ಒಂದು ಕನಸು ಹುಡುಕುತ್ತಾ...

21 Sept 2011

4 ಪ್ರತಿಕ್ರಿಯೆ
ಮಗುವೊಂದು ಮಲಗುತ್ತಿತ್ತು.

ಪಕ್ಕದಲ್ಲಿ ಮಲಗಿಕೊಂಡು ಮಗುವಿನ ಮಾತುಗಳನ್ನು ಕೇಳುತ್ತಿದ್ದ ಆತ. ಶಾಲೆಯಲ್ಲಿ ಆಕೆಯ ಮಿಸ್‌ ಹೇಳಿದ್ದು, ಸಹಪಾಠಿಗಳ ಬಟ್ಟೆ, ಊಟದ ಡಬ್ಬ, ತರಹೇವಾರಿ ಚಿತ್ರಗಳಿರುವ ಆಕೆಯ ಶಾಲೆಯ ಕೊಠಡಿ, ಮಿಸ್‌ ಹೇಳಿಕೊಟ್ಟಿದ್ದ ಡ್ರಿಲ್‌ ಎಲ್ಲವನ್ನೂ ಗಿಣಿಪಾಠ ಒಪ್ಪಿಸುತ್ತಿದ್ದ ಮಗು, ನಿನಗೆ ಡ್ರಿಲ್‌ ಬರುತ್ತಾ ಅಪ್ಪ? ಎಂದಳು.

ಈತ ಇಲ್ಲವೆಂದ.

ಆಕೆ ತಕ್ಷಣ ಎದ್ದು ನಿಂತು, ಸಾವಧಾನ್‌, ವಿಶ್ರಾಮ್‌ ತೋರಿಸಿದಳು. ಒಂದೆರಡು ಎಕ್ಸರ್‌ಸೈಜ್‌ಗಳ ಪ್ರದರ್ಶನವೂ ನಡೆಯಿತು. ನೀನು ಮಾಡು ನೋಡೋಣ ಎಂದು ಸವಾಲೆಸೆದಳು. ಇವನಿಗೆ ಆಗಲೇ ಅರ್ಧ ನಿದ್ದೆ. ನಾಳೆ ಬೆಳಿಗ್ಗೆ ನೀನೇ ಹೇಳಿಕೊಡುವೆಯಂತೆ ಎಂದ. ಮಗಳು ಮತ್ತೆ ಮಲಗಿದಳು. ಮತ್ತೆ ಮಾತು.

ಹೊರಗೆ ಸಣ್ಣಗೇ ಶುರುವಾಗಿದ್ದ ಮಳೆ ಜೋರಾಯಿತು. ಅರೆತೆರೆದಿದ್ದ ಕಿಟಕಿಯ ಮೂಲಕ ತಣ್ಣನೆಯ ಗಾಳಿ ಒಳ ನುಗ್ಗಿದಾಗ ಫ್ಯಾನ್‌ ಆಫ್‌ ಮಾಡಿದ್ದಾಯ್ತು. ಅಪ್ಪಾ ನನಗೆ ಚಳಿ ಎಂದಳು ಮಗಳು. ಈತ ಬೆಚ್ಚಗೆ ಹೊದಿಕೆ ಹೊದಿಸಿದ. ಸರಿ, ಈಗ ರಗ್ ಹೊತ್ಕೊಂಡಿದ್ದೀನಿ. ನಾಳೆ ಸ್ಕೂಲಿಗೆ ಹೋಗುವಾಗ ಚಳಿ ಆದರೆ ಏನು ಮಾಡಲಿ? ಎಂದಿತು ಮಗು.

ನಾಳೆ ನಿಂಗೆ ಸ್ವೆಟರ್‌ ಕೊಡಿಸ್ತೀನಿ ಎಂದು ಈತ ಭರವಸೆ ಕೊಟ್ಟ. 

