ಪ್ರೇಮ, ಯುದ್ಧ ಮತ್ತು ಚುನಾವಣೆಯಲ್ಲಿ ಎಲ್ಲವೂ ನ್ಯಾಯವೇ

25 Jan 2012

0 ಪ್ರತಿಕ್ರಿಯೆ

ಸಲ್ಮಾನ್‌ ರಶ್ದಿ

ಕೆಲವೊಬ್ಬರು ಏನು ಮಾಡಿದರೂ ವಿವಾದವಾಗುತ್ತದೆ. ಅವರು ಸೃಜನಶೀಲ ಕ್ಷೇತ್ರದಲ್ಲಿದ್ದರಂತೂ ವಿವಾದ ಇನ್ನಷ್ಟು ತೀವ್ರ. ಕನ್ನಡದ ಮಟ್ಟಿಗೆ ಆ ಕೀರ್ತಿ ಎಸ್.ಎಲ್. ಭೈರಪ್ಪ ಅವರದಾದರೆ, ಭಾರತೀಯ ಇಂಗ್ಲಿಷ್ ಬರಹಗಾರರ ಪೈಕಿ ಆ ಪಟ್ಟ ಸಲ್ಮಾನ್ ರಶ್ದಿಗೆ.

ಬಹುಶಃ, ದಿ ಸೆಟನಿಕ್ ವರ್ಸಸ್ ಕೃತಿಯನ್ನು ರಶ್ದಿ ಬರೆಯದೇ ಹೋಗಿದ್ದರೆ, ಅವರ ಪಾಲಿಗೆ ವಿವಾದಗಳಾಗಲಿ, ವಿವಾಹಗಳಾಗಲಿ ಈ ಪರಿ ಇರುತ್ತಿರಲಿಲ್ಲವೇನೋ. ಮುಸ್ಲಿಂ ಮನಃಸ್ಥಿತಿಯನ್ನು ಮಾತ್ರ ಕೆರಳಿಸುವಂಥ ಈ ಪುಸ್ತಕವನ್ನು ಮುಗಿಬಿದ್ದು ಮುಟ್ಟುಗೋಲು ಹಾಕಿಕೊಂಡ ಭಾರತ ಸರ್ಕಾರ, ರಶ್ದಿಗೆ ಜೀವಂತ ಇರುವಾಗಲೇ ಹುತಾತ್ಮನ ಪಟ್ಟ ಕಟ್ಟಿಬಿಟ್ಟಿತು.

ಅದರ ಮುಂದುವರಿದ ಅಧ್ಯಾಯವೇ ಜೈಪುರದ ಸಾಹಿತ್ಯ ಉತ್ಸವದಲ್ಲಿ ನಡೆದಿರುವ ಪ್ರಹಸನ. ಅಲ್ಲಿ ನಡೆಯಬೇಕಾಗಿದ್ದುದು ಸಾಹಿತ್ಯದ ಚರ್ಚೆ. ಆದರೆ, ನಡೆದಿದ್ದು ಮತ್ತು ನಡೆಯುತ್ತಿರುವುದು ಲೇಖಕ ಸಲ್ಮಾನ್ ರಶ್ದಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆ ಬೇಡವೆ ಎಂಬುದರ ಬಗ್ಗೆ. ಅಂತರ್‌ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಯಾವ ರೀತಿ ದುರ್ಬಳಕೆ ಮಾಡಬಹುದು ಮತ್ತು ಅದರ ಉದ್ದೇಶವನ್ನು ಹಾಳು ಮಾಡಬಹುದು ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ.

ಸರ್ಕಾರಿ ಪಕ್ಷಪಾತ

ಸಲ್ಮಾನ್ ರಶ್ದಿ ಅವರ ದಿ ಸೆಟನಿಕ್ ವರ್ಸ್‌ಸ್ ಕೃತಿಗಿಂತ ನೇರವಾಗಿರುವ ಅನೇಕ ಕೃತಿಗಳು ಎಲ್ಲಾ ಧರ್ಮ, ಜಾತಿ ಹಾಗೂ ಉಪಜಾತಿಗಳ ವ್ಯಕ್ತಿ ಹಾಗೂ ಬದುಕಿಗೆ ಸಂಬಂಧಿಸಿದಂತೆ ಬಹುತೇಕ ಎಲ್ಲಾ ಭಾಷೆಗಳಲ್ಲಿ ಬಂದಿವೆ. ಈಗಲೂ ಈ ಕೃತಿ ವಿದೇಶಗಳಲ್ಲಿ ಮುಕ್ತವಾಗಿ ಮಾರಾಟವಾಗುತ್ತಲೂ ಇದೆ. ಒಂಚೂರು ಹುಡುಕಿದರೆ, ಇದರ ಲಿಖಿತ ಭಾಗಗಳು ಅಂತರ್ಜಾಲದಲ್ಲೂ ಸಿಕ್ಕಾವು. ಮುಕ್ತ ವ್ಯವಸ್ಥೆಯಲ್ಲಿ ಇಂಥ ನಿರ್ಬಂಧಗಳೇ ತಮಾಷೆಯ ಸಂಗತಿ. ಆದರೆ, ಸರ್ಕಾರಕ್ಕೆ ಇದು ಸುಲಭವಾಗಿ ಅರ್ಥವಾಗುವುದಿಲ್ಲ. ಹಾಗೆ ಅರ್ಥವಾಗಿದ್ದರೆ, ಸಲ್ಮಾನ್ ರಶ್ದಿಗೆ ಜೈಪುರಕ್ಕೆ ಬಾರದಂತೆ ಮಾಡುವ ಹುಚ್ಚಾಟ ನಡೆಯುತ್ತಿರಲಿಲ್ಲ.

ಧಾರ್ಮಿಕ ಕಾರಣಗಳಿಗಾಗಿ ಸೃಜನಶೀಲ ಕೃತಿಗಳನ್ನು ಅತ್ಯುತ್ಸಾಹದಿಂದ ನಿಷೇಧ ವಿಧಿಸುವ ಭಾರತ ಅದೇ ಮಾನದಂಡವನ್ನು ಅವುಗಳ ಸೃಷ್ಟಿಕರ್ತರಿಗೂ ವಿಸ್ತರಿಸಿರುವುದು ಮಾತ್ರ ನಿಜಕ್ಕೂ ದುರಂತ. ರಶ್ದಿ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜಸ್ತಾನ ಸರ್ಕಾರಗಳು ನಡೆದುಕೊಳ್ಳುತ್ತಿರುವ ರೀತಿ ಅಪ್ಪಟ ಹುಚ್ಚಾಟವೇ. ಏಕೆಂದರೆ, ಸಲ್ಮಾನ್ ರಶ್ದಿಯಂತೆ ವಿವಾದ ಹುಟ್ಟಿಸಿದ ಇನ್ನೊಬ್ಬ ಮುಸ್ಲಿಂ ಲೇಖಕಿ ತಸ್ಲೀಮಾ ನಸ್ರೀನ್ ಮಾತ್ರ ಈ ಯಾವ ಕಟ್ಟುಪಾಡುಗಳೂ, ನಿಷೇಧಗಳೂ ಇಲ್ಲದೆ ಆರಾಮವಾಗಿ ಓಡಾಡಿಕೊಂಡಿದ್ದಾಳೆ. ಒಂದೇ ಧರ್ಮಕ್ಕೆ ಸೇರಿದ ಇಬ್ಬರು ವಿವಾದಿತ ವ್ಯಕ್ತಿಗಳ ನಡುವೆ ಸರ್ಕಾರ ಅನುಸರಿಸುತ್ತಿರುವುದು ಇದೆಂಥ ತಾರತಮ್ಯ? ಕೇಂದ್ರ ಸರ್ಕಾರ ನಿಷೇಧ ಹೇರಿದ್ದು ರಶ್ದಿ ಅವರ ಸೆಟನಿಕ್ ವರ್ಸಸ್ ಕೃತಿಗೆ ಮಾತ್ರವೇ ಹೊರತು ರಶ್ದಿಗೆ ಅಲ್ಲವಲ್ಲ? ಹಾಗಿರುವಾಗ, ರಶ್ದಿ ಮೇಲೇಕೆ ಕೆಂಗಣ್ಣು? 

ಎಲ್ಲಿಂದ ಬೆದರಿಕೆ?

ಸರ್ಕಾರ ತನ್ನ ಈ ಹುಚ್ಚಾಟಗಳಿಗೆ ಹುಡುಕುತ್ತಿರುವ ಸಮರ್ಥನೆಗಳಾದರೂ ಎಂಥವು? ರಶ್ದಿ ಜೀವಕ್ಕೆ ಬೆದರಿಕೆ ಇದೆ ಎಂಬುದು ಮೊದಲ ಸಮರ್ಥನೆ. ಸರಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರು ಪಾಲ್ಗೊಳ್ತಾರೆ ಬಿಡಿ ಎಂಬ ಉತ್ತರವನ್ನು ಸಂಘಟಕರು ನೀಡಿದರು. ಆದರೆ, ಸರ್ಕಾರ ಅದಕ್ಕೂ ನಿಷೇಧ ಹೇರುವ ಮೂಲಕ, ತನ್ನ ಕೃತ್ಯ ನಿಜಕ್ಕೂ ಹುಚ್ಚಾಟ ಎಂದು ಸಾಬೀತುಪಡಿಸಿತು.

