ಕತ್ತಲೆಯಿಂದ ಹೊರ ಬಂದ ಖಾದಿ

16 Jul 2008


ಇತ್ತೀಚಿನ ವರ್ಷಗಳ ಹೊಸ ಭರವಸೆ ಖಾದಿ ಗ್ರಾಮೋದ್ಯೋಗ. ಎಲ್ಲ ಬಗೆಯ ತಾಂತ್ರಿಕ ಸವಾಲುಗಳ ನಡುವೆಯೂ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದಲ್ಲದೇ ಹೊಸ ರೀತಿಯಿಂದ ಅದನ್ನು ಸಮರ್ಥವಾಗಿ ಎದುರಿಸುತ್ತಿರುವ ಈ ಉದ್ಯಮ ಈಗ ಯುವಪೀಳಿಗೆಯನ್ನೂ ಆಕರ್ಷಿಸಿದೆ. ಬೆಂಗಳೂರಿನಲ್ಲಿ ಖಾದಿ ಹಾಗೂ ಕರಕುಶಲ ವಸ್ತುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಕತ್ತಲ ಮೂಲೆಯಲ್ಲಿ ಕೂತು ಬದುಕು ನೇಯ್ದುಕೊಳ್ಳುತ್ತಿರುವ ಸಾವಿರಾರು ಬಡಕಾರ್ಮಿಕರು ಜಾಗತೀಕರಣದ ಸವಾಲನ್ನು ಎದುರಿಸಿ ಗೆದ್ದುದು ಖಂಡಿತ ಭರವಸೆಯ ಸಂಕೇತ. ಆದರೆ ರಾಜ್ಯದ ಮೂಲೆಮೂಲೆಯಲ್ಲಿ ಸದ್ದಿಲ್ಲದೇ ಹಬ್ಬುತ್ತಿರುವ ಖಾದಿ ಉದ್ಯಮಕ್ಕೆ ಸರ್ಕಾರದಷ್ಟೇ ಅಲ್ಲ, ನಮ್ಮ-ನಿಮ್ಮ ಆಸರೆಯೂ ಬೇಕಿದೆ...

'ಈ ಶರಟು ತೊಟ್ಟಾಗಿನ ಆನಂದವೇ ಬೇರೆ' ಎಂದ ಗೆಳೆಯ.

ಆತ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿ. ಬಡ ಮನೆತನದಿಂದ ಬಂದಿದ್ದರೂ ಮಾಹಿತಿ ತಂತ್ರಜ್ಞಾನ ಈಗ ಕಂಡು-ಕೇಳರಿಯದ ಸಮೃದ್ಧಿ ತಂದುಕೊಟ್ಟಿದೆ. ರೊಟ್ಟಿ ಜಗಿಯುತ್ತಿದ್ದವನ ಬಾಯಿಗೆ ಪಿಜ್ಜಾ ಬಂದಿದೆ. ಸೌತೆಕಾಯಿ ಜಾಗದಲ್ಲೀಗ ಸೇಬು. ಅಡಿಕೆ ಹೋಳಿನ ಜಾಗದಲ್ಲಿ ಮಿಂಟ್ ಬಂದು ಕೂತಿದೆ. ಮೈತುಂಬ ಸೆಂಟಿನ ಘಂ.

ಆದರೆ ಆರೇ ತಿಂಗಳಲ್ಲಿ ಎಲ್ಲವೂ ಬೇಸರ ಹುಟ್ಟಿಸಿದವು. ಏನಾಗಿ ಹೋಯಿತು? ಎಂಬ ಗೊಂದಲದಲ್ಲಿದ್ದವನನ್ನು ಬೆಂಗಳೂರಿನಲ್ಲಿ ನಡೆದ ಖಾದಿ ಮೇಳ ಸೆಳೆಯಿತು. ಫ್ಯಾಶನ್‌ಗೆಂದು ಖರೀದಿಸಿದ್ದ ಎರಡು ಖಾದಿ ಅಂಗಿಗಳು ಅವನ ಮನಸ್ಸನ್ನು ಬದಲಾಯಿಸಿವೆ ಎಂದರೆ ನಂಬಲು ನಿಮಗೆ ಕಷ್ಟವಾಗಬಹುದು.

’ಹೌದು ಮಾರಾಯ. ಈ ಶರಟು ತೊಟ್ಟಾಗಿನ ಆನಂದವೇ ಬೇರೆ’ ಅನ್ನುತ್ತಾನೆ ಈಗ. ರಜೆಗೆಂದು ಊರಿಗೆ ಬಂದರೆ ಖಾದಿ ಭಂಡಾರಗಳನ್ನು ಸುತ್ತುತ್ತಾನೆ. ನೋಡಲು ಸಾದಾ, ಮುಟ್ಟಲು ಒರಟು ಅನ್ನಿಸಿದರೂ ಖಾದಿ ಅಮ್ಮನಂತೆ ಸಂತೈಸುತ್ತದೆ ಅನ್ನುತ್ತಾನೆ. ಖಾದಿ ಭಂಡಾರಗಳಲ್ಲಿ ಸಿಗುವ ಕಷಾಯದ ಪುಡಿ, ಗಂಧದ ಕಡ್ಡಿಗಳು, ಅಪ್ಪಟ ಜೇನುತುಪ್ಪ, ಮೆತ್ತನೆಯ ವಿವಿಧ ಬಣ್ಣದ ಅಂಗಿಗಳು, ಪ್ಯಾಂಟ್‌ಗಳು, ಖಾದಿ ಜೀನ್ಸ್‌ಗಳು, ಲುಂಗಿ, ಟವೆಲ್, ಕರವಸ್ತ್ರ, ಬೆಡ್ ಶೀಟ್, ಚಪ್ಪಲಿ- ಹೀಗೆ ತರಹೇವಾರಿ ಉತ್ಪನ್ನಗಳನ್ನು ಖರೀದಿಸುತ್ತ ’ಎಲ್ಲವೂ ಎಷ್ಟೊಂದು ಸೋವಿ, ಎಷ್ಟು ಆರಾಮ’ ಎಂದು ಉದ್ಗರಿಸುತ್ತಾನೆ.

ಮನಸ್ಸುಗಳನ್ನು ಖಾದಿ ಗೆದ್ದಿದ್ದು ಹೀಗೆ.

ಇವತ್ತು ಬೆಂಗಳೂರೊಂದೇ ಅಲ್ಲ, ದೊಡ್ಡ ನಗರಗಳಲ್ಲಿ ಏರ್ಪಡಿಸಲಾಗುವ ಖಾದಿ ಮೇಳಗಳು ಅಪಾರ ಜನಪ್ರಿಯತೆ ಗಳಿಸಿವೆ ಎಂಬುದು ಅತಿಶಯೋಕ್ತಿಯಲ್ಲ. ಜನ ನಿಧಾನವಾಗಿ ಖಾದಿ ಹಾಗೂ ಗೃಹೋತ್ಪನ್ನಗಳತ್ತ ಹೊರಳುತ್ತಿದ್ದಾರೆ. ಮಿಲ್ ಉತ್ಪನ್ನಗಳು ಎಷ್ಟೇ ಮಿರಮಿರ ಮಿಂಚಲಿ, ಎಷ್ಟೇ ನುಣುಪಾಗಿರಲಿ, ಅವುಗಳ ಜಾಹಿರಾತು ಎಷ್ಟೇ ಚಿತ್ತಾಕರ್ಷಕವಾಗಿರಲಿ, ಅವೇನೂ ಇಲ್ಲದ ಒರಟು ಖಾದಿ ಮತ್ತೆ ಸಂಚಲನೆ ಉಂಟು ಮಾಡುತ್ತಿದೆ.

ಇದಕ್ಕೆ ಕಾರಣ ಹುಡುಕುವುದು ಕೊಂಚ ಕಷ್ಟ. ಖಾದಿಯಲ್ಲಿ ತಂತ್ರಜ್ಞಾನ ಹಾಗೂ ರಾಸಾಯನಿಕಗಳ ಬಳಕೆ ಕಡಿಮೆ ಎಂಬ ಕಾರಣಕ್ಕೆ ಇರಬಹುದು. ಅದು ಹೆಚ್ಚು ನೈಸರ್ಗಿಕ ಎಂಬ ಕಾರಣವಾಗಿರಬಹುದು. ಒಂದು ಬೃಹತ್ ಸಾಮ್ರಾಜ್ಯವನ್ನು ಓಡಿಸಲು ಪ್ರೇರಕವಾಗಿತ್ತು ಎಂಬುದಕ್ಕೆ ಇರಬಹುದು. ಒಟ್ಟಿನಲ್ಲಿ ಖಾದಿ ಹಾಗೂ ಇತರ ಗೃಹ ಉತ್ಪನ್ನಗಳಿಗೆ ಮತ್ತೆ ಬೇಡಿಕೆ ಹೆಚ್ಚತೊಡಗಿವೆ. ನಮ್ಮ ಹೊಸ ಪೀಳಿಗೆ ಖಾದಿಯಲ್ಲಿ ದೇಶದ ಸಂಸ್ಕೃತಿ ಕಂಡಿದೆ. ಅಮ್ಮನ ಮಡಿಲಿನಂಥ ನೆಮ್ಮದಿ ಕಂಡುಕೊಂಡಿದೆ. ಇದು ನಮಗೆ ಹಿತಕರ ಎಂಬ ಭಾವನೆ ಹುಟ್ಟಿಸಿದೆ.

ಇವಕ್ಕೆ ಪೂರಕವಾಗಿ ಎಂಬಂತೆ ಎರಡು ಹೊಸ ಬೆಳವಣಿಗೆಗಳು ಧಾರವಾಡದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಭವಿಸಿವೆ.

ಮೊದಲನೆಯದು, ಧಾರವಾಡದ ಸುಭಾಷ್ ರಸ್ತೆಯಲ್ಲಿರುವ ಖಾದಿ ಭಂಡಾರ ಅಂಗಡಿಗೆ ೭೫ ವರ್ಷಗಳು ತುಂಬಿದ್ದು. ಆಗಸ್ಟ್ ೧, ೧೯೩೦ರ್‍ಲಲಿ ಪ್ರಾರಂಭವಾಗಿರುವ ಈ ಅಂಗಡಿ ಅಂದಿನಿಂದ ಇಂದಿನವರೆಗೆ ಕೇವಲ ಮಾನವ ಶ್ರಮದಿಂದ ತಯಾರಿಸಿದ ಉತ್ಪನ್ನಗಳನ್ನೇ ಮಾರುತ್ತ ಬಂದಿದೆ. ಕಳೆದ ೭೫ ವರ್ಷಗಳಲ್ಲಿ, ಗೃಹ ಕೈಗಾರಿಕೆಗಳಿಗೆ ಎದುರಾದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿದೆ. ’ಇನ್ನು ಗಾಂಧಿ ಕಾಲ ಮುಗೀತು ಬಿಡ್ರಿ’ ಎಂಬ ಉದಾಸೀನತೆಗೆ ತಕ್ಕ ಉತ್ತರ ಕೊಟ್ಟಿದೆ.

ಎಲ್ಲೆಡೆ ಖಾದಿ ಕೇಂದ್ರಗಳು ಮುಗ್ಗರಿಸುತ್ತಿದ್ದಾಗ ಧಾರವಾಡದ ಈ ಕೇಂದ್ರ ವಾರ್ಷಿಕ ರೂ.೮೫ ಲಕ್ಷ ಉತ್ಪಾದನೆ ಹಾಗೂ ರೂ.೮೦ ಲಕ್ಷ ಮಾರಾಟ ದಾಖಲಿಸಿ ಮುನ್ನುಗ್ಗುತ್ತಿದೆ. ಇಲ್ಲಿ ಇವತ್ತಿಗೂ ತಿಂಗಳಿಗೆ ಸರಾಸರಿ ರೂ.೩ ಲಕ್ಷ ವಹಿವಾಟು ನಡೆಯುತ್ತದೆ. ಅತ್ಯುತ್ತಮ ಗುಣಮಟ್ಟದ ಡಿ.ಟಿ. ಬಟ್ಟೆ, ಟವೆಲ್, ರಾಷ್ಟ್ರಧ್ವಜ, ಲುಂಗಿ, ಅಂಗಿ ಮತ್ತು ಪ್ಯಾಂಟ್ ಬಟ್ಟೆ, ಜುಬ್ಬಾ, ರೆಡಿಮೇಡ್ ಅಂಗಿ, ಟಾಪ್‌ಗಳು, ಬಿಜಲಿ ಶರ್ಟಿಂಗ್, ಕಾಲ್ಹಾಸುಗಳು, ಗುಣಮಟ್ಟದ ರಗ್‌ಗಳು, ನೆಲ ಒರೆಸುವ ಬಟ್ಟೆಗಳು, ಮಹಿಳೆಯರ ಜೀನ್ಸ್, ಗಾಂಧಿ ಟೊಪ್ಪಿಗೆ, ಊದುಬತ್ತಿ, ಸುಗಂಧ ದ್ರವ್ಯಗಳು, ಜೇನುತುಪ್ಪ, ಶ್ಯಾಂಪೂ, ಆರೋಗ್ಯಕಾರಿ ಸಾವಯವ ಪೇಯಗಳು, ಗಂಧದ ಹಾರಗಳು, ಚರ್ಮದ ಚಪ್ಪಲಿಗಳು- ಹೀಗೆ ಹಲವಾರು ನಿತ್ಯೋಪಯೋಗಿ ವಸ್ತುಗಳನ್ನು ಈ ಕೇಂದ್ರ ತಯಾರಿಸಿ ಮಾರುತ್ತದೆ.

ಇಂಥದೇ ಇನ್ನೊಂದು ಪ್ರಮುಖ ಬೆಳವಣಿಗೆ ಸಂಭವಿಸಿರುವುದು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥ ಎಂಜನಿಯರಿಂಗ್ ಕಾಲೇಜಿನಲ್ಲಿ ಹೇಳಿ ಕೇಳಿ ಶ್ರೀಮಂತರ ಮಕ್ಕಳಿರುವ ಕಾಲೇಜದು. ಆದರೂ ಅಲ್ಲಿಯ ವಿದ್ಯಾರ್ಥಿಗಳಲ್ಲಿ ಹಾಗೂ ಅಧ್ಯಾಪಕ ವರ್ಗದಲ್ಲಿ ಖಾದಿ ಪ್ರೇಮ ಮೊಳೆತಿದೆ. ಪ್ರತಿ ಶುಕ್ರವಾರ ಈ ಕಾಲೇಜಿನ ಬಹುತೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಅಧ್ಯಾಪಕರು ಶುದ್ಧ ಖಾದಿ ಬಟ್ಟೆಗಳನ್ನೇ ಧರಿಸುತ್ತಾರೆ. ಆ ಮೂಲಕ ಬಡ ನೇಕಾರರು ಹಾಗೂ ರೈತರ ಶ್ರಮಕ್ಕೆ ತಮ್ಮ ಬೆಂಬಲ ನೀಡುತ್ತಿದ್ದಾರೆ.

ಸರ್ಜಾಶಂಕರ ಹರಳಿಮಠ ಎಂಬ ಉತ್ಸಾಹಿ ಯುವಕ ಬಹುರಾಷ್ಟ್ರೀಯ ಕಂಪನಿಯ ಕೆಲಸ ಬಿಟ್ಟು ಶಿವಮೊಗ್ಗ ನಗರದಲ್ಲಿ ಪ್ರಾರಂಭಿಸಿರುವ ’ಸಂಸ್ಕೃತಿ’ ಹೆಸರಿನ ದೇಸಿ ಅಂಗಡಿಯ ಜನಪ್ರಿಯತೆ ಇನ್ನೊಂದು ಜ್ವಲಂತ ಉದಾಹರಣೆ.

ಹಾಗೆ ನೋಡಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಖಾದಿ ವಸ್ತುಗಳನ್ನು ಮಾರುವ ಅಂಗಡಿಗಳಿವೆ ಹಾಗೂ ಬಹಳಷ್ಟು ಅಂಗಡಿಗಳು ಲಾಭದಲ್ಲಿವೆ. ಎಲ್ಲಕ್ಕಿಂತ ಮುಖ್ಯ ಎಂದರೆ, ಇವೆಲ್ಲ ಉತ್ಪನ್ನಗಳು ಸಿದ್ಧವಾಗುವುದು ಗೃಹ ಕೈಗಾರಿಕೆಯಡಿ. ಬಹುತೇಕ ಉತ್ಪನ್ನಗಳು ಗ್ರಾಮೀಣ ಮಹಿಳೆಯರ ಕೈಯಿಂದ ತಯಾರಾದವುಗಳು. ದೂರದ ಹಳ್ಳಿಯ ಕತ್ತಲ ಮೂಲೆಯಲ್ಲಿ ಕೂತು ಸಿದ್ಧಪಡಿಸಿರುವ ಈ ವಸ್ತುಗಳು ಜಾಗತೀಕರಣದ ಸವಾಲನ್ನು ಸಮರ್ಥವಾಗಿ ಎದುರಿಸಿ ಗೆದ್ದಿದ್ದಲ್ಲದೇ ಸಾವಿರಾರು ಬಡಜನರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿವೆ ಎಂಬುದು ಅಚ್ಚರಿಯ ಸಂಗತಿ.

ಆದರೆ ಲಾಭದ ದೃಷ್ಟಿ ಮಾತ್ರ ಇದರೆ ಈಗ ಬೆಳಗಾವಿ ನೇಕಾರರು ಎದುರಿಸುತ್ತಿರುವಂಥ ಸಮಸ್ಯೆಗಳು ಉದ್ಭವಿಸುತ್ತವೆ. ಗೃಹ ಕೈಗಾರಿಕೆಗಳು ಬಂಡವಾಳಶಾಹಿಗಳ ಕೈಗೆ ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ ಬೆಳಗಾವಿ ನೇಕಾರರ ದುಃಸ್ಥಿತಿ ಅತ್ಯುತ್ತಮ ಉದಾಹರಣೆ. ಆದ್ದರಿಂದ ಸಹಕಾರ ತತ್ವದಡಿ ಖಾದಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ನಡೆಯುವಂಥ ವ್ಯವಸ್ಥೆ ಜಾರಿಗೆ ಬರಬೇಕಿದೆ. ಆಗ ಮಾತ್ರ ಹಳ್ಳಿಹಳ್ಳಿಗಳಲ್ಲಿ ಹರಡಿಹೋಗಿರುವ ಬಡಜನರಿಗೆ ಲಾಭವಾಗುತ್ತದೆ.

ಏಕೆಂದರೆ ಎಂಥ ತಂತ್ರಜ್ಞಾನವೇ ಬರಲಿ, ಕೈಯಿಂದ ಮಾಡಿರುವ ಉತ್ಪನ್ನಗಳಿಗೆ, ಮಾನವ ಶ್ರಮದಿಂದ ಸಿದ್ಧವಾದ ವಸ್ತುಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ರಾಜ್ಯಾದ್ಯಂತ ಹರಡಿರುವ ಖಾದಿ ಕೇಂದ್ರಗಳ ಉತ್ಪನ್ನಗಳನ್ನು ಖರೀದಿಸುವ ಮೂಲಕ ಜಾಗತೀಕರಣದ ಸವಾಲಿಗೆ ನಾವು ಉತ್ತರ ಕೊಡಲು ಸಾಧ್ಯ. ಹಾಸ್ಟೆಲ್‌ಗಳು, ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು ತಮ್ಮಲ್ಲಿ ಕೆಲಸ ಮಾಡುವ ಪ್ರತಿ ವ್ಯಕ್ತಿಗೆ ಒಂದು ಜತೆ ಹಾಗೂ ನಮ್ಮನಮ್ಮ ಮನೆಗಳಲ್ಲಿ ವರ್ಷಕ್ಕೆ ಒಂದು ಜತೆ ಖಾದಿ ಬಟ್ಟೆ ಖರೀದಿಸಿದರೂ ಸಾಕು, ಲಕ್ಷಾಂತರ ಜನ ನೇಕಾರರು, ರೈತರು ಬದುಕುತ್ತಾರೆ. ಹೊಸದೊಂದು ನೆಮ್ಮದಿಯ ಜೀವನಕ್ಕೆ ಅದು ನಾಂದಿಯಾಗುತ್ತದೆ.

ಹೋಟೆಲ್ ತಿಂಡಿಗಿಂತ ಅಮ್ಮನ ಕೈಯಡುಗೆ ಇಷ್ಟವಾಗುವುದು ಇಂಥ ಕಾರಣಕ್ಕೆ!

- ಚಾಮರಾಜ ಸವಡಿ

No comments: