ಇವತ್ತು ಓದುವ ಕೊಠಡಿ ತಕ್ಕ ಮಟ್ಟಿಗೆ ಸಿದ್ಧವಾಯಿತು. ಬೆಳಿಗ್ಗೆ ಡಬ್ಬಿಗಳನ್ನೆಲ್ಲ ಖಾಲಿ ಮಾಡಿ ಕಂಪ್ಯೂಟರಿನ ವಿವಿಧ ಭಾಗಗಳನ್ನು ಜೋಡಿಸಿಕೊಂಡೆ.
ವರ್ಷಕ್ಕೊಮ್ಮೆ ಮನೆ ಹಾಗೂ ನೌಕರಿ ಬದಲಿಸುವ ಜಾಯಮಾನದ ವ್ಯಕ್ತಿ ನಾನು. ಹೀಗಾಗಿ, ಮನೆ ಬದಲಾದಾಗೆಲ್ಲ ಕಂಪ್ಯೂಟರ್ ಬಿಚ್ಚಿ ಜೋಡಿಸುವುದು ಅನಿವಾರ್ಯ. ಎಷ್ಟೋ ಸಾರಿ ಒಂದೇ ಮನೆಯಲ್ಲೇ ಕನಿಷ್ಠ ಎರಡೆರಡು ಬಾರಿ ಕಂಪ್ಯೂಟರಿನ ಜಾಗ ಬದಲಿಸಿದ್ದೇನೆ. ಮೊದಮೊದಲು ಅಷ್ಟೊಂದು ವೈರುಗಳು ಗೋಜಲುಗೋಜಲಾಗಿ ಹೆಣೆದುಕೊಂಡಿದ್ದನ್ನು ಗಾಬರಿಯಿಂದ ನೋಡುತ್ತ ನಿಂತುಬಿಟ್ಟಿದ್ದೆ. ಕಂಪ್ಯೂಟರ್ ತಜ್ಞರನ್ನೇ ಕರೆಸಿ ಬಿಚ್ಚಿಸಬೇಕಾಗುತ್ತದೆ ಎಂದು ಬೇಸರಪಟ್ಟುಕೊಂಡಿದ್ದೆ. ಆದರೂ, ಒಂದು ಸಾರಿ ಪ್ರಯತ್ನಿಸಿ ನೋಡಿಬಿಡೋಣ. ಬಾರದಿದ್ದರೆ, ಗೊತ್ತಿರುವವರನ್ನು ಕರೆಸುವುದು ಇದ್ದೇ ಇದೆಯಲ್ಲ ಎಂದು ಕೈ ಹಾಕಿದ್ದೆ.
ಆದರೆ, ಕೈಯೇ ಓಡುತ್ತಿಲ್ಲ. ಅಪರಿಚಿತ ಸರ್ಕ್ಯೂಟ್ ಬಿಚ್ಚುತ್ತಿರುವ ವಿದ್ಯಾರ್ಥಿಯ ಥರ ಭೀತಿ. ಮೊದಲು ಸಿಪಿಯು ವೈರುಗಳನ್ನು ಬಿಚ್ಚಿಟ್ಟೆ. ನಂತರ ಸಂಬಂಧಿಸಿದ ಭಾಗಗಳ ಜೋಡಣೆ ತೆಗೆದುಹಾಕುತ್ತ, ಯಾವ್ಯಾವ ವೈರು ಎಲ್ಲೆಲ್ಲಿ ಜೋಡಣೆಯಾಗಿದೆ ಎಂಬುದನ್ನು ಎರಡೆರಡು ಸಾರಿ ನೋಡಿಕೊಂಡಿದ್ದೆ. ಆದರೆ, ಬಿಚ್ಚಿ ಅವನ್ನು ಪ್ಯಾಕ್ ಮಾಡಿಟ್ಟಾಗ, ಬೋಳು ಮೈಯನ ಸಿಪಿಯು ನೋಡಿ ದಿಗಿಲಾಗಿತ್ತು. ನಮನಮೂನೆಯ ಚುಚ್ಚುಗುಂಡಿಗಳಿಗೆ ಯಾವ್ಯಾವ ವೈರುಗಳು ಸೇರುತ್ತವೋ ಏನೋ, ಒಂದು ವೇಳೆ ತಪ್ಪು ವೈರು ಸೇರಿಸಿ ಕಂಪ್ಯೂಟರ್ ಢಂ ಅಂದರೆ ಹೇಗೆ ಅಂತ ತುಂಬ ದಿಗಿಲಾಗಿತ್ತು.
ಈಗ ಎಲ್ಲಾ ಕಿತ್ತಾಗಿದೆ. ಚಿಂತಿಸಿ ಉಪಯೋಗವಿಲ್ಲ. ಮತ್ತೆ ಜೋಡಿಸುವಾಗ ಯೋಚಿಸಿದರಾಯ್ತು ಎಂಬ ಸಮಾಧಾನ ಹೇಳಿಕೊಂಡಿದ್ದೆನಾದರೂ, ಮನಸ್ಸಿನಲ್ಲಿ ಅದೇ ವಿಷಯ ಕೊರೆಯುತ್ತಿತ್ತು. ಮನೆ ಬದಲಿಸಿ, ಗೃಹಮಂತ್ರಿಯ ಆದ್ಯತೆಯ ಪ್ರಕಾರ, ಸಾಮಾನುಗಳನ್ನೆಲ್ಲ ಜೋಡಿಸಿಟ್ಟಾಗ, ಕೊನೆಗೆ ಉಳಿದಿದ್ದು ನನ್ನ ಓದುವ ಕೊಠಡಿ ಸಿದ್ಧಪಡಿಸುವುದು. ಅದು ನನ್ನದೇ ಜವಾಬ್ದಾರಿಯಾಗಿದ್ದರಿಂದ, ಎಲ್ಲರೂ ಮಲಗಿದಾಗ, ಕಳ್ಳನಂತೆ ಒಂದೊಂದೇ ಡಬ್ಬ ತೆರೆಯುತ್ತ ಸಾಮಾನುಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದೆ. ಕಂಪ್ಯೂಟರಿಗೆ ಸಂಬಂಧಿಸಿದ ಡಬ್ಬಗಳನ್ನು ನೋಡಿದಾಗ, ಮತ್ತದೇ ಅಳುಕು ಹುಟ್ಟುತ್ತಿದ್ದರಿಂದ, ಅವನ್ನೆಲ್ಲ ನಂತರ ಜೋಡಿಸಿದರಾಯ್ತು ಎಂದು ಒಂದೆಡೆ ಇಟ್ಟುಬಿಟ್ಟಿದ್ದೆ.
ಇವತ್ತು ಅದೆಲ್ಲ ನೆನಪಾಗುತ್ತಿದೆ.
ಡಬ್ಬಗಳನ್ನು ಒಂದೊಂದಾಗಿ ತೆರೆದು, ಕಂಪ್ಯೂಟರಿನ ವಿವಿಧ ಭಾಗಗಳನ್ನು ಟೇಬಲ್ ಮೇಲಿಟ್ಟುಕೊಂಡೆ. ದಾರ ಸುತ್ತಿದಂತೆ ಸುತ್ತಿಟ್ಟಿದ್ದ ವೈರುಗಳ ಚೀಲ ತೆರೆದು, ಹಾವಾಡಿಗನಂತೆ ಅವನ್ನೆಲ್ಲ ಹೊರತೆಗೆದೆ. ಎಲ್ಲ ನಮೂನೆಯ, ಗಾತ್ರದ, ಬಣ್ಣದ ವೈರುಗಳವು. ಜನುಮಜನುಮದ ಪ್ರೇಮಿಗಳಂತೆ, ತಳುಕುಹಾಕಿಕೊಂಡಿದ್ದ ಅವನ್ನೆಲ್ಲ ಬಲವಂತದಿಂದ ಒಂದೊಂದಾಗಿ ಬಿಡಿಸಿ, ಕಂಪ್ಯೂಟರಿನ ಸಂಬಂಧಿಸಿದ ಭಾಗಗಳಿಗೆ ಜೋಡಿಸಿದೆ. ಎಲ್ಲ ಮುಗಿದು, ಯುಪಿಎಸ್ನ ಪ್ಲಗ್ ಕೈಗೆತ್ತಿಕೊಂಡು ಕನೆಕ್ಷನ್ ಕೊಡಲೆಂದು ನೋಡುತ್ತೇನೆ-
ಗೋಡೆಯ ಮೇಲೆ ಒಂದೇ ಒಂದು ಸಾಕೆಟ್ ಇಲ್ಲ!
ಇದ್ದುದು ಒಂದು ಸ್ವಿಚ್ ಮಾತ್ರ. ತುಂಬ ನಿರಾಸೆಯಾಯ್ತು. ಶತಾಯಗತಾಯ ಇವತ್ತು ಕಂಪ್ಯೂಟರ್ ಜೋಡಿಸಿ ಏನಾದರೂ ಬರೆದೇ ಸಿದ್ಧ ಎಂಬ ಹುಮ್ಮಸ್ಸಿನಿಂದ ಕೆಲಸ ಶುರು ಮಾಡಿದವನಿಗೆ ಕರೆಂಟಿಗೇ ದಿಕ್ಕಿಲ್ಲದಂತಾಗಿತ್ತು. ಹತ್ತಿರದಲ್ಲಿ ಎಲ್ಲಾದರೂ ಮೂರು ಪಿನ್ನಿನ ಸಾಕೆಟ್ ಇದೆಯಾ ಎಂದು ಹುಡುಕಿದರೆ, ಒಂದೂ ಸಿಗಲಿಲ್ಲ. ಎಕ್ಸ್ಟೆನ್ಷನ್ ಜಂಕ್ಷನ್ ಬಾಕ್ಸ್ ತರದೇ ದಾರಿಯೇ ಇಲ್ಲದಾದಾಗ, ಪ್ಯಾಂಟೇರಿಸಿಕೊಂಡು ವಿದ್ಯುತ್ ಉಪಕರಣಗಳ ಅಂಗಡಿ ಹುಡುಕಿಕೊಂಡು ಹೊರಟೆ.
'ಇದು ಬ್ರ್ಯಾಂಡೆಡ್ ಜಂಕ್ಷನ್ ಬಾಕ್ಸ್' ಎಂದು ಅಂಗಡಿಯವ ಪದೆ ಪದೆ ಭರವಸೆ ಕೊಡುತ್ತಿದ್ದರೂ, ಅವನು ಕೊಡಲೆತ್ತಿಸುತ್ತಿದ್ದ ಬಾಕ್ಸನ್ನು ಅತ್ಯಂತ ಅನುಮಾನದಿಂದ ನೋಡುತ್ತ, ಪರಿಶೀಲಿಸುತ್ತ, ಅನುಮಾನ ಇದ್ದರೂ ಅನಿವಾರ್ಯತೆ ಅದಕ್ಕಿಂತ ಹೆಚ್ಚಾಗಿದ್ದರಿಂದ, ಇದ್ದುದರಲ್ಲೇ ಉತ್ತಮ ಎಂದು ಕಾಣುತ್ತಿದ್ದ ಜಂಕ್ಷನ್ ಬಾಕ್ಸ್ ಎತ್ತಿಕೊಂಡು ಬಂದೆ. ಅಡುಗೆ ಮನೆಯಲ್ಲಿದ್ದ ಸಾಕೆಟ್ಗೆ ಅದನ್ನು ಜೋಡಿಸಿ, ಯುಪಿಎಸ್ಗೆ ಸಂಪರ್ಕ ಕೊಟ್ಟು, ಕೊನೆಗೂ ಕಂಪ್ಯೂಟರ್ ಆನ್ ಮಾಡಿದಾಗ ಪ್ರತ್ಯಕ್ಷವಾಯ್ತಲ್ಲ 'ಉಬುಂಟು'! ಹಳೆಯ ಗೆಳೆಯನೊಬ್ಬ ಮನೆಗೆ ಬಂದಂಥ ಸಂತಸ.
ಅವಶ್ಯಕತೆ ಎಷ್ಟೊಂದು ವಿಷಯಗಳನ್ನು ಕಲಿಸುತ್ತದೆ ಎಂದು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ. ಈಗ ಕಂಪ್ಯೂಟರ್ ವೈರುಗಳನ್ನು ಬಿಚ್ಚಿ ಜೋಡಿಸುವುದು ರೂಢಿಯಾಗಿಬಿಟ್ಟಿದೆ. ನೌಕರಿ ಹಾಗೂ ಮನೆ ಬದಲಿಸುವುದು ನನ್ನ ಜಾಯಮಾನದ ಒಂದು ಭಾಗವೇ ಆಗಿರುವಾಗ, ಯಕಃಶ್ಚಿತ್ ಕಂಪ್ಯೂಟರ್ ಜೋಡಣೆ ಕಲಿಯದೇ ಇರಲಾದೀತೆ?
- ಚಾಮರಾಜ ಸವಡಿ
Subscribe to:
Post Comments (Atom)
1 comment:
ಹೌದು ಕಂಪ್ಯೂಟರ್ ಜೋಡಿಸುವುದು ನಿಜಕ್ಕೂ ಸವಾಲೇ ಸರಿ. ಗೋಜಲು ವಯರುಗಳಲ್ಲಿ ಯಾವುದನ್ನು ಎಲ್ಲಿಗೆ ಸಂಪರ್ಕಿಸಬೇಕು ಎಂದು ಮೊದಲೇ ಗುರುತು ಮಾಡಿಟ್ಟುಕೊಳ್ಳುವುದು ಲೇಸು.
Post a Comment