ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೨ (ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ...)

20 May 2009

(ಗೌರಿಗೆ ಮೊದಲ ಸಲ ಮೂರ್ಛೆರೋಗ ಬಂದಾಗಿನ ಆಘಾತಕ್ಕೆ ಸಹೃದಯಿ ಓದುಗರು, ಮಿತ್ರರು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸಿದ್ದಾರೆ. ಅವರಿಗೆಲ್ಲ ನಾನು ಮತ್ತು ನನ್ನ ಕುಟುಂಬ ಋಣಿ.)

ಸರ್ವಜ್ಞನ ವಚನವೊಂದು ಪದೆ ಪದೆ ನನಗೆ ನೆನಪಾಗುತ್ತಿರುತ್ತದೆ:

ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ ಧಾರುಣಿಯೇ ಕುಲದೈವವಾಗಿರಲು ಯಾರನ್ನು ಬಿಡಲಿ| ಸರ್ವಜ್ಞ

ಗೌರಿಗೆ ಮೂರ್ಛೆ ರೋಗ ಬಂದ ಆ ದಿನದ ಆಘಾತಕ್ಕೆ ಸ್ಪಂದಿಸಿದವರನ್ನು ನೆನೆಯಲು ಹೊರಟರೆ ನೆನಪಿಗೆ ಬಂದಿದ್ದು ಸರ್ವಜ್ಞನ ಈ ವಚನ.

ಮಾರ್ಚ್‌ ತಿಂಗಳಿನ ಆ ಬೆಳಿಗ್ಗೆ ಅನುಭವಿಸಿದ ಆಘಾತ ನನ್ನ ಕುಟುಂಬದ ಮಟ್ಟಿಗೆ ಅತಿ ದೊಡ್ಡದು. ಗೌರಿಯ ಬೆಳವಣಿಗೆ ಎಲ್ಲರಂತಿರುವುದಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲಿಕ್ಕೇ ವರ್ಷಗಳು ಉರುಳಿದ್ದವು. ಅಂಥದ್ದರಲ್ಲಿ ಅಪಸ್ಮಾರ ಅಂದು ಬೆಳಿಗ್ಗೆ ಅಪ್ಪಳಿಸಿ, ನಮ್ಮ ನಂಬಿಕೆಯೆಲ್ಲವನ್ನೂ ಒಂದೇಟಿಗೇ ಬುಡಮೇಲು ಮಾಡಿತ್ತು.

ನಿಜ, ಇದು ಜಗತ್ತಿನಲ್ಲಿ ಯಾರಿಗೂ ಬಾರದ ಕಾಯಿಲೆ ಏನಲ್ಲ. ಆದರೆ, ಸಾಮಾನ್ಯವಾದ ಒಂದು ಸಮಸ್ಯೆ ನಮಗೇ ಬಂದಾಗ, ನಾವು ಸ್ಪಂದಿಸುವ ರೀತಿ ಮಾತ್ರ ತಕ್ಷಣಕ್ಕೆ ಎಲ್ಲರ ಸ್ಪಂದನೆಯಂತಿರುವುದಿಲ್ಲ.

ಬುದ್ಧಿಮಾಂದ್ಯ ಮಕ್ಕಳನ್ನು ಹೊಂದುವ ನೋವು, ಅಂಥ ತಂದೆತಾಯಿಗಳಿಗಷ್ಟೇ ಅರ್ಥವಾಗುವಂಥದು. ಕಳೆದ ಏಳು ವರ್ಷಗಳಲ್ಲಿ ಇದು ಪದೆ ಪದೆ ನನ್ನ ಅನುಭವಕ್ಕೆ ಬಂದಿದೆ. ಇತರರು ನಮ್ಮ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ ಎಂದರ್ಥವಲ್ಲ. ಅದರ ತೀವ್ರತೆ, ಅಂಥ ಮಕ್ಕಳನ್ನು ಹೊಂದಿರುವವರಿಗೆ ಮಾತ್ರ ಗೊತ್ತಾಗುತ್ತದೆ.

