧನ್ಯವಾದಗಳು

Chamaraj Savadi said...

ಥ್ಯಾಂಕ್ಸ್‌ ಲೋಹಿತ್‌.

PrashanthKannadaBlog said...

ಎಲ್ಲರ ಮನಸ್ಸಿನ ತಾಕಲಾಟವನ್ನು ಎತ್ತಿ ತೋರಿಸುವ ಬರಹ. ಚೆನ್ನಾಗಿದೆ.

Chamaraj Savadi said...

ಎಲ್ಲರ ತಾಕಲಾಟಗಳೇ ನಮ್ಮವೂ ಅಲ್ವಾ ಪ್ರಶಾಂತ್‌?

Anonymous said...

ಆತ್ಮೀಯ
ಬದುಕಿದ್ದನ್ನೇ ಬದುಕಾಗಿಸಿಕೊ೦ಡು
ಬದುಕುವ ಬದುಕು ಬದುಕೇ?
ಹರೀಶ ಆತ್ರೇಯ

Chamaraj Savadi said...

ಖಂಡಿತ ಅಲ್ಲ.
<< ಬದುಕು ಇರುವುದು ಕೇವಲ ಕನಸು ಕಾಣುವುದರಲ್ಲಿ ಮತ್ತು ಕಂಡ ಕನಸನ್ನು ನನಸಾಗಿಸುವುದರಲ್ಲಿ ಮಾತ್ರವಲ್ಲ; ಈಡೇರಿದ ಕನಸನ್ನು ಮನಸಾರೆ ಅನುಭವಿಸುವುದರಲ್ಲಿಯೂ ಇದೆ. >> ನೀವು ಈ ಸಾಲುಗಳನ್ನು ಗಮನಿಸಿರಬಹುದು ಅಂದುಕೊಳ್ಳುವೆ.