ಬಿಸಿಲೆಂಬ ನೆನಪ ಸಂಜೀವಿನಿ

10 Apr 2010

ಕಣ್ಣು ಕುಕ್ಕುವಂಥ ಬಿಸಿಲ ಪ್ರದೇಶದಲ್ಲಿ ಹುಟ್ಟಿ ಬೆಳೆದವನು ನಾನು. ಬಿಸಿಲು ನನಗೆ ಚೇತೋಹಾರಿ. ಎಷ್ಟೇ ಸೆಕೆ ಕಾಡಿದರೂ, ಮನಸ್ಸು ನನ್ನೂರನ್ನು ನೆನಪಿಸಿಕೊಳ್ಳುತ್ತಿರುತ್ತದೆ. ಸರಾಸರಿ ೪೨ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಬೇಸಿಗೆ ಕಳೆದ ನನಗೆ ಇವತ್ತಿಗೂ ಬಿಸಿಲು ಆಪ್ಯಾಯಮಾನ. 

ಬಿಸಿಲಿನಲ್ಲಿ ಅಷ್ಟೊಂದು ಓಡಾಡಿದರೂ ಆರಾಮವಾಗಿದ್ದೀಯಲ್ಲ ಮಾರಾಯ ಎಂದು ಗೆಳೆಯರು ಅಚ್ಚರಿಪಡುತ್ತಾರೆ. ಅದೇ ಬಿಸಿಲೂರಿನಿಂದ ಬಂದವಳಾಗಿದ್ದರೂ, ನನ್ನ ಹೆಂಡತಿಗೆ ಬಿಸಿಲು ಎಂದರೆ ಅಲರ್ಜಿ. ಆದರೆ, ನನಗೆ ಮಾತ್ರ ಬಿಸಿಲು ಎಂದರೆ ನನ್ನೂರು. ನಾನು ಹುಟ್ಟಿ ಬೆಳೆದ ಪರಿಸರ. ನನ್ನ ಬಾಲ್ಯ. ನನ್ನ ಪ್ರಾಥಮಿಕ ಕನಸುಗಳು. ನನ್ನ ಶಾಶ್ವತ ಕನವರಿಕೆ.

ಸಾವಿರ ಸಾವಿರ ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಬರ, ಬಡತನ, ಬವಣೆ, ಭಯವಷ್ಟೇ ಅಲ್ಲ, ನನ್ನ ಬದುಕು ಕೂಡ ಬಿಸಿಲ ಪ್ರದೇಶದಲ್ಲಿಯೇ ಅರಳಿದೆ. ಉರಿಯುವ ಸೂರ್ಯನೊಂದಿಗೆ, ಕಡು ಸೆಕೆಯೊಂದಿಗೆ ಶುರುವಾಗುವ ಬೇಸಿಗೆಯ ದಿನ, ಅದೇ ಕಡು ಸೆಕೆಯೊಂದಿಗೆ ಸಂಜೆಯಾಗಿ ಬದಲಾಗುತ್ತಿತ್ತು. ಕರೆಂಟಿಲ್ಲದ ರಾತ್ರಿಯ ಕಗ್ಗತ್ತಲೆಯಲ್ಲಿ, ಬೆಳಕಿನುಂಡೆಯಂಥ ನಕ್ಷತ್ರಗಳ ಆಗಸ. ಮಣ್ಣಿನ ಮನೆಯ ಮಾಳಿಗೆಯ ಮೇಲೆ ಹಳೆಯ ಜಮಖಾನಾ ಹಾಸಿಕೊಂಡು ಆಕಾಶಕ್ಕೆ ಮುಖವೊಡ್ಡಿ ಕಂಡ ಸಾವಿರ ಸಾವಿರ ಕನಸುಗಳು ಇವತ್ತಿಗೂ ನನ್ನ ಜೀವನದುಸಿರು. ಆ ಬಿಸಿಲ ಹೇಗೆ ಮರೆಯಲಿ?

ನನ್ನ ಮೊದಲ ತೀವ್ರ ನಿರಾಶೆ, ನೋವುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಹತ್ತನೆಯ ತರಗತಿಯ ಪರೀಕ್ಷೆ ಬರೆಯಲು ಮೊದಲ ಬಾರಿ ಹದಿನೈದು ದಿನಕ್ಕಿಂತ ಹೆಚ್ಚು ಕಾಲ ತಂಗಿದ್ದ ಪಟ್ಟಣ ಕೊಪ್ಪಳ ನನ್ನಲ್ಲಿ ಉಕ್ಕಿಸಿದ್ದ ದಿಗ್ಭ್ರಮೆ, ಕನಸು, ಕನವರಿಕೆಯನ್ನು ನಾನು ಪದೆ ಪದೆ ಅನುಭವಿಸಿದ್ದು ನನ್ನೂರಿನ ಬಿಸಿಲ ದಿನದ ರಾತ್ರಿಗಳಲ್ಲಿ. ಪಿಯುಸಿ ಓದಲು ದೂರದ ನರೇಗಲ್ಲಿಗೆ ಹೋಗಬೇಕೆಂಬ ಕಳವಳವನ್ನೂ ಅಲ್ಲಿಯೇ ಅನುಭವಿಸಿದ್ದು. ಹುಟ್ಟಿದಾಗಿನಿಂದ ಊರು ಬಿಟ್ಟು ಹೋಗಿರದ ನನಗೆ, ನರೇಗಲ್ಲಿಗೆ ಹೋಗುವಾಗ, ಹೋದ ನಂತರ ಆದ ತಳಮಳ ಅಷ್ಟಿಷ್ಟಲ್ಲ. 

ಇಂಥ ಹಲವಾರು ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ನಮ್ಮ ಹೊಲದಲ್ಲಿದ್ದ ಎರಡು ಜಾತಿಯ ಮಾವಿನ ಮರಗಳು, ಅವುಗಳ ಪರಿಮಳ, ಹಲ್ಲು ಚುಳಿಯುವಂತೆ ಮಾಡುತ್ತಿದ್ದ ಹುಳಿ ರುಚಿ, ಮಾವಿನ ಕಾಯಿಗಳನ್ನು ಹಣ್ಣಾಗಿಸಲು ಹಾಕಿದ್ದ ಬತ್ತದ ಹುಲ್ಲಿನ ವಿಚಿತ್ರ ಘಮ, ಕುಡಿಯುವ ನೀರು ತರಲು ಊರಾಚೆಯ ಕೆರೆಗೆ ಹೋಗುತ್ತಿದ್ದುದು, ಬತ್ತಿದ ದೊಡ್ಡ ಹಳ್ಳದ ಉಸುಕಿನ ಮಧ್ಯೆ ಕೂತು ಭವಿಷ್ಯದ ಕನಸುಗಳನ್ನು ಮಾತಾಗಿಸಿದ್ದು, ಕಾಡುತ್ತಿದ್ದ ಅಪಾರ ಹಸಿವು, ಏನು ಸಿಕ್ಕರೂ ಓದುವ ತೀವ್ರ ತುಡಿತ, ಕಾಣದ ಜಗತ್ತಿನೆಡೆಗಿನ ಬೆರಗು, ಪಟ್ಟಣಗಳು ಹುಟ್ಟಿಸುತ್ತಿದ್ದ ಕೀಳರಿಮೆ, ಅರಳುತ್ತಿದ್ದ ಪ್ರಾಯ, ಹೇಳತೀರದ ದುಗುಡ- ಇಂಥ ನೂರಾರು ಭಾವನೆಗಳಿಗೆ ಬಿಸಿಲು ಸಾಕ್ಷಿಯಾಗಿದೆ. 

ಇವತ್ತಿಗೂ ಶಿವರಾತ್ರಿ ಕಳೆದ ನಂತರ, ಮನಸ್ಸಿಗೆ ಸಣ್ಣಗೆ ದುಗುಡ ಕವಿಯಲಾರಂಭಿಸುತ್ತದೆ. ಬಿಸಿಲು ಬಲಿಯುತ್ತಿದ್ದಂತೆ ಊರಿನ ಹಂಬಲ, ಆಗಿನ ದಿನಗಳ ನೆನಪುಗಳು ಉಕ್ಕತೊಡಗುತ್ತವೆ. ಪತ್ರಿಕೆ ಓದುವಾಗ, ಬಿಸಿಲಿನ ಬಗ್ಗೆ ಬಂದ ವರದಿಗಳು ಊರನ್ನು ನೆನಪಿಸುತ್ತವೆ. ಅಲ್ಲಿ, ನನ್ನಂಥ ಇನ್ಯಾರದೋ ಪಾಲಿಗೆ ಈ ಬಿರು ಬಿಸಿಲು ಸಂಜೀವಿನಿಯಾಗುತ್ತಿದೆಯೇನೋ ಎಂಬ ಕುತೂಹಲ. ರಾತ್ರಿಯಾಗುತ್ತಿದ್ದಂತೆ, ಮಣ್ಣಿನ ಮನೆಗಳ ಮಾಳಿಗೆಗಳ ಮೇಲೆ ವಲಸೆ ಹೋಗುತ್ತಿದ್ದ ಜನ, ಅವರ ಕಷ್ಟಸುಖದ ಮಾತುಕತೆ, ಕಾಣುತ್ತಿದ್ದ ಕನಸು, ಮೇಲೆ ಕಪ್ಪಡರಿರುವ ಆಗಸದ ಚಾದರದೊಳಗಿಂದ ಕಿಂಡಿ ಕೊರೆದು ಇಣುಕಿ ನೋಡುವ ನಕ್ಷತ್ರ ಕಂಗಳು, ಅಲುಗದೇ ನಿಂತ ಮರದ ಎಲೆಗಳು, ಅಪರಾತ್ರಿ ಎಚ್ಚರವಾದಾಗ ತಾಕುತ್ತಿದ್ದ ನೀರವತೆ ಮತ್ತೆ ಮತ್ತೆ ನನಪಾಗುತ್ತವೆ. 

ಎಷ್ಟೋ ಸಾರಿ ರಾತ್ರಿ ಯೋಚಿಸುತ್ತ ಅಡ್ಡಾಗಿದ್ದವನಿಗೆ ಜೆಟ್‌ ವಿಮಾನಗಳ ಮಿಣುಕು ದೀಪಗಳು ಅಪಾರ ಅಚ್ಚರಿ ಹುಟ್ಟಿಸಿದ್ದಿದೆ. ನನ್ನೂರಾಚೆಯ ಜಗತ್ತು ನನಗೆ ತಿಳಿದಿರುವುದಕ್ಕಿಂತ ವಿಶಾಲವಾಗಿದೆ ಎಂಬ ಅಸ್ಪಷ್ಟ ಭಾವನೆಯನ್ನು ಬೆಳೆಸಿದ್ದಿದೆ. ಆ ಜಗತ್ತಿನೆಡೆಗೆ ನಾನು ಹೋಗಲೇಬೇಕಾಗುತ್ತದೆ ಎಂಬ ಅಸ್ಪಷ್ಟ ಅನಿಸಿಕೆ ದಿಗಿಲು ಮೂಡಿಸಿದ್ದಿದೆ. ಅಲ್ಲಿಯ ಜನ ಹೇಗೋ, ಅವರ ಬದುಕಿನ ರೀತಿ-ನೀತಿಗಳೇನೋ, ನಾನು ಅವನ್ನೆಲ್ಲ ಹೇಗೆ ಕಲಿತೇನು ಎಂಬ ಕಳವಳ ಉಕ್ಕಿಸಿದ್ದಿದೆ. ರಾತ್ರಿಯ ಕಡು ನೀರವತೆಯಲ್ಲಿ ಒಬ್ಬನೇ ಎದ್ದು ಕೂತು, ಜೋರು ನಿದ್ದೆಯಲ್ಲಿರುವವರನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಸುತ್ತಲೂ ಹಬ್ಬಿದ ಕತ್ತಲನ್ನು ಮೂದಲಿಸುವಂತೆ ಬೆಳಗುವ ನಕ್ಷತ್ರಗಳನ್ನು ಕಂಡು ಮೋಹಗೊಂಡಿದ್ದೇನೆ. ಸಾವಿರಾರು ಸುನೀತ ಭಾವನೆಗಳು ಆ ಕತ್ತಲಲ್ಲಿ ಮೂಡಿವೆ. ನಿರಾಶೆಗಳಿಗೆ ಸಮಾಧಾನ ದೊರೆತಿದೆ. 

ರಾತ್ರಿ ತುಂಬ ಹೊತ್ತು ಒಬ್ಬನೇ ಕೂತು ಓದುವ, ಬರೆಯುವ ಈ ದಿನಗಳಲ್ಲಿ ಬಿಸಿಲು ಮತ್ತೆ ಮತ್ತೆ ಕಾಡುತ್ತದೆ. ನನ್ನೂರು ಅಳವಂಡಿ ಮತ್ತೆ ಮತ್ತೆ ನೆನಪಾಗುತ್ತದೆ. ಎಲ್ಲರೂ ಜರಿಯುವ, ಶಪಿಸುವ, ಭಯಪಡುವ ಈ ಬಿರುಬಿಸಿಲು ಅದ್ಹೇಗೆ ನನ್ನ ಪಾಲಿಗೆ ಚೇತೋಹಾರಿಯಾಗಿದೆ ಎಂದು ನೆನೆನೆನೆದು ಅಚ್ಚರಿಪಡುತ್ತೇನೆ. ಮೆತ್ತಗೇ ಗೇಟು ತೆರೆದು, ರಸ್ತೆ ಮಧ್ಯೆ ನಿಂತು, ಆಗಸ ದಿಟ್ಟಿಸಿದರೆ, ನಗರದ ರಾತ್ರಿ ಬೆಳಕಿನ ರಭಸಕ್ಕೆ ನಕ್ಷತ್ರಗಳು ಮಂಕಾಗಿರುವುದು ರಾಚುತ್ತದೆ. 

ಅದನ್ನು ನೋಡುತ್ತಿದ್ದಂತೆ, ನನ್ನ ಮನಸ್ಸೂ ಏಕೋ ಮಂಕಾಗುತ್ತದೆ. 

- ಚಾಮರಾಜ ಸವಡಿ

4 comments:

udaal huduga said...

ಚಾಮರಾಜ ಸವಡಿ ಅವರೇ ತುಂಬಾ ಚೆನ್ನಾಗಿ ಬರೆದಿದ್ದೀರ. ನನಗೂ ನನ್ನೂರು ನೆನಪಿಗೆ ಬಂತು. ಮತ್ತೆ ಮತ್ತೆ ಸಿಗುವುದೇ ನಮಗೀ ಭಾಗ್ಯ?

Chamaraj Savadi said...

ಊರಿನ ನೆನಪುಗಳನ್ನು ಮತ್ತೆ ಮತ್ತೆ ಸವಿಯುವುದೇ ನಮಗಿರುವ ಭಾಗ್ಯ.

Pradeep said...

ನಮಸ್ಕಾರ,
ಹೌದು, ಮಾಳಿಗೆಯ ಮೇಲೆ ಮಲಗಿ ನಕ್ಷತ್ರಗಳನ್ನು ನೋಡುತ್ತಾ, ಚಂದ್ರನ ಮೇಲಿರುವ ಕಲೆಗಳು ನಿಜವಾಗಿಯೂ ಏನಿರಬಹುದು ಎಂದು ಅಚ್ಚರಿಗೊಳುತ್ತಿದ್ದ , ಆ ದಿನಗಳನ್ನು ನೆನೆಯುವುದೇ
ಈಗ ನಮಗಿರುವ ಭಾಗ್ಯ..
ಮತ್ತೆ ಊರ ನೆನಪಾಯಿತು, ಆ ದಿನಗಳು ಮತ್ತೆ ಕಣ್ಮುಂದೆ ಸುಳಿದುಹೋದವು ....

ಧನ್ಯವಾದ
ಪ್ರದೀಪ ಬಡಿಗೇರ

Chamaraj Savadi said...

ನಿಜ ಪ್ರದೀಪ್‌. ಆ ದಿನಗಳು ಇವತ್ತಿಗೂ ಸ್ಫೂರ್ತಿಯ ಒರತೆಗಳು. ಮೊಗೆದಷ್ಟೂ ಉಕ್ಕುತ್ತವೆ.