ಹಾವೇರಿಯಲ್ಲಿ ನಡೆದಿದ್ದು ಏನು?

15 Jun 2008

ಮುಂಗಾರು ಮಳೆ ಬರುವುದಕ್ಕೆ ಮುನ್ನವೇ ಹಾವೇರಿ ಹಾಗೂ ಅದಕ್ಕೂ ಮುನ್ನ ಧಾರವಾಡದಲ್ಲಿ ರಸಗೊಬ್ಬರದ ಹೆಸರಿನಲ್ಲಿ ದೊಂಬಿ ಮತ್ತು ಹಿಂಸಾಕೃತ್ಯಗಳು ನಡೆದವು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ, ಅದರಲ್ಲೂ ಕೃಷಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತೊಡಗಿಕೊಂಡಿರುವ ಜಿಲ್ಲೆಗಳಲ್ಲಿ ಇಂತಹ ಘಟನೆಗಳು ನಡೆಯದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಲ್ಲಿ ಕೊಂಚ ವಿಶ್ಲೇಷಣೆ ಅಗತ್ಯ.

ಮೊದಲನೆಯದು ಬದಲಾದ ರಾಜ್ಯ ರಾಜಕಾರಣ. ರಾಷ್ಟ್ರಪತಿ ಆಡಳಿತ ಜಾರಿಯಾಗುವುದಕ್ಕೆ ಕಾರಣವಾದ ಘಟನೆಗಳೇ ಇವತ್ತಿನ ದೊಂಬಿ ಪರಿಸ್ಥಿತಿಯಲ್ಲೂ ಮುಂದುವರೆದಿವೆ. ಯಾರಿಗೂ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬರುತ್ತದೆ ಎಂಬ ನಂಬಿಕೆ ಇರಲಿಲ್ಲ. ಹೆಚ್ಚೆಂದರೆ, ಅದು ಕಳೆದ ಚುನಾವಣೆಗಿಂತ ಒಂದ್ಹತ್ತು ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಎಂದು ಮಾತ್ರ ಊಹಿಸಿದ್ದರು. ರಾಷ್ಟ್ರಪತಿ ಆಡಳಿತಕ್ಕೂ ಪೂರ್ವದಲ್ಲಿ, ವಿಶ್ವಾಸಮತ ಸಾಬೀತು ಮಾಡಲು ಕರೆಯಲಾಗಿದ್ದ ಅಧಿವೇಶನದಲ್ಲಿ ದಿಢೀರ್‌ ಮುಖಭಂಗ ಅನುಭವಿಸಿದ ಬಿ.ಎಸ್‌. ಯಡಿಯೂರಪ್ಪನವರು ಅಸಹಾಯಕ ಸ್ಥಿತಿಯಲ್ಲಿ ರಾಜೀನಾಮೆ ನೀಡಬೇಕಾಗಿ ಬಂದುದು ಜನರಲ್ಲಿ ಅನುಕಂಪ ಮೂಡಿಸಿತು. ಊಟಕ್ಕೆ ಮನೆಯವರೆಗೆ ಕರೆದು, ಎಲೆ ಮುಂದೆ ಕೂತವರನ್ನು ಎಬ್ಬಿಸಿ ಕಳಿಸಿದರೆ ನೋಡಿದವರಿಗೆ ಏನನ್ನಿಸುತ್ತದೋ, ಅಂಥದೇ ಭಾವನೆ ಮತದಾರರಲ್ಲಿ ಉಂಟಾಯಿತು.