ಈಗ ಮಾತು ಸ್ವೆಟರ್‌ ಕಡೆ ತಿರುಗಿತು. ಎಂಥ ಬಣ್ಣದ ಸ್ವೆಟರ್‌ ತನಗಿಷ್ಟ? ತನ್ನ ಗೆಳತಿಯರು ಎಂತೆಂಥ ಬಣ್ಣದ ಸ್ವೆಟರ್‌ ಇಟ್ಟುಕೊಂಡಿದ್ದಾರೆ ಎಂದೆಲ್ಲ ಮಾತಾಡಿದ ಮಗು, ಸ್ವೆಟರ್‌ ತರೋವಾಗ ನನ್ನನ್ನೂ ಕರ‍್ಕೊಂಡು ಹೋಗ್ತೀಯಾ? ಎಂದಿತು. ಏಕೆ ಎಂದ ಈತ. ನನಗಿಷ್ಟವಾದ ಬಣ್ಣದ ಸ್ವೆಟರ್‌ ನಾನೇ ಆರಿಸಬೇಕಲ್ವಾ? ಎಂದು ಕೇಳಿತು ಮಗು. ಈತ ಹೂಂ ಅಂದ.

ನಂಗೆ ಚಳಿಯಾದ್ರೆ ಸ್ವೆಟರ್‌ ಹಾಕ್ಕೊಂಡು ಮಲ್ಕೋಬಹುದು ಎಂದು ಅದಕ್ಕೆ ರೋಮಾಂಚನ. ನಿಜ್ವಾಗ್ಲೂ ನಂಗೆ ಸ್ವೆಟರ್‌ ಕೊಡಿಸ್ತೀಯಾ ಅಪ್ಪ? ಎಂದು ಮತ್ತೆ ಕೇಳಿ ಖಚಿತಪಡಿಸಿಕೊಂಡಿತು. ಮರುದಿನ ಸ್ವೆಟರ್‌ ಖರೀದಿ ಮಾಡುವ ಬಗ್ಗೆಯೇ ಮಾತಾಡುತ್ತ ಹಾಗೇ ನಿದ್ದೆಗೆ ಜಾರಿತು. 

ಈತನಿಗೆ ನಿದ್ದೆ ಬರಲಿಲ್ಲ. ಹಾಗಂತ ಪೂರ್ತಿ ಎಚ್ಚರದಲ್ಲೂ ಇರಲಿಲ್ಲ. 

ಹೊರಗೆ ಜೋರು ಮಳೆ. ಇತ್ತ ಮಗುವಿಗೆ ಜೋರು ನಿದ್ರೆ. 

ಬೀಸಿದ ತಣ್ಣನೆಯ ಗಾಳಿಗೆ ಮಂಪರು ಹಾರಿಹೋಗಿ ಎಚ್ಚರವಾಯಿತು. ಎದ್ದು ಕಿಟಕಿಯ ಹತ್ತಿರ ಬಂದು ಮಳೆ ನೋಡುತ್ತ ನಿಂತ. ಮುಂಗಾರಿನ ಕೊನೆಯ ಮಳೆ ಇದು ಎಂಬಂತೆ ಆಗಸ ಸೋರುತ್ತಿತ್ತು. 

ಬೀದಿ ದೀಪದ ಮೇಲೆ ನೀರಿನ ಹನಿಗಳು ಬಿದ್ದು  ಸಿಡಿಯುತ್ತಿದ್ದ ದೃಶ್ಯ ಗಮನ ಸೆಳೆಯಿತು. ಡಾಂಬರು ರಸ್ತೆಯುದ್ದಕ್ಕೂ ತರಹೇವಾರಿ ವಿನ್ಯಾಸದ ಹರಿಯುವ ನೀರು. ಅವಸರಕ್ಕೆ ಬಿದ್ದಂತೆ ಸರಿದು ಹೋಗುತ್ತಿದ್ದ ನೀರಿಗೆ ಹಳದಿ ಬೀದಿ ದೀಪದ ಚಿತ್ತಾರ. ನಿಲ್ಲುವುದಿಲ್ಲವೇನೋ ಎಂಬಂತೆ ಒಂದೇ ರೀತಿ ಬೀಳುತ್ತಿದ್ದ ಮಳೆ ಸಂಮೋಹನ ಮಾಡುವಂತಿತ್ತು. ಗುಡುಗಿಲ್ಲ, ಮಿಂಚಿಲ್ಲ, ಸಿಡಿಲುಗಳಿಲ್ಲ. ಕೇವಲ ಶುದ್ಧ ಜೋರು ಮಳೆ. ಸೈನಿಕರಂತೆ ಒಂದೇ ರೀತಿ ಕಾಣುವ ಮಳೆಯ ಹಳದಿ ಎಳೆಗಳು. ಹರಿಯುವ ನೀರಿನ ಮೇಲ್ಮೈಗೆ ಅಪ್ಪಳಿಸಿದಾಗ ಆಗುತ್ತಿದ್ದ ಸೊಗಸಾದ ಕುಳಿಗಳು. ಅವುಗಳ ಒಡಲಿಂದ ಪಕ್ಕಕ್ಕೆ ಛಲ್ಲನೇ ಸಿಡಿಯುವ ಮರಿ ಹನಿಗಳು. ರಸ್ತೆಯುದ್ದಗಲಕ್ಕೂ ಮಳೆ ಹನಿಗಳು ಹರಿಯುವ ನೀರಿನ ಮೇಲೆ ಮೂಡಿಸುತ್ತಿದ್ದ ಸಾವಿರಾರು ನೀರ ಕುಳಿಗಳು. 

