ಬದುಕೆಂಬ ಅಚ್ಚರಿಗಳ ಹುತ್ತ

12 Apr 2010

ಇದ್ಯಾವತ್ತೂ ಬದಲಾಗಲ್ಲ ಅಂತ ತೀವ್ರವಾಗಿ ಅನಿಸತೊಡಗಿದಾಗಲೇ ನಿಜವಾದ ಬದಲಾವಣೆ ಶುರುವಾಗತೊಡಗುತ್ತದೆ.

ಇದು ನನ್ನ ಹಳೆಯ ಅನುಭವ.  ಎಲ್ಲ ನಿಂತಂತೆ, ಏನೂ ಬದಲಾಗುತ್ತಿಲ್ಲ ಎಂದು ಅನಿಸತೊಡಗಿದಾಗ, ಎಲ್ಲೋ ಬದಲಾವಣೆ ಮಿಸುಕತೊಡಗಿರುತ್ತದೆ. ತೀವ್ರ ಕತ್ತಲಿನ ನಡುವೆ ಬೆಳಕು ಮೊಳಕೆಯೊಡೆದಂತೆ, ಬಿಕ್ಕುವಿಕೆ ಮಧ್ಯೆ ನೆಮ್ಮದಿ ಹುಟ್ಟಿದಂತೆ, ಬಿರುಬಿಸಿಲಿನ ಮಧ್ಯೆ ಕಾರ್ಮೋಡವೊಂದು ಕಣ್ತೆರೆದಂತೆ ಭರವಸೆ ಕಾಣಲು ಶುರುವಾಗುತ್ತದೆ.

ಇವತ್ತು ತುಂಬ ಸೆಕೆಯಿತ್ತು. ಧಗೆ ಎಷ್ಟು ತೀವ್ರವಾಗಿತ್ತೆಂದರೆ, ಮಳೆ ಬರಬಹುದು ಎಂಬ ಅನಿಸಿಕೆ ಬಲಗೊಳ್ಳುವಷ್ಟು. ಯಂತ್ರದಂತೆ ಹವಾಮಾನ ಕೂಡ ಖಚಿತ ಮಾನದಂಡಗಳನ್ನು ಹೊಂದಿರಬಹುದು ಅನಿಸುತ್ತದೆ. ಸಂಜೆ ಹೊತ್ತಿಗೆ ಒಂದೆರಡು ವರಸೆ ಮಳೆ ಬಂದೇಬಿಡ್ತು. ಸೆಕೆಯನ್ನು ಒಂದಿಷ್ಟು ಕಡಿಮೆ ಮಾಡಿತು.

ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ ಕರೆಂಟ್‌ ಕಣ್ಣಾಮುಚ್ಚಾಲೆಯಾಡುತ್ತಿದ್ದ ಈ ದಿನಗಳಲ್ಲಿ, ವಿದ್ಯುತ್‌ ಕೈಕೊಟ್ಟಾಗ ಮೊದಮೊದಲು ತುಂಬ ಅಸಮಾಧಾನವಾಗುತ್ತಿತ್ತು. ಕ್ರಮೇಣ, ಇದೇ ಸಮಯವನ್ನು ಓದಲು ಬಳಸಲು ಶುರು ಮಾಡಿದೆ. ಕರೆಂಟ್‌ ಇರುವವರೆಗೆ ಕಂಪ್ಯೂಟರ್‌  ಮೇಲೆ ಕೆಲಸ. ಕರೆಂಟ್‌ ಹೋದಕೂಡಲೇ ಓದಲು ಶುರು. ಎಷ್ಟೋ ಸಾರಿ, ಓದಿನ ಗಮ್ಮತ್ತಿನ ನಡುವೆ, ಕರೆಂಟ್‌ ಬಂದರೂ ವಿಶೇಷ ಅನಿಸುತ್ತಿರಲಿಲ್ಲ. ಹೀಗಾಗಿ, ಕರೆಂಟ್‌ ಹೋದಷ್ಟೂ ಓದಲು ಹೆಚ್ಚು ಸಮಯ ಸಿಗುವಂತಾಗಿದೆ. 

ರಾತ್ರಿಯ ನಿಶ್ಯಬ್ದದಲ್ಲಿ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ. ಓದಿನ ಮಧ್ಯೆ, ಹೊಸ ಬೆಳಕೊಂದು ಮಿಂಚುತ್ತದೆ. ನಿರಾಶೆಯ ಮಧ್ಯೆ ಹೊಸ ಭರವಸೆ. ಬಹುಶಃ ಏನೂ ಬದಲಾಗಲಿಕ್ಕಿಲ್ಲ ಎಂಬ ಅನಿಸಿಕೆಯ ತೀವ್ರತೆಯ ಮಧ್ಯೆಯೇ ಎಂಥದೋ ಬದಲಾವಣೆಯ ಸುಳಿವು. ಹೊಸ ಓದಿನ ಖುಷಿಯ ಮಧ್ಯೆ ಓದಿದ ಪುಸ್ತಕಗಳ ಭಾವಪ್ರವಾಹ. ತಂತ್ರಜ್ಞಾನದ ಸೊಗಸಿನ ನಡುವೆ ಬಾಲ್ಯದಲ್ಲಿ ಆಡಿದ ಮಣ್ಣಿನ ಆಟಿಕೆಗಳ ನೆನಪು.

ಬದುಕು ಹೀಗೇ ಸಾಗುತ್ತಿದೆ. ಪ್ರತಿಯೊಂದು ಬದಲಾವಣೆಯೂ, ಬೆಳವಣಿಗೆಯೂ ಹಳೆಯ ಬೇರುಗಳೊಂದಿಗೆ ನಂಟು ಬೆಸೆಯುತ್ತದೆ. ಹಳೆಯದರೊಂದಿಗೆ ಹೋಲಿಸಿ ನೋಡುತ್ತ ಹೊಸತನವನ್ನು ರೂಢಿಸಿಕೊಳ್ಳುತ್ತದೆ. ಎರಡರ ನಡುವೆ ಸಮನ್ವಯ ಆಯಿತೆನ್ನುವದರೊಳಗೆ ಮತ್ಯಾವುದೋ ಹೊಸ ಬೆಳವಣಿಗೆ. ಬದಲಾವಣೆ. 

ಎಫ್‌.ಎಂ. ಉದ್ಘೋಷಕರ ರಭಸದ ಮಾತುಗಳನ್ನು ಕೇಳುವಾಗ ಕೀರ್ತನಕಾರರ ಮಾತಿನ ಓಘದ ನೆನಪು. ಫ್ರಿಜ್‌ನ ತಣ್ಣೀರು ಸವಿಯುವಾಗ, ಮಡಕೆ ನೀರಿನ ತಂಪಿನ ತೀವ್ರತೆ. ಎಲ್ಲಿಯದೋ ನೆನಪುಗಳಿಗೆ ಇನ್ನೆಲ್ಲಿಯದೋ ಭಾವನೆಗಳೊಂದಿಗೆ ತಳುಕು. 

ಯಾವುದೋ ನೆನಪಿಗೆ ಇನ್ಯಾವುದೋ ತಂತು ಮೀಟುವುದು ಬದುಕಿನ ಚೋದ್ಯಗಳಲ್ಲೊಂದು. ಹುಡುಕುತ್ತ ಹೋದರೆ, ಪ್ರತಿಯೊಂದಕ್ಕೂ ಇನ್ನೊಂದರ ನಂಟಿದೆ ಅನಿಸುತ್ತದೆ. ಯಾವುದೂ ಹೊಸತಲ್ಲ, ಎಲ್ಲವೂ ಒಮ್ಮೆ ಕಂಡುಂಡ ಸಂಗತಿಗಳ ಮುಂದುವರಿಕೆ ಎಂದು ಭಾಸವಾಗುತ್ತದೆ. ಅಲ್ಲೆಲ್ಲೋ ಆಗಸದೆತ್ತರದಲ್ಲಿರುವ ಹೊಸ ಮೊಳಕೆಗೆ ಭೂಮಿಯಾಳದ ಬೇರಿನೊಂದಿಗೆ ನಂಟಿರುವಂತೆ, ಪ್ರತಿಯೊಂದಕ್ಕೂ ಯಾವುದೋ ನಂಟು. ಇನ್ಯಾವುದೋ ಪ್ರೇರಣೆ.

ನಿಜ. ಬದುಕು ಅಚ್ಚರಿಗಳ ಮೊತ್ತ. ಸಾವಿರ ಸಾವಿರ ನೆನಪುಗಳ ಹುತ್ತ.

- ಚಾಮರಾಜ ಸವಡಿ

5 comments:

ಜಲನಯನ said...

ಬಸವರಾಜ್ ನಿಮ್ಮ ಬ್ಲಾಗಿಗೆ ಮೊದಲ ಭೇಟಿ....ನಿಮ್ಮ ಲೇಖನ ನೋಡಿ ಅನಿಸ್ತು ..ಹೌದಲ್ಲ ಎಷ್ಟು ದಿನ ಆಯ್ತು ಓದಬೇಕು ಅಂತಲೇ ಕೂತು?? ನಿಜ ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ಓದೋದೇನು ಬರೆಯೋದೂ ಕಡಿಮೆಯೇ...ಬರೀ ಕುಟ್ಟುವುದು....ಕೀಲಿ ಮನಣೆಯನ್ನ ...ಒಂದು ರೀತಿಯಲ್ಲಿ ಪ್ರಕಾಶಕರು ನಮ್ಮ ವಿದ್ಯುತ್ ಇಲಾಖೆಗೆ ಋಣಿಗಳಾಗಿರಬೇಕು....

Chamaraj Savadi said...

ಜಲನಯನ ಅವರೇ, ಬಹುತೇಕ ಜನರ ಭಾವನೆಗಳು ಒಂದೇ ಆಗಿರುತ್ತವೆ ಎಂಬುದು ನನ್ನ ಅನುಭವ. ಕೆಲವರು ಹೇಳಿಕೊಳ್ಳುತ್ತಾರೆ. ಉಳಿದವರು ಸುಮ್ಮನಿರುತ್ತಾರೆ. ಅನಿಸಿದ್ದನ್ನು ಆಗಾಗ ಬರೆಯುತ್ತಿದ್ದರೆ, ಮುಂದೆ ಅದೇ ಒಂಥರಾ ಫೋಟೊ ಆಲ್ಬಮ್‌ ಆಗಿಬಿಡುತ್ತದೆ. ನಮ್ಮನ್ನು ನಾವೇ ನೋಡಿಕೊಳ್ಳಬಹುದು ಎಂಬ ಆಸೆ. ಹೀಗಾಗಿ ಬರವಣಿಗೆ. ಅದರಿಂದ ಬದುಕು.

ಅಂದ್ಹಾಗೆ, ನನ್ನ ಹೆಸರು ಚಾಮರಾಜ.

Guruprasad Kurtkoti said...

ಲೇಖನ ಬಹಳ ಚೆನ್ನಾಗಿದೆ. ಅದರಲ್ಲೂ ತಮ್ಮ ಬರವಣಿಗೆಯ ಶೈಲಿ ನನಗೆ ತುಂಬಾ ಇಷ್ಟವಾಯ್ತು!

Chamaraj Savadi said...

ಥ್ಯಾಂಕ್ಸ್‌ ಗುರುಪ್ರಸಾದ್‌ ಅವರೇ,
ನೆನಪುಗಳ ಕೆದಕುವಿಕೆಯಲ್ಲಿ ಹಲವಾರು ಹೊಸ ಮಿತ್ರರೂ ದಕ್ಕಿದ್ದಾರೆ. ಲಾಭವೇ ಲಾಭ.

manju said...

ನನ್ನ ಮನದ ಮಾತುಗಳನ್ನು ನೀವು ಅಕ್ಷರ ರೂಪಕ್ಕಿಳಿಸಿದ್ದೀರಿ ಚಾಮರಾಜರೆ, ಬದುಕೇ ಹೀಗೆ, ಏನೂ ಸಾಧ್ಯವಿಲ್ಲ ಅಂದುಕೊಂಡು ಕದ ಮುಚ್ಚುವ ಸಮಯಕ್ಕೆ ಫಳಾರನೆ ಸಿಡಿಲು ಹೊಡೆದಂತೆ, ಮತ್ತಿನ್ನೇನೋ ಆಗಿ ಬಿಡುತ್ತದೆ. ಎಲ್ಲೋ ಇದ್ದವರನ್ನು ಮತ್ತೆಲ್ಲಿಗೋ ಕೊಂಡೊಯ್ಯುತ್ತದೆ. ಬದುಕೊಂದು ಮಾಯೆ....