ಎಸ್.ಎಲ್. ಭೈರಪ್ಪನವರ ಕವಲು ಕಾದಂಬರಿ ವಿಮರ್ಶೆಗಳು ಹೇಗಿವೆಯೆಂದರೆ, ‘ಯಾರಿಗೆ ಏನು ನೋಡಬೇಕೆನಿಸುತ್ತದೋ ಅದೇ ಕಾಣುತ್ತದೆ’.
ಕಾದಂಬರಿಯ ಒಂದೊಂದು ಪಾತ್ರಗಳನ್ನು ಪ್ರತ್ಯೇಕಗೊಳಿಸಿ ನೋಡುವ ಮೂಲಕ ವಿಮರ್ಶೆ ಮಾಡಿದ್ದೇ ಹೆಚ್ಚು. ಇದು ಹೇಗೆಂದರೆ, ದೇಹದಲ್ಲಿ ಪ್ರತಿಯೊಂದು ಅಂಗವನ್ನೂ ಪ್ರತ್ಯೇಕವಾಗಿ ನೋಡಿ ವಿಮರ್ಶಿಸಿದ ಹಾಗೆ. ಕಾದಂಬರಿ ವಿಮರ್ಶೆಗಿಂತ ಭೈರಪ್ಪನವರ ವಿಮರ್ಶೆಯೇ ಹೆಚ್ಚಾಗಿ ನಡೆದಿದೆ.
ಕಾದಂಬರಿ, ಕಾದಂಬರಿಕಾರ ಮತ್ತು ವಾಸ್ತವ ಒಂದಕ್ಕೊಂದು ಪೂರಕವಾಗಿರುವಂತೆ ಪ್ರತ್ಯೇಕವಾಗಿಯೂ ನಿಲ್ಲುವಂಥವು. ಒಂದು ಅಜೆಂಡಾ ಅಥವಾ ಕಾರ್ಯಸೂಚಿ ಇಟ್ಟುಕೊಂಡು ಸಾಹಿತ್ಯಿಕ ಕೃತಿ ರಚಿಸುವುದು ಸುಲಭವಲ್ಲ. ಹಾಗೆ ರಚನೆಯಾದರೂ ಅದಕ್ಕೆ ಸಾಹಿತ್ಯಿಕ ಮೌಲ್ಯಗಳು ದಕ್ಕುವುದು ಸಾಧ್ಯವಿಲ್ಲ. ಭೈರಪ್ಪನವರು ಯಾವುದೋ ಅಜೆಂಡಾ ಇಟ್ಟುಕೊಂಡು ಅದನ್ನು ಸಾಹಿತ್ಯಿಕ ಚೌಕಟ್ಟಿನಲ್ಲಿ ತಂದಿದ್ದಾರೆ ಎಂಬ ವಾದವನ್ನು ಒಪ್ಪುವುದು ಕಷ್ಟ.
ಲೇಖಕ ಬರೆಯುತ್ತಾ ಹೋಗುತ್ತಾನೆ. ಆತನಿಗೆ ಮಿತಿಗಳು, ಚೌಕಟ್ಟುಗಳು ಇರಬಾರದು ಎಂದಲ್ಲ. ಅವು ಅದೃಶ್ಯವಾಗಿರುತ್ತವೆ. ಅದೃಶ್ಯವಾಗಿರಬೇಕು. ಏಕೆಂದರೆ, ಕ್ರಿಯಾಶೀಲ ಮಾಧ್ಯಮ ಚೌಕಟ್ಟಿಗೆ ಒಳಪಟ್ಟರೆ ಕ್ರಿಯಾಶೀಲತೆ ಸತ್ತುಹೋಗುತ್ತದೆ. ಅಜೆಂಡಾ ಇಟ್ಟುಕೊಂಡು ಬರೆದ ಅನೇಕ ಬರವಣಿಗೆಗಳು ಆಯಾ ಕಾಲಘಟ್ಟದ ನಂತರ ಅಪ್ರಸ್ತುತವಾದ ಉದಾಹರಣೆಗಳು ಸಾಕಷ್ಟಿವೆ. ರಷ್ಯಾ ಕ್ರಾಂತಿಯ ನಂತರ ಬಂದ ಸಾಹಿತ್ಯವನ್ನೇ ನೋಡಿದರೂ ಈ ವಿಷಯ ಸ್ಪಷ್ಟವಾಗುತ್ತದೆ. ಎಡಪಂಥೀಯ ಹಾಗೂ ಬಲಪಂಥೀಯ ಬರವಣಿಗೆಗಳು ಸೀಮಿತಗೊಂಡಿದ್ದೂ ಇಂಥವೇ ಕಾರಣಗಳಿಗಾಗಿ. ದೇಶಪ್ರೇಮದ ಬರಹಗಳ ಮಿತಿಯೂ ಇಷ್ಟೇ.
ಈ ಎಲ್ಲ ಚೌಕಟ್ಟುಗಳ ಮಿತಿಯಾಚೆ ಕವಲು ಕಾದಂಬರಿ ಇದೆ ಅಂತ ನಾನು ಭಾವಿಸಿದ್ದೇನೆ. ಭೈರಪ್ಪನವರ ಬಹುತೇಕ ಕಾದಂಬರಿಗಳನ್ನು ಓದಿರುವ ನಾನು, ಅವುಗಳು ಕಟ್ಟಿಕೊಟ್ಟ ಪಾತ್ರವೈಭವವನ್ನು, ವೈಚಾರಿಕತೆಯನ್ನು, ವಿಷಯ ಪ್ರಸ್ತುತಿಯನ್ನು ಹಾಗೂ ಭಾವತೀವ್ರತೆಯನ್ನು ಆಸ್ವಾದಿಸಿದ್ದೇನೆ. ಆದರೆ, ಕೆಲವರು ಹೇಳುವಂತೆ, ಅವುಗಳಲ್ಲಿ ಅಡಗಿದೆ ಎನ್ನಲಾದ ಅಜೆಂಡಾ ನನ್ನನ್ನು ಪ್ರಭಾವಿಸಿಲ್ಲ.
ಲೈಂಗಿಕತೆ ಸುತ್ತ ಕಾದಂಬರಿ ಸುತ್ತುತ್ತಿದೆ ಎಂಬುದನ್ನು ಒಪ್ಪುವುದು ಕಷ್ಟ. ಕವಲು ಕಾದಂಬರಿಯಲ್ಲಿ ಬಂದ ಪಾತ್ರಗಳನ್ನು ಹೋಲುವ ಅನೇಕ ವ್ಯಕ್ತಿಗಳನ್ನು ಹಾಗೂ ಸಂಸಾರಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಇನ್ನು ಮಹಿಳೆಯರನ್ನು ತುಚ್ಛವಾಗಿ ಚಿತ್ರಿಸಿದ್ದಾರೆ ಎಂಬ ಆರೋಪದಲ್ಲೂ ಹುರುಳಿಲ್ಲ. ಆ ಕಾದಂಬರಿಯಲ್ಲಿ ಬಂದಂಥ ಪಾತ್ರಗಳು ನಮ್ಮ ಸುತ್ತಮುತ್ತಲೇ ಕಾಣುತ್ತವೆ. ತುಚ್ಛತೆಗೆ ಮಹಿಳೆ-ಪುರುಷ ಎಂಬ ಭೇದವಿಲ್ಲ. ಹೀಗಾಗಿ, ಕಾದಂಬರಿಯ ವಸ್ತು, ಪ್ರಸ್ತುತಿ, ಪಾತ್ರಗಳು ಅಪ್ರಸ್ತುತವೆಂಬುದನ್ನು, ಅಜೆಂಡಾ ಇಟ್ಟುಕೊಂಡು ರೂಪಿಸಿದವುಗಳೆಂಬುದನ್ನು ನಾನು ಒಪ್ಪಲಾರೆ.
ನನ್ನ ಪ್ರಕಾರ ಕವಲು ಕಾದಂಬರಿ ವಾಸ್ತವಕ್ಕೆ ಹಿಡಿದ ಕನ್ನಡಿ. ಒಂದು ವೇಳೆ ಇದನ್ನು ಭೈರಪ್ಪನವರು ಬರೆದಿರದಿದ್ದರೆ ನಮ್ಮ so called ಬುದ್ಧಿಜೀವಿಗಳು, ವಿಚಾರವ್ಯಾಧಿಗಳು ಹಾಗೂ ಮಹಿಳಾವ್ಯಾಧಿಗಳು ಮನಃಪೂರ್ವಕ ಸ್ವಾಗತಿಸಿರುತ್ತಿದ್ದರೇನೋ!
ಒಂದು ಕಾದಂಬರಿಯನ್ನು ಕಾದಂಬರಿಯಾಗಿ ಓದಬೇಕು ಎಂಬುದು ನನ್ನ ನಂಬಿಕೆ. ಆದರೆ, ಅದನ್ನು ಸುದ್ದಿಯೆಂಬಂತೆ ಓದಿ, ತಂತಮ್ಮ ನಂಬಿಕೆಗಳೊಂದಿಗೆ ಹೋಲಿಸಿ ನೋಡೋರಿಗೆ ಏನು ಹೇಳೋದು? ಕಾಮನ್ಸೆನ್ಸ್ ಇರದ ಬುದ್ಧಿಜೀವಿಗಳು, ವಾಸ್ತವ ಧಿಕ್ಕರಿಸಿ ಯೋಚಿಸುವ ವಿಚಾರವ್ಯಾಧಿಗಳು ಇಂಥ ಎಲ್ಲ ಬರವಣಿಗೆ/ ಬೆಳವಣಿಗೆಯನ್ನೂ ವಿರೋಧಿಸುತ್ತಾರೆ. ಆದರೆ, ಇವರ ಸಾಲಿಗೆ ಮಹಿಳಾವಾದಿಗಳು ಕೂಡ ಸೇರಿರುವುದು ವಿಚಿತ್ರ ಅನಿಸುತ್ತಿದೆ.
ಈ ಬಗ್ಗೆ ವಿಸ್ತೃತವಾಗಿ ಬರೆಯಬೇಕಿದೆ. ಸದ್ಯಕ್ಕೆ ಇಷ್ಟು ಸಾಕು.
- ಚಾಮರಾಜ ಸವಡಿ