ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.
ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ ಭಾವನೆಗಳು ಸಮೃದ್ಧವಾಗಿದ್ದವು. ಅವನ್ನು ಹೊರಹಾಕಲು ಪತ್ರಗಳಿದ್ದವು. ಮಿತ್ರರಿದ್ದರು ಹಾಗೂ ದಿನಚರಿ ಎಂಬ ಅದ್ಭುತ ಸಂಗಾತಿಯಿತ್ತು. ಎಲ್ಲಕ್ಕಿಂತ ಮುಖ್ಯ, ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ, ಇಂಥ ಭಾವನೆಗಳಿಗೆ ಸೂಕ್ತ ಹರಿವು ಕೊಡುವ ಆಟೊಗ್ರಾಫ್‌ಗಳಿದ್ದವು. ಒಂದಲ್ಲ ಒಂದು ಮನಸ್ಸಿಗೆ ಮುದ ನೀಡುತ್ತಿತ್ತು. ಹೊಸ ಕನಸಿಗೆ ಪ್ರೇರಣೆ ಒದಗಿಸುತ್ತಿತ್ತು.
ಆಗ ವ್ಯಾಲೆಂಟೈನ್ಸ್ ಡೇ ಎಂಬುದೇ ಇದ್ದಿಲ್ಲ. ಹೀಗಾಗಿ, ವರ್ಷ ಪೂರ್ತಿ ರೋಮ್ಯಾಂಟಿಕ್ ಮೂಡ್. ಅದಕ್ಕೆ ತಕ್ಕಂತೆ ಚುಟುಕು ಬರೆಯುವ ಹುಮ್ಮಸ್ಸು. ಅವನ್ನು ಆಗೀಗ ಪತ್ರಿಕೆಗಳಿಗೆ ಕಳಿಸಿ, ಅವು ಅಚ್ಚಾಗಿದ್ದನ್ನು ನೋಟ್‌ಬುಕ್‌ನಲ್ಲಿ ಅಂಟಿಸಿ, ಅದನ್ನೇ ಕವಿತಾ ಸಂಕಲನದಂತೆ ಮೂಡಿಸಿ ಮೆರೆಯುತ್ತಿದ್ದ ಖುಷಿಯಿತ್ತು. ಕಾಲೇಜಿನ ವಾರ್ಷಿಕ ದಿನಾಚರಣೆ ಅಂಥ ಖುಷಿಯನ್ನು ಸಾರ್ವತ್ರಿಕಗೊಳಿಸುತ್ತಿದ್ದ ಸಂದರ್ಭ. ಎಷ್ಟೋ ಜನರ ಅವಿತಿಟ್ಟಿದ್ದ ಪ್ರತಿಭೆ ಪ್ರದರ್ಶನವಾಗುತ್ತಿದ್ದುದೇ ಇಂಥ ಸಂದರ್ಭದಲ್ಲಿ.
ನಾಳೆ ವ್ಯಾಲೆಂಟೈನ್ಸ್ ಡೇ ಎಂಬ ವಿಷಯ ಈ ಎಲ್ಲ ವಿಷಯಗಳನ್ನು ಮತ್ತೆ ಮತ್ತೆ ನೆನಪಿಸುತ್ತಿದೆ.
ಇಂಥದೊಂದು ದಿನಾಚರಣೆ ಬೇಕೆ-ಬೇಡವೆ? ಎಂಬ ವಿಷಯ ಹಿಡಿದುಕೊಂಡು ಸಾರ್ವಜನಿಕವಾಗಿ ಕಿತ್ತಾಡುವ ಚಾಳಿ ಈಗ ಸಾಮಾನ್ಯವಾಗಿಬಿಟ್ಟಿದೆ. ಪ್ರತಿಯೊಬ್ಬರಿಗೂ ತಮ್ಮ ಧೋರಣೆಯೇ ಸರಿ ಎಂಬ ಹಮ್ಮು. ಎಷ್ಟು ಸಾಧ್ಯವೋ ಅಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ದುರ್ಬುದ್ಧಿ. ವರ್ಷದಲ್ಲಿ ಒಂದು ದಿನಕ್ಕೆ ಸೀಮಿತವಾಗಿರುವ ಈ ಆಚರಣೆಯನ್ನು ವಿರೋಧಿಸದಿದ್ದರೆ, ಇಡೀ ಸಂಸ್ಕೃತಿಯೇ ಹದಗೆಟ್ಟು ಹೈದರಾಬಾದ್ ಆಗುತ್ತದೆ ಎಂಬುದನ್ನು ತೋರಿಸಿಕೊಳ್ಳುವ ಅವಿವೇಕತನ. ಇದೊಂದು ದಿನ ಕೈಬಿಟ್ಟರೆ, ಜೀವನಪೂರ್ತಿ ಎಂದಿಗೂ ಪ್ರೀತಿಯನ್ನು ವ್ಯಕ್ತಪಡಿಸಲಾರೆವೇನೋ ಎಂಬಂತೆ ಹಪಾಹಪಿ ಪ್ರದರ್ಶಿಸುತ್ತಿರುವ ವರ್ಗ ಇನ್ನೊಂದೆಡೆ. ಈ ಎರಡೂ ಬಣಗಳ ಕಿತ್ತಾಟವನ್ನು ತಂತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುವ ಮಾಧ್ಯಮ ಹಾಗೂ ಅದನ್ನು ನೋಡುತ್ತ ಇದ್ದ ಸಮಯವನ್ನು ಹಾಳು ಮಾಡಿಕೊಳ್ಳುತ್ತಿರುವ ಜನ ಮತ್ತೊಂದೆಡೆ.
