ಪತ್ರಿಕೋದ್ಯಮಕ್ಕೆ ಬಂದ ಪ್ರಾರಂಭಿಕ ದಿನಗಳವು. ಅಪರಾಧ ಸುದ್ದಿಯನ್ನು ಬರೆದು ಅನುಭವವಿದ್ದ ನನ್ನನ್ನು, ನುಡಿ ಚಿತ್ರದತ್ತ ಹೊರಳಿಸಲು ಮಿತ್ರ ಆನಂದತೀರ್ಥ ಪ್ಯಾಟಿ ಯತ್ನಿಸುತ್ತಿದ್ದರು.
ಆಗ ಕೊಪ್ಪಳ ಹೊಸ ಜಿಲ್ಲೆಯಾಗಿ ಉದಯಿಸಿತ್ತು. ಆದರೆ ಅಲ್ಲಿಯ ಹಳೆಯ ಸಮಸ್ಯೆಗಳು ಮಾತ್ರ ಹಾಗೇ ಉಳಿದಿದ್ದವು. ಓಡಾಡಲು ಸೈಕಲ್ ಕೂಡ ಇಲ್ಲದ ನಾನು ಮತ್ತು ಪ್ಯಾಟಿ ಸೇರಿಕೊಂಡು ಈ ಸಮಸ್ಯಾತ್ಮಕ ಊರಿನ ಕಲ್ಲು ಬೆಟ್ಟ, ಬೆಂಗಾಡಿನಂಥ ಪ್ರದೇಶಗಳಲ್ಲಿ ಅಲೆಯುತ್ತ, ಬರೆಯಲು ವಿಷಯಗಳನ್ನು ಹುಡುಕುತ್ತಿದ್ದೆವು.
’ಕ್ರೈಮ್ ಬರೀಬೇಕ್ರೀ ಆನಂದ್’ ಎಂದು ನಾನು ಒತ್ತಾಯಿಸುತ್ತಿದ್ದರೆ, ’ನಿಮ್ಮ ಬರವಣಿಗೆಗೆ ಫೀಚರ್ ರೈಟಿಂಗ್‌ಗೆ ಕೂಡ ಒಗ್ಗುತ್ತದೆ. ಪ್ರಯತ್ನಿಸಿ ನೋಡ್ರಿ’ ಎಂಬುದು ಅವರ ಆಗ್ರಹ. ಫೋಟೊ ಇಲ್ಲದೆ ಫೀಚರ್ ಬರೆಯುವುದು ಹೇಗೆ ಎಂಬ ಪ್ರಶ್ನೆ ಇಬ್ಬರನ್ನೂ ಕಾಡಿದಾಗ ದೊರೆತ ಇನ್ನೋರ್ವ ಮಿತ್ರ ಪ್ರಕಾಶ ಕಂದಕೂರ.
ಆಗ ಮಾರ್ಚ್ ಸಮಯ. ಕೊಪ್ಪಳದ ಕಲ್ಲುಬೆಟ್ಟಗಳು ಬಿಸಿಯಾಗಿ, ಸುತ್ತಲಿನ ಖಾಲಿ ಹೊಲಗಳು ಬಿಸಿಯುಸಿರು ಬಿಡುತ್ತ, ಊರಿನ ಸಣ್ಣ ಕಿಟಕಿಗಳ ಮನೆಗಳನ್ನು ಇಡ್ಲಿ ಪಾತ್ರೆಯಂತೆ ಕಾಯಿಸುತ್ತಿದ್ದವು. ಅಂಥ ಕೆಟ್ಟ, ರಣ ರಣ ಬಿಸಿಲಿನಲ್ಲಿ, ಗಾಳಿ ಕೂಡ ಸರಿಯಾಗಿ ಹಾಕಿರದ ಎರಡು ಸೈಕಲ್‌ಗಳ ಮೇಲೆ ಯಾತ್ರೆ ಹೋಗುತ್ತಿದ್ದ ನಮ್ಮನ್ನು ನೋಡಿ ಮರುಗುತ್ತಿದ್ದ ಸಮಕಾಲೀನ ಪತ್ರಕರ್ತರು, ನಮಗೆ ಹುಚ್ಚು ಹಿಡಿದಿದೆ ಎಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದರು.
ಹಾಗೆ ಪ್ರಾರಂಭವಾದ ನಮ್ಮ ಮೊದಲ ಯಾತ್ರೆ ಸಾಗಿದ್ದು ಊರಿನ ಪಕ್ಕದಲ್ಲಿಯೇ ಇದ್ದ ಮಳೆಮಲ್ಲಪ್ಪನ ಬೆಟ್ಟದತ್ತ. ಇಲ್ಲಿಯ ಭೂಗರ್ಭದ ಕಿಂಡಿಯೊಂದರಿಂದ ವರ್ಷ ಪೂರ್ತಿ ನೀರು ಬರುತ್ತಿರುತ್ತದೆ. ಅಲ್ಲೇನಾದರೂ ಬರೆಯಲು ಸಿಗಬಹುದೆ ಎಂದು ಹುಡುಕಲು ಮಟಮಟ ಮಧ್ಯಾಹ್ನದಲ್ಲಿ ನಮ್ಮ ಯಾತ್ರೆ ಅತ್ತ ಸಾಗಿತು.
ಸೈಕಲ್ ತುಳಿದು ಏದುಸಿರು ಬಿಡುತ್ತಿದ್ದ ನಾವು, ಕಿಂಡಿಯಿಂದ ಬರುತ್ತಿದ್ದ ನೀರು ಕುಡಿದು ದಣಿವಾರಿಸಿಕೊಳ್ಳಲು ಕಾಲುವೆ ಪಕ್ಕ ಕೂತೆವು. ಆಗ ’ಅದು’ ಕಣ್ಣಿಗೆ ಬಿತ್ತು.
ಕಾಲುವೆ ಒಳಗೆ ಹರಿಯುತ್ತಿದ್ದ ನೀರೊಳಗಿಂದ ಜೀವಿಯೊಂದು ಇಣುಕಿ ನೋಡುತ್ತಿತ್ತು. ನೆರಳಿನಲ್ಲಿ ಇತ್ತಾದ್ದರಿಂದ ಅದರ ವಿವರ ತಕ್ಷಣಕ್ಕೆ ಗೋಚರವಾಗಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ, ಸೀಳು ನಾಲಗೆ ಕಾಣಿಸಿತು.
ಸೈಕಲ್ ಬಾರ್ ಗಾತ್ರದ ನಾಗರ ಹಾವು ಅದು. ನಮಗೆ ಅದರ ಮುಖ ಹಾಗೂ ಕುತ್ತಿಗೆಯ ಭಾಗವಷ್ಟೇ ಕಾಣುತ್ತಿತ್ತು. ಇಡೀ ದೇಹ, ಕಾಲುವೆಯ ಕಿಂಡಿಯಲ್ಲಿ ಮರೆಯಾಗಿತ್ತು. ಪ್ರಾರಂಭದಲ್ಲಿ ರೋಮಾಂಚನಗೊಂಡ ನಾವು ’ಹುಶ್, ಹುಶ್’ ಎಂದು ಅದರ ಗಮನ ಸೆಳೆಯಲು ಯತ್ನಿಸಿದೆವು.
ಆದರೆ ನಮ್ಮ ಇಷಾರೆಗಳನ್ನು ಅಲಕ್ಷಿಸಿ, ಹಾವು ತನ್ನ ನಾಲಗೆ ಚಲನೆಯನ್ನು ಮುಂದುವರೆಸಿತು. ಅಷ್ಟೊತ್ತಿಗೆ ಕ್ಯಾಮರಾಕ್ಕೆ ಫ್ಲ್ಯಾಷ್ ಜೋಡಿಸಿಕೊಂಡು ಸಿದ್ಧವಾಗಿದ್ದ ಛಾಯಾಗ್ರಾಹಕ ಮಿತ್ರ ಪ್ರಕಾಶ ಕಂದಕೂರ, ಫೋಟೊ ತೆಗೆಯಲು ಹವಣಿಸುತ್ತಿದ್ದರು.
ಹರಿಯುತ್ತಿರುವ ನೀರಿನ ಕೆಳಗಿದ್ದ ಮುಂಗೈ ಉದ್ದದ ನಾಗರಹಾವಿನ ಮುಖದ ಚಿತ್ರವನ್ನು ನಾಲಗೆ ಸಮೇತ ತೆಗೆಯಬೇಕೆಂದು ಪ್ರಕಾಶ್‌ಗೆ ಸೂಚಿಸಿದೆವು. ಆಗಿನ್ನೂ ಡಿಜಿಟಲ್ ಕ್ಯಾಮೆರಾಗಳು ಬಂದಿದ್ದಿಲ್ಲ. ಹೀಗಾಗಿ, ಫಿಲ್ಮ್ ಕ್ಯಾಮೆರಾದಲ್ಲಿಯೇ ಮೂರ್‍ನಾಲ್ಕು ಚಿತ್ರಗಳನ್ನು ತೆಗೆದರು ಪ್ರಕಾಶ. ಎರಡು ಚೆನ್ನಾಗಿ ಬಂದಿವೆ ಎಂಬ ತೃಪ್ತಿಯನ್ನೂ ವ್ಯಕ್ತಪಡಿಸಿದರು.
’ಕೆಲಸವಾಯಿತು, ಇನ್ನು ಕೋಲೊಂದನ್ನು ತೆಗೆದುಕೊಂಡು ನಾಗರಹಾವನ್ನು ಕೆಣಕೋಣ’ ಎಂಬ ಧೂರ್ತ ವಿಚಾರ ನಮಗೆ ಬಂದಿತು. ನಾವು ಫೋಟೊ ತೆಗೆಯುತ್ತಿದ್ದುದನ್ನು ನೋಡಿದ ಕೆಲವರು ಹತ್ತಿರ ಬಂದು, ನಮ್ಮ ವಿಚಾರವನ್ನು ಪ್ರಚೋದಿಸಿದರು. ಕೋಲೊಂದನ್ನು ಹುಡುಕಿಕೊಂಡು ಬಂದ ಉತ್ಸಾಹಿಯೊಬ್ಬ ಹಾವೆಲ್ಲಿದೆ ಎಂದು ಕೇಳಿದ. ಅಷ್ಟರೊಳಗೆ, ಅಪಾಯ ಗ್ರಹಿಸಿದ್ದ ಹಾವು ಪರಾರಿಯಾಗಿತ್ತು. ’ಮಗಂದು, ಫೊಟೊ ತೆಗೆಸಿಕೊಳ್ಳಲು ಬಂದಿತ್ತು ಅಂತ ಕಾಣುತ್ತದೆ’ ಎಂದು ತಮಾಷೆ ಮಾಡಿಕೊಂಡು ನಾವು ಲಟಕಾ ಸೈಕಲ್‌ಗಳಲ್ಲಿ ಹಿಂತಿರುಗಿದೆವು.
ಅವತ್ತೇ ರೀಲ್ ಕತ್ತರಿಸಿ, ಪ್ರಿಂಟ್‌ಗೆ ಹುಬ್ಬಳ್ಳಿಗೆ ಕಳಿಸಲಾಯಿತು. ಅದು ಬರಲು ಮೂರು ದಿನಗಳೇ ಹಿಡಿದವು. ಆದರೆ, ಫೋಟೊಗಳು ಪ್ರಿಂಟಾಗಿ ಬಂದಾಗ ನಾವು ಕುಣಿದಾಡುವುದೊಂದೇ ಬಾಕಿ. ಲಟಕಾ ಸೈಕಲ್‌ನಲ್ಲಿ ನಮ್ಮನ್ನು ಹೇರಿಕೊಂಡು ಹೋಗಿದ್ದಲ್ಲದೇ, ಮೂರು ಉತ್ತಮ ಫೋಟೊಗಳನ್ನು ಉದ್ರಿಯಾಗಿ ತೆಗೆದುಕೊಟ್ಟಿದ್ದರು ಪ್ರಕಾಶ ಕಂದಕೂರ. ’ಪ್ರಜಾವಾಣಿ’ಯ ’ನಾಡು-ನುಡಿ’ ಅಂಕಣಕ್ಕೆ ಬರೆಯಲು ಜಂಟಿಯಾಗಿ ನಿರ್ಧರಿಸಲಾಯಿತು. ಆದರೆ, ಅದನ್ನು ನಾನೇ ಬರೆಯಬೇಕೆಂದು ಬಲವಾಗಿ ಆಗ್ರಹಿಸಿದವರು ಆನಂದ.
’ಅಪರಾಧ ಸುದ್ದಿ’ಗಳ ಹೊರತಾಗಿ ನಾನು ಬರೆದ ಮೊದಲ ಲೇಖನ ಈ ಹಾವಿನದು. ’ನಿರ್ಲಿಪ್ತ ನಾಗರ’ ಶೀರ್ಷಿಕೆಯಲ್ಲಿ ಮರುವಾರವೇ ಅದು ಅಚ್ಚಾಗಿ ಬಂದಾಗ ನಮ್ಮ ಖುಷಿಗೆ ಪಾರವೇ ಇದ್ದಿಲ್ಲ. ನಮ್ಮ ಲಟಕಾ ಸೈಕಲ್‌ಗಳು ರಭಸದಿಂದ ಊರು ಸುತ್ತತೊಡಗಿದವು. ಕಂಡಿದ್ದನ್ನೆಲ್ಲ ಬರವಣಿಗೆಗೆ ಇಳಿಸುವ ಹುಚ್ಚು ಏರಿತು. ಪ್ರಕಾಶ್ ಕೂಡ ಕ್ಯಾಮೆರಾ ಹಿಡಿದು ನಮ್ಮೊಂದಿಗೆ ಹೊರಟಿದ್ದನ್ನು ನೋಡಿದವರು, ’ದುಡಿದು ತಿಂದುಕೊಂಡಿದ್ದ ಹುಡುಗನನ್ನು ಇವರಿಬ್ಬರೂ ಹಾಳು ಮಾಡುತ್ತಿದ್ದಾರಲ್ಲಾ...’ ಎಂದು ಬಹಿರಂಗವಾಗಿ ವಿಷಾದಿಸಿದ್ದರು.
ಹಾಗೆ ಶುರುವಾದ ನಮ್ಮ ನುಡಿ-ಚಿತ್ರದ ಹುಚ್ಚು ಕಳೆದ ಹತ್ತು ವರ್ಷಗಳಿಂದ ಅಬಾಧಿತವಾಗಿ ಮುಂದುವರೆಯುತ್ತಿದೆ. ನೂರಾರು ವಿಷಯಗಳ ಮೇಲೆ, ನೂರಾರು ಲೇಖನಗಳನ್ನು ಆನಂದ ಮತ್ತು ನಾನು ಬರೆದಿದ್ದೇವೆ. ಸಾವಿರಾರು ಫೊಟೊಗಳನ್ನು ಪ್ರಕಾಶ ತೆಗೆದುಕೊಟ್ಟಿದ್ದಾರೆ. ಈ ಅವಧಿಯಲ್ಲಿ ನಮ್ಮ ಹುಚ್ಚಿಗೆ ಹೊಸ ಆಯಾಮಗಳು ಸೇರಿಕೊಂಡಿವೆ. ವ್ಯಾಪ್ತಿ ವಿಸ್ತಾರವಾಗಿದೆ. ಡಿಜಿಟಲ್ ತಂತ್ರಜ್ಞಾನ ಆಸರೆಗೆ ನಿಂತಿದೆ. ನಮ್ಮ ಕ್ಯಾನ್ವಾಸ್ ವಿಶಾಲವಾಗಿದೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಅದು ವಿಸ್ತರಿಸುತ್ತಲೇ ಇದೆ.
ಈಗ ಸಂಪದ ಅದಕ್ಕೊಂದು ಜಾಗತಿಕ ವಿಸ್ತರಣೆಯಾಗಿ ದೊರೆತಿದೆ. ಮತ್ತಿಷ್ಟು ನುಡಿಚಿತ್ರಗಳನ್ನು ಬರೆಯಲು ಮನಸ್ಸು ಹಾತೊರೆಯುತ್ತಿದೆ.
- ಚಾಮರಾಜ ಸವಡಿ
(೯ ಜುಲೈ, ೨೦೦೮)
No comments:
Post a Comment