ಈ ಮಧ್ಯೆ, ಜೀವ ಬೆದರಿಕೆ ಎಂಬುದು ವದಂತಿ ಎನ್ನಲಾಯಿತು. ಬೆದರಿಕೆ ಬಂದಿದ್ದು ಎಲ್ಲಿಂದ ಎಂಬುದು ಇವತ್ತಿಗೂ ಸ್ಪಷ್ಟವಾಗಿಲ್ಲ. ಹೀಗಿದ್ದರೂ, ಜೀವ ಬೆದರಿಕೆ ಇತ್ತು ಎಂದೇ ಸರ್ಕಾರ ವಾದಿಸುತ್ತಿದೆ. ಒಂದು ವೇಳೆ ಈ ವಾದ ನಿಜವೇ ಆಗಿದ್ದರೆ, ಭಾರತಕ್ಕಿಂತ ಅಪಾಯಕಾರಿ ದೇಶ ಇನ್ನೊಂದಿರಲಾರದು. ಏಕೆಂದರೆ, ಇಲ್ಲಿ ರಶ್ದಿ ಬಂದರೆ ಜೀವ ಬೆದರಿಕೆ, ಬದುಕಿದ್ದಾಗ ಎಂ.ಎಫ್. ಹುಸೇನ್ ಬಂದಿದ್ದರೂ ಜೀವ ಬೆದರಿಕೆ. ಆದರೆ, ಅವರೆಲ್ಲ ವಿದೇಶಗಳಲ್ಲಿದ್ದರೆ ಅಲ್ಲಿ ಮಾತ್ರ ಯಾವ ಬೆದರಿಕೆಯೂ ಇಲ್ಲ ಎಂಬಂತಿದೆ ಸರ್ಕಾರದ ವಾದ.

ಬಾಂಬಿಟ್ಟು ಮುಂಬೈ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಸಾವಿರಾರು ಅಮಾಯಕರ ಜೀವ ಕಳೆದ ದಾವೂದ್ ಇಬ್ರಾಹಿಂ ಇವತ್ತಿಗೂ ಪಕ್ಕದ ದೇಶ ಪಾಕಿಸ್ತಾನದಲ್ಲಿ ಚೆನ್ನಾಗೇ ಇದ್ದಾನೆ. ಅದೇ ದೇಶದಿಂದ ಇಲ್ಲಿಗೆ ಕದ್ದುಮುಚ್ಚಿ ಬಂದು, ಮಾರಣಹೋಮ ನಡೆಸಿ ಬಂಧಿತನಾಗಿರುವ ಅಜ್ಮಲ್ ಕಸಬ್ ನಮ್ಮ ದೇಶದೊಳಗೆ ಈಗಲೂ ಆರಾಮವಾಗಿದ್ದಾನೆ. ಅವರ‍್ಯಾರಿಗೂ ಇಲ್ಲದ ಜೀವ ಬೆದರಿಕೆ ತನ್ನ ಪಾಡಿಗೆ ತಾನು ಬಂದು ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕೆನ್ನುವ ಸಲ್ಮಾನ್ ರಶ್ದಿಗೆ ಏಕೆ ಬರುತ್ತದೆ? ಒಂದು ವೇಳೆ ಜೀವ ಬೆದರಿಕೆ ಇದೆ ಎನ್ನುವುದಾದರೂ, ಸೀಮಿತ ಅವಧಿಗೆ ಮಾತ್ರ ಬಂದುಹೋಗುವ ರಶ್ದಿಗೆ ಭದ್ರತೆ ಒದಗಿಸುವುದು ಸರ್ಕಾರಕ್ಕೆ ಸಾಧ್ಯವಿಲ್ಲವೆ?

