ಮತ್ತದೇ ಖಾಲಿತನ, ಬೇಸರ
7 Aug 2008
ಹಾಡುಗಳ ಸಿಡಿ ಇಟ್ಟಲ್ಲೇ ಇದೆ. ಒಂದೇ ಕ್ಲಿಕ್ಕಿಗೆ ಕಿಶೋರ್ ಹಾಡತೊಡಗುತ್ತಾನೆ. ಆದರೆ ಬೆರಳುಗಳು ಚಲಿಸುವುದಿಲ್ಲ.
ಕೈ ಚಾಚಿದರೆ ಕಗ್ಗ ಸಿಗುತ್ತದೆ. ಡಿವಿಜಿ ವೇದಾಂತ ಹೇಳುತ್ತಾರೆ. ಡಾಮ್ನಿಕ್ ಲ್ಯಾಪಿಯರ್ ಚೆಂದಗೆ ಕತೆ ಹೇಳುತ್ತಾನೆ. ತರುಣ್ ತೇಜ್‌ಪಾಲ್ ಇದ್ದಕ್ಕಿದ್ದಂತೆ ಖಾಲಿಯಾದ ಸ್ಥಿತಿ ವರ್ಣಿಸುತ್ತಾನೆ. ಭೈರಪ್ಪನವರು ಸಾರ್ಥ ಹೊರಡುತ್ತಾರೆ. ತಾವು ಖಾಲಿಯಾಗಿದ್ದೇವೆ ಎಂಬುದನ್ನು ಅನಂತಮೂರ್ತಿ ಋಜುವಾತು ಮಾಡುತ್ತಾರೆ. ಆದರೂ ಕೈ ಚಾಚುವುದಿಲ್ಲ.
ಜೇಬಲ್ಲೇ ಇದೆ ಕೀಲಿ. ಬೆರಳೊತ್ತಿದರೆ ಸ್ಕೂಟಿ ಶುರುವಾಗುತ್ತದೆ. ಎಂಟೂ ದಿಕ್ಕುಗಳಿಗೆ ಯಾತ್ರೆ ಹೊರಡಬಲ್ಲುದು. ಆದರೂ ಕೈ ಸುಮ್ಮನಿದೆ.
ಎರಡೇ ಬಟನ್ನಿಗೆ ಮೆಚ್ಚಿನ ಚಾನೆಲ್ ಪ್ರತ್ಯಕ್ಷವಾಗುತ್ತದೆ. ಗಂಟೆ ಒಂಬತ್ತಾಯಿತೆ? ಪ್ರೈಮ್ ನ್ಯೂಸ್ ಬರುತ್ತಿರುತ್ತವೆ. ಏಕೋ ಸುದ್ದಿಗಳು ಬೇಸರ ಹುಟ್ಟಿಸುತ್ತವೆ. ರಿಮೋಟ್ ಅಲ್ಲೇ ಕೂತಿದೆ. ಆಜ್ಞೆಗಾಗಿ ಕಾಯುವ ಸಾಕುನಾಯಿಯಂತೆ.
ಯಾವಾಗ ಬೇಕಾದರೂ ಮೊಳಗಬಲ್ಲ ಮೊಬೈಲ್ ಪಕ್ಕಕ್ಕಿದೆ, ಥೇಟ್ ಸಿಡಿಯಲು ಸಿದ್ಧವಾದ ಬಾಂಬ್‌ನಂತೆ. ಬೆರಳೊತ್ತಿದರೆ ಇಷ್ಟಪಡುವ ಹಲವಾರು ಮಿತ್ರರು ಅಂಕೆಗಳಾಗಿ ಕಾಯುತ್ತಿದ್ದಾರೆ. ಆದರೂ ಕೈ ಅತ್ತ ಸರಿಯುತ್ತಿಲ್ಲ.
ಹಳೆಯ ಫೊಟೊಗಳ ಆಲ್ಬಮ್ಮುಗಳಿವೆ. ಅಚ್ಚಾದ ರಾಶಿರಾಶಿ ಪತ್ರಿಕೆಗಳಿವೆ. ಅಚ್ಚಿಗೆ ಕೊಡದೇ ಹಾಗೇ ಇಟ್ಟುಕೊಂಡ ನೂರಾರು ಬರಹಗಳಿವೆ. ಕಣ್ಣು ಮುಚ್ಚಿದರೆ ಮನಸ್ಸು ಮೂವತ್ತು ವರ್ಷ ಹಿಂದಕ್ಕೂ ಹೋಗಬಲ್ಲುದು. ಎಳೆಎಳೆಯನ್ನೂ ಹೆಕ್ಕಿ ನೆನಪಿನ ಚಾದರ ನೇಯಬಲ್ಲುದು. ಯಾವುದೋ ಎಳೆ ಹಿಡಿದೆಳೆದರೆ ಹಾಡಾಗುತ್ತದೆ, ಪ್ರಬಂಧವಾಗುತ್ತದೆ, ಕತೆಯಾಗುತ್ತದೆ, ಕೊಂಚ ಶ್ರದ್ಧೆಯಿಂದ ಕೂತರೆ ಕವಿತೆಯೂ ಆಗುತ್ತದೆ. ಆದರೂ ಮನಸ್ಸು ಸುಮ್ಮನಿದೆ.
ಕಿಟಕಿಯಾಚೆಯ ಬಾಳೆ ಗಿಡವೂ ಸುಮ್ಮನಿದೆ. ಜೊತೆಗಿದ್ದು ನೆಮ್ಮದಿ ನೀಡುತ್ತಿದ್ದ ಪೆನ್ನೂ ಸುಮ್ಮನಿದೆ. ರಿಮೋಟ್ ಸುಮ್ಮನಿದೆ. ಗಾಡಿಯ ಇಗ್ನಿಷನ್ ಕೀ ಸುಮ್ಮನಿದೆ. ಮೊಬೈಲ್ ಅನ್ನು ನಾನೇ ಸುಮ್ಮನಾಗಿಸಿದ್ದೇನೆ. ಏಕೋ ಗದ್ದಲ ಮಾಡುವ ಮಕ್ಕಳೂ ಮಲಗಿದ್ದಾರೆ. ಮತ್ತೇನು ವಿಶೇಷ ಎನ್ನುವ ಮಡದಿಯೂ ಮಲಗಿದ್ದಾಳೆ. ಏನೂ ವಿಶೇಷ ಇಲ್ಲವೆನ್ನುವಂತೆ ಬೆಂಗಳೂರಿನ ಗದ್ದಲದ ಟ್ರಾಫಿಕ್ಕೂ ಮೌನವಾಗಿದೆ.
ಬೀಟ್ ಪೋಲೀಸನ ಸಿಳ್ಳೆಯೂ ಕೇಳುತ್ತಿಲ್ಲ. ಸಂಗಾತಿಗಾಗಿ ಬೊಗಳುವ ನಾಯಿಯೂ ಸುಮ್ಮನಿದೆ. ಇಷ್ಟೊತ್ತಿಗೆ ಹೋಗಬೇಕಿದ್ದ ಕರೆಂಟ್ ಕೂಡ ಏತಕ್ಕೋ ಕಾಯುವಂತೆ ಬೆಳಗುತ್ತಲೇ ಇದೆ. ಮೋಡ ಚೆದುರಿ ಅಚ್ಚರಿಯಿಂದ ಚಂದ್ರ ಕೂಡ ಹೊರಬಂದಿದ್ದಾನೆ.
ಮರೆಯದೇ ಗೇಟ್ ಬೀಗ ಹಾಕಿದ್ದೇನೆ. ಗಾಡಿ ಲಾಕ್ ಮಾಡಿದ್ದೇನೆ. ಚಾರ್ಜಿಂಗ್ ದೀಪಗಳನ್ನು ಪ್ಲಗ್ಗಿಗೆ ಸಿಕ್ಕಿಸಿದ್ದೇನೆ. ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದೇನೆ. ನಿನ್ನೆಯ ಕೆಲಸಗಳು ಕರಾರುವಾಕ್ಕಾಗಿ ಮುಗಿದಿವೆ. ನಾಳೆ ಏನು ಮಾಡಬೇಕೆಂಬುದು ಇಂದೇ ಸ್ಪಷ್ಟವಾಗಿದೆ.
ಇವತ್ತು ಮಾಡುವುದು ಏನು?
ಮತ್ತದೇ ಬೇಸರ, ಖಾಲಿತನ, ಏಕಾಂತ !
- ಚಾಮರಾಜ ಸವಡಿ
Subscribe to:
Post Comments (Atom)
6 comments:
ಚಾಮರಾಜ್ ಸರ್,
ನಿಮ್ಮ ಬೇಸರ ಖಾಲಿತನದಲ್ಲಿ ನಮ್ಮೆಲ್ಲರ ಬಿಂಬಗಳೂ ಕಾಣತೊಡಗುತ್ತಿವೆ.
ಎಲ್ಲರ ಬದುಕಿನ ಕ್ಯಾನ್ವಾಸ್ ಒಂದೇ ಇರುತ್ತದೆ ಅಂತ ಅಂದುಕೊಂಡಿದ್ದೇನೆ. ಹೀಗಾಗಿ ಕಾಣುವ ಬಹುತೇಕ ಚಿತ್ರಗಳೂ ಒಂದೇ.
ನೋಟವೊಂದೇ ಭಿನ್ನವಾಗಿರುತ್ತದೆ.
- ಚಾಮರಾಜ ಸವಡಿ
uttama barahavondakke manasu ready aguttirabeku... alva sir....?
ನಮಸ್ಕಾರ.
ಶ್ರೀದೇವಿಯವರುನಿಮ್ಮ ಬ್ಲಾಗ್ ಕುರಿತು ಹೇಳಿದರು. ಹಾಗಾಗಿ ಇದು ನನ್ನ ಮೊದಲ ಭೇಟಿ. ನಿಮ್ಮ ಬ್ಲಾಗ್ ವೈವಿಧ್ಯಮಯ ಬರಹಗಳಿಂದ ಕೂಡಿದೆ. ಇಷ್ಟವಾಯಿತು. ಪ್ರಸ್ತುತ ಬರಹದ ಕುರಿತು ಹೇಳಬೇಕೆಂದರೆ. ನೋಟ ಹಲವು ಭಾವ ಒಂದೇ...
ಬರೆಯುತ್ತಿರಿ... ಬರುತ್ತಿರುವೆ.
ಥ್ಯಾಂಕ್ಸ್ ದಿನೇಶ್,
ಉತ್ತಮ ಬರಹ ಬರೆಯಲು ಕೂಡ ಮನಸ್ಸು ಸಿದ್ಧವಾಗಿರಬೇಕು ಎಂಬುದು ನನ್ನ ಭಾವನೆ
- ಚಾಮರಾಜ ಸವಡಿ
ಧನ್ಯವಾದ ತೇಜಸ್ವಿನಿ ಹೆಗಡೆ ಅವರೇ,
ನಿಯಮಿತ ಬರವಣಿಗೆಯ ಕ್ಷೇತ್ರ ಬಿಟ್ಟು, ವಿದ್ಯುನ್ಮಾನ ಕ್ಷೇತ್ರಕ್ಕೆ ಬಂದಾಗ ಹುಟ್ಟಿಕೊಂಡಿದ್ದು ಈ ಬ್ಲಾಗ್. ಹೀಗಾಗಿ ಬರೆಯುವುದು ಒಂದು ರೀತಿಯಲ್ಲಿ ಅನಿವಾರ್ಯವೂ ಹೌದು.
- ಚಾಮರಾಜ ಸವಡಿ
Post a Comment