ಅಧಿಕಾರ ನೀಡಿದ ಜೆಡಿಎಸ್‌

ಹೀಗಾಗಿ ಮತದಾರನ ಒಲವು ಬಿಜೆಪಿ ಕಡೆ ತಿರುಗಿತು. ಇವತ್ತಿನ ದಿನಗಳವರೆಗೂ ಬಹುತೇಕ ಜನರಿಗೆ ಬಿಜೆಪಿ ಎಂದರೆ ಯಡಿಯೂರಪ್ಪ ಎಂಬ ಭಾವನೆಯಿದೆ. ಹೀಗಾಗಿ ಯಡಿಯೂರಪ್ಪನವರ ಮೇಲಿನ ಅನುಕಂಪ ಬಿಜೆಪಿಗೆ ಲಾಭದಾಯಕವಾಯಿತು. ನಿರೀಕ್ಷೆ ಇರದ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲು ಯಡಿಯೂರಪ್ಪನವರ ಮೇಲೆ ವ್ಯಕ್ತವಾದ ಅನುಕಂಪವೇ ಕಾರಣ.
ಆದರೆ, ಇತರ ರಾಜಕೀಯ ಪಕ್ಷಗಳು ಜನರ ಈ ಮನೋಭಾವನೆಯನ್ನು ಸರಿಯಾಗಿ ಗುರುತಿಸಿರಲಿಲ್ಲ. ಏಕೆಂದರೆ, ಬಿಜೆಪಿಗೆ ಗ್ರಾಮೀಣ ಪ್ರದೇಶದಲ್ಲಿ ಬೇರುಗಳಿಲ್ಲ. ಅದೇನಿದ್ದರೂ ನಗರ ಪ್ರದೇಶದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಪಕ್ಷ ಎಂಬ ಭಾವನೆ ಅವರಲ್ಲಿತ್ತು. ಹೀಗಾಗಿ, ಚುನಾವಣೆಯನ್ನು ಅವು ಆತ್ಮವಿಶ್ವಾಸದಿಂದಲೇ ಎದುರಿಸಿದವು. ರಾಷ್ಟ್ರಪತಿ ಆಡಳಿತಕ್ಕೂ ಮುನ್ನ ವ್ಯಕ್ತವಾಗಿದ್ದ ಅನುಕಂಪ, ನಾಲ್ಕೈದು ತಿಂಗಳಲ್ಲಿ ಕರಗಿರುತ್ತದೆ ಎಂದು ಅವು ಅಂದುಕೊಂಡಿದ್ದವು. ಒಬ್ಬ ಯಡಿಯೂರಪ್ಪನವರಿಗೆ ಅನ್ಯಾಯವಾದರೆ, ಇಡೀ ಪಕ್ಷಕ್ಕೆ ಅದು ಹೇಗೆ ಲಾಭವಾಗುತ್ತದೆ ಎಂಬ ಪ್ರಶ್ನೆ ಅವರಲ್ಲಿತ್ತು.

ಆದರೆ, ಮತದಾರ ಇವರೆಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿಬಿಟ್ಟ. ಯಡಿಯೂರಪ್ಪನವರ ಮೇಲಿನ ಅನುಕಂಪ ಬಿಜೆಪಿ ಬೆಂಬಲಿಸುವಂತೆ ಮಾಡಿತು. ಹಾಗೆ ನೋಡಿದರೆ, ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಗೆಲುವು ಅಪರೂಪದ್ದು. ಏಕೆಂದರೆ, ಸ್ವಂತ ಸಾಮರ್ಥ್ಯದ ಮೇಲೆ ಸರ್ಕಾರ ರಚಿಸಲಾಗದೇ ಹಳೆಯ ಪಕ್ಷ ಕಾಂಗ್ರೆಸ್‌ ಏದುಸಿರು ಬಿಡುತ್ತಿತ್ತು. ತಮಗೆ ಸರಳ ಬಹುಮತ ಬರುವುದಿಲ್ಲ ಎಂದು ಸ್ವತಃ ಜೆಡಿಎಸ್‌ನ ಎಚ್‌.ಡಿ. ದೇವೇಗೌಡರೇ ಬಹಿರಂಗವಾಗಿ ಹೇಳಿಯಾಗಿತ್ತು. ಸಮ್ಮಿಶ್ರ ಸರ್ಕಾರ ಬರುವುದೇ ಖಂಡಿತ ಎಂದು ಅವರೆಲ್ಲ ಭಾವಿಸಿದ್ದರು.
ಇನ್ನೊಂದೆಡೆ, ಬಿಜೆಪಿಯ ತತ್ವ ಮತ್ತು ಸಿದ್ಧಾಂತವನ್ನು ಬೆಂಬಲಿಸದ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಮತದಾರರು ಬಿಜೆಪಿಗೆ ಮತ ಹಾಕಿರುವುದಿಲ್ಲ. ಹೀಗಿದ್ದರೂ ಬಿಜೆಪಿ ಸರಳ ಬಹುಮತಕ್ಕೆ ೩ ಸ್ಥಾನ ಹತ್ತಿರಕ್ಕೆ ಬಂದಿತು. ಅಂದರೆ, ಗಳಿಸಿದ ೧೧೦ ಸ್ಥಾನಗಳು ಸ್ವಂತ ಶಕ್ತಿಯಿಂದಲೇ. ಧಾರ್ಮಿಕ ಅಲ್ಪಸಂಖ್ಯಾತರ ಮತಗಳಿಲ್ಲದೇ ಬಂದಿವೆ ಎಂದೇ ಲೆಕ್ಕ. ಚುನಾವಣೆಯಲ್ಲಿ ಜಾತಿ ಹಾಗೂ ಅಲ್ಪಸಂಖ್ಯಾತರ ನಿರ್ಣಾಯಕ ಪಾತ್ರ ನೋಡಿದರೆ, ಬಿಜೆಪಿ ಕಳೆದ ಚುನಾವಣೆಗಿಂತ ೩೦ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದ್ದು ನಿಜಕ್ಕೂ ಅಪರೂಪ. ಈ ಯಶಸ್ಸಿಗೆ ಮುಖ್ಯ ಕಾರಣಕರ್ತ ಎಂದರೆ ಯಡಿಯೂರಪ್ಪ.

