ಬೆರಳ್ಹಿಡಿದು ಜಗವ ತೋರಿಸಿದಾತ...ಅಪ್ಪ!

18 Aug 2009

ಆತ ನಮ್ಮ ಬಾಲ್ಯದ ಹೀರೊ. ಅಮ್ಮನ ಮಡಿಲಿನಿಂದ ಕೆಳಗಿಳಿದು ನಡೆಯಲು ಕಲಿತಾಗಿನಿಂದ ಆತ ನಮ್ಮ ಪಾಲಿನ ದೊಡ್ಡ ಭರವಸೆ. ಸಹಪಾಠಿಗಳೊಂದಿಗೆ ಜಗಳವಾದಾಗ, ನಾವು ದೂರು ಹೇಳಿದ್ದು ಆತನಿಗೆ. ಮೊದಲ ಮಿಠಾಯಿ ಕೊಡಿಸಿದ್ದು ಆತನೇ. ಬೆದರಿದಾಗ ಎತ್ತಿಕೊಂಡು ಸಂತೈಸಿದ, ಭರವಸೆ ತುಂಬಿದ ಮೊದಲ ವ್ಯಕ್ತಿ ಆತ. ಬಾಲ್ಯದ ನೂರೆಂಟು ನೆನಪುಗಳನ್ನು ಸಮೃದ್ಧವಾಗಿಸಿದ ಆತ ನಮ್ಮ ಅಪ್ಪ.

ಆತ ಎಲ್ಲ ಕಡೆ ಸಿಗುತ್ತಾನೆ. ಪಾರ್ಕ್‌‌ಗಳಲ್ಲಿ, ಬಸ್‌ಸ್ಟಾಪ್‌ಗಳಲ್ಲಿ, ಶಾಲೆಯ ಗೇಟಿನ ಹೊರಗೆ, ಅಂಗಡಿ ಎದುರು- ಎಲ್ಲೆಲ್ಲಿ ಮಕ್ಕಳು ಕಾಣುತ್ತಾರೋ ಅಲ್ಲೆಲ್ಲ ಆತನೂ ಇರುತ್ತಾನೆ. ಕಂಡದ್ದನ್ನೆಲ್ಲ ಕೊಡಿಸು ಎಂದು ಕೈಚಾಚುವ ಮಕ್ಕಳಿಗೆ ಪ್ರೀತಿಯಿಂದ ತಿಳಿ ಹೇಳುತ್ತ, ಚೆನ್ನಾಗಿವೆ ಅನಿಸಿದ್ದನ್ನು ಕೊಡಿಸುತ್ತ, ಮಕ್ಕಳು ಖುಷಿಯಿಂದ ಕೇಕೆ ಹಾಕುವಾಗ ಸದ್ದಿಲ್ಲದೇ ತೃಪ್ತಿಯಿಂದ ನಗುತ್ತಾನೆ.

ಜಗಳ ತಂದಾಗ ಬಗೆಹರಿಸಿದ್ದಾನೆ ಅಪ್ಪ. ತಪ್ಪು ಮಾಡಿದಾಗ ತಿಳಿ ಹೇಳಿದ್ದಾನೆ. ಪಕ್ಕ ಕೂತು ಪಾಠ ಮಾಡಿದ್ದಾನೆ. ಹೋಂ ವರ್ಕ್‌ ಮಾಡಿಸಿದ್ದಾನೆ. ನಮ್ಮ ಹ್ಯಾಪಿ ಬರ್ತ್‌‌ಡೇಗಳಿಗೆ ಹೊಸ ಬಟ್ಟೆ ತಂದಿದ್ದಾನೆ. ಅಚ್ಚರಿಯ ಗಿಫ್ಟ್‌ಗಳನ್ನು ನೀಡಿದ್ದಾನೆ. ನಮ್ಮ ಬಾಲ್ಯಕ್ಕೆ ಸಾವಿರಾರು ನೆನಪುಗಳನ್ನು ತುಂಬಿದ್ದಾನೆ.

ಅಪ್ಪನ ಹೆಗಲೇ ನಮ್ಮ ಮೊದಲ ವಾಹನ. ಅಲ್ಲಿಂದ ಇಣುಕಿದಾಗ ಕಂಡ ಜಗತ್ತು ಅದ್ಭುತ. ಆತನ ಬೆರಳ್ಹಿಡಿದೇ ನಾವು ಮನೆಯಿಂದ ಹೊರಗೆ ಕಾಲಿಟ್ಟಿದ್ದು. ಸಂತೆಗೆ ಹೋಗಿದ್ದು, ಜಾತ್ರೆಯಲ್ಲಿ ಸುತ್ತಾಡಿದ್ದು, ಮೃಗಾಲಯಗಳಿಗೆ ಭೇಟಿ ಕೊಟ್ಟಿದ್ದು. ಅಪ್ಪ ನಮ್ಮ ಪಾಲಿಗೆ ಹೀರೋ, ಗೈಡ್‌, ಫ್ರೆಂಡ್‌ ಎಲ್ಲಾ.