ಇವರ ಮಧ್ಯೆ, ಇಂಥ ಅವಿವೇಕತನದ ಮಧ್ಯೆ ಪ್ರೀತಿ ಇರಲು ಸಾಧ್ಯವೆ?
ಮೂಡಿದ್ದು ಎಷ್ಟೋ ಸಾರಿ ಗೊತ್ತೇ ಆಗದಂಥ ಮಾಧುರ್ಯಯುತ ಭಾವನೆ ಈ ಪ್ರೀತಿ. ಅದನ್ನು ಪ್ರದರ್ಶನದ ವಸ್ತುವಾಗಿಸಿದ್ದೇ ಮೊದಲ ಅವಿವೇಕತನ. ಅದರ ಹೆಸರಿನಲ್ಲಿ ಕಿತ್ತಾಟ ಶುರು ಮಾಡಿದ್ದು ಅವಿವೇಕತನದ ಮುಂದುವರಿಕೆ. ಒಂಚೂರು ಆಳಕ್ಕೆ ಇಳಿದು ನೋಡಿದರೆ, ಪರ-ವಿರೋಧಿ ಬಣಗಳ ಸಾಮಾನ್ಯ ಆಶಯ ಪ್ರಚಾರ ಪಡೆಯುವ ಸರ್ಕಸ್ಸೇ ಹೊರತು ಅದರಲ್ಲಿ ಎಂಥ ಆದರ್ಶವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೂ ಎಲ್ಲರಿಗೂ ನಾಟಕ ನೋಡುವ ಚಪಲ. ಹೀಗಾಗಿ, ನಟಿಸುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ. ಇದೊಂಥರಾ ವಾರ್ಷಿಕ ನಾಟಕ ಸ್ಪರ್ಧೆ.
ವಾದ ಮಾಡುವ ಬಹುತೇಕರು ಫಾರ್ಟಿ ಪ್ಲಸ್ ವರ್ಗದವರು. ‘ವ್ಯಾಲೆಂಟೈನ್ಸ್ ಡೇ ಆಚರಿಸೋದು ಬಿಡೋದು ವೈಯಕ್ತಿಕ ಕಣ್ರೀ. ನಿಮ್ಮ ಅಭಿಪ್ರಾಯ ಯಾರಿಗೆ ಬೇಕು’ ಎಂದು ಉಗಿಯುವ ಯುವ ವರ್ಗವನ್ನು ಚರ್ಚೆಗೆ ಕರೆಯಬೇಕೆಂಬ ಕಾಮನ್‌ಸೆನ್ಸೇ ತುಂಬ ಜನರಿಗಿಲ್ಲ. ಹೀಗಾಗಿ ಚರ್ಚೆ ಎಂಬುದೇ ಪ್ರಹಸನ. ಅದರ ಹೆಸರಿನಲ್ಲಿ ಆಗುವ ಇತರ ಕ್ರಿಯೆ ಅಭಾಸಕರ.
ರೈತ ನಾಯಕರು ಏಳಬೇಕೆಂದರೆ ಕರೆಂಟ್ ಹೋಗಬೇಕು, ಅಥವಾ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಹಾಕಬೇಕು ಅಥವಾ ಬಿಟಿ ಬದನೆ ಬರಬೇಕು. ಧಾರ್ಮಿಕ ನಾಯಕರು ಏಳಲು ವ್ಯಾಲೆಂಟೈನ್ಸ್ ಡೇಯೋ, ಮತಾಂತರದಂಥ ವಿಷಯವೋ ಬರಬೇಕು. ದಲಿತ ನಾಯಕರು ಏಳಬೇಕೆಂದರೆ, ಅಂಬೇಡ್ಕರ್ ಪ್ರತಿಮೆಗೆ ಅವಮಾನವಾಗಬೇಕು. ಜಾತಿ ನಾಯಕರು ಏಳಬೇಕೆಂದರೆ, ಅವರ ಜಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಮೀಸಲಾತಿ ಕಟ್ ಆಗಬೇಕು ಅಥವಾ ಯಾರಾದರೂ ಟೀಕಿಸಿ ಬರೆದಿರಬೇಕು. ಒಟ್ಟಿನಲ್ಲಿ ಎಲ್ಲರಿಗೂ ಏಳಲು ಒಂದು ಕಾರಣ ಬೇಕು. ಅಂಥದೊಂದು ಕಾರಣ ಸಿಕ್ಕ ಕೂಡಲೇ ಎದ್ದು, ಎಗರಾಡಿ, ಸಾಧ್ಯವಾದಷ್ಟೂ ರಾಡಿ ಎಬ್ಬಿಸಿ ಮಲಗಿದರೆಂದರೆ, ಮತ್ತೆ ಅವರು ಏಳಲು ಇನ್ನೊಂದು ಘಟನೆಯೇ ನಡೆಯಬೇಕು. ಇಂಥ ಬೂಟಾಟಿಕೆಯ ಮಧ್ಯೆ ಪ್ರೀತಿ ಎಂಬುದು ಕೂಡ ಮಾರಾಟದ, ಹಾರಾಟದ, ಒಣ ಚರ್ಚೆಯ ಹಾಗೂ ಸೋಗಲಾಡಿತನದ ವಿಷಯವಾಗುತ್ತಿದೆ.
ನನಗೆ ಪಿ. ಲಂಕೇಶರ ‘ಎಲ್ಲಿದ್ದೆ ಇಲ್ಲೀತಂಕ, ಎಲ್ಲಿಂದ ಬಂದ್ಯವ್ವ, ನಿನ ಕಂಡು ನಾನ್ಯಾಕೆ ಕರಗಿದೆನೋ’ ಎಂಬ ಸೊಗಸಾದ ಕವಿತೆ ನೆನಪಾಗುತ್ತಿದೆ. ಪ್ರೀತಿ ಎಂಬುದು ಸಾರ್ವಕಾಲಿಕ, ಅದು ಎಲ್ಲರ ಮನಸ್ಸಿನಲ್ಲಿ ಹೊಂಗನಸ ಅರಳಿಸುವಂಥದು, ಎಲ್ಲರ ಯೌವನವನ್ನು ಸ್ಮರಣೀಯವಾಗಿಸುವಂಥದು. ಯಾರು ಎಷ್ಟೇ ಚರ್ಚೆ ಮಾಡಿದರೂ, ಬಡಿದಾಡಿದರೂ ಅದು ವ್ಯಕ್ತವಾಗುತ್ತಲೇ ಹೋಗುತ್ತದೆ. ಅದಕ್ಕಾಗಿ ಫೆಬ್ರವರಿ ಹದಿನಾಲ್ಕೇ ಬರಬೇಕೆಂದೇನಿಲ್ಲ.
ಹಾಗಂತ, ಫೆಬ್ರವರಿ ಹದಿನಾಲ್ಕರಂದು ಆಚರಿಸಬಾರದು ಅಂತಾನೂ ಇಲ್ಲ. ಏಕೆಂದರೆ, ಇಂಥ ದಿನವೇ ಉಕ್ಕಬೇಕು ಎನ್ನಲು ಪ್ರೀತಿ ಎಂಬುದು ಕಾವೇರಿ ತೀರ್ಥೋದ್ಭವವಲ್ಲ. ಅವರವರ ಪಾಲಿನ ಹೊಂಗನಸದು. ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಯಾರಿಗೂ ಆ ಹಕ್ಕು ದಕ್ಕಲಾರದು ಕೂಡ.
ಏಕೆಂದರೆ, ಪ್ರೀತಿ ಎಂಬುದೇ ಹಾಗೆ. ಅದನ್ನು ಬಂಧಿಸಲಾಗದು. ಅದುಮಿಡಲಾಗದು. ಹೇಗೆ ಅದಕ್ಕೆ ಜಾತಿ, ಧರ್ಮ, ಭಾಷೆ, ವರ್ಗ, ಅಂತಸ್ತುಗಳ ಹಂಗಿಲ್ಲವೋ ಹಾಗೇ ದಿನಾಂಕದ ಹಂಗೂ ಇಲ್ಲ.
ಹೀಗಾಗಿ, ಪ್ರೀತಿ ನಿತ್ಯನೂತನ.
- ಚಾಮರಾಜ ಸವಡಿ
ಕಿತ್ತಾಡೋರ ಕಂಡು ನಗುತ್ತಿದೆ ಪ್ರೀತಿ...
14 Feb 2010
ಪದ ಶೋಧ
Chamaraj Savadi,
valentines day,
ಪ್ರೀತಿ,
ಪ್ರೇಮ,
ವ್ಯಾಲೆಂಟೈನ್ಸ್ ಡೇ
Subscribe to:
Posts (Atom)