ಈತ ಮಂತ್ರಮುಗ್ಧನಂತೆ ಅವನ್ನೇ ನೋಡುತ್ತ ನಿಂತ. 

ರಾತ್ರಿಯ ನೀರವತೆಯ ಜಾಗದಲ್ಲೀಗ ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಶಬ್ದ. ಕಿವಿಗೆ ಹಿತವಾಗಿಸುವ, ಕಣ್ಣಿಗೆ ತಂಪೆನಿಸುವ ಚೇತೋಹಾರಿ ದೃಶ್ಯ. ಎದುರಿಗೆ ಕಾಣುತ್ತಿದ್ದ ಮನೆಗಳ ಕಿಟಕಿಗಳಿಂದ ಬೆಳಕು ಬರುತ್ತಿಲ್ಲ. ಎಲ್ಲಾ ಮಲಗಿರಬೇಕು. ಅಥವಾ ಮಲಗಿದ್ದುಕೊಂಡೇ ಮಳೆಯ ಗಾನ ಕೇಳುತ್ತಿರಬೇಕು. ಅಥವಾ ಮಳೆ ಗಾನ ಕೇಳುತ್ತ ಮಲಗುತ್ತಿರಬೇಕು.

ನಾನೂ ಮಲಗಬೇಕು ಎಂದುಕೊಂಡ. ಮಳೆ ನಿಲ್ಲುವ ಮುನ್ನವೇ, ಅದರ ವಿಶಿಷ್ಟ ಗಾನ ಕೇಳುತ್ತ ನಿದ್ದೆಗೆ ಜಾರಬೇಕು. ಸ್ವೆಟರ್‌ ಕನಸು ಕಾಣುತ್ತ ಮಲಗಿದ ಮಗಳಂತೆ, ನಾನೂ ಚೆಂದನೆಯ ಕನಸು ಕಾಣುತ್ತ ಮಲಗಬೇಕೆಂದುಕೊಳ್ಳುತ್ತ ವಾಪಸ್ ಬಂದ. 


ತಕ್ಷಣ ನಿದ್ರೆ ಬರಲಿಲ್ಲ. ಮಳೆಯ ಸದ್ದು ಹಾಗೇ ಇತ್ತು. ಮುಚ್ಚಿದ ಕಣ್ರೆಪ್ಪೆಯ ಒಳಗೆಲ್ಲ ಮಳೆಯ ಹನಿಗಳು ಉಂಟು ಮಾಡುತ್ತಿದ್ದ ಸಾವಿರ ಸಾವಿರ ನೀರಕುಳಿಗಳು. ಏನು ಕನಸು ಕಾಣಲಿ ಎಂದು ಯೋಚಿಸಿದ. 

ಆಕೆ ನೆನಪಾದಳು. ಆಕೆಯ ಸ್ನಿಗ್ಧ ಮುಖ ಕಣ್ಮುಂದೆ ಬಂದಿತು. ಮಿನುಗುವ ನಕ್ಷತ್ರದಂಥವಳು ಎಂದು ಮತ್ತೆ ಮತ್ತೆ ಅಂದುಕೊಂಡ. ಆಕೆಯ ಮುಂದೆ ಹಾಗೆ ಕರೆದರೆ ‘ಹುಚ್ಚ’ ಎಂಬಂತೆ ನೋಡಿಯಾಳು ಎಂಬುದು ಅರಿವಾಗಿ, ಮುಚ್ಚಿದ ಕಣ್ಣೊಳಗೇ ಸುಮ್ಮನಾದ. ಆಕೆಯೂ ಮಳೆ ನೋಡುತ್ತಿರಬಹುದೇ ಎಂಬ ಪ್ರಶ್ನೆ ಹುಟ್ಟಿತು. ಮಳೆಯ ಕುಳಿಗಳನ್ನು, ಹಳದಿ ಎಳೆಗಳನ್ನು, ಒಂದೇ ರೀತಿ ಬೀಳುತ್ತಿರುವ ಹಿತಕರ ಶಬ್ದವನ್ನು ಅನುಭವಿಸುತ್ತಿರಬಹುದೇ? 

ಇದ್ದಕ್ಕಿದ್ದಂತೆ ಮಗಳು ಕನವರಿಸಿದಳು. ಅಸ್ಪಷ್ಟ ಶಬ್ದಗಳು. ಬಹುಶಃ ಸ್ವೆಟರ್‌ ಕನಸು ಕಾಣುತ್ತಿರಬಹುದು ಅಂತ ಅಂದುಕೊಂಡ. ಪಕ್ಕಕ್ಕೆ ತಿರುಗಿ, ತಲೆ ನೇವರಿಸಿ, ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ. ಆತುಕೊಂಡು ಮಲಗಿದ ಮಗು ಕನವರಿಕೆ ನಿಲ್ಲಿಸಿ ಮತ್ತೆ ಆಳ ನಿದ್ದೆಗೆ ಜಾರಿತು.

ಇವನಿಗೂ ಮಂಪರು. ಕನಸು ಕಾಣಬೇಕೆಂಬುದೂ ಮರೆತು ಹೋಗಿ ನಿಧಾನವಾಗಿ ನಿದ್ದೆಗೆ ಜಾರತೊಡಗಿದ. ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಸದ್ದು, ಸಣ್ಣಗೇ ನುಗ್ಗುತ್ತಿದ್ದ ತಂಗಾಳಿ, ದಿನದ ಆಯಾಸ ಎಲ್ಲ ಸೇರಿ ನಿದ್ದೆ ಕವಿಯತೊಡಗಿತು. 

*****

ಬಹುಶಃ ದೆಹಲಿಯಿಂದ ಹಿಂತಿರುವಾಗ ಇರಬೇಕು. 

ಆಗಲೂ ಇಂಥದೇ ಒಂದು ರಾತ್ರಿ. ಮಳೆ ಬೀಳುತ್ತಿದ್ದಿಲ್ಲ ಎಂಬುದನ್ನು ಬಿಟ್ಟರೆ, ಮಳೆಯ ಸದ್ದಿನ ಜಾಗದಲ್ಲಿ ರೈಲು ಚಲಿಸುವ ವಿಶಿಷ್ಟ ಶಬ್ದ. ಏಕೋ ನಿದ್ದೆ ಬರಲಿಲ್ಲ ಎಂದು ರಾತ್ರಿ ಯಾವುದೋ ಜಾವ ಬರ್ಥ್‌‌ನಿಂದ ಕೆಳಗಿಳಿದಿದ್ದ. ಡಬ್ಬಿಯೊಳಗೆ ಎಲ್ಲೆಡೆ ಹರಡಿಕೊಂಡಿದ್ದ ಮಂಕು ನೀಲಿ ಬೆಳಕಲ್ಲಿ, ಮಲಗಿದ್ದ ಜನರೆಲ್ಲ ಶವಗಳಂತೆ, ಇಡೀ ರೈಲು ಚಲಿಸುವ ಶವಾಗಾರದಂತೆ ಭಾಸವಾಗಿ ಇದ್ದಕ್ಕಿದ್ದಂತೆ ಗಾಬರಿಯಾಗಿದ್ದ. ಹೇಗ್ಹೇಗೋ ಮಲಗಿದ್ದ ಜನರು ಥೇಟ್‌ ಶವಗಳಂತೆ ಕಾಣುತ್ತಿದ್ದರು. ಕೆಲವರ ಕಾಲುಗಳು ಸೀಟ್‌ನಿಂದ ಹೊರಗೆ ಬಂದಿದ್ದು, ಚಲಿಸುವ ರೈಲಿನ ಲಯಕ್ಕನುಗುಣವಾಗಿ ಅಲುಗುತ್ತಿದ್ದವು. 

ಇಳಿದವ ಹಾಗೇ ಕಕ್ಕಾವಿಕ್ಕಿಯಾಗಿ ನಿಂತುಬಿಟ್ಟಿದ್ದ. ಕಾಣುತ್ತಿರುವುದು ಕನಸೋ ಅಥವಾ ವಾಸ್ತವವೋ ಅರಿಯದೇ ದಿಗ್ಭ್ರಮೆಗೊಂಡಿದ್ದ. ಮಂಪರು ತಿಳಿಯಾದಂತೆ ತಾನಿರುವುದು ರೈಲಿನಲ್ಲಿ ಎಂಬುದು ಅರಿವಾಗಿತ್ತು. ಸಧ್ಯ... ಎಂದುಕೊಳ್ಳುತ್ತ ಟಾಯ್ಲೆಟ್‌ಗೆ ಹೋಗಿ ವಾಪಸ್‌ ಬಂದು ಮತ್ತೆ ಬರ್ಥ್‌ ಏರಿದ. 

ನಿದ್ದೆ ಬರಲಿಲ್ಲ. 

ಚಲಿಸುವ ಶವಾಗಾರ ಎಂಬ ಕಲ್ಪನೆ ಕೂತುಬಿಟ್ಟಿತ್ತು. ಬಹುಶಃ ಇಡೀ ಡಬ್ಬಿಯಲ್ಲಿ ನಾನೊಬ್ಬನೇ ಎಚ್ಚರಿರಬಹುದು. ಈ ರೈಲು ಈಗ ಎತ್ತ ಹೋಗುತ್ತಿದೆಯೋ. ಒಂದು ವೇಳೆ ರೈಲು ಎಲ್ಲಿಯೋ ಒಂದೆಡೆ ನಿಂತು, ಮಲಗಿದ ಈ ಜನರೆಲ್ಲ ಶವವಾಗಿದ್ದರೆ, ಆಗ ಯಾರೂ ಇಳಿಯುವುದೇ ಇಲ್ಲವಲ್ಲ ಎಂದು ಕಲ್ಪಿಸಿಕೊಂಡ. ಖುಷ್ವಂತ್‌ ಸಿಂಗ್‌ ಬರೆದ ಟ್ರೇನ್‌ ಟು ಪಾಕಿಸ್ತಾನ ಕಾದಂಬರಿ ನೆನಪಾಯ್ತು. ಅದರಲ್ಲಿಯೂ ಹೀಗೇ ಆಗುತ್ತದೆ. ಇದ್ದದ್ದನ್ನೆಲ್ಲ ಹಿಂದೆ ಬಿಟ್ಟು ಹೊಸ ದೇಶಕ್ಕೆ ಗುಳೆ ಹೊರಟವರಿದ್ದ ರೈಲನ್ನು ಮಧ್ಯೆಯೇ ತಡೆದ ದುಷ್ಕರ್ಮಿಗಳು ಎಲ್ಲರನ್ನೂ ಸಾಯಿಸಿ ಶವಗಳಿದ್ದ ರೈಲನ್ನಷ್ಟೇ ಮುಂದೆ ಹೋಗಲು ಬಿಡುತ್ತಾರೆ. ನಿಲ್ದಾಣ ಬಂದರೂ ಯಾರೂ ಇಳಿಯುವುದಿಲ್ಲ.

ಏಕೋ ಈ ಕಲ್ಪನೆ ಕೆಟ್ಟದ್ದಾಯ್ತು ಎಂದು ಅನ್ನಿಸಿತು. 

ನಿದ್ದೆ ಬರುವುದಿಲ್ಲ ಎಂಬುದು ಖಾತರಿಯಾದಾಗ, ಸುಮ್ಮನೇ ಕಣ್ತೆರೆದುಕೊಂಡೇ ಮಲಗಿದ. ಯಾವ್ಯಾವ ಊರಿನ ಜನರೋ, ಎಲ್ಲೆಲ್ಲಿ ಹೊರಟಿದ್ದಾರೋ, ಏನೇನು ಕನಸು ಕಾಣುತ್ತಿದ್ದಾರೋ. ಇಂಥ ಸಾವಿರಾರು ಜನರನ್ನು ಪ್ರತಿ ದಿನ ಹೊತ್ತೊಯ್ಯುವ ರೈಲು ನಿಜಕ್ಕೂ ವಿಚಿತ್ರ ಅನಿಸಿತು. ನಿಲ್ದಾಣ ಬಂದಂತೆ, ಕೆಲವರು ಇಳಿಯುತ್ತಾರೆ; ಕೆಲವರು ಹತ್ತುತ್ತಾರೆ. ರೈಲು ಹೋಗುತ್ತಲೇ ಇರುತ್ತದೆ. ಇದೆಂದಿಗೂ ನಿಲ್ಲದ ಕ್ರಿಯೆ. ನಾನೂ ಒಂದು ಸ್ಟೇಶನ್‌ನಲ್ಲಿ ಇಳಿಯುತ್ತೇನೆ. ಅಲ್ಲಿಂದ ಮನೆಯತ್ತ ಹೊರಡುತ್ತೇನೆ. ಬಹುಶಃ ಎಲ್ಲರೂ ಹೀಗೇ ಮಾಡುತ್ತಾರೆ. ಎಲ್ಲರೂ ಮನೆ ಸೇರುವ ಕನಸಿನಲ್ಲೇ ನಿದ್ದೆ ಹೋಗಿದ್ದಾರೇನೋ ಅಂತ ಅಂದುಕೊಂಡ. 

ರೈಲು ಹಳಿ ಬದಲಿಸಿದ ಶಬ್ದವಾಯಿತು. 

ಯಾವುದೋ ಸ್ಟೇಶನ್‌ ಬರುತ್ತಿದೆ ಎಂದು ಮಲಗಿದ್ದವ ಎದ್ದು ಕೂತ. ಚಹ ಮಾರುವವನು ಬಂದರೆ ಒಂದು ಕಪ್‌ ತೆಗೆದುಕೊಳ್ಳಬೇಕು. ಹೇಗಿದ್ದರೂ ನಿದ್ದೆ ಬರುವುದಿಲ್ಲ. ಚಹ ಕುಡಿದು ಇನ್ನಷ್ಟು ಫ್ರೆಶ್‌ ಆಗಿ ಯೋಚಿಸಬಹುದು ಎಂದು ಉತ್ಸಾಹಗೊಂಡ. 

ರೈಲೇನೋ ನಿಂತಿತು. ಆದರೆ, ಅಪರಾತ್ರಿಯಲ್ಲಿ ಚಹ ಮಾರುವ ಒಬ್ಬನೂ ಕಾಣಲಿಲ್ಲ. ಅವನಂತೆ ನಿದ್ದೆಗೇಡಿಗಳಾಗಿದ್ದ ಅಲ್ಲೊಬ್ಬರು ಇಲ್ಲೊಬ್ಬರು ಇಳಿದು ದಿಕ್ಕೆಟ್ಟವರಂತೆ ಡಬ್ಬಿಯ ಹತ್ತಿರವೇ ನಿಂತಿದ್ದರು. ಯಾವುದೋ ಒಂದು ಸ್ಟೇಶನ್‌ ಅದು. ನೋಡಲು ದೊಡ್ಡದಾಗೇ ಇದ್ದರೂ ಜನ ಕಾಣಲಿಲ್ಲ. 

ಸಿಳ್ಳೆ ಹೊಡೆದು ಸೂಚನೆ ಕೂಡ ನೀಡದೇ ರೈಲು ನಿಧಾನವಾಗಿ ಚಲಿಸತೊಡಗಿದ್ದನ್ನು ಕಂಡು ಲಗುಬಗೆಯಿಂದ ಏರಿ ನಿಂತ. ಸ್ಟೇಶನ್‌ ದಾಟುವವರೆಗೂ ಬಾಗಿಲ ಹತ್ತಿರ ನಿಂತವ, ಮತ್ತೆ ಬೋಲ್ಟ್‌ ಬಿಗಿದು ತನ್ನ ಬರ್ಥ್‌ ಏರಿ ಮಲಗಿದ. ಮತ್ತೆ ರೈಲಿನ ಗಾನ ಶುರುವಾಯ್ತು. ಅದುವರೆಗೆ ಸ್ತಬ್ದವಾಗಿದ್ದ ಹೊರಚಾಚಿದ ಕಾಲುಗಳು ಮತ್ತೆ ಲಯಬದ್ಧವಾಗಿ ಅಲುಗತೊಡಗಿದವು.

*****

ಧಕ್ಕನೇ ಎಚ್ಚರವಾಯಿತು.

ಎಲ್ಲಿದ್ದೇನೆ ಎಂಬುದು ತಿಳಿಯಾಗಲು ಕೊಂಚ ಸಮಯವೇ ಬೇಕಾಯಿತು. ಮೈ ಬೆವೆತುಹೋಗಿತ್ತು. ಹೊರಗೆ ಮಳೆ ನಿಂತಿದ್ದರಿಂದ, ಕೋಣೆಯೊಳಗೆ ಒಂಥರಾ ಧಗೆ. ಹೊದ್ದುಕೊಂಡಿದ್ದ ರಗ್‌ ಒದ್ದಿದ್ದ ಮಗಳು, ಒಂದು ಕೈಯಿಂದ ಕತ್ತು ಬಳಸಿಕೊಂಡು ಮಲಗಿದ್ದಳು. 

ಓಹ್‌... ಎಂದುಕೊಂಡ. ತಿಳಿಯಾಗುತ್ತಿದ್ದ ಮನಸು ಆಗ ತಾನೆ ಕಂಡಿದ್ದ ಕನಸಿನ ವಿವರಗಳನ್ನು ಹೆಕ್ಕುತ್ತಿತ್ತು. ನಾನೀಗ ಮನೆಯಲ್ಲಿದ್ದೇನೆ. ಶವದ ರೈಲು ಕೇವಲ ಕನಸು ಎಂಬುದು ಮನವರಿಕೆಯಾದಾಗ ನೆಮ್ಮದಿ ಮೂಡಿತು. ಎದ್ದು ಫ್ಯಾನ್ ಹಾಕಿದ. ತಂಗಾಳಿ ಕೋಣೆ ಸುತ್ತತೊಡಗಿದಾಗ ನಿದ್ದೆ ಪೂರ್ತಿ ಹರಿದುಹೋಗಿ ಸುಮ್ಮನೇ ಕೂತ.

ಬದುಕು ಎಷ್ಟು ವಿಚಿತ್ರ. ನಿತ್ಯ ಒಂದಿಷ್ಟು ಕನಸುಗಳು ಬೀಳುತ್ತವೆ. ಕೆಲವೊಂದು ನನಸಾಗದೇ ಕಾಡುತ್ತವೆ. ಕೆಲವೊಂದು ಕನಸಾಗಿದ್ದರೂ ಕಾಡುತ್ತವೆ. 

ಮಗಳು ಮತ್ತೆ ಕನವರಿಸಿದಳು. ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಟ್ಟ ಆತ, ಮಗಳ ಕನಸು ಏನಿರಬಹುದು ಎಂದು ಯೋಚಿಸಿದ. 

ಸ್ವೆಟರ್‌ ನೆನಪಾಯ್ತು. 

‘ಆಯ್ತು ಪುಟ್ಟಾ, ನಾಳೆ ನಿನಗೆ ಖಂಡಿತ ಸ್ವೆಟರ್‌ ಕೊಡಿಸ್ತೀನಿ’ ಎಂದು ಗಟ್ಟಿಯಾಗಿ ಹೇಳಿದ. ಆತನ ಮಾತು ಕೇಳಿತೇನೋ ಎಂಬಂತೆ, ಮಲಗಿದ್ದ ಮಗು, ನಿದ್ದೆಯಲ್ಲೇ ಆತನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.

ಮನಸ್ಸು ತಿಳಿಯಾದಂತಾಗಿ ಮೆಲ್ಲಗೇ ಆತ ಒರಗಿಕೊಂಡ. ಏನೊಂದು ಪ್ರಯತ್ನವೂ ಇಲ್ಲದೇ ಕೆಲ ಹೊತ್ತಿನಲ್ಲೇ ಗಾಢ ನಿದ್ದೆ ಆವರಿಸಿತು. 

ಕನಸುಗಳೇ ಇಲ್ಲದ ಮಾಯಾ ನಿದ್ದೆ!

- ಚಾಮರಾಜ ಸವಡಿ