ದೊಡ್ಡವರಾದಂತೆ ಅಪ್ಪ ನಮಗೆ ಪಾಕೆಟ್‌ ಮನಿ ಕೊಡುವ ಕ್ಯಾಷಿಯರ್‌. ಪ್ರೊಗ್ರೆಸ್‌ ಕಾರ್ಡ್‌‌ಗೆ ಸಹಿ ಹಾಕುವ ಮ್ಯಾನೇಜರ್‌. ತಪ್ಪು ಮಾಡಿದಾಗ ಶಿಕ್ಷಿಸುವ ಪೊಲೀಸ್‌. ಏನು ಮಾಡಬೇಕೆಂದು ಆಜ್ಞೆ ಮಾಡುವ ಜಡ್ಜ್‌. ನಮ್ಮ ಆಟಗಳಿಗೆ ಆತನೇ ಕೋಚ್‌, ಅಂಪೈರ್‌ ಮತ್ತು ರೆಫ್ರೀ. ಬಿದ್ದು ಗಾಯ ಮಾಡಿಕೊಂಡಾಗ ಆತನೇ ಡಾಕ್ಟರ್‌.

ಮುಂದೆ ಪ್ರಾಯ ಬಂದಿತು. ಮೈಯೊಳಗೆ ಮಾಯೆ ತುಂಬಿತು. ಒಂದಿಷ್ಟು ತಂತ್ರಜ್ಞಾನ, ಫ್ಯಾಶನ್‌ ಕಲಿತ ನಮಗೆ ಅಪ್ಪ ಯಾವುದೋ ಕಾಲದ ವ್ಯಕ್ತಿಯಂತೆ ಕಾಣತೊಡಗುತ್ತಾನೆ. ಅಲ್ಲಿಯವರೆಗೆ, ಅಮ್ಮನಿಗೆ ಏನೂ ಗೊತ್ತಾಗಲ್ಲ ಅನ್ನುತ್ತಿದ್ದ ನಾವು ಅಪ್ಪನನ್ನೂ ಆ ಸಾಲಿಗೆ ಸೇರಿಸತೊಡಗುತ್ತೇವೆ. ಎಲ್ಲವನ್ನೂ ಕಲಿಸಿದ್ದ ಅಪ್ಪನನ್ನೇ, ನಿನಗೇನೂ ಗೊತ್ತಿಲ್ಲ ಅನ್ನತೊಡಗುತ್ತೇವೆ. ಅಪ್ಪನ ಅಭ್ಯಾಸಗಳು ಅಸಹನೀಯ ಅನಿಸತೊಡಗುತ್ತವೆ. ಎಲ್ಲ ಸುಖವನ್ನೂ ನಮಗಾಗಿ ಕಟ್ಟಿಕೊಟ್ಟ ಅಪ್ಪನೇ, ನಮ್ಮ ಸುಖಕ್ಕೆ ಅಡ್ಡಿ ಎಂದು ಅನ್ನಿಸತೊಡಗುತ್ತಾನೆ.

ಆದರೆ, ಮದುವೆಯಾಗಿ ಮಕ್ಕಳಾದ ಮೇಲೆ ಗೊತ್ತಾಗುತ್ತದೆ: ಅಪ್ಪನಿಗೆ ಎಷ್ಟೊಂದು ವಿಷಯಗಳು ಗೊತ್ತಿದ್ದವು ಅಂತ. ಅಪ್ಪ ಇಂಥವನ್ನೆಲ್ಲ ನಿಭಾಯಿಸಿದ್ದಾದರೂ ಹೇಗೆ ಎಂದು ಅಚ್ಚರಿಯಾಗುತ್ತದೆ. ಈಗ ಅಪ್ಪ ಜೊತೆಗಿರಬೇಕಿತ್ತು ಎಂಬ ಹಳಹಳಿ ಶುರುವಾಗುತ್ತದೆ. ಕೆಲಸದ ಹಂಗಿನಲ್ಲಿ ದೂರ ಹೋದ ನಮ್ಮಂಥವರಿಗೆ ಅಪ್ಪ ನೆನಪುಗಳ ಕಣಜ. ಒಂದು ಶಾಶ್ವತ ಅಚ್ಚರಿ.

- ಚಾಮರಾಜ ಸವಡಿ

No comments: