ಗೊರಕೆ ಹೊಡೆಯುವುದೂ ಕಷ್ಟ!

18 Aug 2009

ರಾತ್ರಿ ಮಲಗುವುದು, ಹಗಲು ಹೊತ್ತು ಎದ್ದಿರುವುದು ಅಪರೂಪವಾಗುತ್ತಿರುವ ದಿನಗಳಿವು.

ರಾತ್ರಿ ತುಂಬ ಹೊತ್ತು ಕೂತಿರುತ್ತೆನಾದ್ದರಿಂದ, ಬೆಳಿಗ್ಗೆಯ ತಿಂಡಿಯಾದ ಸ್ವಲ್ಪ ಹೊತ್ತಿಗೇ ನಿದ್ದೆ ಮುತ್ತಿಕೊಂಡು ಬರುತ್ತದೆ. ಏನೇ ಮಾಡಿದರೂ ನಿಚ್ಚಳವಾಗುವುದು ಕಷ್ಟ. ಮಲಗದೇ ಬೇರೆ ದಾರಿಯೇ ಇಲ್ಲ.

ಆ ಸಮಯದಲ್ಲಿ, ಒಂಚೂರು ಮಲಗುವುದು ಉತ್ತಮವೂ ಹೌದು. ಮಧ್ಯಾಹ್ನ ಮಲಗಿದರೆ, ಸಂಜೆ ಹೊತ್ತಿಗೆ ಎಂಥದೋ ಜಡ. ಮಂಕುಮಂಕು. ಏನು ಮಾಡಲೂ ತೋಚುವುದಿಲ್ಲ. ಸಂಜೆ ಮಕ್ಕಳು ವಾಕಿಂಗ್‌ಗೆ ಸಿದ್ಧವಾಗಿರುವಾಗ, ಮತ್ತೆ ಕಂಪ್ಯೂಟರ್‌ ಮುಂದೆ ಕೂಡಲಾರೆ. ಹೀಗಾಗಿ, ಮಧ್ಯಾಹ್ನದ ಊಟಕ್ಕೆ ಮುಂಚೆಯೇ ಒಂದೆರಡು ತಾಸು ನಿದ್ದೆ ಮಾಡುವುದು ರಜಾ ಕಾಲದ ಬೆಸ್ಟ್‌ ಆಯ್ಕೆ.

ಆದರೆ, ಮಕ್ಕಳು ಮಲಗಿರುವುದಿಲ್ಲ. ಅವಕ್ಕೆ ಏನಿದ್ದರೂ ಮಧ್ಯಾಹ್ನದ ನಿದ್ದೆಯೇ ಅಭ್ಯಾಸ. ಹೀಗಾಗಿ, ಅವುಗಳ ಕಣ್ತಪ್ಪಿಸಿ ಮಲಗುವುದು ಕಷ್ಟ. ಮಲಗಿದರೆ ಇನ್ನೂ ಕಷ್ಟ ಎಂಬುದು ಗೊತ್ತಾಗಿದ್ದೇ ಹೀಗೆ:

ರಾತ್ರಿ ನಿದ್ದೆ ಸರಿಯಾಗಿ ಆಗಿಲ್ಲ ಎಂದು ಮುಂಜಾನೆ ಹನ್ನೆರಡು ಗಂಟೆ ಹೊತ್ತಿಗೆ ಅಡ್ಡಾದೆ. ಬೆಳಿಗ್ಗೆ ಬೇಗ ಎದ್ದಿದ್ದರಿಂದ ಹಿರಿಯ ಮಗಳು ಮಲಗಿದ್ದಳು. ಕಿರಿಯವಳು ಅಡಿಗೆ ಮನೆಯಲ್ಲಿ ಬಿಜಿಯಾಗಿದ್ದಳು. ಇದೇ ಸಮಯ ಅಂದುಕೊಂಡು ನಿದ್ದೆ ಹೋದೆ.

ಸ್ವಲ್ಪ ಹೊತ್ತಿಗೆ ಉಸಿರುಕಟ್ಟಿದ ಅನುಭವ. ಖಂಡಿತ ಉಸಿರಾಡಲಾಗುತ್ತಿಲ್ಲ. ಏನಾಗುತ್ತಿದೆ ಎಂದು ತಿಳಿಯದೇ ಗಾಬರಿಯಾಗಿ ಕಣ್ಣುಬಿಟ್ಟೆ. ನಿದ್ದೆ ಜೋರಾಗಿ ಬಂದಿದ್ದರಿಂದ, ತಕ್ಷಣ ಏನೂ ಗೊತ್ತಾಗುತ್ತಿಲ್ಲ. ಎಲ್ಲಿದ್ದೇನೆ ಎಂಬುದೂ ತಿಳಿಯುತ್ತಿಲ್ಲ. ಎದ್ದು ಕೂತು, ಸ್ವಲ್ಪ ಸುಧಾರಿಸಿಕೊಂಡು ನೋಡಿದರೆ, ಚಿಕ್ಕ ಮಗಳು ಮುಂದೆ ಕೂತಿದ್ದಾಳೆ. ಹೆಂಡತಿ ನಗುತ್ತಿದ್ದಾಳೆ. ದೊಡ್ಡವಳದು ಯಥಾಪ್ರಕಾರ, ಗಾಢ ನಿದ್ದೆ.

ಏನಾಯ್ತು ಎಂಬುದೇ ಗೊತ್ತಾಗಲಿಲ್ಲ. ಸದ್ಯ ಉಸಿರುಕಟ್ಟಿ ಹರ ಹರಾ ಅಂದಿಲ್ಲ ಎಂಬ ನೆಮ್ಮದಿ ಮಾತ್ರ. ಹೆಂಡತಿ ನಗುತ್ತಿದ್ದುದರಿಂದ, ನನ್ನಿಂದಲೇ ಏನೋ ಯಡವಟ್ಟಾಗಿದೆ ಎಂಬ ಸುಳಿವು ಮಾತ್ರ ದೊರೆತಿತ್ತು.

’ಏನಾಯ್ತೇ ಮಾರಾಯ್ತಿ’ ಎಂದೆ. ಆಕೆ ಇನ್ನೊಂಚೂರು ನಕ್ಕು ಗೊಂದಲ ಹೆಚ್ಚಿಸಿದಳು. ಚಿಕ್ಕವಳು ಪಿಳಿ ಪಿಳಿ ಕಣ್ಬಿಡುತ್ತ ಕೂತಿದ್ದಳು. ಅವಳನ್ನು ಕೇಳಿದರೆ ಉಪಯೋಗವಿಲ್ಲ. ಹೆಂಡತಿ ಕೇಳಿದರೆ ಬೇಗ ಹೇಳುವುದಿಲ್ಲ. ಸ್ವಲ್ಪ ಹೊತ್ತು ಸುಮ್ಮನೇ ಕೂತೆ. ನಿದ್ದೆ ಹಾರಿಹೋಗಿತ್ತು.

ನಂತರ, ಊಟ ಮಾಡುವಾಗ ಹೆಂಡತಿ ಹೇಳಿದಳು: ನಾನು ಜೋರಾಗಿ ನಿದ್ದೆ ಮಾಡುತ್ತಿದ್ದೆನಂತೆ. ನಿದ್ದೆ ಜೋರಾದಾಗ, ಕೊಂಚ ಗೊರಕೆಯೂ ಬರುತ್ತದಂತೆ. ಗೊರಕೆ ಹೊಡೆಯುವವ ನಾನೇ ಆಗಿದ್ದರಿಂದ, ಅದು ನನಗೆ ಗೊತ್ತಾಗುವ ಛಾನ್ಸೇ ಇಲ್ಲ. ಗೊತ್ತಾದರೂ ಒಪ್ಪಿಕೊಳ್ಳದ ಭಂಡತನ.

ಆದರೆ, ನನ್ನ ಗೊರಕೆ ಚಿಕ್ಕವಳನ್ನು ಆಕರ್ಷಿಸಿದೆ. ಸದ್ದಿನ ಮೂಲ ಹುಡುಕುತ್ತ ಬಂದವಳಿಗೆ ಕಂಡಿದ್ದು ನಿದ್ದೆ ಮಾಡುತ್ತಿದ್ದ ನಾನು. ಹತ್ತಿರ ಬಂದು ಪರೀಕ್ಷಿಸಿದ್ದಾಳೆ. ನೆಗಡಿಯಾದಾಗೆಲ್ಲ ನಾನು ಭಯಂಕರ ಶಬ್ದ ಹೊರಡಿಸಿ ಮೂಗು ಹಿಂಡಿಕೊಳ್ಳುತ್ತಿದ್ದುದನ್ನು ಕಂಡಿದ್ದು ನೆನಪಾಗಿರಬೇಕು. ಸೀದಾ ಮೂಗನ್ನು ಎರಡೂ ಕೈಗಳಿಂದ ಒತ್ತಿ ಹಿಡಿದಿದ್ದಾಳೆ. ಗೊರಕೆ ಬಂದ್‌ ಆಗಿ ಬಾಯಿ ತೆರೆದುಕೊಂಡಿತು (ಮೂಗು ಹಿಡಿದರೆ ಬಾಯಿ ತಾನಾಗೇ ತೆರೆದುಕೊಳ್ಳುವುದಿಲ್ಲವೆ?). ಆಗ ಬಾಯಿ ಮುಚ್ಚುವ ಪ್ರಯತ್ನವನ್ನೂ ಮಾಡಿದಾಗಲೇ ನಾನು ಎದ್ದು ಕೂತಿದ್ದು.

ಇಂಥ ಚೇಷ್ಟೆಗಳನ್ನು ದಿನಕ್ಕೆ ನಾಲ್ಕೈದಾದರೂ ಮಾಡುತ್ತಾಳೆ ಚಿಕ್ಕ ಮಗಳು ನಿಧಿ. ಮಕ್ಕಳು ಹೀಗೆ ಮಾಡುತ್ತವೆ ಎಂಬುದನ್ನು ಅರಿಯದೇ ಬೆಳೆದ ಭೂಪ ನಾನು. ದೊಡ್ಡವಳು ವಿಶಿಷ್ಟಚೇತನೆಯಾಗಿದ್ದರಿಂದ, ಇಂಥ ಆಟಗಳನ್ನು ಆಡಲಿಲ್ಲ. ಈಗ ಚಿಕ್ಕವಳ ಮೂಲಕ ಮಕ್ಕಳ ಹೊಸ ಜಗತ್ತನ್ನು ನೋಡುತ್ತಿದ್ದೇನೆ.

ಎಷ್ಟು ವಿಚಿತ್ರವಲ್ಲವಾ? ಪರಿಸರ ಮಕ್ಕಳನ್ನು ಬೆಳೆಸುತ್ತದೆ. ತಂದೆತಾಯಿ ನಿಮಿತ್ತ ಮಾತ್ರ. ತಾವು ಕಂಡಿದ್ದನ್ನು ಮಾಡಿ ನೋಡುವ ಬುದ್ಧಿಯೇ ಮಕ್ಕಳನ್ನು ಬೆಳೆಸುತ್ತ ಹೋಗುತ್ತದೆ. ನಾವು ಅದಕ್ಕೆ ದಾರಿ ಮಾತ್ರ ಮಾಡಿಕೊಡಬಹುದು. ಥೇಟ್‌ ಭೂಮಿಯಲ್ಲಿ ಬಿತ್ತಿದ ಬೀಜದಂತೆ. ಅದಕ್ಕೆ ನೀರು, ಗೊಬ್ಬರ ನೀಡಿ ವಾತಾವರಣ ನಿರ್ಮಿಸಬಹುದೇ ಹೊರತು, ಸ್ವತಃ ನಾವೇ ಅದನ್ನು ಬೆಳೆಸಲಾರೆವು. ಅದೇನಿದ್ದರೂ ತಂತಾನೇ ಬೆಳೆಯುವಂಥದು.

ವಿಶಿಷ್ಟಚೇತನ ಮಕ್ಕಳನ್ನು ಬೆಳೆಸುವ ಬಗ್ಗೆ ನಾವಿಬ್ಬರೂ (ಅಂದ್ರೆ ನಾನು ನನ್ನ ಹೆಂಡ್ತಿ) ಬರೆಯುತ್ತಿರುವ ಪುಸ್ತಕಕ್ಕೆ ಚಿಕ್ಕ ಮಗಳು ನಿಧಿ ನಿತ್ಯ ಹೊಸ ಹೊಸ ಹೊಳಹುಗಳನ್ನು ನೀಡುತ್ತಿದ್ದಾಳೆ. ಮಕ್ಕಳ ಹೊಸ ಲೋಕ ನೋಡುತ್ತ ನೋಡುತ್ತ, ನಾವೂ ಹೀಗೇ ಬೆಳೆದಿದ್ದೆವಲ್ಲವೆ ಎಂದು ಅಚ್ಚರಿಯಾಗುತ್ತದೆ. ಆ ಅಚ್ಚರಿ ಹೊಸ ಹೊಸ ಬೆಳವಣಿಗೆ ತಂದುಕೊಡುತ್ತಿದೆ.

ಮಕ್ಕಳೆಂದರೇ ಅಚ್ಚರಿ. ಅಚ್ಚರಿ ಇರುವವರೆಗೆ ನಾವೂ ಮಕ್ಕಳೇ. ಅಲ್ವಾ?

- ಚಾಮರಾಜ ಸವಡಿ

No comments: