ಇದ್ದಕ್ಕಿದ್ದಂತೆ ವಾಹನಗಳು ರಭಸದಿಂದ ನುಗ್ಗಿದವು. ಪ್ರತಿಯೊಬ್ಬರಿಗೂ ಮುಂದಿರುವ ವಾಹನ ಹಿಂದೆ ಹಾಕುವ ಉಮೇದು. ನಾ ಮುಂದು, ತಾ ಮುಂದು ಎಂಬ ಮೇಲಾಟ. ಎಲ್ಲರೂ ಒಮ್ಮೆಲೇ ಮುಂದೆ ಹೋಗಬೇಕೆಂದಾಗ ಯಾರಿಗೂ ಮುಂದೆ ಹೋಗಲು ಆಗುವುದಿಲ್ಲ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಅಡ್ಡವಾಗುತ್ತಾರೆ. ಪ್ರತಿಯೊಬ್ಬರಿಗೂ ಇನ್ನೊಬ್ಬರ ಮೇಲೆ ಅನಗತ್ಯ ದ್ವೇಷ. ಇವನನ್ನು ಹಿಂದೆ ಹಾಕಿ ಮುಂದೆ ಹೋಗಬೇಕೆಂಬ ಆತುರ. ಬಂಪರ್‌ಗೆ ಬಾನೆಟ್ ಹತ್ತಿರ ಬರುತ್ತದೆ. ದ್ವಿಚಕ್ರ ವಾಹನದ ಹಿಂದಿನ ನಂಬರ್ ಪ್ಲೇಟ್‌ಗೆ ಹಿಂದಿನ ದ್ವಿಚಕ್ರ ವಾಹನದ ಮುಂದಿನ ಗಾಲಿಯ ಮಡ್‌ಗಾರ್ಡ್ ತಗುಲುವಂತಿರುತ್ತದೆ.
ಆಗ ಕಾಣಿಸುತ್ತದೆ ನಂಬರ್ ಪ್ರೇಟ್‌ನಲ್ಲಿ ಚಿಕ್ಕ ಅಕ್ಷರಗಳಲ್ಲಿ ಬರೆದ ಸಂದೇಶ: ’ಛೀ ಪೋಲಿ!’
ಹಿಂದೆ ಹಾಕಬೇಕೆನ್ನುವ ಒತ್ತಡ ಮಾಯವಾಗಿ ಕಿರು ಮುಗುಳ್ನಗೆ ಅರಳುತ್ತದೆ. ಎಲಾ ಕಳ್ಳ, ಭಾರಿ ಸಂದೇಶ ಹಾಕಿಕೊಂಡಿದ್ದಾನೆ ಎಂದು ಮನಸ್ಸು ಮುದಗೊಂಡು, ಆಕ್ಸಿಲೇಟರ್‌ನ ತಿರುವು ಸಡಿಲವಾಗುತ್ತದೆ.
ನೀವೂ ಗಮನಿಸಿರಬಹುದು, ಪುಟ್ಟ ಪುಟ್ಟ ಅಕ್ಷರಗಳಲ್ಲಿ ನಂಬರ್ ಪ್ಲೇಟ್ ಮೇಲೆ ಅಥವಾ ಆಟೊದ ಹಿಂಭಾಗದಲ್ಲಿ ಬರೆದ ಇಂತಹ ಸಂದೇಶಗಳನ್ನು. ಒಮ್ಮೊಮ್ಮೆ ಆ ಸಂದೇಶ ಓದಲಿಕ್ಕೇ ನನ್ನ ಸ್ಕೂಟಿಯನ್ನು ತೀರಾ ಹತ್ತಿರಕ್ಕೆ ಓಡಿಸುತ್ತೇನೆ. ಕಣ್ಣುಗಳು ಸಿಗ್ನಲ್ ದೀಪಗಳಿಗಿಂತ ಈ ಬರಹಗಳನ್ನೇ ಹೆಚ್ಚು ಆಸ್ಥೆಯಿಂದ ನೋಡುತ್ತಿರುತ್ತವೆ. ಒಂದಕ್ಕಿಂತ ಒಂದು ಭಿನ್ನ, ಆಕರ್ಷಕ ಹಾಗೂ ಪೋಲಿ. ಟ್ರಾಫಿಕ್ ಜಂಜಡವನ್ನು ಕ್ಷಣಾರ್ಧದಲ್ಲಿ ಪರಿಹರಿಸುವ ಈ ಚೇತೋಹಾರಿ ಅಥವಾ ವಿಕಾರ ಬರವಣಿಗೆಗಳು ಕ್ರಿಯಾಶೀಲತೆಯ ಇನ್ನೊಂದು ಮುಖ ಎಂದೇ ಭಾವಿಸಿದ್ದೇನೆ.
’ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ’ ಎಂಬ ಬರಹ ಹಳೆಯದಾಯಿತು. ’ಅಂಕಲ್ ಆಫೀಸ್‌ನಲ್ಲಿ, ಆಂಟಿ ಟಾಕೀಸ್ನಲ್ಲಿ’ ಕೂಡ ಕೊಂಚ ಹಳೆಯದೇ. ’ಮುತ್ತಿಟ್ಟೀಯಾ ಜೋಕೆ, ಪೊಲೀಸ್ ಮಾಮಾ ಬರ್ತಾನೆ’ ಎಂಬುದು ಲೇಟೆಸ್ಟ್ ಸ್ಟೈಲ್. ’ಹುಡುಗೀರನ್ನ ನಂಬಬೇಡ ಗುರು’ ಎಂಬುದು ಭಗ್ನ ಹೃದಯಿಯ ವ್ಯಥೆ ಬಿಂಬಿಸಿದರೆ, ’ಮೆಚ್ಚಿ ಹೃದಯ ಕೊಟ್ಟೆ, ನಂಬಿ ಕೆಟ್ಟುಬಿಟ್ಟೆ’ ಎಂದು ಇನ್ನೊಬ್ಬ ಹಲುಬಿರುತ್ತಾನೆ. ನಿಮಗೆ ಅರ್ಜೆಂಟ್ ಇಲ್ಲದಿದ್ದರೆ, ’ಕಥೆ ಹೇಳುವೆ ನನ್ನ ವ್ಯಥೆ ಹೇಳುವೆ’ ಎಂದು ಬರೆದುಕೊಂಡವನನ್ನು ಮಾತಾಡಿಸಿ ಅವನ ಕಥೆ-ವ್ಯಥೆ ಕೇಳಬಹುದು.
ಬರಹ ದೀರ್ಘವಾದೀತು ಎಂಬ ಭೀತಿಯಿಂದಾಗಿ, ವಿವರಣೆಗೆ ಹೋಗದೇ ಕೆಲ ಮಾದರಿ ಬರಹಗಳನ್ನು ಕೊಡುತ್ತಿದ್ದೇನೆ:
೧. ಛೀ ಕಳ್ಳಾ
೨. ತುಂಟಿ ನೀನು
೩. ಸಾರಿ, ನನ್ನ ಹೃದಯ ಖಾಲಿ ಇಲ್ಲ
೪. ದಯವಿಟ್ಟು ಹಿಂಬಾಲಿಸಬೇಡ
೫. ತೀರ ಹತ್ತಿರ ಬಂದಿದ್ದೀ, ಹುಷಾರ್!
೬. ಎಲ್ಲೋ ಜೋಗಪ್ಪ ನಿನ್ನರಮನೆ
೭. ಮನೇಲಿ ಹೇಳಿ ಬಂದಿದ್ದೀಯಾ?
೮. ಏನ್ ಈವಾಗ?
೯. ಅರ್ಜೆಂಟಿಲ್ಲ ತಾನೆ?
