ವೃತ್ತದೊಳಗಿನ ಬದುಕು ಮತ್ತು ಲೊಳಲೊಟ್ಟೆ

24 Jul 2010

13 ಪ್ರತಿಕ್ರಿಯೆ
ತುಂಬ ದಿನಗಳಿಂದ ಏನನ್ನೂ ಬರೆದಿಲ್ಲ. ಪ್ರೋಗ್ರಾಂಗಳಿಗೆ ಸ್ಕ್ರಿಪ್ಟ್‌ಗಳನ್ನು ಬರೆಯುವ ವೃತ್ತಿ ಕೆಲಸ ಹೊರತುಪಡಿಸಿ, ಗೂಗಲ್‌ ಬಝ್‌ನಲ್ಲಿ ಒಂದಿಷ್ಟು ಹರಟೆ ಹೊಡೆದಿದ್ದು ಬಿಟ್ಟರೆ ಮತ್ತೇನನ್ನೂ ಬರೆದಿರಲಿಲ್ಲ. ಬರೆಯುವ ಮನಸ್ಸಿದ್ದರೂ, ಒತ್ತಡ ಸಾಕಷ್ಟಿರಲಿಲ್ಲ.

ಆದರೂ ಒಂಥರಾ ಅಸಮಾಧಾನ ಮಾತ್ರ ಕಾಡುತ್ತಿತ್ತು. ಹಾಗೆ ನೋಡಿದರೆ, ಬರೆಯುವುದು ಸಾಕಷ್ಟಿದೆ. ಅದೊಂಥರಾ ಒರತೆಯಂತೆ. ಮೊಗೆದಷ್ಟೂ ಉಕ್ಕುತ್ತದೆ. ಮೊಗೆಯುವುದನ್ನು ಬಿಟ್ಟರೆ, ಒರತೆಯಲ್ಲಿ ಎಷ್ಟಿರಬೇಕೋ, ಅಷ್ಟು ಮಾತ್ರ ನಿಲ್ಲುತ್ತದೆ.

ಹೀಗಾಗಿ, ಅಸಮಾಧಾನ ಹಾಗೇ ಉಳಿದಿತ್ತು. ಒಂದೆರಡು ಬಾರಿ ಕವಿತೆ ಬರೆಯಲು ಯತ್ನಿಸಿದೆನಾದರೂ, ಅದು ಮುಂದುವರೆಯಲಿಲ್ಲ. ಕಚೇರಿಯಲ್ಲಿ ಕೂತಾಗ ಉಕ್ಕುವ ಭಾವನೆಗಳನ್ನು ಅಕ್ಷರಗಳನ್ನಾಗಿಸಲು ಯತ್ನಿಸಿದರೂ ಅದಕ್ಕೆ ಏನೇನೋ ಸಣ್ಣಪುಟ್ಟ ಅಡ್ಡಿಗಳು.

ಒಂದು ವಿಷಯ ತುಂಬ ದಿನದಿಂದ ಕಾಡುತ್ತಿದೆ.

ಪ್ರತಿಯೊಬ್ಬರೂ ತಮ್ಮದೇ ಆದ ಒಂದು ವೃತ್ತವನ್ನು, ಬಳಗವನ್ನು, ತಂಡವನ್ನು ಕಟ್ಟಿಕೊಳ್ಳುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಅದು ಮನುಷ್ಯಸಹಜ ಗುಣವಾದರೂ, ಅದರ ಮಿತಿ ಅರಿಯದೇ ನಾವು ವೃತ್ತವೊಂದಕ್ಕೆ ಕಟ್ಟುಬೀಳುವುದೇ ಅಚ್ಚರಿಯ ಸಂಗತಿ. ಒಂದೇ ರೀತಿಯ ವಿಚಾರ ಹೊಂದಿರುವವರು, ವೃತ್ತಿಯಲ್ಲಿರುವವರು, ಪ್ರದೇಶದಲ್ಲಿರುವವರು, ಜಾತಿಯವರು, ಭಾಷೆಯವರು- ಹೀಗೆ ನಾನಾ ಕಾರಣಗಳಿಗಾಗಿ ಜನ ಗುಂಪು ಕಟ್ಟಿಕೊಳ್ಳುತ್ತಾರೆ. ಅಲಿಖಿತ ನಿಯಮಗಳನ್ನು ಹಾಕಿಕೊಂಡು, ಅದರ ಮಿತಿಯೊಳಗೆ ಬದುಕುತ್ತ ಹೋಗುತ್ತಾರೆ. 
 
ಆ ವೃತ್ತದೊಳಗೆ ಪ್ರವೇಶಿಸುವುದು ಸುಲಭವಲ್ಲ. ‘ಹೊರಗಿನವರು’ ಎಂದು ಭಾವಿಸಿದ ಯಾರನ್ನೂ ಅವರು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಅಂಥವರನ್ನು ಅನುಮಾನದಿಂದ ನೋಡುತ್ತಾರೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಮ್ಮ ವೃತ್ತದೊಳಗೆ ಪ್ರವೇಶಿಸಲು ಮುಂದಾದವನನ್ನು ಶತ್ರುವಿನಂತೆ ಕಾಣುತ್ತಾರೆ. ಪ್ರಾಣಿ-ಪಕ್ಷಿಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದ್ದರೂ, ಸೂಕ್ಷ್ಮವಾಗಿ ನೋಡಿದರೆ, ನಮ್ಮ ಸುತ್ತಮುತ್ತಲೇ ಅಂಥ ಹಲವಾರು ವೃತ್ತಗಳು ಕಾಣಿಸುತ್ತವೆ.

ನೀವು ಎಷ್ಟೇ ಆತ್ಮೀಯರಾಗಿರಿ, ಎಷ್ಟೇ ಬುದ್ಧಿವಂತರಾಗಿರಿ, ಅವರು ಯಾವ ಕಾರಣಕ್ಕೂ ನಿಮ್ಮನ್ನು ‘ತಮ್ಮವ’ ಎಂದು ಕಾಣುವುದಿಲ್ಲ. ನಿಮ್ಮ ಜೊತೆಗೇ ಇದ್ದರೂ, ನೀರಿನಲ್ಲಿನ ಎಣ್ಣೆಯಂತೆ ಬೇರೆಯಾಗೇ ಇರುತ್ತಾರೆ. ಎಂದೆಂದೂ ನಿಮ್ಮೊಂದಿಗೆ ಆತ್ಮೀಯರಾಗುವುದಿಲ್ಲ. ವರ್ಷಗಟ್ಟಲೇ ಜೊತೆಗಿದ್ದರೂ ನಿಮ್ಮನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿಲ್ಲ. ನೀವು ಪ್ರಯತ್ನಪಟ್ಟಷ್ಟೂ ನಿಮ್ಮನ್ನು ದೂರವಾಗೇ ಇಡುತ್ತ ಹೋಗುತ್ತಾರೆ.

ಮೊದಮೊದಲು ನನಗಿದು ಬೇಸರ, ಅಸಮಾಧಾನ, ನೋವು ಉಂಟು ಮಾಡುತ್ತಿತ್ತು. ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದರೂ, ಕೆಲವರು ಇನ್ಯಾವುದೋ ಕಾರಣಗಳಿಗಾಗಿ ಹೊರಗಿಡುತ್ತಾರೆ. ಒಂದೇ ಜಾತಿಯವರಾಗಿದ್ದರೂ, ಇಂಥವೇ ಮತ್ಯಾವುದೋ ಕಾರಣಗಳಿಗಾಗಿ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಅವರ ವೃತ್ತದ ಅಲಿಖಿತ ಸಂವಿಧಾನ ನನ್ನಂಥವರಿಗೆ ಯಾವತ್ತೂ ಅರ್ಥವಾಗುವುದಿಲ್ಲ ಅನಿಸುತ್ತದೆ. ಏಕೆಂದರೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅದು ಕಗ್ಗಂಟಾಗುತ್ತಲೇ ಹೋಗಿದೆ.

ಪ್ರತಿಯೊಂದು ಪತ್ರಿಕೆ, ಟಿವಿಗಳಲ್ಲೂ ಕೆಲ ವ್ಯಕ್ತಿಗಳಿರುತ್ತಾರೆ. ಅವರು ಪ್ರತಿಭಾಶೂನ್ಯರು. ತೀರಾ ತೆಳು ವಿಷಯಗಳ ಬಗ್ಗೆ ಮಾತ್ರ ಅವರ ಗಮನ. ಯಾರೂ ಅವರ ಬರಹ, ಪ್ರಸ್ತುತಿಯನ್ನು ಗಮನಿಸದೇ ಇದ್ದರೂ, ವೃತ್ತದೊಳಗಿನವರಿಗೆ ಮಾತ್ರ ಅವರು ಅದ್ಭುತ ವರದಿಗಾರಿಕೆ ಮಾಡಿದ್ದಾರೆ ಎನ್ನುವ ಹೆಮ್ಮೆ. ‘ಏನ್‌ ಚೆನ್ನಾಗಿ ಬರೆದಿದ್ದೀ ಕಣೆ, ಸೂಪರ್ ಆಗಿ ಬಂದಿದೆ’ ಎಂದು ಬೆನ್ನು ತಟ್ಟುತ್ತಿರುತ್ತಾರೆ ಅಥವಾ ತಟ್ಟಿಸಿಕೊಳ್ಳುತ್ತಿರುತ್ತಾರೆ. ಕಸದಂಥ ವರದಿ ತಂದವನನ್ನು ಅರುಣ್ ಶೌರಿಯಂತೆ ನೋಡುವವರಿದ್ದಾರೆ. ಆಭರಣ, ಸೀರೆ, ಫ್ಯಾಶನ್, ಮೇಕಪ್, ಋತುಚಕ್ರ ಸಮಸ್ಯೆಗಳ ಬಗ್ಗೆ ಏರಳಿತಗಳಿಲ್ಲದ, ಯಾವುದೇ ಹೊಸದೃಷ್ಟಿ ನೀಡದ ವರದಿ ಮಾಡಿದರೂ ಅಭಿನಂದನೆ ಅವರಿಗೆ ಕಾಯಂ. ಅದ್ಭುತ ವರದಿ ತಂದ, ರಿಸ್ಕ್ ಎದುರಿಸಿ ಗಮನ ಸೆಳೆಯುವ ವರದಿ ಮಾಡಿದವರು ಆಕಸ್ಮಿಕವಾಗಿ ಕೂಡ ಅವರ ಚರ್ಚೆಯ ವಿಷಯವಾಗುವುದಿಲ್ಲ. ತಮಗಿಂತ ಭಿನ್ನವಾಗಿ, ಉತ್ತಮವಾಗಿ ಇನ್ಯಾರೋ ಕೆಲಸ ಮಾಡಿದ್ದಾರೆ ಎಂಬುದನ್ನು ಅವರು ಯಾವತ್ತೂ ಗಮನಿಸುವುದಿಲ್ಲ.

ಬಹುಶಃ ಪ್ರತಿಯೊಂದು ವೃತ್ತಿಯಲ್ಲಿಯೂ ಇಂಥ ವೃತ್ತಗಳು, ‘ವೃತ್ತಪರರು’ ಇರುತ್ತಾರೆ ಅನಿಸುತ್ತದೆ. ಅಂಥ ಬಳಗದ ಒಬ್ಬರ ಕೆಲಸ ಇನ್ನೊಬ್ಬರಿಗೆ ಅತಿ ಮೆಚ್ಚಿನ ವಿಷಯ.  ವೃತ್ತದ ಹೊರಗಿನವರ ಸಾಧನೆ ಅದ್ಭುತವಾಗಿದ್ದರೂ, ಅದು ಅವರಿಗೆ ಕಾಲಕಸ!

ಇಂಥ ವಾತಾವರಣದಲ್ಲಿ ಕ್ರಿಯಾಶೀಲತೆ ಉಳಿಸಿಕೊಳ್ಳುವುದು ಹೇಗಪ್ಪಾ ಎಂದು ಮೊದಮೊದಲು ಚಿಂತೆ ಮಾಡುತ್ತಿದ್ದೆ. ಇವತ್ತು ಬ್ಲಾಗ್‌ಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ಪತ್ರಕರ್ತರ ಈ ಪರಿಯ ‘ಕ್ರಿಯಾಶೀಲತೆ’ಯನ್ನು ಉಗಿಯುತ್ತಿರುವಾಗ, ನನಗೆ ಹಳೆಯ ಅಳುಕು ಮತ್ತೆ ಮತ್ತೆ ನೆನಪಾಗುತ್ತಿದೆ. ಯಾರೇ ಗುರುತಿಸಲಿ, ಬಿಡಲಿ, ನನಗೆ ಸರಿ ಅನಿಸಿದ್ದನ್ನು ಮಾಡುತ್ತ ಹೋಗುವುದೇ ಉತ್ತಮ ಮಾರ್ಗ ಎಂಬುದನ್ನು ಅನುಭವ ನನಗೆ ಕಲಿಸಿದೆ. ಚೆನ್ನಾಗಿ ಬರೆಯುವುದು, ವರದಿ ಮಾಡುವುದು ವೈಯಕ್ತಿಕ ಆನಂದದ ಕೆಲಸ. ಅದಕ್ಕೂ, ಮನ್ನಣೆಗೂ ಸಂಬಂಧ ಕಲ್ಪಿಸಬಾರದು ಎಂದು ವೃತ್ತಿಯ ಮೊದಲ ದಿನಗಳಲ್ಲಿ ನಾನು ತೆಗೆದುಕೊಂಡ ನಿರ್ಧಾರ ಇವತ್ತಿಗೂ ನನ್ನನ್ನು ಪೊರೆಯುತ್ತಿದೆ.

ಆದರೂ, ಹಳೆಯ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಒಂದು ಸೀಮಿತ ವಲಯಕ್ಕೆ, ವೃತ್ತಕ್ಕೆ ಸೀಮಿತವಾಗುವ ಜನರನ್ನು ಕಂಡಾಗೆಲ್ಲ ‘ಏಕೆ ಹೀಗೆ?’ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಮಾಧ್ಯಮಗಳಲ್ಲಿ ಚಿಲ್ಲರೆ ಸಂಗತಿಗಳಿಗೆ ಈಗ ದೊರೆಯುತ್ತಿರುವ ಪ್ರಾಶಸ್ತ್ಯ, ವಾಸ್ತವ ಗ್ರಹಿಸದೇ ತಮಗೆ ಸರಿ ಅನಿಸಿದಂತೆ ವರದಿ ಮಾಡುವುದನ್ನು ಕಂಡಾಗ, ರೇಗುವಂತಾಗುತ್ತದೆ. ಟಿವಿಗಳ ಬಹುತೇಕ ಕಾರ್ಯಕ್ರಮಗಳಲ್ಲಿ ಹಾಗೂ ವರದಿಯಲ್ಲಿ ಸಿನಿಮಾ ಹಾಡುಗಳನ್ನು, ಶೀರ್ಷಿಕೆಗಳನ್ನು, ಹಾಡುಗಳ ಸಾಲುಗಳನ್ನು ಭಾರಿ ಹೆಡ್ಡಿಂಗ್‌ಗಳಂತೆ ಬಳಸುವುದನ್ನು ಕಂಡಾಗ ನನಗೆ ಮತ್ತೆ ಮತ್ತೆ ‘ವೃತ್ತಪರರು’ ನೆನಪಾಗುತ್ತಾರೆ. ಇದರ ಜೊತೆಗೆ ಬೌದ್ಧಿಕ ದಿವಾಳಿತನ ಸೇರಿಕೊಂಡಾಗ ಮಾತ್ರ ಇಂಥ ಕಳಪೆ ಉತ್ಪನ್ನ ಬರಲು ಸಾಧ್ಯ.

ಹೀಗಾಗಿ, ಚಿಗುರೊಡೆಯದವರೂ ಪ್ರತಿಭಾವಂತರೆನಿಸಿಕೊಳ್ಳುತ್ತಿದ್ದಾರೆ. ಬಂಡವಾಳವೇ ಇಲ್ಲದವರು ಬುದ್ಧಿವಂತರೆನಿಸಿಕೊಂಡಿದ್ದಾರೆ. ಯಾವ ವ್ಯಕ್ತಿ ವೃತ್ತಿಯಲ್ಲಿ ತನಗಿಂತ ಕಿರಿಯರಾದವರಿಗೆ ಏನನ್ನೂ ಕಲಿಸಲಾರನೋ, ಅಂಥ ವ್ಯಕ್ತಿ ವೃತ್ತಿಯನ್ನು ಹಾಳುಮಾಡುತ್ತ ಹೋಗುತ್ತಾನೆ. ತನ್ನ ವೃತ್ತದೊಳಗೇ ಬದುಕುತ್ತ, ಅದರೊಳಗೆ ಯಾವ ಕ್ರಿಯಾಶೀಲತೆಯೂ ಪ್ರವೇಶಿಸದಂತೆ ತಡೆಯುತ್ತ ಬಾವಿಯೊಳಗಿನ ಕಪ್ಪೆಯಂತಾಗುತ್ತಾನೆ. ಒಂದ್ಹತ್ತು ವರ್ಷ ಹೀಗೆ ಮಾಡಿದ ನಂತರ, ಅವನಿಗೆ ಸೀನಿಯರ್ ಪಟ್ಟ ಸಿಗುತ್ತದೆ. ಅಲ್ಲಿಗೆ ಮುಗಿಯಿತು. ಅವನನ್ನು ತಡೆಯುವುದು ಸಾಧ್ಯವಿಲ್ಲ.

‘ಉದಯ ವಾರ್ತೆಗಳು’ ಚಾನೆಲ್ ಹಾಳಾಗಿದ್ದು ಹೀಗೆ. ಕನ್ನಡದ ಬಹುತೇಕ ಪ್ರಮುಖ ದಿನಪತ್ರಿಕೆಗಳು ಮೆನೋಪಾಸ್ ತಲುಪಿದ್ದು ಈ ಕಾರಣಕ್ಕಾಗಿ. ಒಂದು ಅರ್ಥಪೂರ್ಣ ವರದಿಗಾರಿಕೆ, ಬರಹ, ಪ್ರಸ್ತುತಿ ಅಪರೂಪವಾಗುತ್ತ ಹೋಗುತ್ತಿರುವುದು ಈ ಕಾರಣಗಳಿಂದಾಗಿ.

ಹಾಗಂತ ನಾನು ಅಂದುಕೊಂಡಿದ್ದೇನೆ. ಪದೆ ಪದೆ ಈ ಅನಿಸಿಕೆ ದೃಢವಾಗುತ್ತ ಹೋಗಿದೆ. ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ಸಂಸ್ಥೆ ಈ ವಿಷಯವನ್ನು ಮತ್ತೆ ಮತ್ತೆ ಮನದಟ್ಟು ಮಾಡುತ್ತ ಹೋಗಿವೆ. ಹೇಳೋದಕ್ಕೆ ‘ಮಾಧ್ಯಮ’ ಎಂಬ ಹೆಸರು. ಆದರೆ, ಜನರಿಗೂ ಸುದ್ದಿಸಂಸ್ಥೆಗೂ ಮಧ್ಯೆ ಇರಬೇಕಾದ ತಂತೇ ಕ್ಷೀಣವಾಗಿದೆ. ಎಲ್ಲವೂ ಸೆನ್ಸೇಶನಲ್, ಉದ್ರೇಕಕಾರಿ, ತಕ್ಷಣ ಗಮನ ಸೆಳೆಯುವಂಥದಾಗಿರಬೇಕು ಎಂಬ ಹಪಾಹಪಿಯಲ್ಲಿ ಸುದ್ದಿ/ಕಾರ್ಯಕ್ರಮ/ವರದಿ ಪ್ರಸ್ತುತಿಯ ಸೊಗಸು ಕಳೆದುಹೋಗುತ್ತಿದೆ. ಹೀಗಾಗಿ ಬಹುತೇಕ ಕಡೆ, ಬಹುತೇಕ ಸಮಯ, ನಮಗೆ ಕಂಡು ಬರುತ್ತಿರುವುದು ಸುದ್ದಿಯ ಇಂಥ ಶೀಘ್ರಸ್ಖಲನ.

ಈ ಭಾವನೆ ತೀವ್ರವಾಗಿ ಕಾಡಿದಾಗೆಲ್ಲ, ಏನಾದರೂ ಬರೆಯಬೇಕೆನ್ನುವ ಹಂಬಲ ದಟ್ಟವಾಗಿ ಉಕ್ಕತೊಡಗುತ್ತದೆ. ಇದುವರೆಗೆ ಬದುಕಿದ್ದೇ ಈ ಭಾವತೀವ್ರತೆಯಿಂದಾಗಿ. ಬಹುಶಃ ಮುಂದೆಯೂ ಹೀಗೇ.

ಪತ್ರಕರ್ತ ‘ವೃತ್ತಕರ್ತ’ನಾದರೆ ಅದು ನಿಜಕ್ಕೂ ದುರಂತ. ಕ್ಷೀಣಧ್ವನಿಯಾದರೇನಾಯ್ತು? ಮೌನವಾಗಿರುವುದಕ್ಕಿಂತ ಇದೇ ವಾಸಿ ಅಂತ ಅನಿಸುತ್ತದೆ. ಒಂದಿಷ್ಟು ಸಾರ್ಥಕ ಪ್ರಯೋಗಗಳಾಗಿದ್ದರೆ, ವೃತ್ತಿನೆಮ್ಮದಿ ದಕ್ಕಿದ್ದರೆ, ಅದು ಈ ಕ್ಷೀಣಧ್ವನಿಯಿಂದಾಗಿ.

ಆ ಧ್ವನಿ ಕಳೆದುಹೋಗದಿರಲಿ ಎಂಬುದೊಂದೇ ನನ್ನ ಆಸೆ. ಯಾವ ಕ್ರಿಯಾಶೀಲನೂ ಆ ಧ್ವನಿಯನ್ನು ಕಳೆದುಕೊಳ್ಳದಿರಲಿ ಎಂಬುದು ನನ್ನ ಶಾಶ್ವತ ಹಾರೈಕೆ.  

- ಚಾಮರಾಜ ಸವಡಿ