ಇದೇನು ಮಾಡಲು ಹೊರಟಿದ್ದೀರಾ ’ಮುಖ್ಯಮಂತ್ರಿ’ ಚಂದ್ರು?

18 Aug 2009

ಕನ್ನಡ ವಿಕಿಪೀಡಿಯಾ ಮಾಡಲು ಸರ್ಕಾರ ಮುಂದಾಗಿದೆ.

ಇಂಥದೊಂದು ಯೋಜನೆ ಬಗ್ಗೆ ಬಿ.ಎಸ್‌. ಯಡಿಯೂರಪ್ಪನವರು ತಮ್ಮ ಎರಡನೇ ಬಜೆಟ್‌ನಲ್ಲಿ ಘೋಷಿಸಿದಾಗಲೇ ನಗೆ ಬಂದಿತ್ತು. ಬಹುಶಃ ಇದೊಂದು ಮೂರ್ಖತನದ ಸಂಗತಿ ಎಂದು ಅವರಿಗೆ ಯಾರಾದರೂ ಮನವರಿಕೆ ಮಾಡಿಕೊಡಬಹುದು ಎಂಬ ನಿರೀಕ್ಷೆಯಿಂದ ಈ ಕುರಿತು ಬರೆಯಲು ಹೋಗಿದ್ದಿಲ್ಲ. ಆದರೆ, ಆಗಸ್ಟ್‌ ೬ನೇ ತಾರೀಖಿನಂದು ಈ ಕುರಿತಂತೆ ವಿಧಾನಸೌಧದಲ್ಲಿ ಸಭೆಯೊಂದು ನಡೆದೇಬಿಟ್ಟಿದೆ. ಆ ಕುರಿತು ಬಹುತೇಕ ಪತ್ರಿಕೆಗಳಲ್ಲಿ ತಪ್ಪುತಪ್ಪು ಮಾಹಿತಿಯುಳ್ಳ ವರದಿಯೂ ಅಚ್ಚಾಗಿದೆ. ಹೀಗಾಗಿ ಅರ್ಜೆಂಟಾಗಿ ಬರೆಯುವ ಅನಿವಾರ್ಯತೆ ಬಂದಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ’ಮುಖ್ಯಮಂತ್ರಿ’ ಚಂದ್ರು ತಿಳಿಯದೇ ಮಾಡುತ್ತಿದ್ದಾರೋ ಅಥವಾ ಪಕ್ಕಾ ಸರ್ಕಾರಿ ಶೈಲಿಯಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೋ ಗೊತ್ತಿಲ್ಲ- ಕನ್ನಡ ವಿಕಿಪೀಡಿಯಾ ಮಾಡಲು ಹೊರಟಿರುವುದು ಮಾತ್ರ ಅಪ್ಪಟ ಮೂರ್ಖತನ. ಇದು ಹೇಗಿದೆಯಂದರೆ, ಒಬ್ಬ ಯಡಿಯೂರಪ್ಪ ಇದ್ದಾಗಲೇ, ಡುಪ್ಲಿಕೇಟ್‌ ಯಡಿಯೂರಪ್ಪನವರ ನಿರ್ಮಾಣಕ್ಕೆ ದುಡ್ಡು ಖರ್ಚು ಮಾಡಲು ಹೊರಟಂತೆ.

