ತುಮಕೂರು ದಾಟಿ ಮುಂದೆ ಹೋಗುತ್ತಿದ್ದಾಗ, ದಾರಿಯಲ್ಲಿ ಒಂದೆಡೆ ಮಾವಿನ ಹಣ್ಣುಗಳಿಗಾಗಿ ನಿಂತೆವು. ಆ ಸ್ಥಳ ಇತ್ತ ಊರೂ ಅಲ್ಲ, ಅತ್ತ ಬಯಲೂ ಅಲ್ಲ. ಅಲ್ಲೊಂದು ಇಲ್ಲೊಂದು ಮನೆಗಳು, ಕುರಿ ಕಾಯುವ ಹುಡುಗರು ಮತ್ತು ಖಾಲಿ ಹೊಲಗಳು.
ಗಿಣಿ ಕಚ್ಚಿದ ಮಾವಿನ ಹಣ್ಣುಗಳಿಗಾಗಿ ನಮ್ಮ ಹುಡುಕಾಟ ನಡೆದಿತ್ತು (ಈ ಬಗ್ಗೆ ಮುಂದೆ ಬರೆಯುತ್ತೇನೆ). ಹೀಗೇ ಮುಂದೆ ಹೋಗಿ, ಅಲ್ಲಿ ತಾಜಾ ಹಣ್ಣುಗಳನ್ನು ಮಾರುತ್ತಾರೆ ಎಂದರು ಕುರಿ ಕಾಯುವ ಹುಡುಗರು.
ಕಾರು ಮುಂದೆ ಹೊರಟಿತು. ಇದ್ದ ಎರಡು ಗಿಣಿ ಕಚ್ಚಿದ ಮಾವುಗಳನ್ನು ಅನಿಲ್ ಮತ್ತು ಶಿವು ತಿಂದಾಗಿತ್ತು. ಹರಿ ಮತ್ತು ನಮಗೆ ನಿರಾಶೆ.
ಹೀಗಾಗಿ, ಹಣ್ಣುಗಳನ್ನು ಮಾರುವ ಆ ಮನೆ ಯಾವುದು ಎಂದು ಹುಡುಕುತ್ತ ಹೊರಟೆವು. ಸ್ವಲ್ಪ ದೂರದಲ್ಲೇ ಮನೆಯೊಂದು ಸಿಕ್ಕಿತು. ಮನೆ ಮುಂದೆ ಮೂರ್ನಾಲ್ಕು ಬಾಲಕಿಯರು ಮಾತಾಡುತ್ತ ಕೂತವರು ನಮ್ಮ ಕಾರು ನಿಂತಿದ್ದು ಕಂಡು ಒಳಗೆ ಹೋಗಿಬಿಟ್ಟರು. ಇಲ್ಲೇನಾದರೂ ಹಣ್ಣುಗಳನ್ನು ಮಾರುತ್ತಾರಾ ಎಂದು ಹುಡುಕುತ್ತಿದ್ದ ನಮ್ಮ ಗಮನ ಸೆಳೆದಿದ್ದು ಮನೆಯ ಬೋರ್ಡ್.
’ಕೆ. ಕಾಮಣ್ಣ ಮತ್ತು ಮಕ್ಕಳು’ ಎಂದು ಅಲ್ಲಿ ಬರೆಯಲಾಗಿತ್ತು. ಅದನ್ನು ನೋಡಿ ನಮಗೆಲ್ಲ ನಗುವೋ ನಗು. ಕಾಮಣ್ಣ ಇದ್ದ ಮೇಲೆ ಮಕ್ಕಳಿಲ್ಲದಿದ್ದರೆ ಹೇಗೆ? ಎಂದು ನಗಾಡಿಕೊಂಡೆವು. ಅನಿಲ್ ಶ್ರದ್ಧೆಯಿಂದ ಬೋರ್ಡ್ ಮತ್ತು ಮನೆಯ ಫೊಟೊ ತೆಗೆದರು.
ನಿರಾಶೆ ಎಂದರೆ, ಅಲ್ಲಿಯೂ ನಮಗೆ ಮಾವಿನ ಹಣ್ಣುಗಳು ಸಿಗಲಿಲ್ಲ.
(ಮುಗಿದಿಲ್ಲ)
- ಚಾಮರಾಜ ಸವಡಿ
No comments:
Post a Comment