ಧಾರ್ಮಿಕ ಪಕ್ಷಪಾತ

ಇವತ್ತು ರಶ್ದಿ ವಿರುದ್ಧ ಪ್ರತಿಭಟನೆ ನಡೆಸುವ ಜನ, ಬಾಂಬಿಟ್ಟು ಅಮಾಯಕರನ್ನು ಕೊಂದ ದಾವೂದ್ ಇಬ್ರಾಹಿಂ ವಿರುದ್ಧವಾಗಲಿ, ಹೋಟೆಲ್‌ಗೆ ನುಗ್ಗಿ ಮಾರಣಹೋಮ ನಡೆಸಿದ ಅಜ್ಮಲ್ ಕಸಬ್ ವಿರುದ್ಧವಾಗಲಿ ಇದೇ ಉತ್ಸಾಹದಿಂದ ಪ್ರತಿಭಟನೆ ಮಾಡಲಿಲ್ಲ. ಅವರಿಗೆ ಜೀವ ಬೆದರಿಕೆ ಹಾಕಲಿಲ್ಲ. ಅದು ಬಿಡಿ, ಜೀವನದ ಇಳಿಗಾಲದಲ್ಲಿ ಇಸ್ಲಾಂಗೆ ಮತಾಂತರಗೊಂಡ ಕೇರಳ ಮೂಲದ ಇಂಗ್ಲಿಷ್ ಬರಹಗಾರ್ತಿ ಕಮಲಾದಾಸ್‌ಗೂ ಇವರಿಂದ ಜೀವಬೆದರಿಕೆ ಬರಲಿಲ್ಲ. ತನ್ನ ಕೆಂಡದಂಥ ಸಾಹಿತ್ಯವನ್ನು ಆಕೆ ಬರೆದಿದ್ದು ಮತಾಂತರಗೊಳ್ಳುವ ಮೊದಲು ಎಂಬ ಕಾರಣಕ್ಕೆ ಕಮಲಾದಾಸ್‌ಗೆ ದಿಗ್ಬಂಧನಗಳು, ಫತ್ವಾಗಳು, ಪ್ರತಿಭಟನೆಗಳು ಎದುರಾಗಲಿಲ್ಲ. ಇವತ್ತಿಗೂ ಬಾಂಬ್ ಸ್ಫೋಟದಂಥ ನೀಚ ಕೃತ್ಯ ಎಸಗಿದ ನೂರಾರು ಜನ ಜೈಲುಗಳಲ್ಲಿದ್ದಾರೆ, ಶಿಕ್ಷೆಯ ವಿವಿಧ ಹಂತಗಳಲ್ಲಿದ್ದಾರೆ. ಅವರ‍್ಯಾರ ವಿರುದ್ಧವೂ ಪ್ರತಿಭಟನೆಗಳು ನಡೆಯಲಿಲ್ಲ. ಅವರಿಗೆ ಜೀವ ಬೆದರಿಕೆ ಬರಲಿಲ್ಲ. ಹಾಗಿದ್ದ ಮೇಲೆ, ಸಲ್ಮಾನ್ ರಶ್ದಿ ವಿಷಯಕ್ಕೆ ಮಾತ್ರ ಈ ಸಮಸ್ಯೆ ಏಕೆ?

ಚುನಾವಣೆ ಎಂಬ ಮಾಯೆ

ಹಾಗೆ ನೋಡಿದರೆ ಸಮಸ್ಯೆ ಇರುವುದು ಭಾರತ ಸರ್ಕಾರಕ್ಕೆ. ಸರಿಯಾಗಿ ಹೇಳಬೇಕೆಂದರೆ, ಯುಪಿಎ ಸರ್ಕಾರಕ್ಕೆ. ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರ ಇಚ್ಛೆಗೆ ವಿರುದ್ಧವಾಗಿ ಹೋಗುವ ಮನಸ್ಸು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಇಲ್ಲ. ಅಲ್ಪಸಂಖ್ಯತರನ್ನು ಓಲೈಸಲು ಸಲ್ಮಾನ್ ರಶ್ದಿ ಒಂದು ನೆಪ ಮಾತ್ರ. ಇದೇ ಉದ್ದೇಶಕ್ಕಾಗಿ ಜೈಲುಗಳಲ್ಲಿ ವರ್ಷಗಟ್ಟಲೇ ಉಗ್ರರನ್ನು ಸಾಕುತ್ತಿರುವ ಕೇಂದ್ರ ಸರ್ಕಾರಕ್ಕೆ, ಒಬ್ಬ ರಶ್ದಿಯನ್ನು ದೇಶದೊಳಗೆ ಬರುವಂತೆ ತಡೆಯುವುದು ಅದ್ಯಾವ ಕಷ್ಟ?

ಹೀಗಾಗಿ ಸಲ್ಮಾನ್ ರಶ್ದಿ ಭಾರತಕ್ಕೆ ಬರಲಾಗದು. ಆತನಿರಲಿ, ವಿಡಿಯೋ ಮೂಲಕ ಆತನ ಪಾಲ್ಗೊಳ್ಳುವಿಕೆಗೂ ಅವಕಾಶ ಸಿಗದು. ಪ್ರೇಮ ಮತ್ತು ಯುದ್ಧದಲ್ಲಷ್ಟೇ ಏಕೆ, ಬಹುಶಃ ಚುನಾವಣೆಯಲ್ಲಿಯೂ ಎಲ್ಲವೂ ನ್ಯಾಯವೇ ಇರಬೇಕು. ಅದಕ್ಕೆ ರಶ್ದಿ ಪ್ರಸಂಗವೇ ಉತ್ತಮ ನಿದರ್ಶನ.

- ಚಾಮರಾಜ ಸವಡಿ