ಭಾವನೆಗಳು ಮುರುಟುವುದು ಹೀಗೆ...

18 Aug 2009

ನನ್ನ ರೂಮಿನ ಕಿಟಕಿ ತೆರೆದರೆ ರಸ್ತೆಯಾಚೆಗಿನ ಅವಳ ಮನೆಯೇ ನೇರವಾಗಿ ಕಣ್ಣಿಗೆ ಬೀಳುತ್ತಿತ್ತು.
ತುಂಬ ದಿನಗಳ ಕಾಲ ಆ ಮನೆಗೆ ಯಾರೂ ಬಂದಿರಲಿಲ್ಲ. ಒಂದಷ್ಟು ಹಕ್ಕಿಗಳು ಆಗಾಗ ಕಾಣದ ಹುಳುಗಳನ್ನು ಹೆಕ್ಕುತ್ತ ವಾಕ್ ಮಾಡುತ್ತಿದ್ದುದನ್ನು ಬಿಟ್ಟರೆ ಅಲ್ಲಿ ಬೇರೆ ಚಟುವಟಿಕೆಗಳಿರಲಿಲ್ಲ. ಬೇಸರದ ದಿನಗಳಲ್ಲಿ ನಾನು ಆ ಮನೆಯ ಖಾಲಿ ಬಾಲ್ಕನಿ ನೋಡುತ್ತ ನಿಲ್ಲುತ್ತಿದ್ದೆ. ನನ್ನ ಮನಸ್ಸಿನ ತುಂಬ ವಿಚಾರದ ಹುಳುಗಳು. ಹೆಕ್ಕಲು ಮಾತ್ರ ಯಾವ ಹಕ್ಕಿಯೂ ಇರಲಿಲ್ಲ.
ಒಂದಿನ, ಕೆಲಸ ಮುಗಿಸಿಕೊಂಡು ಬಂದು ಎಂದಿನಂತೆ ಕಿಟಕಿ ತೆರೆದರೆ, ಬಾಲ್ಕನಿಯಾಚೆ ಜೀವಂತಿಕೆ ಕಾಣಿಸಿತು. ಆ ಮನೆಯ ಬಾಗಿಲು ತೆರೆದಿತ್ತು. ಪಕ್ಕದಲ್ಲಿದ್ದ ರೂಮಿನ ಕಿಟಕಿ ಸಹ. ಬಾಲ್ಕನಿ ಶುಭ್ರವಾಗಿತ್ತು. ಸಂಸಾರವೊಂದರ ಸಂಭ್ರಮದ ಸದ್ದು ರಸ್ತೆಯ ಸಂಜೆ ಗದ್ದಲ ದಾಟಿಕೊಂಡು ನನ್ನ ರೂಮು ತಲುಪಿತು.
ನಾನು ಉಲ್ಲಸಿತನಾದೆ.
ಕತ್ತಲಾಗುತ್ತಿದ್ದಂತೆ ಎದುರು ಮನೆಯಲ್ಲಿ ದೀಪಗಳು ಹೊತ್ತಿಕೊಂಡವು. ಮಧ್ಯವಯಸ್ಕ ಹೆಣ್ಣುಮಗಳೊಬ್ಬಳು ಹೊರ ಬಂದು, ಬಾಗಿಲಿಗೆ ಪೂಜೆ ಮಾಡಿ, ಊದುಬತ್ತಿ ಬೆಳಗಿ ಕೈಮುಗಿದಳು.
ನಾನು ಲೈಟು ಹಾಕುವುದನ್ನೂ ಮರೆತು ಆ ಸಂಭ್ರಮ ನೋಡುತ್ತ ನಿಂತಿದ್ದೆ.
ಎದುರು ಮನೆಯಲ್ಲಿ ಟಿವಿ ಕಣ್ತೆರೆಯಿತು. ‘ಓದೋ ಪುಟ್ಟಾ’ ಎಂದು ದೊಡ್ಡ ದನಿಯಲ್ಲಿ ಕೊನೆಯ ಮಗನಿಗೆ ಆಜ್ಞೆ ನೀಡುತ್ತಲೇ ಮನೆಯೊಡತಿ ಹಾಲ್‌ನಲ್ಲಿದ್ದ ಟಿವಿ ಮುಂದೆ ಕೂತಳು. ಇನ್ನು ಎರಡು ಗಂಟೆಗಳ ತನಕ ಈ ತಾಯಿ ಅಲ್ಲಾಡುವುದಿಲ್ಲ ಎಂದುಕೊಂಡು ನಾನು ಕಿಟಕಿಯಿಂದ ಈಚೆ ತಿರುಗುವುದರಲ್ಲಿದ್ದಾಗ-
ಎದುರು ಮನೆಯ ರೂಮಿನೊಳಗೆ ಲೈಟು ಹೊತ್ತಿಕೊಂಡಿತು!
ಆಕೆ ಕಾಣಿಸಿಕೊಂಡಳು. ಮುಖದಲ್ಲಿ ಉತ್ಸಾಹ ಬೆರೆತ ಸುಸ್ತು. ಕಾಲೇಜಿನಿಂದ ಬಂದಿರಬೇಕು, ಪುಸ್ತಕಗಳನ್ನು ಮೇಜಿನ ಮೇಲಿರಿಸಿದವಳೇ ಕನ್ನಡಿಯ ಮುಂದೆ ನಿಂತು, ದೇವರು ಕೂಡ ಮರುಳಾಗುವಂತೆ ಚಂದಗೆ ಮುಗುಳ್ನಕ್ಕಳು.
ನಾನು ಮಂತ್ರಮುಗ್ಧನಂತೆ ನೋಡುತ್ತಿದ್ದೆ.
ಮುಂದೆ ಐದು ನಿಮಿಷಗಳಲ್ಲಿ ಕನ್ನಡಿ ಎದುರು ಚಿಕ್ಕದೊಂದು ಬ್ಯಾಲೆ ನೃತ್ಯವೇ ನಡೆದುಹೋಯಿತು. ಕನ್ನಡಿಯ ಮೇಲೆ ಕಣ್ಣಿಟ್ಟುಕೊಂಡೇ ಬಾಲೆ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿ ತನ್ನ ಭಂಗಿ ಪರೀಕ್ಷಿಸಿದಳು. ಹೇರ್ ಬ್ಯಾಂಡ್ ಎಳೆದುಹಾಕಿ, ಸಡಿಲ ಕೂದಲನ್ನು ಭುಜದ ಎರಡೂ ಪಕ್ಕಕ್ಕೆ ಇಳಿಬಿಟ್ಟು ನೋಡಿದಳು. ಅಷ್ಟೂ ಕೂದಲನ್ನು ಒಂದೇ ಕಡೆ ಹಾಕಿಕೊಂಡು ನೋಡಿದಳು. ಕೈಕಟ್ಟಿ ನಿಂತಳು. ನಿಂತಲ್ಲೇ ಓಲಾಡಿದಳು. ಕೊನೆಗೆ, ಮತ್ತೊಮ್ಮೆ ಚಂದಗೆ ಮುಗುಳ್ನಕ್ಕು ಒಳಗೆ ಹೋಗಿಬಿಟ್ಟಳು.
ನನ್ನ ಜೀವನದ ಧನ್ಯತೆಯ ಕ್ಷಣಗಳು ಶುರುವಾಗಿದ್ದು ಹೀಗೆ.
ಕ್ರಮೇಣ ಕಿಟಕಿ ನನ್ನ ಬೇಸರ ಕಳೆಯುವ ಸಾಧನವಾಯಿತು. ಬಾಲೆಯನ್ನು ನೋಡುವುದನ್ನು ಇಷ್ಟಪಡತೊಡಗಿದೆ. ಆಕೆಯ ವಿಶಿಷ್ಟ ದರ್ಪಣ ಬ್ಯಾಲೆ ಸಹ ನನಗೆ ಇಷ್ಟವಾಯಿತು. ಸಂಜೆಯಾಗುತ್ತಲೇ, ಕಿಟಕಿ ಎದುರು ಪ್ರತಿಷ್ಠಾಪಿತನಾಗತೊಡಗಿದೆ.
ಕೆಲವು ದಿನಗಳ ನಂತರ ಒಮ್ಮೆ, ಆಕೆ ಆಕಸ್ಮಿಕವಾಗಿ ನನ್ನ ಕಿಟಕಿಯತ್ತ ನೋಡಿದಾಗ, ನಸುಗತ್ತಲ್ಲಲಿ ನಿಂತಿದ್ದ ನಾನು ಕಣ್ಣಿಗೆ ಬಿದ್ದೆ.
ಅವತ್ತು ದರ್ಪಣ ಬ್ಯಾಲೆ ನಡೆಯಲಿಲ್ಲ. ರೂಮಿನಲ್ಲಿ ಲೈಟು ಕೂಡ ತುಂಬ ಹೊತ್ತು ಉರಿಯಲಿಲ್ಲ. ಅಷ್ಟೇ ಅಲ್ಲ, ಆಕೆಯ ಮುಖ ನಿಗಿನಿಗಿಯಾಗಿತ್ತು.
ಆದರೆ ಅದು ಕೇವಲ ಒಂದು ದಿನ ಮಾತ್ರ.
ಮರುದಿನ ಯಥಾಪ್ರಕಾರ ಬಾಲೆ ಬಂದಳು. ಮುಖದಲ್ಲೊಂದು ತಿಳಿಯಾದ ಮಂದಹಾಸ. ಕೊಂಚ ಹೊತ್ತು ಕನ್ನಡಿಯ ಮುಂದೆಯೇ ನಿಂತವಳು ನಂತರ ಕಿಟಕಿಯತ್ತ ತಿರುಗಿ ನನ್ನನ್ನೊಮ್ಮೆ ದಿಟ್ಟಿಸಿದಳು.
ಆ ದಿನ ನನಗೆ ಇಂದಿಗೂ ಚೆನ್ನಾಗಿ ನೆನಪಿದೆ.
***
ಮೊದಲ ಬಾರಿ ಬೆಂಗಳೂರು ಇಷ್ಟವಾಗತೊಡಗಿತು. ಸಂಜೆಗಳು ಹೆಚ್ಚು ಅರ್ಥಪೂರ್ಣವಾದವು. ನಮ್ಮ ಕಿಟಕಿಗಳ ನಡುವೆ ರವಾನೆಯಾಗುತ್ತಿದ್ದ ಮೌನ ಸಂದೇಶಗಳೆಷ್ಟು ಎಂಬುದು ಮಧ್ಯದಲ್ಲಿ ಹಾದು ಹೋಗಿದ್ದ ಪೆದ್ದ ರಸ್ತೆಗಾಗಲಿ, ರಾತ್ರಿ ಹಗಲೆನ್ನದೇ ‘ಭರ್ರೋ’ ಎಂದು ಸಂಚರಿಸುತ್ತಿದ್ದ ವಾಹನಗಳಿಗಾಗಲಿ ಗೊತ್ತಾಗುವ ಸಂಭವವೇ ಇರಲಿಲ್ಲ. ಬಹಳ ಸಮಯದವರೆಗೆ ನಾವು ಮೌನವಾಗಿ ನಿಂತಿರುತ್ತಿದ್ದೆವು. ಆಗಾಗ ಮುಗುಳ್ನಗೆ. ಕೊಂಚ ಹೊತ್ತು ಕೆಳಗಿದ್ದ ರಸ್ತೆ ದಿಟ್ಟಿಸುವುದು. ಮತ್ತೊಮ್ಮೆ ಮೌನ ವೀಕ್ಷಣೆ. ಮುಗುಳ್ನಗೆ.
ಆ ದಿನಗಳೂ ನನಗೆ ಚೆನ್ನಾಗಿ ನೆನಪಿವೆ.
***
ಬದುಕು ಹೀಗೇ ಸಾಗಿದ್ದಾಗ, ಒಂದಿನ ಪತ್ರಿಕೆಗಳು ಭೀಕರ ಸುದ್ದಿಯನ್ನು ತಂದವು. ಕಿಟಕಿಗಳ ಕೆಳಗಿದ್ದ ರಸ್ತೆಯ ನಡುವೆಯೇ ಮೇಲ್ಸೇತುವೆಯೊಂದು ಎದ್ದು ನಿಲ್ಲಲಿತ್ತು.
ಮೊದಲ ಬಾರಿ ನನ್ನ ಮುಗುಳ್ನಗೆ ಮಾಯವಾಯಿತು.
ಅಂದು ಸಂಜೆ ಆಕೆ ಕಣ್ಣಲ್ಲೇ ‘ಏಕೆ?’ ಎಂಬಂತೆ ಕೇಳಿದಳು. ನಾನು ಸುಳ್ಳೇ ನಗುವ ಪ್ರಯತ್ನ ಮಾಡಿದೆ. ಆದರೆ, ಭಾರಿ ಗಾತ್ರದ ಯಂತ್ರಗಳು ರಸ್ತೆ ಮಧ್ಯೆಯೇ ಕೊರೆಯಲು ಪ್ರಾರಂಭಿಸುವ ಮೂಲಕ ನನ್ನ ದುಗುಡವನ್ನು ಆಕೆಗೂ ತಲುಪಿಸಿದವು.
ಕಾಮಗಾರಿ ಹಗಲು ರಾತ್ರಿ ಭರದಿಂದ ಸಾಗತೊಡಗಿ, ದೂಳು ಎಲ್ಲೆಡೆ ಹರಡಿ, ಕಿಟಕಿ ತೆರೆಯುವುದೂ ಕಷ್ಟವಾಗತೊಡಗಿತು. ಆದರೂ ಆಕೆ ಏನಾದರೂ ನೆವ ಮಾಡಿ ಅರ್ಧ ಗಂಟೆ ನನ್ನನ್ನು ದಿಟ್ಟಿಸುತ್ತಿದ್ದಳು. ದೂಳಿನ ನಡುವೆ ಆಕೆಯ ಮಂದಹಾಸ ಮಂಕಾಗುತ್ತಿರುವಂತೆ ನನಗನ್ನಿಸಿತು.
ಒಂದಿನ, ನಮ್ಮಿಬ್ಬರ ಕಿಟಕಿಗಳ ಮಧ್ಯೆ ಭಾರಿ ಗಾತ್ರದ ಕಾಂಕ್ರೀಟ್ ಕಂಬದ ನಿರ್ಮಾಣ ಪ್ರಾರಂಭವಾಯಿತು. ಇನ್ನು ಹತ್ತು ದಿನಗಳಲ್ಲಿ ಅದು ನಮ್ಮಿಬ್ಬರ ನಡುವೆ ಗೋಡೆಯಂತೆ ನಿಲ್ಲಲಿದೆ ಎಂದಾದಾಗ, ನಾನೊಂದು ನಿಶ್ಚಯ ಮಾಡಿದೆ.
ಪ್ರೀತಿಯಾಗಬಹುದಾಗಿದ್ದ ಭಾವನೆಗಳು ಸೇತುವೆಗೆ ಬಲಿಯಾಗುವುದನ್ನು ಸಹಿಸುವುದು ನನಗೆ ಕಷ್ಟವಾಗಿತ್ತು.
ಅಂದು ಸಂಜೆ ಕಿಟಕಿಯ ಬಳಿ ನಿಂತಾಗ ಫಲಕವೊಂದನ್ನು ಎತ್ತಿ ಹಿಡಿದೆ. ‘ನೆನಪು ಅಳಿಯದಿರಲಿ’ ಎಂದಷ್ಟೇ ಅದರಲ್ಲಿ ಬರೆದಿದ್ದೆ. ದಿಗಿಲಿನಿಂದ ದಿಟ್ಟಿಸಿದವಳಿಗೆ ಸನ್ನೆಯ ಮೂಲಕ ನನ್ನ ನಿರ್ಧಾರ ತಿಳಿಸಿದೆ.
ಅವತ್ತು ಆಕೆ ಅತ್ತಿದ್ದು ಇವತ್ತಿಗೂ ಅಚ್ಚೊತ್ತಿದಂತಿದೆ.
***
ಮರುದಿನ ಕಂಬ ನಮ್ಮಿಬ್ಬರನ್ನು ಶಾಶ್ವತವಾಗಿ ಮರೆ ಮಾಡಲಿತ್ತು. ಅಂದು ಬೆಳಿಗ್ಗೆ ಬೇಗ ಎದ್ದೆ. ಆಕೆ ಕೂಡ. ಸೂರ್ಯ ಆಕಳಿಸುತ್ತಿರುವಾಗ ನಮ್ಮಿಬ್ಬರ ಕಿಟಕಿಗಳು ತೆರೆದುಕೊಂಡವು. ಕೊನೆಯದಾಗಿ ಪರಸ್ಪರ ದಿಟ್ಟಿಸಿದೆವು. ಆಕೆ ಮತ್ತೆ ಅತ್ತಳು. ಏಕೋ ನನ್ನ ದೃಷ್ಟಿ ಮಂಜಾಗುತ್ತಿದೆ ಅನ್ನಿಸಿತು. ಅಳುತ್ತಿದ್ದೆನೇ ನಾನು?
ಮೌನವಾಗಿ ವಿದಾಯ ಹೇಳಿದೆ. ಉದಯಿಸುತ್ತಿರುವ ಸೂರ್ಯ ಆಕೆಯ ಕಣ್ಣೀರಿನಲ್ಲಿ ವಜ್ರದಂತೆ ಬೆಳಗುತ್ತಿದ್ದ. ಕೊನೆಯದಾಗಿ ಆಕೆಯನ್ನು ಕಣ್ತುಂಬ ತುಂಬಿಕೊಂಡು, ಖಾಲಿ ಮಾಡಿದ್ದ ರೂಮಿನಲ್ಲಿ ಸಿದ್ಧವಾಗಿ ಕೂತಿದ್ದ ಸೂಟ್‌ಕೇಸ್ ಎತ್ತಿಕೊಂಡು, ಹಿಂದಕ್ಕೆ ಕೂಡ ನೋಡದೆ ದಡದಡ ಮೆಟ್ಟಿಲಿಳಿದೆ.
ನನ್ನೊಳಗಿನ ಕಿಟಕಿಯೊಂದು ಅವತ್ತು ಶಾಶ್ವತವಾಗಿ ಮುಚ್ಚಿಕೊಂಡಿತು!
- ಚಾಮರಾಜ ಸವಡಿ
(ಪ್ರಜಾವಾಣಿಯಲ್ಲಿ ಅಚ್ಚಾಗಿದ್ದ ಬರಹ. http://www.prajavani.net/Archives/oct122004/377820041012.php)

No comments: