ಬದುಕು ಅಂದ್ರೆ ಇಷ್ಟೇನಾ?
ಹಾಗಂತ ನಾವು ಎಷ್ಟು ಸಾರಿ ಅಂದುಕೊಂಡಿಲ್ಲ? ಓಡುತ್ತಿದ್ದ ವಾಹನ ಇದ್ದಕ್ಕಿದ್ದಂತೆ ನಿಂತ ಹಾಗೆ, ಬದುಕು ಕೂಡ ಯಾವುದೋ ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ನಿಂತಂತಾಗುತ್ತದೆ. ಚಲಿಸುತ್ತಿದ್ದಾಗಿನ ಭಾವನೆಗಳೆಲ್ಲ ಮಾಯವಾದಂತಾಗಿ, ಕೂತವರು ತಕ್ಷಣ ಇಳಿಯಬೇಕಾಗಿ ಬಂದು, ’ಅರೆ, ಎಲ್ಲಿಗೆ ಬಂದೆ?’ ಎಂದು ಪ್ರಶ್ನಿಸುವಂತಾಗುತ್ತದೆ. ತಕ್ಷಣ ಏನೂ ಮಾಡಲು ತೋಚದೇ ಕಕ್ಕಾವಿಕ್ಕಿಯಾಗುತ್ತೇವೆ.
ಬದುಕು ತಿರುವು ತೆಗೆದುಕೊಳ್ಳುತ್ತಿದೆ ಎಂಬುದರ ಮೊದಲ ಲಕ್ಷಣವದು.
ಕೆಲಸ ಬದಲಿಸಿದಾಗ, ಕೆಲಸ ಬಿಟ್ಟಾಗ, ಹೊಸ ಕೆಲಸಕ್ಕೆ ಹೋದಾಗ, ಊರು ಬದಲಿಸಿದಾಗ, ಮನೆ ಬದಲಿಸಿದಾಗ, ಹಳೆಯ ಸಂಬಂಧವನ್ನು ಮುರಿದುಕೊಂಡಾಗ- ಹೀಗೆ ಹತ್ತಾರು ಕಾರಣಗಳಿಗಾಗಿ ಸಹಜವಾದಂತಿದ್ದ ಜೀವನ ಇದ್ದಕ್ಕಿದ್ದಂತೆ ತಿರುವು ಪಡೆದುಕೊಳ್ಳುತ್ತದೆ. ಹಳೆಯದೆಲ್ಲ ಮರೆಯಾದಂತಾಗಿ, ಹೊಸತನ ರೂಢಿಯಾಗಬೇಕಿರುವಾಗ, ಬದುಕೆಂದರೆ ಇಷ್ಟೇನಾ ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ.
ಏನೇ ಧೈರ್ಯ ಹೇಳಿಕೊಂಡರೂ, ಎಷ್ಟೇ ಪೂರ್ವಾನುಭವವಿದ್ದರೂ, ಹೊಸತನದ ಎದುರು ಅರೆ ಕ್ಷಣ ಮಂಕಾಗುವುದು ಸಹಜ. ಎಷ್ಟೇ ದೋಷಗಳಿದ್ದರೂ ಹಳೆಯದೇ ಚೆನ್ನಿತ್ತು ಎಂದು ಅನಿಸುತ್ತದೆ. ಅದನ್ನು ಬಿಡಬಾರದಿತ್ತು ಎಂದು ಹಳಹಳಿಸುತ್ತೇವೆ. ಮತ್ತೆ, ಅಲ್ಲಿಗೇ ಹೋಗಿಬಿಡಲಾ ಎಂದು ಪ್ರಶ್ನಿಸಿಕೊಳ್ಳುತ್ತೇವೆ. ಅದುವರೆಗೆ ಅಂದುಕೊಂಡ ಭಾವನೆಗಳೆಲ್ಲ ಕೈಕೊಟ್ಟಂತಾಗಿ ತಡವರಿಸುತ್ತೇವೆ. ಇದ್ಯಾವುದೋ ಹೊಸ ನೆಲ. ಇಲ್ಲಿರುವವರು ಹೊಸ ಜನ. ಇಲ್ಲಿರುವುದು ಹೊಸ ವಾತಾವರಣ. ಇದನ್ನೆಲ್ಲ ಗೆದ್ದು ಮತ್ತೆ ಗರಿಗೆದರುವುದು ಯಾವತ್ತೋ ಎಂದು ಕಂಗಾಲಾಗುತ್ತೇವೆ.
ಎಷ್ಟೋ ಜನ ಮತ್ತೆ ಹಳೆಯದನ್ನು ಹುಡುಕಿಕೊಂಡು ವಾಪಸ್ ಹೋಗಲು ಯತ್ನಿಸುತ್ತಾರೆ. ಇನ್ನು ಕೆಲವರು ಹೊಸತನಕ್ಕೆ ಹೊಂದಿಕೊಳ್ಳಲಾಗದೇ ಪೂರ್ತಿಯಾಗಿ ಮಂಕಾಗುತ್ತಾರೆ. ಕೆಲವರು ಮಾತ್ರ ತಡವರಿಸುತ್ತಾ ಹೊಸತನಕ್ಕೆ ಹೊಂದಿಕೊಳ್ಳುವ ಕೆಲಸದಲ್ಲಿ ತೊಡಗುತ್ತಾರೆ.
ಆದರೆ, ಬದುಕು ವಿರುದ್ಧ ದಿಕ್ಕಿನಲ್ಲಿ, ಬಂದ ದಾರಿಯತ್ತ ಮರಳಿ ಹೋಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಸಾಕಷ್ಟು ಸಮಯ ಕಳೆದುಹೋಗಿರುತ್ತದೆ. ಧೈರ್ಯದಿಂದ ಮುನ್ನುಗ್ಗಿದವರಿಗೆ ತಕ್ಷಣ ಯಶಸ್ಸು ಸಿಕ್ಕದಿದ್ದರೂ, ಬದುಕುವ ಸ್ಥೈರ್ಯ ದಕ್ಕಿರುತ್ತದೆ. ಅರೆ ಮನಸ್ಸಿನವರಿಗೆ ವಾಸ್ತವ ಬಲುಬೇಗ ಅರಿವಾಗುತ್ತದೆ. ಆದರೆ, ಭೂತಕಾಲದಲ್ಲೇ ಬದುಕುವವರಿಗೆ ಮಾತ್ರ ಬದುಕು ಕರುಣಾಮಯಿಯಾಗುವುದು ಬಲು ಅಪರೂಪ.
ಹಲವಾರು ಬಾರಿ ಕೆಲಸಗಳನ್ನು, ಊರುಗಳನ್ನು, ಮನೆಗಳನ್ನು ಹಾಗೂ ಮಿತ್ರರನ್ನು ಬದಲಿಸಿರುವ ನನಗೆ ಇದೆಲ್ಲ ಅರ್ಥವಾಗುವ ಹೊತ್ತಿಗೆ ಅರ್ಧ ಆಯುಷ್ಯ ಕಳೆದುಹೋಗಿತ್ತು. ಮುಂದಿನ ಆಯುಷ್ಯಪೂರ್ತಿ ಬದುಕುವ ಗಟ್ಟಿತನವನ್ನು ಕಲಿಸಿತ್ತು. ’ಹೊತ್ತ ಒಜ್ಜೆಗಳೇನು, ಹಿಡಿದ ಗಿಂಡಿಗಳೇನು, ಹೆಜ್ಜೆ ಸಾಲಿನ ಪಯಣ, ನಾರಾಯಣ’ ಎಂದುಕೊಂಡು ಹೊಸ ದಿಕ್ಕಿನತ್ತ, ಹೊಸ ದಾರಿಯಲ್ಲಿ ನಡೆಯುವುದನ್ನು ರೂಢಿ ಮಾಡಿಸಿತ್ತು.
ಮೊದಲ ಬಾರಿ ಕೆಲಸ ಬಿಡುವವರು, ಮನೆ ಬದಲಿಸುವವರು, ಊರು ಬಿಟ್ಟು ಬರುವವರು, ನವದಂಪತಿಗಳು, ನವ ವಿಚ್ಛೇದಿತರು- ಹೀಗೆ ತರಹೇವಾರಿ ವ್ಯಕ್ತಿಗಳಿಗೆ ನಾನು ಹೇಳುವುದು ಇದೇ ಮಾತನ್ನು. ಹೊಸತನ ರೂಢಿಯಾಗುವವರೆಗೆ ಗಟ್ಟಿಯಾಗಿರಿ. ನಿಂತಲ್ಲೇ ನಿಂತು ಕೊಳೆತುಹೋಗುವುದಕ್ಕಿಂತ, ಅಪರಿಚಿತ ದಾರಿಯಲ್ಲಿ ನಡೆಯುವುದು ಒಳ್ಳೆಯದು. ಅಪರಿಚಿತತೆ ನಮಗೆ ಬದುಕುವ ದಾರಿ ಕಲಿಸುತ್ತದೆ. ಸವಾಲುಗಳನ್ನು ಎದುರಿಸುವುದನ್ನು ಕಲಿಸುತ್ತದೆ. ನಮ್ಮ ಮೇಲೆ ನಾವು ಅವಲಂಬಿತರಾಗುವ ಅದ್ಭುತ ಕಲೆಯನ್ನು ಕಲಿಸುತ್ತದೆ. ಹೊಸ ದಾರಿಯಲ್ಲಿ ಶತ್ರುಗಳಷ್ಟೇ ಅಲ್ಲ, ಮಿತ್ರರೂ ಸಿಗುತ್ತಾರೆ. ಸಮಸ್ಯೆಗಳಷ್ಟೇ ಅಲ್ಲ, ಅವಕಾಶಗಳೂ ದಕ್ಕುತ್ತವೆ. ಎಲ್ಲಕ್ಕಿಂತ ಮುಖ್ಯ, ನಿಮಗೆ ನೀವೇ ಮಿತ್ರರಾಗುವುದು ಹೇಗೆಂಬುದು ಗೊತ್ತಾಗುತ್ತದೆ. ಆದ್ದರಿಂದ, ಹೊಸ ದಾರಿ ತುಳಿಯಲು ಹಿಂಜರಿಯದಿರಿ. ಅದಕ್ಕೂ ಮುನ್ನ ಸಾಕಷ್ಟು ಯೋಚಿಸಿ, ವಿಚಾರಿಸಿ, ಸಲಹೆ ಪಡೆಯಿರಿ. ಆದರೆ, ನಿರ್ಧಾರ ಮಾತ್ರ ನಿಮ್ಮದೇ. ಗೆದ್ದರೂ, ಸೋತರೂ ಅದಕ್ಕೆ ನೀವೇ ಜವಾಬ್ದಾರರು. ಇತರರ ಸಲಹೆಗಳೇನಿದ್ದರೂ ಬೀದಿ ದೀಪಗಳಂತೆ. ಅವು ನಿಮಗೆ ದಾರಿ ತೋರಬಹುದು. ಆದರೆ, ಜೊತೆಗೆ ಬರಲಾರವು. ಅವುಗಳ ಬೆಳಕಿನಲ್ಲಿ, ನಿಮ್ಮ ಹೆಜ್ಜೆಗಳಲ್ಲಿ ನಿಮ್ಮ ದಾರಿ ಸಾಗಬೇಕು. ನಡೆಯುವವರು ಮಾತ್ರ ನೀವೇ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಸವಾಲು ಎದುರಿಸಿ.
ಏಕೆಂದರೆ, ಅಂಥ ಸವಾಲುಗಳನ್ನು ಎದುರಿಸಿ ಒಂಟಿಯಾಗಿ ಹೆಜ್ಜೆ ಹಾಕಿದ ಗಟ್ಟಿ ಅನುಭವ ನನ್ನದು. ಇವತ್ತು ಹಿಂತಿರುಗಿ ನೋಡಿದಾಗ, ನಡೆದ ದಾರಿಯ ದೋಷಗಳು, ಅವಕಾಶಗಳು, ಕಳೆದುಕೊಂಡಿದ್ದು, ದಕ್ಕಿದ್ದು ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿವೆ. ಎಲ್ಲಾ ಲೆಕ್ಕಾಚಾರ ಹಾಕಿದಾಗ, ಪಡೆದುಕೊಂಡಿದ್ದೇ ಹೆಚ್ಚು ಎಂಬ ಅಂಶ ಸಮಾಧಾನ ನೀಡುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ನನ್ನನ್ನು ನಾನು ಹೆಚ್ಚು ತಿಳಿದುಕೊಂಡೆ. ನನಗೆ ನಾನೇ ಉತ್ತಮ ಗೆಳೆಯನಾದೆ. ನನ್ನೊಳಗಿನ ನಾನು ನನ್ನ ಅತ್ಯುತ್ತಮ ಸಂಗಾತಿಯಾಯಿತು. ಯೋಗ್ಯ ಮಿತ್ರರು ದಕ್ಕಿದರು. ಶತ್ರುಗಳನ್ನು ನಿಖರವಾಗಿ ಗುರುತಿಸುವ ಕಲೆ ದಕ್ಕಿತು. ಹೊಸ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಬಲಗೊಂಡಿತು.
ಎಲ್ಲಿಯೋ ಓದಿದ್ದ ಮಾತೊಂದು ನೆನಪಾಗುತ್ತಿದೆ: ನಡೆದಷ್ಟೂ ದಾರಿಯಿದೆ, ಪಡೆದಷ್ಟೂ ಭಾಗ್ಯವಿದೆ. ಆ ಮಾತು ಸತ್ಯ ಎಂಬುದು ಪದೆ ಪದೆ ಅರಿವಾಗುತ್ತಿದೆ.
- ಚಾಮರಾಜ ಸವಡಿ
Subscribe to:
Post Comments (Atom)
9 comments:
"ನಿಂತಲ್ಲೇ ನಿಂತು ಕೊಳೆತುಹೋಗುವುದಕ್ಕಿಂತ, ಅಪರಿಚಿತ ದಾರಿಯಲ್ಲಿ ನಡೆಯುವುದು ಒಳ್ಳೆಯದು."
ತುಂಬಾ ಇಷ್ಟವಾಯಿತು. ಎಲ್ಲೋ ನನ್ನ ಅನುಭವವನ್ನೇ ದಾಖಲಿಸುತ್ತೀದ್ದೀರೆನೋ ಅನಿಸಿತು. ಧನ್ಯವಾದಗಳು.
ಸರ್,
ತಾವು ಸಂಪದದಿಂದ ದೂರ ನಡೆದದ್ದೇಕೆ? ಕುತೂಹಲಕ್ಕಾಗಿಯಷ್ಟೆ.
ಸರ್ ನಿಮ್ಮ email id ಕೊಡಿ ಸಾರಿ ನನಗೆ ಗೊತಾಗ್ತಾ ಇಲ್ಲ. ನೀವು ಕೇಳಿರುವ ಪ್ರಶ್ನೆ ಗೇ ಈಪತ್ರದ ಮೂಲಕ ಉತ್ತರಿಸುವೆ..
ನನ್ನ ವಿಳಾಸ santasajoy@gmail.com ಅಥವಾ lalitha_gvjaya@yahoo.co.in
-ವಾಸುದೇವ ಜಯಶ್ರೀ
ಬದಲಾವಣೆಯೇ ಜೀವನದ ಅಸ್ತಿತ್ವದ ಕುರುಹು..ಆ ಬದಲಾವಣೆಯಿಂದ ಅಭದ್ರತೆಗೆ ಒಳಗಾಗುವ ಎಲ್ಲರಿಗೂ ಕಿವಿಮಾತಿನಂತೆ, ಹಾರೈಕೆಯಂತೆ ಮೂಡಿಬಂದಿರುವ ಈ ಲೇಖನ ಬಹಳ ಅರ್ಥಪೂರ್ಣವಾಗಿದೆ..
"ನಿಂತಲ್ಲೇ ನಿಂತು ಕೊಳೆತುಹೋಗುವುದಕ್ಕಿಂತ,ಅಪರಿಚಿತ ದಾರಿಯಲ್ಲಿ ನಡೆಯುವುದು ಒಳ್ಳೆಯದು" ಸಾಲು ಬಹಳವೇ ಮನಮುಟ್ಟಿತು.
ಲೇಖನ ಇಷ್ಟಪಟ್ಟ ಬಾಲು ಸಾಯಿಮನೆ, ಜಯಶ್ರೀ ಮತ್ತು ಸುಹಾಸ್ ಅವರಿಗೆ ಕೃತಜ್ಞತೆಗಳು.
ಚಿತ್ರಾ ಅವರಿಗೆ:- ಸಂಪದದಿಂದ ದೂರ ನಡೆದಿಲ್ಲ, ನನ್ನ ಬ್ಲಾಗ್ಗೆ ಹತ್ತಿರವಾಗಿದ್ದೇನೆ, ಅಷ್ಟೇ.
ಸರ್,
ಪ್ರಶ್ನೆ ಕೇಳಿದ್ದು ನಾನು. ಚಿತ್ರ ಅಲ್ಲ.
ಸಂಪದಲ್ಲಿದ್ದಾಗ ಬ್ಲಾಗಿನಿಂದ ದೂರವಿರಲಿಲ್ಲವಲ್ಲ ಈಗೇಕೆ ದೂರ? ವಿವಾದ ಹುಟ್ಟು ಹಾಕಲಲ್ಲ.
ಕ್ಷಮಿಸಿ ಪ್ರಸ್ಕಾ ಅವರೇ,
ಬ್ಲಾಗ್ಗೆ ಹೆಚ್ಚು ಹತ್ತಿರವಾಗಿದ್ದೇನೆ. ಏಕೆಂದರೆ, ಸಂಪದದಲ್ಲಿ ಮುಂಚಿನ ವಾತಾವರಣ ಇಲ್ಲ ಎಂದು ತೀವ್ರವಾಗಿ ಅನಿಸಿದ್ದರಿಂದ. ಇದು ನನ್ನ ವೈಯಕ್ತಿಕ ಅನಿಸಿಕೆ. ಇಷ್ಟು ಸಾಕೆನಿಸುತ್ತದೆ, ಅಲ್ವೆ?
ಬೇಜಾನ್ ಆಯ್ತು, ಧನ್ಯ
Post a Comment