ನಿಮಗೂ ಹೀಗೆ ಅನಿಸಿದೆಯೆ?

27 Mar 2008

0 ಪ್ರತಿಕ್ರಿಯೆ
ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?

ನಾನು ಸತ್ಯ ಹೇಳಿದರೆ ನಮ್ಮ ಇದ್ದಬದ್ದ ಸಂಬಂಧ ಅಲ್ಲಿಗೇ ಮುಕ್ತಾಯವಾಗುತ್ತದೆ ಎಂಬುದು ನನಗೆ ಗೊತ್ತು. ಅದು ವೃತ್ತಿಪರ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಸಂಬಂಧ ಅಂತ್ಯಗೊಳ್ಳುತ್ತದೆ.

ತುಂಬ ಸಾರಿ ನೋಡಿದ್ದೇನೆ: ಸಾಮಾನ್ಯವಾಗಿ ದಡ್ಡರು ಉನ್ನತ ಸ್ಥಾನದಲ್ಲಿ ಕೂತಿರುತ್ತಾರೆ. ಪ್ರತಿಭಾವಂತರನ್ನು ಕಂಡರೆ ಅವರಿಗೆ ಅಸೂಯೆ, ಕೀಳರಿಮೆ. ಅದನ್ನು ಹೋಗಲಾಡಿಸಲು ಗತ್ತು ನಟಿಸುತ್ತಾರೆ. ತಮಗೆ ಎಲ್ಲದೂ ಗೊತ್ತಿದೆ ಎಂಬ ಮುಖವಾಡ ತೊಡುತ್ತಾರೆ. ಅದೇ ಹೊತ್ತಿಗೆ, ತನ್ನ ಹುಳುಕು ಯಾರಿಗಾದರೂ ಗೊತ್ತಾದರೆ ಹೇಗೆ ಎಂಬ ಅಳುಕೂ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ, ಕೆಲಸ ಗೊತ್ತಿರುವವರನ್ನು ಕಂಡರೆ ಭಯ. ಅವರನ್ನು ಕಾಡಲು ಶುರು ಮಾಡುತ್ತಾರೆ. ಅವರು ಮಾಡಿದ್ದೆಲ್ಲ ತಪ್ಪು ಎನ್ನುತ್ತಾರೆ. ಬೆಳೆಯಲು ಸಾಧ್ಯವಿರುವ ಬಾಗಿಲುಗಳನ್ನೆಲ್ಲ ಮುಚ್ಚುತ್ತಾರೆ. ತಾವಿಲ್ಲದಾಗ ಬಾಗಿಲು ತೆಗೆದುಕೊಂಡು ಬಂದರೆ? ಎಂಬ ಅಳುಕಿನಿಂದಾಗಿ, ಹೊರಗೇ ಕಾವಲು ನಿಲ್ಲುತ್ತಾರೆ.

ಇದು ನಿಜಕ್ಕೂ ದುರ್ಭರ ಪರಿಸ್ಥಿತಿ. ಅವಕಾಶ ನಿರಾಕರಿಸಲ್ಪಟ್ಟ ವ್ಯಕ್ತಿಯೂ ಬೆಳೆಯುವುದಿಲ್ಲ, ಆತನ ಕಾವಲಿಗೆ ನಿಂತವನೂ ಬೆಳೆಯಲಾರ. ಇಂಥ ಪರಿಸ್ಥಿತಿ ಉಂಟಾದಾಗ, ಇಬ್ಬರು ವ್ಯಕ್ತಿಗಳು ಮಾತ್ರವಲ್ಲ, ಸಂಸ್ಥೆ ಕೂಡ ಹಾಳಾಗುತ್ತದೆ. ಆಗ ಏನು ಮಾಡಬೇಕು?

ನಾನು, ಮೌನವಾಗಿ ಇದ್ದುಬಿಡುತ್ತೇನೆ. ಗತ್ತು ತೋರಿಸುವವನಿಗೇ ಮೊದಲ ಬ್ಯಾಟಿಂಗ್ ಭಾಗ್ಯ ದಕ್ಕಲಿ. ಅವನದೇ ಮಾತು ನಡೆಯಲಿ. ತನ್ನ ಗತ್ತು ಮತ್ತು ಶಕ್ತಿ ಪ್ರದರ್ಶನದ ಅತಿರೇಕದಲ್ಲಿ ಆತನ ದೌರ್ಬಲ್ಯ ಬಲು ಬೇಗ ಬಯಲಾಗುತ್ತ ಹೋಗುತ್ತದೆ.

ಮೌನವಾಗಿದ್ದುಕೊಂಡು ಓದು-ಬರೆಹ ಮುಂದುವರೆಸಿಕೊಂಡು ಹೋಗುತ್ತೇನೆ. ಅದೊಂಥರಾ ವನವಾಸದ ಸುಖ. ಏನೋ ಶಾಂತಿ, ನೆಮ್ಮದಿ ತರುವ ಮೌನ. ಅಧ್ಯಯನದಲ್ಲಿ ಮುಳುಗಿದಂತೆ, ಅತ್ತ ಗತ್ತು ಯಾವತ್ತೋ ಕರಗಿರುತ್ತದೆ. ಹುಳುಕು ಹೊರಬಿದ್ದಿರುತ್ತದೆ. ಒಮ್ಮೊಮ್ಮೆ ವರ್ಷಗಟ್ಟಲೇ ಕಾಯಬೇಕಾಗಬಹುದು.

ಅಷ್ಟೊಂದು ಸಮಾಧಾನ/ಅನಿವಾರ್ಯತೆ ನನಗಿದ್ದರೆ ಕಾಯುತ್ತೇನೆ. ಇಲ್ಲದಿದ್ದರೆ, ಎದ್ದು ಹೋಗುತ್ತೇನೆ.

ಏಕೆಂದರೆ, ಬದುಕಿನಲ್ಲಿ ಮುಚ್ಚಿದ ಬಾಗಿಲುಗಳಿಗಿಂತ ತೆರೆದ ಬಾಗಿಲುಗಳೇ ಹೆಚ್ಚು. ಅದು ನನ್ನ ನಂಬಿಕೆಯಷ್ಟೇ ಅಲ್ಲ, ಅನುಭವವೂ ಹೌದು.

- ಚಾಮರಾಜ ಸವಡಿ