(ಈ ಲೇಖನ ಡಿ.ಎಸ್. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು)
ಸನ್ಮಾನ್ಯ ಡಿ.ಎಸ್. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಲೇಖನ ಜಾತ್ಯತೀತ ಹೆಸರಲ್ಲಿ ಹುಷಾರಾಗಿ ಹೆಣೆದ ಲೇಖನ ಎಂದು ಹೇಳಲು ಬಯಸುತ್ತೇನೆ. ಇಡೀ ವಿವಾದದಲ್ಲಿ ಮುಸ್ಲಿಮರನ್ನು ನೇರವಾಗಿ ಖಂಡಿಸದೇ, ಅವರ ಧೋರಣೆಯ ಹಿಂದಿರುವ ಧರ್ಮಾಂಧತೆಯನ್ನು ಬಯಲಿಗೆ ತಾರದೇ, ಇಡೀ ವಿವಾದದ ಹಿಂದೆ ಹಿಂದು ಧರ್ಮ ಪರ ಸಂಘಟನೆಗಳ ಹುನ್ನಾರ ಇದೆ ಎಂಬಂತೆ ಬಿಂಬಿಸಲು ಲೇಖಕರು ಯತ್ನಿಸಿದ್ದಾರೆ.
ಇದಕ್ಕೆ ಬೆಂಬಲವಾಗಿ ಸತ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ ನಾಗಭೂಷಣ ಅವರು.
ಅವರ ಲೇಖನದ ಈ ಸಾಲುಗಳನ್ನೇ ನೋಡಿ:
’’ಆಗಸ್ಟ್ 14ರವರೆಗೂ ತನ್ನ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿರುವ ಜಮ್ಮು ಸಂಘರ್ಷ ಸಮಿತಿ 62ನೇ ಸ್ವಾತಂತ್ರ್ಯೋತ್ಸವಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿದೆ ಎಂದೇ ಹೇಳಬೇಕು. ರಾಜ್ಯದ ಈವರೆಗಿನ ರಾಜಕಾರಣ; ಕಾಶ್ಮೀರ ಕಣಿವೆ ಮುಸ್ಲಿಮರದ್ದೂ, ಜಮ್ಮು ತಪ್ಪಲು ಹಿಂದೂಗಳದ್ದು ಎಂಬ ವಿಭಾಗೀಕರಣಕ್ಕೆ ಕಾರಣವಾಗಿರುವುದರಿಂದ ಸದ್ಯದ ಈ ಸಮಸ್ಯೆಗೆ ದಟ್ಟ ಕೋಮು ಬಣ್ಣ ಕೂಡಾ ಬಂದಿದೆ.”
ಇದು ಇವತ್ತಿನ ಬಣ್ಣವಲ್ಲ ನಾಗಭೂಷಣ ಅವರೇ. ಜಮ್ಮು ಕಾಶ್ಮೀರ ರಾಜ್ಯ ರಚನೆಯಾದಾಗಿನಿಂದ ಇರುವಂಥದ್ದು. ಇತಿಹಾಸದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುವುದರಿಂದ, ಮತ್ತು ತಕ್ಕಮಟ್ಟಿಗೆ ಬಹಳಷ್ಟು ಜನರೂ ಅದನ್ನು ಅರಿತುಕೊಂಡಿರುವುದರಿಂದ, ಕೋಮುಬಣ್ಣ ಇವತ್ತಿನದಲ್ಲ ಎಂಬುದನ್ನು ಮತ್ತೆ ವಿವರಿಸಬೇಕಾಗಿಲ್ಲ ಅನಿಸುತ್ತದೆ.
ನಿಮ್ಮ ಮುಂದಿನ ಸಾಲುಗಳು ಕೂಡಾ ಮುಸ್ಲಿಂ ಪರ ಸಂಘಟನೆಗಳು ಹಾಗೂ ಉಗ್ರವಾದಿಗಳ ಮೇಲಿನ ಅನುಕಂಪವನ್ನೇ ವ್ಯಕ್ತಪಡಿಸುತ್ತವೆ ”ಇದರಿಂದ ನಿರಂತರವಾಗಿ ಲಾಭ ಪಡೆಯುತ್ತಿರುವವರೆಂದರೆ, ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಉಗ್ರವಾದಿ ಸಂಸ್ಥೆಗಳು. ಮೊನ್ನೆ ಜಮ್ಮು ಬಂದ್ ವಿರುದ್ಧ ಶ್ರೀನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಅನೇಕ ಉಗ್ರವಾದಿ ಗುಂಪುಗಳು ಬಹಿರಂಗವಾಗಿ ಕಾಣಿಸಿಕೊಂಡು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗತೊಡಗಿದ್ದು ಮತ್ತು ಇದನ್ನು ನಮ್ಮ ಭದ್ರತಾ ಪಡೆಗಳು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾದದ್ದು ಇದಕ್ಕೊಂದು ಉದಾಹರಣೆ.” ಎಂದು ಹೇಳುತ್ತೀರಿ. ಅದರ ನಂತರದ ಘಟನೆಗಳನ್ನೇಕೆ ಉದಾಹರಿಸಿಲ್ಲ? ಶ್ರೀನಗರದ ಲಾಲ್ಚೌಕದಲ್ಲಿ ಆಗಸ್ಟ್ ೧೫ರಂದು ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ಮಧ್ಯಾಹ್ನ ೩.೪೫ರ ಹೊತ್ತಿಗೆ ಇಳಿಸಿದ ಮುಸ್ಲಿಂ ಸಂಘಟನೆಗಳು ಹಾಗೂ ಉಗ್ರವಾದಿಗಳು, ಅಲ್ಲಿ ತಮ್ಮ ಸಂಘಟನೆಗಳ ಧ್ವಜಗಳನ್ನು ಹಾರಿಸಿದರು. ಸಂಘಟನೆಗೆ ಸೇರಿದ ಮಹಿಳಾ ಸದಸ್ಯರು ರಾಷ್ಟ್ರಧ್ವಜ ಸುಟ್ಟರು. ನೀವು ಹೇಳಿದಂತೆ ನಮ್ಮ ಭದ್ರತಾ ಪಡೆಗಳು ಅದನ್ನು ಮೂಕಪ್ರೇಕ್ಷರಾಗಿ ನೋಡುತ್ತಾ ನಿಂತಿದ್ದರು. ಏಕೆ ಗೊತ್ತೆ? ಆಗ ಅವರು ರಂಗಕ್ಕೆ ಇಳಿದಿದ್ದರೆ ಮತ್ತೊಂದು ರಕ್ತಪಾತವಾಗುತ್ತಿತ್ತು. ಅದೂ ಸ್ವಾತಂತ್ರ ದಿನದಂದು. ಅದಕ್ಕೇ ಸುಮ್ಮನಿದ್ದರು. (ಟೈಮ್ಸ್ ಆಫ್ ಇಂಡಿಯಾ ೧೬-೮-೨೦೦೮)
ಮುಂದೆ ನೀವು ಕಾಶ್ಮೀರ ಸಮಸ್ಯೆ ಉಲ್ಬಣವಾಗಿದ್ದು ಹೇಗೆ ಎಂಬುದನ್ನು ಹೇಳುತ್ತ, ಕೇವಲ ಕೇಂದ್ರ ಸರ್ಕಾರ ಮತ್ತು ಅದು ಸ್ಥಾಪಿಸಿದ್ದ ಕೈಗೊಂಬೆ ರಾಜ್ಯ ಸರ್ಕಾರಗಳು ಇವತ್ತಿನ ಪರಿಸ್ಥಿತಿಗೆ ಕಾರಣ ಎನ್ನುತ್ತೀರಿ. ಇದಕ್ಕೆ ಸಮರ್ಥನೆಯಾಗಿ ”ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ಥಾನ ಮತ್ತು ಇರಾಕ್ಗಳ ಮೇಲಿನ ಅಮೆರಿಕಾದ ಆಕ್ರಮಣಗಳ ನಂತರವಂತೂ ಈ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತಿತವಾಗಿ, ಸಮಸ್ಯೆಯನ್ನು ಉಲ್ಬಣಗೊಳಿಸಿದೆ” ಎಂದು ಬರೆಯುತ್ತೀರಿ. ಅಂದರೆ, ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ತಾನ ಮತ್ತು ಇರಾಕ್ ಮೇಲಿನ ಅಮೆರಿಕ ಆಕ್ರಮಣದಿಂದ ಕಾಶ್ಮೀರ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತನೆಯಾಯಿತು ಎಂಬುದು ನಿಮ್ಮ ಬರಹದ ಅರ್ಥ. ಅಂದರೆ, ಮೇಲಿನ ಬೆಳವಣಿಗೆಗಳ ಮುಂಚೆ ಜಮ್ಮು ಕಾಶ್ಮೀರದಲ್ಲಿ ಕೋಮುವಾದ ಇರಲಿಲ್ಲವೆ? ಜಗತ್ತಿನ ಇಂತಹ ಸಮಸ್ಯೆಗಳ ಹಿನ್ನೆಲೆ ಅವಲೋಕಿಸಿದರೆ, ಕೋಮುವಾದವೇ ಪ್ರತ್ಯೇಕತಾವಾದವಾಗಿ ಬದಲಾಗಿದ್ದು ಸರಳವಾಗಿ ಗೋಚರಿಸುತ್ತದೆ. ನಮ್ಮ ದೇಶ ವಿಭಜನೆಯಾಗಿದ್ದೇ ಕೋಮುವಾದದಿಂದ ಎಂಬುದನ್ನು ಏಕೆ ಮರೆಯುತ್ತೀರಿ?
ನಿಮ್ಮ ಲೇಖನದ ಮುಂದಿನ ಪ್ಯಾರಾವಂತೂ ಜಾತ್ಯತೀತ ಹೆಸರಿನ ಬಹುತೇಕ ಕೋಮುವಾದಿಗಳ ದೃಷ್ಟಿಕೋನವನ್ನೇ ಪ್ರತಿಫಲಿಸುತ್ತದೆ.
”ಆದರೆ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣ ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ, ಸಂವಿಧಾನ ಪ್ರತಿಪಾದಿಸಿದ್ದ ಒಕ್ಕೂಟ ರಾಷ್ಟ್ರದ ಭಾವನೆಯ ವಿರುದ್ಧ ಆಚರಿಸಿಕೊಂಡು ಬರುತ್ತಿರುವ ಕೇಂದ್ರೀಕೃತ ಆಡಳಿತ ನೀತಿಯ ಫಲವಾಗಿ ವಿವಿಧ ರಾಜ್ಯಗಳ ಭಾಷೆ-ಸಂಸ್ಕೃತಿ ಸಂಪ್ರದಾಯಗಳು ಘಾಸಿಗೊಂಡಿರುವಂತೆ, ಇಲ್ಲೂ ಆ ಬಹು ಸಂಸ್ಕೃತಿಯ ಸಂಪ್ರದಾಯ ಘಾಸಿಗೊಂಡಿದೆ. ಸ್ಥಳೀಯ ಸಂಸ್ಕೃತಿಯ ಪರಿಮಳ ನಾಶವಾಗಿ ಈ ಮುಸ್ಲಿಂ ಬಹುಸಂಖ್ಯಾತರ ರಾಜ್ಯ, ರಾಷ್ಟ್ರೀಯತೆಯ ಅತಿಗಳಿಗೆ ಸಿಕ್ಕಿ ಕೋಮುವಾದಕ್ಕೆ ಬಲಿಯಾಗಿದೆ. ಇದರಿಂದಾಗಿ, ಭಾರತದ ಬಹು ಸಂಪ್ರದಾಯಗಳ ಸಂಸ್ಕೃತಿಗೆ ಹತ್ತಿರವಿದ್ದ ಕಾರಣದಿಂದಾಗಿ ಭಾರತದಲ್ಲಿ ಸಹಜವಾಗಿ ಒಂದಾಗಬೇಕಿದ್ದ ಈ ರಾಜ್ಯ, ಈಗ ತನ್ನ ಮುಕ್ತಿಗಾಗಿ ಪಾಕಿಸ್ತಾನದ ಕಡೆ ನೋಡುವಂತಾಗಿದೆ.” ಈ ವಾಕ್ಯಗಳನ್ನು ಬರೆಯುವುದಕ್ಕೆ ಜಾತ್ಯತೀತರೆನ್ನಿಸಿಕೊಳ್ಳುವ ಹಂಬಲ ಬಿಟ್ಟು ಬೇರೆ ಏನೂ ನನಗೆ ಕಾಣುತ್ತಿಲ್ಲ. ನಿಮ್ಮ ಪ್ರಕಾರ, ಕಾಶ್ಮೀರದ ಇವತ್ತಿನ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣವೇ ಹೊರತು, ಸ್ಥಳೀಯ ಬಹುಸಂಖ್ಯಾತ ಮುಸ್ಲಿಂ ಕಾಶ್ಮೀರಿಗಳ ಕೊಡುಗೆ ಏನೇನೂ ಇಲ್ಲ. ಇದನ್ನು ಒಪ್ಪಲು ಸಾಧ್ಯವೆ? ದೇಶ ಸ್ವಾತಂತ್ರವಾದಾಗಿನಿಂದ ಇಂದಿನವರೆಗೆ, ದೇಶದ ಮುಖ್ಯವಾಹಿನಿಯ ಚಟುವಟಿಕೆಗಳಲ್ಲಿ ಈ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರಿಗಳು ಎಷ್ಟರ ಮಟ್ಟಿಗೆ ಪಾಲ್ಗೊಂಡಿದ್ದಾರೆ? ಈ ದೇಶವನ್ನು ತಮ್ಮದು ಎಂಬ ಭಾವನೆಯಲ್ಲಿ ಯಾವತ್ತು ನೋಡಿದ್ದಾರೆ? ನೀವೇ ಹೇಳುವಂತೆ ಜಮ್ಮು ಕಾಶ್ಮೀರದಲ್ಲಿ ಹಿಂದು, ಮುಸ್ಲಿಂ ಮತ್ತು ಬೌದ್ಧ ಧರ್ಮೀಯರು ಬಹುಸಂಖ್ಯಾತರು. ಆದರೆ, ಇವತ್ತು ಮುಸ್ಲಿಂರ ಪ್ರಾಬಲ್ಯ ಬಿಟ್ಟರೆ ಎಷ್ಟರ ಮಟ್ಟಿಗೆ ಇತರ ಧರ್ಮೀಯರು ನೀತಿ ನಿರ್ಣಯದ ಶಕ್ತಿ ಹೊಂದಿದ್ದಾರೆ?
ಇಷ್ಟೇ ಅಲ್ಲ, ಶ್ರೀನಗರ ಹೆದ್ದಾರಿ ಬಂದ್ನಿಂದಾಗಿ ವ್ಯಾಪಾರ ಕಳೆದುಕೊಂಡಿರುವ ಕಾಶ್ಮೀರಿಗಳು ಅನಿವಾರ್ಯವಾಗಿ ತಮ್ಮ ಸರಕನ್ನು ಮಾರಲು ಪಾಕ್ ಆಕ್ರಮಿತ ಕಾಶ್ಮೀರದ ಕಡೆ ಹೊರಳಿದ್ದಾರೆ ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದೀರಿ (ಹಾಗಾಗಿಯೇ, ಈಗ ಜಮ್ಮು ಕಡೆ ವಾಹನ ಸಂಚಾರ ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ವ್ಯಾಪಾರಿಗಳು ತಮ್ಮ ಸರಕಿನ ಉಳಿವಿಗಾಗಿ ಅದನ್ನು ಈ 'ಆಝಾದ್ ಕಾಶ್ಮೀರ'ದೆಡೆಗೆ ತಿರುಗಿಸದೆ ವಿಧಿಯಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಇದನ್ನು ರಾಷ್ಟ್ರ ವಿರೋಧಿ ಕ್ರಮ ಎಂದು ಕರೆದಿರುವ ಜಮ್ಮು ಸಂಘರ್ಷ ಸಮಿತಿಗೆ, ತಾನು ನಿರಂತರ ಬಂದ್ ಹೆಸರಿನಲ್ಲಿ ರಸ್ತೆ ತಡೆ ನಡೆಸುತ್ತಾ ಕಾಶ್ಮೀರಕ್ಕೆ ಆರ್ಥಿಕ ದಿಗ್ಬಂಧನ ಹೇರಿರುವುದು ಕೂಡಾ ರಾಷ್ಟ್ರ ವಿರೋಧಿ ಕ್ರಮ....) ಇದು ಯಾವ ಜಾತ್ಯತೀತ ನಿಲುವು ಸ್ವಾಮಿ?
ಲೇಖನ ಉದ್ದವಾದೀತೆಂಬ ಅಳುಕಿನಿಂದ, ಅಮರನಾಥ ಕುರಿತ ಸಂಗತಿಗಳನ್ನು ಈ ಲೇಖನದ ಎರಡನೇ ಭಾಗದಲ್ಲಿ ಬರೆಯುತ್ತೇನೆ. ಮುಸ್ಲಿಂರನ್ನು ಓಲೈಸುವುದೇ ಜಾತ್ಯತೀತ ಧೋರಣೆ ಎಂದು ನಿಮ್ಮಂಥವರು ನಂಬಿಕೊಂಡಿದ್ದೀರಿ. ಅದಕ್ಕೆ ಪುರಾವೆ ಒದಗಿಸಲು, ಸತ್ಯ ಸಂಗತಿಗಳನ್ನು ಆಯ್ದು ತಿರುಚಿ ಪ್ರಕಟಿಸುತ್ತೀರಿ. ಪ್ರತ್ಯೇಕತಾವಾದ ಹುಟ್ಟಿದ್ದೇ ಕೇಂದ್ರ ಸರ್ಕಾರದ ನೀತಿಯಿಂದ ಎನ್ನುತ್ತೀರಿ. ಆದರೆ, ಕೇಂದ್ರದ ನೀತಿ ಎಲ್ಲ ರಾಜ್ಯಗಳ ಮಟ್ಟಿಗೂ ಒಂದೇ ಇದೆ ಎಂಬುದನ್ನೇಕೆ ಮರೆಯುತ್ತೀರಿ? ರಾಷ್ಟ್ರದ ಮುಖ್ಯವಾಹಿನಿಯನ್ನು ಮೊದಲಿನಿಂದಲೂ ದ್ವೇಷಿಸುತ್ತ ಬಂದಿರುವ ಮುಸ್ಲಿಂ ಧರ್ಮಾಂಧರ ಪರ ನಿಲ್ಲುವುದು ನಿಮ್ಮಂಥ ಕೆಲ ಕೋಮುವಾದಿ ’ಜಾತ್ಯತೀತ’ರ ನಿಲುವಾಗಿದೆ. ಸರಿಯಾಗಿ ಹೇಳಬೇಕೆಂದರೆ, ಚಟವಾಗಿದೆ. ಹಾಗೆ ಮಾಡಿದರೆ ಮಾತ್ರ ನಿಮ್ಮಂಥವರಿಗೆ ಪ್ರತ್ಯೇಕ ಮನ್ನಣೆ ಸಿಗುತ್ತದೆ.
ಇದನ್ನೆಲ್ಲ ಏಕೆ ಹೇಳಿದೆನೆಂದರೆ, ಈ ಲೇಖನ ಬರೆಯುವ ಸಮಯದಲ್ಲಿ ಅಹ್ಮದಾಬಾದ್ನ ಇತ್ತೀಚಿನ ಬಾಂಬ್ ಸ್ಫೋಟಗಳ ಹಿಂದೆ ಸಿಮಿ ಕೈವಾಡ ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಅದಕ್ಕೆ ಪುರಾವೆಯಾಗಿ ಕೆಲವು ವ್ಯಕ್ತಿಗಳನ್ನು ಗುಜರಾತ್ ಪೊಲೀಸರು ಬಂಧಿಸಿದ್ದೂ ಆಗಿದೆ. ಇದಕ್ಕೂ ಸಾಕಷ್ಟು ಮುಂಚೆಯೇ ಸಿಮಿ ಕೈವಾಡ ಈ ಸ್ಫೋಟಗಳ ಹಿಂದಿತ್ತು ಎಂಬುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹಿರಂಗವಾಗಿ ಹೇಳಿದ್ದವು. ಹೀಗಿದ್ದರೂ ಕೋಮು ವಿರೋಧಿ ವೇದಿಕೆಯವರು, ನಿಮ್ಮಂಥ ಪ್ರಜ್ಞಾವಂತರು ಸ್ಫೊಟದ ಹಿಂದಿನ ಧರ್ಮಾಂಧರನ್ನು, ಅವರ ಉದ್ದೇಶಗಳನ್ನು, ಅವರು ಹಿಡಿದ ನೀಚ ಮಾರ್ಗವನ್ನು ಖಂಡಿಸಲಿಲ್ಲ. ಬಾಬಾ ಬುಡನ್ಗಿರಿ ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗಳು, ನಡೆದ ಮಾರ್ಗ ಹಾಗೂ ನಾಟಕೀಯತೆ ತೋರುವ ಚಟುವಟಿಕೆಗಳು ಇಂತಹ ವಿಷಯಗಳಲ್ಲಿ ಯಾವತ್ತೂ ವ್ಯಕ್ತವಾಗಿಲ್ಲ.
ಹೀಗಾಗಿ, ನಿಮ್ಮಂಥವರು ಕೋಮುವಾದ, ಧರ್ಮಾಂಧತೆ ಎಂದು ಬರೆದಾಗೆಲ್ಲ, ನೀವು ಕೂಡಾ ಕಣ್ಣಿಗೆ ಧರ್ಮಾಂಧತೆಯ ಕನ್ನಡಕ ಹಾಕಿಕೊಂಡೇ ಬರೆಯುತ್ತೀರಿ ಎಂದು ಬಲವಾಗಿ ಅನ್ನಿಸತೊಡಗುತ್ತದೆ. ಇಲ್ಲದಿದ್ದರೆ, ಕೆಟ್ಟದ್ದನ್ನು ಯಾರು ಮಾಡಿದರೇನು ಎಂದು ನೇರವಾಗಿ ಅವರ ದೋಷಗಳನ್ನೂ ಟೀಕಿಸುತ್ತಿದ್ದಿರಿ. ಖಂಡಿಸುತ್ತಿದ್ದಿರಿ. ಅಂಥದ್ದು ಆಗಿಲ್ಲ ಎಂಬ ಕಾರಣಕ್ಕೆ ನಿಮ್ಮ ಈ ಲೇಖನ, ನಿಮ್ಮಂಥವರು ನೀಡುವ ಹೇಳಿಕೆ, ಬರೆದ ಲೇಖನಗಳು, ಮಾಡಿದ ಚಳವಳಿಗಳು ಹಾಸ್ಯಾಸ್ಪದವಾಗಿ ಕಾಣುತ್ತವೆ. ಎಲ್ಲೋ ವಿದೇಶದಲ್ಲಿ ವ್ಯಂಗ್ಯಚಿತ್ರವೊಂದು ಪ್ರವಾದಿಯನ್ನು ಕುರಿತಾಗಿತ್ತು ಎಂಬ ವಿಷಯಕ್ಕೆ ಭಾಷೆ, ವಿಷಯ, ಚಿತ್ರ ಗೊತ್ತಿರದ ಮುಸ್ಲಿಮರು ಪ್ರತಿಭಟನೆ ನಡೆಸುವುದನ್ನು ನೋಡಿದರೆ ಯಾವ ಭಾವನೆ ಉಂಟಾಗುತ್ತದೋ, ಅಂಥದೇ ಭಾವನೆ ನಿಮ್ಮಂಥವರು ಅದನ್ನು ಬೆಂಬಲಿಸಿ ಬರೆದಾಗ, ಹೇಳಿಕೆ ನೀಡಿದಾಗ, ಹಾಗೂ ಹಿಂದು ದೇವತೆಗಳ ಅವಹೇಳನ ಬಹಿರಂಗವಾದಾಗಲೂ ನೋಡಿಕೊಂಡು ಸುಮ್ಮನಿದ್ದಾಗ ಆಗುತ್ತದೆ.
ತಪ್ಪು ಯಾರೇ ಮಾಡಿರಲಿ, ಅವರ ಜಾತಿ, ಹಿನ್ನೆಲೆ ನೋಡದೇ ಅದನ್ನು ತಪ್ಪು ಎಂದು ಸರಳವಾಗಿ ಹೇಳಲು ನಿಮ್ಮಂಥವರಿಗೆ ಏಕೆ ಸಾಧ್ಯವಾಗುವುದಿಲ್ಲ? ಏಕೆ ಈ ದ್ವಂದ್ವ?
- ಚಾಮರಾಜ ಸವಡಿ
3 comments:
ಸರ್ , ನಿಮ್ಮ ಪ್ರತಿಕ್ರಿಯೆಗೆ ನನ್ನ ಸಹಮತವಿದೆ.
ನೀವು ನನ್ನ ಬ್ಲಾಗ್ ನಲ್ಲಿ ಕಮೆಂಟಿಸಿದ್ದನು ಗಮನಿಸಿದ್ದೇನೆ. ಆ ನಿಟ್ಟಿನಲ್ಲೂ ಒಂದು ಪ್ರಯತ್ನವಾಗುತ್ತಿದೆ.ಎಂಡೋಸಲ್ಫಾನ್ ಮತ್ತು ಅದರ ದುಷ್ಫರಿಣಾಮಗಳ ಬಗ್ಗೆ ಒಂದು ವರದಿಯನ್ನು ತಯಾರಿಸಿತ್ತಿದ್ದೇನೆ.ಆದರೆ ನಾವು ಇತರ ಎಲ್ಲಾ ಮಾಧ್ಯಮಗಳಿಂತ ಭಿನ್ನವಾಗಿ ಅಂದರೆ ಎಂಡೋಸಲ್ಫಾನ್ ಪರಿಣಾಮದ ನಂತರ ಈಗ ಜನ ಏನು ಮಾಡಿತ್ತಿದ್ದಾರ್ಎ ಅದೂ ಮುಖ್ಯವಾಗಿ ಪ್ಕಾಸರಗೊಡಿನ ಪಡೆಯಂತಹ ಪ್ರದೇಶದಲ್ಲಿ ಎನ್ನುದರ ಬಗ್ಗೆ ಗಮನ ಹರಿಸಲಿದ್ದೇವೆ.
ಕಮೆಂಟಿಸಿದ್ದಾಕ್ಕಾಗಿ ಮತ್ತು ಸಲಹೆಗಾಗಿ ಧನ್ಯವಾದ ,
ಇತೀ ಮಹೇಶ್
ಉತ್ತಮ ಪ್ರಯತ್ನ ಮಹೇಶ್. ಒಂದೊಂದು ಊರು, ಅಥವಾ ಕುಟುಂಬ ಕುರಿತು ಪ್ರತ್ಯೇಕವಾಗಿ ವರದಿ ಮಾಡಲು ಯತ್ನಿಸಿ. ಬೇಕಿದ್ದರೆ ಆ ಕುರಿತು ಅರ್ಧ ಗಂಟೆ ಕಾರ್ಯಕ್ರಮವನ್ನೂ ಮಾಡಿಸಬಹುದು.
ಮನುಷ್ಯರ ಜೊತೆಗೆ ಪರಿಸರದ ಮೇಲೆ ಈ ಕೀಟನಾಶಕ ಬೀರಿರುವ ದುಷ್ಪರಿಣಾಮಗಳ ಬಗ್ಗೆಯೂ ವರದಿ ಮಾಡಿ. ಇವುಗಳಾದರೂ ಒಂದಿಷ್ಟು ಉತ್ತಮ ಪರಿಣಾಮ ಬೀರಲಿ.
- ಚಾಮರಾಜ ಸವಡಿ
ಮೊನ್ನೆ ಈ ಮಹಾನುಭಾವರ ಲೇಖನ ನೋಡ್ತಾ ಇದ್ದೆ,ಅದ್ರಲ್ಲಿ ನಿಮ್ಮ ಕಾಮೆಂಟ್ ಬಗ್ಗೆ ಬಹಳ ನೋವಿನಿಂದ ಬರೆದಿದ್ದರು ಪಾಪ ;) , ಅಲ್ಲಿ ಹುಡುಕಿದರೆ ಅಳಿಸಲಾಗಿತ್ತು ಇಲ್ಲಿ ಸಿಕ್ಕಿತು.
ರಾಕೇಶ್ ಶೆಟ್ಟಿ
Post a Comment