೧೦. ಬಿಡುವಾಗಿದ್ದರೆ ನನ್ನ ಹಿಂಬಾಲಿಸು
೧೧. ಸುಮ್ನೆ ಹೋಗ್ ಗುರು
೧೨. ಕನ್ನಡೀಲಿ ಮುಖ ನೊಡ್ಕಂಡಿದ್ದೀಯಾ? (ಹುಡುಗೀರ ಗಾಡಿಯ ಹಿಂದೆ ಕಂಡಿದ್ದು)
೧೩. ಲೈನ್ ಹೊಡೆಯೋಕೆ ಪುರುಸೊತ್ತಿಲ್ಲ
೧೪. ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
೧೫. ಮುಟ್ಬೇಡ ನನ್ನ
೧೬. ಐತಲಕಡಿ...!!
೧೭. ಏಕೋ ಬೇಜಾರು
೧೮. ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
೧೯. ಹತ್ರ ಬಂದ್ರೆ ಕಚ್ಬಿಡ್ತೀನಿ
೨೦. ಈ ಟಚ್ಚಲಿ ಏನೋ ಇದೆ
೨೧. ಚುಮ್ಮ ಬೇಕಾ?
೨೨. ಥೂ...ವಾಸ್ನೆ!
೨೩. ಹೇಳಿ ಹೋಗು ಕಾರಣ
೨೪. ನಾಳೆ ಸಿಕ್ತೀನಿ
೨೫. ಇನ್ನೂ ಹತ್ತಿರ ಹತ್ತಿರ ಬರುವೆಯಾ?
೨೬. ಮಕ್ಕಳಿರಲವ್ವ ಮನೆ ತುಂಬ, ಹೆಲ್ಪ್ ಬೇಕಾದ್ರೆ ಕೇಳವ್ವ
೨೭. ನಾನಿವತ್ತು ಫ್ರೀಯಾಗಿದ್ದೀನಿ
೨೮. ಚಿನ್ನಾ ನಿನ್ನ ಮುದ್ದಾಡುವೆ
೨೯. ಮುತ್ತಿಟ್ಟರೆ ನನ್ನಾಣೆ
೩೦. ಬರುವಾಗ ಬೆತ್ತಲೆ, ಆಗಿನ್ನೂ ಕತ್ತಲೆ
ಬರೆದಷ್ಟೂ ಬೆಳೆಯುತ್ತಲೇ ಇದೆ ಬಾಲದ ಬರಹ. ನನ್ನ ಮನಸಲ್ಲಿ ಉಳಿದ ಇನ್ನೊಂದು ಸಾಲು ಹೇಳಿ ಈ ಬರಹ ಮುಗಿಸುತ್ತೇನೆ.
ಅವತ್ತು ಆಫೀಸಿಗೆ ತಡವಾಗಿತ್ತು. ಸಾಮಾನ್ಯವಾಗಿ ಧಾವಂತ ಮಾಡಿಕೊಳ್ಳದ ನಾನು ಅಂದು ಸ್ವಲ್ಪ ಜಾಗ ಸಿಕ್ಕರೂ ಸಾಕು, ಸ್ಕೂಟಿ ನುಗ್ಗಿಸುತ್ತ ಹೋಗುತ್ತಿದ್ದೆ. ಎದುರಿಗದ್ದ ಬೈಕ್ ಏಕೋ ಜಾಗ ಕೊಡುತ್ತಿಲ್ಲ ಎಂದು ಅನ್ನಿಸತೊಡಗಿತು. ಅವನೂ ನನ್ನಷ್ಟೇ ಅರ್ಜೆಂಟಿನಲ್ಲಿದ್ದನೇನೋ. ಹಾಗೆ ಹೋಗುತ್ತಿರುವಾಗ, ರಸ್ತೆ ಉಬ್ಬು ಬಂತು. ಬೈಕ್ ದಾಟಿ ಹೋಗಲೆಂದು ಕೊಂಚ ವೇಗವಾಗಿಯೇ ಸ್ಕೂಟಿ ನುಗ್ಗಿಸಿದೆ. ಅವನ ಬೈಕಿನ್ನೂ ಹಂಪ್ ಹತ್ತುತ್ತಿತ್ತು. ಆಗ ಗಮನಿಸಿದೆ ಹಿಂಬದಿ ಬರಹ:
’ನಾನಿಷ್ಟ ಆದ್ರೆ ಹಾರ್ನ್ ಹಾಕು!’
ನನ್ನ ಟೆನ್ಷನ್ ಕ್ಷಣಾರ್ಧದಲ್ಲಿ ಮಾಯವಾಗಿ ಹೋಯಿತು!
- ಚಾಮರಾಜ ಸವಡಿ
(೧೨ ಜುಲೈ ೨೦೦೮)
4 comments:
ನೀವು ನಿಮ್ಮ ಬರಹಗಳನ್ನು ಮೊದಲು ನಿಮ್ಮ ಬ್ಲಾಗ್-ನಲ್ಲಿಯೇ ಯಾಕೆ ಹಾಕುವುದಿಲ್ಲ? ಎಲ್ಲಾ ಒಟ್ಟಿಗೆ ಯಾಕೆ ಹಾಕುತ್ತಿದ್ದೀರಿ? ಓದುವವರ ಮೇಲೆ ಕರುಣೆಯಿಲ್ಲವೆ? :) ಒಂದೇ ಸಾರಿ ಓದಿದರೆ ಓದಿದ್ದು ಓದಿದ ಹಾಗಾಗುವುದಿಲ್ಲ...
ನಿಜ. ಮೊದಲು ನನ್ನ ಬ್ಲಾಗ್‌ನಲ್ಲೇ ಬರೆಯಬೇಕಿತ್ತು. ಆದರೆ, ಸಂಪದ (www.sampada.net) ನಲ್ಲಿ ಬರೆಯುತ್ತ ಬರೆಯುತ್ತ ನನ್ನ ಬ್ಲಾಗ್‌ನಲ್ಲಿ ಅವನ್ನು ಸೇರಿಸುವುದನ್ನೇ ಮರೆತಿದ್ದೆ. ಕೆಲಸದ ಒತ್ತಡವೂ ಅದಕ್ಕೆ ಕಾರಣ.
ಅದಕ್ಕೆಂದೇ ಇವತ್ತು ಬೆಳಿಗ್ಗೆ ಕೂತು ಎಲ್ಲವನ್ನೂ ಒಟ್ಟಾಗಿ ಹಾಕಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದ.
- ಚಾಮರಾಜ ಸವಡಿ
(www.sampada.net/blog/chamaraj)
ಸರಿ ಸರ್, ನಾನು ನಿಮ್ಮ ಬ್ಲಾಗಿಗೆ ಗೂಗಲ್ ರೇಡರಿನಲ್ಲಿ ಸಬ್-ಸ್ಕ್ರೈಬ್ ಮಾಡಿರುವೆ, ಹಾಗಾಗಿ ನಿಮ್ಮ ಬ್ಲಾಗ್ ಅಪ್-ಡೇಟ್ ಆಗದಿದ್ರೆ ನನಗೆ ನಿಮ್ಮ ಬರಹಗಳ ಬಗ್ಗೆ ತಿಳಿಯುವುದೇ ಇಲ್ಲ.
ಎಲ್ಲಾ ಅಪ್‌ಡೇಟ್ ಮಾಡ್ತಿದ್ದೇನೆ. ಬಹುತೇಕ ಬರಹಗಳು ನನ್ನ ಬ್ಲಾಗ್‌ನಲ್ಲಿವೆ ನೋಡಿ.
- ಚಾಮರಾಜ ಸವಡಿ
Post a Comment