ಏಕೆಂದರೆ, ಬಿಜೆಪಿಯನ್ನು ಮತದಾರ ಗುರುತಿಸಿದ್ದು ಯಡಿಯೂರಪ್ಪನವರ ಮೂಲಕ. ಅವರಿಗಾದ ಅನ್ಯಾಯ ಬಿಜೆಪಿಗಾದ ಅನ್ಯಾಯ ಎಂದೇ ಭಾವಿಸಿದ. ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮಾತ್ರ ಯಡಿಯೂರಪ್ಪನವರಿಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯ ಎಂದು ಭಾವಿಸಿದ. ಆ ಪಕ್ಷ ಅಧಿಕಾರ ಹಿಡಿಯಲು ಇಂಥದೊಂದು ಮನಃಸ್ಥಿತಿ ಸಹಕಾರಿಯಾಯಿತು. ಚುನಾವಣೆಯಲ್ಲಿ ಸಹ ಯಡಿಯೂರಪ್ಪನವರೇ ಪ್ರಮುಖ ಪ್ರಚಾರಕ. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ರಂಥ ಪ್ರಮುಖರೇ ಪ್ರಚಾರ ನಡೆಸಿದರೂ ಅವರು ಜನರನ್ನು ಸೆಳೆಯುವಲ್ಲಿ ವಿಫಲರಾದರು. ಜೆಡಿಎಸ್‌ನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರೂ ಜನರನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣಲಿಲ್ಲ. ಆದರೆ, ಯಡಿಯೂರಪ್ಪನವರು ನಡೆಸಿದ್ದು ಮಾತ್ರ ಸ್ವಂತ ಬಲದ ಚುನಾವಣೆ ಪ್ರಚಾರ.

ಹೈಕಮಾಂಡ್‌ ಬೆಂಬಲ

ಬಿಜೆಪಿ ಹೈಕಮಾಂಡ್‌ ಈ ಎಲ್ಲ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಿದೆ. ಅದಕ್ಕೆಂದೇ ಯಡಿಯೂರಪ್ಪನವರಿಗೆ ಪೂರ್ಣ ಸ್ವಾತಂತ್ರವನ್ನು ಅದು ನೀಡಿತ್ತು. ಈ ಕಾರಣಕ್ಕಾಗಿಯೇ ಟಿಕೆಟ್‌ ಹಂಚಿಕೆಯಲ್ಲಿ ಯಡಿಯೂರಪ್ಪನವರ ಪ್ರಭಾವ ಎದ್ದು ಕಾಣುತ್ತಿತ್ತು. ಪಕ್ಷ ಅಧಿಕಾರಕ್ಕೆ ಬಂದು, ಸಂಪುಟ ರಚಿಸುವಾಗಲೂ ಯಾರನ್ನು ಆರಿಸಬೇಕೆಂಬ ತೀರ್ಮಾನವನ್ನು ಯಡಿಯೂರಪ್ಪನವರಿಗೇ ಬಿಡಲಾಗಿತ್ತು. ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಅವರು. ಸರ್ಕಾರ ನಡೆಸಲು ಯಾರನ್ನು ಆರಿಸಬೇಕೆಂಬುದನ್ನೂ ಅವರೇ ನಿರ್ಧರಿಸಲಿ ಎಂಬುದು ಹೈಕಮಾಂಡ್‌ನ ಇಂಗಿತ.

ಟಿಕೆಟ್‌ ಹಂಚಿಕೆಯಲ್ಲಿ ತೋರಿದ ಜಾಣ್ಮೆಯನ್ನೇ ಯಡಿಯೂರಪ್ಪನವರು ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯಲ್ಲಿಯೂ ತೋರಿದ್ದಾರೆ. ಪಕ್ಷೇತರರ ಬೆಂಬಲ ಅನಿವಾರ್ಯ ಎಂಬುದನ್ನು ಅರಿತು ಅವರಿಗೆಲ್ಲ ಸಂಪುಟ ದರ್ಜೆ ಸ್ಥಾನ ನೀಡಿದ್ದಾರೆ. ಆದರೆ, ಪ್ರಮುಖ ಖಾತೆಗಳು ಪಕ್ಷದ ಸದಸ್ಯರನ್ನು ಬಿಟ್ಟು ಹೋಗದಂತೆ ನೋಡಿಕೊಂಡಿದ್ದಾರೆ. ಮುಂದೆಂದಾದರೂ ಜೆಡಿಎಸ್‌ ವಿಭಜನೆಯಾಗಿ, ಅದರ ಸದಸ್ಯರು ಬಿಜೆಪಿ ಬೆಂಬಲಿಸುವುದಾದರೂ, ಅವರು ಸಂಪುಟದಲ್ಲಿ ಪ್ರಾತಿನಿಧ್ಯ ಕೇಳದ ರೀತಿ ಒಂದೇ ಸಲಕ್ಕೆ ೨೯ ಜನರನ್ನು ಸಚಿವರನ್ನಾಗಿಸುವ ಮೂಲಕ ಭವಿಷ್ಯದ ಅಪಾಯವನ್ನು ನಿವಾರಿಸಿಕೊಂಡಿದ್ದಾರೆ. ಹಾಗಂತ ತಮ್ಮ ವಿರೋಧಿಗಳನ್ನು ತೃಪ್ತಪಡಿಸಲೂ ಅವರು ಮರೆತಿಲ್ಲ. ಅನಂತ ಕುಮಾರ್‌ ಬಣಕ್ಕೆ ಮೂರು ಸಚಿವ ಸ್ಥಾನ ನೀಡಿದ್ದಾರೆ. ಶೆಟ್ಟರ್‌ ಅವರನ್ನು ಸ್ಪೀಕರ್‌ ಹುದ್ದೆಯಲ್ಲಿ ಕೂರಿಸಿದ್ದಾರೆ. ತಮ್ಮ ವಿರೋಧಿಗಳಾದ ಮುಖ್ಯಮಂತ್ರಿ ಚಂದ್ರು ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸುತ್ತಲೂ ವಿರೋಧಿಗಳನ್ನು ಹೊಂದಿರುವ ಹಾಗೂ ಹಗ್ಗದ ನಡಿಗೆಯ ರೀತಿಯಲ್ಲಿಯೇ ಎಲ್ಲರನ್ನೂ ಓಲೈಸಿಕೊಂಡು ಅವಧಿ ಪೂರ್ತಿಗೊಳಿಸುವ ಅನಿವಾರ್ಯತೆಯಲ್ಲಿರುವ ಯಡಿಯೂರಪ್ಪನವರ ಈ ಜಾಣ್ಮೆಯಿಂದ ಪ್ರತಿ ಪಕ್ಷಗಳು ಹಾಗೂ ಅವರ ಇತರ ವಿರೋಧಿಗಳು ಕಂಗೆಟ್ಟಿರುವುದು ಸುಳ್ಳಲ್ಲ.

ರಸಗೊಬ್ಬರದ ಹೆಸರಲ್ಲಿ ವಿವಾದ

ಹೀಗಾಗಿ, ಒಂದು ವಾರ ಹಳೆಯದಾದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಸಗೊಬ್ಬರ ಕೊರತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಯಿತು. ಎಲ್ಲರೂ ಬಲ್ಲ ಸರಳ ಸತ್ಯವೇನೆಂದರೆ, ಗೊಬ್ಬರದಂಥ ವಸ್ತುವಿನ ಕೊರತೆ ವಾರ ಅಥವಾ ತಿಂಗಳಲ್ಲಿ ಉಂಟಾಗುವಂಥದ್ದಲ್ಲ. ಕನಿಷ್ಠ ಮೂರು ತಿಂಗಳು ಮುಂಚಿತವಾಗಿ, ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಇದನ್ನೆಲ್ಲ ನಿಭಾಯಿಸಲೆಂದೇ ಹಲವಾರು ಇಲಾಖೆಗಳಿವೆ.

ಆದರೆ, ಮೂರು ತಿಂಗಳ ಹಿಂದೆ ರಾಜ್ಯದಲ್ಲಿ ಚುನಾಯಿತ ಸರ್ಕಾರವೇ ಇರಲಿಲ್ಲವಲ್ಲ? ಆ ಸಮಯದಲ್ಲಿ ಅಧಿಕಾರದಲ್ಲಿದ್ದುದು ರಾಜ್ಯಪಾಲರಾದ ರಾಮೇಶ್ವರ ಠಾಕೂರ್‌. ರಾಷ್ಟ್ರಪತಿಗಳ ಆಡಳಿತದಲ್ಲಿ ರಾಜ್ಯಪಾಲರೇ ಮುಖ್ಯಮಂತ್ರಿ ಇದ್ದಂತೆ. ಹಿರಿಯ ಅಧಿಕಾರಿಗಳು ಸಚಿವರಿದ್ದಂತೆ. ಬರಲಿರುವ ಮುಂಗಾರು ಹಂಗಾಮಿನ ಬಿತ್ತನೆಗೆ ಬೇಕಾದ ಪ್ರಮಾಣದ ರಸಗೊಬ್ಬರ ಹಾಗೂ ಬಿತ್ತನೆ ಬೀಜ ತರಿಸುವ ಕೆಲಸವನ್ನು ಅವರೇಕೆ ಮಾಡಲಿಲ್ಲ? ಬೀಜ ಹಾಗೂ ರಸಗೊಬ್ಬರದ ಬೇಡಿಕೆ ಅನಿರೀಕ್ಷಿತವಾಗಿ ಹುಟ್ಟಿದ್ದೇನಲ್ಲ. ಪ್ರತಿ ವರ್ಷ ಇದೇ ಸಮಯದಲ್ಲಿ ತಾನೆ ಬಿತ್ತನೆ ನಡೆಯುವುದು? ಹಾಗಿದ್ದರೂ, ರಾಜ್ಯಪಾಲರು ಇತ್ತ ಗಮನ ಹರಿಸಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲೂ ರೈತರ ಅಸಮಾಧಾನ ಕಾಣಲಿಲ್ಲ. ಆದರೆ, ಯಾವಾಗ ಬಿ.ಎಸ್‌. ಯಡಿಯೂರಪ್ಪನವರು ಹಸಿರು ಶಾಲು ಹೊದ್ದುಕೊಂಡು ರೈತ ಮತ್ತು ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೋ, ಕೆಲವರಲ್ಲಿ ತಳಮಳ ಶುರುವಾಯಿತು. ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಗಳ ಜಾಣ್ಮೆ ಕಂಡು ಅದು ಇನ್ನಷ್ಟು ಹೆಚ್ಚಾಯಿತು.

ಹೀಗಾಗಿ, ಧಾರವಾಡ ಹಾಗೂ ಹಾವೇರಿಗಳು ರಸಗೊಬ್ಬರದ ಕಾರಣ ಹೊತ್ತಿ ಉರಿದವು. ರಸಗೊಬ್ಬರ ಕೊರತೆಯ ಅಸಲಿ ಕಾರಣಗಳನ್ನು ವಿವರಿಸುವ ಜವಾಬ್ದಾರಿಯನ್ನು ಜನನಾಯಕರು ನಿರ್ವಹಿಸದೇ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ವರ್ತಿಸಿದರು. ಬಿಜೆಪಿ ಸರ್ಕಾರವೇ ಕೊರತೆಗೆ ಕಾರಣ ಎಂದು ಬಹಿರಂಗವಾಗಿ ದೂರಿ ರೈತರನ್ನು ರೊಚ್ಚಿಗೆಬ್ಬಿಸಿದರು.

ಕೊರತೆಗೆ ಕಾರಣಗಳು

ಆದರೆ, ರಸಗೊಬ್ಬರ ಹಲವಾರು ಕಾರಣಗಳಿವೆ.

ರಸಗೊಬ್ಬರ ತಯಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಬೇಕಾದ ರಂಜಕಾಮ್ಲ (ಫಾಸ್ಫರಿಕ್ ಆಸಿಡ್‌)ದ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಅಲ್ಲದೇ, ಖಾಸಗಿ ರಸಗೊಬ್ಬರ ತಯಾರಕರಿಗೆ ನೀಡಬೇಕಾದ ಸಹಾಯಧನ ಮೊತ್ತವನ್ನು ಕಳೆದ ಹತ್ತು ವರ್ಷಗಳಿಂದ ನೀಡಿಲ್ಲ. ಒಂದೆಡೆ ಕಚ್ಚಾ ವಸ್ತುವಿಗೆ ಹೆಚ್ಚಿಸಿದ ತೆರಿಗೆ, ಇನ್ನೊಂದೆಡೆ ಕಳೆದ ಹತ್ತು ವರ್ಷಗಳ ಸಹಾಯಧನ ಬಾರದಿರುವುದು ಖಾಸಗಿ ಉತ್ಪಾದಕರನ್ನು ಕಂಗೆಡಿಸಿತು. ಪರಿಣಾಮ, ರಸಗೊಬ್ಬರ ಉತ್ಪಾದನೆ ಕುಂಠಿತವಾಯಿತು. ಇದರಿಂದ ರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರದ ಉತ್ಪಾದನೆ ಮೇಲೆ ಹೊಡೆತ ಬಿತ್ತು.

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಿದ್ದ ಸಮಯದಲ್ಲಿ, ರಾಜ್ಯಕ್ಕೆ ಬೇಕಾದ ಪ್ರಮಾಣದ ರಸಗೊಬ್ಬರಕ್ಕೆ ಬೇಡಿಕೆ ಸಲ್ಲಿಸುವ ಕೆಲಸವನ್ನು ಅಧಿಕಾರಿಗಳು ಸರಿಯಾಗಿ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ನಿರೀಕ್ಷಿಸದಿದ್ದ ಶಕ್ತಿಗಳು ರಸಗೊಬ್ಬರ ಕೊರತೆಯನ್ನು ಸಮಸ್ಯೆ ಎಂಬಂತೆ ಬಿಂಬಿಸುತ್ತ ಹೋದವು. ರಾಜ್ಯದ ಇತರೆಡೆ ಕಂಡು ಬರದ ಹಿಂಸಾಚಾರ ಕೇವಲ ಹಾವೇರಿ ಮತ್ತು ಧಾರವಾಡದಲ್ಲಿ ಕಂಡು ಬಂದಿತು. ಕೊರತೆ ಇದೆ ಎಂದೇ ಆಗಿದ್ದರೆ ಅದನ್ನು ತುಂಬಿಕೊಳ್ಳಲು ಹೆಚ್ಚುವರಿ ರಸಗೊಬ್ಬರ ತರಿಸುವುದು ಕಷ್ಟವಾಗಿರಲಿಲ್ಲ. ಆದರೆ, ರಸಗೊಬ್ಬರವನ್ನು ಕೊಡುವುದೇ ಇಲ್ಲ ಎಂಬಂತೆ ಸಮಸ್ಯೆಯನ್ನು ಬಿಂಬಿಸುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೆಲಸ ಯೋಜನಾಬದ್ಧವಾಗಿ ನಡೆಯಿತು.

ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬಹುದು. ಚುನಾವಣೆ ಸಮಯದಲ್ಲಿ, ತಾವು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಾದರಿಯನ್ನು ಕರ್ನಾಟಕದಲ್ಲಿ ಅನುಸರಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಇಡೀ ದೇಶದಲ್ಲಿ ಅಭಿವೃದ್ಧಿಗೆ ಹೆಸರಾದ ರಾಜ್ಯ ಗುಜರಾತ್‌. ಅದರ ಆರ್ಥಿಕ ವೃದ್ಧಿ ದರ ಇತರ ರಾಜ್ಯಗಳನ್ನು ಮೀರಿಸುವಂತಿದೆ. ಇಡೀ ದೇಶದಲ್ಲಿ ಅತ್ಯಧಿಕ ಪ್ರಮಾಣದ ವಿದೇಶಿ ಬಂಡವಾಳವನ್ನು ಆ ರಾಜ್ಯ ಆಕರ್ಷಿಸುತ್ತಿದೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾದ ನಂತರ, ಗುಜರಾತ್‌ನ ಪ್ರಗತಿ ದರ ಏರುಗತಿಯಲ್ಲಿದೆ. ಯಡಿಯೂರಪ್ಪನವರು ಈ ಮಾದರಿಯನ್ನು ಕರ್ನಾಟಕದಲ್ಲಿ ತರುವ ಇಂಗಿತ ವ್ಯಕ್ತಪಡಿಸಿದ್ದರು. ಹೇಗೆ ಗುಜರಾತ್‌ನಲ್ಲಿ ನರೇಂದ್ರ ಮೋದಿಯವರಿಗೆ ಪಕ್ಷದ ಹೈಕಮಾಂಡ್‌ನಿಂದ ಪೂರ್ಣ ಸ್ವಾತಂತ್ರ ಸಿಕ್ಕಿತ್ತೋ ಅಂಥದೇ ಸ್ವಾತಂತ್ರ ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪನವರಿಗೆ ಸಿಕ್ಕಿದೆ.

ಇವೆಲ್ಲ ಬೆಳವಣಿಗೆಗಳನ್ನು ಸಹಿಸದ ಕುತಂತ್ರ ಮನೋಭಾವದ ಜನ ಗೊಬ್ಬರದ ಹೆಸರಿನಲ್ಲಿ ಶಾಂತಿ ಕದಡಲು, ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಯತ್ನಿಸಿದರು. ನಿಜವಾದ ಕಾರಣಗಳನ್ನು ಮುಚ್ಚಿಡುವ ಮೂಲಕ ಜನರನ್ನು ರೊಚ್ಚಿಗೆಬ್ಬಿಸಿದರು. ಪರಿಣಾಮ, ಮುಗ್ಧ ರೈತ ಬಲಿಯಾದ. ಹತ್ತಾರು ಜನ ಗಾಯಗೊಂಡರು. ಲಕ್ಷಾಂತರ ರೈತರ ಮನಸ್ಸು ಮುರಿಯಿತು.

ಕೀಳು ರಾಜಕೀಯ ಮಾಡುವುದನ್ನು ಬಿಟ್ಟು ನಮ್ಮ ರಾಜಕಾರಣಿಗಳು ಪ್ರಬುದ್ಧತೆ ತೋರಬೇಕಿದೆ. ಅಭಿವೃದ್ಧಿಗಾಗಿ ಆಡಳಿತ ಪಕ್ಷವನ್ನು ಒತ್ತಾಯಿಸಲಿ. ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವುದಕ್ಕಿಂತ, ಜನರಿಗೆ ಅನುಕೂಲಕರವಾಗುವ ನೀತಿಗಳ ಜಾರಿಗೆ ಒತ್ತು ಕೊಡಲಿ. ಇಲ್ಲದಿದ್ದರೆ, ರಾಜಕೀಯ ಎನ್ನುವುದು ಇನ್ನಷ್ಟು ಅಸಹ್ಯಕರ ವಿಷಯ ಅನ್ನಿಸಿಕೊಳ್ಳುತ್ತದೆ.
- ಚಾಮರಾಜ ಸವಡಿ

3 comments:

Anonymous said...

ಹಲೋ ಚಾಮರಾಜರೇ,
ಹೇಗಿದ್ದೀರಿ?
ತುಂಬ ವರುಷಗಳಾದವು ನಿಮ್ಮ ದರುಶನವಾಗಿ..
ಇವತ್ತು ಸುಮ್ಮನೆ ಬ್ಲಾಗಿಸುತ್ತಿದ್ದಾಗ ಅಚಾನಕ್ಕಾಗಿ ಸಿಕ್ಕಿದಿರಿ.
ಸಂತೋಷ.ಹಳೆಯ ಪ್ರೀತಿ ನಿಮ್ಮ ಬರಹಗಳನ್ನು ಓದಿಸಿತು.
ಬ್ಲಾಗಿನಲ್ಲಿ ಸಾಹಿತ್ಯಿಕ ಬರಹಗಳನ್ನೇ ಹೆಚ್ಚಾಗಿ ಚಿತ್ರಿಸಿದರೆ ಚೆಂದ ಅಂತ ಅನಿಸಿತು..
ಒಟ್ಟಿನಲ್ಲಿ ಹೀಗೆ ಭೆಟ್ಟಿಯಾಗಿದ್ದೇ ಒಂಥರಾ ಖುಶಿ!

-ರಾಘವೇಂದ್ರ ಜೋಶಿ

Chamaraj Savadi said...

ಪ್ರಿಯ ರಾಘವೇಂದ್ರ ಅವರೇ,

ಇತ್ತೀಚೆಗೆ ಈ ಬ್ಲಾಗ್‌ನಲ್ಲಿ ಬರೆಯುವುದು ಕಡಿಮೆಯಾಗಿದೆ. ಸದ್ಯಕ್ಕೆ ’ಸಂಪದ’ದಲ್ಲಿ ಬರೆಯುವುದು ಹೆಚ್ಚಾಗಿದೆ. ನನ್ನ ನಿಯಮಿತ ಬರವಣಿಗೆಗಳನ್ನು www.sampada.net/blog/chamaraj ನಲ್ಲಿ ನೋಡಬಹುದು.

ನೋಡಿ ಅಭಿಪ್ರಾಯ ತಿಳಿಸಿದರೆ ಉಪಕೃತ. ನಿಮ್ಮ ಬ್ಲಾಗ್‌ ಇದ್ದರೆ ದಯವಿಟ್ಟು ಲಿಂಕ್‌ ಕೊಡಿ. ನೋಡುವ ಕುತೂಹಲ.

- ಚಾಮರಾಜ ಸವಡಿ

Anonymous said...

ಚಾಮರಾಜರವರೇ

ಇತ್ತೀಚಿಗೆ ಕನ್ನಡ ಬ್ಲಾಗನಲ್ಲಿ ಬರೆಯಲು ಕಲಿತ್ತಿದ್ದೇನೆ. ನಿಮ್ಮ ಲೇಖನಗಳನ್ನು ನೋಡುತ್ತಾ ಬಂದಿದ್ದೇನೆ. ರಸಗೊಬ್ಬರ, ರೈತ,ಪರಿಸರ ಮತ್ತು ನೀರಿನ ಲೇಖನಗಳು ಸುಂದರವಾಗಿ ಬಂದಿವೆ.