ಮಾರ್ಚ್‌‌ನ ಆ ಬೆಳಿಗ್ಗೆ ಇನ್ನೇನು ಗೌರಿ ನಮ್ಮ ಕೈಬಿಟ್ಟುಹೋದಳು ಎಂಬ ಆಘಾತದ ನಂತರ, ಬದುಕು ನಮ್ಮ ಪಾಲಿಗೆ ಬೇರೆ ರೀತಿ ಗೋಚರಿಸತೊಡಗಿತು. ಅವು ಚುನಾವಣೆಯ ಬಿರುಸು ಹೆಚ್ಚುತ್ತಿದ್ದ ದಿನಗಳು. ಅದರ ಜವಾಬ್ದಾರಿ ಸಾಕಷ್ಟಿದ್ದು ನಾನು ಕಚೇರಿಗೆ ರಜೆ ಹಾಕುವಂತಿರಲಿಲ್ಲ.

ಅರೆಬರೆ ಮುಖ ತೊಳೆದು ಗೌರಿಯನ್ನೆತ್ತಿಕೊಂಡು ಬಸವೇಶ್ವರನಗರದ ಡಾ. ಶಿವಾನಂದ್‌ ಅವರ ಮನೆ ಕಮ್‌ ಕ್ಲಿನಿಕ್‌ಗೆ ಹೋದೆವು. ವಿಶಿಷ್ಟಚೇತನ ಮಕ್ಕಳ ಚಿಕಿತ್ಸೆಯಲ್ಲಿ ಡಾ. ಶಿವಾನಂದ್‌ ತಜ್ಞರು ಎಂದು ಗೌರಿಯ ಶಾಲೆಯವರು ಸೂಚಿಸಿದ್ದರಿಂದ, ಫೋನ್‌ ಮಾಡಿ ಅಪಾಯಿಂಟ್‌ಮೆಂಟ್‌ ಪಡೆದು ಹೋದೆವು. ಡಾ. ಶಿವಾನಂದ್‌ ಸಾವಧಾನವಾಗಿ ಎಲ್ಲ ವಿಷಯವನ್ನೂ ಕೇಳಿ ತಿಳಿದುಕೊಂಡರು. ಗೌರಿಯನ್ನು ಪರೀಕ್ಷಿಸಿದರು. ಆಕೆಗೆ ಬಂದಿದ್ದು ಅಪಸ್ಮಾರ ಎಂಬುದನ್ನು ದೃಢಪಡಿಸಿ, ಔಷಧಿ ಸೂಚಿಸಿ, ನಿಯಮಿತವಾಗಿ ನೀಡುವಂತೆ ಹೇಳಿದರು. ಅವರ ಪ್ರಕಾರ, ಕನಿಷ್ಠ ೩ ವರ್ಷ ಆಕೆಗೆ ಅಪಸ್ಮಾರದ ಔಷಧಿಯನ್ನು ದಿನಕ್ಕೆ ಮೂರು ಸಲ ಕೊಡಬೇಕು.

ಬದುಕು ಮತ್ತೊಂದು ವೈದ್ಯಕೀಯ ತಿರುವಿಗೆ ನಮ್ಮನ್ನು ಒಯ್ದು ನಿಲ್ಲಿಸಿತ್ತು. ನಾವು ಮತ್ತೆ ತಿರುಗಣಿಯಲ್ಲಿ ಸುತ್ತಬೇಕು.

ಏಕೋ ಮನಸ್ಸು ತುಂಬ ಕ್ಷೋಭೆಗೊಂಡಿತ್ತು.

ನಮ್ಮ ನಮ್ಮ ವೈಯಕ್ತಿಕ ಸಾಧನೆಗಳೇನೇ ಇರಲಿ, ಪ್ರತಿಭೆ-ಅವಕಾಶ ಎಂಥವೇ ಇರಲಿ, ಮಕ್ಕಳ ವಿಷಯದಲ್ಲಿ ಎಲ್ಲರೂ ಅಸಹಾಯಕರೇ. ಗೌರಿಯಂಥ ವಿಶಿಷ್ಟಚೇತನ ಮಕ್ಕಳನ್ನು ಬೆಳೆಸಲು ನಮ್ಮೆಲ್ಲ ಅಭ್ಯಾಸ, ಪದ್ಧತಿಗಳನ್ನು ಬದಲಾಯಿಸಿಕೊಳ್ಳಲೇಬೇಕು. ಅವತ್ತು, ಅಂಥ ಮತ್ತೊಂದು ಪದ್ಧತಿಯನ್ನು ನಾವು ಒಪ್ಪಿಕೊಳ್ಳಬೇಕಾಯಿತು.

ಆಸ್ಪತ್ರೆಯಿಂದ ಹೊರಟಾಗ, ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದಿರಾಯಿತು.

ಮನೆಗೆ ಹೋಗಿ ಮಾಡುವುದಾದರೂ ಏನು? ಬೆಳಿಗ್ಗೆ ನಡೆದ ಘಟನೆ ನಮ್ಮನ್ನು ಮಂಕಾಗಿಸಿತ್ತು. ಆಟೊದವ ಎಲ್ಲಿಗೆ ಸರ್‌ ಎಂದಾಗ, ಗೌರಿಯ ಶಾಲೆಯ ವಿಳಾಸ ಹೇಳಿದೆ. ನನಗೆ ಅರ್ಜೆಂಟ್‌ ಶಾಲೆಗೆ ಹೋಗಬೇಕಿತ್ತು. ಅಲ್ಲಿಯ ಶಿಕ್ಷಕಿಯರೊಂದಿಗೆ ಮಾತನಾಡಿ, ನನ್ನ ಕೆಲವು ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕಿತ್ತು.

ಶಾಲೆಗೆ ಹೋಗುತ್ತಲೇ ನಮಗೆ ಅಚ್ಚರಿ ಕಾಯ್ದಿತ್ತು. ಗೌರಿಗೆ ಹೀಗಾಗಿದೆ ಎಂಬುದರ ಸುದ್ದಿ ತಿಳಿದಿದ್ದ ವಿಶಿಷ್ಟಚೇತನ ಮಕ್ಕಳ ತಾಯಂದಿರ ಗುಂಪೇ ಅಲ್ಲಿ ನೆರೆದಿತ್ತು. ಅವರನ್ನು ನೋಡುತ್ತಲೇ ರೇಖಾ ಮತ್ತೆ ಅಳತೊಡಗಿದಳು. ಅದನ್ನು ನೋಡಿ ಎರಡನೇ ಮಗಳು ನಿಧಿ ಕೂಡಾ ಅಳಲು ಪ್ರಾರಂಭಿಸಿದಳು.

ಕ್ಷಣಾರ್ಧದಲ್ಲಿ ಶಾಲೆಯ ವಾತಾವರಣವೇ ಬದಲಾಯಿತು. ಅಳುತ್ತಿದ್ದ ರೇಖಾಳನ್ನು ಅಲ್ಲಿಯ ತಾಯಂದಿರು ಅಪ್ಪಿಕೊಂಡು ಸಂತೈಸಿದರು. ಗೌರಿಯನ್ನು ಒಬ್ಬ ಶಿಕ್ಷಕಿ ಕರೆದುಕೊಂಡು ಹೋಗಿ ಊಟ ಮಾಡಿಸಲು ತೊಡಗಿದರು. ಇನ್ನಿಬ್ಬರು ತಾಯಂದಿರು ನನ್ನ ಕೈಲಿದ್ದ ಔಷಧ ಚೀಟಿ ಪಡೆದುಕೊಂಡು ಹೋಗಿ ಔಷಧಿ ತೆಗೆದುಕೊಂಡು ಬಂದರು. ಶಾಲೆಯ ಹಿರಿಯ ಶಿಕ್ಷಕಿ ವಿದ್ಯಾ, ಗೌರಿಯ ಶಿಕ್ಷಕಿ ಕಲಾ, ಶಾಲೆಯ ಇತರ ಶಿಕ್ಷಕಿಯರು ಫಿಟ್ಸ್‌ ಬಂದಾಗ ಏನು ಮಾಡಬೇಕೆಂಬುದನ್ನು ಮಕ್ಕಳಿಗೆ ತಿಳಿಸುವಂತೆ ವಿವರವಾಗಿ ತಿಳಿಸಿದರು. ಸಂಕಟಕ್ಕೆ ಸಿಲುಕಿದ ನಮ್ಮನ್ನು ಸಂತೈಸಲು ಅವರೆಲ್ಲ ಎಷ್ಟೊಂದು ಪ್ರಯತ್ನಿಸಿದರು ಎಂದರೆ, ನೆನಪಿಸಿಕೊಂಡರೆ ಈಗಲೂ ಹೃದಯ ಉಕ್ಕುತ್ತದೆ.

ಅಷ್ಟೊತ್ತಿಗೆ ಊಟ ಮಾಡುತ್ತಿದ್ದ ಗೌರಿ ವಾಂತಿ ಮಾಡಿಕೊಂಡಳು. ಅದನ್ನೆಲ್ಲ ಬೊಗಸೆಯೊಡ್ಡಿ ಹಿಡಿದ ಗೌರಿಯ ಶಿಕ್ಷಕಿ ಕಲಾ, ಒಂಚೂರೂ ಬೇಸರಿಸಿಕೊಳ್ಳದೇ ಹೋಗಿ ಚೆಲ್ಲಿ ಬಂದರು. ಗೌರಿಯ ಬಾಯಿ ತೊಳೆಸಿ, ಉಡುಪು ಬದಲಿಸಿ, ಆಕೆಗೆ ಔಷಧಿ ಕುಡಿಸಿದರು. ನಾನು ಎಲ್ಲವನ್ನೂ ಮೂಕಪ್ರೇಕ್ಷಕನಂತೆ ನೋಡುತ್ತಲೇ ನಿಂತಿದ್ದೆ.

ನಂತರದ ಬೆಳವಣಿಗೆಗಳು ನನ್ನನ್ನು ಮತ್ತಷ್ಟು ಮೂಕವಿಸ್ಮಿತನನ್ನಾಗಿಸಿದವು.

ತಂತಮ್ಮ ವಾಹನಗಳಲ್ಲಿ ಗೌರಿ, ನಿಧಿ ಮತ್ತು ರೇಖಾಳನ್ನು ಕೂಡಿಸಿಕೊಂಡು ನಮ್ಮ ಮನೆಗೆ ಬಂದ ತಾಯಂದಿರು, ತಾವೇ ಅಡುಗೆ ಮನೆಗೆ ಹೋಗಿ ತಿಂಡಿ ತಯಾರಿಸಿದರು. ನಾನು ಆಫೀಸ್‌ಗೆ ಹೋಗಬೇಕು ಎಂಬುದನ್ನು ತಿಳಿದು, ಊಟವನ್ನೂ ಸಿದ್ಧಪಡಿಸಿದರು. ಗರಬಡಿದವರಂತೆ ಕೂತ ನಮಗೆ ಅವರೇ ತಿಂಡಿ ಬಡಿಸಿದರು. ನನಗೆ ಊಟದ ಡಬ್ಬ ತುಂಬಿಕೊಟ್ಟರು. ಮಕ್ಕಳಿಬ್ಬರಿಗೂ ಊಟ ಬಡಿಸಿ ಮಲಗಿಸಿದ್ದೂ ಅವರೇ.

ಯಾವ ಜನ್ಮದ ಬಂಧುಗಳು ಇವರೆಲ್ಲ?

ಅವರ ಪೈಕಿ ಬಹಳಷ್ಟು ತಾಯಂದಿರ ಹೆಸರೂ ನನಗೆ ಗೊತ್ತಿಲ್ಲ. ಅವರ ಮಕ್ಕಳು ಇಂಥವರೇ ಎಂಬುದೂ ಸರಿಯಾಗಿ ನೆನಪಿಲ್ಲ. ಆದರೆ, ಕಷ್ಟಕಾಲದಲ್ಲಿ ಅವರೆಲ್ಲ ನಮ್ಮ ಬಂಧುಗಳಾದರು. ನಮ್ಮ ಮನೆಯವರಾದರು. ನಿಮ್ಮ ಜೊತೆಗೆ ನಾವಿದ್ದೇವೆ, ಚಿಂತೆ ಬೇಡ ಎಂಬುದನ್ನು ಮಾತಿನಲ್ಲಷ್ಟೇ ಹೇಳದೇ ಕೃತಿಯ ಮೂಲಕವೂ ತೋರಿಸಿದರು.

ಅಚ್ಚರಿಯ ವಿಷಯ ಎಂದರೆ, ಅವರ ಪೈಕಿ ಬಹುತೇಕ ತಾಯಂದಿರ ಮಕ್ಕಳ ಸ್ಥಿತಿ ಗೌರಿಗಿಂತ ಕೆಟ್ಟದ್ದು. ಎಷ್ಟೋ ಜನ ಮಕ್ಕಳಿಗೆ ಇವತ್ತೂ ನಿಯಮಿತವಾಗಿ ಫಿಟ್ಸ್‌ ಬರುತ್ತದಂತೆ. ಮಗು ಹೀಗಾಗಿದೆ ಎಂಬ ಕಾರಣಕ್ಕೆ, ಹೆಂಡತಿಯೊಂದಿಗೆ ಮಾತು ಬಿಟ್ಟ ಗಂಡಂದಿರಿದ್ದಾರೆ. ಕುಟುಂಬವನ್ನು ದೂರವಿಟ್ಟ ಭೂಪರಿದ್ದಾರೆ. ಸಂಬಂಧಿಕರು ಹತ್ತಿರ ಸೇರಿಸುವುದನ್ನು ಬಿಟ್ಟಿದ್ದಾರೆ. ಅಂಥ ಎಲ್ಲ ನೋವು ನುಂಗಿಕೊಂಡ ಅವರು, ಮೊದಲ ಏಟು ತಿಂದ ನಮ್ಮನ್ನು ಜತನದಿಂದ ನೋಡಿಕೊಂಡರು. ಇಡೀ ದಿನ ಮನೆಯಲ್ಲಿದ್ದು ಸಮಾಧಾನ ಹೇಳಿದರು. ತಂತಮ್ಮ ಫೋನ್‌ ನಂಬರ್‌ಗಳನ್ನು ಬರೆದುಕೊಟ್ಟು, ಯಾವಾಗ ಬೇಕಾದರೂ ಫೋನ್‌ ಮಾಡಿ ಎಂದರು.

ಅವತ್ತಿನಿಂದ ಇವತ್ತಿನತನಕ, ಅವರೆಲ್ಲ ನಮ್ಮ ಬಂಧುಗಳಂತೇ ನಡೆದುಕೊಳ್ಳುತ್ತಿದ್ದಾರೆ. ಫೋನ್‌ ಎತ್ತಿಕೊಂಡರೆ ಬರುವ ಮೊದಲ ಪ್ರಶ್ನೆ: ಗೌರಿ ಹೇಗಿದ್ದಾಳೆ ಎಂದೇ. ನಾವೆಲ್ಲ ಅವರ ಪಾಲಿಗೆ ಚಾಮರಾಜ, ರೇಖಾ ಅಲ್ಲ; ಗೌರಿಯ ಅಪ್ಪ, ಗೌರಿಯ ಅಮ್ಮ ಎಂದು. ಮಾತನಾಡಲು ಬಾರದ, ಭಾವನೆಗಳನ್ನು ಸಹಜವಾಗಿ ಅಭಿವ್ಯಕ್ತಿಸಲೂ ಗೊತ್ತಿಲ್ಲದ ಗೌರಿ ನಮ್ಮ ಪಾಲಿಗೆ ಅತಿ ದೊಡ್ಡ ದಯಾಮಯಿ ಬಳಗವನ್ನು ಕಟ್ಟಿಕೊಟ್ಟಿದ್ದಾಳೆ.

ನನಗೆ ಸರ್ವಜ್ಞನ ವಚನ ಮತ್ತೆ ಮತ್ತೆ ನೆನಪಾಗುತ್ತದೆ: ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ, ಧಾರುಣಿಯೇ ಕುಲದೈವವಾಗಿರಲು, ಯಾರನ್ನು ಬಿಡಲಿ, ಸರ್ವಜ್ಞ.

ಹೌದಲ್ಲ? ಒಡಹುಟ್ಟಿದವರೇ ಬಂಧುಗಳಾಗಬೇಕಿಲ್ಲ. ಜೊತೆಗಿದ್ದು ಬೆಂಬಲಿಸುವವರೂ ಬಂಧುಗಳೇ. ಹಾಗೆ ನೋಡಿದರೆ, ಇವರೇ ನಿಜವಾದ ಬಂಧುಗಳು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಷ್ಟಕಾಲದಲ್ಲಿ ಇವರೆಲ್ಲ ಜೊತೆಗೆ ನಿಂತರು. ಈಗಲೂ ಜೊತೆಗಿದ್ದಾರೆ. ಒಂದು ಮೂರ್ಛೆರೋಗ ಎಷ್ಟೊಂದು ಹೃದಯಗಳಲ್ಲಿ ಪ್ರೀತಿಯನ್ನು ಎಚ್ಚರಿಸಿತು ನೋಡಿ!

ಇಂಥ ತಾಯಂದಿರ ಪ್ರೀತಿ ಎಲ್ಲ ಮಕ್ಕಳಿಗೂ ದಕ್ಕಲಿ. ನೊಂದವರ ಎದೆಗಳಲ್ಲಿ ಹೊಸ ಕನಸು ಬಿತ್ತಲಿ. ಬದುಕು ಈಗಿರುವುದಕ್ಕಿಂತ ಹೆಚ್ಚು ನೆಮ್ಮದಿ ಕಾಣಲಿ. ಹಾಗಂತ ಹಾರೈಸುತ್ತ, ಆ ಎಲ್ಲ ತಾಯಂದಿರ, ಶಿಕ್ಷಕಿಯರ ಪ್ರೀತಿಯನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತೇನೆ. ಇವರೆಲ್ಲರ ಪ್ರೀತಿ, ಹಾರೈಕೆ ಎಲ್ಲ ವಿಶಿಷ್ಟಚೇತನ ಮಕ್ಕಳಲ್ಲಿ ಹೊಸ ಚೈತನ್ಯ ತುಂಬಲಿ.

ಪ್ರೀತಿಸುವ ಈ ಹೃದಯಗಳ ಸಂತತಿ ಸಾವಿರವಾಗಲಿ.

(ಮುಗಿಯಿತು)

- ಚಾಮರಾಜ ಸವಡಿ

6 comments:

Ittigecement said...

ಚಾಮರಾಜ ಸವಡಿಯವರೆ....

ಏನು ಹೇಳ ಬೇಕೆಂದು ತೋಚುತ್ತಿಲ್ಲ....

ನನ್ನ ಚಿಕ್ಕ ಮಾವ(ಬೆಳಗಾವಿಯ ಸನ್ಮಾನ್ ಹೊಟೆಲಿನಲ್ಲಿ ಕೆಲಸಮಾಡುತ್ತಾರೆ)
ಅವರ ಎರಡೂ ಮಕ್ಕಳೂ ಇದೇ ಥರಹ ಆಗಿದೆ..
ಇತ್ತೀಚೆಗೆ ಒಂದು ಮಗು ತೀರಿಕೊಂಡಿದೆ...
ಅವರು ಹೇಳುತ್ತಿದ್ದುದು ನೆನಪಾಗುತ್ತಿದೆ...

"ಯಾವುದೋ ಜನ್ಮದ ಋಣ ಬಾಕಿ ಇತ್ತು...
ಅದನ್ನು ಈಗ ತೀರಿಸುತ್ತಿದ್ದೇವೆ.."

veeresh savadi said...

chamu
we are with u too,as ever been.
veeresh savadi

naasomeswara said...

ಚಾಮರಾಜ್ ಅವರೆ!

ಸೆಳವು ಮತ್ತ ಬರದಂತೆ ತಡೆಗಟ್ಟುವುದರ ಕಡೆಗೆ ಹೆಚ್ಚಿನ ಗಮನವನ್ನು ನೀಡಿ.
ಔಷಧ ನಿತ್ಯ ನೀಡಿ.
ಹೆಚ್ಚು ಬಿಸಿಲು, ಹೆಚ್ಚು ಶಬ್ದಗಳಿರುವೆಡೆ ಕರೆದೊಯ್ಯಬೇಡಿ. ಉಪವಾಸ, ನಿದ್ರೆ ಕಟ್ಟುವುದು ಇತ್ಯಾದಿಗಳಿಗೆ ಅವಕಾಶ ಕೊಡಬೇಡಿ.

ಧೈರ್ಯವಾಗಿರಿ.

ನಾಸೋ

Unknown said...

ಸರ್,

ನಾವು ದೇವರನ್ನು ನೋಡಿಲ್ಲ. ಈ ಎಲ್ಲ ತಾಯಂದಿರ, ಶಿಕ್ಷಕಿಯರ ಪ್ರೀತಿ, ಹಾರೈಕೆಗಳ ರೂಪದಲ್ಲಿ ಆ ದೇವರೆ ನಿಮ್ಮ ಸಹಾಯಕ್ಕೆಇದ್ದಾನೆ ಎಂದು ಭಾವಿಸಿ ಧೈರ್ಯವಾಗಿರಿ.

ಗೌರಿಗೆ ಬೇಗ ಗುಣವಗಲಿ ಎಂದು ಹಾರೈಸುವೆ.

ಆಲಾಪಿನಿ said...

ಸರ್ವಜ್ಞನ ಮಾತು ನಿಜ ಸರ್‍. ಆಗಾಗ ನಾನು ಅರವಿಂದ್ ಮಾತಾಡ್ಕೊಳ್ತಿದ್ವಿ. ಈಗ ಮೊದಲಿಗಿಂತಲೂ ಗೌರಿ ಸೌಮ್ಯವಾಗಿದಾಳೆ. ಎಲ್ಲಾ ತಿಳಿಯತ್ತೆ ಅವಳಿಗೆ ಅಂತ. ಕಾನ್ಸ್‌ಂಟ್ರೇಶನ್‌, ಆರ್ಬ್ಸ್‌ವೇಶನ್‌ ಚೆನ್ನಾಗಿದೆ ಅವಳದು.

Chamaraj Savadi said...

ಎಲ್ಲಾ ಆತ್ಮೀಯರ ಹೃದಯಪೂರ್ವಕ ಪ್ರತಿಕ್ರಿಯೆಗಳಿಗೆ ಧನ್ಯವಾದ. ಗೌರಿ ಈಗ ಚೆನ್ನಾಗಿದ್ದಾಳೆ. ನಮ್ಮ ಪ್ರಯತ್ನವೂ ನಡೆದಿದೆ. ಹೊಸ ಸಾಧ್ಯತೆಗಳೇನಾದರೂ ಇವೆಯೇ ಎಂದು ಹುಡುಕುತ್ತಿದ್ದೇವೆ. ಇದೊಂದು ನಿರಂತರ ಪ್ರಕ್ರಿಯೆ.