
ಇದೇನಿದು, ನಿನ್ನೆ ಮೊನ್ನೆವರೆಗೆ ಚೆನ್ನಾಗಿಯೇ ಇದ್ದ ಮಂದಿಗೆ ಹಂದಿಜ್ವರದ ಭೀತಿ ಒಕ್ಕರಿಸಿದೆಯಲ್ಲ ಎಂದು ಗಾಬರಿಯಾಗುತ್ತದೆ. ಬೆಳ್ಳಂಬೆಳಿಗ್ಗೆಯೇ ಫೋನ್ ಮಾಡಿ, 'ಇಲ್ಲೆಲ್ಲ ಮಾಸ್ಕ್ ಖಾಲಿ. ನಿಮ್ಮಲ್ಲೇನಾದರೂ ಸಿಗುತ್ತದಾ' ಎಂದು ಟಾಯ್ಲೆಟ್‌ಗೆ ಅರ್ಜೆಂಟಾಗಿ ಹೊರಟವನನ್ನು ಫಜೀತಿಗೆ ಬೀಳಿಸಿದ ಮಿತ್ರರಿದ್ದಾರೆ. 'ಮಾಸ್ಕ್ ಇಲ್ಲ, ಟಿಷ್ಯೂ ಪೇಪರ್ ಪರವಾಗಿಲ್ವಾ?' ಎಂದು ಅಷ್ಟೇ ಕಾಳಜಿಯಿಂದ ಉತ್ತರಿಸಿ ನೆಮ್ಮದಿಯ ಮನೆಗೆ ಸುಮ್ಮನೇ ಹೋಗಿದ್ದೇನೆ.
ಇವರಿಗೆಲ್ಲೋ ಭ್ರಾಂತು. 'ನೀವು ಮುಖಕ್ಕೆ ಗವುಸು ಹಾಕಿಕೊಂಡಾಕ್ಷಣ, ಹಂದಿಜ್ವರದ ರೋಗಾಣುಗಳು ವಾಪಸ್ ಹೋಗಿಬಿಡುತ್ತವಾ? ಅಲ್ಲೇ ಹಣೆಯ ಮೇಲೆ, ಕಣ್ರೆಪ್ಪೆಗಳ ಮೇಲೆ, ಕಿವಿ ಹತ್ತಿರ, ಕೊರಳಪಟ್ಟಿಯಡಿ ಕಾಯುತ್ತ ಕೂಡುವುದಿಲ್ಲವೆ?' ಎಂದು ತಮಾಷೆ ಮಾಡಿ ಬೈಸಿಕೊಂಡಿದ್ದೇನೆ. ಉಡಾಫೆಯಾಗಿ ಮಾತಾಡುವ ನನ್ನನ್ನೇ ಹಂದಿಜ್ವರಪೀಡಿತನಂತೆ ನೋಡಿ ದೂರ ಹೋಗಿದ್ದಾರೆ. ಏನು ಮಾಡಲಿ, ರೋಗಕ್ಕೆ ಔಷಧಿ ಕೊಡಬಹುದು, ಭ್ರಾಂತಿಗೆ ಔಷಧಿ ಕೊಡೋದು ಕಷ್ಟ.
ಈ ಎಲ್ಲ ಘಟನೆಗಳ ನಡುವೆ ಸರ್ಕಾರವೇ ಹಂದಿಜ್ವರಪೀಡಿತನಂತೆ ಗಾಬರಿಯಿಂದ ಓಡಾಡುತ್ತಿದೆ. ಮಳೆ ಬರುತ್ತಿಲ್ಲ ಎಂಬ ಯೋಚನೆ ಯಾರಿಗೂ ಇಲ್ಲ. ಬರಪೀಡಿತ ಪ್ರದೇಶಗಳ ಹಣೆಬರಹ ಏನು ಎಂದು ವಿಚಾರಿಸುತ್ತಿಲ್ಲ. ಮಾಸ್ಕ್, ಹಂದಿಜ್ವರದ ಔಷಧಿಗಳ ಹೋಲ್‌ಸೇಲ್ ಖರೀದಿಗೆ ಈಗ ಭರ್ಜರಿ ಅವಕಾಶ. ನಿಯಮಗಳನ್ನು ಉಲ್ಲಂಘಿಸಿದರೂ ಕ್ಯಾರೇ ಅನ್ನುವವರಿಲ್ಲ. ಎಲ್ಲರ ಮನಸ್ಸಿನಲ್ಲೂ ಹಂದಿಜ್ವರದ ಸುಪ್ತ ಭೀತಿ.
ಹಂದಿಜ್ವರದ ಬಗ್ಗೆ ಹೊಸ ವರದಿ ತಾರದಿದ್ದರೆ ವರದಿಗಾರನ ಮೇಲೆ ಥೇಟ್ ಕೊಬ್ಬಿದ ಹಂದಿಯಂತೆ ಏರಿಬರುವ ಚೀಫ್‌ಗಳಿದ್ದಾರೆ. ಹೀಗಾಗಿ, ಪರಿಸ್ಥಿತಿಯನ್ನು ಅಗತ್ಯಕ್ಕಿಂತ ತೀವ್ರವಾಗಿ ಬಿಂಬಿಸುವುದು ವರದಿಗಾರರ ಕರ್ಮ. ಪತ್ರಿಕೆಗಳ ಪುಟ ತಿರುವಿದರೆ (ಪುಟ ತಿರುವುದೇನು ಬಂತು, ಮುಖಪುಟದಲ್ಲೇ ರಾಚುತ್ತಿರುತ್ತದೆ), ಚಾನೆಲ್‌ಗಳನ್ನು ಬದಲಿಸಿದರೆ ಎಲ್ಲೆಲ್ಲೂ ಮಾಸ್ಕುಗಳದೇ ಚಿತ್ರಣ. ಇದ್ದಕ್ಕಿದ್ದಂತೆ ನಮ್ಮ ದೇಶವೇ ಮಾಸ್ಕೋ ಆಗಿಬಿಟ್ಟಿದೆ ಅನಿಸುತ್ತಿದೆ. ಸದ್ಯಕ್ಕೆ ನ್ಯೂಸ್ ರೀಡರ್‌ಗಳು ಮಾಸ್ಕ್ ಹಾಕಿಕೊಂಡು ಸುದ್ದಿ ಓದುತ್ತಿಲ್ಲ ಎಂಬುದೊಂದೇ ಸಮಾಧಾನ.
ರಸ್ತೆಗಿಳಿದರೆ ಸಾಕು, ಮಾಸ್ಕ್ ಧರಿಸಿದ ಜನ ಘನಗಂಭೀರತೆಯಿಂದ ಓಡಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಅರೆಬರೆ ಸುಂದರಿಯರೂ ಮಾಸ್ಕ್ ಧರಿಸಿಕೊಂಡು ಸಕತ್ತಾಗಿ ಕಾಣತೊಡಗಿದ್ದಾರೆ. ಇದ್ದಕ್ಕಿದ್ದಂತೆ ಉಬ್ಬುಹಲ್ಲಿನವರು ಮಾಯವಾಗಿದ್ದಾರೆ. ಲಿಪ್‌ಸ್ಟಿಕ್‌ಗಳು ಕಾಣುತ್ತಿಲ್ಲ. ಭಾನುವಾರ ಬಂದರೂ ಹಂದಿಮಾಂಸದ ಅಂಗಡಿಗಳ ಬಾಗಿಲು ಹಾಕಿಯೇ ಇದೆ. ಎಲ್ಲ ಕಡೆ ಮಂದಿ ಮುಖಕ್ಕೆ ಗವುಸು ಹಾಕಿಕೊಂಡು ಓಡಾಡುತ್ತಿರುವುದನ್ನು ಬಹುಶಃ ಹಂದಿಗಳೂ ಆನಂದದಿಂದ ನೋಡುತ್ತಿವೆಯೇನೋ.
ಇದು ಸಮೂಹ ಸನ್ನಿಯಾ? ಅತಿರೇಕವಾ? ಬೆಂಗಳೂರಿನ ಭರ್ಜರಿ ಟ್ರಾಫಿಕ್‌ನಲ್ಲಿ ಗಾಡಿ ಓಡಿಸುವಾಗಲೂ ಮುಖಕ್ಕೆ ಕರ್ಚೀಫ್ ಕಟ್ಟದ ಜನರೂ ಈಗ ಮಾಸ್ಕ್ ಮಾನವರಾಗಿದ್ದಾರೆ. ಮುಖಗಳೇ ಮಾಯವಾದಂತಾಗಿ, ಬೆಲೆ ಕಟ್ಟಲಾಗದ ಆಭರಣವೆನಿಸಿದ ಮುಗುಳ್ನಗೆಯೂ ಅದರೊಂದಿಗೆ ಮುಚ್ಚಿಹೋಗಿದೆ.
ಮೂಗು ಮುಚ್ಚಿಕೊಳ್ಳಬೇಕಾದ ಜಾಗದಲ್ಲೇ ಹಾಗೇ ಓಡಾಡುತ್ತಿದ್ದ ಜನ, ಈಗ ಎಲ್ಲ ಕಡೆ ಮಾಸ್ಕ್ ಹಾಕಿಕೊಂಡು ಹೋಗತೊಡಗಿದ್ದಾರೆ. ನಿಜವಾದ ಹಂದಿಜ್ವರಕ್ಕಿಂತ ಮನಸ್ಸಿನಲ್ಲಿರುವ ಜ್ವರ ಇವರನ್ನು ರೋಗಿಗಳನ್ನಾಗಿಸಿದೆ.
ಅದಕ್ಕಿನ್ನೆಂಥ ಮದ್ದು ಬೇಕಾಗುತ್ತದೋ!
- ಚಾಮರಾಜ ಸವಡಿ
2 comments:
ನಿಮ್ಮ ಅಭಿಮತ ತಿಳಿದು ಸಂತೋಷವಾಯಿತು.ಎಲ್ಲರೂ ಇದನ್ನ ತಿಳಿದರೆ ಒಳ್ಳೆಯದು.ಹಾಗೇ ಆರೋಗ್ಯದ ಬಗ್ಗೆ ಗಮನ ಅಗತ್ಯ ಎಂದೂ ಬರೆಯಬೇಕು.ಸಾರ್ವಜನಿಕವಾಗಿ ಗಲೀಜು ಅಭ್ಯಾಸಗಳನ್ನು ಬೆಳೆಸುವುದನ್ನು ಬಿಡುವ ಅಗತ್ಯ ಈಗ ಇದೆ.ಜನ ಜಂಗುಳಿ ಇದ್ದಲ್ಲಿ ಸೀನುವುದು,ಕೆಮ್ಮುವುದು,ಉಗುಳುವುದು ಇತ್ಯಾದಿ ಮಾಡಿ ಶೀತ ಜ್ವರವೇ ಆಗಲಿ,ಹಬ್ಬಿಸುವುದನ್ನ ತಡೆಯಬೇಕಾದ್ದು ನಮ್ಮ ಕರ್ತವ್ಯ.
--
ಆರೋಗ್ಯಕರ ಅಭ್ಯಾಸಗಳಿದ್ದರೆ, ಈಗ ಗಂಭೀರ ಎಂದು ಭಾವಿಸಲಾಗಿರುವ ಬಹುತೇಕ ರೋಗಗಳನ್ನು ಸುಲಭವಾಗಿ ಗುಣಪಡಿಸಬಹುದು. ಆದರೆ, ಅಂಥ ಪ್ರಜ್ಞೆಯ ಕೊರತೆ ದಟ್ಟವಾಗಿದೆ. ಮನೆಯಲ್ಲಿ ಆ ಅಭ್ಯಾಸ ಮಾಡಿಸದೇ ಇದ್ದಾಗ, ಸಾರ್ವಜನಿಕ ಸ್ಥಳಗಳಲ್ಲಿ ಅದು ರೂಢಿಗೆ ಬಂದೀತಾದರೂ ಹೇಗೆ? ರೋಗಗಳ ಬಗ್ಗೆ ಪ್ರಚಾರ ಕೊಡುವುದಕ್ಕಿಂತ, ಆರೋಗ್ಯಕರ ಪದ್ಧತಿಗಳ ಬಗ್ಗೆ ಗಮನ ಹರಿಸಿದರೆ ಸಮಸ್ಯೆಗಳು ತಾವೇ ಕಡಿಮೆಯಾದಾವು. ಖಾಸಗಿಯಾದರೂ ಅಂಥದೊಂದು ಪ್ರಯತ್ನವನ್ನು ನಾವೆಲ್ಲ ಮಾಡಬೇಕಿದೆ.
Post a Comment