ಬಿಬಿಎಂಪಿ ಚುನಾವಣೆ ಮುಗಿದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ, ವಾರ್ಡ್‌ಗಳ ಪುನರ್ವಿಂಗಡಣೆಯಾಗಿ ೧೦೦ರಷ್ಟಿದ್ದ ವಾರ್ಡ್‌ಗಳ ಸಂಖ್ಯೆ ೧೯೮ಕ್ಕೆ ಏರಿದ ನಂತರ ನಡೆದ ಚುನಾವಣೆ ಎಂಬ ಹೆಗ್ಗಳಿಕೆ ಹೊರತುಪಡಿಸಿದರೆ, ಹಿಂದಿನ ಚುನಾವಣೆಗೂ ಈಗ ನಡೆದಿದ್ದಕ್ಕೂ ಏನೂ ವ್ಯತ್ಯಾಸವಿಲ್ಲ.
ಅವೇ ವಿಷಯಗಳು, ಅವೇ ಪ್ರಹಸನಗಳು ಈ ಸಲವೂ ನಡೆದವು. ಮತದಾರನ ನಿರ್ಲಕ್ಷ್ಯವೂ ಅದೇ ತೆರನಾಗಿತ್ತು. ಚುನಾವಣಾ ಆಯೋಗ ಏನೇ ಬಿಗಿ ಕ್ರಮಗಳನ್ನು ಕೈಗೊಂಡರೂ, ಅಭ್ಯರ್ಥಿಗಳು ಬಹಿರಂಗವಾಗಿಯೇ ಅವನ್ನು ಉಲ್ಲಂಘಿಸಿದರು. ಐದು ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವಂತಿಲ್ಲ ಎಂಬ ಆಯೋಗದ ಕಟ್ಟುಪಾಡನ್ನು ಬಹುತೇಕ ಅಭ್ಯರ್ಥಿಗಳು ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದರೂ, ಆಯೋಗ ಏನೂ ಮಾಡಲು ಆಗಿಲ್ಲ. ಜಾರಿಗೊಳಿಸದ ನಿಯಮಗಳ ಹಣೆಬರಹ ಏನಾಗುತ್ತದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ದಕ್ಕಿದಂತಾಯಿತು, ಅಷ್ಟೇ.
ಮತದಾರ ಏಕೆ ನಿರ್ಲಕ್ಷ್ಯ ತೋರುತ್ತಾನೆ? ಎಂಬ ಹಳೆಯ ಪ್ರಶ್ನೆ ಮತ್ತೆ ಮತ್ತೆ ಕಾಡಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಶೇ. ೪೦ರಷ್ಟು ಮತದಾನವಾಗಿದೆ. ಅಂದರೆ, ಅರ್ಧಕ್ಕಿಂತ ಹೆಚ್ಚು ಮತದಾರರು ಮತಗಟ್ಟೆಗೆ ಬರಲಿಲ್ಲ. ಬಂದ ಎಷ್ಟೋ ಜನರ ಹೆಸರುಗಳೇ ಮತಪಟ್ಟಿಯಲ್ಲಿ ಇದ್ದಿಲ್ಲ. ಮತದಾನ ಮೂಲಭೂತ ಹಕ್ಕು ಎನ್ನುವುದಾದರೆ, ಒಬ್ಬ ವ್ಯಕ್ತಿ ತನ್ನ ಗುರುತನ್ನು ಸಾಬೀತುಪಡಿಸುವಂಥ ದಾಖಲೆಗಳನ್ನು ಹೊಂದಿದ್ದರೂ, ಮತದಾನ ಹಕ್ಕಿನಿಂದ ವಂಚಿತನಾಗುವುದನ್ನು ಚುನಾವಣಾ ಆಯೋಗ ಹೇಗೆ ವಿವರಿಸುತ್ತದೋ ಗೊತ್ತಿಲ್ಲ. ಆದರೆ, ಹಳೆಯ ಸಮಸ್ಯೆಗೆ ಈಗಿನ ವ್ಯವಸ್ಥೆ ಉತ್ತರ ಕೊಡಲು ವಿಫಲವಾಗಿದೆ ಎಂಬುದು ಮಾತ್ರ ಸ್ಪಷ್ಟ.
ಮತದಾನ ಮಾಡಲು ಜನ ಏಕೆ ನಿರ್ಲಕ್ಷ್ಯ ತೋರುತ್ತಾರೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಮತಪಟ್ಟಿಯಲ್ಲಿ ಹೆಸರಿಲ್ಲ ಎಂಬುದು ಒಂದು ಸಣ್ಣ ಅಂಶ ಮಾತ್ರ. ಒಟ್ಟು ಪ್ರಕ್ರಿಯೆ ಬಗ್ಗೆ ತಮಗಿರುವ ಅಸಮಾಧಾನವನ್ನು ಜನ ವ್ಯಕ್ತಪಡಿಸುವುದು ಹೀಗೆ. ಕಣದಲ್ಲಿರುವ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ಇದ್ದಾಗ, ಆರ್ಥಿಕ ಮಿತಿಯಲ್ಲಿ ಯೋಗ್ಯ ಅಭ್ಯರ್ಥಿಯೊಬ್ಬ ಸ್ಪರ್ಧಿಸಲು ಸಾಧ್ಯವಾಗದ ವಾತಾವರಣ ಇರುವಾಗ, ಮತದಾನ ಪ್ರಕ್ರಿಯೆ ಪ್ರಹಸನವಾಗುತ್ತದೆ ಎಂಬುದಕ್ಕೆ ಬಿಬಿಎಂಪಿ ಚುನಾವಣೆ ಮತ್ತೊಮ್ಮೆ ಸಾಕ್ಷ್ಯ ಒದಗಿಸಿದಂತಾಗಿದೆ. ಫಲಿತಾಂಶ ಬಂದಾಗ, ಯಾರೇ ಗೆಲ್ಲಲಿ, ಅವರಿಗೆ ವಾರ್ಡ್‌ನ ಅರ್ಧದಷ್ಟು ಜನರ ಮನ್ನಣೆ ಇಲ್ಲ ಎಂಬ ಅಂಶವೇ ಆಘಾತಕಾರಿ. ಹಾಗಿದ್ದ ಮೇಲೆ ಇದು ಜನಮತ ಹೇಗಾಗುತ್ತದೆ?
ಹಣಬಲ ಅಥವಾ ರಾಜಕೀಯ ನಂಟಿರುವ ವ್ಯಕ್ತಿಗಳು ಮಾತ್ರ ಚುನಾವಣೆ ಎದುರಿಸುವ ವಾತಾವರಣ ಇರುವವರೆಗೆ, ಮತದಾನದ ಬಗ್ಗೆ ಜನರ ನಿರ್ಲಕ್ಷ್ಯವೂ ಹೀಗೇ ಮುಂದುವರಿಯುತ್ತದೆ. ತಮಗೆ ಉತ್ತಮ ಎನಿಸುವ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರೆ ಜನರಾದರೂ ಏನು ಮಾಡಬೇಕು? ಸಹಜವಾಗಿ ಅವರು ಮತಗಟ್ಟೆಯಿಂದ ದೂರ ಉಳಿಯುತ್ತಾರೆ. ಇಡೀ ಚುನಾವಣೆ ಎಂಬುದು ಪ್ರಹಸನವಾಗುತ್ತದೆ. ಈಗ ಆಗಿರುವುದೇ ಅದು.
ಸಮಾಜದ ಪ್ರತಿಯೊಂದು ಬೆಳವಣಿಗೆಯೂ ರಾಜಕಾರಣದ ಮೂಲಕವೇ ಬರಬೇಕು ಎಂಬ ಪರಿಸ್ಥಿತಿ ಇಂಥ ಪ್ರಹಸನಗಳನ್ನು ಸೃಷ್ಟಿಸುತ್ತದೆ. ತಂತಮ್ಮ ವೃತ್ತಿಯಲ್ಲಿ ಉತ್ತಮವಾಗಿ ಕೆಲಸ ಮಾಡುವವರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಅವರ ಪರಿಣಿತಿಯನ್ನು, ಅನುಭವವನ್ನು ಸಮಾಜದ ಒಟ್ಟು ಅಭಿವೃದ್ಧಿಗೆ ಬಳಸಲು ಆಗದ ವಾತಾವರಣ ಸೃಷ್ಟಿಯಾಗುತ್ತದೆ. ರಾಜಕೀಯ ಹಾಗೂ ಇತರ ಕ್ಷೇತ್ರಗಳ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ. ಇಷ್ಟೊಂದು ಕಷ್ಟಪಟ್ಟು, ಹಣ ಖರ್ಚು ಮಾಡಿದರೆ ಮಾತ್ರ ಗೆಲ್ಲುವ ಸಾಧ್ಯತೆ ಎಂಬ ವಾಸ್ತವ ಇತರ ರಂಗದ ಪ್ರತಿಭಾವಂತರನ್ನು ರಾಜಕೀಯ ಕ್ಷೇತ್ರದಿಂದ ದೂರ ಇರಿಸುತ್ತದೆ. ಅಂಥ ಜನರನ್ನು ಶಾಸಕಾಂಗದೊಳಗೆ ತರಲೆಂದೇ ಮೇಲ್ಮನೆ, ರಾಜ್ಯಸಭೆಗಳು ಇವೆಯಾದರೂ, ಅವು ಕೂಡಾ ಕಲಬೆರಕೆಯಾಗಿದ್ದರಿಂದ, ರಾಜಕಾರಣವೇ ಬೇರೆ, ಇತರ ಕ್ಷೇತ್ರಗಳೇ ಬೇರೆ ಎನ್ನುವಂಥ ವಾತಾವರಣ ಸೃಷ್ಟಿಯಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಾದರೂ ಮೂಲಭೂತ ಬದಲಾವಣೆಗಳಾಗದಿದ್ದರೆ, ಬರುವ ವರ್ಷಗಳಲ್ಲಿ ಈ ಅಂತರ ಇನ್ನಷ್ಟು ಹೆಚ್ಚುತ್ತದೆ. ಇತರ ರಂಗದ ಪ್ರತಿಭಾವಂತರ ಅನುಭವವನ್ನು ಬಳಸಿಕೊಳ್ಳಲಾಗದ ಸ್ಥಿತಿ ನಿಜಕ್ಕೂ ಅಪಾಯಕಾರಿ. ಬದಲಾವಣೆ ಸಾಧ್ಯವಾಗಿಸಬಲ್ಲ ವ್ಯಕ್ತಿಗಳೇ ದೂರ ಉಳಿಯುವಂತಾದರೆ, ಪ್ರಗತಿ ಸಾಧ್ಯವಾಗುವುದಾದರೂ ಹೇಗೆ?
ಎಲ್ಲವೂ ಮುಕ್ತಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರವೂ ಇತರ ರಂಗದ ಪ್ರತಿಭಾವಂತರಿಗೆ ತೆರೆದುಕೊಳ್ಳಬಹುದಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಾದರೂ ಅದಕ್ಕೆ ವೇದಿಕೆಯಾಗಬಹುದಿತ್ತು. ಆದರೆ, ಹಾಗಾಗುತ್ತಿಲ್ಲ ಎಂಬುದಕ್ಕೆ ನೀರಸವಾಗಿ ಮುಗಿದ ಬಿಬಿಎಂಪಿ ಚುನಾವಣೆ ಜ್ವಲಂತ ಸಾಕ್ಷಿ.
- ಚಾಮರಾಜ ಸವಡಿ
Subscribe to:
Post Comments (Atom)
1 comment:
ನಿಜ ಮತದಾನಪ್ರಮಾಣದ ವರದಿ ಆಘಾತಕಾರಿ...ಅದೆಷ್ಟೋಜನರ ಹೆಸರೆ ನಾಪತ್ತೆ ಒಟ್ಟಿನಲ್ಲಿ ಕಾಣದ ಕೈಗಳ ಆಟ ಜೋರಾಗಿತ್ತು...
Post a Comment