ಏಕೆಂದರೆ, ಕನ್ನಡ ವಿಕಿಪೀಡಿಯಾ ಈಗಾಗಲೇ ಇದೆ. ಸರ್ಕಾರದ ದುಡ್ಡು ನೆಚ್ಚಿಕೊಳ್ಳದೇ ಸರಿಸುಮಾರು ಆರೂವರೆ ಸಾವಿರ ಲೇಖನಗಳನ್ನು ಹಲವಾರು ಉತ್ಸಾಹಿ ಕನ್ನಡಿಗರು ಕನ್ನಡ ವಿಕಿಪೀಡಿಯಾ ಭಂಡಾರಕ್ಕೆ ಸೇರಿಸಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ, ಯಾವುದೇ ಘೋಷಣೆ ಕೂಗದೇ ಕನ್ನಡ ಮಾಹಿತಿ ಭಂಡಾರ ಬೆಳೆಸುವ ಕೆಲಸವನ್ನು ಕಳೆದ ನಾಲ್ಕೈದು ವರ್ಷಗಳಿಂದ ಅವರು ಸದ್ದಿಲ್ಲದೇ ಮಾಡುತ್ತಲೇ ಇದ್ದಾರೆ. ಹೀಗಿರುವಾಗ, ಇದೇನಿದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಡುಪ್ಲಿಕೇಟ್‌ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು?

ಸರ್ಕಾರದ ವೆಬ್‌ಸೈಟ್‌ಗಳು ಮೊದಲೇ ಕುರಿದೊಡ್ಡಿಗಳಂತಿವೆ. ಅಲ್ಲಿ ಯಾವ ಮಾಹಿತಿಯೂ ಸರಿಯಾಗಿ ಸಿಗುವುದಿಲ್ಲ. ಆ ವೆಬ್‌ಸೈಟ್‌ಗಳು ನೋಡುವಂತಿರುವುದಿಲ್ಲ. ಉಸ್ತುವಾರಿ ನೋಡಿಕೊಳ್ಳದ ಬಿಬಿಎಂಪಿ ಪಾರ್ಕ್‌‌ಗಳಂತಿರುವ ಈ ವೆಬ್‌ಸೈಟ್‌ಗಳನ್ನು ಅನಿವಾರ್ಯ ಕರ್ಮಕ್ಕಷ್ಟೇ ನೋಡಬೇಕು. ಹೀಗಿರುವಾಗ, ದುಡ್ಡು ಖರ್ಚು ಮಾಡಿ ಈಗಾಗಲೇ ಇರುವ ವಿಕಿಪೀಡಿಯಾ ಮಾದರಿಯಲ್ಲೇ ಇನ್ನೊಂದನ್ನು ನಿರ್ಮಿಸುತ್ತೇನೆಂದು ಸರ್ಕಾರ ಹೊರಟರೆ ಇಡೀ ಉದ್ದೇಶವನ್ನೇ ಅನುಮಾನದಿಂದ ನೋಡಬೇಕಾಗುತ್ತದೆ.

ಈಗಾಗಲೇ ೨ ಕೋಟಿ ರೂಪಾಯಿ ಹಣವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದು ಶುರುವಷ್ಟೇ. ಪ್ರತಿ ಬಜೆಟ್‌ನಲ್ಲಿ ಇದಕ್ಕಾಗಿ ಹಣ ನಿಗದಿ ಮಾಡಿಸಿಕೊಳ್ಳುವುದು ಕಷ್ಟದ ಸಂಗತಿಯೇನಲ್ಲ. ಕನ್ನಡದ ಹೆಸರಿನಲ್ಲಿ ಇಷ್ಟೂ ಹಣ ಕೊಡದಿದ್ದರೆ ಹೇಗೆ? ಪ್ರಶ್ನೆ ಏನೆಂದರೆ, ಈಗಾಗಲೇ ಚೆನ್ನಾಗಿರುವ, ಹಾಗೂ ಪ್ರಯತ್ನಪಟ್ಟರೆ ಇನ್ನೂ ಚೆನ್ನಾಗಿ ಮಾಡಬಹುದಾದ ಕನ್ನಡ ವಿಕಿಪೀಡಿಯಾದ ಕಳಪೆ ಡುಪ್ಲಿಕೇಟ್‌ ನಿರ್ಮಾಣಕ್ಕೆ ಸರ್ಕಾರ ಹಣ ಸುರಿಯಬೇಕಾ? ವಿಕಿಪೀಡಿಯಾ ಹೆಸರಿನಲ್ಲಿ ವಿಧಾನಸೌಧದಲ್ಲಿ ಸರ್ಕಾರಿ ಖರ್ಚಿನಲ್ಲಿ ಸಮಾರಾಧನೆಗಳು ನಡೆಯಬೇಕಾ? ಇದೇ ದುಡ್ಡನ್ನು ಕನ್ನಡ ಫಾಂಟ್‌ಗಳ ಅಭಿವೃದ್ಧಿಗೂ ಅಥವಾ ಇನ್ಯಾವುದಾದರೂ ಉಪಯುಕ್ತ ಕೆಲಸಕ್ಕೆ ಬಳಸಬಹುದಲ್ಲ? ಅಥವಾ ಈಗಾಗಲೇ ಇರುವ ವಿಕಿಪೀಡಿಯಾಕ್ಕೇ ಪ್ರೋತ್ಸಾಹಧನವಾಗಿ ನೀಡಬಹುದಲ್ಲ?

