ಸುಮಾರು ೧೯೦ ವರ್ಷಗಳ ಹಿಂದಿನ ಸಮಯ.
ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಒಂದು ದೊಡ್ಡ ಬಂಗಲೆ ಅದು. ಹೆಣ್ಣುಮಗಳೊಬ್ಬಳು ಕೂತಿದ್ದಾಳೆ. ಜಂಗಮ ವೇಷದಲ್ಲಿದ್ದ ವ್ಯಕ್ತಿಯೊಬ್ಬ ನಿಂತಿದ್ದಾನೆ. ಕೂತ ಹೆಣ್ಣುಮಗಳನ್ನು ಉದ್ದೇಶಿಸಿ-
‘ತಾಯೆ, ನಿಮ್ಮ ಪಾದದಾಣೆ. ಪ್ರಮಾಣ ಮಾಡುತ್ತೇನೆ ಕೇಳಿ. ಈ ಕೆಂಪುಮೂತಿ ಆಂಗ್ಲರು ನಿಮ್ಮಿಂದ ಮೋಸದಿಂದ ಕಿತ್ತುಕೊಂಡಿರುವ ಕಿತ್ತೂರು ಸಂಸ್ಥಾನವನ್ನು ಮತ್ತೆ ಗೆದ್ದು ತಂದು ನಿಮ್ಮ ಪಾದಕ್ಕೆ ಅರ್ಪಿಸುತ್ತೇನೆ. ಹಾಗೊಂದು ವೇಳೆ ಅದು ಆಗದೇ ಹೋದರೆ, ನನ್ನ ಸೋತ ಮುಖವನ್ನು ಮತ್ತೆಂದೂ ನಿಮಗೆ ತೋರಿಸುವುದಿಲ್ಲ. ಏಕೆಂದರೆ, ನಾನು ಆಗ ರಣರಂಗದಲ್ಲೇ ಜೀವ ತೆತ್ತಿರುತ್ತೇನೆ’-
ಬೈಲಹೊಂಗಲದಲ್ಲಿ ಗೃಹಬಂಧನದಲ್ಲಿದ್ದ ಕಿತ್ತೂರು ರಾಣಿ ಚೆನ್ನಮ್ಮನ ಎದುರು ನಿಂತು ಮಾಡು ಇಲ್ಲವೇ ಮಡಿ ಎಂಬಂತಹ ಪ್ರಮಾಣ ಮಾಡಿದ ಆ ವ್ಯಕ್ತಿ ಅಪ್ಪಟ ಹಾಗೂ ಅಪ್ರತಿಮ ಸ್ವಾತಂತ್ರ್ಯಪ್ರೇಮಿ. ಕ್ರಾಂತಿಯ ಕಿಡಿ. ಸ್ವಾತಂತ್ರ್ಯದ ಮಿಂಚು. ದೇಶಾಭಿಮಾನದ ಪ್ರತೀಕ.
ಆತನ ಹೆಸರು ವೀರ ಸಂಗೊಳ್ಳಿ ರಾಯಣ್ಣ.
ಇಂತಹ ಒಬ್ಬ ಮಹಾ ಸ್ವಾಮಿನಿಷ್ಠ, ಮಹಾ ದೇಶಭಕ್ತ, ಅಪ್ರತಿಮ ವೀರ, ಮುತ್ಸದ್ದಿ ಹೋರಾಟಗಾರನೊಬ್ಬ ಸುಮಾರು ಇನ್ನೂರು ವರ್ಷಗಳ ಹಿಂದೆ ನಮ್ಮ ಈ ಕನ್ನಡ ನೆಲದಲ್ಲಿ ಹುಟ್ಟಿದ್ದ. ಬದುಕಿ ಬಾಳಿದ್ದ. ಬ್ರಿಟಿಷರ ದುರಾಡಳಿತದ ವಿರುದ್ಧ ಹೋರಾಡಿದ್ದ. ಹಾಗೆ ಹೋರಾಡುತ್ತಲೇ ದೇಶಕ್ಕಾಗಿ, ತಾನು ನೆಚ್ಚಿಕೊಂಡ ಸ್ವಾತಂತ್ರ್ಯದ ತತ್ವಗಳಿಗಾಗಿ, ಸಮಾನತೆಗಾಗಿ ತನ್ನ ಪ್ರಾಣವನ್ನೇ ತೆತ್ತ. ಹುತಾತ್ಮನಾದ. ಈ ಸಂಗತಿಯೇ ಮೈ ನವಿರೇಳಿಸುವಂಥದು.
ಬ್ರಿಟಿಷರ ಕೈವಶವಾಗಿದ್ದ ಕಿತ್ತೂರು ಪ್ರಾಂತ್ಯವನ್ನು ಮತ್ತೆ ಸ್ವತಂತ್ರಗೊಳಿಸುವುದರಿಂದ ವೈಯಕ್ತಿಕವಾಗಿ ರಾಯಣ್ಣನಿಗೆ ಯಾವುದೇ ಲಾಭವಿರಲಿಲ್ಲ. ರಾಜನಾಗಿ ಸಿಂಹಾಸನವೇರುವ, ಮಂತ್ರಿಯಾಗಿ ಅಧಿಕಾರ ನಡೆಸುವ ಆಸೆಯಾಗಲಿ, ಅವಕಾಶವಾಗಲಿ ಅವತ್ತಿನ ಪರಿಸ್ಥಿತಿಯಲ್ಲಿ ಕಿಂಚಿತ್ತೂ ಇರಲಿಲ್ಲ. ರಾಣಿ ಚೆನ್ನಮ್ಮನ ಬಂಧನವಾದಾಗ, ಅವಳ ಜೊತೆಯಲ್ಲಿ ಬಂಧಿಸಲ್ಪಟ್ಟ ಹಲವಾರು ಸಾಮಾನ್ಯ ಸೈನಿಕರ ಪೈಕಿ ರಾಯಣ್ಣನೂ ಒಬ್ಬನಾಗಿದ್ದ. ರಾಣಿಯನ್ನು ಹೊರತುಪಡಿಸಿ, ಕ್ಷಮಾದಾನ ಪಡೆದು ಬಿಡುಗಡೆ ಹೊಂದಿದ ಗುಂಪಿನಲ್ಲಿ ಆತನೂ ಸೇರಿದ್ದ.
ಆದರೆ, ಬಂಧಮುಕ್ತನಾದ ಮೇಲೆ ಎಲ್ಲರಂತೆಯೇ ಆತ ಊರಿಗೆ ಹೋಗಿ ತನ್ನ ಮಾಮೂಲಿ ವೃತ್ತಿಯಲ್ಲಿ ಮುಂದುವರಿಯಲಿಲ್ಲ. ಬದಲಾಗಿ, ತನ್ನ ಮುದ್ದಿನ ಮಡದಿ ಹಾಗೂ ಮಗುವನ್ನು ತೊರೆದ. ಜನ್ಮಕೊಟ್ಟ ತಂದೆತಾಯಿಗಳಿಂದ ದೂರನಾದ. ನಿದ್ರೆ, ಆಹಾರವನ್ನು ಲೆಕ್ಕಿಸದೇ ಕಿತ್ತೂರು ಸಂಸ್ಥಾನವನ್ನು ಸ್ವತಂತ್ರಗೊಳಿಸುವುದಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ. ಹಗಲು-ರಾತ್ರಿ ಅಲೆದ. ಕಾಡುಮೇಡು ಸುತ್ತಿ, ಸಾವಿರಾರು ಸಮಾನ ಮನಸ್ಕರ ಪಡೆ ಕಟ್ಟಿದ.
ಕುಟಿಲ ನೀತಿ, ರಾಜಕೀಯ ಚತುರತೆ, ಯುದ್ಧಗಾರಿಕೆ ತಂತ್ರ, ಹಣಬಲ, ಜನಬಲದಿಂದ, ಸರ್ವರೀತಿಯಲ್ಲೂ ಸನ್ನದ್ಧವಾಗಿದ್ದ ಆಂಗ್ಲರ ಸೈನ್ಯವನ್ನು ಆತ ತತ್ತರಿಸುವಂತೆ ಮಾಡಿದ.
ಎಂತೆಂಥ ರಾಜ-ಮಹಾರಾಜರುಗಳನ್ನೆಲ್ಲ ಹುರಿದು ಮುಕ್ಕಿದ್ದ, ನೀರು ಕುಡಿಸಿದ್ದ, ಜಯ ತಮ್ಮದೇ ಎಂಬ ವಾತಾವರಣ ನಿರ್ಮಿಸಿದ್ದ ಬ್ರಿಟಿಷರ ವಿರುದ್ಧ ನಿರ್ಣಾಯಕ ಹೋರಾಟ ನಡೆಸಿದ. ಅದು ಯಶಸ್ವಿಯಾಗಿ ನಡೆಯತ್ತಿದ್ದಾಗ, ಹಿತವಂಚಕರ ಮಸಲತ್ತಿನಿಂದಾಗಿ ೧೮೩೦ರ ಏಪ್ರಿಲ್ ೮ನೇ ತಾರೀಖಿನಂದು ಬೆಳಿಗ್ಗೆ ೧೦ ಗಂಟೆಗೆ ರಾಯಣ್ಣ ಸಿಕ್ಕಿಬಿದ್ದ.
ಬಂಧನದಲ್ಲಿದ್ದರೂ ಆತನಲ್ಲಿ ಅಳುಕಿರಲಿಲ್ಲ. ಗುರಿ ಹಾಗೂ ದಾರಿಗಳೆರಡೂ ನಿಚ್ಚಳವಾಗಿದ್ದಾಗ ಯಾವ ಭಯವೂ ಇರುವುದಿಲ್ಲ. ಹೀಗಾಗಿ, ಕಂಪನಿ ಸರಕಾರ ನಡೆಸಿದ ವಿಚಾರಣೆಯನ್ನು ಧೈರ್ಯದಿಂದಲೇ ಎದುರಿಸಿದ. ಏಕಪಕ್ಷೀಯವಾಗಿ ನಡೆದ ವಿಚಾರಣೆಯಲ್ಲಿ ಕೂಡ ಯಾವ ಅಂಜಿಕೆ-ಅಳುಕು ಇಲ್ಲದೇ ತಾನು ನಡೆಸಿದ ಹೋರಾಟವನ್ನೆಲ್ಲ ಹೆಮ್ಮೆಯಿಂದಲೇ ಒಪ್ಪಿಕೊಂಡ. ‘ನಾನು ಯಾವ ತಪ್ಪನ್ನೂ ಮಾಡಿಲ್ಲ. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನಡೆಸಿದ ನನ್ನೆಲ್ಲ ಹೋರಾಟಗಳು ನ್ಯಾಯಸಮ್ಮತವಾಗಿಯೇ ಇವೆ’ ಎಂದು ವಾದಿಸಿದ.
ಆದರೆ, ದೇಶಪ್ರೇಮವನ್ನು ದೇಶದ್ರೋಹವೆಂದು ಭಾವಿಸಿದ್ದ ಆಂಗ್ಲರು ರಾಯಣ್ಣನ ವಾದಕ್ಕೆ ಮನ್ನಣೆ ಕೊಡಲಿಲ್ಲ. ಅವರ ನ್ಯಾಯದ ತಕ್ಕಡಿ ಯಾವಾಗಲೂ ಅವರತ್ತಲೇ ವಾಲುತ್ತಿತ್ತು. ವಿಚಾರಣೆಯ ನೆಪದಲ್ಲಿ ಕೆಲ ದಿನಗಳನ್ನು ಕಳೆದ ಬ್ರಿಟಿಷರು, ಕೊನೆಗೊಂದು ದಿನ ರಾಯಣ್ಣನಿಗೆ ವಿಧಿಸಿದ್ದು ಗಲ್ಲು ಶಿಕ್ಷೆ.
ಆಗಲೂ ರಾಯಣ್ಣ ಧೃತಿಗೆಡಲಿಲ್ಲ. ಅಂಜಲಿಲ್ಲ. ಅಳಲಿಲ್ಲ. ಎದೆ ಸೆಟೆದು ನಿಂತ. ಕೊನೆಯವರೆಗೂ ತಾನು ಮಾಡಿದ್ದು ತಪ್ಪೆಂದು ಒಪ್ಪಿಕೊಳ್ಳಲಿಲ್ಲ.
ರಾಯಣ್ಣನ ಆ ವೀರತನ ಬ್ರಿಟಿಷರನ್ನು ಕಂಗೆಡಿಸಿತ್ತು. ಹೀಗೇ ಬಿಟ್ಟರೆ, ಇನ್ನಷ್ಟು ಜನ ರಾಯಣ್ಣರು ಹುಟ್ಟಿಕೊಳ್ಳುತ್ತಾರೆ ಎಂಬ ಅಳುಕಿತ್ತು. ರಾಯಣ್ಣನಂಥ ಹೋರಾಟಗಾರರು ಮೂಡಿಸಿದ ದೇಶಪ್ರೇಮದ ವಾತಾವರಣವನ್ನು ಇಲ್ಲವಾಗಿಸುವ ತುರ್ತಿತ್ತು. ಸಮರ್ಥ ನಾಯಕತ್ವವಿಲ್ಲದ ಲಕ್ಷಾಂತರ ಜನರಿಗೆ ರಾಯಣ್ಣ ನೀಡಿದ ಪ್ರೇರಣೆಯನ್ನು ಅಳಿಸಿಹಾಕಬೇಕಿತ್ತು.
ಹೀಗಾಗಿ, ಗಲ್ಲು ಶಿಕ್ಷೆ ಕಾಯಮ್ಮಾಯಿತು. ಕೊನೆಯದಾಗಿ ನಿನ್ನ ಆಸೆ ಏನೆಂದು ರಾಯಣ್ಣನನ್ನು ಕೇಳಿದಾಗ, ಆತ ನುಡಿದ ಮಾತುಗಳು ರೋಮಾಂಚನಗೊಳಿಸುವಂಥವು. ‘ನಂದಗಡದ ಸುತ್ತಮುತ್ತಲಿನ ಪ್ರದೇಶದ ಜನರು ನನಗೆ ಬಹಳ ಸಹಾಯ ಮಾಡಿದ್ದಾರೆ. ಆದ್ದರಿಂದ, ಆ ಊರಿನ ಸರಹದ್ದಿನಲ್ಲಿ, ಆ ಜನರ ಮುಂದೆಯೇ ನನ್ನನ್ನು ಗಲ್ಲಿಗೇರಿಸಿ’ ಎಂದು ಕೇಳಿಕೊಂಡ.
ಆ ಪ್ರಕಾರ, ರಾಯಣ್ಣನನ್ನು ೧೮೩೧ ಜನವರಿ ೨೬ರಂದು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಗಲ್ಲಿಗೇರಿಸಲಾಯ್ತು.
ಆತನ ಇಚ್ಛೆಯ ಪ್ರಕಾರ, ರಾಯಣ್ಣನ ಮಿತ್ರರು ಆತನ ಸಮಾಧಿಯ ಮೇಲೆ ಆಲದ ಗಿಡವೊಂದನ್ನು ನೆಟ್ಟರು. ರಾಯಣ್ಣನ ಕೀರ್ತಿಯಂತೆ ಆ ಆಲದ ಗಿಡ ಹೆಮ್ಮರವಾಗಿ ಬೆಳೆಯಿತು. ಇತಿಹಾಸದ ಪುಟದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿತು. ಜನರ ಪಾಲಿಗೆ ಧಾರ್ಮಿಕ ಕ್ಷೇತ್ರವಾಯ್ತು.
ಇಂದಿಗೂ ಕೂಡಾ, ಮಕ್ಕಳಾಗದ ಅವೆಷ್ಟೋ ದಂಪತಿಗಳು ನಂದಗಡಕ್ಕೆ ಹೋಗುತ್ತಾರೆ. ರಾಯಣ್ಣನ ಸಮಾಧಿಯ ಮೇಲೆ ಬೆಳೆದು ನಿಂತಿರುವ ಆಲದ ಮರಕ್ಕೆ ತೊಟ್ಟಿಲು ಕಟ್ಟಿ, ’ರಾಯಣ್ಣ, ನಮಗೆ ನಿನ್ನಂತಹ ಒಬ್ಬ ವೀರ ಮಗನನ್ನು ಕರುಣಿಸು’ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಆ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರೂ ರಾಯಣ್ಣನ ಸಮಾಧಿಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತಾರೆ. ಅವರ ಪಾಲಿಗೆ ಅದೊಂದು ಧಾರ್ಮಿಕ ಸ್ಥಳ. ಪ್ರೇರಣಾ ಸ್ಥಳ. ಎಲ್ಲ ಧರ್ಮಗಳನ್ನು, ಜಾತಿಗಳನ್ನು, ವರ್ಗಗಳನ್ನು ಮೀರಿದ ಪುಣ್ಯಕ್ಷೇತ್ರ.
ಅಷ್ಟೇ ಅಲ್ಲ. ಪ್ರತಿವರ್ಷ ಜನವರಿಯಲ್ಲಿ, ದವನದ ಹುಣ್ಣಿಮಿಗೆ ಮೂರು ದಿನ ಮುಂಚೆ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಜಾತ್ರೆ ನಡೆಯುತ್ತದೆ. ಅದು ರಾಯಣ್ಣನ ಜಾತ್ರೆ ಎಂದೇ ಜನಜನಿತ. ಆ ಸಂದರ್ಭದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಆಗುತ್ತದೆ. ಪುರಾಣ ಪ್ರವಚನಗಳೂ ನಡೆಯುತ್ತವೆ. ಕೊನೆಯ ದಿನದಂದು, ಚಕ್ಕಡಿಯ ಮೇಲೆ ರಾಯಣ್ಣನ ಮೂರ್ತಿ ಹಾಗೂ ಅವನು ಗರಡಿಮನೆಯಲ್ಲಿ ತಿರುವಿದ ಲೋಡುಗಳು ಹಾಗೂ ಡಾಲೂಗಳನ್ನು ಇಟ್ಟು ಊರವರೆಲ್ಲ ವಿಜೃಂಭಣೆಯಿಂದ ಮೆರವಣಿಗೆ ಮಾಡುತ್ತಾರೆ.
ಇತ್ತೀಚೆಗೆ ಸರಕಾರದಿಂದ ಎರಡು ಎಕರೆ ಜಮೀನು ಪಡೆದು ಒಂದು ಸುಂದರವಾದ ತೋಟವನ್ನು ನಿರ್ಮಿಸಲಾಗಿದ್ದು, ಅದಕ್ಕೆ ರಾಯಣ್ಣನ ತೋಟವೆಂದೇ ಹೆಸರಿಟ್ಟಿದ್ದಾರೆ.
ದೇಶಕ್ಕಾಗಿ, ತಾನು ನಂಬಿದ ತತ್ವಗಳಿಗಾಗಿ, ಸ್ವಾತಂತ್ರ್ಯದ ಉಸಿರಿಗಾಗಿ ಹಂಬಲಿಸಿ, ಹೋರಾಡಿ, ಮಡಿದ ಒಬ್ಬ ಯೋಧನಿಗೆ ಇದಕ್ಕಿಂತ ಇನ್ನೇನು ಬೇಕು? ನಮ್ಮೆಲ್ಲರಲ್ಲಿ ಸ್ಫೂರ್ತಿ ತುಂಬಲು ಆತನ ತ್ಯಾಗ-ಬಲಿದಾನದ ಈ ಹೋರಾಟಕಥೆಯೇ ಸಾಕು.
- ಚಾಮರಾಜ ಸವಡಿ
(ಶೀಘ್ರದಲ್ಲಿ ಬಿಡುಗಡೆಯಾಗಲಿರುವ ನನ್ನ ‘ಸ್ವಾತಂತ್ರ್ಯದ ಕಿಡಿ ಸಂಗೊಳ್ಳಿ ರಾಯಣ್ಣ’ ಪುಸ್ತಕದ ಆಯ್ದ ಭಾಗ)
(ಚಿತ್ರ ಕೃಪೆ: ಅಂತರ್ಜಾಲ)
ಮರೆತುಹೋದವರ ನೆನಪಿನಲ್ಲಿ
16 Sept 2010
ಪದ ಶೋಧ
ಕನ್ನಡ,
ಕಿತ್ತೂರು ಚೆನ್ನಮ್ಮ,
ಚಾಮರಾಜ ಸವಡಿ,
ಸಂಗೊಳ್ಳಿ ರಾಯಣ್ಣ,
ಸ್ವಾತಂತ್ರ್ಯ
Subscribe to:
Post Comments (Atom)
11 comments:
ಸವಡಿ ಅವರಿಗೆ ನಮಸ್ಕಾರ ರಾಯಣ್ಣನ ಮೇಲೆ ಸೊಗಸಾಗಿ ಬರದೀರಿ
ವಿಪರ್ಯಾಸ ನೋಡ್ರಿ ಆನಂದರಾವ್ ಸರ್ಕಲ್ ನ್ಯಾಗ ಇನ್ನೂ ರಾಯಣ್ಣ ಮುಸುಕು ಹಾಕ್ಕೊಂಡ ಇದ್ದಾನ
ಬಿಡುವಿದ್ದಾಗ ನನ್ನ ಬ್ಲಾಗಗೂ ಬರ್ರಿ...
ರಾಯಣ್ಣನ ಬಗ್ಗೆ ಪುಸ್ತಕವ! ಖುಷಿ ಆಯ್ತು :) , ಬಿಡುಗಡೆ ಯಾವಾಗ?
ಉಮೇಶ್ರವರು ಹೇಳಿದ ಬಗ್ಗೆಯೇ ನಾನು ಯೋಚಿಸುತಿದ್ದೆ,ರಾಯಣ್ಣನ ಬಗ್ಗೆ ಬರೆಯೋಣ ಅಂದುಕೊಂಡಿದ್ದೆ,ನೀವೇ ಬರೆದಿರಿ :)
chennaagide SavaDiyavare.
ದೇಸಾಯವ್ರ, ಇನ್ನು ಮ್ಯಾಲ ರಾಯಣ್ಣ ಮುಸುಕು ತೆಗೀತಾನ ಬಿಡ್ರಿ. ಇದ ೨೪ಕ್ಕ ಆತನ ಮುಸುಕು ತೆಗೀತಾರ. ಆದ್ರ, ಜನರ ಮನಸಿನ ಮುಸಕು ತೆಗೆಯೋದು ಮಾತ್ರ ಭಾಳ ಕಷ್ಟದ ಕೆಲಸ.
ನಿಮ್ಮ ಬ್ಲಾಗ್ ನೋಡ್ತಿರ್ತೀನಿ. ಒಂದೆರಡು ಸಾರಿ ಕಾಮೆಂಟೂ ಹಾಕಿದ್ದೆ. :)
ರಾಕೇಶ್, ನೀವೂ ಬರೀರಿ ರಾಯಣ್ಣನ ಬಗ್ಗೆ. ಅಂಥವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.
Smileಗೆ, ಧನ್ಯವಾದ. :)
ಸರ್ ಅದ್ಭುತವಾಗಿದೆ.. :-) ಮನಕ್ಕೆ ಖುಷಿ ಕೊಟ್ಟರು ಸಂಗಣ್ಣ..ಮುಸುಕು ತೆಗೆದಾಯ್ತ ಸಂಗಣ್ಣ??? :-)
ನಮಸ್ಕಾರ
ನಾನು ಮೊನ್ನೆ ನಂದಗಡಕ್ಕ ಹೋಗಿದ್ದೆ ಅಲ್ಲಿ ರಾಯಣ್ಣನ ಸಮಾಧಿ ಮತ್ತು ನೇಣು ಹಾಕಿದ ಆಲದಮರ ನೋಡಿದೆ
ಆಲದಮರದ ಹತ್ತಿರ ಏನೂ ಸುಧಾರಣೆ ಇಲ್ಲ, ಅಲ್ಲಿ ತನಕ ರಸ್ತೆ ಮಾಡಿದ್ದಾರೆ ಅದೆ ಪುಣ್ಯ
ಜಯಶ್ರೀ: ನಿಜ, ಸಂಗಣ್ಣನ ಮುಸುಕು ತೆರೆಯಿತು. ನಮ್ಮಗಳ ಮುಸುಕು ತೆಗೆಯೋದು ಯಾವಾಗ? ಒಂದಲ್ಲ ಒಂದು ಮುಸುಕಿನಲ್ಲಿ ಬದುಕೋದು ನಮಗೆ ಅಭ್ಯಾಸವಾಗಿಬಿಟ್ಟಿದೆ.
ಆನಂದ: ನಂದಗಡ ಅಭಿವೃದ್ಧಿಯನ್ನು ಸರ್ಕಾರವೇ ಮಾಡಬೇಕಾ? ನಮ್ಮದೂ ಅದರಲ್ಲಿ ಪಾಲಿಲ್ಲವೆ?
ನಮಸ್ಕಾರ ಸವಡಿ ಅವರೇ,
ಎಲ್ಲ ಒತ್ತಡಗಳ ನಡವೆಯೂ ಒಳ್ಳೆಯ ಕೆಲಸ ಮಾಡಿದ್ದೀರಿ,
ಧನ್ಯವಾದಗಳು
ಶಿವರಾಮ ಎಚ್.: ಒತ್ತಡದಲ್ಲೇ ನಿಜ ಅಭಿವ್ಯಕ್ತಿ ಹೊಮ್ಮೋದು ಶಿವರಾಮ ಸರ್.
ರಾಕೇಶ್: ನಿಮಗೆ ಪಿಡಿಎಫ್ ಪ್ರತಿ ಸಿಕ್ಕಿತಲ್ಲವೆ? ಏನನ್ನಿಸಿತು?
Post a Comment