ಕಂಪ್ಯೂಟರ್ ಇಟ್ಟಿರುವ ಕೋಣೆಯ ಕಿಟಕಿಯಾಚೆ, ಮಳೆ ಪಟ ಪಟ ಎಂದು ಬಾಳೆ ಎಲೆ ಮೇಲೆ ಬೀಳುವುದು ಕಾಣುತ್ತಿದೆ. ಪಕ್ಕದ ಕಟ್ಟಡದಲ್ಲಿರುವ ಅವಿವಾಹಿತ ಹುಡುಗರು ಯಾವಾಗಲೋ ನೆಟ್ಟಿದ್ದು. ಎಲೆ ಅಗಲಿಸಿ ಬೆಳೆಯುತ್ತಿದೆ. ಅದರ ನೆರಳಡಿ ಪುಟ್ಟ ಬಾವಿ. ಸಿಮೆಂಟ್ ರಿಂಗ್‌ಗಳನ್ನು ಪೇರಿಸಿ ಕಟ್ಟಿರುವ ನಗರದ ಬಾವಿ. ಅದಕ್ಕೊಂದು ಜಾಲರಿಯುಳ್ಳ ಮುಚ್ಚಳ. ಆಗೀಗ ಮುಚ್ಚಳ ತೆರೆದು, ಹಗ್ಗ ಇಳಿಬಿಟ್ಟು ನೀರೆತ್ತುತ್ತಾರೆ ಹುಡುಗರು. ಅವರು ಬಳಸಿದ ನೀರನ್ನು ಹೀರಿಕೊಂಡು ಬೆಳೆಯುತ್ತಿದೆ ಬಾಳೆ.
ಮಳೆ ಬೀಳುತ್ತಿರುವುದರಿಂದ ಹುಡುಗರಾರೂ ಕಾಣುತ್ತಿಲ್ಲ. ಬಾವಿಯ ಜಾಲರಿ ಬಾಗಿಲು ಮುಚ್ಚಿಕೊಂಡಿದೆ. ಬಾಳೆ ಗಿಡದ ಹಿಂದೆ ಮಳೆಯ ಮಂಕಿನಲ್ಲಿ ನಿಂತ ಎರಡಂತಸ್ತಿನ ಮನೆಗಳು. ಅದರಾಚೆ ಕಪ್ಪುಗಟ್ಟಿರುವ ಮೋಡ. ಮಧ್ಯಾಹ್ನದವರೆಗೆ ಬಿಸಿಲು ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಮೋಡಗಳು ಧಾವಿಸಿ ಬಂದವು. ನೋಡನೋಡುತ್ತಲೇ ಸಣ್ಣಗೆ ಶುರುವಾದ ಮಳೆ ಬಿಟ್ಟೇ ಇಲ್ಲ.
ಈಗ ಕಿಟಕಿಯಾಚೆಯ ಚಿತ್ರಣ ಪೂರ್ತಿ ಬದಲಾಗಿದೆ. ಬಿಸಿಲಿನಲ್ಲಿ ಮಂಕಾದಂತೆ ಕಾಣುತ್ತಿದ್ದ ಬಾಳೆಯ ಎಲೆಗಳಲ್ಲಿ ಈಗ ಹಸಿರಿನ ಹೊಸ ರಂಗು. ಎಲೆಗಳ ಮೇಲೆ ಮಳೆಯ ಮುತ್ತಿನ ಹನಿಗಳು. ತುಸು ಗಾಳಿ ಬೀಸಿದರೂ ಮುತ್ತುಗಳು ಉದುರುತ್ತವೆ. ಹೊಸ ಮುತ್ತುಗಳು ಬಂದು ಸೇರುತ್ತವೆ. ಬಾವಿಯ ಜಾಲರಿ ಮೇಲೆ ಬೀಳುವ ಹನಿಗಳು ಒಡೆದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗಿದೆ.
ಕ್ರಮೇಣ ಮೋಡಗಳು ಚೆದುರಿದವು. ಬೆಳಕು ತೂರಿ ಬಂತು. ಬಾಳೆಗಿಡ ಮೊದಲಿಗಿಂತ ಹೆಚ್ಚು ಸ್ಪಷ್ಟವಾಗಿ ನಳನಳಿಸಿತು. ಅದರ ಎಲೆಗಳಲ್ಲೀಗ ಸಮಾಗಮದ ನಂತರದ ಹೆಣ್ಣಿನ ಸೊಗಸು. ಮಳೆಯಲ್ಲಿ ಮಿಂದು ಬಾವಿಯ ಜಾಲರಿ ಸ್ವಚ್ಛವಾಗಿದೆ. ಕಿಟಕಿಯಾಚೆಗಿನ ಚಿತ್ರ ಈಗ ಮೊದಲಿಗಿಂತ ಸ್ಪಷ್ಟ, ಸ್ಫುಟ.
ಇಡೀ ಕಿಟಕಿಯ ಚೌಕಟ್ಟೇ ಚಿತ್ರವೊಂದರ ಚೌಕಟ್ಟಿನಂತಾಗಿ, ಆಚೆಯ ದೃಶ್ಯಗಳು ಚಿತ್ರವಾಗಿವೆ. ಯಾರು ಬಿಡಿಸಿದರು ಇದನ್ನು? ಮಳೆಯೆ, ಮೋಡವೆ, ನೆಟ್ಟ ಬಾಳೆ ಗಿಡವೇ, ತಿಳಿ ಸಂಜೆಯ ಮುಂಚಿನ ರಂಗೇ? ಎಲ್ಲ ಕೈ ಜೋಡಿಸಿ ಬಿಡಿಸಿದ ಚಿತ್ರಕ್ಕೆ ಕೋಣೆಯ ಕಿಟಕಿಯ ಚೌಕಟ್ಟು. ಅದರ ಹಿಂದೆ ನಾನು. ಹಣ ನೀಡದ, ಹಣ ನೀಡಿದರೂ ಸಿಗದ ಅಪೂರ್ವ ಚಿತ್ರವೊಂದನ್ನು ನೋಡುತ್ತ ನೋಡುತ್ತ ಅದರಲ್ಲೇ ಮುಳುಗಿಹೋದೆ.
ಥ್ಯಾಂಕ್ಸ್ ಬದುಕೇ. ಪಕ್ಕದ ಮನೆಯಲ್ಲಿ ಒಂದಿಷ್ಟು ಜಾಗ ಉಳಿಸಿದ್ದಕ್ಕೆ, ಅಲ್ಲಿ ನೆಲೆಸಲು ಬಂದ ಹುಡುಗರಲ್ಲಿ ವೃಕ್ಷಪ್ರೀತಿ ಹುಟ್ಟಿಸಿದ್ದಕ್ಕೆ, ಆವರಣದಲ್ಲೊಂದು ಬಾವಿ ತೋಡಿಸಿದ್ದಕ್ಕೆ, ಮಧ್ಯಾಹ್ನ ಬಂದ ಅಕಾಲಿಕ ಮಳೆಗೆ, ನೆರಳು-ಬೆಳಕಿನಾಟ ಆಡಿದ ಸೂರ್ಯನಿಗೆ, ನಾನಿರುವ ಮನೆಯ ಕಿಟಕಿಗೆ,
ಹಾಗೂ ಅದರ ಮೂಲಕ ಅಪೂರ್ವ ಚಿತ್ರಣ ನೋಡಬಲ್ಲ ಮನಃಸ್ಥಿತಿಯನ್ನು ನನ್ನಲ್ಲಿ ಉಳಿಸಿದ್ದಕ್ಕೆ.
- ಚಾಮರಾಜ ಸವಡಿ
No comments:
Post a Comment