ಮಧ್ಯಮದಲ್ಲೇ ಉಳಿದ ಮಾಧ್ಯಮ

13 Aug 2008

(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )

ಶಶಿಕುಮಾರ್‌ ಅವರು ’ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು’ (ಭಾಗ-೧)ರಲ್ಲಿ ಸಾಕಷ್ಟು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮ ಹೇಗೆ ಮಧ್ಯಮ ಹಂತದಲ್ಲೇ ಉಳಿದುಬಿಟ್ಟಿದೆ ಎಂಬುದನ್ನು ವಿವರವಾಗಿಯೇ ಬರೆದಿದ್ದಾರೆ. ಅವರು ಬರೆದಿದ್ದು ಒಂದೇ ಕಂತು ಹಾಗೂ ಇತರ ಕಂತುಗಳು ಇನ್ನೂ ಬರಬೇಕಿವೆ. ಆದರೆ, ಮೊದಲನೇ ಕಂತಿನಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಹಾಗೂ ಧೋರಣೆ ನೋಡಿದರೆ, ಇತರ ಕಂತುಗಳು ಬರಬಹುದಾದ ರೀತಿಯನ್ನು ತಕ್ಕಮಟ್ಟಿಗೆ ಊಹಿಸಬಹುದು.

ನಾನೂ ಪತ್ರಕರ್ತ. ವೃತ್ತಿಗಷ್ಟೇ ಅಲ್ಲ, ಪ್ರವೃತ್ತಿಗೂ ಅದನ್ನೇ ನೆಚ್ಚಿಕೊಂಡವನು. ಮಾಡುತ್ತಿದ್ದ ಸರ್ಕಾರಿ ಕೆಲಸ ಬಿಟ್ಟು ಪತ್ರಕರ್ತನಾದವನು. ಆದ್ದರಿಂದ, ವೃತ್ತಿಯ ಬಗ್ಗೆ ನನಗೆ ಸಾಕಷ್ಟು ಬದ್ಧತೆ, ಆಸಕ್ತಿ ಹಾಗೂ ಪ್ರೀತಿ ಇದೆ. ಹಾಗಂತ ಅದರ ದೋಷಗಳನ್ನು ಸಮರ್ಥಿಸುವುದಿಲ್ಲ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ, ತೋರಲೇಬೇಕಾದ ಅನಿವಾರ್ಯತೆಗಳನ್ನು ಹೊರತುಪಡಿಸಿ, ಅದನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದೇನೆ. ಹೀಗಾಗಿ, ಶಶಿಕುಮಾರ ಹೇಳಲು ಹೊರಟಿರುವ ವಿಷಯಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ಬರೆಯುವ ಅಧಿಕಾರ ನನಗಿದೆ. ಅದಕ್ಕಿಂತ ಹೆಚ್ಚಾಗಿ, ಬರೆಯಲೇಬೇಕಾದ ಜವಾಬ್ದಾರಿಯೂ ಇದೆ.

ಮಾಧ್ಯಮ ವರ್ತಿಸುತ್ತಿರುವ ರೀತಿಯ ಬಗ್ಗೆ ನನಗೆ ಸಾಕಷ್ಟು ಆಕ್ಷೇಪಣೆಗಳಿವೆ.

ಜನಾಕರ್ಷಣೆಯೇ ಮಾಧ್ಯಮದ ಮುಖ್ಯ ಗುರಿಯಾಗಿರುವುದು ಮೊದಲನೇ ಆಕ್ಷೇಪಣೆ. ಏನಾದರೂ ಸರಿ, ಓದುಗರನ್ನು/ವೀಕ್ಷಕರನ್ನು ಸೆಳೆಯಬೇಕು ಎಂಬುದು ಇವತ್ತಿನ ಮಾಧ್ಯಮದ ಅಲಿಖಿತ ನಿಯಮ. ಬದ್ಧತೆ, ಸಾಮಾಜಿಕ ಜವಾಬ್ದಾರಿ, ವಿವೇಚನೆ ಮುಂತಾದ ವಿಷಯಗಳು ಅಥವಾ ಭಾವನೆಗಳನ್ನು ನನ್ನ ವೃತ್ತಿ ಜೀವನದಲ್ಲಿ ನಾನು ಕಂಡಿದ್ದು ಅತಿ ವಿರಳ ಎಂದೇ ಹೇಳಬಹುದು. ಒಂದು ವಿಷಯವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದಕ್ಕಿಂತ, ಹೇಗೆ ಪ್ರಸ್ತುತಪಡಿಸಿದರೆ ಇತರರಿಗಿಂತ ಹೆಚ್ಚು ವೀಕ್ಷಕರು/ಓದುಗರನ್ನು ಅದು ಆಕರ್ಷಿಸುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಇದೊಂದು ರೋಗದಂತೆ ಮಾಧ್ಯಮ ಕಚೇರಿಗಳನ್ನು ಆವರಿಸಿದ್ದು, ಇಂಥದೇ ರೀತಿಯಲ್ಲಿ ಸುದ್ದಿ ಬರೆಯಿರಿ ಎಂದು ತಮ್ಮ ಆಧೀನ ಪತ್ರಕರ್ತ ಸಹೋದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಪತ್ರಿಕೋದ್ಯಮ ಕೇವಲ ವೃತ್ತಿಯಾಗುತ್ತಿರುವ ಈ ದಿನಗಳಲ್ಲಿ, ಹಿರಿಯ ಪತ್ರಕರ್ತರ ಆಜ್ಞೆಯನ್ನು ಉಲ್ಲಂಘಿಸಲು ಆದೀತೆ? ಒಂದು ವೇಳೆ ಉಲ್ಲಂಘಿಸಿದರೂ, ಅವನು ಬಹುಕಾಲ ಆ ಸಂಸ್ಥೆಯಲ್ಲಿ ಇರಲಾರ. ಇರುವಂತಹ ವಾತಾವರಣವೂ ಅವನ ಪಾಲಿಗೆ ಉಳಿಯುವುದಿಲ್ಲ. ಹಲವಾರು ಪತ್ರಿಕಾ ಕಚೇರಿಗಳಲ್ಲಿ, ಟಿವಿ ಮಾಧ್ಯಮದಲ್ಲಿ ನಾನು ಕೆಲಸ ಮಾಡುವಂತಾಗಲು ಇಂತಹ ಉಲ್ಲಂಘನೆಯೂ ಒಂದು ಮುಖ್ಯ ಕಾರಣ.

ಹೀಗಿರುವಾಗ, ಸುದ್ದಿಯ ಔಚಿತ್ಯ ಹಾಗೂ ಅದನ್ನು ಪ್ರಸ್ತುತಪಡಿಸುವ ಔಚಿತ್ಯದ ಬಗ್ಗೆ ಯಾರು ಯೋಚಿಸಬೇಕು? ಯಾರು ಅದನ್ನು ಸಮದೃಷ್ಟಿಯಿಂದ ಜಾರಿಗೊಳಿಸಬೇಕೋ, ಅವರೇ ರಂಜನೀಯವಾಗಿ ಅದನ್ನು ಬಿಂಬಿಸಲು ಮುಂದಾಗಿರುವಾಗ, ತೀರ ಕೆಳ ಹಂತದಲ್ಲಿರುವ ವಿವೇಚನೆಯುಳ್ಳ ಪತ್ರಕರ್ತ ತನ್ನ ಹೃದಯದ ಮಾತನ್ನು ನಡೆಸಲು ಹೇಗೆ ಸಾಧ್ಯವಾದೀತು?

ಮಾಧ್ಯಮ ಕಚೇರಿಯಲ್ಲಿ ನಿತ್ಯ ಹಲವಾರು ರೀತಿಯ ಸುದ್ದಿಗಳು ಬರುತ್ತಿರುತ್ತವೆ. ಎಲ್ಲವನ್ನೂ ಹೃದಯಕ್ಕೆ ಹತ್ತಿರವಾಗಿ ತೆಗೆದುಕೊಂಡು ವಿಶ್ಲೇಷಿಸುವುದು ಸಾಧ್ಯವಾಗದು. ಅಲ್ಲಿ ಭಾವನೆಗಿಂತ, ಕರ್ತವ್ಯಪ್ರಜ್ಞೆಯೇ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ನಿಜ. ಹಾಗಂತ, ನಿರ್ಭಾವುಕರಾಗಿ ಕೆಲಸ ಮಾಡಲಾಗದು. ವೃತ್ತಿ ಪ್ರಜ್ಞೆಯೊಂದಿಗೆ ವಿವೇಚನೆಯಿಂದಲೂ ಕೆಲಸ ಮಾಡುವುದು ನಿಜವಾದ ವೃತ್ತಿಪರತೆ. ಆದರೆ, ನಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ಆ ಬದ್ಧತೆ ತೀರಾ ವಿರಳವಾಗುತ್ತಿದೆ.

ನಾನೂ ತುಂಬ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಇಂತಹ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರನ್ನು ನೋಡಿದ್ದು ಬಲು ಅಪರೂಪ. ಸಮದೃಷ್ಟಿ ಇರುವ ಹಿರಿಯ ಪತ್ರಕರ್ತರು ಸಾಕಷ್ಟಿದ್ದರೂ, ಮ್ಯಾನೇಜ್‌ಮೆಂಟ್‌ನ ಒತ್ತಡಗಳಿಗೆ ಸಿಲುಕಿ ಅವರ ಸಮದೃಷ್ಟಿ ಹೊರಟುಹೋಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲು ಆಗದು.

ಇದಕ್ಕೆ ಪರಿಹಾರ ಎಂದರೆ, ನಮ್ಮ ನಮ್ಮ ಮಿತಿಯಲ್ಲಿ ಸುದ್ದಿಯನ್ನು ರಂಜನೀಯ ಮಾಡಲು ಹೋಗದಿರುವುದು. ಅದನ್ನು ನಾನು ವೃತ್ತಿ ಜೀವನದುದ್ದಕ್ಕೂ ಪಾಲಿಸುತ್ತ ಬಂದಿದ್ದೇನೆ. ಅದಕ್ಕಾಗಿ ಕೆಲ ಬಾರಿ ನೌಕರಿಯನ್ನೂ ಕಳೆದುಕೊಂಡಿದ್ದೇನೆ. ಆದರೂ, ನನ್ನ ಮಿತಿಯಲ್ಲಿ ಅದನ್ನು ಪಾಲಿಸುವಲ್ಲಿ ಹಿಂದೇಟು ಹಾಕಿಲ್ಲ. ಬಹಳಷ್ಟು ಸಾರಿ, ಅಂತಹ ವಿವೇಚನೆಯುಳ್ಳ ಬರವಣಿಗೆಗಾಗಿ ಹಿರಿಯ ಸಹೋದ್ಯೋಗಿಗಳಿಂದ ಬೈಸಿಕೊಂಡಾಗಿದೆ. ಬರೆದಿದ್ದನ್ನು ರಂಜನೀಯವಾಗುವಂತೆ ತಿದ್ದಿಕೊಡುವ ಅನಿವಾರ್ಯತೆಗೂ ಸಿಲುಕಿದ್ದಾಗಿದೆ. ಆದರೂ, ಮೊದಲ ಬರವಣಿಗೆ ರಂಜನೀಯವಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾತ್ರ ಬಿಟ್ಟಿಲ್ಲ.

ಶಶಿಕುಮಾರ್‌ ಬರೆದಂತೆ, ಮಾಧ್ಯಮಗಳು ಸುದ್ದಿಸೂಳೆಯ ಬೆನ್ನತ್ತಿ ಹೊರಟಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಬೆನ್ನು ಹತ್ತುವ ಭರದಲ್ಲಿ ಅವು ಎಲ್ಲರನ್ನೂ ಸೂಳೆಯರು ಎಂಬಂತೆ ನೋಡುತ್ತಿರುವುದು ನಿಜಕ್ಕೂ ಅಪಾಯಕಾರಿ. ಕಂಡ ಪ್ರತಿಯೊಂದು ಹೆಣ್ಣೂ ಬೆಲೆವೆಣ್ಣು ಇರಬಹುದೆ ಎಂಬ ಅನುಮಾನ ಖಂಡಿತ ಆರೋಗ್ಯಕರವಲ್ಲ. ಇದು ಇಡೀ ಸಮಾಜವನ್ನು ಹಾದಿ ತಪ್ಪಿಸುವ ಬೆಳವಣಿಗೆ. ಇದಕ್ಕೆ ಬೇಕಾದಷ್ಟು ಕಾರಣಗಳಿರಬಹುದು, ಬೇಕಾದಷ್ಟು ಅನಿವಾರ್ಯತೆಗಳಿರಬಹುದು. ಆದರೆ, ಅವ್ಯಾವೂ ಈ ದೃಷ್ಟಿಕೋನಕ್ಕೆ ಸಮರ್ಥನೆಗಳಲ್ಲ ಹಾಗೂ ಅಂತಹ ವಿವರಣೆಯನ್ನು ಒಪ್ಪುವುದು ಸಾಧ್ಯವೂ ಇಲ್ಲ.

ದುರಂತವೆಂದರೆ, ರಂಜನೀಯ ಸುದ್ದಿಗಳನ್ನು ಕೊಡದ ಮಾಧ್ಯಮಗಳು ವೀಕ್ಷಕರನ್ನು ಸೆಳೆಯುವಲ್ಲಿ, ಓದುಗರನ್ನು ಆಕರ್ಷಿಸುವಲ್ಲಿ ಹಿಂದೆ ಬೀಳುತ್ತಿವೆ. ಮಾಧ್ಯಮ ಕೂಡಾ ಒಂದು ವೃತ್ತಿ. ಅಲ್ಲಿ ಹಣ ಹಾಕಿ ಹಣ ಗಳಿಸಬೇಕಿದೆ. ಹೀಗಾಗಿ, ಹೆಚ್ಚು ಲಾಭ ಬರುವ ಸರಕನ್ನು ಮಾರಲು ಮಾಧ್ಯಮ ಸಂಸ್ಥೆಗಳು ಯತ್ನಿಸುತ್ತಿವೆ. ಇದು ತಪ್ಪಬೇಕೆಂದರೆ, ಓದುಗರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು. ಜೊತೆಜೊತೆಗೆ ಮಾಧ್ಯಮಗಳಿಗೂ ಒಂದು ಮಟ್ಟದ ಅಂಕುಶ ಬೇಕೇಬೇಕು. ಎರಡೂ ಕಡೆಯಿಂದ ಈ ಕ್ರಿಯೆ ನಡೆದಾಗ ಮಾತ್ರ, ಮಾಧ್ಯಮ ಕೊಂಚ ಜವಾಬ್ದಾರಿ ಕಲಿಯಲು ಸಾಧ್ಯ. ಇಲ್ಲದಿದ್ದರೆ, ಬಲುಬೇಗ ಇಡೀ ಸಮಾಜದ ಸ್ವಾಸ್ಥ್ಯ ಕೆಟ್ಟುಹೋಗುತ್ತದೆ.

ಒಂದಂತೂ ನಿಜ. ಸಮಾಜದಲ್ಲಿ ಏನು ನಡೆಯುತ್ತಿದೆಯೋ, ಮಾಧ್ಯಮದಲ್ಲಿ ಅದೇ ಬರುತ್ತದೆ. ಸಮಾಜಕ್ಕೆ ಹೊರತಾದ ಯಾವುದನ್ನೂ ಮಾಧ್ಯಮ ನೀಡಲು ಹೋಗುವುದಿಲ್ಲ. ಸಮಾಜದಲ್ಲಿರುವ ಅನಾಚಾರ, ಕೊಳಕು, ದುಷ್ಟತನದ ಚಿತ್ರಣವೇ ಮಾಧ್ಯಮದಲ್ಲಿಯೂ ಕಾಣುತ್ತಿದೆ. ಆದರೆ, ಕೇವಲ ಈ ಚಿತ್ರಣ ಮಾತ್ರ ಕಾಣುವಂತಾಗಿರುವುದು ಅಪಾಯಕಾರಿ. ಈ ಕೊಳಚೆಯ ಹೊರತಾಗಿಯೂ ಸಮಾಜದಲ್ಲಿ ಉತ್ತಮವಾದ ವಿಷಯಗಳು ಬೇಕಾದಷ್ಟಿವೆ. ಅವನ್ನು ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ಮಾಧ್ಯಮ ಬೆಳೆಸಿಕೊಳ್ಳಬೇಕು. ಅದೇ ರೀತಿ, ಅಂತಹ ವಿಷಯಗಳನ್ನು ಆಸ್ವಾದಿಸುವ ಅಭಿರುಚಿಯನ್ನು ಓದುಗ/ವೀಕ್ಷಕರೂ ಬೆಳೆಸಿಕೊಳ್ಳಬೇಕಿದೆ.

ಇಷ್ಟೆಲ್ಲ ಹೇಳಿದ ನಂತರವೂ, ಮಾಧ್ಯಮ ಇವತ್ತು ತುಳಿಯುತ್ತಿರುವ ಹಾದಿ ಸರಿಯಲ್ಲ ಎಂದು ಮತ್ತೆ ಒಪ್ಪಿಕೊಳ್ಳುತ್ತೇನೆ. ಇದಕ್ಕೊಂದು ಅಂಕುಶ ಇರಲಿ. ಸ್ವಯಂ ಸಂಯಮ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವುದರಿಂದ, ಕಾನೂನು ಅಂಕುಶ ಸ್ವಲ್ಪಮಟ್ಟಿಗೆ ಕೆಲಸ ಮಾಡಬಲ್ಲುದು. ಆದರೆ, ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳದಿರಲಿ. ಗಾಳಿಪಟದ ಸೂತ್ರದಂತೆ, ಪಟವನ್ನು ಹಿಡಿದಿಟ್ಟಿರಲಿ. ಆದರೆ, ಅದರ ಹಾರಾಟಕ್ಕೆ ಧಕ್ಕೆ ತಾರದಿರಲಿ.

ಬಹುಶಃ ಶಶಿಕುಮಾರ್‌ ಹಾಗೂ ಅವರಂಥ ಸಾವಿರಾರು ಮಿತ್ರರ, ಸಹೃದಯಿ ಓದುಗ/ವೀಕ್ಷಕರ ಬಯಕೆಯೂ ಇದೇ ಇರಬಹುದು.
- ಚಾಮರಾಜ ಸವಡಿ

3 comments:

d.b.advani said...

i like u r writting, u writting about formers and sahaj krishi i read u r most of writtings in sampada my name is doddappa advani

Chamaraj Savadi said...

ಥ್ಯಾಂಕ್ಸ್‌ ದೊಡ್ಡ ಬಸು. ಬಹುಶಃ ನಿಮ್ಮ ಹೆಸರು ದೊಡ್ಡಪ್ಪ ಆದವಾನಿ?

Th Editor said...

You are good feature writter. I read most of it from your Hassan days at VK to PV. Its sad you left print and joined Su_tv