ಸರ್ಕಾರ ಯಾವುದೇ ಕೆಲಸ ಮಾಡಿದರೂ ಅದನ್ನು ದುಬಾರಿಯಾಗಿ ಹಾಗೂ ಕಳಪೆಯಾಗಿ ಮಾಡುತ್ತದೆ ಎಂಬುದು ಹಳೆಯ ಗಾದೆ ಮಾತು. ಅದಕ್ಕೆ ಕನ್ನಡ ವಿಕಿಪೀಡಿಯಾ ನಿರ್ಮಾಣ ಪ್ರಯತ್ನ ಹೊಸ ಉದಾಹರಣೆ. ’ಮುಖ್ಯಮಂತ್ರಿ’ ಚಂದ್ರು ಕಾಮನ್‌ಸೆನ್ಸ್‌ ಬಳಸಿ ವಿಚಾರ ಮಾಡಲಿ. ಅಂತರ್ಜಾಲದಲ್ಲಿ ಕನ್ನಡ ಬೆಳೆಸುವ ಪ್ರಯತ್ನವನ್ನು ಸಾವಿರಾರು ಜನ ಯಾವುದೇ ಲಾಭಾಪೇಕ್ಷೆ ಇಲ್ಲದೇ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಇಂಥ ಪ್ರಯತ್ನಗಳಿಗೆ ಸ್ಪಂದಿಸುವದನ್ನು ಸರ್ಕಾರ ಪ್ರಾರಂಭಿಸಲಿ. ಅಂತರ್ಜಾಲದಲ್ಲಿ ಬಳಸಲು ಸಾಧ್ಯವಾಗುವಂತೆ ಕನ್ನಡದಲ್ಲಿ ಉತ್ತಮ ಫಾಂಟ್‌ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಲಿ. ’ನುಡಿ’ ಎಂಬ ಕೆಟ್ಟ ಕನ್ನಡ ತಂತ್ರಾಂಶವನ್ನು ಅಂತರ್ಜಾಲ ಹಾಗೂ ಬಳಕೆದಾರಸ್ನೇಹಿಯಾಗುವಂತೆ ರೂಪಿಸಲಿ. ಅದು ಬಿಟ್ಟು, ಡುಪ್ಲಿಕೇಟ್‌ ಕೆಲಸ ಮಾಡಲು ಮುಂದಾದರೆ ಸರ್ಕಾರದ ಕನ್ನಡಪರ ಕೆಲಸಗಳನ್ನೇ ಅನುಮಾನದಿಂದ ನೋಡುವಂತಾಗುತ್ತದೆ.

ಈ ’ಮುಖ್ಯಮಂತ್ರಿ’ ಚಂದ್ರು ಹಾಗೂ ಆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಈ ಬಗ್ಗೆ ಒಂಚೂರು ಗಮನ ಹರಿಸಲಿ.

- ಚಾಮರಾಜ ಸವಡಿ

No comments: